Tag: ಖಾಸಗಿ ಸಾಲಮನ್ನಾ

  • ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    – ಕೊನೆ ಕ್ಷಣದಲ್ಲೂ ರಾಜ್ಯದ ಜನರಿಗೆ ಸಿಹಿ ಸುದ್ದಿ
    – ನಿನ್ನೆಯೇ ಸಾಲ ಮನ್ನಾ ಆದೇಶ ಜಾರಿ

    ಬೆಂಗಳೂರು: ಅಧಿಕಾರ ಕಳೆದುಕೊಂಡ ಹೊತ್ತಲ್ಲೇ ಕುಮಾರಸ್ವಾಮಿ ಬಂಪರ್ ಗಿಫ್ಟ್ ಕೊಟ್ಟಿದ್ದು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿದ್ದಾರೆ. ಫೈನಾನ್ಸ್ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಕರ್ನಾಟಕ ಋಣ ಪರಿಹಾರ ಕಾಯ್ದೆ ನಿನ್ನೆಯಿಂದಲೇ ಜಾರಿಯಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂರಹಿತರು, ಕಾರ್ಮಿಕರು ಹಾಗೂ ಬಡವರ ಆದಾಯ 1.20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಅವರಿಗೆ ಈ ಕಾಯ್ದೆ ಅನ್ವಯ ಆಗಲಿದೆ. ಅಲ್ಲದೇ ಈ ಬಗ್ಗೆ ಕಾಯ್ದೆಯ ಜಾರಿಗೆ ನಾನು ಕೊನೆಯ ಸಹಿ ಹಾಕಿದ್ದು, ಖಾಸಗಿ ಅವರ ಬಳಿ ಪಡೆದ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದೇನೆ. ಋಣ ಮುಕ್ತ ಕಾಯ್ದೆ ಅಡಿ ಅವರು ಋಣ ಮುಕ್ತರಾಗಲಿದ್ದಾರೆ. ಒಂದು ವರ್ಷಗಳ ಕಾಲ ಈ ಕಾಯ್ದೆಯ ಅವಧಿ ಇದ್ದು, 90 ದಿನಗಳ ಒಳಗೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು ಮನವಿ ಮಾಡಿದರು.

    ಒನ್ ಟೈಂ ಅವಧಿಯಲ್ಲಿ ಇದು ಜಾರಿ ಆಗಲಿದ್ದು, ಚಿನ್ನ, ಭೂಮಿ ಅಡವಿಟ್ಟ ಸಾಲಮನ್ನಾ ಆಗಲಿದೆ ಎಂದರು. ಇದಕ್ಕೆ ಪ್ರೇರಣೆ ನೀಡಿದ ಮಹಿಳೆಯ ಕಥೆಯನ್ನ ವಿವರಿಸಿದ ಕುಮಾರಸ್ವಾಮಿ ಅವರು, ಪತಿಯೊಬ್ಬರು ಸಾಲ ಮಾಡಿ ಮೃತಪಟ್ಟಿದ್ದರು. ಈ ಸಾಲದ ಹೊರೆ ಪತ್ನಿಯ ಮೇಲೆ ಬಿದ್ದಿತ್ತು. ಈ ಸಾಲವನ್ನು ತೀರಿಸಲು ಮಹಿಳೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಮಹಿಳೆ ರೈತರ ಸಾಲವನ್ನು ಮಾಡಿದಂತೆ ಈ ರೀತಿಯ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿ ಮನವಿ ಮಾಡಿದರು. ಹೀಗಾಗಿ ನಾನು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಎಂದು ವಿವರಿಸಿದರು.

    ನಿನ್ನೆಯವರೆಗೆ ಎಷ್ಟು ಸಾಲ ಮಾಡಿದ್ದಾರೆ ಎಷ್ಟು ವರ್ಷದ ಹಿಂದೆ ಮಾಡಿದ್ದರೂ ಕೂಡ ಇದು ಅನ್ವಯ ಆಗಲಿದೆ. 90 ದಿನಗಳ ಒಳಗೆ ಈ ಬಗ್ಗೆ ಮಾಹಿತಿ ನೀಡಿ, 5 ಎಕರೆ ಗಿಂತ ಭೂಮಿ ಕಡಿಮೆ ಇರುವವರಿಗೂ ಇದು ಅನ್ವಯ ಆಗಲಿದೆ. ಖಾಸಗಿ ಅವರಿಂದ ಪಡೆದ ಸಾಲವಷ್ಟೇ ಮನ್ನಾ ಆಗಲಿದೆ. ಆದರೆ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದು ವ್ಯವಹಾರ ಮಾಡುವವರಿಗೆ ಇದು ಅನ್ವಯ ಆಗುವುದಿಲ್ಲ. ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರವೂ ಮಾಹಿತಿ ಕೇಳಿತ್ತು. ಅಧಿಕಾರಿಗಳು ನಿರಂತರವಾಗಿ ಮಾಹಿತಿ ನೀಡಿ ಕೇಂದ್ರದ ಗೊಂದಲಗಳನ್ನು ನಿವಾರಣೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂದಿದ್ದ ಮಸೂದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಖಾಸಗಿಯವರಿಗೆ ಸರ್ಕಾರದಿಂದ ಹಣವನ್ನು ಪಾವತಿಸಲಾಗುತ್ತಾ ಎಂಬ ಪ್ರಶ್ನೆಗೆ, ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ಬಡ್ಡಿ ಹಣವನ್ನು ತಿಂದದ್ದು ಸಾಕು. ಯಾವುದೇ ಹಣವನ್ನು ಮರು ಪಾವತಿ ಮಾಡುವುದಿಲ್ಲ ಎಂದು ಉತ್ತರಿಸಿದರು.

    ಕಳೆದ 14 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಹಲವು ರಾಜಕೀಯ ಸಮಸ್ಯೆಗಳ ನಡುವೆ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

    ರೈತರ ಸಾಲಮನ್ನಾ, ರೈತರ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದ. ರಾಜಕೀಯ ಅಸ್ಥಿರತೆ ಉಂಟು ಮಾಡಲು ಕಳೆದ 14 ತಿಂಗಳು ನಡೆದ ಪ್ರಯತ್ನ ನಡುವೆ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಲು ಅಸಹಕಾರ ನೀಡಿದ ಅಧಿಕಾರಿಗಳಿಗೆ ವಂದನೆ ತಿಳಿಸಿದ್ದೇನೆ ಎಂದರು.

    ಮುಂದಿನ ಅವಧಿಯಲ್ಲೂ ರಾಜಕೀಯ ಅಸ್ಥಿರತೆ ನಿರ್ಮಾಣವಾಗುವ ಸಂದರ್ಭಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಸರ್ಕಾರ ಅಸ್ಥಿರವಾಗಿದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಲು ಸಲಹೆ ನೀಡಿದ್ದೇನೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಜನರಿಗೂ ಧನ್ಯವಾದ ತಿಳಿಸುತ್ತೇನೆ. 1976 ರಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಇದ್ದ ಋಣ ಪರಿಹಾರ ಕಾಯ್ದೆ ಮುಂದುವರಿಸಲು ಪ್ರಯತ್ನ ಪಟ್ಟಿದ್ದೆ.

  • ಕೈಸಾಲ ಕೊಟ್ಟವರಿಗೆ ಕೈಮುಗಿದು, ಎಲ್ಲಾ ಆಗೋಯ್ತು ಇನ್ನೇನೂ ಕೇಳ್ಬೇಡಿ ಅಂದುಬಿಡಿ: ಡಿಸಿಎಂ ಪರಮೇಶ್ವರ್

    ಕೈಸಾಲ ಕೊಟ್ಟವರಿಗೆ ಕೈಮುಗಿದು, ಎಲ್ಲಾ ಆಗೋಯ್ತು ಇನ್ನೇನೂ ಕೇಳ್ಬೇಡಿ ಅಂದುಬಿಡಿ: ಡಿಸಿಎಂ ಪರಮೇಶ್ವರ್

    ತುಮಕೂರು: ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಎಂದು ರೈತರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಖಾಸಗಿ ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದಾರೆ.

    ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರ ಪರವಾಗಿ ನಿಲ್ಲಬೇಕೆಂದು 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಮನ್ನಾ ಮಾಡಿದ್ದರೂ ಸಹ ಬಹಳ ದೊಡ್ಡ ದೊಡ್ಡ ಟೀಕೆಗಳನ್ನು ಮಾಡಿದ್ದಾರೆ. ಅವುಗಳಿಗೆ ಉತ್ತರಿಸುವ ಅವಶ್ಯಕತೆಯೂ ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಶ್ನೆಯೂ ಅಲ್ಲ. ಕೇವಲ ರೈತರ ಕಷ್ಟಕ್ಕೆ ನೆರವಾಗಿದ್ದೇವೆ ಎನ್ನುವುದು ಮುಖ್ಯವೆಂದು ತಿಳಿಸಿದ್ದಾರೆ.

    ರೈತರಿಗಾಗಿ ನಮ್ಮ ಅನವಶ್ಯಕತ ಖರ್ಚುಗಳನ್ನು ನಿಲ್ಲಿಸಿದ್ದೇವೆ. ಇಂದಿನಿಂದ ಸಾಲಮನ್ನಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ಹಾಗೂ ಕೈಸಾಲ ಮನ್ನಾಗೂ ಕಾಯ್ದೆ ರೂಪಿಸಿದ್ದೇವೆ. ಈಗಾಗಲೇ ಕ್ಯಾಬಿನೆಟ್‍ನಲ್ಲಿಯೂ ಋಣಮುಕ್ತ ಕಾಯ್ದೆಯನ್ನು ಮಂಜೂರು ಮಾಡಲಾಗಿದೆ. ಕೈಸಾಲ ಪಡೆದ ರೈತರು ಸಾಲ ಕೊಟ್ಟಿರುವವರಿಗೆ ಕೈ ಮುಗಿದು, ಸ್ವಾಮಿ ಎಲ್ಲಾ ಆಗಿ ಹೋಯಿತು. ಇನ್ನೇನೂ ನಮ್ಮ ಹತ್ರ ಕೇಳಬೇಡಿ ಅಂತ ಹೇಳಿಬಿಡಿ ಎಂದು ರೈತರ ಪರವಾಗಿ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?

    ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?

    ಬೆಂಗಳೂರು: ರೈತರ ರಾಷ್ಟ್ರೀಕೃತ ಹಾಗೂ ಪ್ರಾದೇಶಿಕ ಬ್ಯಾಂಕುಗಳ ಸಾಲಮನ್ನಾ ಮಾಡಿದ ಬಳಿಕ ರೈತರ ಖಾಸಗಿ ಸಾಲವನ್ನೂ ಸಹ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

    ಹೌದು. ಸಿಎಂ ಕುಮಾರಸ್ವಾಮಿಯವರು ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಜೊತೆಗೆ ಹೊಸ ಅಸ್ತ್ರ ಪ್ರಯೋಗಿಸಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಖಾಸಗಿ ಸಾಲಮನ್ನಾ ಮಾಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಖಾಸಗಿ ಸಾಲಮನ್ನಾಕ್ಕೆ ರಾಷ್ಟ್ರಪತಿಗಳ ಅಂಕಿತ ಹಾಕುವುದು ಅನಿವಾರ್ಯವಾಗಿದೆ ಎಂದು ತಿಳಿದು ಬಂದಿದೆ.

    ಈ ಮೂಲಕ ಜಾಸ್ತಿ ದಿನ ಸರ್ಕಾರ ಉಳಿಯಲ್ಲ ಅನ್ನೋ ವಿರೋಧಿಗಳ ಹೇಳಿಕೆಗೆ ಬಹುದೊಡ್ಡ ಶಾಕ್ ನೀಡಿದ್ದು, ಮತ್ತೆ ಸಿಎಂ ಆಗುತ್ತೇನೆಂಬ ಸಿದ್ದರಾಮಯ್ಯನವರ ಆಸೆಯ ಬೆನ್ನಲ್ಲೇ ಬೃಹತ್ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಿಎಂ ಕುಮಾರಸ್ವಾಮಿ ಮುಂದಾಗುವುದರ ಮೂಲಕ ಮಿತ್ರಪಕ್ಷ ಕಾಂಗ್ರೆಸ್ ಗೆ ಶಾಕ್ ನೀಡಿ, ಸರ್ಕಾರ ಅಸ್ಥಿರಗೊಳಿಸುವ ವಿರೋಧಿಗಳ ಯತ್ನಕ್ಕೆ ಭಾರೀ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

    ಯಾರದ್ದೆಲ್ಲಾ ಸಾಲಮನ್ನಾ ಆಗುತ್ತೇ?
    * ಖಾಸಗಿ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರಿಂದ ಪಡೆದ ಸಾಲ.
    * ಚರಾಸ್ಥಿ ಅಡಮಾನ ಇಟ್ಟುಕೊಂಡು ಸಾಲ ನೀಡಿದವರ ಸಾಲ.
    * ಅಡಮಾನ ಇಟ್ಟ ಸ್ಥಿರಾಸ್ತಿ ಬಿಡುಗಡೆಗೆ ಅವಕಾಶ.
    * 2 ಹೆಕ್ಟೇರ್ ಒಣಭೂಮಿ ಹೊಂದಿರುವ ರೈತರು.
    * ಒಂದೂವರೆ ಎಕರೆ ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ರೈತರು.
    * ಅರ್ಧ ಎಕರೆ ನೀರಾವರಿ ಜಮೀನು ಹೊಂದಿರುವ ರೈತರಿಗೆ ಲಾಭ.
    * ಸಣ್ಣ ರೈತ, ಭೂ ರಹಿತ ಕೃಷಿ ಕಾರ್ಮಿಕರ ಆದಾಯ 1.25 ಲಕ್ಷ ಆದಾಯ ಮೀರದೇ ಇರುವವರು.

    ಯಾರ ಸಾಲಮನ್ನಾ ಇಲ್ಲ?
    * ಭೂಕಂದಾಯ ವಸೂಲಾತಿಗೆ ಉಳಿಸಿಕೊಂಡಿರುವವರ ಬಾಕಿ.
    * ಯಾವುದೇ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಯ ಪ್ರಾಧಿಕಾರ ಪಡೆದುಕೊಂಡಿರು ಸಾಲ.
    * ತೆರಿಗೆ ಅಥವಾ ರಾಜಸ್ವ ಬಾಕಿಯಿಂದ ಉಳಿಸಿಕೊಂಡಿರುವ ಸಾಲ.
    * ಕೇಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಗಳ ಬಾಕಿಗೆ ಅನ್ವಯವಾಗಲ್ಲ.
    * ಕೂಲಿ, ಸಂಭಾವನೆ, ವೇತನ ಬಾಕಿಗೆ ಅನ್ವಯವಾಗಲ್ಲ.
    * ಸರ್ಕಾರಿ ಕಂಪೆನಿ ಸಾಲ.
    * ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ).
    * ರಾಜ್ಯ ಸಹಕಾರ ಸಂಘಗಳ ಅಡಿ ನೋಂದಣಿಯಾದ ಸಂಘಗಳು.
    * ಒಪ್ಪಂದ, ಬಳಕೆ, ಡಿಕ್ರಿ, ಆದೇಶ ಇದ್ದರೆ ಅನ್ವಯವಾಗಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv