Tag: ಖಾಸಗಿ ಬಸ್

  • ಶೇ.15 ರಷ್ಟು ದರ ಹೆಚ್ಚಿಸಿ ಖಾಸಗಿ ಬಸ್ ಓಡಿಸಲು ಅವಕಾಶ: ಲಕ್ಷ್ಮಣ ಸವದಿ

    ಶೇ.15 ರಷ್ಟು ದರ ಹೆಚ್ಚಿಸಿ ಖಾಸಗಿ ಬಸ್ ಓಡಿಸಲು ಅವಕಾಶ: ಲಕ್ಷ್ಮಣ ಸವದಿ

    ರಾಯಚೂರು: ಇನ್ನೆರಡು ದಿನಗಳಲ್ಲಿ ಖಾಸಗಿ ವಾಹನಗಳ ಸಂಚಾರ ಆರಂಭವಾಗಲಿದೆ ಅಂತ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ರಾಯಚೂರಿನಲ್ಲಿ ಕೋವಿಡ್ 19 ಕುರಿತ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು ಖಾಸಗಿ ಬಸ್ ಓಡಾಟ ಕಡಿಮೆಯಿರುವುದರಿಂದ ರಸ್ತೆ ಸಾರಿಗೆ ಸಂಸ್ಥೆಗೂ ಹಾನಿಯಾಗುತ್ತಿದೆ. ಹಾನಿಯಾದರೂ ರಾಜ್ಯ ಸರ್ಕಾರ ಸೇವಾ ಭಾವನೆಯಿಂದ ಬಸ್ ಓಡಿಸುತ್ತಿದೆ ಎಂದರು.

    ಖಾಸಗಿಯವರು ಶೇ.15 ರಷ್ಟು ಹೆಚ್ಚು ಪ್ರಯಾಣ ದರ ಮಾಡಿ ಬಸ್ ಓಡಿಸಲು ಪರವಾನಿಗೆ ನೀಡಲಾಗಿದೆ. ಶೇ.50 ರಷ್ಟು ಹೆಚ್ಚು ಮಾಡಲು ಕೇಳಿಕೊಂಡಿದ್ದರು. ಆದರೆ ಶೇ.15 ಕ್ಕೆ ಮಾತ್ರ ಅವಕಾಶ ನೀಡಿದ್ದೇವೆ. ಖಾಸಗಿಯವರ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಖಾಸಗಿ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ಸಾರಿಗೆ ಬಸ್ ಗಳಿಗೆ ಅನ್ವಯವಾಗಿರುವ ಎಲ್ಲಾ ನಿಯಮಗಳನ್ನ ಅವರು ಪಾಲಿಸಬೇಕು ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ನಮಗೆ ಸಮಸ್ಯೆಯಾಗುತ್ತಿದೆ. ಮಹಾರಾಷ್ಟ್ರದಲ್ಲೂ ಮೂರು ಜಿಲ್ಲೆಯಲ್ಲಿ ಕೊರೊನಾ ಇಲ್ಲಾ ಹಾಗಾಗಿ ಭಯಬೇಡ. ಅಲ್ಲಿನ ಸೋಂಕಿತ ಜಿಲ್ಲೆಗಳಿಗೆ ಧಾರಾವಾಡ, ಬೆಳಗಾಂ, ವಿಜಯಪುರದಿಂದ ಹೆಚ್ಚು ಜನ ಹೋಗಿದ್ದಾರೆ. 16 ರಿಂದ 18 ಸಾವಿರ ಜನರನ್ನ ರಾಜ್ಯಕ್ಕೆ ಕರೆತಂದಿದ್ದೇವೆ. ಗುಜರಾತ್, ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕೊರೊನಾ ಹೆಚ್ಚು ಇದೆ. ಅಲ್ಲಿಂದ ಬಂದ ನಮ್ಮ ಜನರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದರು.

    ರಾಜ್ಯಸರ್ಕಾರ ಎಲ್ಲರಿಗೂ ಸಾರಿಗೆ ಸೌಲಭ್ಯ ಕೊಡಲು ತೀರ್ಮಾನಿಸಿದೆ. ನಮ್ಮ ರಾಜ್ಯದವರನ್ನ ಹೊರಗಡೆಯಿಂದ ಕರೆತರುತ್ತಿದ್ದೇವೆ. ಇಲ್ಲಿದ್ದವರನ್ನ ಕಳುಹಿಸುತ್ತಿದ್ದೇವೆ. ಪ್ರವಾಸಿ ಕಾರ್ಮಿಕರಿಂದ ರಾಯಚೂರಿಗೆ ಸಮಸ್ಯೆ ಬಂದಿದೆ. ಇನ್ನೂ ಎಷ್ಟು ದಿನ ಕೊರೊನಾ ಮುಂದೆ ಹೋಗುತ್ತದೆ ಅನ್ನೋ ಅಂದಾಜಿಲ್ಲ. ಈಗಲೇ 10 ದಿನದಲ್ಲಿ ಮುಗಿಯುತ್ತೇ ಅನ್ನೋ ಭ್ರಮೆ ಬೇಡ. ಸಾಮಾಜಿಕ ಅಂತರವನ್ನ ಸಾರ್ವಜನಿಕರು ಕಾಪಾಡಬೇಕು. ಬೈಕ್ ನಲ್ಲಿ ಒಬ್ಬರೇ ಹೋಗುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

  • ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದ್ರೆ ಉಡುಪಿಯಲ್ಲಿ ಖಾಸಗಿ ಬಸ್ ಓಡಾಟ ಶುರು

    ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದ್ರೆ ಉಡುಪಿಯಲ್ಲಿ ಖಾಸಗಿ ಬಸ್ ಓಡಾಟ ಶುರು

    _ ಇಂದು 19 ಸರ್ಕಾರಿ ಬಸ್ ಸಂಚಾರ

    ಉಡುಪಿ: ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದರೂ ಉಡುಪಿಯಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಬಸ್ ಓಡಿಸಿ ಎಂದು ಸರ್ಕಾರ ಆದೇಶಿಸಿದರೂ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ.

    ಕಳೆದ 55 ದಿನಗಳಿಂದ ಉಡುಪಿಯ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಗಳು ಸಂಪೂರ್ಣವಾಗಿ ಸ್ತಬ್ಧ ಆಗಿದೆ. ವಾರದ ಹಿಂದೆ ರೂಟ್ ಸರ್ವೆ ಮಾಡಿಸಿರುವ ಉಡುಪಿ ಡಿಸಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳನ್ನು ಓಡಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಸಾರ್ವಜನಿಕರಿಂದ ಬೇಡಿಕೆಗಳು ಬಾರದ ಹಿನ್ನೆಲೆಯಲ್ಲಿ ಬೆರಳೆಣಿಕೆಯ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಉಡುಪಿಯಲ್ಲಿ ಓಡಾಟ ನಡೆಸಿದ್ದವು.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್‍ಡೌನ್ ಸಡಿಲಿಕೆ ಮಾಡಿ ಅಂತರ್ ಜಿಲ್ಲೆಗಳಿಗೆ ಬಸ್ ಓಡಾಡಬಹುದು ಎಂದು ಆದೇಶಿಸಿದರು. ಆದರೂ ಉಡುಪಿಯಲ್ಲಿ ಭಾರತಿ ಕಂಪೆನಿಯ ಖಾಸಗಿ ಬಸ್ಸು ಮಾತ್ರ ಜನ ಸೇವೆಯಲ್ಲಿ ತೊಡಗಿತ್ತು. ಉಡುಪಿ ಕುಂದಾಪುರ ರೂಟ್‍ನಲ್ಲಿ ಮಾತ್ರ ಈ ಬಸ್ಸುಗಳು ಓಡಾಡಿದವು. ಕುಂದಾಪುರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟ ನಡೆಸಿದೆ. ಉಡುಪಿ-ಮಣಿಪಾಲದ ನಡುವೆ ನರ್ಮ್ ಬಸ್ ಗಂಟೆಗೆ ಒಂದು ಟ್ರಿಪ್ ಮಾಡಿದೆ.

    ಬಸ್ಸನ್ನೆಲ್ಲಾ ಮಾಲೀಕರು ಆರ್‌ಟಿಒಗೆ ಒಪ್ಪಿಸಿವೆ. ಈಗ ಬಸ್ ಓಡಿಸಿದರೆ ಪ್ರತಿ ಬಸ್ಸಿಗೆ 50 ಸಾವಿರ ರೂಪಾಯಿ ಟ್ಯಾಕ್ಸ್ ಪಾವತಿಸುವ ಸ್ಥಿತಿಯಲ್ಲಿ ಮಾಲೀಕರಿಲ್ಲ. ಹಾಗಾಗಿ ಬಸ್‍ಗಳು ರಸ್ತೆಗೆ ಇಳಿದಿಲ್ಲ. ಒಂದು ತಿಂಗಳಿಗೆ ಒಂದು ಬಸ್ಸಿಗೆ 18 ಸಾವಿರ ರೂಪಾಯಿ ಟ್ಯಾಕ್ಸ್ ಆಗುತ್ತಿದೆ. ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದರೆ ಬಸ್ಸನ್ನು ಹೊರಡಿಸಬಹುದು ಎಂದು ಖಾಸಗಿ ಬಸ್ ಮಾಲೀಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    19 ಸರ್ಕಾರಿ ಬಸ್ ಸಂಚಾರ:
    ಈ ನಡುವೆ ಕೆಎಸ್‌ಆರ್‌ಟಿಸಿ ಬೆಂಗಳೂರು, ಮೈಸೂರು ಹುಬ್ಬಳ್ಳಿಗೆ ಟ್ರಿಪ್ ಶುರು ಮಾಡಿದೆ. ಕುಂದಾಪುರ ಡಿಪೋದಿಂದ 9 ಬಸ್ಸುಗಳು ಇಂದು ಓಡಾಟ ಮಾಡಿದೆ. ಉಡುಪಿಯಲ್ಲಿ 10 ಬಸ್ ಹೊರ ಜಿಲ್ಲೆಗೆ ಹೊರಟಿವೆ. ಸಂಜೆ ಏಳು ಗಂಟೆಯ ಒಳಗೆ ಪ್ರಯಾಣಿಕರು ಗುರಿ ತಲುಪುವ ಉದ್ದೇಶವನ್ನು ಕೆಎಸ್‌ಆರ್‌ಟಿಸಿ ಇಟ್ಟುಕೊಂಡಿರುವುದರಿಂದ ಮಧ್ಯಾಹ್ನದ ನಂತರ ದೂರದ ಜಿಲ್ಲೆಗಳಿಗೆ ಬಸ್ ಹೊರಟಿಲ್ಲ.

    ಎರಡು ತಿಂಗಳು ಸಂಬಂಧಿಕರ ಮನೆಯಲ್ಲಿ ಲಾಕ್ ಆಗಿದ್ದವರು, ಲಾಕ್‍ಡೌನ್ ಸಂದರ್ಭ ಮನೆಗೆ ಬಂದವರು ವಾಹನಗಳು ಇಲ್ಲದೇ ಸಿಕ್ಕಿ ಹಾಕಿಕೊಂಡವರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು. ಶೇ. 90ರಷ್ಟು ಜನ ಖಾಸಗಿ ಬಸ್ಸುಗಳನ್ನೇ ಉಡುಪಿಯಲ್ಲಿ ನೆಚ್ಚಿಕೊಂಡಿದ್ದಾರೆ. ಸರ್ಕಾರ ಟ್ಯಾಕ್ಸ್ ಮನ್ನಾ ಮಾಡಿದರೆ ಈ ವಾರದಲ್ಲಿ ಉಡುಪಿಯಲ್ಲಿ ಖಾಸಗಿ ಬಸ್ಸುಗಳನ್ನು ಹೊರಡಿಸುವ ಸಾಧ್ಯತೆ ಇದೆ.

  • ಕೊಡಗಿನಲ್ಲಿ ಸಂಚಾರಕ್ಕೆ ಅವಕಾಶ ನೀಡಿದರೂ ರಸ್ತೆಗಿಳಿಯದ ಖಾಸಗಿ ಬಸ್‍ಗಳು

    ಕೊಡಗಿನಲ್ಲಿ ಸಂಚಾರಕ್ಕೆ ಅವಕಾಶ ನೀಡಿದರೂ ರಸ್ತೆಗಿಳಿಯದ ಖಾಸಗಿ ಬಸ್‍ಗಳು

    ಮಡಿಕೇರಿ: ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಚಾರವನ್ನೂ ಬಂದ್ ಮಾಡಲಾಗಿತ್ತು. ಆದರೆ ಕೊಡಗು ಜಿಲ್ಲೆ ಗ್ರೀನ್ ಝೋನ್ ಆಗಿರುವುದರಿಂದ ಸರ್ಕಾರದ ನಿರ್ದೇಶನದಂತೆ 43 ದಿನಗಳ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಬೆರಳೆಣಿಕೆಯಷ್ಟು ಕೆಎಸ್‍ಆರ್ ಟಿಸಿ ಬಸ್ ಗಳು ಮಾತ್ರ ರಸ್ತೆಗಿಳಿದಿದ್ದು, ಖಾಸಗಿ ಬಸ್ ಸಂಚಾರ ಇರಲಿಲ್ಲ.

    ಸಾರ್ವಜನಿಕರ ಸಾರಿಗೆ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದ್ದರೂ, ಕೊಡಗಿನ ಪ್ರತಿ ಹಳ್ಳಿಗೆ ಸಂಪರ್ಕ ಸೇತುವೆಯಾಗಿರುವ ಖಾಸಗಿ ಬಸ್‍ಗಳು ರಸ್ತೆಗೆ ಇಳಿದಿಲ್ಲ. ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ನಿಯಮ ರೂಪಿಸಿರುವ ಜಿಲ್ಲಾಡಳಿತ ಬಸ್‍ಗಳ ಒಟ್ಟು ಸೀಟುಗಳ ಪೈಕಿ ಶೇ.50 ರಷ್ಟರಲ್ಲಿ ಮಾತ್ರ ಪ್ರಯಾಣಿಕರನ್ನು ಸಾಗಿಸುವಂತೆ ಸೂಚಿಸಿದೆ.

    ಈ ನಿಯಮ ಪಾಲನೆ ಮಾಡಲು ಶೇ.50ರಷ್ಟು ಪ್ರಯಾಣಿಕರಿಗಾಗಿ ಬಸ್‍ಗಳನ್ನು ಓಡಿಸಿದರೆ ನಷ್ಟ ಉಂಟಾಗಲಿದೆ. ಅಲ್ಲದೆ ಸೋಂಕಿನ ಭೀತಿಯೂ ಕಾಡುತ್ತಿರುತ್ತದೆ. ಕೊಡಗಿನಲ್ಲಿ ಡೈರೆಕ್ಟ್ ಸೀಟುಗಳು ಸಿಗುವುದು ಕಷ್ಟ, ಕೇವಲ ಕಟ್ ಸೀಟುಗಳು ಮಾತ್ರವೇ ದೊರೆಯುವುದು. ಹೀಗಾಗಿ ನಷ್ಟ ಉಂಟಾಗುವುದರಿಂದ ಮೇ 18 ವರೆಗೂ ಖಾಸಗೀ ಬಸ್‍ಗಳನ್ನು ಓಡಿಸುವುದಿಲ್ಲ ಎಂದು ಖಾಸಗೀ ಬಸ್ ಮಾಲೀಕರ ಸಂಘ ನಿರ್ಧರಿಸಿದೆ. ಅಲ್ಲದೆ ಖಾಸಗಿ ಬಸ್ ಮಾಲೀಕರಿಗೆ ಸರ್ಕಾರ ಸಹಾಯ ಘೋಷಣೆ ಮಾಡಬೇಕು. ಮೀನುಗಾರರ ಸಂಘ, ಹೂವು ಬೆಳೆಗಾರರಿಗೆ ಸಹಾಯ ಘೋಷಿಸಿರುವಂತೆ ಖಾಸಗಿ ಬಸ್ ಮಾಲೀಕರಿಗೂ ಘೋಷಿಸುವಂತೆ ಒತ್ತಾಯಿಸಿದ್ದಾರೆ.

  • ಬೈಕ್‍-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಬಸ್ ಹರಿದು ಅಪ್ಪ-ಮಗ ಸಾವು

    ಬೈಕ್‍-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: ಬಸ್ ಹರಿದು ಅಪ್ಪ-ಮಗ ಸಾವು

    ತುಮಕೂರು: ಖಾಸಗಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್‍ನಲ್ಲಿದ್ದ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಸಮೀಪದ ಕಂಬದಹಳ್ಳಿ ಗೇಟ್ ಬಳಿ ನಡೆದಿದೆ.

    ಬುಕ್ಕಾಪಟ್ಟಣ ಮೂಲದವರಾದ ತಿಮ್ಮಣ್ಣ (60) ಹಾಗೂ ಬಸವರಾಜ್(32) ಮೃತ ದುರ್ದೈವಿಗಳು. ಬುಕ್ಕಾಪಟ್ಟಣದ ಕಡೆಯಿಂದ ಶಿರಾ ಕಡೆಗೆ ಖಾಸಗಿ ಬಸ್ ಹೋಗುತಿತ್ತು. ಇತ್ತ ಬಸವರಾಜ್ ಅವರು ತಂದೆಯ ಜೊತೆಗೆ ಶಿರಾ ಕಡೆಯಿಂದ ಬುಕ್ಕಾಪಟ್ಟಣಕ್ಕೆ ಬರುತ್ತಿದ್ದರು. ಈ ವೇಳೆ ಕಂಬದಹಳ್ಳಿ ಬಳಿ ಇರುವ ತಿರುವಿನ ಸಮೀಪದಲ್ಲಿ ನಿಯಂತ್ರಣ ತಪ್ಪಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

    ಬಸ್ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡಿದ್ದು ಹಾಗೂ ತಿರುವು ಅಪಘಾಕ್ಕೆ ಕಾರಣ ಎನ್ನಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಹಾಗೂ ಖಾಸಗಿ ಬಸ್‍ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬಸ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ಮೂರು ದಿಕ್ಕಿಗೆ ಚೆಲ್ಲಾಪಿಲ್ಲಿಯಾದ್ರು

    ಬಸ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ಮೂರು ದಿಕ್ಕಿಗೆ ಚೆಲ್ಲಾಪಿಲ್ಲಿಯಾದ್ರು

    ಚಿಕ್ಕಬಳ್ಳಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಹಿಂದೂಪುರ ಪಟ್ಟಣದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಆಂಧ್ರದ ಪೆನುಕೊಂಡಗೆ ತೆರಳುತ್ತಿದ್ದ ಭಾರತಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಅಂದಹಾಗೆ ಪೆಟ್ರೋಲ್ ಬಂಕ್‍ನಿಂದ ಏಕಾಏಕಿ ರಸ್ತೆಗೆ ಬೈಕ್ ಸವಾರ ಬಂದಿದ್ದು, ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬಸ್ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದಲ್ಲಿ ಬೈಕಿನಲ್ಲಿ ಇದ್ದ ಮೂವರಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಹಿಂದೂಪುರ ಆಸ್ಪತ್ರೆ ಸೇರಿದ್ದಾರೆ.

    ಅಪಘಾತವಾದ ಬೈಕ್ ಕರ್ನಾಟಕ ರಾಜ್ಯದ ಮಧುಗಿರಿ ಆರ್.ಟಿ.ಒ ರಿಜಿಸ್ಟ್ರೇಷನ್ ನ ಕೆಎ 64 ಎಸ್ 3154 ನಂಬರಿನ ಹೋಂಡಾ ಶೈನ್ ಬೈಕ್ ಆಗಿದ್ದು, ಆಂಧ್ರ ಕರ್ನಾಟಕ ಗಡಿಭಾಗದ ಮೂಲದವರು ಎಂದು ತಿಳಿದುಬಂದಿದೆ. ಅನಂತಪುರ ಜಿಲ್ಲೆಯ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಜಾನೆ 4 ಗಂಟೆಗೆ ಮದ್ಯ ಸೇವಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

    ಮುಂಜಾನೆ 4 ಗಂಟೆಗೆ ಮದ್ಯ ಸೇವಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಸ್‍ಆರ್‍ಎಸ್ ಟ್ರಾವೆಲ್ಸ್ ನ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಬಳಿ ನಡೆದಿದೆ.

    ಶ್ರೀನಿವಾಸ್ ಅಲಿಯಾಸ್ ಸಿಬಿಐ ಮೃತಪಟ್ಟ ಪಾದಚಾರಿ. ಮೃತ ಶ್ರೀನಿವಾಸ್ ಮದ್ಯ ವ್ಯಸನಿಯಾಗಿದ್ದು, ಗ್ರಾಮದ ಹೊರವಲಯದಲ್ಲಿ ರಾತ್ರಿಯಿಡೀ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗೆ ಮುಂಜಾನೆ 4 ಗಂಟೆಗೆ ಹೋಗಿದ್ದನು. ಅಕ್ರಮ ಮದ್ಯ ಮಾರಾಟದ ಅಂಗಡಿಗೆ ಹೋಗಿ ಮದ್ಯ ಸೇವಿಸಿ ಬರುತ್ತಿದ್ದ ಶ್ರೀನಿವಾಸ್‍ಗೆ ಬಸ್ ಡಿಕ್ಕಿ ಹೊಡೆದಿದ್ದು, ತದನಂತರ ವಿದ್ಯುತ್ ಕಂಬಕ್ಕೂ ಸಹ ಡಿಕ್ಕಿ ಹೊಡೆದಿದೆ.

    ಅಪಘಾತ ನಂತರ ಚಾಲಕ ಬಸ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ಬಳಿ ಬಸ್ ನಿಲ್ಲಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಹಲವರು ಬಲಿಯಾಗುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಪಟ್ಟವರು ಬ್ರೇಕ್ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    ರಾಮನಗರ: ಪ್ರವಾಸಿಗರನ್ನು ಕರೆತಂದಿದ್ದ ಬಸ್ಸೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿಗೆ ಆಹುತಿಯಾಗಿರುವ ಘಟನೆ ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟ್ ಬಳಿ ಖಾಸಗಿ ಒಡೆತನದ ಎಸ್.ಆರ್.ಎಸ್ ಮಾಲೀಕತ್ವದ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.

    ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಬಳಿಕ ಬಸ್ಸಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿದ್ದು ಕ್ಷಣಾರ್ಧಲ್ಲಿಯೆ ಬಸ್ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳದ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟಿಗೆ ಪ್ರವಾಸಿಗರು ಬಂದಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿಗೆ ಬೆಂಕಿ ಆವರಿಸಿ ಹೊತ್ತಿ ಉರಿಯುತ್ತಿರುವ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಾರಿಗೆ ಖಾಸಗಿ ಬಸ್ ಡಿಕ್ಕಿ – 3 ಸಾವು, 17 ಮಂದಿಗೆ ಗಾಯ

    ಲಾರಿಗೆ ಖಾಸಗಿ ಬಸ್ ಡಿಕ್ಕಿ – 3 ಸಾವು, 17 ಮಂದಿಗೆ ಗಾಯ

    – ರಸ್ತೆಯಲ್ಲಿ ಬಿದ್ದಿರುವ ಸೋಪಿಗೆ ಮುಗಿಬಿದ್ದ ಜನ

    ತುಮಕೂರು: ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರಿನ ಊರುಕೆರೆ ಬಳಿ ಅಪಘಾತದಲ್ಲಿ 17 ಮಂದಿಗೆ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಚಿಕ್ಕೋಡಿಯ ರಾಮಪ್ಪ ಎಲೆಬಳ್ಳಿ (40), ಬೆಳಗಾವಿ ಮೂಲದ ತಸ್ರುಲ್ಲಾ (30) ಹಾಗೂ ಬಸ್ ಕ್ಲೀನರ್ ಫಜಲ್ (26) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರಿನಲ್ಲಿ ಇತ್ತೀಚೆಗೆ ಖಾಸಗಿ ಬಸ್ ಪಲ್ಟಿಯಾಗಿ ೫ ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.

    ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಸೋಪು ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಮುಂಭಾಗ ನುಜ್ಜಾಗಿದ್ದು, ಮುಂದೆ ಕುಳಿತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ಲಾರಿ ಒಳಗೆ ಇದ್ದ ಸೋಪ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ಕಂಡ ಜನರು ಚೀಲ ತಂದು ತುಂಬಿಕೊಂಡು ಹೋಗುತ್ತಿದ್ದಾರೆ.

    ಅಪಘಾತವಾದ ಪರಿಣಾಮ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಬಂದು ಟ್ರಾಫಿಕ್ ಕ್ಲೀಯರ್ ಮಾಡಿ ಮೃತ ದೇಹಗಳನ್ನು ಆಸ್ಪತ್ರೆ ರವಾನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

  • ಪ್ರಯಾಣಿಕರನ್ನು ಕುರಿಗಳಂತೆ ತುಂಬ್ತಾರೆ, ಟಾಪ್‍ಲ್ಲಿ ಕೂರಿಸ್ತಾರೆ – ತುಮಕೂರಿನಲ್ಲಿ ಖಾಸಗಿ ಬಸ್‍ಗಳಿಂದ ರೂಲ್ಸ್ ಬ್ರೇಕ್

    ಪ್ರಯಾಣಿಕರನ್ನು ಕುರಿಗಳಂತೆ ತುಂಬ್ತಾರೆ, ಟಾಪ್‍ಲ್ಲಿ ಕೂರಿಸ್ತಾರೆ – ತುಮಕೂರಿನಲ್ಲಿ ಖಾಸಗಿ ಬಸ್‍ಗಳಿಂದ ರೂಲ್ಸ್ ಬ್ರೇಕ್

    ತುಮಕೂರು: ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಿಗೆ ಯಾವುದೇ ಲಂಗು ಲಗಾಮಿಲ್ಲದಂತಾಗಿದೆ. ಬುಧವಾರ ಕೊರಟಗೆರೆಯ ಜಟ್ಟಿ ಅಗ್ರಹಾರದಲ್ಲಿ ಐವರ ಸಾವಿಗೆ ಕಾರಣವಾದ ಖಾಸಗಿ ಬಸ್ಸುಗಳ ಆಟಾಟೋಪ ಮುಂದುವರಿದಿದೆ. ಓವರ್ ಲೋಡ್, ಟಾಪಲ್ಲಿ ಪ್ರಯಾಣ ಎಂದಿನಂತೆ ಸಾಗಿದೆ. ಆದರೂ ಜಿಲ್ಲಾಡಳಿತ, ಆರ್‌ಟಿಓ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದೆ.

    ಬುಧವಾರದಂದು ಕೊರಟಗೆರೆಯ ಜಟ್ಟಿ ಅಗ್ರಹಾರದ ಬಳಿ ಓವರ್ ಸ್ಪೀಡಲ್ಲಿ ಬಂದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಐವರು ಸಾವನಪ್ಪಿ, 29 ಜನರಿಗೆ ಗಾಯಗೊಂಡ ಘಟನೆ ನಡೆದಿತ್ತು. ಆದರೂ ಖಾಸಗಿ ಬಸ್ಸುಗಳ ಆಟಾಟೋಪಕ್ಕೆ ಬ್ರೇಕ್ ಬಂದಿಲ್ಲ. ತುಮಕೂರು- ಕೊರಟಗೆರೆ-ಮಧುಗಿ ಮಾರ್ಗದಲ್ಲಿ ಬಸ್ಸುಗಳ ಅತಿ ವೇಗ ಮತ್ತೆ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

    ಕಡಿಮೆ ಸಮಯದಲ್ಲಿ ತಲುಪಬೇಕು ಎಂಬ ಆತುರದಲ್ಲಿ ಚಾಲಕರು ತಮ್ಮ ಅತೀ ವೇಗದ ಚಾಲನೆ ಮುಂದುವರಿಸಿದ್ದಾರೆ. ಬುಧವಾರ ನಡೆದ ಘಟನೆಯಿಂದ ಎಚ್ಚೆತ್ತುಕೊಳ್ಳದ ಖಾಸಗಿ ಬಸ್ಸಿನ ಚಾಲಕರು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತಿದ್ದಾರೆ.

    ತುಮಕೂರು ನಗರದಲ್ಲಿ ಖಾಸಗಿ ಬಸ್ಸಿನ ಟಾಪಲ್ಲಿ ಕೂತು ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇದೆ. ಆದರೆ ಮಧುಗಿರಿ-ಶಿರಾ-ತಿಪಟೂರು ಮಾರ್ಗದಲ್ಲಿ ಖಾಸಗಿ ಬಸ್ಸಿನವರು ಆಡಿದ್ದೇ ಆಟವಾಗಿದೆ. ಈ ಮಾರ್ಗದಲ್ಲಿ ಪ್ರತಿ ಬಸ್ಸಿನ ಟಾಪಲ್ಲಿ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಾರೆ. ಬಸ್ಸಿನೊಳಗೆ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿ, ಬಾಗಿಲಲ್ಲಿ ನಿಂತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ವಿಧಿಯಿಲ್ಲದೆ ಸಾರ್ವಜನಿಕರು ಪ್ರಯಾಣಿಸುವಂತಾಗಿದೆ.

  • ಬಸ್ ಡಿಕ್ಕಿಗೆ ಡಿಯೋ ಬೈಕ್ ಅಪ್ಪಚ್ಚಿ- ಯುವಕರಿಬ್ಬರ ದುರ್ಮರಣ

    ಬಸ್ ಡಿಕ್ಕಿಗೆ ಡಿಯೋ ಬೈಕ್ ಅಪ್ಪಚ್ಚಿ- ಯುವಕರಿಬ್ಬರ ದುರ್ಮರಣ

    ಬೆಂಗಳೂರು: ಡಿಯೋ ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಬಳಿ ನಡೆದಿದೆ.

    ಈ ಘಟನೆ ಹೊಸೂರು ಮುಖ್ಯರಸ್ತೆ ಅತ್ತಿಬೆಲೆಯ ಗೆಸ್ಟ್ ಲೈನ್ ಹೋಟೆಲ್ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಮೃತ ಯುವಕರಿಬ್ಬರು 28 ವಯಸ್ಸಿನ ಆಸುಪಾಸಿನವರಾಗಿದ್ದು ಗುರುತು ಪತ್ತೆಯಾಗಿಲ್ಲ. ಡಿಯೋ ಬೈಕಿನಲ್ಲಿ ಮೂರು ಜನ ಯುವಕರು ಹೋಗುತ್ತಿದ್ದಾಗ ಹಿಂಬದಿಯಿಂದ ವೈಬಿಎಂ ಟ್ರಾವೆಲ್ಸ್ ಗೆ ಸೇರಿದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಡಿಯೋ ಬೈಕ್ ಅಪ್ಪಚ್ಚಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.

    ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.