Tag: ಖರ್ಜೂರ

  • ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಡ್ರೈ ಫ್ರೂಟ್ಸ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಡ್ಸ್ ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

    ಉತ್ತಮ ಆರೋಗ್ಯ: ಅಧಿಕ ಪ್ರಮಾಣದ ಪೌಷ್ಟಿಕಾಂಶಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಅಂಶಗಳು ದೇಹದ ಮಾಂಸಖಂಡ ಹಾಗೂ ಮೂಳೆಗಳ ಅಭಿವೃದ್ಧಿಗೂ ಸಹಾಯ ಮಾಡುತ್ತವೆ. ದೇಹದಲ್ಲಿ ಪ್ರೋಟೀನ್ ಕೊರತೆ ಆಗದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ನಿರ್ವಹಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

    ಜೀರ್ಣಕ್ರಿಯೆ ವೃದ್ಧಿ: ಖರ್ಜೂರದಲ್ಲಿ ಅತಿಯಾದ ನಾರಿನ ಅಂಶಳಿರುತ್ತದೆ. ಇದರಿಂದಾಗಿ ದೇಹದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಜೊತೆಗೆ ಕರುಳಿನ ಕಾರ್ಯವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

    ಅಧಿಕ ರಕ್ತದ ಒತ್ತಡ ನಿಯಂತ್ರಣ: ಪ್ರತಿನಿತ್ಯ ಒಂದರಿಂದ ಎರಡು ಖರ್ಜೂರವನ್ನು ಸೇವಿಸುವುದರಿಂದ ಅಧಿಕ ರಕ್ತದ ಒತ್ತಡವನ್ನು ತಡೆಯುತ್ತದೆ. ಇದರಿಂದಾಗಿ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರವಹಿಸುತ್ತದೆ.

    ರಕ್ತಹೀನತೆ ನಿವಾರಣೆ: ರಕ್ತ ಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡಿ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕವನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಕೆಲಸವನ್ನು ಮಾಡುತ್ತದೆ.

    ಶಕ್ತಿ ಹೆಚ್ಚಳ: ಅಶಕ್ತತೆ ಇದ್ದವರಿಗೆ ಖರ್ಜೂರ ಒಳ್ಳೆಯ ಮದ್ದಾಗಿದೆ. ಇದರಲ್ಲಿ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್, ಮತ್ತು ಗ್ಲೂಕೋಸ್‍ನಂತಹ ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ.

    ಲೈಂಗಿಕ ಆರೋಗ್ಯ ವೃದ್ಧಿ: ಲೈಂಗಿಕ ಶಕ್ತಿಯನ್ನು ಪ್ರಚೋದಿಸುವ ಹಾರ್ಮೋನ್‍ಗಳು ಖರ್ಜೂರ ಸೇವನೆ ಮಾಡುವುದರಿಂದ ಉದ್ದೀಪನಗೊಳ್ಳುತ್ತದೆ. ನಿತ್ಯ ಬೆಳಗ್ಗೆ ಒಂದು ಲೋಟ ಬಿಸಿ ಹಾಲಿನ ಜೊತೆಗೆ ನೆನೆಸಿ ಸೇವಿಸಿದರೆ ಒಂದೆರಡು ತಿಂಗಳಲ್ಲಿಯೇ ಲೈಂಗಿಕ ಸಮಸ್ಯೆಗಳಲ್ಲಿ ಪರಿಹಾರ ಕಾಣಬಹುದು. ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ದೇಹದ ತೂಕ ಹೆಚ್ಚಳ: ಖರ್ಜೂರಗಳಲ್ಲಿ ಕಂಡುಬರುವ ಕ್ಯಾಲೊರಿ ಅಂಶಗಳು ಹಾಲಿನೊಂದಿಗೆ ಮಿಶ್ರಣ ಆಗುತ್ತದೆ. ಇದರಿಂದಾಗಿ ಸಹಜವಾಗಿ ದೇಹದ ತೂಕ ಹೆಚ್ಚಾಗುತ್ತದೆ.ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

  • ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಚಿಕ್ಕಬಳ್ಳಾಪುರ: ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿ ಗ್ರಾಮದ ಬಳಿ ಭರ್ಜರಿಯಾಗಿ ಖರ್ಜೂರ ಬೆಳೆಯಲಾಗಿದೆ. ಬೆಂಗಳೂರು ಮೂಲದ ಕೃಷಿ ಪದವೀಧರ ದಿವಾಕರ್ ಚೆನ್ನಪ್ಪ ಖರ್ಜೂರವನ್ನ ಬೆಳೆದು ಸಾಧನೆ ಮಾಡಿದ್ದಾರೆ.

    ಹೆಚ್ಚಾಗಿ ಮರುಭೂಮಿ ಪ್ರದೇಶಗಳಲ್ಲಿ ಬೆಳೆಯುವ ಖರ್ಜೂರದ ಹಣ್ಣುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಈಚಲು ಹಣ್ಣುಗಳಂತೆ ಹಳದಿ ಬಣ್ಣದ ಈ ಖರ್ಜೂರದ ಹಣ್ಣುಗಳು ಒಣ ಖರ್ಜೂರಕ್ಕಿಂತ ತಿನ್ನಲು ಬಲು ರುಚಿಕರ ಹಾಗೂ ಆರೋಗ್ಯಕರ ಕೂಡ. ದಿವಾಕರ್ ಚೆನ್ನಪ್ಪ ಅವರು ತನ್ನ ತೋಟಕ್ಕೆ ಗ್ರಾಹಕರನ್ನ ಬರ ಮಾಡಿಕೊಂಡು ತಾವು ಬೆಳೆದ ಖರ್ಜೂರವನ್ನ ಮಾರಾಟ ಮಾಡಿ ಕೈ ತುಂಬಾ ಹಣ ಕೂಡ ಗಳಿಸಿದ್ದಾರೆ.

    ಕಳೆದ 4 ವರ್ಷಗಳಿಂದ ಖರ್ಜೂರದ ಫಸಲನ್ನ ಮಾರುಕಟ್ಟೆಗೆ ತರೆದೆ ತನ್ನದೇ ತೋಟಕ್ಕೆ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರನ್ನು ಕರೆದೊಯ್ದು ಖರ್ಜೂರವನ್ನ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ ಫಸಲು ಬಂದಾಗಲೆಲ್ಲಾ ಖರ್ಜೂರದ ಕೊಯ್ಲು ಹಬ್ಬ ಆಚರಿಸುತ್ತಾರೆ. ಹಬ್ಬದ ಅಂಗವಾಗಿ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರಿಗೆಲ್ಲಾ ಆಹ್ವಾನ ನೀಡಿ, ಅವರಿಗೆ ಬೇಕಾದ ಖರ್ಜೂರ ಕಟಾವು ಮಾಡಿಕೊಳ್ಳೋಕೆ ಅವಕಾಶ ಮಾಡಿಕೊಡುತ್ತಾರೆ. ಇನ್ನೂ ತೋಟಕ್ಕೆ ಬಂದ ಗ್ರಾಹಕರು ತಮಗೆ ಬೇಕಾದಷ್ಟು ಖರ್ಜೂರ ಕಟಾವು ಮಾಡಿಕೊಂಡು ಹಣ ಪಾವತಿ ಮಾಡುತ್ತಾರೆ.

    ಈ ಬಾರಿಯೂ ಸಹ ಬೆಂಗಳೂರು ಸೇರಿದಂತೆ ನೆರೆಯ ಆಂಧ್ರ ಹಾಗೂ ಜಿಲ್ಲೆಯ ಹಲವು ಮಂದಿ ತೋಟಕ್ಕೆ ಭೇಟಿ ಕೊಟ್ಟು ಖರ್ಜೂರ ಕಟಾವು ಮಾಡಿಕೊಂಡರು. ಈ ಬಾರಿ ಪ್ರತಿ ಕೆಜಿ ಖರ್ಜೂರಕ್ಕೆ 300 ರೂಪಾಯಿ ನಿಗದಿ ಮಾಡಿದ್ದು, ಒಂದೇ ದಿನ ತೋಟಕ್ಕೆ ಬಂದ ಗ್ರಾಹಕರು 300 ಕೆಜಿ ಖರ್ಜೂರ ಖರೀದಿಸಿದ್ದಾರೆ. ವಿಶೇಷ ಅಂದ್ರೆ ಖರ್ಜೂರದ ಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನ ಬಳಸಿಲ್ಲ. ಸಾವಯುವ ಗೊಬ್ಬರ ಬಳಸಲಾಗಿದೆ. ಹೀಗಾಗಿ ರೈತ ದಿವಾಕರ್ ಚೆನ್ನಪ್ಪರ ಸಾಧನೆ ಇತರರಿಗೆ ಮಾದರಿ ಅಂತ ಖುಷಿಪಟ್ಟರು.

    ಒಟ್ಟಿನಲ್ಲಿ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಬೆಳೆದ ಬೆಳೆಗೆ ಹಣ ಸಿಗದೆ, ಆತಂಕಕ್ಕೆ ಒಳಗಾಗಿ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ರೈತ ದಿವಾಕರ್ ಚೆನ್ನಪ್ಪರಂತೆ ಭಿನ್ನ-ವಿಭಿನ್ನ ಯೋಚನೆ ಮಾಡಿ ಬೆಳೆ ಬೆಳೆದು ಮಾರಾಟ ಮಾಡಬೇಕಿದೆ.