Tag: ಖಾಸಗಿ ಬಸ್

  • ದೀಪಾವಳಿಗೆ ಖಾಸಗಿ ಬಸ್‍ಗಳ ದುಬಾರಿ ಶುಲ್ಕ: ಟಿಕೆಟ್ ಬುಕ್ ಮಾಡಿ ಹಬ್ಬಕ್ಕೆ ಬಿಎಸ್‍ವೈಗೆ ಆಹ್ವಾನ

    ದೀಪಾವಳಿಗೆ ಖಾಸಗಿ ಬಸ್‍ಗಳ ದುಬಾರಿ ಶುಲ್ಕ: ಟಿಕೆಟ್ ಬುಕ್ ಮಾಡಿ ಹಬ್ಬಕ್ಕೆ ಬಿಎಸ್‍ವೈಗೆ ಆಹ್ವಾನ

    ಕಾರವಾರ: ದೀಪಾವಳಿ ಹಬ್ಬದ ದಿನಗಳಲ್ಲಿ ಖಾಸಗಿ ಬಸ್‍ಗಳ ದುಬಾರಿ ಪ್ರಯಾಣದ ದರದಿಂದ ಕಂಗೆಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೊಬ್ಬರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ್ದಾರೆ.

    ಹೊನ್ನಾವರ ತಾಲೂಕಿನ ರಾಜೇಶ್ ಶೇಟ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಬಸ್‍ಗಳ ಟಿಕೆಟ್ ದರವು ಸಾಮಾನ್ಯ ದಿನದಲ್ಲಿ 700 ರೂ.ದಿಂದ 800 ರೂಪಾಯಿ ಇರುತ್ತದೆ. ಆದರೆ ಹಬ್ಬ ಹರಿದಿನಗಳಲ್ಲಿ 1,500 ರೂ.ದಿಂದ 2,500 ರೂ.ಕ್ಕೂ ಅಧಿಕ ದರವಾಗುತ್ತದೆ. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು, ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಬರಬೇಕೆಂದರೆ ಒಬ್ಬರು ಕನಿಷ್ಠ 5,000 ರೂ. ತೆಗೆದಿಡಬೇಕು. ಕುಟುಂಬ ಸಮೇತ ಬರಬೇಕು ಎಂದರೆ ಬರುವ ವೇತನವನ್ನು ಟಿಕೆಟ್‍ಗೆ ಮೀಸಲಿಡಬೇಕು.

    ಬಸ್ ದರದಿಂದ ಬೇಸತ್ತ ಪ್ರಯಾಣಿಕ ರಾಜೇಶ್ ಅವರು, ಎಸ್‍ಎಸ್‍ಆರ್ ಎಸ್ ಟ್ರಾವೆಲ್ಸ್ ನಲ್ಲಿ 1,570 ರೂ. ಟಿಕೆಟ್ ಬುಕ್ ಮಾಡಿದ್ದಾರೆ. ಬಳಿಕ ಟಿಕೆಟ್ ಫೋಟೋ ಟ್ವೀಟ್ ಮಾಡಿ, ಮುಖ್ಯಮಂತ್ರಿಯವರಿಗೆ ಟ್ಯಾಗ್ ಮಾಡಿ, ದೀಪಾವಳಿಗೆ ಹೊನ್ನಾವರ ತಾಲೂಕಿನ ಗುಂಡಬಾಳಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.

    ಈ ಮೂಲಕ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಮಸ್ಯೆ ಕಡೆ ಗಮನ ನೀಡುವಂತೆ ರಾಜೇಶ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಸ್‍ಆರ್ ಎಸ್ ಟ್ರಾವೆಲ್ಸ್ ನ 1,570 ರೂ. ಟಿಕೆಟ್ ಅನ್ನು ಮುಖ್ಯಮಂತ್ರಿ ಅವರ ಬೆಂಗಳೂರು ಕಚೇರಿಯ ವಿಳಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ.

    ರಾಜೇಶ್ ಅವರ ಟ್ವೀಟ್ ಅನ್ನು ಅನೇಕ ನೆಟ್ಟಿಗರು ರಿಟ್ವೀಟ್ ಮಾಡಿ, ಹಬ್ಬ ಹಾಗೂ ರಜಾ ದಿನಗಳಲ್ಲಿ ಖಾಸಗಿ ಬಸ್‍ಗಳು ದರದ ಮೂರ್ನಾಲ್ಕು ಪಟ್ಟು ಹೆಚ್ಚು ವಸೂಲಿ ಮಾಡುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

    ರಾಜೇಶ್ ಅವರು ಕಳೆದ ಎರಡು ವರ್ಷಗಳಿಂದ ಖಾಸಗಿ ಬಸ್‍ನವರು ರಜೆ ದಿನಗಳಲ್ಲಿ ಟಿಕೆಟ್‍ಗೆ ಅಧಿಕ ದರ ವಿಧಿಸುವ ಕುರಿತು ಕರ್ನಾಟಕದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಸಾರಿಗೆ ಆಯುಕ್ತರಿಗೆ, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಅಂತಹ ಸಂಸ್ಥೆಗಳ ವಿರುದ್ಧ ಕ್ರಮಕೈಗೊಂಡು ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.

  • ವೀಕೆಂಡ್‍ನಲ್ಲಿ ಖಾಸಗಿ ಬಸ್ಸುಗಳ ದರ್ಬಾರ್-ನಡು ರಸ್ತೆಯಲ್ಲೇ ಪಾರ್ಕಿಂಗ್

    ವೀಕೆಂಡ್‍ನಲ್ಲಿ ಖಾಸಗಿ ಬಸ್ಸುಗಳ ದರ್ಬಾರ್-ನಡು ರಸ್ತೆಯಲ್ಲೇ ಪಾರ್ಕಿಂಗ್

    ಬೆಂಗಳೂರು: ವೀಕೆಂಡ್ ಬಂತು ಅಂದರೆ ಸಾಕು ರಸ್ತೆಗಳಲ್ಲಿ ಖಾಸಗಿ ಬಸ್ ಗಳ ದರ್ಬಾರ್ ನಡೆಯುತ್ತದೆ. ಹೇಳೋರು ಕೇಳೋರು ಯಾರೂ ಇಲ್ಲದ ರೀತಿಯಲ್ಲಿ ಇವರದ್ದೇ ರಸ್ತೆಗಳಾಗಿರುತ್ತವೆ. ರೋಡ್ ನಲ್ಲಿ ಎಲ್ಲಿ ಬೇಕಾದ್ರೂ ಪಾರ್ಕಿಂಗ್ ಮಾಡಿಕೊಂಡು ಪ್ರಯಾಣಿಕರಿಗಾಗಿ ಕಾಯುತ್ತಾರೆ.

    ಹೌದು. ಹೊಸ ಟ್ರಾಫಿಕ್ ಫೈನ್ ಬಂದ ಬಳಿಕ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಟ್ರಾಫಿಕ್ ಪೊಲೀಸರು ಸಿಕ್ಕ-ಸಿಕ್ಕ ಕಡೆ ತಪಾಸಣೆ ಮಾಡುತ್ತಾ ಒಂದಲ್ಲೊಂದು ರೀತಿಯಲ್ಲಿ ಫೈನ್ ಹಾಕುತ್ತಾ ವಾಹನ ಸವಾರರಲ್ಲಿ ಭಯ ಉಂಟುಮಾಡಿದ್ದಾರೆ. ಆದರೆ ಈ ಪ್ರೈವೇಟ್ ಬಸ್ಸುಗಳ ದರ್ಬಾರ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ.

    ಅದರಲ್ಲೂ ವೀಕೆಂಡ್ ಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ರಸ್ತೆಗಿಳಿಯುವ ಬಸ್ ಗಳಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ರಾತ್ರಿ 8 ಗಂಟೆಯಿಂದ 12 ಗಂಟೆಯವರೆಗೆ ನಗರದ ನವರಂಗ್ ಹಾಗೂ ಗೋವರ್ಧನ್ ಜಂಕ್ಷನ್ ಗಳಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡುವ ಖಾಸಗಿ ಬಸ್ಸುಗಳಿಂದ ಭಾರೀ ಜಾಮ್ ಉಂಟಾಗುತ್ತಿದೆ. ರೋಡ್ ನಮ್ಮದೇ ಅನ್ನೋ ಹಾಗೆ ಪಾರ್ಕ್ ಮಾಡಿಕೊಂಡು ಬೇರೆ ವಾಹನಗಳಿಗೆ ತೊಂದರೆ ಕೊಡುತ್ತಿದ್ದಾರೆ.

    ಇದು ನಿನ್ನೆ ಮೊನ್ನೆಯ ಕಥೆಯಲ್ಲ, ಪ್ರತಿವಾರದ ಕೊನೆಯಲ್ಲಿ ನವರಂಗ್ ಹಾಗೂ ಗೋವರ್ಧನ್ ಜಂಕ್ಷನ್ ನಲ್ಲಿ ಕಂಡುಬರೋ ಸಾಮಾನ್ಯ ದೃಶ್ಯವಾಗಿದೆ. ರಾಂಗ್ ಪಾರ್ಕಿಂಗ್ ಗೆ ನಿನ್ನೆವರೆಗೂ 1,000 ರೂಪಾಯಿ ಫೈನ್ ಇತ್ತು. ಆದರೂ ಯಾವ ಪೊಲೀಸರೂ ಇವರ ಮೇಲೆ ಫೈನ್ ಹಾಕಿಲ್ಲ. ನಿನ್ನೆಯಿಂದ ಫೈನ್ ರೇಟ್ ಕೂಡ ಕಡಿಮೆ ಮಾಡಿದ್ದಾರೆ. ಹೀಗಾಗಿ ರಸ್ತೆ ತುಂಬಾ ಪಾರ್ಕ್ ಮಾಡಿಕೊಂಡು ಬೇರೆ ವಾಹನಗಳಿಗೆ ತೊಂದರೆ ಕೊಡದಂತೆ ಎಚ್ಚರ ವಹಿಸುವ ಕೆಲಸ ಟ್ರಾಫಿಕ್ ಪೊಲೀಸರು ಮಾಡಬೇಕಾಗಿದೆ.

  • ಖಾಸಗಿ ಬಸ್, ಲಾರಿ ನಡುವೆ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು

    ಖಾಸಗಿ ಬಸ್, ಲಾರಿ ನಡುವೆ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು

    – 20 ಪ್ರಯಾಣಿಕರ ಸ್ಥಿತಿ ಗಂಭೀರ

    ಬೆಳಗಾವಿ(ಚಿಕ್ಕೋಡಿ): ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

    ಮಹಾರಾಷ್ಟ್ರದ ಸಾತಾರಾ ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದೆ. ಮುಂಬೈ ನಗರದಿಂದ ಬೆಳಗಾವಿಗೆ ಬರುತ್ತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಬಸ್ ಚಾಲಕನ ನಿರ್ಲಕ್ಷದಿಂದ ಮುಂದೆ ಸಾಗುತ್ತಿದ್ದ ಲಾರಿ ಹಿಂಭಾಗಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ.

    ಮೃತರು ಬೆಳಗಾವಿ ಮೂಲದವರು ಎಂದು ಸಾತಾರಾ ಪೊಲೀಸರು ಮಾಹಿತಿ ನೀಡಿದ್ದು, ಮೃತರ ಹೆಸರು ಹಾಗೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಬಸ್ಸಿನಿಂದ ಹೊರತೆಗೆಯಲಾಗಿದೆ. ಜೊತೆಗೆ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಸರ್ಕಾರಿ, ಖಾಸಗಿ ಬಸ್ ಡಿಕ್ಕಿ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಸರ್ಕಾರಿ, ಖಾಸಗಿ ಬಸ್ ಡಿಕ್ಕಿ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಚಿಕ್ಕಮಗಳೂರು: ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಡ್ಲೂರು ಸಮೀಪದ ಪುಂಡನಹಳ್ಳಿಯಲ್ಲಿ ನಡೆದಿದೆ.

    ಮೃತ ಚಾಲಕನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗದ್ದಿಗೆರೆಯ ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

    ಬೀರೂರು ಸಮೀಪ ಸಾಧಾರಣ ಮಳೆ ಆಗುತ್ತಿರುವುದರಿಂದ ವೇಗವಾಗಿದ್ದ ಖಾಸಗಿ ಬಸ್ ಕಂಟ್ರೋಲ್ ಸಿಗದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಬಸ್ಸಿನ ಪ್ರಯಾಣಿಕರು ಹೇಳಿದ್ದಾರೆ.

    ಬಸ್ಸಿನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬೀರೂರು, ಕಡೂರು ಹಾಗೂ ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

    ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

    ಬೆಂಗಳೂರು: ಚಿಂತಾಮಣಿ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ ವಿಷಯ ತಿಳಿದು ಸಿಎಂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

    ಅಮೆರಿಕ ಪ್ರವಾಸದಲ್ಲಿರುವ ಸಿಎಂ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತ ಚಿಂತಾಮಣಿ ಶಾಸಕ ಹಾಗೂ ವಿಧಾನಸಭಾ ಉಪಾಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ಅವರು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ತಲಾ 25 ಸಾವಿರ ರೂ. ಹಾಗೂ ಗಾಯಾಳುಗಳಿಗೆ 5 ಸಾವಿರ ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ.

    ಮೃತ 12 ಮಂದಿಯಲ್ಲಿ 9 ಮಂದಿ ಮೃತರ ಗುರುತು ಪತ್ತೆಯಾಗಿದ್ದು, ಟಾಟಾ ಮ್ಯಾಜಿಕ್ ಚಾಲಕ ಶಾಬಾಜ್ (19), ಬೈನಹಳ್ಳಿಯ ವೆಂಕಟರಮಣಪ್ಪ (55), ಚಲಮಕೋಟೆ ಗ್ರಾಮದ ಕಿಟ್ಟಣ್ಣ(50), ದಂಡುಪಾಳ್ಯ ನಾರಾಯಣಸ್ವಾಮಿ (63), ಕೋನಪ್ಪಲ್ಲಿಯ ತಿಮ್ಮಯ್ಯ (56), ತಮಿಳುನಾಡು ಮೂಲದವರಾದ ಸಿದ್ದೀಕ್ (40), ರಂಜಿನ (35), ಗುರ್ರವಾರಂಪಲ್ಲಿಯ ಕುಮಾರ್ ಹಾಗೂ ಮುರುಗಮಲ್ಲ ಸುರೇಶ್(40) ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಆಗಿದ್ದೇನು?:
    ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರುಗಮಲ್ಲದಿಂದ ಖಾಸಗಿ ಬಸ್ ಚಿಂತಾಮಣಿ ಕಡೆಗೆ ಆಗಮಿಸುತ್ತಿತ್ತು. ಚಿಂತಾಮಣಿ ಕಡೆಯಿಂದ ಮುರಗಮಲ್ಲದ ಕಡೆಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಮ್ಯಾಜಿಕ್ ಮುರುಗಮಲ್ಲದ ಕಡೆಗೆ ಸಾಗುತ್ತಿತ್ತು. ಈ ವೇಳೆ ಮುರಗಮಲ್ಲ ಸಮೀಪದಲ್ಲಿ ಖಾಸಗಿ ಬಸ್ ಹಾಗೂ ಟಾಟಾ ಮ್ಯಾಜಿಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟಾಟಾ ಮ್ಯಾಜಿಕ್‍ನಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ.

    ಖಾಸಗಿ ಬಸ್‍ನಲ್ಲಿದ್ದ 8 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಖಾಸಗಿ ಬಸ್ ಚಾಲಕನ ಅತಿವೇಗ, ಅಜಾಗೂರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

  • ಆಧಾರ್‌ಕಾರ್ಡ್‌ ಮಾಡಿಸಲು ಹೋಗುವಾಗ ಅಪಘಾತ- ನಾಲ್ವರ ದುರ್ಮರಣ

    ಆಧಾರ್‌ಕಾರ್ಡ್‌ ಮಾಡಿಸಲು ಹೋಗುವಾಗ ಅಪಘಾತ- ನಾಲ್ವರ ದುರ್ಮರಣ

    – ಆಟೋ ಚಕ್ರ ಕಳಚಿ ಬಸ್ ಗೆ ಡಿಕ್ಕಿ
    – 7 ಮಂದಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ.

    ಹಸೀನಾ(30), ಸಾನಿಯಾ(17), ಮಕ್ಕಳಾದ ಶಾಜಿಯಾ(8) ಹಾಗೂ ಜೋಯಾ(5) ಮೃತರು. ಇವರೆಲ್ಲರೂ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ನಿವಾಸಿಗಳಾಗಿದ್ದು, ಆಧಾರ್ ಕಾರ್ಡ್ ಮಾಡಿಸಲು ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ ಚಪ್ಪರಕಲ್ಲು ಬಳಿಯಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನಕ್ಕೆ ಆಟೋ ಮೂಲಕ ತೆರಳಿದ್ದರು.

    ಈ ವೇಳೆ ಮಾರ್ಗ ಮಧ್ಯೆ ಗುಂಡಿ ತಪ್ಪಿಸಲು ಹೋದಾಗ ಆಟೋ ಚಕ್ರವೊಂದು ಕಳಚಿದೆ. ಪರಿಣಾಮ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆಟೋದಲ್ಲಿ ಒಟ್ಟು 11 ಮಂದಿ ಇದ್ದು ನಾಲ್ವರು ಮೃತಪಟ್ಟರೆ, ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ದೇವನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ನಾಲ್ವರನ್ನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಅಪಘಾತದಿಂದಾಗಿ ಆಟೋ ಸಂಪೂರ್ಣ ಜಖಂಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ವಿಶ್ವನಾಥಪುರ ಪಿಎಸ್ ಐ ಮಂಜುನಾಥ್ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿ ಅಪಘಾತಕ್ಕೀಡಾದ ಆಟೋವನ್ನು ಸ್ಥಳಾಂತರ ಮಾಡಿಸಿದ್ದಾರೆ.

    ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯ್ತಿ ತಮ್ಮ ಊರುಗಳಲ್ಲೇ ಮಾಡಿದರೆ ಅವರು ಆಧಾರ್ ಕಾರ್ಡ್ ಮಾಡಿಸಲು ಡಿಸಿ ಕಚೇರಿಯತ್ತ ಬರುತ್ತಿರಲಿಲ್ಲ. ಈ ಅಪಘಾತ ಆಗುವ ಸಂಭವವೂ ಇರುತ್ತಿರಲಿಲ್ಲ ಎಂದು ಮೃತರು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೂರ್ನಾಲ್ಕು ಬಾರಿ ಬಸ್ ಪಲ್ಟಿ ಹೊಡೆದ್ರೂ 32 ಜನ ಪ್ರಯಾಣಿಕರು ಪಾರು

    ಮೂರ್ನಾಲ್ಕು ಬಾರಿ ಬಸ್ ಪಲ್ಟಿ ಹೊಡೆದ್ರೂ 32 ಜನ ಪ್ರಯಾಣಿಕರು ಪಾರು

    – 25ಕ್ಕೂ ಹೆಚ್ಚು ಜನರಿಗೆ ಗಾಯ

    ಬಳ್ಳಾರಿ: ಚಾಲಕ ನಿಯಂತ್ರಣ ತಪ್ಪಿ ಖಾಸಗಿ ಬಸ್‍ವೊಂದು ಪಲ್ಟಿಯಾದ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಈ ಘಟನೆಯಲ್ಲಿ 25 ಜನ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿ ವಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಎಸ್‍ಆರ್‌ಎಂಎಸ್ ಖಾಸಗಿ ಸಂಸ್ಥೆಗೆ ಸೇರಿದ್ದ ಬಸ್ 32 ಜನ ಪ್ರಯಾಣಿಕರನ್ನು ಹೊತ್ತು ಬಳ್ಳಾರಿಯಿಂದ ದಾವಣಗೆರೆಗೆ ಹೋಗುತ್ತಿತ್ತು. ಬಸ್‍ನಲ್ಲಿ ಹೆಚ್ಚಾಗಿ ದಾವಣಗೆರೆ, ಚನ್ನಗಿರಿ ಹಾಗೂ ಕೂಡ್ಲಿಗಿ ತಾಲೂಕಿನ ಜನರಿದ್ದರು. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಸಮೀಪ ರಸ್ತೆ ಇಕ್ಕಟ್ಟಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, 25 ಜನರು ಗಾಯಗೊಂಡಿದ್ದಾರೆ.

    ಬಸ್ ಅಪಘಾತವಾಗಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಗುಡೇಕೋಟೆ ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಡ್ಯೂಟಿ ವೇಳೆ ಬಸ್ ನಿಲ್ಲಿಸಿ ಓಡಿ ಹೋಗಿ ಮತದಾನಗೈದ ಚಾಲಕ – ವಿಡಿಯೋ ವೈರಲ್

    ಡ್ಯೂಟಿ ವೇಳೆ ಬಸ್ ನಿಲ್ಲಿಸಿ ಓಡಿ ಹೋಗಿ ಮತದಾನಗೈದ ಚಾಲಕ – ವಿಡಿಯೋ ವೈರಲ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಆಗಿರುವುದಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಲ್ಲಿನ ಜನತೆಗೆ ಮತದಾನದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ಸಾರಿ ಹೇಳುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೌದು. ಜಯರಾಜ್ ಎಂಬ ಖಾಸಗಿ ಬಸ್ಸಿನಲ್ಲಿ  ಪ್ರಯಾಣಿಕರನ್ನು ತುಂಬಿಕೊಂಡು ಜಯರಾಜ್ ಶೆಟ್ಟಿ  ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ತಮ್ಮ ಬೂತ್ ಹತ್ತಿರ ಬಂದಾಗ ಬಸ್ ನಿಲ್ಲಿಸಿ, ಓಡಿಕೊಂಡು ಹೋಗಿ ಮತ ಹಾಕಿ ಬಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    ವಿಡಿಯೋದಲ್ಲೇನಿದೆ?:
    ಮಂಗಳೂರು – ಶಿವಮೊಗ್ಗ ನಡುವೆ ಸಂಚರಿಸುವ ಖಾಸಗಿ ಬಸ್ ರಸ್ತೆ ಬದಿಯಲ್ಲಿರುವ ಶಾಲೆಯೊಂದರ ಮುಂದೆ ನಿಲ್ಲುತ್ತದೆ. ಕೂಡಲೇ ಚಾಲಕ ಬಸ್ಸಿನಿಂದ ಇಳಿದು ಮತಗಟ್ಟೆಯ ಬಳಿ ವೇಗವಾಗಿ ಓಡುತ್ತಾರೆ. ಅಲ್ಲದೆ ತನ್ನ ಹಕ್ಕು ಚಲಾಯಿಸಿ ಅಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ. ಇದನ್ನೂ ಓದಿ: ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ಆ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಕೂಡ ಇತ್ತು. ಹೀಗಾಗಿ ಚಾಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ತನ್ನ ಮತವನ್ನು ಸದೃಢ ಭಾರತದ ನಿರ್ಮಾಣಕ್ಕೆ ಚಲಾಯಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಫೆಸ್‍ಬುಕ್ ಹಾಗೂ ವಾಟ್ಸಾಪ್ ಮೂಲಕ ಹರಿಯಬಿಟ್ಟಿದ್ದಾರೆ.

    ಒಟ್ಟಿನಲ್ಲಿ ಕರ್ತವ್ಯದ ಮಧ್ಯೆಯೇ ಬಸ್ ನಿಲ್ಲಿಸಿ, ಮತದಾನದ ಹಕ್ಕು ಚಲಾಯಿಸಿದ್ದು ಇದೀಗ ಪ್ರಶಂಸೆಗೆ ಕಾರಣವಾಗಿದೆ. ಕೆಲಸಕ್ಕೆ ರಜೆ ಕೊಟ್ಟರೂ, ಮತ ಹಾಕದೇ ಮಜಾ ಮಾಡುವ ಮಂದಿಯ ನಡುವೆ ಈ ಬಸ್ ಚಾಲಕನ ಕರ್ತವ್ಯ ನಿಷ್ಠೆ ಗಮನ ಸೆಳೆದಿದೆ.

  • ರಸ್ತೆ ತಿರುವಿನಲ್ಲಿ ಅತಿ ವೇಗದ ಚಾಲನೆ- ಖಾಸಗಿ ಬಸ್‍ಗೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರ ದುರ್ಮರಣ

    ರಸ್ತೆ ತಿರುವಿನಲ್ಲಿ ಅತಿ ವೇಗದ ಚಾಲನೆ- ಖಾಸಗಿ ಬಸ್‍ಗೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರ ದುರ್ಮರಣ

    – ಇನ್ನೋರ್ವ ಬೈಕ್ ಸವಾರ ಗಂಭೀರ

    ಚಿಕ್ಕಬಳ್ಳಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಧುಗಿರಿ ಮಾರ್ಗದ ಹೊಸಕೋಟೆ ಕ್ರಾಸ್ ಬಳಿ ನಡೆದಿದೆ.

    ಮೃತರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಗೊಂಡಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 24 ವರ್ಷದ ಕೆಪಿಟಿಸಿಎಲ್ ಲೈನ್ ಮೆನ್ ಸುನೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಬೈಕ್ ಸವಾರ ವಿನಯ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಬೈಕ್ ನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದು ಮತ್ತೋರ್ವ ಬೈಕ್ ಸವಾರ ವಿನೋದ್ ಸ್ಥಿತಿಯೂ ಚಿಂತಾಜನಕವಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ತಿರುವಿನಿಲ್ಲಿ ಅತಿ ವೇಗದಿಂದ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

    ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಯುವಕರು ಬೈಕ್ ನಲ್ಲಿ ತಮ್ಮ ಸ್ನೇಹಿತನ ಮದುವೆಗೆ ಎಂದು ಗೌರಿಬಿದನೂರು ಕಡೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

  • ಬೆಂಗ್ಳೂರು-ಉಡುಪಿ ಬಸ್ ಟಿಕೆಟ್ ಮೂರುಪಟ್ಟು ಹೆಚ್ಚಳ- ಖಾಸಗಿ ಬಸ್ಸಿಗೆ ಕಡಿವಾಣ ಹಾಕೋರು ಯಾರು?

    ಬೆಂಗ್ಳೂರು-ಉಡುಪಿ ಬಸ್ ಟಿಕೆಟ್ ಮೂರುಪಟ್ಟು ಹೆಚ್ಚಳ- ಖಾಸಗಿ ಬಸ್ಸಿಗೆ ಕಡಿವಾಣ ಹಾಕೋರು ಯಾರು?

    ಉಡುಪಿ: ಲೋಕಸಭಾ ಮಹಾಸಮರವನ್ನು ಹಬ್ಬದಂತೆ ಆಚರಿಸಿ ಎಂದು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಇದನ್ನು ಕೇಳಿಸಿಕೊಂಡ ಖಾಸಗಿ ಬಸ್ ಮಾಲೀಕರಿಗೆ ಚುನಾವಣೆ ಎಂದರೆ ಹಬ್ಬ ಅಂತ ಏನನ್ನಿಸ್ತೋ ಏನೋ. ಪ್ರತಿ ಬಾರಿ ಹಬ್ಬಕ್ಕೆ ಬಸ್ ದರವನ್ನು ಆಕಾಶಕ್ಕೆ ಮುಟ್ಟಿಸೋ ಖಾಸಗಿ ಬಸ್ ಮಾಲೀಕರು ಇದೀಗ ಚುನಾವಣೆ ದಿನವೂ ಮೂರು ಪಟ್ಟು ಟಿಕೆಟ್ ಬೆಲೆ ಏರಿಸಿದ್ದಾರೆ.

    ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಏಪ್ರಿಲ್ 18ಕ್ಕೆ ಕರಾವಳಿ ಜಿಲ್ಲೆ ಮಂಗಳೂರು, ಉಡುಪಿ ಕಡೆ ಬೆಂಗಳೂರಿಂದ ಹೊರಡುವ ಬಸ್ಸುಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಕುಂದಾಪುರ, ಉಡುಪಿ ಭಾಗಕ್ಕೆ ಬರುವ ಖಾಸಗಿ ಬಸ್ಸುಗಳು ಚುನಾವಣೆಗೆ ಒಂದು ತಿಂಗಳು ಮುನ್ನವೇ ಬಸ್ ಟಿಕೆಟ್ ದರವನ್ನು ಸುಮಾರು ಒಂದೂವರೆ ಸಾವಿರ ರೂ.ಗೆ ಏರಿಸಿದ್ದಾರೆ.

    ಉದ್ಯೋಗದ ನಿಮಿತ್ತ ರಾಜಧಾನಿಯಲ್ಲಿರುವ ಯುವಕ-ಯುವತಿಯರಿಗೆ ಬೆಲೆ ಏರಿಸಿ ಬಿಸಿ ತಟ್ಟಿದೆ. ನೂರು ಶೇಕಡಾ ಮತದಾನ ಬಯಸುವ ಚುನಾವಣಾ ಆಯೋಗ ಈ ಬಗ್ಗೆ ಏನು ನಿಲುವು ತಾಳುತ್ತದೆ ಎಂಬುದು ಈಗ ಪ್ರಶ್ನೆಯಾಗಿದೆ. ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಖಾಸಗಿಯವರ ಈ ನೀತಿಗೆ ಕಡಿವಾಣ ಹಾಕುತ್ತಾ ಎಂದು ಕಾದು ನೋಡಬೇಕು.

    ಸದ್ಯ 400, 450, 500 ರೂ. ಇರುವ ಟಿಕೆಟ್ ದರ ಚುನಾವಣೆ ದಿನ 1400, 1500, 1600 ಆಗಿದೆ. ಆಪ್ ನಲ್ಲಿ ಮುಂಗಡ ಬುಕ್ಕಿಂಗ್ ಬುಕ್ ಮಾಡಿ ಬಂದ್ರೆ ಬಳಿಕ ಚುನಾವಣೆ ಮುಗಿಸಿ ವಾಪಾಸ್ ಹೋಗುವ ದಿನದ ಟಿಕೆಟ್ ದರ 2,000 ರೂ. ಆದರೂ ಅಚ್ಚರಿಯಿಲ್ಲ.

    ಟಿಕೆಟ್ ಬುಕ್ ಮಾಡಲು ಹೊರಟ ಬ್ರಹ್ಮಾವರದ ಶರತ್ ಎಂಬವರಿಗೆ ಶಾಕ್ ಆಗಿದೆ. ವೋಟ್ ಹಾಕುವ ಮನಸ್ಸಾಗಿತ್ತು. ಆದ್ರೆ ಈಗ ವೋಟು ಬೇಡ ಏನೂ ಬೇಡ. 1,600 ಕೊಟ್ಟು ವೋಟು ಹಾಕುವ ಅವಶ್ಯಕತೆ ಏನೂ ಇಲ್ಲ ಎಂದು ಗರಂ ಆಗಿದ್ದಾರೆ. ಹಬ್ಬ ಹರಿದಿನಕ್ಕೆ ಊರಿಗೆ ಬರುವಾಗಲೂ ಬಸ್ಸಿನವರದ್ದು ಇದೇ ರೀತಿ ಇತ್ತು. ಈಗ ಚುನಾವಣೆ ದಿನಕ್ಕೂ ರೇಟ್ ಏರಿಸ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv