Tag: ಖಾತೆ

  • ಖಾತೆಗಳಿಗಾಗಿ ಕ್ಯಾತೆ – ವಾಸ್ತವ ಏನು? ಯಾಕೆ..?

    ಖಾತೆಗಳಿಗಾಗಿ ಕ್ಯಾತೆ – ವಾಸ್ತವ ಏನು? ಯಾಕೆ..?

    – ಬದ್ರುದ್ದೀನ್ ಕೆ ಮಾಣಿ
    ಸಂಪುಟ ದರ್ಜೆ `ಸಚಿವ’ರನ್ನಾಗಿ ಮಾಡಿದರೆ ಸಾಲದು `ಪ್ರಮುಖ ಖಾತೆ’ನೇ ಬೇಕು. ಇದು ಸಚಿವರಾಗುವವರ ಸಹಜ ಬೇಡಿಕೆ. ಸಚಿವ ಸ್ಥಾನ ನೀಡೋದು ಖಾತೆ ಹಂಚಿಕೆ ಮಾಡೋದು ಸಿಎಂ ವಿವೇಚನಾಧಿಕಾರ. ಅದು ಸಿಎಂಗೆ ಬಿಟ್ಟಿದ್ದು. ಆದರೆ ನನಗೆ `ಬೆಂಗಳೂರು ಅಭಿವೃದ್ಧಿ’ ಖಾತೆ ಕೊಟ್ರೆ ಒಳ್ಳೆಯದು, `ಜಲಸಂಪನ್ಮೂಲ’ ನನಗೇ ಬೇಕು, `ಇಂಧನ’ ಕೊಟ್ರೆ ಮಾತ್ರ ಕೆಲಸ ಮಾಡೋದು, ಇಂತಹ ಕ್ಷೇತ್ರಗಳಲ್ಲಿ ನಮಗೆ ಆಸಕ್ತಿ, ಹಾಗಾಗಿ ಆಸಕ್ತಿಯ ಖಾತೆ ಕೊಟ್ರೆ ಕೆಲಸ ಮಾಡೋದು ಸುಲಭ ಎಂಬುದಾಗಿ ಆಕಾಂಕ್ಷಿಗಳು ಬೇಡಿಕೆ ಇಡೋದು ಸಾಮಾನ್ಯವಾಗಿ ಹೋಗಿದೆ. ಇದು ಕ್ಷೇತ್ರದ ಜನರ ಬೇಡಿಕೆ, ನಿರೀಕ್ಷೆ ಅಷ್ಟೇ.. ಹೀಗಂತ ಹೇಳೋದನ್ನು ಹೇಳಿ ಕೊನೆಗೆ, ಸಿಎಂ ಯಾವ ಖಾತೆ ಕೊಟ್ರೂ ನಿಭಾಯಿಸುತ್ತೇವೆ ಅಂತ ಹೇಳಿ ಮುಗಿಸುತ್ತಾರೆ. ಆ ಮೂಲಕ ತಮ್ಮ ಬೇಡಿಕೆ ಏನೆಂಬುದು, ಎಲ್ಲಿಗೆ ತಲುಪಿಸಬೇಕೋ ತಲುಪುವಂತೆ ಒತ್ತಡವನ್ನ ಹೇರೋ ಜಾಣತನವನ್ನ ಪ್ರದರ್ಶಿಸುತ್ತಾರೆ.

    ಇದಲ್ಲದೇ ಸಾರಿಗೆ, ಕಂದಾಯ, ಬೃಹತ್ ಕೈಗಾರಿಕೆ, ನಗರಾಭಿವೃದ್ಧಿ ಮುಂತಾದ ಖಾತೆಗಳಿಗೂ ಭಾರೀ ಬೇಡಿಕೆ. ಆದ್ರೆ, `ಕೃಷಿ’ ಖಾತೆ ಬೇಕು ಜನರಿಗೆ ಸಹಾಯ ಮಾಡಬಹುದು, ಶೋಷಿತರ ನೋವಿಗೆ ನೆರವಾಗಬಹುದು ಅಂತ `ಸಮಾಜಕಲ್ಯಾಣ’, `ಹಿಂದುಳಿದವರ ಕಲ್ಯಾಣ’, `ಅಲ್ಪಸಂಖ್ಯಾತರ ಕಲ್ಯಾಣ’ ಖಾತೆ ಕೊಡಿ ಅಂತಾಗಲಿ ಅಥವಾ ಬಡ-ಮಧ್ಯಮ ವರ್ಗದ ಅಭಿವೃದ್ಧಿಗಾಗಿ `ಪಶುಸಂಗೋಪನೆ’, `ಮೀನುಗಾರಿಕೆ’, `ತೋಟಗಾರಿಕೆ’, `ರೇಷ್ಮೆ’, `ಕಾರ್ಮಿಕ’ ಮೊದಲಾದ ಖಾತೆಗಳನ್ನು ಕೊಡಿ ಅಂತಾ ಯಾರಾದ್ರೂ ಬೇಡಿಕೆ ಇಡೋದನ್ನ ಕೇಳಿದ್ದಿರಾ?.

    ಹೋಗ್ಲಿ ಬಿಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಶ್ರಮಿಸುವ ಸಲುವಾಗಿ `ಪ್ರಾಥಮಿಕ- ಪ್ರೌಢಶಿಕ್ಷಣ’ ಅಥವಾ `ಆರೋಗ್ಯ’ ಖಾತೆ ಕೊಡಿ ಅಂತ ಹಠ ಹಿಡಿದಿರುವ ಸಚಿವರನ್ನು ನೋಡಿದ್ದಿರಾ?.. ನಾಡು-ನುಡಿಯ ಉಳಿವಿಗಾಗಿ ಪಣತೊಟ್ಟು, ಸಂಸ್ಕೃತಿತಿ ಉಳಿವಿಗೆ ನೆರವಾಗಲು `ಕನ್ನಡ ಮತ್ತು ಸಂಸ್ಕೃತಿ’ ಖಾತೆ ಕೇಳಿರುವುದನ್ನು ಕಂಡಿದ್ದೀವಾ?. ನಾಡಿನ ಬಡಮಕ್ಕಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿ `ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ’ ಖಾತೆ ಕೊಡಿ ಅಂತಾ ಮನವಿ ಮಾಡಿರುವ ಸಚಿವರ ಬಗ್ಗೆ ಗೊತ್ತಿದೆಯಾ?ಇಲ್ಲವೇ ಇಲ್ಲ. ಇಂತಹ ಬೇಡಿಕೆಯನ್ನ ನಿರೀಕ್ಷಿಸುವುದು ಬಿಡಿ, ಊಹಿಸಲೂ ಸಾಧ್ಯವಿಲ್ಲ. ಇಂತಹ ಖಾತೆಗಳನ್ನು ಹಂಚಿಕೆ ಮಾಡಿದಾಗ ಆ ಸಚಿವರ ಪ್ರತಿಕ್ರಿಯೆ ಹೇಗಿರುತ್ತೆ ಅಂತ ಅವರ ಆಪ್ತವಲಯಗಳಲ್ಲಿ ಮಾತನಾಡಿದ್ರೆ ಗೊತ್ತಾಗುತ್ತೆ. ಇಂತಹ ಖಾತೆಗಳಿಂದ ನಾವೇನು ಕೆಲಸ ಮಾಡಕ್ಕಾಗಲ್ಲ, ಕೇವಲ ಸಚಿವ ಅಂತ ಅನ್ನಿಸಿಕೊಳ್ಳೊದು ಮಾತ್ರ. ಈ ಖಾತೆಗಳಿಂದ ಜನರಿಗೆ ಸಹಾಯ ಮಾಡಕ್ಕಾಗಲ್ಲ, ಪಕ್ಷದ ಸಂಘಟನೆಯನ್ನೂ ಮಾಡಕ್ಕಾಗಲ್ಲ, ಇದರಿಂದ ಏನೂ ಪ್ರಯೋಜನ ಇಲ್ಲ. ಜನರಿಗೆ ಹತ್ತಿರವಾದ ಖಾತೆ ಕೊಟ್ಟಿದ್ರೆ ಒಳ್ಳೆಯದಿತ್ತು. ಇದು, ಸಣ್ಣ-ಪುಟ್ಟ ಖಾತೆ ಪಡೆದ ಸಚಿವರ ಪ್ರತಿಕ್ರಿಯೆ.

    ಜನರ ಬಳಿ ಮತಯಾಚಿಸುವಾಗ ಹೇಳಿರುವ ಅಥವಾ ಭರವಸೆ ನೀಡಿರೋದನ್ನ ಮರೆತು ನಮ್ಮ ಜನಪ್ರತಿನಿಧಿಗಳು ಹೇಳುವ ಮಾತಿದು. ಮತಯಾಚನೆ ವೇಳೆ ಜನರಿಗೆ ಭರವಸೆ ನೀಡುವ ಜನಪ್ರತಿನಿಧಿಗಳು, ನಮ್ಮನ್ನು ಆಯ್ಕೆ ಮಾಡಿದರೆ ರೈತರ ಹಿತ ಕಾಯುತ್ತೇವೆ, ಬಡವರ ಶೋಷಿತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ. ನಿರ್ಗತಿಕರ ಶ್ರೇಯೋಭಿವೃದ್ಧಿಯೇ ನನ್ನ ಗುರಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಯೇ ನನ್ನ ಸಂಕಲ್ಪ, ನಾಡು ನುಡಿಯ ಸಂರಕ್ಷಣೆಗೆ ಬದ್ಧನಾಗಿರುತ್ತೇನೆ. ಹಾಗೇ-ಹೀಗೆ ಅಂತಾ ಪುಂಖಾನುಪುಂಖವಾಗಿ ಭಾಷಣ ಬಿಗಿದಿರುತ್ತಾರೆ. ಗೆದ್ದು ಶಾಸಕರಾಗುತ್ತಿದ್ದಂತೆ, ಕೇವಲ ಶಾಸಕರಾಗಿದ್ದುಕೊಂಡು ಏನ್ ಕೆಲಸ ಮಾಡೋಕೆ ಸಾಧ್ಯ? ಸಚಿವ ಸ್ಥಾನ ಸಿಕ್ಕಿದ್ರೆ ಒಳ್ಳೆಯ ಕೆಲಸ ಮಾಡಬಹುದು ಅಂತ ತಮ್ಮ ಇಂಗಿತ ವ್ಯಕ್ತಪಡಿಸುತ್ತಾರೆ. ಹಾಗೂ-ಹೀಗೂ ಅವರಿವರ ಕೈ-ಕಾಲು ಹಿಡಿದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಇವರು, ನನಗೆ ಇಂತಹ ಪ್ರಮುಖ ಖಾತೆ ಬೇಕು ಅಂತ ಕ್ಯಾತೆ ತೆಗೆಯುತ್ತಾರೆ. ಇಲ್ಲದಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಜನರಿಗೆ ಹತ್ತಿರವಿರುವ ಖಾತೆ ಕೊಟ್ರೆ ಒಳ್ಳೆಯದು, ಒಳ್ಳೆಯ ಕೆಲಸ ಮಾಡಬಹುದು ಅಂತ ‘ಆಯಕಟ್ಟಿನ’ ಪ್ರಮುಖ ಖಾತೆಗಳಿಗೆ ಬೇಡಿಕೆ ಇಡ್ತಾರೆ, ಆದ್ರೆ ಅದನ್ನ ಪಡೆದುಕೊಂಡ ಮೇಲೆ ಏನು ಮಾಡುತ್ತಾರೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.

    ಇದಕ್ಕೆಲ್ಲ ಕಾರಣ ಏನು ಗೊತ್ತಾ..? ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕಾರ್ಮಿಕ, ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇವೆಲ್ಲಾ ನೇರವಾಗಿ ಜನರಿಗೆ ಸಂಬಂಧಿಸಿದ ಇಲಾಖೆಗಳು. ಆದರೆ, ಇದನ್ನು ಪಡೆಯಲು ಹಿಂದೇಟು ಹಾಕೋದು ಯಾಕೆಂತ ಬೇರೆ ಹೇಳಬೇಕೆ? ಯಾಕೆಂದ್ರೆ ಈ ಖಾತೆಗಳಿಗೆ ಅನುದಾನ ಸಾವಿರಾರು ಕೋಟಿ ರೂಪಾಯಿಗಳಲ್ಲಿ ಇರೋದಿಲ್ಲ. ಇಲ್ಲಿ ಗುತ್ತಿಗೆ ಕೊಡೋದು, ಅಕ್ರಮ ಮಾಡೋದಕ್ಕೆ ಅವಕಾಶ ಇದೆಯಾದರೂ, ಅದರ ಪ್ರಮಾಣ ತುಂಬಾ ಕಡಿಮೆ. ಜನರಿಗೆ ಸಿಗುವ ಸವಲತ್ತುಗಳು, ನೆರವುಗಳು ನೇರವಾಗಿ ಸಿಗುತ್ತವೆ ಮತ್ತು ಕಣ್ಣಿಗೆ ಕಾಣುವಂತಿರುತ್ತದೆ. ಹಾಗಾಗಿ ಕಡಿಮೆ ಅನುದಾನದ ಇಲಾಖೆಗಳಲ್ಲಿ ನೇರ ಜನರ ಒಳಗೊಳ್ಳುವಿಕೆ ಹೆಚ್ಚು. ಅಕ್ರಮಗಳಾದ್ರೆ ಬಹುಬೇಗ ಗೊತ್ತಾಗುತ್ತೆ. ಹೆಚ್ಚು-ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬರೋದು ಇಲ್ಲಿಯೇ.

    ಕಿರಿಕಿರಿ ಜಾಸ್ತಿ, ಆದಾಯ ಕಡಿಮೆ ಇದುವೇ ಎಲ್ಲಾ ಪ್ರಕ್ರಿಯೆಗಳ ಸಾರಾಂಶ. ಹಾಗಾಗಿಯೇ ಇಂತಹ ಜನಕಲ್ಯಾಣ, ರೈತರ ಕಲ್ಯಾಣ, ಜನೋಪಯೋಗಿ ಖಾತೆಗಳು ಯಾರಿಗೂ ಬೇಡ ಅನ್ನೋದು ವಾಸ್ತವ. ಹಾಗಾದ್ರೆ ಭಾರೀ ಬೇಡಿಕೆಯ ಖಾತೆಗಳಾದ ಜಲಸಂಪನ್ಮೂಲ, ಲೋಕೋಪಯೋಗಿ, ಇಂಧನ, ಬೆಂಗಳೂರು ಅಭಿವೃದ್ಧಿ, ಸಾರಿಗೆ, ಕಂದಾಯ, ಬೃಹತ್ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಖಾತೆಗಳ ಬಗ್ಗೆ ಸಚಿವರುಗಳಿಗೆ ಹೆಚ್ಚು ಒಲವು ಯಾಕೆ ಎಂದು ಬೇರೆ ಹೇಳಬೇಕಿಲ್ಲ. ಈ ಬೃಹತ್ ಖಾತೆಗಳು ಜನರಿಗೆ ಸಹಾಯ ಮಾಡಲು ನೆರವಾಗುತ್ತೆ ಅನ್ನೋ ಸಮರ್ಥನೆ ಹಾಸ್ಯಾಸ್ಪದ. ಈ ಖಾತೆಗಳಲ್ಲಿ ಹೆಚ್ಚು ಒಳಗೊಂಡಿರುವವರು ಗುತ್ತಿಗೆದಾರರು ಮತ್ತು ಇಂಜಿನಿಯರ್‍ಗಳು. ಇವರುಗಳೇ ನಮ್ಮ ಜನಪ್ರತಿನಿಧಿಗಳ ಆದಾಯದ ಮೂಲ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಕೆಟ್ಟ ಗುತ್ತಿಗೆದಾರರು, ಭ್ರಷ್ಟ ಅಧಿಕಾರಿಗಳು, ಲೂಟಿ ಮಾಡಲೆಂದೇ ಕಾರ್ಯನಿರ್ವಹಿಸುವ ಕೆಲವು ಎಂಜಿನಿಯರ್‍ಗಳು ಈ ಖಾತೆಗಳಲ್ಲಿ ಬರುವ ಅನುದಾನದ ಹೊಣೆಗಾರರು. ಆದ್ದರಿಂದಲೇ ನಮ್ಮ ಸಚಿವರಿಗೆ ಇಂತಹ ಖಾತೆಗಳ ಮೇಲೆ ಹೆಚ್ಚು ಪ್ರೀತಿ. ಅತ್ಯಂತ ಹೆಚ್ಚು ಅಕ್ರಮಗಳು, ಭ್ರಷ್ಟಾಚಾರಗಳು ನಡೆಯುವುದೇ ಇಲ್ಲಿ. ಅದ್ರೇ ಅದು ಬಯಲಾಗುವುದು, ಶಿಕ್ಷೆಗೊಳಗಾಗುವ ಪ್ರಮಾಣ ಮಾತ್ರ ಕಡಿಮೆ. ಏಕೆಂದರೆ, ಮೇಲಿಂದ ಕೆಳಗಿನವರೆಗೆ ಎಲ್ಲರೂ ಇದರಲ್ಲಿ ಶಾಮೀಲಾಗಿರುತ್ತಾರೆ. ಜನ ಈ ಖಾತೆಗಳಿಂದ ಹೆಚ್ಚು ನಿರೀಕ್ಷೆ ಮಾಡಿದರೂ, ಪ್ರತಿನಿತ್ಯ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವುದು ವಿರಳ. ಒಮ್ಮೊಮ್ಮೆ ಕೆಲವು ನಾಗರಿಕರು, ಸಂಘಟನೆಗಳು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ರೂ ಅದರ ಸದ್ದಡಗಿಸುವ ಎಲ್ಲಾ ಕಲೆಗಳನ್ನು ಭ್ರಷ್ಟ ವ್ಯವಸ್ಥೆ ಕಂಡುಕೊಂಡಿದೆ. ಸಾವಿರಾರು ಕೋಟಿ ಅನುದಾನ ಇಂತಹ ಪ್ರಮುಖ ಖಾತೆಗಳಲ್ಲಿ ಇರುವುದೇ, ನಮ್ಮ ಸಚಿವರುಗಳಿಗೆ ಈ ಆಯಕಟ್ಟಿನ ಖಾತೆಗಳ ಬಗ್ಗೆ ಹೆಚ್ಚು ಒಲವು. ಇಲ್ಲಿ ಹಣ ಖರ್ಚು ಮಾಡುವುದು, ಹಣ ಬಿಡುಗಡೆ ಮಾಡೋದೇ ಹೆಚ್ಚು ಕೆಲಸ. ಅದೇ ಅಕ್ರಮಗಳಿಗೆ ಹಾದಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಈಗ ಅರ್ಥವಾಯಿತಲ್ಲ, ನಮ್ಮ ಶಾಸಕರು, ಸಚಿವರಾಗುತ್ತಿದ್ದಂತೆ ಯಾಕೆ ಬೃಹತ್ ಖಾತೆಗಳಿಗೆ ಬೇಡಿಕೆ ಇಡ್ತಾರೆ ಅಂತ. ಜನರ ಬಳಿ ಮತಯಾಚಿಸುವಾಗ ಹೇಳಿರುವ ವಿಚಾರಗಳಾಗಲಿ, ನೀಡಿರುವ ವಾಗ್ದಾನಗಳಾಗಲಿ, ಯಾವುದೂ ಈಗ ನಮ್ಮ ಜನಪ್ರತಿನಿಧಿಗಳಿಗೆ ನೆನಪಿಗೆ ಬರೋದಿಲ್ಲ. ಅಧಿಕಾರ ಸಿಗ್ತಾ ಇದ್ದಂತೆ, ಅವರ ಆದ್ಯತೆ, ಬೇಡಿಕೆಗಳು ಬದಲಾಗುತ್ತವೆ ಅನ್ನೋದು ಕಟುಸತ್ಯ. ಹಾಗಾದ್ರೆ ಅವರ ಪ್ರಕಾರ ಯಾರಿಗೂ ಬೇಡವಾದ ಖಾತೆಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೇ?

    ಇತಿಹಾಸದ ಪುಟಗಳನ್ನ ನೋಡಿದ್ರೆ ವಾಸ್ತವದ ಅರಿವಾಗುತ್ತೆ. ದಿವಂಗತ ರಾಮಕೃಷ್ಣ ಹೆಗ್ಡೆ ಸಂಪುಟದಲ್ಲಿ ಸಚಿವರಾಗಿದ್ದ ತುಮಕೂರಿನ ದಿವಂಗತ ವೀರಣ್ಣ ಅವರು ಸಣ್ಣ ಉಳಿತಾಯ ಮತ್ತು ಲಾಟರಿ ಖಾತೆ ಮಂತ್ರಿಯಾಗಿದ್ರು. ಅದೇ ಸಣ್ಣ ಖಾತೆಯಲ್ಲಿ ಏನು ಸುಧಾರಣೆ ಮಾಡಬಹುದು ಅಂತ ಅವರು ಸಾಬೀತು ಪಡಿಸಿ ಜನಮನ್ನಣೆ ಗಳಿಸಿದ್ರು. ಯಾರಿಗೂ ಬೇಡವಾಗಿದ್ದ ಗ್ರಾಮೀಣಾಭಿವೃದ್ಧಿ ಖಾತೆಗೆ ಮಹತ್ವ ಬರುವಂತೆ ಮಾಡಿದ ಕೀರ್ತಿ ದಿ.ಅಬ್ದುಲ್ ನಜೀರ್ ಸಾಬ್ ಅವರಿಗೆ ಸಲ್ಲುತ್ತದೆ. ದಿವಂಗತ ಹೆಗ್ಡೆ ಸಂಪುಟದಲ್ಲಿ ಸಚಿವರಾಗಿದ್ದ ನಜೀರ್ ಸಾಬ್, ಹಳ್ಳಿಗಾಡಿಗೆ ಕುಡಿಯುವ ನೀರನ್ನ ಕಲ್ಪಿಸಿ “ನೀರ್ ಸಾಬ್” ಎಂದೇ ಖ್ಯಾತರಾಗಿದ್ದರು.

    ದಿ. ದೇವರಾಜ ಅರಸು ಸಂಪುಟದಲ್ಲಿ ‘ಭೂ ಸುಧಾರಣೆ’ ಖಾತೆಗೆಂದೇ ಒಬ್ಬರು ಸಚಿವರನ್ನ ನೇಮಿಸಲಾಗಿತ್ತು. ಸುಬ್ಬಯ್ಯ ಶೆಟ್ಟಿ ಸಚಿವರಾಗಿ ಆ ಖಾತೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬಡ ಗೇಣಿದಾರರಿಗೆ ಭೂಮಿಯ ಒಡೆತನ ಸಿಗಲು ಪರಿಣಾಮಕಾರಿಯಾಗಿ ಕೆಲಸ ಮಾಡಿ ಜನಪ್ರಿಯರಾಗಿದ್ದರು. ದಿ.ಜೆ.ಎಚ್. ಪಟೇಲ್ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ದಿ.ಎಚ್.ಜಿ.ಗೋವಿಂದೇಗೌಡರ ಸಾಧನೆ ಅಪ್ರತಿಮ. ಈಗಲೂ ರಾಜ್ಯದ ಮಟ್ಟಿಗೆ ಶಿಕ್ಷಣ ಇಲಾಖೆ ಅಂದ್ರೆ, ತಟ್ಟನೆ ನೆನಪಿಗೆ ಬರುವುದೇ ದಿ.ಗೋವಿಂದೇಗೌಡರ ಹೆಸರು. ಶಿಕ್ಷಣ ಇಲಾಖೆಯ ಸುಧಾರಣೆಗೆ ಶ್ರಮಿಸಿ ಇಲಾಖೆಗೆ ಕಾಯಕಲ್ಪ ಕಲ್ಪಿಸಿದ ಕೀರ್ತಿ ಗೋವಿಂದೇಗೌಡರಿಗೆ ಸಲ್ಲುತ್ತದೆ.

    ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಿದ್ದ ದಿ.ಬಸವಲಿಂಗಪ್ಪ ತಮಗೆ ಕೊಟ್ಟ ಖಾತೆಯನ್ನು ಹೇಗೆ ಜನಪ್ರಿಯಗೊಳಿಸಿ ಬಹುಬೇಡಿಕೆಯ ಖಾತೆಯನ್ನಾಗಿ ಮಾಡಿದ್ರು ಅನ್ನೋದು ಗೊತ್ತೇ ಇದೆ. ದಿ.ಬಸವಲಿಂಗಪ್ಪ ಅವರಿಗೆ ಹೆಚ್ಚು ಆದ್ಯತೆ ಸಿಗದಿರಲಿ ಅಂತ ಯಾರಿಗೂ ಬೇಡವಾಗಿದ್ದ ‘ಪರಿಸರ’ ಖಾತೆಯನ್ನ ಹಂಚಿಕೆ ಮಾಡಲಾಗಿತ್ತು. ಅದನ್ನು ಅವರು ನಿಭಾಯಿಸಿ, ಅದರ ಮಹತ್ವ ಏನು ಅನ್ನೋದನ್ನ ತೋರಿಸಿಕೊಟ್ರು. ಹತ್ತು ಹಲವು ಕೈಗಾರಿಕೆಗಳು, ದೊಡ್ಡ ದೊಡ್ಡ ಕಟ್ಟಡಗಳಿಗೆ, ಹೋಟೆಲ್‍ನವರಿಗೆ ಪರಿಸರ ನಿಯಮಗಳನ್ನ ಉಲ್ಲಂಘಿಸಿದ್ದಕ್ಕೆ ಬಿಸಿ ಮುಟ್ಟಿಸಿ ಜನಪ್ರಿಯರಾದರು. ಈಗ ಆ ‘ಪರಿಸರ’ ಖಾತೆಗೆ ಬೇಡಿಕೆ ಬರುವಂತಾಗಿದೆ.

    ಯಾರಿಗೂ ಬೇಡವಾಗಿದ್ದ ‘ಮೀನುಗಾರಿಕೆ’ ಇಲಾಖೆ ಇದೆ ಅಂತ ತೋರಿಸಿಕೊಟ್ಟ ಕೀರ್ತಿ ಜಯಪ್ರಕಾಶ್ ಹೆಗ್ಡೆಯವರಿಗೆ ಸಲ್ಲುತ್ತದೆ. ಹೆಚ್.ಡಿ.ದೇವೇಗೌಡರ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಮೀನುಗಾರಿಕೆ ಇಲಾಖೆಗೆ ಮಹತ್ವ ಬರುವಂತೆ ಕೆಲಸ ಮಾಡಿ ತೋರಿಸಿದ್ರು. ಕೇವಲ ಕರಾವಳಿಯ ಸಮುದ್ರ ಮೀನುಗಾರಿಕೆಯಲ್ಲಿ ಸುಧಾರಣೆ ಮಾತ್ರ ಅಲ್ಲ, ಒಳನಾಡು ಮೀನುಗಾರಿಕೆ ಕೂಡ ಲಾಭದಾಯಕ ಅಂತ ತೋರಿಸಿಕೊಟ್ಟು ಬಡ-ಮಧ್ಯಮವರ್ಗದ ಜನರಿಗೆ ಸಹಾಯವಾಗುವಂತೆ ಮಾಡಿದ್ರು. ಕರಾವಳಿ ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹೇಗೆ ಎಂಬುದನ್ನು ತೋರಿಸಿಕೊಟ್ರು.

    ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಎನ್.ನಾಗೇಗೌಡರಿಗೆ ಅಂದು ಯಾರಿಗೂ ಬೇಡವಾಗಿದ್ದ ಪಶುಸಂಗೋಪನಾ ಖಾತೆ ದೊರಕಿತ್ತು. ಆ ಇಲಾಖೆ ಮೂಲಕ ಕುರಿ-ಕೋಳಿ, ಮೇಕೆ ಸಾಕಾಣಿಕೆ, ಪಶುಪಾಲನೆಗೆ ಪ್ರೋತ್ಸಾಹ ಸಿಗುವಂತೆ ಮಾಡಿ, ಹತ್ತು ಹಲವು ಮೇಳಗಳನ್ನು ಆಯೋಜಿಸಿ, ಯೋಜನೆಗಳನ್ನು ಜನರ ಬಳಿ ಕೊಂಡೊಯ್ದರು. ಹೈನುಗಾರಿಕೆಗೆ ಹೆಚ್ಚು ಮಹತ್ವವಿದೆ ಎಂದು ಸಾರಿ ಹೇಳಿ ರೈತರಿಗೆ ಕಾರ್ಯಕ್ರಮ ರೂಪಿಸಿ ಈ ಖಾತೆಗೆ ಮಹತ್ವ ಇದೆ ಎಂದು ತೋರಿಸಿಕೊಟ್ಟು, ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡರು. ಹೀಗೆ, ಹೇಳುತ್ತಾ ಹೋದರೆ ನಮಗೆ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ.

    ಆದರೆ ಈಗ ಕಾಲ ಬದಲಾಗಿದೆ. ನಮ್ಮ ಜನಪ್ರತಿನಿಧಿಗಳ ಆದ್ಯತೆ ಕೂಡ ಬದಲಾಗುತ್ತಾ ಹೋಗಿದೆ. ಜನಕಲ್ಯಾಣ, ರೈತರ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳು ಕೇವಲ ಕಡತ – ದಾಖಲೆಗಳಲ್ಲಿ ಉಳಿಯುವಂತಾಗಿದೆ. ಕೋಟ್ಯಂತರ ರೂಪಾಯಿ ಕೈ ಬದಲಾಗುವ ಖಾತೆಗಳೇ ಆದ್ಯತೆಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಪ್ರಜ್ಞಾವಂತ ಮತದಾರರು ನಮ್ಮ ಜನಪ್ರತಿನಿಧಿಗಳ ಆದ್ಯತೆ, ಆಕರ್ಷಣೆ, ಒಲವು ಏನು ಎಂಬುದನ್ನು ಅರಿತುಕೊಳ್ಳುವುದು ಇಂದಿನ ಅಗತ್ಯತೆ.

  • ಒಂದೇ ಖಾತೆಗಾಗಿ ಇಬ್ಬರು ನಾಯಕರ ಕಿತ್ತಾಟ

    ಒಂದೇ ಖಾತೆಗಾಗಿ ಇಬ್ಬರು ನಾಯಕರ ಕಿತ್ತಾಟ

    ಬೆಂಗಳೂರು: ಉಪ ಚುನಾವಣೆ ಗೆದ್ದ ಬಳಿಕ ಸಿಎಂ ಯಡಿಯೂರಪ್ಪಗೆ ಹೊಸ ಸಂಕಟ ಶುರುವಾಗಿದೆ. ಸಂಪುಟ ವಿಸ್ತರಣೆಯೇ ಸಿಎಂ ಯಡಿಯೂರಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಆ ಒಂದು ಖಾತೆಗಾಗಿ ಇಬ್ಬರು ಪ್ರಬಲ ನಾಯಕರು ಗುದ್ದಾಟ ನಡೆಸುತ್ತಿದ್ದು, ರಾಜಾಹುಲಿಗೆ ತಲೆ ಕೆಡಿಸುವಂತೆ ಮಾಡಿದೆ. ಇಬ್ಬರನ್ನೂ ಬಿಡೋ ಮನಸ್ಸು ಯಡಿಯೂರಪ್ಪಗೆ ಇಲ್ಲ. ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಬಂಡಾಯ ಸಾರೋದು ಗ್ಯಾರಂಟಿ. ಹೀಗಾಗಿ ಅಡಕತ್ತರಿಯಲ್ಲಿ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ.

    ಜಲಸಂಪನ್ಮೂಲ ಖಾತೆಗಾಗಿ ಬಸವರಾಜ್ ಬೊಮ್ಮಾಯಿ, ಸಾಹುಕಾರ್ ರಮೇಶ್ ಜಾರಕಿಹೋಳಿ ಪಟ್ಟು ಹಿಡಿದಿದ್ದಾರಂತೆ. ನಮಗೆ ಆ ಖಾತೆ ನೀಡಬೇಕು ಅಂತ ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಈಗಾಗಲೇ ಗೃಹ ಇಲಾಖೆ ಹೊಂದಿರೋ ಬೊಮ್ಮಾಯಿ ನನಗೆ ಗೃಹ ಖಾತೆ ಬೇಡ. ಹಿಂದೆಯೂ ನಾನು ಜಲಸಂಪನ್ಮೂಲ ಮಂತ್ರಿ ಆಗಿದ್ದೆ. ಈಗ ಅದನ್ನೇ ಕೊಡಿ. ಉತ್ತಮವಾಗಿ ಕೆಲಸ ಮಾಡ್ತೀನಿ ಅಂತ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಬಿಜೆಪಿ ಸರ್ಕಾರ ಬರಲು ಕಾರಣರಾದ ಸಾಹುಕಾರ್ ರಮೇಶ್ ಜಾರಕಿಹೋಳಿ ಡಿಕೆ ಶಿವಕುಮಾರ್ ನಿರ್ವಹಿಸುತ್ತಿದ್ದ ಖಾತೆಯೇ ನನಗೆ ಬೇಕು. ಹೀಗಾಗಿ ಜಲಸಂಪನ್ಮೂಲ ಖಾತೆ ನನಗೆ ಕೊಡಿ ಅಂತ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರಂತೆ. ತಮ್ಮ ಶಿಷ್ಯ ಬೊಮ್ಮಾಯಿಗೆ ಖಾತೆ ಕೊಟ್ರೆ, ಸರ್ಕಾರ ಬರಲು ಕಾರಣರಾದರೂ ಸಾಹುಕಾರ್ ಗೆ ಕೋಪ ಬರುತ್ತದೆ.

    ಸಾಹುಕಾರ್ ಗೆ ಕೊಟ್ರೆ ಬೊಮ್ಮಾಯಿ ಮುನಿಸಿಕೊಳ್ಳೋದು ಗ್ಯಾರಂಟಿ. ಹೀಗಾಗಿ ಯಾರಿಗೆ ಖಾತೆ ಕೊಡಬೇಕು ಅನ್ನೋ ಗೊಂದಲದಲ್ಲಿ ಸಿಎಂ ಇದ್ದು, ಯಾವ ಸೂತ್ರ ಹುಡುಕ್ತಾರೆ ಕಾದುನೋಡಬೇಕು.

  • ಕರ್ನಾಟಕಕ್ಕೆ ಬಂಪರ್: ಡಿವಿಎಸ್, ಜೋಶಿ, ಅಂಗಡಿಗೆ ಖಾತೆ ಹಂಚಿಕೆ

    ಕರ್ನಾಟಕಕ್ಕೆ ಬಂಪರ್: ಡಿವಿಎಸ್, ಜೋಶಿ, ಅಂಗಡಿಗೆ ಖಾತೆ ಹಂಚಿಕೆ

    ಬೆಂಗಳೂರು: ಮೋದಿ ಸಚಿವ ಸಂಪುಟದ ಖಾತೆಗಳು ಹಂಚಿಕೆಯಾಗಿದ್ದು, ಕರ್ನಾಟಕದ ಮೂವರು ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

    ಸದಾನಂದ ಗೌಡರಿಗೆ ರಸಗೊಬ್ಬರ ಖಾತೆಯನ್ನು ನೀಡಲಾಗಿದೆ. ಪ್ರಹ್ಲಾದ್ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆಯನ್ನು ನೀಡಲಾಗಿದೆ. ಸುರೇಶ್ ಅಂಗಡಿ ಅವರನ್ನು ರಾಜ್ಯ ರೈಲ್ವೇ ಖಾತೆ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

    ಅನಂತ್ ಕುಮಾರ್ ಅವರು ನಿಭಾಯಿಸುತ್ತಿದ್ದ ಎರಡೂ ಖಾತೆಗಳು ಕರ್ನಾಟಕದ ಪಾಲಾಗಿದೆ. ಜೋಶಿ, ಸುರೇಶ್ ಅಂಗಡಿ ಹಾಗೂ ಡಿವಿಎಸ್ ನಿನ್ನೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

    ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆ ನೀಡಲಾಗಿದೆ. ಈ ಹಿಂದೆ ಅನಂತ್ ಕುಮಾರ್ ರಾಸಾಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದ್ದರು.

  • ಕನ್ನಡಿಗರಿಗೇ ಸಂದ ಅನಂತ್ ಕುಮಾರ್ ಖಾತೆ

    ಕನ್ನಡಿಗರಿಗೇ ಸಂದ ಅನಂತ್ ಕುಮಾರ್ ಖಾತೆ

    ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಒಂದು ಖಾತೆಯ ಜವಾಬ್ದಾರಿಯನ್ನು ಕನ್ನಡಿಗ, ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

    ಅನಂತ್ ಕುಮಾರ್ ನಿಧನದಿಂದ ಖಾಲಿಯಾಗಿದ್ದ ಖಾತೆಗಳ ಹಂಚಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಫಾರಸ್ಸು ಹೊರಡಿಸಿದ್ದರು. ಅದಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅಂಕಿತ ಹಾಕಿದ್ದು, ಡಿ.ವಿ.ಸದಾನಂದಗೌಡ ಹಾಗೂ ನರೇಂದ್ರ ಸಿಂಗ್ ಥೋಮರ್ ಅವರಿಗೆ ತಲಾ ಒಂದರಂತೆ ಹೆಚ್ಚುವರೆ ಖಾತೆಗಳ ಹಂಚಿಕೆ ಮಾಡಲಾಗಿದೆ.

    ಸ್ಯಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನಗಳ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಹೆಚ್ಚುವರಿಯಾಗಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ವಹಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮರ್ ಅವರಿಗೆ ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಒಂದಿಲ್ಲೊಂದು ತಲೆನೋವು ಎದುರಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಮತ್ತೊಂದು ಕಡೆ ಜೆಡಿಎಸ್ ಗೆ ರೇವಣ್ಣ ಎರಡು ಖಾತೆ ನೀಡಿ ಎಂದು ಪಟ್ಟು ಹಿಡಿದ್ದಾರೆ.

    ಎಚ್ ಡಿ ರೇವಣ್ಣರ ಹಠ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ನನಗೆ ಇಂಧನ ಮತ್ತು ಪಿಡಬ್ಲ್ಯೂಡಿ ಎರಡೂ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ರೇವಣ್ಣರ 2 ಖಾತೆಯ ಮನವಿಯನ್ನು ತಿರಸ್ಕರಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದು, ಕೇವಲ ಯಾವುದಾದರೂ ಒಂದು ಖಾತೆಯನ್ನು ನಿರ್ವಹಿಸುವಂತೆ ರೇವಣ್ಣಗೆ ಸೂಚಿಸಿದ್ದಾರೆ. ಇಂಧನ ಇಲ್ಲವೇ ಲೋಕೊಪಯೋಗಿ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

    ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ. ಟಿ. ದೇವೇಗೌಡ ಅವರು ಲೋಕೋಪಯೋಗಿ ಇಲಾಖೆಯ ಪಟ್ಟು ಹಿಡಿದಿದ್ದಾರೆ. ಮೈಸೂರು ಕ್ಷೇತ್ರದ ಶಾಸಕರುಗಳಾದ ಸಾರಾ ಮಹೇಶ್, ಕೆ ಮಹದೇವ್ ಹಾಗೂ ಅಶ್ವಿನ್ ಕುಮಾರ್‍ರವರು ಜಿಟಿಡಿಯವರಿಗೆ ಸಾಥ್ ನೀಡಿದ್ದಾರೆ. ದೇವೇಗೌಡರು ಚುನಾವಣೆಯಲ್ಲಿ ಜಿಟಿಡಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವ ಮಾತುಕೊಟ್ಟ ಹಿನ್ನೆಲೆಯಲ್ಲಿ ಜಿಟಿಡಿಗೆ ಮಂತ್ರಿಸ್ಥಾನ ಸಿಗುವುದು ಪಕ್ಕಾ ಆಗಿದ್ದು ಖಾತೆ ಯಾವುದು ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?