Tag: ಖರೀದಿ

  • 9 ವರ್ಷದ ಬಳಿಕ 8.46 ಟನ್ ಚಿನ್ನ ಖರೀದಿಸಿದ ಆರ್‌ಬಿಐ

    9 ವರ್ಷದ ಬಳಿಕ 8.46 ಟನ್ ಚಿನ್ನ ಖರೀದಿಸಿದ ಆರ್‌ಬಿಐ

    ಮುಂಬೈ: ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 9 ವರ್ಷಗಳ ಬಳಿಕ ಸುಮಾರು 8.46 ಮೆಟ್ರಿಕ್ ಟನ್ ಚಿನ್ನ ಖರೀದಿಸಿದೆ.

    ಜೂನ್ 30ಕ್ಕೆ ಅಂತಿಮವಾದ 2017-18 ಆರ್ಥಿಕ ವರ್ಷದ ವರದಿಯಲ್ಲಿ ನೀಡಿರುವ ಮಾಹಿತಿಯಂತೆ ಸದ್ಯ ಖರೀದಿಸುವ ಚಿನ್ನದೊಂದಿಗೆ ಆರ್‌ಬಿಐ ಬಳಿ ಇರುವ ಚಿನ್ನದ ಪ್ರಮಾಣ 566.23 ಮೆಟ್ರಿಕ್ ಟನ್‍ಗೆ ಏರಿಕೆಯಾಗಿದೆ.

    2009 ನವೆಂಬರ್ ನಲ್ಲಿ 200 ಮೆಟ್ರಿಕ್ ಟನ್ ಚಿನ್ನವನ್ನು ಅಂತರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್)ನಿಂದ ಖರೀದಿ ಮಾಡಲಾಗಿತ್ತು. ಬಳಿಕ ಕಳೆದ 9 ವರ್ಷಗಳಿಂದ ಯಾವುದೇ ಖರೀದಿ ನಡೆದಿರಲಿಲ್ಲ. ಸದ್ಯ ಆರ್‌ಬಿಐ ಚಿನ್ನ ಖರೀದಿ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಸಾಬೀತು ಪಡಿಸಿದೆ.

    ಉಳಿದಂತೆ ಭಾರತದ ಆರ್‌ಬಿಐ ಬಳಿ ಇರುವ ಚಿನ್ನ ಸಂಗ್ರಹದಲ್ಲಿ 292.30 ಟನ್ ಚಿನ್ನವನ್ನು ಮುದ್ರಿಸಿರುವ ನೋಟುಗಳಿಗಾಗಿ ಮೀಸಲಿಡಲಾಗಿದೆ. 273.3 ಟನ್ ಚಿನ್ನ ಬ್ಯಾಂಕಿಂಗ್ ವಿಭಾಗಕ್ಕೆ ಎಂದು ವಿಂಗಡಿಸಲಾಗಿದೆ.

    ಯಾವ ದೇಶದಲ್ಲಿ ಎಷ್ಟು ಚಿನ್ನವಿದೆ?
    ಹಲವು ರಾಷ್ಟ್ರಗಳು ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಸಿಲು ಹಾಗೂ ತುರ್ತು ಆರ್ಥಿಕ ಸಂದರ್ಭಗಳನ್ನು ಎದುರಿಸಲು ಚಿನ್ನ ಸಂಗ್ರಹಣೆ ಮಾಡುತ್ತದೆ. ಇನ್ನು ಸಂಗ್ರಹಣ ಪ್ರಮಾಣದಂತೆ ಹೇಳುವುದಾದರೆ ವಿಶ್ವದಲ್ಲಿ ಭಾರತ 10ನೇ ಅತಿದೊಡ್ಡ ದೇಶವಾಗಿದೆ. ಅತಿ ಹೆಚ್ಚು ಚಿನ್ನ ಸಂಗ್ರಹಿಸಿದ ರಾಷ್ಟಗಳ ಪಟ್ಟಿಯಲ್ಲಿ ಅಮೆರಿಕ (8,133 ಟನ್), ಜರ್ಮನಿ (3,371), ಇಟಲಿ (2,451), ಫ್ರಾನ್ಸ್ (2,436), ರಷ್ಯಾ (1,909), ಚೀನಾ (1,842), ಸ್ವಿಜರ್ಲೆಂಡ್ (1,040), ಜಪಾನ್ (7,650), ಭಾರತ (566) ಟನ್ ಚಿನ್ನ ಸಂಗ್ರಹಿಸಿದೆ.

    ಚಿನ್ನದ ಖರೀದಿಯ ಉದ್ದೇಶವೇನು?
    ಬಹುತೇಕ ರಾಷ್ಟ್ರಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹವನ್ನು ನಿಯಮಿತವಾಗಿ ಕಾಯ್ದುಕೊಳ್ಳುತ್ತಿರುತ್ತದೆ. ಚಿನ್ನ, ಹಣ ಅಥವಾ ಹೂಡಿಕೆ ರೂಪದಲ್ಲಿ ವಿದೇಶಿ ವಿನಿಮಯ ಸಂಗ್ರಹ ಮಾಡಲಾಗುತ್ತದೆ. ರೂಪಾಯಿ ಮೌಲ್ಯ ಕುಸಿತವಾದಾಗ ಅಥವಾ ಆರ್ಥಿಕ ಸಂಕಷ್ಟ ಬಂದಾಗ ಚಿನ್ನವನ್ನು ಒತ್ತೆಯಿಟ್ಟು ಹಣವನ್ನು ತರಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    ಕೊಪ್ಪಳ: ಕಳೆದೆರಡು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ಜಿಲ್ಲೆಯ ಮಳೆಯಾಶ್ರಿತ ಕೃಷಿಕರು ಕಂಗಾಲಾಗಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಮಳೆಯಾಗಿ ತುಂಗಭದ್ರಾ ಡ್ಯಾಂ ತುಂಬಿದ್ದು, ಆ ಜಿಲ್ಲೆಯ ಒಂದಷ್ಟು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಕಡೆ ಕೊಪ್ಪಳದ ಗಂಗಾವತಿ ಹಾಗೂ ಕಾರಟಗಿ ಭಾಗದ ಭತ್ತ ಬೆಳೆಗಾರರಿಗೆ ತಮ್ಮ ಭತ್ತ ಮಾರಾಟ ಮಾಡಿದ್ದ ಹಣ ಸಿಕ್ಕಿಲ್ಲ. ಭತ್ತ ಖರೀದಿಸಿದ್ದ ವ್ಯಾಪಾರಿ ಉತ್ಪನ್ನದ ಜೊತೆ ಪರಾರಿಯಾಗಿದ್ದಾನೆ.

    ಬಳ್ಳಾರಿ ಮೂಲದ ವೀರೇಶ್ ಎಂಬಾತ ರೈತರಿಗೆ ಮೋಸ ಮಾಡಿದ ವ್ಯಾಪಾರಿ. ವೀರೇಶ್ ಎರಡು ವರ್ಷಗಳಿಂದ ಗಂಗಾವತಿಯ ರಾಂಪುರದಲ್ಲಿ ವಿಶ್ವಾಸ್ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ವ್ಯಾಪಾರ ನಡೆಸುತ್ತಿದ್ದನು. ಈ ವರ್ಷದ ಜನವರಿ ತಿಂಗಳಿಂದ ಜೂನ್‍ವರೆಗೆ ಸುಮಾರು 100ಕ್ಕೂ ಹೆಚ್ಚು ರೈತರಿಂದ 2.5 ಕೋಟಿ ಮೌಲ್ಯದ ಭತ್ತ ಖರೀದಿಸಿದ್ದ. ಮಾರುಕಟ್ಟೆಯಲ್ಲಿ ಪ್ರತಿ ಭತ್ತದ ಚೀಲಕ್ಕೆ 1100 ರೂಪಾಯಿ ಇತ್ತು. ಆದರೆ ವೀರೇಶ್ 1,250 ರೂಪಾಯಿಗೆ ಭತ್ತ ಖರೀದಿ ಮಾಡಿದ್ದನು.

    ಭತ್ತ ಖರೀದಿಸುವ ವೇಳೆ ಸ್ಥಳೀಯರಾದ ನಾಸೀರ್ ಮತ್ತು ನಾಗೇಶ್ವರ್ ರಾವ್ ಇಬ್ಬರು ವೀರೇಶ್‍ನಿಗೆ ಸಾಥ್ ನೀಡಿದ್ದರು. ರೈತರಿಗೆ ಹಣ ನೀಡುವ ಬದಲು ವೀರೇಶ್ ಚೆಕ್ ನೀಡಿದ್ದನು. ಎರಡು ತಿಂಗಳ ನಂತರ ಹಣ ಡ್ರಾ ಮಾಡುವಂತೆ ಹೇಳಿ ನಾಪತ್ತೆಯಾಗಿದ್ದಾನೆ.

    ಎರಡು ತಿಂಗಳು ನಂತರ ಬ್ಯಾಂಕಿಗೆ ಹೋದಾಗ ಚೆಕ್ ಬೌನಸ್ ಆಗಿದೆ. ನಂತರ ರೈತರು ವೀರೇಶ್‍ನನ್ನು ಸಂಪರ್ಕಿಸಿದ್ರೆ ಆತ ಊರು ತೊರೆದಿರುವ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನಾಸಿರ್ ಮತ್ತು ನಾಗೇಶ್ವರರಾವ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.