Tag: ಖಾಸಗಿ ಬಸ್

  • ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ: 2 ಸಾವು 10 ಮಂದಿಗೆ ಗಾಯ

    ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ: 2 ಸಾವು 10 ಮಂದಿಗೆ ಗಾಯ

    ದಾವಣಗೆರೆ: ಜಿಲ್ಲೆಯ ಕೈದಾಳೆ ಕ್ರಾಸ್ ಬಳಿ ಎರಡು ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸಿದ್ದಪ್ಪ (55) ಹಾಗೂ 50 ವರ್ಷದ ಮತ್ತೋರ್ವ ಮೃತಪಟ್ಟಿದ್ದಾರೆ. ದಾವಣಗೆರೆ ನಗರದಿಂದ 15 ಕಿ.ಮೀ. ದೂರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಎರಡು ಬಸ್‍ಗಳು ವೇಗವಾಗಿದ್ದು, ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಹೊಡೆದಿವೆ. ಒಂದು ಬಸ್ ಸಂಪೂರ್ಣವಾಗಿ ಜಖಂಗೊಂಡಿದೆ.

    ಆಗಿದ್ದೇನು?:
    ಚನ್ನಗಿರಿಯಿಂದ ಒಂದು ಬಸ್ ವೇಗವಾಗಿ ಬರುತ್ತಿತ್ತು. ಇತ್ತ ಅಷ್ಟೇ ವೇಗವಾಗಿ ದಾವಣಗೆರೆಯಿಂದಲೂ ಬಸ್ ಬಂದಿದೆ. ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಇದರ ರಭಸಕ್ಕೆ ಒಂದು ಬಸ್ಸಿನ ಹಿಂಭಾಗ ಕಿತ್ತುಹೋಗಿದ್ದು, ಆ ಜಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಹಿಂದಕ್ಕೆ ಹಾರಿ ಹೋಗಿ ಬಿದ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

    ಮುಂಭಾಗದಲ್ಲಿ ಕುಳಿತಿದ್ದ ಬಂದು ಬಸ್ಸಿನ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಜೊತೆಗೆ ಎರಡು ಬಸ್‍ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಎರಡೂ ಬಸ್ಸಿನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್

    ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಲು ಪ್ಲಾನ್ ಮಾಡುವವರಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿದೆ. ಹೌದು. ಹಬ್ಬದ ನೆಪದಲ್ಲಿ ಖಾಸಗಿ ಬಸ್‍ಗಳ ಮಾಲೀಕರಿಂದ ಹಗಲು ದರೋಡೆ ನಡೆಯುತ್ತಿದೆ.

    ಎಂದಿಗಿಂತ ಎರಡ್ಮೂರು ಪಟ್ಟು ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರಿಂದ ಸುಲಿಗೆ ಮಾಡಲು ಮಾಲೀಕರ ತಯಾರಾಗಿದ್ದು, ಗಣೇಶ ಚತುರ್ಥಿ ಮುನ್ನಾ ಎರಡು ದಿನದ ರೇಟ್ ಕೇಳಿದ್ರೆ ಆಗ್ತಿರಾ ಶಾಕ್ ಆಗ್ತೀರಿ. ಇಂದು 500 ರೂ. ಟಿಕೆಟ್ ದರ ಇದ್ರೆ 11, 12ರಂದು 1500 ರೂ. ಆಗಿರುತ್ತದೆ. ಈ ಬಗ್ಗೆ ಪ್ರಶ್ನಿಸಿದ್ರೆ ಬೇಕಾದ್ರೆ ಬುಕ್ ಮಾಡಿ ಇಲ್ಲಾ ಅಂದ್ರೆ ಹೋಗಿ ಅಂತ ಬುಕ್ಕಿಂಗ್ ಏಜೆಂಟ್ಸ್ ಹೇಳುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೇಕ್‍ನಲ್ಲಿ ಬಯಲಾಗಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಬೆಂಗಳೂರಿನಿಂದ ಬೇರೆ ಬೇರೆ ಪ್ರಮುಖ ಊರುಗಳಿಗೆ ಇವತ್ತಿನ ಪ್ರಯಾಣ ದರ ಎಷ್ಟಿದೆ. 11, 12 ನೇ ತಾರೀಕು ಇದೇ ಪ್ರಮುಖ ಊರುಗಳಿಗೆ ಟಿಕೆಟ್ ದರ ಈ ಕೆಳಗಿನಂತಿದೆ. ಇದನ್ನೂ ಓದಿ: ಮತ್ತೊಂದು ಶಾಕ್, ಇನ್ನು ಮುಂದೆ ಪ್ರತಿ ತಿಂಗಳು ಬಸ್ ಟಿಕೆಟ್ ಪರಿಷ್ಕರಣೆ!

    ಎಲ್ಲಿಂದ ಎಲ್ಲಿಗೆ [ನಾನ್ ಎಸಿ ಸ್ಲೀಪರ್]  – ಇಂದಿನ ದರ-  11, 12ರ ದರ
    ಬೆಂಗಳೂರು TO ಬೆಳಗಾವಿ –  950 ರೂ. –  1750 ರೂ.
    ಬೆಂಗಳೂರು TO ಮಂಗಳೂರು  – 850- ರೂ.- 1600 ರೂ .
    ಬೆಂಗಳೂರು TO ಉಡುಪಿ –  850 ರೂ. – 1500 ರೂ .
    ಬೆಂಗಳೂರು TO ಶಿವಮೊಗ್ಗ  – 560 ರೂ. – 1600 ರೂ.
    ಬೆಂಗಳೂರು TO ಹುಬ್ಬಳ್ಳಿ –   600 ರೂ. – 1700 ರೂ.
    ಬೆಂಗಳೂರು TO ಬೀದರ್ –  1100 ರೂ. – 1700 ರೂ.
    ಬೆಂಗಳೂರು TO ಬಳ್ಳಾರಿ –  560 ರೂ. – 1300 ರೂ.
    ಬೆಂಗಳೂರು TO ರಾಯಚೂರು –  660 ರೂ. – 1700 ರೂ.
    ಬೆಂಗಳೂರು TO ಮೈಸೂರು –  500 ರೂ. – 850 ರೂ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಬೆಂಗಳೂರು: ಗಣೇಶ ಹಬ್ಬಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿಯವರು ಹೆಚ್ಚಳ ಮಾಡುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಹೆಚ್ಚು ಬಸ್ ಸೇವೆ ಒದಗಿಸಿ ಅಂತ ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚು ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುತ್ತದೆ ಎಂದರು.

     

    40 ಸ್ಲೀಪರ್ ಕೋಚ್ ಬಸ್: ನೂತನವಾಗಿ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ ಎಂದು ತಮ್ಮಣ್ಣ ತಿಳಿಸಿದರು. ಖಾಸಗಿಯವರು ಸ್ಲೀಪರ್ ಕೋಚ್ ನಲ್ಲಿ ಹೆಚ್ಚು ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರ್ತಿವೆ. ಹೀಗಾಗಿ ನಾವೇ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. ಅಗತ್ಯ ಇರುವ ಬೆಂಗಳೂರಿನ ಕಡೆ ಸ್ಲೀಪರ್ ಕೋಚ್ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.

    ಎಲೆಕ್ಟ್ರಿಕಲ್ ಬಸ್ ಸಂಬಂಧ ಇನ್ನು ಯಾವುದೇ ನಿರ್ಧಾರವಾಗಿಲ್ಲ. 80 ಬಸ್ ಖರೀದಿ ವಿಚಾರ ಪರಿಶೀಲನೆ ಹಂತದಲ್ಲಿದೆ. ಖಾಸಗಿ ಅವರಿಗೆ ನೀಡಬೇಕಾ ಅಥವಾ ಏನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಬೇಕಿದೆ. ಖಾಸಗಿ ಅವರಿಗೆ ಕೊಡಬೇಕು ಅನ್ನೋದು ಹಿಂದಿನ ಸರ್ಕಾರದ ನಿರ್ಧಾರ. ಈ ಬಗ್ಗೆ ಸೂಕ್ತವಾದ ಅಧ್ಯಯನ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

    ಅಗತ್ಯ ಇಲ್ಲದ ಕಡೆ ಇರೋ ಬಸ್ ಗಳನ್ನ ಕಡಿತ ಮಾಡಿ ಅಗತ್ಯ ಇರೋ ಕಡೆ ಬಸ್ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಿದ್ದೇನೆ. ಒಂದೇ ರೂಟ್ ನಲ್ಲಿ ಎರಡೆರಡು ಬಸ್ ಅವಶ್ಯಕತೆ ಇಲ್ಲದೆ ಇದ್ದರೂ ಓಡಾಡುತ್ತಿವೆ. ಹೀಗಾಗಿ ಅಂತಹ ಕಡೆ ಬಸ್ ಕಡಿಮೆ ಮಾಡಿ ಅವಶ್ಯಕತೆ ಇರೋ ಕಡೆ ಬಸ್ ಸೇವೆ ಒದಗಿಸುತ್ತೇವೆ. ಎಲ್ಲಾ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಕ್ರಮವಹಿಸಿ ಬಸ್ ಸೇವೇ ಒದಗಿಸುತ್ತೇವೆ ಅಂತ ಸಚಿವರು ತಿಳಿಸಿದರು.

    ಬಸ್ ಪಾಸ್ ಚರ್ಚೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಜೊತೆ ಮಾತನಾಡಲಾಗಿದೆ. ಎಸ್ ಸಿ/ಎಸ್ ಟಿ ಇಲಾಖೆಯ ಹಣದಲ್ಲಿ 25% ಹಣವನ್ನು ಬಳಕೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದಕ್ಕೆ ಒಪ್ಪಿದ್ದಾರೆ. ಸಿಎಂ ಜೊತೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ಪಾಸ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವರು ಹೇಳಿದರು.

    ಖಾಸಗಿ ಬಸ್ ಮಾಫಿಯಾ ಲಾಬಿ ತಡೆಯಲು 70 ವರ್ಷಗಳಿಂದ ಸಾಧ್ಯವಾಗಿಲ್ಲ. ಮೂರು ತಿಂಗಳಿಗೆ ಮಾಫಿಯಾ ನಿಯಂತ್ರಣ ಸಾಧ್ಯವಿಲ್ಲ. ದರ ಕಡಿಮೆಗೊಳಿಸಿ ಖಾಸಗಿಯವರಿಗೆ ಪೈಪೋಟಿ ನೀಡುವ ಪ್ಲಾನ್ ಸರ್ಕಾರದ್ದು. ಖಾಸಗಿ ಬಸ್ ಸ್ಥಳಾಂತರ ವಿಚಾರ ಸರ್ಕಾರದ ಮುಂದಿದೆ. ಪೀಣ್ಯದಲ್ಲಿರುವ ಖಾಸಗಿ ಬಸ್ ನಿಲ್ದಾಣ ಬದಲಾವಣೆ ಬಗ್ಗೆ ಮಾಲೀಕರ ಜತೆ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಕಾರವಾರ, ಹಾಸನ, ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ!

    ಕಾರವಾರ, ಹಾಸನ, ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ!

    ಕಾರವಾರ: ಹಾಸನ, ಕಾರವಾರ, ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮೇಲೆ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

    ಈ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಬಳಿ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಸಂಚರಿಸುತ್ತಿದ್ದ ಶ್ರೀದುರ್ಗಾಂಬಾ ಖಾಸಗಿ ಬಸ್ ಮೇಲೆ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 63 ಹುಬ್ಬಳ್ಳಿ-ಅಂಕೋಲಾ ನಡುವಿನ ಸಂಚಾರ ಕೆಲವು ಗಂಟೆಗಳ ಕಾಲ ಸ್ಥಗಿತವಾಗಿದ್ದು, ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು ಕುಸಿದ ಮಣ್ಣನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಅಷ್ಟೇ ಅಲ್ಲದೇ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿಯಲ್ಲಿ ನಿರಂತರ ಮಳೆ ಹಿನ್ನೆಲೆ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ರಾಷ್ಟ್ರೀಯ ಹೆದ್ದಾರಿ 75 ರ ಮಾರನಹಳ್ಳಿ ಬಳಿ ಘಟನೆ ನಡೆದಿದೆ. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಶಿರಾಡಿಘಾಟ್ ರಸ್ತೆ ಸಂಚಾರ ತಾತ್ಕಾಲಿಕ ಬಂದ್ ಮಾಡಲಾಗಿದೆ. ಗುಡ್ಡ ತೆರವು ಕಾರ್ಯ ಆರಂಭವಾಗಿದ್ದು, ಬಂದ್ ಹಿನ್ನೆಲೆ ಚಾರ್ಮಾಡಿ ಘಾಟ್ ಮೂಲಕ ವಾಹನ ಸಂಚಾರಕ್ಕೆ ದಾರಿ ಮಾಡಿಕೊಡಲಾಗಿದೆ.

    ಇನ್ನು ಮಲೆನಾಡಿನಲ್ಲೂ ಧಾರಾಕಾರ ಮಳೆ ಹಿನ್ನಲೆ ಸೋಲ್ಲಾಪುರ- ಮಂಗಳೂರು ರಾಜ್ಯ ಹೆದ್ದಾರಿ 169 ಮುಳುಗಡೆಯಾಗಿದೆ. ನೆಮ್ಮಾರು ಗ್ರಾಮದ ಬಳಿ ಮುಳುಗಡೆಯಾದ ರಾಜ್ಯ ಹೆದ್ದಾರಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ನೆಮ್ಮಾರು ರಸ್ತೆಯ ಮೇಲೆ ಹುಕ್ಕಿ ಹರಿಯುತ್ತಿರುವ ತುಂಗಾ ನದಿಯಿಂದಾಗಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ವಾಹನ ಸವಾರರು ರಸ್ತೆ ಸಂಪರ್ಕವಿಲ್ಲದೆ ಪರದಾಟ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖಾಸಗಿ ಬಸ್ ಪಲ್ಟಿ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

    ಖಾಸಗಿ ಬಸ್ ಪಲ್ಟಿ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

    ಹುಬ್ಬಳ್ಳಿ: ಖಾಸಗಿ ಬಸ್ ಪಲ್ಟಿಯಾಗಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಹುಬ್ಬಳ್ಳಿ ಸಮೀಪದ ಅಗಡಿ ಕ್ರಾಸ್ ಬಳಿ ನಡೆದಿದೆ.

    ಖಾಸಗಿ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಆಗಿದೆ. ಬಸ್ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲೇ ಉರುಳಿ ಬಿದಿದ್ದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

    ಸದ್ಯ ಗಾಯಾಳುಗಳನ್ನು ಕಿಮ್ಸ್ ಹಾಗೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಖಾಸಗಿ ಬಸ್‍ಗಳ ಮುಖಾಮುಖಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

    ಖಾಸಗಿ ಬಸ್‍ಗಳ ಮುಖಾಮುಖಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

    ಕೋಲಾರ: ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ನರಸಾಪುರ ಗ್ರಾಮದ ಬಳಿ ನಡೆದಿದೆ.

    ನರಸಾಪುರ ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್‍ವೊಂದು ಪಲ್ಟಿ ಹೊಡೆದು ಬಿದ್ದಿದೆ. ಬಸ್ ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಖಾಸಗಿ ಬಸ್‍ಗಳು ಬೆಂಗಳೂರಿನಿಂದ ಪುಂಗನೂರು ಕಡೆಗೆ ಹಾಗೂ ಕೋಲಾರದಿಂದ ನರಸಾಪುರಕ್ಕೆ ಹೋಗುತ್ತಿದ್ದವು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್- 17 ಮಂದಿ ದುರ್ಮರಣ

    ಡಿವೈಡರ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್- 17 ಮಂದಿ ದುರ್ಮರಣ

    ಲಕ್ನೋ: ಖಾಸಗಿ ಬಸ್ಸೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಮೃತಪಟ್ಟು, 35ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಉತ್ತರಪ್ರದೇಶದ ಮೇನ್ಪುರಿ ಜಿಲ್ಲೆಯಲ್ಲಿ ಇಂದು ನಡೆದಿದೆ.

    ಘಟನೆಯಲ್ಲಿ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ. ಇನ್ನು ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಪ್ರಾಥಮಿಕ ತನಿಖೆಯಲ್ಲಿ ಘಟನೆಗೆ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗುತ್ತಿದೆ. ವೇಗವಾಗಿ ಬಂದ ಬಸ್ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಚಾಲಕನಿಗೂ ಗಾಯಗಳಾಗಿವೆ. ಸದ್ಯ ಚಾಲಕ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಚಾಲಕನಿಂದ ಹೇಳಿಕೆ ಪಡೆಯುತ್ತಿದ್ದಾರೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದು, ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಅಂತ ಸಾಂತ್ವಾನ ಹೇಳಿದ್ದಾರೆ.

    ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಗಾಯಾಳುಗಳನ್ನು ಕೂಡಲೇ ಸ್ಥಳಕ್ಕೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.

  • ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

    ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

    ಕೊಡಗು: ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ಸೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

     

    ಕುಶಾಲನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್ ವೇಗವಾಗಿ ಬರುತಿತ್ತು. ಬಸ್ ನಿಯಂತ್ರಣ ಕಳೆದುಕೊಂಡಿದೆ ಎನ್ನುವ ವಿಚಾರ ತಿಳಿದು ಜನ ಕೂಡಲೇ ಚದುರಿದ್ದಾರೆ. ಈ ವೇಳೆ ರಾಜೇಶ್ ಪಾರಾಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಬಸ್ ರಾಜೇಶ್ ಗೆ ಗುದ್ದಿದೆ.

    ಬಸ್ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ದಾರಿಯ ಮಧ್ಯದಲ್ಲಿಯೇ ಬಸ್ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಸಾರ್ವಜನಿಕರು ಬಸ್ ಅನ್ನು ಸ್ಥಳಾಂತರಗೊಳಿಸಿದ್ದಾರೆ.

    ಈ ಕುರಿತು ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್ ಶವವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಬಸ್ ಮಾಲೀಕರು ಆಸ್ಪತ್ರೆಗೆ ಆಗಮಿಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.

  • ಮದ್ಯ ಸೇವಿಸಿ ಖಾಸಗಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ತರಾಟೆ

    ಮದ್ಯ ಸೇವಿಸಿ ಖಾಸಗಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ತರಾಟೆ

    ತುಮಕೂರು: ಖಾಸಗಿ ಬಸ್ ಅಪಘಾತವಾಗಿ 7 ಮಂದಿ ಜಿಲ್ಲೆಯಲ್ಲಿ ಸಾವನ್ನಪ್ಪಿದರೆ, ಇನ್ನೊಂದೆಡೆ ಸಂಭವಿಸಬಹುದಾಗಿದ್ದ ಅಪಘಾತವನ್ನು ಪ್ರಯಾಣಿಕರ ಸಮಯಪ್ರಜ್ಞೆ ತಪ್ಪಿಸಿದೆ.

    ಮದ್ಯ ಸೇವಿಸಿ ಖಾಸಗಿ ಬಸ್ಸನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದ ಚಾಲಕನನ್ನ ತಡೆದು ಪ್ರಯಾಣಿಕರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ ಚಲಾಯಿಸುತ್ತಿದ್ದ ಡ್ರೈವರ್ ಮಹೇಶ್ ಗೆ ಪ್ರಯಾಣಿಕರು ಕ್ಲಾಸ್ ತೆಗೆದುಕೊಂಡು ಬಸ್ ತಡೆದಿದ್ದಾರೆ.

    ತುಮಕೂರಿನಿಂದ ಕೊಡಿಗೇನಹಳ್ಳಿಗೆ ಹೋಗುತ್ತಿದ್ದ ಬಿಎಂಎಸ್ ಖಾಸಗಿ ಬಸ್‍ನಲ್ಲಿ ಚಾಲಕ ಮಹೇಶ್ ಕುಡಿದು ಬಸ್ ಚಲಾಯಿಸುತ್ತಿದ್ದನ್ನು ಪ್ರಯಾಣಿಕರು ಗಮನಿಸಿದ್ದಾರೆ. ಬ್ಯಾಲ್ಯ ಗ್ರಾಮಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ಮುಂದೆ ಹೋಗದಂತೆ ತಡೆದು ಚಾಲಕನ ವಿರುದ್ಧ ಗಲಾಟೆ ಮಾಡಿದ್ದಾರೆ.

    ಇದೇ ವೇಳೆ ಮೇಲೇಳಲು ಆಗದ ಸ್ಥಿತಿಯಲ್ಲಿದ್ದ ಚಾಲಕ ಮಹೇಶ್ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕುಳಿತಿದ್ದಾನೆ. ಬಳಿಕ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಿದ ನಿರ್ವಾಹಕ ಪ್ರಯಾಣಿಕರನ್ನ ಕಳುಹಿಸಿದ್ದಾನೆ.

  • ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 2.98 ಕೋಟಿ ರೂ. ಹಣ ಜಪ್ತಿ

    ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 2.98 ಕೋಟಿ ರೂ. ಹಣ ಜಪ್ತಿ

    ತುಮಕೂರು: ಖಾಸಗಿ ಬಸ್ಸಿನಲ್ಲಿ ಸಾಗಿಸುತ್ತಿದ್ದ ವಾರಸುದಾರರಿಲ್ಲದ 2.98 ಕೋಟಿ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಗಜಾನನ ಖಾಸಗಿ ಬಸ್ಸಿನಲ್ಲಿ ಸಾಗಿಸುತ್ತಿದ್ದಾಗ ಜಪ್ತಿ ಮಾಡಲಾಗಿದೆ. ಕಂಟ್ರೋಲ್ ರೂಮ್ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಬೆಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಬಸ್ ಇದಾಗಿದ್ದು, ಚಾಲಕನ ಪಕ್ಕದ ಸೀಟ್ ಅಡಿಯಲ್ಲಿ ಹಣ ಪತ್ತೆಯಾಗಿದೆ. ಇಷ್ಟೊಂದು ಮೊತ್ತದ ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ಇಲ್ಲ. ವಾರಸುದಾರರು ಇಲ್ಲದ ನಗದನ್ನು ಸದ್ಯ ಚುನಾವಣಾ ಅಧಿಕಾರಿಗಳ ವಶಕ್ಕೆ ವರ್ಗಾಯಿಸಲಾಗಿದೆ. ಖಾಸಗಿ ಬಸ್ಸನ್ನು ಕ್ಯಾತಸಂದ್ರ ಪೊಲೀಸರು ಜಪ್ತಿ ಮಾಡಿದ್ದಾರೆ.