Tag: ಖಾಸಗಿ ಬಸ್

  • ಖಾಸಗಿ, ಸಾರಿಗೆ ಬಸ್ ಪರಸ್ಪರ ಡಿಕ್ಕಿ- ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಖಾಸಗಿ, ಸಾರಿಗೆ ಬಸ್ ಪರಸ್ಪರ ಡಿಕ್ಕಿ- ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಬಳ್ಳಾರಿ: ಖಾಸಗಿ ಹಾಗೂ ಸಾರಿಗೆ ಬಸ್ ಪರಸ್ಪರ ಡಿಕ್ಕಿಯಾಗಿ ಚಾಲಕ ಮೃತಪಟ್ಟು 20ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಕೂಡ್ಲಿಗಿ ಬಳಿ ನಡೆದಿದೆ.

    ಇಂದು ನಸುಕಿನ ಜಾವ ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿಯ ಮೊರಬ ಕ್ರಾಸ್ ಬಳಿ ಕೆಎಸ್‍ಆರ್ ಟಿಸಿ ವೋಲ್ವೋ ಬಸ್ ಹಾಗೂ ಎಸ್‍ಆರ್‍ಎಸ್ ಸ್ಲೀಪರ್ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಸಾರಿಗೆ ಬಸ್ ಚಾಲಕ ಮಲ್ಲಿಕಾರ್ಜುನ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಎಸ್‍ಆರ್‍ಎಸ್ ಬಸ್ ಚಾಲಕನ ಎರಡು ಕಾಲುಗಳು ತುಂಡಾಗಿವೆ.

    ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮ್ಸ್ ಆಸ್ಪತ್ರೆಗೆ ಎಸ್.ಪಿ ಅರುಣ ರಂಗರಾಜನ್ ಭೇಟಿ ನೀಡಿದ್ದಾರೆ.

    ಅಪಘಾತವಾಗುತ್ತಿದ್ದಂತೆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರನ್ನು ಪೊಲೀಸರು ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್, ಲಾರಿ ನಡುವೆ ಭೀಕರ ಅಪಘಾತ- ಓರ್ವ ಸಾವು, 15 ಮಂದಿಗೆ ಗಾಯ

    ಬಸ್, ಲಾರಿ ನಡುವೆ ಭೀಕರ ಅಪಘಾತ- ಓರ್ವ ಸಾವು, 15 ಮಂದಿಗೆ ಗಾಯ

    ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿವೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಬಳಿ ನಡೆದಿದೆ.

    ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಲಾರಿ ಹಾಗೂ ಬಸ್ ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ನಜ್ಜುಗುಜ್ಜಾದ ಲಾರಿಯಲ್ಲಿಯೇ ಚಾಲಕ ಸಿಲುಕಿಕೊಂಡು ಆತನ ಕಾಲು ಮುರಿದಿದ್ದು, ಖಾಸಗಿ ಬಸ್ ಚಾಲಕ ಮೃತಪಟ್ಟಿದ್ದಾನೆ. ಅಲ್ಲದೆ ಅಪಘಾತದಲ್ಲಿ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಭೀಕರ ಅಪಘಾತ ನಡೆದ ಸಂದರ್ಭದಲ್ಲಿ ಸ್ಥಳೀಯರು ಗಾಯಾಳುಗಳಿಗೆ ಸಹಾಯ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಖಾಸಗಿ ಬಸ್, ಲಾರಿ ಡಿಕ್ಕಿ- ಚಾಲಕನ ಕಾಲುಗಳು ಕಟ್, 26 ಮಂದಿಗೆ ಗಾಯ

    ಖಾಸಗಿ ಬಸ್, ಲಾರಿ ಡಿಕ್ಕಿ- ಚಾಲಕನ ಕಾಲುಗಳು ಕಟ್, 26 ಮಂದಿಗೆ ಗಾಯ

    ಸಾಂದರ್ಭಿಕ ಚಿತ್ರ

    ತುಮಕೂರು: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬಳಿ ನಡೆದಿದೆ.

    ತುಮಕೂರಿನ ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೈಪಾಸ್ ಬಳಿ ಇಂದು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಗಮ ಟ್ರಾವೆಲ್ ಬಸ್ ಅಪಘಾತಕ್ಕೀಡಾಗಿದೆ. ಬೆಳಗ್ಗಿನ ಜಾವ ಸಂಭವಿಸಿದ ಈ ಅಪಘಾತದಿಂದ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 26 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಮೂವರ ಸ್ಥಿತಿ ಗಂಭೀರವಾಗಿದೆ.

    ಎದುರಿನಿಂದ ಬಂದ ಲಾರಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಶಂಕರ್ ಎಂಬವರ ಎರಡೂ ಕಾಲುಗಳು ತುಂಡಾಗಿದೆ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಹಾಗೂ ಚಾಲಕನನ್ನು ಹೆದ್ದಾರಿಯಲ್ಲಿ ತೆರಳುತ್ತಿದ್ದ ಜನರು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಸದ್ಯ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.

    ಘಟನೆ ಕುರಿತು ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾಸಗಿ ಬಸ್‍ಗೆ ಬೈಕ್ ಡಿಕ್ಕಿ- ಸ್ಥಳದಲ್ಲೇ ಸುಟ್ಟು ಕರಕಲಾದ ಸವಾರ

    ಖಾಸಗಿ ಬಸ್‍ಗೆ ಬೈಕ್ ಡಿಕ್ಕಿ- ಸ್ಥಳದಲ್ಲೇ ಸುಟ್ಟು ಕರಕಲಾದ ಸವಾರ

    ಕೋಲಾರ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ ಹೊಡಿದ ಪರಿಣಾಮ ಬೆಂಕಿ ಹೊತ್ತಿ ಬೈಕ್ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾದ ಭೀಕರ ಘಟನೆ ಜಿಲ್ಲೆಯ ಬಂಗಾರಪೇಟೆ ಹೊರವಲಯದಲ್ಲಿ ನಡೆದಿದೆ.

    ಬಂಗಾರಪೇಟೆಯ ವಿವೇಕಾನಂದ ನಗರದ ಯುವಕ ನೀರಜ್(20) ಸ್ಥಳದಲ್ಲಿ ಸುಟ್ಟು ಕರಕಲಾದ ಬೈಕ್ ಸವಾರ. ಬೆಳ್ಳಂಬೆಳಗ್ಗೆ ನೀರಜ್ ಹಾಗೂ ಆತನ ಸ್ನೇಹಿತ ಬೈಕ್‍ನಲ್ಲಿ ತೆರೆಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಖಾಸಗಿ ಬಸ್‍ಗೆ ಬೈಕ್ ಡಿಕ್ಕಿ ಹೊಡಿದಿದೆ. ಈ ಭೀಕರ ಅಪಘಾತವಾದ ಪರಿಣಾಮ ಬೈಕ್‍ಗೆ ಬೆಂಕಿ ಹೊತ್ತಿಕೊಂಡು ನೀರಜ್ ಸ್ಥಳದಲ್ಲೇ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾನೆ.

    ಬೈಕ್‍ನಲ್ಲಿದ್ದ ಇನ್ನೋರ್ವ ಯುವಕ ಮಾತ್ರ ಅಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಮಾರು ಎರಡುವರೆ ಲಕ್ಷ ಮೌಲ್ಯದ ಯಮಹ ಆರ್1 ಬೈಕ್ ಅಪಘಾತದಲ್ಲಿ ಸುಟ್ಟು ಕರಕಲಾಗಿದೆ. ಘಟನೆ ಕುರಿತು ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಸ್ ಟಾಪ್ ಮೇಲೆ ಮಕ್ಕಳು – ಮಂಡ್ಯ ಬಳಿಕ ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾ ಸಾರಿಗೆ ಇಲಾಖೆ?

    ಏಸ್ ಟಾಪ್ ಮೇಲೆ ಮಕ್ಕಳು – ಮಂಡ್ಯ ಬಳಿಕ ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾ ಸಾರಿಗೆ ಇಲಾಖೆ?

    ದಾವಣಗೆರೆ: ಮಂಡ್ಯ ದುರಂತದ ನೋವು ಮಾಸುವ ಮುನ್ನವೇ ದಾವಣಗೆರೆಯಲ್ಲಿ ಭಯವಿಲ್ಲದೆ ಆಟೋಗಳಲ್ಲಿ ಸಾಮಥ್ರ್ಯಕಿಂತ ಹೆಚ್ಚಿನ ಸಂಖ್ಯೆಯ ಜನರನ್ನು ತುಂಬಿಕೊಂಡು ರಿಕ್ಷಾ ಚಾಲಕರು ತಮ್ಮದೆ ದರ್ಬಾರ್ ನಡೆಸುತ್ತಿದ್ದಾರೆ.

    ದಾವಣಗೆರೆ ತಾಲೂಕಿನ ರಾಮನಗರ, ಲೋಕಿಕೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಆಟೋಗಳೇ ಸಂಪರ್ಕ ಸೇತುವೆ. ಇದನ್ನೇ ಲಾಭ ಮಾಡಿಕೊಂಡ ಚಾಲಕರು ಆಟೋದಲ್ಲಿ ಅಧಿಕ ಜನರನ್ನು ಸಾಗಿಸುತ್ತಿದ್ದಾರೆ. ಅಲ್ಲದೆ ಯಾವುದೇ ಪರವಾನಿಗೆ ಇಲ್ಲದೆ ಆಟೋಗಳನ್ನು ಚಲಾಯಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕೆಲ ತಿಂಗಳುಗಳ ಹಿಂದೆ ಚಲಿಸುತ್ತಿದ್ದ ಆಟೋದಿಂದ ಬಿದ್ದು ಇಬ್ಬರು ಶಾಲಾ ಮಕ್ಕಳು ಸಾವನ್ನಪ್ಪಿದ್ದರು. ಆದರಿಂದ ಆಟೋಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

    ಲೋಕಿಕೆರೆ ಗ್ರಾಮದ ಆಟೋಗಳಲ್ಲಿ ಪ್ರಯಾಣಿಸುತ್ತಿದ್ದ ಶಾಲಾ, ಕಾಲೇಜು ಮಕ್ಕಳು ವಾಹನದ ಹಿಂದೆ ನೇತುಬಿದ್ದು ಸರ್ಕಸ್ ಮಾಡುತ್ತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಟಾಟಾ ಏಸ್ ಗಾಡಿಯಲ್ಲಿ ಟಾಪ್ ಮೇಲೆ ಕೂತು ಮಕ್ಕಳು ಪ್ರಯಾಣ ಬೆಳಸುತ್ತಿದ್ದು, ಸ್ವಲ್ಪ ಹೆಚ್ಚುಕಮ್ಮಿಯಾದರೂ ಜವರಾಯನ ಕದ ತಟ್ಟೊದಂತು ಗ್ಯಾರೆಂಟಿ.

    ಸಾರಿಗೆ ಇಲಾಖೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸು ಸೇವೆಯನ್ನು ರದ್ದುಗೊಳಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು 10, 15 ಜನರನ್ನೂ ಕೂರಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದಾರೆ.

    ಜಿಲ್ಲಾದ್ಯಂತ ಅವಧಿ ಮುಗಿದ ಖಾಸಗಿ ಬಸ್‍ಗಳು ಸಂಚಾರ ಮಾಡುತ್ತಿದ್ದು, ಬಸ್ ಟಾಪ್ ಮೇಲೆ ಪ್ರಯಾಣಿಕರು ಕೂತು ಪ್ರಯಾಣಿಸುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತವರಿಗೆ ಕರೆದುಕೊಂಡು ಹೋಗ್ತಿದ್ದಾಗ ಅಪಘಾತ- ಅಕ್ಕ, ತಮ್ಮ ದುರ್ಮರಣ

    ತವರಿಗೆ ಕರೆದುಕೊಂಡು ಹೋಗ್ತಿದ್ದಾಗ ಅಪಘಾತ- ಅಕ್ಕ, ತಮ್ಮ ದುರ್ಮರಣ

    ಬಳ್ಳಾರಿ: ಅಕ್ಕನನ್ನು ತವರಿಗೆ ಕರೆದುಕೊಂಡು ಹೋಗುತ್ತಿದ್ದ ತಮ್ಮ ಹಾಗೂ ಸಹೋದರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಬಳಿ ನಡೆದಿದೆ.

    ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಬಸವರಾಜ (35) ಹಾಗೂ ನಾಗಮ್ಮ (41) ಮೃತಪಟ್ಟ ಅಕ್ಕ-ತಮ್ಮ. ಬೈಕ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಸ್ವಸ್ಥಗೊಂಡಿದ್ದ ಬಸವರಾಜನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಘಟನೆ ಸೋಮವಾರ ನಡೆದಿದೆ.

    ಘಟನೆಯ ವಿವರ:  ಬಸವರಾಜ ಅಕ್ಕ ನಾಗಮ್ಮ ಅವರನ್ನು ಕರೆದುಕೊಂಡು ಬರಲು ಸೋಮವಾರ ವಲಸೆ ಗ್ರಾಮಕ್ಕೆ ಹೋಗಿದ್ದನು. ಸಹೋದರ ಬಂದ ಖುಷಿಯಲ್ಲಿ ಸಿದ್ಧವಾಗಿ ನಾಗಮ್ಮ ಬೈಕ್ ಏರಿ ತವರಿಗೆ ಹೊರಟಿದ್ದಳು. ಆದರೆ ದಾರಿ ಮಧ್ಯದಲ್ಲಿ ಖಾಸಗಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನಾಗಮ್ಮ ಹಾರಿಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸವಾರ ಬಸವರಾಜನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಘಟನೆಯ ವೇಳೆ ವೇಗವಾಗಿದ್ದ ಬಸ್ ರಸ್ತೆ ಬಿಟ್ಟು ಕೆಳಗೆ ಇಳಿದಿದ್ದು, ಭಾರೀ ಅನಾಹುತವೊಂದು ಕೈ ತಪ್ಪಿದೆ. ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೈಕ್ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್- ಹಲವರಿಗೆ ಗಾಯ, ಮಹಿಳೆ ಗಂಭೀರ

    ಬೈಕ್ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್- ಹಲವರಿಗೆ ಗಾಯ, ಮಹಿಳೆ ಗಂಭೀರ

    ಹಾಸನ: ಮಂಡ್ಯದ ಕನಗನಮರಡಿ ದುರಂತ ಮರೆಯುವ ಮುನ್ನವೇ ಅಂತಹದ್ದೇ ಘಟನೆಯೊಂದು ಹಾಸನದಲ್ಲಿ ನಡೆದಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಬೈಕ್ ತಪ್ಪಿಸಲು ಹೋಗಿ ಖಾಸಗಿ ಬಸ್ ಗದ್ದೆಗೆ ಉರುಳಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಹುಳ್ಳೇನಹಳ್ಳಿ ಬಳಿ ನಡೆದಿದೆ.

    ಕೊಡಗು ಜಿಲ್ಲೆಯ ಗದ್ದೆಹೊಸೂರು ಗ್ರಾಮದಿಂದ ಸಂಬಂಧಿಗಳು ಹಾಸನ ಜಿಲ್ಲೆಯ ಗೊರೂರು ಪಟ್ಟಣಕ್ಕೆ ಬೀಗರ ಔತಣಕೂಟಕ್ಕೆ ಬಸ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿರುವ ಬೈಕ್ ತಪ್ಪಿಸಲು ಹೋಗಿ ಬಸ್ ನೇರವಾಗಿ ಗದ್ದೆಗೆ ಉರುಳಿದೆ. ಪರಿಣಾಮ ಬಸ್ ನಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 55 ವರ್ಷದ ಗಂಗಮ್ಮ ಎಂಬವರ ಸ್ಥಿತಿ ಗಂಭೀರವಾಗಿದೆ.

    ಸದ್ಯ ಗಾಯಾಳುಗಳನ್ನು ಅರಕಲಗೂಡು, ಹಾಸನ ಮತ್ತು ಕೊಣನೂರು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದ್ವಿಚಕ್ರ ಸವಾರನಿಗೂ ಸಹ ಅಲ್ಪ ಪ್ರಮಾಣದ ಗಾಯಗಳಾಗಿದ್ದು ಸುರಕ್ಷಿತವಾಗಿದ್ದಾನೆ. ಬಸ್ಸಿನಲ್ಲಿ ಒಟ್ಟು 35 ಮಂದಿಯಿದ್ದರು ಎಂಬುದಾಗಿ ತಿಳಿದುಬಂದಿದೆ.

    ಅಪಘಾತ ಸ್ಥಳದಿಂದ ಕೊಂಚ ದೂರದಲ್ಲಿ ನೀರಿನ ಕಾಲುವೆಯಿದೆ. ಆದ್ರೆ ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೀಡಾದ ಬಸ್ಸನ್ನು ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ.

    ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ಮಂಗಳೂರು: ನಗರದಲ್ಲಿ ಆಯೋಜಿಸಿರುವ ರಾಮ ಮಂದಿರ ಉದ್ದೇಶಿತ ಜನಜಾಗೃತಿ ಸಭೆಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ಜನಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ದಿಲ್‍ರಾಜ್ ಶೆಟ್ಟಿ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮನವಿಯಂತೆ ಉಚಿತ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿ ಸಂಘದ ಪದಾಧಿಕಾರಿಗಳಿಗೆ ಆದೇಶ ಪತ್ರ ಹೊರಡಿಸಿದ್ದರು.

    ಸಂಘದ ಲೆಟರ್ ಹೆಡ್‍ನಲ್ಲಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಅವರು ಕೂಡ ದಕ್ಷಿಣ ಕನ್ನಡ ನ್ಯೂಸ್ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಕಿಡಿಕಾರಿದ್ದಾರೆ. ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಲುವಾಗಿ ಕೇಂದ್ರ ಮೈದಾನ ಮಂಗಳೂರಿನಲ್ಲಿ ನಡೆಯುವ ಸಭೆಗೆ ಉಚಿತ ಬಸ್ ಒದಗಿಸಲಾಗಿದೆ. ಕೇಸರಿ ಶಾಲು ಧರಿಸಿ ಬರುವ ಪ್ರಯಾಣಿಕರಿಗೆ ಮಂಗಳೂರು – ಮೂಲ್ಕಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತ ಬಸ್ ಸೇವೆ ಒದಗಿಸಲಾಗುತ್ತಿದೆ. ಈ ಕುರಿತು ಕೆನರಾ ಬಸ್ ಮಾಲೀಕರು ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ವ್ಯಂಗ್ಯವಾಡಿದ್ದಾರೆ.

    ಮಾಲೀಕರಿಂದ ಸ್ಪಷ್ಟನೆ: ನಾವು ಪ್ರತಿ ಬಾರಿಯೂ ಉಚಿತ ಬಸ್ ವ್ಯವಸ್ಥೆ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಅಥವಾ ಜಿಲ್ಲಾಡಳಿತದ ಯಾವುದೇ ಕಾರ್ಯಕ್ರಮಕ್ಕೆ ಬಸ್ ಕೇಳಿದರೆ, ಉಚಿತವಾಗಿಯೇ ಕೊಡುತ್ತೇವೆ. ಆದರೆ ಈ ಬಾರಿ ದುಬಾರಿ ವೆಚ್ಚದ ಕಾರಣ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಸ್ಸಿನಲ್ಲಿ ಬರುವವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ ಅಷ್ಟೇ. ಬಸ್ ಅನ್ನು ಉಚಿತವಾಗಿ ಬಿಟ್ಟು ಕೊಟ್ಟಿಲ್ಲ ಎಂದು ದಿಲ್‍ರಾಜ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

    ಉಚಿತ ಬಸ್ ವ್ಯವಸ್ಥೆಯ ಕುರಿತು ಅರಿವಿಲ್ಲದ ಮಂದಿ ಹೇಳಿಕೆಯ ಪ್ರತಿಯನ್ನು ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ದಿನೇಶ್ ಅಮಿನ್ ಮಟ್ಟು ಕೂಡ ಇದೆ ಹೇಳಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಾಮ ಮಂದಿರ ವಿಚಾರ ಬಿಜೆಪಿ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿಯವರು ಬಸ್ ವ್ಯವಸ್ಥೆ ಮಾಡಿದ್ದಾರೆಂದು ಬಿಂಬಿಸಿ, ಟೀಕೆ ಮಾಡುತ್ತಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಾರಿ, ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ- 6 ಪ್ರಯಾಣಿಕರ ದುರ್ಮರಣ

    ಲಾರಿ, ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ- 6 ಪ್ರಯಾಣಿಕರ ದುರ್ಮರಣ

    ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಇಂದು ಬೆಳಂಬೆಳಗ್ಗೆ ಲಾರಿ ಮತ್ತು ಖಾಸಗಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 6 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟವರನ್ನು ಮುಂಬೈ ಮೂಲದ ವಿಶ್ವನಾಥ್ ಮಾತ್ರೆ (76), ದಿನಕರ್ ಮಾತ್ರೆ (74), ರಮೇಶ್ ಜಯಮಾಲ (70), ಸುಮೇದ ಜಮಖಂಡಿ (65), ಲಾಹೂ ಕೆಲೋಸ್ಕರ (65), ಸುಚಿತ್ರಾ ರಾಹೂಲ್ (65) ಎಂದು ಗುರುತಿಸಲಾಗಿದೆ.

    ಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ- ಅಣ್ಣಿಗೇರಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು. ಘಟನೆಯಿಂದಾಗಿ ಖಾಸಗಿ ಬಸ್ಸಿನಲ್ಲಿದ್ದ 6 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯಲ್ಲಿ ಸಾವನ್ನಪ್ಪಿದವರು ಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದು, ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರು ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಬೆಂಗಳೂರು: ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರುವ ಖಾಸಗಿ ಟ್ರಾವೆಲ್ಸ್‌ಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. ಹೌದು, ನಿಯಮ ಮೀರಿ ಪ್ರಯಾಣದ ದರ ಪಡೆಯುತ್ತಿರುವ ಖಾಸಗಿ ಬಸ್‍ಗಳ ಮೇಲೆ ಅಧಿಕಾರಿಗಳು ರೈಡ್ ಮಾಡುತ್ತಿದ್ದಾರೆ.

    ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರಿಗೆ ಮರಳುತ್ತಾರೆ. ಹೀಗಾಗಿ ಖಾಸಗಿ ಟ್ರಾವೆಲ್ಸ್ ಗಳು ಲಾಭಕ್ಕಾಗಿ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತವೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಅಪರ ಸಾರಿಗೆ ಆಯುಕ್ತ ನಾರಾಯಣ್ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗುತ್ತಿದೆ. ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ 35 ಜನ ಆರ್‌ಟಿಓ ಇನ್‍ಸ್ಪೆಕ್ಟರ್ ಗಳು ಹಾಗೂ 20 ಜನ ಅಧಿಕಾರಿಗಳಿದ್ದಾರೆ. ಈ ತಂಡಗಳು ಬೆಂಗಳೂರಿನಿಂದ ಹೊರ ಹೊಗುವ ಪ್ರತಿ ಬಸ್ ಅನ್ನು ತಪಾಸಣೆ ಮಾಡುತ್ತಿವೆ.

    ಬಸ್‍ನಲ್ಲಿ ಪ್ರಯಾಣಿಕರು ಮತ್ತು ಅವರ ಲಗೇಜ್ ಹೊರತು ಪಡಿಸಿ ಯಾವುದೇ ರೀತಿಯ ವಸ್ತುಗಳನ್ನು ಹಾಕುವಂತಿಲ್ಲ. ನಿಯಮ ಮೀರಿ ಹಣ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲು ಪ್ರಯಾಣಿಕರಿಂದ ಟಿಕೆಟ್ ತಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಹೆಚ್ಚಿನ ಹಣ ಪಡೆದಿದ್ದರೆ ಅಂತಹ ಟ್ರಾವೆಸ್ಸ್ ವಿರುದ್ಧ ಪ್ರಕರಣ ದಾಖಲಿಸಲು ಆರ್‍ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

    ಎಲ್ಲೆಲ್ಲಿ ಪರಿಶೀಲನೆ?: ಮೆಜೆಸ್ಟಿಕ್, ಕಲಾಸಿಪಾಳ್ಯ, ಗೊರಗುಂಟೆಪಾಳ್ಯ, ನೆಲಮಂಗಲ, ದೇವನಹಳ್ಳಿ ಟೋಲ್ ಸೇರಿದಂತೆ ಬೆಂಗಳೂರಿನಿಂದ ಹೊರ ಭಾಗಗಳ ಪ್ರತಿ ಟೋಲ್‍ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಈ ಮೂಲಕ ಖಾಸಗಿ ಟ್ರಾವೆಲ್ಸ್ ಗಳ ದರ್ಬಾರ್ ಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣಿಕರ ಮೇಲೆ ಆಗುತ್ತಿರುವ ಹೊರೆಯನ್ನು ತಡೆಯಲು ಸಾರಿಗೆ ಇಲಾಖೆ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv