Tag: ಖಾಸಗೀಕರಣ

  • ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ

    ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ

    ಕೊಲಂಬೋ: ಸಾಲದ ಸುಳಿಗೆ ಸಿಲುಕಿ ನಲುಗಿರುವ ಶ್ರೀಲಂಕಾ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿದೆ. ಈ ಯೋಜನೆಯ ಭಾಗವಾಗಿ ದ್ವೀಪ ರಾಷ್ಟ್ರ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ.

    ಶ್ರೀಲಂಕಾದ ಹೊಸದಾಗಿ ನೇಮಕಗೊಂಡ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದಾರೆ. ಈ ಮೂಲಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್

    1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ‍್ಯ ಪಡೆದ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಷ್ಟದಲ್ಲಿರುವ ಶ್ರೀಲಂಕಾದ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ವಿಕ್ರಮಸಿಂಘೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದರು.

    ಶ್ರೀಲಂಕನ್ ಏರ್‌ಲೈನ್ಸ್‌ನ ವ್ಯವಸ್ಥಾಪಕ ಷೇರುದಾರ ಸ್ಥಾನದಿಂದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಯನ್ನು ತೆಗೆದುಹಾಕಿದ ಬಳಿಕ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿತು. 2021 ಮಾರ್ಚ್ ಹೊತ್ತಿಗೆ ಅದರ ಒಟ್ಟು ನಷ್ಟ 372 ಶತಕೋಟಿ ರೂ. ಆಗಿತ್ತು ಎಂದು ಶ್ರೀಲಂಕಾ ಪ್ರಧಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    SRILANKA

    ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಿದರೂ ನಾವು ನಷ್ಟವನ್ನು ಭರಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಷ್ಟವನ್ನು ವಿಮಾನದಲ್ಲಿ ಇಲ್ಲಿವರೆಗೆ ಕಾಲಿಡದ, ಕಡು ಬಡತನದಲ್ಲಿ ಹುಟ್ಟಿರುವವರೂ ಭರಿಸಬೇಕಾಗುತ್ತದೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

  • ಇಸ್ರೋ ಖಾಸಗೀಕರಣ – ಬೆಂಗಳೂರಿನ ಕಛೇರಿ ಗುಜರಾತ್‍ಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

    ಇಸ್ರೋ ಖಾಸಗೀಕರಣ – ಬೆಂಗಳೂರಿನ ಕಛೇರಿ ಗುಜರಾತ್‍ಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

    ಬೆಂಗಳೂರು: ನಗರದಲ್ಲಿರುವ ಇಸ್ರೋ ಕಛೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಎನ್‍ಎಸ್‍ಯುಐ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಸಂಜಯನಗರದಲ್ಲಿರುವ ಇಸ್ರೋ ಕೇಂದ್ರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

    ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಹಿರಿಯರು ಕಟ್ಟಿ ಬೆಳಸಿದ ಹಲವಾರು ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ. ಬೆಂಗಳೂರಿನ ಹವಮಾನ, ಉತ್ತಮ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. ಅದರೆ ಇಂದು ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯದ 25 ಬಿಜೆಪಿ ಲೋಕ ಸಭಾ ಸದಸ್ಯರು, 12 ರಾಜ್ಯ ಸಭಾ ಸದಸ್ಯರು ಪ್ರಧಾನಿರವರ ಬಳಿ ನಿಯೋಗ ತೆರಳಿ ಇಸ್ರೋ ಸಂಸ್ಥೆ ಇಲ್ಲಿಯೇ ಉಳಿಯುವಂತೆ ಮಾಡಬೇಕು. ನರೇಂದ್ರ ಮೋದಿಯೊಂದಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಇಸ್ರೋ ಸಂಸ್ಥೆ ಇಲ್ಲಿ ಉಳಿಯುವಂತೆ ಮನವಿ ಮಾಡಬೇಕು. ಅದಲ್ಲದೆ ವರ್ಗಾವಣೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ಪ್ರತಿಭಟನೆಯಲ್ಲಿ ಶಾಸಕರಾದ ಕೃಷ್ಣಭೈರೇಗೌಡ, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಹಾಗೂ ಬೆಂಗಳೂರುನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಯಸಿಂಹ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

  • ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ನವದೆಹಲಿ: ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಟಾಟಾ ಸನ್ಸ್‌ ಖರೀದಿಸಿದೆ. ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್‌ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ.

    ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತಾ, ಟಾಟಾ ಸಮೂಹ  ಒಟ್ಟು 18 ಸಾವಿರ ಕೋಟಿ ರೂ. ಬಿಡ್‌ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್‌ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಮೊದಲ ವರ್ಷ ಎಲ್ಲ ಉದ್ಯೋಗಿಗಳು ಏರ್‌ ಇಂಡಿಯಾದಲ್ಲಿ ಇರಲಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ಒಂದು ವರ್ಷದ ನಂತರ ಟಾಟಾ ಸಮೂಹವು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಲು ಅವಕಾಶವನ್ನು ಹೊಂದಿರುತ್ತದೆ.

    ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಟಾಟಾ ಕಂಪನಿಯ ಮುಖ್ಯಸ್ಥ ರತನ್‌ ಟಾಟಾ Welcome back ಏರ್‌ ಇಂಡಿಯಾ ಎಂದು ಬರೆದು ವಿಮಾನ ಮತ್ತು ಮನೆಯ ಇಮೋಜಿ ಹಾಕಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

    https://twitter.com/RNTata2000/status/1446431109122650118

    ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು. ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿತ್ತು.

    2007ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು ಆಗಸ್ಟ್‌ 2021ರ ವೇಳೆಗೆ 61,562 ಕೋಟಿ ರೂ. ನಷ್ಟದಲ್ಲಿತ್ತು. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.

    2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್

    ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.

    ವಿಶೇಷ ಏನೆಂದರೆ 89 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್‌ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. 1932ರಲ್ಲಿ ಟಾಟಾ ಏರ್‌ಲೈನ್ಸ್‌ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್‌ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್‌ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.

  • ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ನವದೆಹಲಿ: ಏರ್ ಇಂಡಿಯಾ ಟಾಟಾ ತೆಕ್ಕೆಗೆ ಮರಳಿದೆ. ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಸ್, ಟ್ರಕ್ ಮಧ್ಯೆ ಭೀಕರ ಅಪಘಾತಕ್ಕೆ 7 ಬಲಿ – 14 ಮಂದಿ ಗಂಭೀರ

    ಈ ವಿಚಾರದ ಬಗ್ಗೆ ಟಾಟಾ ಕಂಪನಿಯ ವಕ್ತಾರರು ಮತ್ತು ಹಣಕಾಸು ಸಚಿವಾಲಯ ಅಧಿಕೃತವಾಗಿ ತಿಳಿಸಿಲ್ಲ. ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು.

    ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಮೂಲ ಬೆಲೆಗಿಂತಲೂ 3 ಸಾವಿರ ಕೋಟಿ ಮತ್ತು ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶೀಘ್ರವೇ ಬಿಡ್ ಅಂತಿಮಗೊಳಿಸಿ ಕೆಲ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ- ಮಹಾ ನೆರೆಯ ಭೀತಿ 

    2007ರಲ್ಲಿ ಇಂಡಿಯನ್ ಏರ್‍ಲೈನ್ಸ್ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು 90 ಸಾವಿರ ಕೋಟಿಗೂ ಅಧಿಕ ಸಾಲದ ಸುಳಿಯಲ್ಲಿದೆ. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಮುಂದಿನ 4 ತಿಂಗಳಿನಲ್ಲಿ ಏರ್ ಇಂಡಿಯಾವನ್ನು ಪೂರ್ಣವಾಗಿ ಟಾಟಾ ಕಂಪನಿಗೆ ಸರ್ಕಾರ ಹಸ್ತಾಂತರಿಸಲಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.

    2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಶೇ.76 ರಷ್ಟು ಷೇರನ್ನು ಮಾರಾಟ ಮಾಡಿ ಶೇ.24 ರಷ್ಟು ಷೇರನ್ನು ತನ್ನ ಬಳಿ ಇಡುವ ಕೇಂದ್ರದ ಪ್ರಸ್ತಾಪಕ್ಕೆ ಬಿಡ್ ಮಾಡಲು ಯಾರೂ ಆಸಕ್ತಿ ತೋರಿಸಿರಲಿಲ್ಲ. ಇದನ್ನೂ ಓದಿ: ಗುದನಾಳದಲ್ಲಿ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್- ವ್ಯಕ್ತಿ ವಶಕ್ಕೆ

    ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.

    1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1947ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‍ಲೈನ್ಸ್ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.

  • 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

    6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

    ನವದೆಹಲಿ: ದೇಶದ ಆರ್ಥಿಕತೆ ಕ್ರೋಢೀಕರಣಕ್ಕೆ ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ. ಕಡಿಮೆ ಬಳಕೆಯಾದ ಸ್ವತ್ತುಗಳ ಮಾರಾಟದಿಂದ 6 ಲಕ್ಷ ಕೋಟಿ ರೂ. ಸಂಪತ್ತು ಸಂಗ್ರಹಕ್ಕೆ ಕೇಂದ್ರ ಸರ್ಕಾರ ನ್ಯಾಷನಲ್ ಮ್ಯಾನಿಟೈಸೇಷನ್ ಪೈಪ್‍ಲೈನ್(ಎನ್‍ಎಂಪಿ) ಯೋಜನೆ ಘೋಷಿಸಿದೆ.

    ಎನ್‍ಎಂಪಿಯನ್ನು ಅನಾವರಣಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ 4 ವರ್ಷದಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಗ್ಯಾಸ್ ಪೈಪ್‍ಲೈನ್‍ಗಳನ್ನು ಖಾಸಗಿ ಬಳಕೆಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಅಫ್ಘಾನ್‍ನಿಂದ ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ 

    ಖಾಸಗಿಯವರಿಗೆ ನೀಡಿದರೂ ಮಾರಾಟ ಮಾಡುವುದಿಲ್ಲ. ಒಡೆತನ ಸರ್ಕಾರದ ಸ್ವಾಧೀನದಲ್ಲೇ ಇರುತ್ತದೆ. ಖಾಸಗೀಕರಣದಿಂದ ಬರುವ ಹಣವನ್ನು ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರಕ್ಕೆ ಬಳಸಲಾಗುತ್ತದೆ ಎಂದು ಹೇಳಿದರು. ಈ ಎನ್‍ಎಂಪಿ ಪ್ರಕಾರ 160 ಕಲ್ಲಿದ್ದಲು ಗಣಿ, 25  ವಿಮಾನ ನಿಲ್ದಾಣ,  15 ರೈಲ್ವೇ ಸ್ಟೇಡಿಯಂಗಳನ್ನು ಖಾಸಗಿ ಬಳಕೆಗೆ ನೀಡಲಾಗುತ್ತಿದೆ. ಇದನ್ನೂ ಓದಿ:  ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

    ಕೇಂದ್ರ ಸರ್ಕಾರ 2021-22ರ ಹಣಕಾಸು ಬಜೆಟ್‍ನಲ್ಲಿ ಎನ್‍ಎಂಪಿ ಜಾರಿ ಮಾಡುವುದಾಗಿ ಘೋಷಿಸಿತ್ತು. ಈಗ ತನ್ನ ಘೋಷಣೆಯನ್ನು ಜಾರಿ ಮಾಡಲು ಮುಂದಾಗಿದೆ.

  • ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

    ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

    – ಖಾಸಗೀಕರಣದ ನೆಪದಲ್ಲಿ ಕಪ್ಪು ಹಣ ಹೂಡಿಕೆಗೆ ಯತ್ನ

    ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನಾಡಿನ ರೈತರಿಗಾಗಿ ಆರಂಭಿಸಿದ ಮೈಶುಗರ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಕಾಳೇಗೌಡರವರು, ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಸಿ.ಎಂ.ಯಡಿಯೂರಪ್ಪನವರು ಹೇಳಿದ್ದರು. ಆದರೆ ಈಗ ಅವರೇ ಉಲ್ಟಾ ಹೊಡೆದಿದ್ದಾರೆ. ಯಡಿಯೂರಪ್ಪನವರ ಮಕ್ಕಳು, ಮೊಮ್ಮಕಳು ಆಂಧ್ರ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ್ದು, ಖಾಸಗೀಕರಣದ ನಂತರ ಭಾರೀ ಪ್ರಮಾಣದ ಕಪ್ಪುಹಣವನ್ನು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಮೈಶುಗರ್‍ಗಾಗಿ ಎಎಪಿಯು 2016ರಲ್ಲೇ ಬೃಹತ್ ರ್ಯಾಲಿ ನಡೆಸಿದ್ದು, ಈಗ ಅದರ ಖಾಸಗೀಕರಣವನ್ನು ನೋಡಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

    ಒಡೆಯರ್‍ರವರು ವಿಶೇಷ ಶ್ರಮವಹಿಸಿ 1933ರಲ್ಲಿ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಿದರು. ಇದನ್ನು ರಾಜ್ಯದ ಮೊದಲ ಕಾರ್ಖಾನೆ ಎಂದು ಗೌರವದಿಂದ ಕಾಣಲಾಗುತ್ತದೆ. ಸ್ವಾತಂತ್ರ್ಯ ಬಂದು 73 ವರ್ಷವಾದರೂ ರಾಜ್ಯವನ್ನು ಆಳಿದ ಯಾವ ಮುಖ್ಯಮಂತ್ರಿಗೂ ಇಂತಹ ಮತ್ತೊಂದು ಕಾರ್ಖಾನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ನಾಡಿನ ರೈತರ ಬದುಕನ್ನು ಸುಧಾರಿಸುವುದರಲ್ಲಿ ಮೈಶುಗರ್ ಪಾತ್ರ ಮಹತ್ವದ್ದಾಗಿದೆ. ಕಾರ್ಖಾನೆಯ ನೌಕರರು ಹಾಗೂ ಕಬ್ಬು ಬೆಳೆಗಾರರು ಮೈಶುಗರ್ ಸಂಸ್ಥೆಯೊಂದಿಗೆ ಆರ್ಥಿಕ ಸಂಬಂಧ ಮಾತ್ರವಲ್ಲದೇ ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ ಎಂದು ಕಾಳೇಗೌಡರವರು ತಿಳಿಸಿದರು. ಇದನ್ನೂ ಓದಿ: ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ

    ಪ್ರತಿದಿನವೂ 5 ಟನ್ ಸಕ್ಕರೆ ಅರೆಯುವ ಸಾಮರ್ಥ್ಯವನ್ನು ಮೈಶುಗರ್ ಕಾರ್ಖಾನೆ ಹೊಂದಿದೆ. 14 ಸಾವಿರಕ್ಕೂ ಹೆಚ್ಚು ರೈತರು ಇದರ ಷೇರುದಾರರಾಗಿದ್ದಾರೆ. ಈ ಹಿಂದೆ 18ಕ್ಕೂ ಹೆಚ್ಚು ವರ್ಷಗಳ ಕಾಲ ಮೈಶುಗರ್ ಕಂಪನಿಯು ಶೇ. 20ರಿಂದ ಶೇ. 30ರಷ್ಟು ಡಿವಿಡೆಂಡ್ ನೀಡಿದ ಕೀರ್ತಿ ಹೊಂದಿದೆ. 14ಕ್ಕೂ ಹೆಚ್ಚು ಫಾರ್ಮ್‍ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳು ಸೇರಿ 207 ಎಕರೆಗಿಂತ ಹೆಚ್ಚಿನ ಭೂಮಿಯು ಮೈಶುಗರ್ ಸಂಸ್ಥೆಯ ಬಳಿಯಲ್ಲಿದೆ. ಇಷ್ಟು ಸಮೃದ್ಧವಾದ ಇತಿಹಾಸ ಹೊಂದಿರುವ ಸಂಸ್ಥೆಯು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸ್ಥಗಿತಗೊಂಡಿದೆ. ಸರ್ಕಾರವು ಬಂಡವಾಳ ಹೂಡಿ ಸಂಸ್ಥೆಯನ್ನು ಆಧುನೀಕರಣಗೊಳಿಸಬೇಕೇ ಹೊರತು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಬಾರದು ಎಂದು ನಂಜಪ್ಪ ಕಾಳೇಗೌಡ ಹೇಳಿದರು. ಇದನ್ನೂ ಓದಿ: ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಬೆಂಬಲ

  • ಖಾಸಗೀಕರಣ ವಿರೋಧಿಸಿ ಬಿಇಎಲ್, ಹೆಚ್‍ಎಎಲ್ ನೌಕರರ ಪ್ರತಿಭಟನೆ

    ಖಾಸಗೀಕರಣ ವಿರೋಧಿಸಿ ಬಿಇಎಲ್, ಹೆಚ್‍ಎಎಲ್ ನೌಕರರ ಪ್ರತಿಭಟನೆ

    ಬೆಂಗಳೂರು: ಖಾಸಗೀಕರಣ ವಿರೋಧಿಸಿ, ಖಾಸಗೀಕರಣ ವಿರೋಧಿ ವೇದಿಕೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರ ಭಾಗವಾಗಿ ಜಾಲಹಳ್ಳಿಯ ಬಿಇಎಲ್ ಹಾಗೂ ಹೆಚ್‍ಎಎಲ್ ನೌಕರರು ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

    ದೇಶದ ನಿರ್ಮಾಣಕ್ಕೆ ಹಾಗೂ ಕೃಷಿ ಕೇತ್ರಗಳ ಬೆಳವಣಿಗೆಗೆ ಮೂಲ ಕಾರಣವಾಗಿರುವ ಸಾರ್ವಜನಿಕ ಸಂಸ್ಥೆಗಳ ಉಳಿವಿಗಾಗಿ ಹಾಗೂ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಹೆಚ್‍ಎಎಲ್, ಬಿಇಎಂಎಲ್, ಬಿಇಎಲ್, ಬಿಹೆಚ್‍ಇಎಲ್, ವಿಐಎಸ್‍ಎಲ್, ಎಲ್‍ಐಸಿ ಸೇರಿದಂತೆ ಹಲವು ಕಂಪನಿಗಳು ಸಹ ಕೇಂದ್ರದ ಖಾಸಗೀಕರಣ ನೀತಿಗೆ ಆಕ್ರೋಶ ವ್ಯಕ್ತಪಡಿಸಿವೆ.

    ಲಾಕ್ ಡೌನ್ ಸಂದರ್ಭದಲ್ಲಿ ಬಿಇಎಲ್, ಬೆಮಲ್, ಹೆಚ್‍ಎಎಲ್ ಜನರ ಪರವಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯ ತೋರಿವೆ. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆ ಸೇರಿದಂತೆ ಜನರಿಗೆ ಬದುಕಲು ಬೇಕಾದ ಎಲ್ಲಾ ಸಹಕಾರವನ್ನು ನೀಡಿವೆ. ಅಷ್ಟೇ ಅಲ್ಲ ಈ ಸಾರ್ವಜನಿಕ ಉದ್ದಿಮೆಗಳು ಕೋಟ್ಯಂತರ ಹಣವನ್ನು ಕೇಂದ್ರಕ್ಕೆ ಸಾಲ ಕೊಡುವಷ್ಟು ಲಾಭ ತಂದರೂ ಕೂಡ ಇವುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಎಷ್ಟು ಸರಿ ಎಂದು ಸಂಘಟಕರು ಪ್ರಶ್ನೆ ಮಾಡಿದರು.

    ಭಾರತ್ ಎಲೆಕ್ಟ್ರಾನಿಕ್ಸ್ ಯುನಿಯನ್‍ನ ಪ್ರಧಾನ ಕಾರ್ಯದರ್ಶಿ ಆಂಟೋನಿ ಪಿಂಟೋ ಮಾತನಾಡಿ, ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ನಾವು ಒಪ್ಪುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಭಾಗಿಯಾಗಿದ್ದರು.

  • ರಸ್ತೆಯಲ್ಲಿ ಖಾಸಗಿ ವಾಹನಗಳು ಓಡಾಡಲ್ವಾ?: ರೈಲ್ವೇ ಖಾಸಗೀಕರಣ ಸಮರ್ಥಿಸಿಕೊಂಡ ಗೋಯಲ್

    ರಸ್ತೆಯಲ್ಲಿ ಖಾಸಗಿ ವಾಹನಗಳು ಓಡಾಡಲ್ವಾ?: ರೈಲ್ವೇ ಖಾಸಗೀಕರಣ ಸಮರ್ಥಿಸಿಕೊಂಡ ಗೋಯಲ್

    – ರೈಲ್ವೇಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಅನಿವಾರ್ಯ

    ನವದೆಹಲಿ: ರಸ್ತೆಗಳು ರಾಷ್ಟ್ರದ ಸಂಪನ್ಮೂಲಗಳಲ್ಲಿ ಒಂದು. ಅಲ್ಲಿ ಖಾಸಗಿ ವಾಹನಗಳು ಓಡಾಡುವದಿಲ್ವಾ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಪಕ್ಷಗಳನ್ನ ಪ್ರಶ್ನಿಸಿ, ಖಾಸಗೀಕರಣವನ್ನ ಸಮರ್ಥಿಸಿಕೊಂಡಿದ್ದಾರೆ.

    ರೈಲ್ವೇ ಖಾಸಗೀಕರಣ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡು ಕೆಲ ಆರೋಪಗಳನ್ನ ಮಾಡಿದ್ದವು. ಈ ಸಂಬಂಧ ಲೋಕಸಭೆಯಲ್ಲಿ ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಯೂಷ್ ಗೋಯಲ್, ದೇಶದ ಸಂಪನ್ಮೂಲವಾಗಿರುವ ರಸ್ತೆಗಳಲ್ಲಿ ಸರ್ಕಾರಿ ವಾಹನಗಳು ಮಾತ್ರ ಸಂಚರಿಸಬೇಕೆಂದು ಏಕೆ ಯಾರು ಹೇಳುತ್ತಿಲ್ಲ. ಖಾಸಗಿ ಮತ್ತು ಸರ್ಕಾರಿ ವಾಹನಗಳು ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.

    ರೈಲ್ವೇ ಸಂಪನ್ಮೂಲ ಸರ್ಕಾರದಲ್ಲಿಯೇ ಇರಲಿದೆ. ಅದರ ಒಡೆತನವೂ ಸರ್ಕಾರ ಬಳಿಯಲ್ಲಿರಲಿದೆ. ಇದರಲ್ಲಿ ಖಾಸಗಿ ಬಂಡವಾಳ ಹೂಡಿಕೆಯಾದ್ರೆ ಏನು ಸಮಸ್ಯೆ ಎಂದು ವಿಪಕ್ಷಗಳನ್ನ ಪ್ರಶ್ನೆ ಮಾಡಿದರು. ಇಂದು ರೈಲ್ವೇ ನಿಲ್ದಾಣಗಳಲ್ಲಿ ವೇಟಿಂಗ್ ರೂಮ್, ಎಕ್ಸಲೇಟರ್ ಸೇರಿದಂತೆ ಹಲವು ಸೌಲಭ್ಯಗಳನ್ನ ಪ್ರಯಾಣಿಕರು ಬಯಸುತ್ತಾರೆ. ಹಾಗಾಗಿ ರೈಲ್ವೇಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಅನಿವಾರ್ಯ. ಅತ್ಯಾಧುನಿಕ, ಸುಧಾರಿತ ಸೌಲಭ್ಯಗಳನ್ನೊಳಗೊಂಡ ನಿಲ್ದಾಣಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ 50 ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತದ ಮೊದಲ ಎಸಿ ರೈಲ್ವೆ ನಿಲ್ದಾಣ

    ಸದ್ಯ 44 ವಂದೇ ಭಾರತ್ ರೈಲುಗಳು ಚಲಿಸುತ್ತಿದ್ದು, ಇವುಗಳ ಖಾಸಗೀಕರಣದ ಆದೇಶ ನೀಡಲಾಗಿದೆ. ಶೀಘ್ರದಲ್ಲಿಯೇ ಈ ರೈಲುಗಳು ಮಾರ್ಗ ನಿಗಧಿಪಡಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಸೇವೆ ಸಹ ನೀಡುವ ಮಾಹಿತಿಯನ್ನ ಗೋಯಲ್ ನೀಡಿದರು. ಇದನ್ನೂ ಓದಿ:  ಒಂದು ಹನಿ ನೀರು ಹೊರ ಬೀಳಲ್ಲ – ಮೈಸೂರು, ಬೆಂಗಳೂರು ಹಳಿ ನಿರ್ವಹಣೆಗೆ ಗೋಯಲ್‌ ಮೆಚ್ಚುಗೆ

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಕೇಂದ್ರದ ಖಾಸಗೀಕರನ ನೀತಿಯನ್ನ ಖಂಡಿಸಿವೆ. ರೈಲ್ವೇ ಮಾತ್ರವಲ್ಲದೇ ಬ್ಯಾಂಕುಗಳನ್ನ ಸಹ ಖಾಸಗೀಕರಣ ಮಾಡಲಾಗುತ್ತಿದ ಎಂದು ಆರೋಪಿಸಿವೆ. ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

     

  • ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ – ತನ್ನ ಪಾಲನ್ನು ಮಾರಲು ಮುಂದಾದ ಕೇಂದ್ರ

    ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ – ತನ್ನ ಪಾಲನ್ನು ಮಾರಲು ಮುಂದಾದ ಕೇಂದ್ರ

    – ದೇಶದ 13 ವಿಮಾನ ನಿಲ್ದಾಣ ಮಾರಾಟಕ್ಕೆ ಸಿದ್ಧತೆ
    – 2.5 ಲಕ್ಷ ಕೋಟಿ ರೂ. ಸಂಗ್ರಹಣೆಯ ಗುರಿ

    ನವದೆಹಲಿ: ಬೆಂಗಳೂರು ಸೇರಿದಂತೆ ಖಾಸಗೀಕರಣಕ್ಕೆ ಗುರುತಿಸಲಾಗಿರುವ 13 ವಿಮಾನ ನಿಲ್ದಾಣಗಳಲ್ಲಿರುವ ತನ್ನ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರೂ. ಸಂಗ್ರಹಣೆ ಸಂಬಂಧ ತನ್ನ ಪಾಲನ್ನು ಮಾರಾಟ ಮಾಡಲು  ಸಿದ್ಧತೆ ನಡೆಸಿದೆ.

    ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ(ಎಎಐ) ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡುವ ನಿರೀಕ್ಷೆ ಇದ್ದು, ಈ ವಿಷಯವು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಶೇ.13 ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ಶೇ.26ರಷ್ಟು ಷೇರನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಸಚಿವಾಲಯ ಆರಂಭಿಸಿದ್ದು, ಸಂಪುಟದ ಅಂಗೀಕಾರ, ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.

    ಕಳೆದ ವರ್ಷ ನಡೆದ ಮೊದಲ ಹಂತದ ಖಾಸಗೀಕರಣದಲ್ಲಿ ಮಂಗಳೂರು, ಲಕ್ನೋ, ಅಹಮದಾಬಾದ್‌, ಜೈಪುರ, ಗುವಾಹಟಿ ಮತ್ತು ತಿರುವನಂತಪುರ ಸೇರಿ 6 ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್‌ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.

    ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರ ಮಾಡಲಾಗಿದ್ದು, ಕಳೆದ ನವೆಂಬರ್‌ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿ ನಿರ್ವಹಿಸುತ್ತಿದೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ ಶೇ.74ರಷ್ಟು ಷೇರು ಅದಾನಿ ಗ್ರೂಪ್‌ನಲ್ಲಿ ಇದ್ದರೆ ಶೇ.26ರಷ್ಟು ಷೇರು ಎಎಐನಲ್ಲಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಶೇ.54ರಷ್ಟು ಷೇರು ಜಿಎಂಆರ್‌ ಗ್ರೂಪ್‌, ಎಎಎ ಬಳಿ ಶೇ. 26 ಮತ್ತು ಫ್ರಾಪೋರ್ಟ್‌ ಎಜಿ ಮತ್ತು ಎರ್ಮಾನ್‌ ಮಲೇಷ್ಯಾ ಶೇ.10 ರಷ್ಟು ಪಾಲನ್ನು ಹೊಂದಿದೆ.

    2021-22ರ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬಳಿ ಇರುವ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದರು.

    ಮೋದಿ ಹೇಳಿದ್ದು ಏನು?
    ಈ ಹಿಂದೆ ದೇಶದ ಉದ್ಯಮಿಗಳು, ಆರ್ಥಿಕ ತಜ್ಞರು ಭಾಗವಹಿಸಿದ್ದ ವೆಬಿನಾರ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಸರ್ಕಾರದ ಖಾಸಗೀಕರಣದ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ದೇಶದಲ್ಲಿರುವ ಹಲವು ಸಾರ್ವಜನಿಕ ವಲಯದ ಉದ್ಯಮಗಳು ನಷ್ಟದಲ್ಲಿದೆ. ಇಷ್ಟೇ ಅಲ್ಲದೇ ಹಲವು ಸರ್ಕಾರಿ ವಲಯದ ಉದ್ಯಮಗಳಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಇದು ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ತರುತ್ತಿದೆ. ಜನರ ತೆರಿಗೆ ಹಣವನ್ನು ಇವುಗಳಿಗೆ ಬಳಸುವುದು ಸರಿಯಲ್ಲ. ಈ ಉದ್ಯಮಗಳಲ್ಲಿ ಸರ್ಕಾರ ಇರಬೇಕಾದ ಅಗತ್ಯವಿಲ್ಲ. ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ ಎಂದು ಪ್ರತಿಪಾದಿಸಿದ್ದರು.

  • 2 ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    2 ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂದಾಗಿದೆ.

    ಇಂದು ಮಂಡನೆಯಾದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಎರಡು ಬ್ಯಾಂಕು ಮತ್ತು ವಿಮಾ ಕಂಪನಿಯಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಕಟಿಸಿದ್ದಾರೆ.

    2022ರ ಹಣಕಾಸು ವರ್ಷದ ಒಳಗಡೆ ಎಲ್‌ಐಸಿ, ಬಿಪಿಸಿಎಲ್‌, ಪವನ್‌ ಹನ್ಸ್‌ ಮತ್ತು ಏರ್‌ ಇಂಡಿಯಾದಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟು 1.75 ಲಕ್ಷ ಕೋಟಿ ರೂ. ಬಂಡವಾಳವನ್ನು ಹಿಂದಕ್ಕೆ ಪಡೆಯಲು 2022ರ ಹಣಕಾಸು ವರ್ಷದಲ್ಲಿ ಗುರಿಯನ್ನು ನಿಗದಿ ಮಾಡಲಾಗಿದೆ.

    ಕಳೆದ ವರ್ಷದ ಬಜೆಟ್‌ನಲ್ಲಿ 2.11 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆದ ಮಾಡಲು ಗುರಿ ನಿಗದಿಯಾಗಿತ್ತು. ಆದರೆ ಕೋವಿಡ್‌ 19 ನಿಂದಾಗಿ ಈ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.

    ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಅನುತ್ಪಾದಕಾ ಆಸ್ತಿಗಳು(ಎನ್‌ಪಿಎ) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಬಜೆಟ್‌ಗಳಲ್ಲಿ ಬ್ಯಾಂಕುಗಳ ವಿಲೀನದ ಬಗ್ಗೆ ಘೋಷಣೆಯಾಗಿತ್ತು.