Tag: ಖರೀದಿ

  • ಸೈಟ್‍ಗಾಗಿ ನೀಡಿದ ಹಣ ವಾಪಸ್ ನೀಡದ್ದಕ್ಕೆ ಶಿಕ್ಷಕ ಆತ್ಮಹತ್ಯೆ

    ಸೈಟ್‍ಗಾಗಿ ನೀಡಿದ ಹಣ ವಾಪಸ್ ನೀಡದ್ದಕ್ಕೆ ಶಿಕ್ಷಕ ಆತ್ಮಹತ್ಯೆ

    – ಡೆತ್‍ನೋಟ್‍ನಲ್ಲಿ ಆತ್ಮಹತ್ಯೆಗೆ ಕಾರಣ ಬರೆದಿಟ್ಟ

    ಬಾಗಲಕೋಟೆ: ಸೈಟ್ ಗಾಗಿ ಮುಂಗಡ ಕೊಟ್ಟ ಹಣ ವಾಪಸ್ ಕೊಡದ ಹಿನ್ನೆಲೆ ಹೈಸ್ಕೂಲ್ ಶಿಕ್ಷಕರೊಬ್ಬರು, ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಮೂಗನೂರಲ್ಲಿ ನಡೆದಿದೆ.

    ಹನುಮಂತ ಪೂಜಾರ(42) ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಕಮತಗಿ ಪಟ್ಟಣದದ ಹೊಳೆಹುಚ್ಚೇಶ್ವರ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನ್ನ ಸಾವಿಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ಮರಳಿ ಕೊಟ್ಟಿರೋದಿಲ್ಲ, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದು ವಂಚನೆ ಮಾಡಿರುವ ವ್ಯಕ್ತಿಯ ಫೋನ್ ನಂಬರ್ ಅನ್ನು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.

    ಕಮತಗಿ ಪಟ್ಟಣದಲ್ಲಿ ಸೈಟ್ ಖರೀದಿಮಾಡಲು ಹನುಮಂತ ಮುಂದಾಗಿದ್ದರು. ತಿಮಣ್ಣ ಅವರಿಗೆ ಸೇರಿದ ಸೈಟ್ ಇದಾಗಿದ್ದು, 12 ಲಕ್ಷಕ್ಕೆ ಮಾತುಕತೆ ಮಾಡಲಾಗಿತ್ತು. ಮುಂಗಡವಾಗಿ ತಿಮ್ಮಣ್ಣ ಹಗೆದಾಳಗೆ ಮೂರು ಲಕ್ಷ ಹಣವನ್ನು ಹನುಮಂತ ನೀಡಿದ್ದರು. ತಿಮ್ಮಣ್ಣ ಹಣ ವಾಪಸ್ ಕೇಳಿದರೆ ಕೊಟ್ಟಿರಲಿಲ್ಲ. ಇದರಿಂದ ಮನನೊಂದ ಹನುಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ

    ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ

    – 1 ಸಾವಿರ ಟನ್ ಭತ್ತ ಖರೀದಿ
    – ಕ್ವಿಂಟಾಲ್‌ಗೆ 100 ರೂ.ಹೆಚ್ಚಳ, ನಾಲ್ಕೇ ದಿನದಲ್ಲಿ ಹಣಪಾವತಿ

    ರಾಯಚೂರು: ಒಂದೆಡೆ ದೇಶದ ರಾಜಧಾನಿಯಲ್ಲಿ ರೈತರು ಹೊಸ ಕೃಷಿ ನೀತಿಗಳನ್ನ ವಿರೋಧಿಸಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ  ದೇಶದ ಒಳಗಡೆ ಖಾಸಗಿ ಕಂಪನಿಗಳು ಆಗಲೇ ಕೃಷಿ ಉತ್ಪನ್ನ ಖರೀದಿಗೆ ಲಗ್ಗೆ ಇಟ್ಟಿವೆ. ರಾಯಚೂರು ಜಿಲ್ಲೆಯಲ್ಲಿ ರೈತರೊಂದಿಗೆ ರಿಲಯನ್ಸ್‌ ಕಂಪನಿ ಒಪ್ಪಂದ ಮಾಡಿಕೊಂಡು ಭತ್ತ ಖರೀದಿ ನಡೆಸಿದೆ.

    ರಿಲಯನ್ಸ್ ರೀಟೇಲ್ ಲಿಮಿಟೆಡ್ ಸಿಂಧನೂರಿನಲ್ಲಿ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ಜೊತೆ 1,000 ಟನ್ ಸೋನಾಮಸೂರಿ ಭತ್ತ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಬಹುಶಃ ರಾಜ್ಯದಲ್ಲಿ ಇದೇ ಮೊದಲ ಒಪ್ಪಂದ ಇರಬಹುದು ಎನ್ನಲಾಗುತ್ತಿದೆ.

    ಸರ್ಕಾರ ನೀಡುವ ಬೆಂಬಲ ಬೆಲೆಗಿಂತಲೂ ಕ್ವಿಂಟಾಲ್‌ಗೆ 100 ರೂ ಹೆಚ್ಚು ಕೊಟ್ಟು ಖರೀದಿಸಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಭತ್ತಕ್ಕೆ ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 1850 ರೂ.ಇದೆ.‌ ಹೊರಗಡೆ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆಯಿದೆ. ಆದ್ರೆ ರಿಲಯನ್ಸ್ ಕ್ವಿಂಟಾಲ್ ಗೆ 1950 ರೂ ಕೊಟ್ಟು ಖರೀದಿ ನಡೆಸಿದೆ. ಮೊದಲ ಹಂತವಾಗಿ ಈಗ 100 ಟನ್ ಖರೀದಿಗೆ ಬೇಡಿಕೆ ಕೊಟ್ಟಿದೆ. ರೈತರ ಕಂಪನಿ 72 ಟನ್ ಸೋನಾಮಸೂರಿ ಭತ್ತವನ್ನ ಈಗಾಗಲೇ ನೀಡಿದೆ. ಈ ಹಿಂದೆ ಬಿಗ್ ಬಾಸ್ಕೆಟ್ ಕಂಪನಿ ಸಹ ಭತ್ತ ಖರೀದಿಗೆ ಬಂದಿತ್ತು. ಆದರೆ ತಾಂತ್ರಿಕ ಕಾರಣದಿಂದ ಒಪ್ಪಂದ ನಡೆದಿರಲಿಲ್ಲ. ಈಗ ರಿಲಯನ್ಸ್ ರೀಟೇಲ್ ಲಿಮಿಟೆಡ್ ಖರೀದಿ ಪ್ರಕ್ರಿಯೆ ನಡೆಸಿದೆ.

    ನಬಾರ್ಡ್ ಯೋಜನೆಯ ಸಹಾಯದಲ್ಲಿ ನಡೆಯುತ್ತಿರುವ ಸಿಂಧನೂರಿನ ಸ್ವಾಸ್ಥ ರೈತ ಉತ್ಪಾದಕರ ಕಂಪನಿ 1100 ಕ್ಕೂ ಹೆಚ್ಚು ರೈತರನ್ನ ಹೊಂದಿದೆ. ಭತ್ತಕ್ಕೆ ಉತ್ತಮ ಬೆಲೆ ಹಾಗೂ ಕೂಡಲೇ ಹಣ ಸಿಗುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಅಂತ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ಆಡಳಿತ ಮಂಡಳಿ ಹೇಳಿದೆ.

    ಖರೀದಿಯಾಗಿ ನಾಲ್ಕು ದಿನದಲ್ಲಿ ಹಣ ಸಿಗುತ್ತದೆ ತಿಂಗಳುಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಸೂಟ್ ತೆಗೆಯುವ ನೆಪದಲ್ಲಿ ಕೆ.ಜಿ.ಗಟ್ಟಲೇ ಭತ್ತ ತೆಗೆದುಕೊಳ್ಳುವುದಿಲ್ಲ. ಭತ್ತ ಉತ್ತಮ ಗುಣಮಟ್ಟದ್ದಾಗಿದ್ದರೆ ಸಾಕು ನಿಗದಿತ ಬೆಲೆ ಸಿಗುತ್ತದೆ. ಹೀಗಾಗಿ ಈ ಒಪ್ಪಂದ ರೈತರಿಗೆ ಅನುಕೂಲಕರವಾಗಿದೆ ಅಂತ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಶೇಖರ್ ಹುಡೆದ್ ಹೇಳಿದ್ದಾರೆ.

    ಹಿಂದಿನಿಂದಲೂ ರೈಸ್ ಮಿಲ್ ಮಾಲೀಕರು, ವ್ಯಾಪಾರಿಗಳು ಸಹ ನೇರವಾಗಿ ರೈತರಲ್ಲಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ ಎಪಿಎಂಸಿ ಕಾಯಿದೆ ತಿದ್ದುಪಡಿ ಬಳಿಕ ಕಂಪನಿಗಳೇ ನೇರವಾಗಿ ಖರೀದಿಗೆ ಇಳಿಯುತ್ತಿವೆ. ಇದರಿಂದ ರೈಸ್ ಮಿಲ್‌ಗಳ ಮೇಲೂ ಪರಿಣಾಮ ಬೀರಲಿದೆ.

  • ಕೊನೆಗೂ ಭತ್ತ ಖರೀದಿ ಕೇಂದ್ರ ಆರಂಭ –  1 ಕ್ವಿಂಟಾಲ್‌ಗೆ ಎಷ್ಟು ದರ?

    ಕೊನೆಗೂ ಭತ್ತ ಖರೀದಿ ಕೇಂದ್ರ ಆರಂಭ – 1 ಕ್ವಿಂಟಾಲ್‌ಗೆ ಎಷ್ಟು ದರ?

    – ಕನಿಷ್ಠ ಬೆಂಬಲ ಯೋಜನೆಯಡಿ ಭತ್ತ ಖರೀದಿ
    – ಕೊನೆಗೂ ಭತ್ತ ಖರೀದಿ ಕೇಂದ್ರ ಆರಂಭ

    ಯಾದಗಿರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಭತ್ತವನ್ನು ಖರೀದಿಸಲು ತೀರ್ಮಾನಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್ ಹೇಳಿದ್ದಾರೆ.

    ರೈತರು ಕೃಷಿ ಇಲಾಖೆಯಲ್ಲಿ ಫೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ರೈತರು ಭತ್ತವನ್ನು ನಿಗದಿಪಡಿಸಿರುವ ಅಕ್ಕಿ ಗಿರಣಿಗಳಿಗೆ, ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬಹುದು ಎಂದು ಹೇಳಿದರು.

    ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ 1,868 ರೂ. ಗ್ರೇಡ್ ಎ ಭತ್ತಕ್ಕೆ 1,888 ರೂ.ಗಳ ದರವನ್ನು ಸರ್ಕಾರ ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ಭತ್ತ ಖರೀದಿಯ ಅಧಿಕೃತ ಏಜೆನ್ಸಿಯಾಗಿದ್ದು, ರೈತರು ಡಿಸೆಂಬರ್30 ರವರೆಗೆ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು.

     

    ಕೋವಿಡ್-19 ಎರಡನೆ ಅಲೆ ಹರಡುವಿಕೆ ಹಿನ್ನೆಲೆಯಲ್ಲಿ ರೈತರು ನೋಂದಣಿ ಸಮಯದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

  • ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    – ಮೇಷ್ಟ್ರು ಸರಳತೆಗೆ ರೈತರು ಪಿಧಾ

    ಚಿಕ್ಕಮಗಳೂರು: ಬದುಕಿಗಾಗಿ ಬೆಳೆ ಬೆಳೆದು ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರ ಹೊಲಗಳಿಗೆ ಹೋಗಿ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಾಂಕೇತಿಕವಾಗಿ ರೈತರು ಹೇಳಿದ ಬೆಲೆಗೆ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದಾರೆ.

    ಒಂದೆರಡು ಎಕ್ರೆಯಲ್ಲಿ ರೈತರು ಬದುಕಿಗಾಗಿ ನಾನಾ ಬೆಳೆ ಬೆಳೆದಿರುತ್ತಾರೆ. ಬೆಲೆ ಇದ್ದಾಗ ಬೆಳೆ ಇರಲ್ಲ. ಬೆಳೆ ಇದ್ದಾಗ ಬೆಲೆ ಇರಲ್ಲ. ರಾಜ್ಯದ ರೈತರದ್ದು ಶೋಚನಿಯ ಪರಿಸ್ಥಿತಿ. ರೈತರ ಬಹುಪಾಲು ಜೀವನ ಮಧ್ಯವರ್ತಿಗಳ ಜೇಬು ಸೇರುತ್ತೆ. ಅದರಲ್ಲೂ ಲಾಕ್‍ಡೌನ್ ವೇಳೆಯಲ್ಲಂತೂ ರೈತರ ಸ್ಥಿತಿ ಹೇಳತೀರದ್ದಾಗಿದೆ. ಎಲ್ಲದಕ್ಕೂ ಸರ್ಕಾರದ ಕೈ ಕಾಯದೆ, ಜನಪ್ರತಿನಿಧಿಗಳ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ. ಎಲ್ಲದಕ್ಕೂ ಸರ್ಕಾರವನ್ನೇ ಕಾಯೋದು ಸೂಕ್ತವಲ್ಲ. ಹಾಗಾಗಿ, ನಮ್ಮ ಅಳಿಲೂ ಸೇವೆಯೂ ಇರಲೆಂದು ರೈತರ ಹೊಲಗಳಿಗೆ ಹೋದ ಮಾಜಿ ಶಾಸಕ ವೈ.ಎಸ್.ವಿ.ದತ್ತ ರೈತರಿಂದ 15 ಟನ್ ಕಲ್ಲಂಗಡಿ, 15 ಟನ್ ಟೊಮಾಟೊ ಹಾಗೂ 10 ಟನ್ ಈರುಳ್ಳಿ ಖರೀದಿಸಿದ್ದಾರೆ.

    ಸುಮಾರು ಒಂದೂವರೆ ಲಕ್ಷ ಮೌಲ್ಯದ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದು, ನಾಳೆಯಿಂದ ಕಡೂರು ಹಾಗೂ ಬೀರೂರಿನಿ ಬಡವರಿಗೆ ಈ ಬೆಳೆಯನ್ನ ಹಂಚಲು ಮುಂದಾಗಿದ್ದಾರೆ. ರೈತರ ಹೊಲಗಳಿಗೆ ಭೇಟಿ ನೀಡಿದ್ದ ವೈ.ಎಸ್.ವಿ.ದತ್ತ, ರೈತರಿಂದ ನೇರವಾಗಿ ಖರೀದಿಸಿದ್ದಾರೆ. ಅದೂ ರೈತರು ಹೇಳಿದ ದರಕ್ಕೆ. ಒಂದು ರೂಪಾಯಿ ಹಿಂದೆ-ಮುಂದೆ ಚೌಕಾಸಿ ಮಾಡದೆ ಅವರು ಹೇಳಿದ ದರಕ್ಕೆ ಖರೀದಿಸಿದ್ದಾರೆ. ಒಂದು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ, ಕೊಳ್ಳುವವರಿಲ್ಲದೆ ಹೊಲದಲ್ಲೇ ಬಿಟ್ಟು ಕಂಗಾಲಾಗಿದ್ದ. ಇಂದು ವೈ.ಎಸ್.ವಿ.ದತ್ತ ಹೊಲಕ್ಕೆ ಹೋಗಿ ಕೆ.ಜಿ.ಗೆ ಏಳು ರೂಪಾಯಿಯಂತೆ 15 ಟನ್ ಕಲ್ಲಂಗಡಿ ಖರೀದಿಸಿರೊದು ರೈತನ ಆರ್ಥಿಕ ನಷ್ಟವನ್ನು ಒಂದಷ್ಟು ಕಡಿಮೆ ಮಾಡಿದೆ.

    ಸರಳ ರಾಜಕಾರಣಿ ದತ್ತ: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಧಿಕಾರದಲ್ಲಿರಲಿ ಇಲ್ಲದಿರಲಿ. ಸರಳ ಶಾಸಕ ಎಂದೇ ಖ್ಯಾತಿ. ಎಲ್ಲೆಂದರಲ್ಲಿ ಕುಳಿತುಕೊಳ್ಳುವುದು, ಊಟ-ತಿಂಡಿ ಮಾಡೋದು ಅವರ ಸರಳತನಕ್ಕೆ ಹಿಡಿದ ಕೈಗನ್ನಡಿ. ದತ್ತ ಮೇಷ್ಟ್ರ ಇಂತಹ ಸರಳತನಕ್ಕೆ ಹಲವು ಉದಾಹರಣೆಗಳಿವೆ. ಇಂದೂ ಕೂಡ ತಾಲೂಕಿನ ಎರಡು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬೆಳೆ ಖರೀದಿಸಿ ರೈತರೊಂದಿಗೆ ಮಾತನಾಡಿದ ಅವರ ಕಷ್ಟ-ಸುಖ ಆಲಿಸಿದ ದತ್ತ, ಗೌಡನಕಟ್ಟೆಹಳ್ಳಿಯಲ್ಲಿ ಜನರೇ ತಯಾರಿಸಿದ್ದ ಚಿತ್ರಾನ್ನ ಹಾಗೂ ಬಜ್ಜಿಯನ್ನ ಅದೇ ಜನರ ಮಧ್ಯೆ ಗೋಡಾನ್‍ನಲ್ಲಿ ಕೂತು ಊಟ ಮಾಡಿದರು. ದತ್ತ ಅವರ ಈ ನಡೆ ಹೊಸತೇನಲ್ಲದಿದ್ದರೂ, ಈ ಸರಳತನಕ್ಕೆ ಹಳ್ಳಿಯ ಜನ ಕೂಡ ಫಿದಾ ಆಗಿದ್ದಾರೆ.

  • ಕೈ ನಡುಗಿಸುತ್ತಲೇ ಮದ್ಯ ಖರೀದಿಸಿದ 90ರ ವೃದ್ಧ

    ಕೈ ನಡುಗಿಸುತ್ತಲೇ ಮದ್ಯ ಖರೀದಿಸಿದ 90ರ ವೃದ್ಧ

    ಹಾವೇರಿ: ಸುಮಾರು 40 ದಿನಗಳಿಂದ ಎಣ್ಣೆ ಇಲ್ಲದೆ ಬಾಯಾರಿದ್ದ ಕುಡುಕರಿಕೆ ಇಂದು ಹಬ್ಬದಂತಾಗಿದ್ದು, ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತು ಎಣ್ಣೆ ಖರೀದಿಯಲ್ಲಿ ತೊಡಗಿದ್ದಾರೆ. ಇನ್ನೂ ಹಲವರು ಕಂಠಪೂರ್ತಿ ಕುಡಿದು ತೋರಾಡಿ ಗಲಾಟೆ ಎಬ್ಬಿಸಿದ್ದಾರೆ.

    ಹೌದು 40 ದಿನಗಳ ಬಳಿಕ ಬಾರ್ ಗಳು ತೆರೆದಿದ್ದು, ಬಹಳಷ್ಟು ಕುಡುಕರಿಗೆ ಸಂತೋಷವಾದರೆ, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಬೆಳಗಿನಿಂದ ಸಾಲುಗಟ್ಟಿ ನೀಂತು ಕುಡುಕರು ಎಣ್ಣೆ ಕೊಂಡಿದ್ದಾರೆ. ಈ ಸಾಲಿನಲ್ಲಿ ಮಹಿಳೆಯರು ವೃದ್ಧರೂ ಕಾಣಿಸಿಕೊಂಡಿದ್ದು, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ 90 ವರ್ಷದ ವೃದ್ಧರೊಬ್ಬರು ಸಾಲುಗಟ್ಟಿ ನಿಂತು ಎಣ್ಣೆ ಖರೀದಿಸುವ
    ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ವೃದ್ಧ ಮಾಸ್ಕ್ ಧರಿಸಿ, ಅಂಗಡಿ ಬಳಿ ಸರತಿಯಲ್ಲಿ ನಿಂತು ವ್ಯವಸ್ಥಿತವಾಗಿ ಮದ್ಯ ಖರೀದಿಸಿದ್ದಾರೆ. ಕೈ ನಡುಗಿಸುತ್ತಲೇ ಹಣ ನೀಡಿ, ಮದ್ಯ ಪಡೆದಿದ್ದಾರೆ. ಇನ್ನು ಹಲವು ಯುವಕರು ಸಂತಸದಲ್ಲಿ ತೇಲುತ್ತಿದ್ದು, ಮದ್ಯದಂಗಡಿ ತೆರೆದಿರುವ ಕುರಿತು ವಿಡಿಯೋ ಕಾಲ್ ಮಾಡಿ ತೋರಿಸಿದ್ದಾರೆ. ಹೀಗೆ ವಿವಿಧ ರೀತಿಯ ಪ್ರಕಣಗಳು ರಾಜ್ಯದಲ್ಲಿ ನಡೆದಿವೆ.

  • ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ಮಹಾಮಾರಿ ಸೋಂಕು ರೈತರಿಗೂ ಬೆಂಬಿಡದೇ ಕಾಡುತ್ತಿದ್ದು, ತಾವು ಬೆಳೆದ ಬೆಳೆ, ಹಣ್ಣುಗಳನ್ನು ಮಾರಾಟ ಮಾಡಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ವೇಳೆ ಸರ್ಕಾರವೇನಾದರೂ ಸಹಾಯ ಮಾಡಲಿ ಎಂದು ಗೋಗರೆಯುತ್ತಿದ್ದಾರೆ.

    ಈ ರೀತಿಯ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಬೆಂಬಲವಾಗಿ ನಿಂತಿದ್ದು, ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ತಾವೇ ಸ್ವಂತ ಹಣದಿಂದ ಖರೀದಿ ಮಾಡಿದ್ದಾರೆ. ಜೊತೆಗೆ ಇದನ್ನು ಸಾರ್ವಜನಿಕರಿಗೆ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

    ಹಣ್ಣು ಬೆಳೆಗಾರರಿಗೆ ನಷ್ಟವುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಚಿವರು ತಾವೇ ಖರೀದಿಸಿ, ರೈತರ ಕೈ ಹಿಡಿದಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರು ವಿವಿಧ ಹಣ್ಣುಗಳನ್ನು ಬೆಳೆದು ಕೆಲವು ಕಡೆಗಳಲ್ಲಿ ನಾಶ ಮಾಡಿದ್ದರು. ಆದರೆ ಕೆಲವು ಭಾಗದಲ್ಲಿ ಕಲ್ಲಂಗಡಿ ಬೆಳೆದು ಮಾರಾಟ ಮಾಡಲಾಗದೆ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಬೆಳಗಾರರಿಗೆ ಸಚಿವ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ವಿವಿಧ ಬೆಳೆಗಾರರಿಂದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

    ಅದರಂತೆ ಇಂದು ಈ ಹಣ್ಣುಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಬಳಿ ಹಣ್ಣುಗಳು ತುಂಬಿದ್ದ ವಾಹನಗಳಿಗೆ ಚಾಲನೆ ನೀಡಿದರು. ನಗರದ 35 ವಾರ್ಡ್ ಗಳಿಗೆ ತೆರಳಿ ಅಲ್ಲಿನ ಅರ್ಹ ಬಡವರಿಗೆ ಈ ಹಣ್ಣನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಇಂದು ಸಚಿವ ಈಶ್ವರಪ್ಪ ಮಾಡುತ್ತಿದ್ದಾರೆ.

  • ಮೂರು ದಿನಗಳ ಲಾಕ್‍ಡೌನ್ ಸಡಿಲಿಕೆ- ದ.ಕ.ದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

    ಮೂರು ದಿನಗಳ ಲಾಕ್‍ಡೌನ್ ಸಡಿಲಿಕೆ- ದ.ಕ.ದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

    ಮಂಗಳೂರು: ದಕ್ಷಿಣ ಕನ್ನಡದಲ್ಲಿ 7 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಇಂದು ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದ್ದು, ಜನ ಕೊಳ್ಳಲು ಮುಗಿಬಿದ್ದಿದ್ದಾರೆ. ಖುರ್ಚಿ ಹಾಕಿಕೊಂಡು ಕ್ಯೂ ನಿಂತು ವಸ್ತುಗಳನ್ನು ಖರೀದಿಸುತ್ತಿದ್ದಾರೆ.

    ಇಂದು ಅಗತ್ಯವಸ್ತು ಖರೀದಿಗೆ ಅವಕಾಶ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಜನ ಮನೆಯಿಂದ ಹೊರಬಂದಿದ್ದು, ದಿನಸಿ, ತರಕಾರಿ ಅಂಗಡಿಗಳ ಮುಂದೆ ಭಾರೀ ಕ್ಯೂ ಉಂಟಾಗಿದೆ. ಕುರ್ಚಿ ಹಾಕಿಕೊಂಡು ಸರತಿಯಲ್ಲಿ ಕುಳಿತು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಭಾರೀ ಸಂಖ್ಯೆಯ ವಾಹನಗಳು ರಸ್ತೆಗಿಳಿದಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಮಂಗಳೂರಿನ ಕದ್ರಿ ಬಳಿಯಿರುವ ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿ ಭಾರೀ ಕ್ಯೂ ಉಂಟಾಗಿದೆ. ದಿನಸಿ, ತರಕಾರಿ, ಹಾಲು, ಪೇಪರ್ ಖರೀದಿಗೆ ಜನ ಸಾಲುಗಟ್ಟಿ ನಿಂತಿದ್ದಾರೆ.

    ಮಾಂಸ ಖರೀದಿಗೂ ಸಹ ಜನ ಮುಗಿಬಿದ್ದಿದ್ದು, ಸರತಿಯಲ್ಲಿ ನಿಂತು ಖರೀದಿಸುತ್ತಿದ್ದಾರೆ. ಚಿಕನ್, ಮಟನ್ ಖರೀದಿಗೆ ಮುಗಿಬಿದ್ದಿದ್ದಾರೆ. ಕಳೆದ ಮೂರು ದಿನಗಳಿಂದ ಮಾಂಸ ಸಿಗದ್ದಕ್ಕೆ ಭಾರೀ ಡಿಮ್ಯಾಂಡ್ ಉಂಟಾಗಿದ್ದು, ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿ ಮಾಂಸ ಮಾರಾಟ ಜೋರಾಗಿ ನಡೆದಿದೆ. ಮೀನುಗಾರಿಕೆ ಬಂದ್ ಆಗಿರುವುದರಿಂದ ಮೀನುಗಳು ಸಿಗುತ್ತಿಲ್ಲ. ಹೀಗಾಗಿ ಜನತೆ ಚಿಕನ್, ಮಟನ್ ಮೊರೆ ಹೋಗಿದ್ದಾರೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.

  • 67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    67,490 ರೂ. ನಾಣ್ಯ ನೀಡಿ ದ್ವಿಚಕ್ರ ವಾಹನ ಖರೀದಿಸಿದ- ಎಣಿಸಲು ಬೇಕಾಯ್ತು 3 ಗಂಟೆ

    ಭೋಪಾಲ್: ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು 67,490 ನಾಣ್ಯಗಳನ್ನು ನೀಡಿ ಹೊಂಡಾ ಆಕ್ಟೀವಾ ಖರೀದಿಸಿದ್ದಾರೆ.

    ಸತ್ನಾ ನಿವಾಸಿಯಾಗಿರುವ ರಾಕೇಶ್‍ರಿಗೆ ದ್ವಿಚಕ್ರ ವಾಹನ ಬೇಕಾಗಿತ್ತು. ಈ ವೇಳೆ ಅವರು ಹೊಂಡಾ ಆಕ್ಟೀವಾ ಖರೀದಿಸಲು ನಿರ್ಧರಿಸುತ್ತಾರೆ. ಬಳಿಕ  ನಾಣ್ಯಗಳು ತುಂಬಿರುವ ಬ್ಯಾಗ್ ತೆಗೆದುಕೊಂಡು ‘ಕೃಷ್ಣ ಹೊಂಡಾ ಡೀಲರ್ ಶಿಪ್’ಗೆ ಹೋಗುತ್ತಾರೆ.

    ರಾಕೇಶ್ ಆಕ್ಟೀವಾ 125BSVI ಖರೀದಿಸಲು ನಿರ್ಧರಿಸಿದ್ದರು. ಆಕ್ಟೀವಾ ಖರೀದಿಸಿ 67,490 ರೂ. ಅನ್ನು ನಾಣ್ಯದ ರೂಪದಲ್ಲಿ ಪೇಮೆಂಟ್ ಮಾಡಿದ್ದಾರೆ. ರಾಕೇಶ್ ನೀಡಿದ ನಾಣ್ಯದ ಹಣವನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ಮೂರು ಗಂಟೆ ಬೇಕಾಯಿತು. ಇದನ್ನೂ ಓದಿ: ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಈ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್, ಬೇರೆ ಕುಟುಂಬಗಳಂತೆ ನನಗೂ ಹಾಗೂ ನನ್ನ ಕುಟುಂಬದವರಿಗೂ ದೀಪಾವಳಿ ಹಬ್ಬ ತುಂಬಾನೇ ಮುಖ್ಯ. ದನ್ತೇರಸ್(ಚಿನ್ನ ಅಥವಾ ಹೊಸ ವಸ್ತು ಖರೀದಿಸುವ ದಿನ) ದಿನದಂದು ನನಗೆ ನಾನೇ ನೀಡಿದ ಉಡುಗೊರೆ ಇದು ಎಂದು ಹೇಳಿದ್ದಾರೆ.

    ಈ ಹಿಂದೆ ರಾಜಸ್ಥಾನದ ಜೋಧ್‍ಪುರ್ ನಲ್ಲಿ 17 ವರ್ಷದ ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500ರೂ ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದನು. 13,500 ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ ಬರೋಬ್ಬರಿ ನಾಲ್ಕು ಗಂಟೆ ಬೇಕಾಯಿತು.

  • ಶಾಸಕರ ಖರೀದಿ ಮಾಡಲು ಯೋಗೇಶ್ವರ್ ಗೆ 20, 30 ಕೋಟಿ ಎಲ್ಲಿಂದ ಬಂತು: ಹೆಚ್‍ಡಿಕೆ ಪ್ರಶ್ನೆ

    ಶಾಸಕರ ಖರೀದಿ ಮಾಡಲು ಯೋಗೇಶ್ವರ್ ಗೆ 20, 30 ಕೋಟಿ ಎಲ್ಲಿಂದ ಬಂತು: ಹೆಚ್‍ಡಿಕೆ ಪ್ರಶ್ನೆ

    ರಾಮನಗರ: ನಾನು ಸಿಎಂ ಆಗಿದ್ದಾಗ ಪಾಪದ ಹಣವನ್ನು ಶೇಖರಣೆ ಮಾಡಿ 10 ಜನ ಎಂಎಲ್‍ಎಗಳನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿರಲಿಲ್ಲವೇ? 20, 30 ಕೋಟಿಯನ್ನು ಎಂಎಲ್‍ಎಗಳಿಗೆ ಕೊಟ್ಟು ಅವರನ್ನು ಖರೀದಿ ಮಾಡಿ ನನ್ನ ಸರ್ಕಾರವನ್ನು ಬೀಳಿಸಿದರು. ಅದರ ನೇತೃತ್ವವನ್ನು ಮಾಜಿ ಶಾಸಕ ಯೋಗೇಶ್ವರ್ ವಹಿಸಿಕೊಂಡಿದ್ದರು. ಅವರಿಗೆ ಆ ಹಣ ಎಲ್ಲಿಂದ ಬಂತು ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‍ಎಸ್‍ಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು ನಾನು ಮಾಡಿದ ಸಾಲಮನ್ನಾ ಯೋಜನೆ ಸರ್ಟಿಫಿಕೇಟ್ ಸಿಗಲಿಲ್ಲ. ಸಾಲ ಮನ್ನಾ ಯೋಜನೆಯನ್ನಾ ಕೆಲ ಮೀಡಿಯಾದವರು ಅಪಪ್ರಚಾರವನ್ನ ಮಾಡಿದರು. ನಾನು ಸಾಲಮನ್ನಾ ಮಾಡುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುವ ಕೆಲಸಕ್ಕೆ ಕೈಹಾಕಲಿಲ್ಲ ಎಂದು ಹೇಳಿದರು.

    224 ಕ್ಷೇತ್ರಗಳಲ್ಲಿ ಎಷ್ಟು ಕುಟುಂಬಗಳಿಗೆ ಸಾಲಮನ್ನಾ ಯೋಜನೆಯ ಪಲಾನುಭವಿಗಳಿದ್ದಾರೆ ಎಂಬ ಬುಕ್ ಮಾಡುತ್ತಿದ್ದು ಅದನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ಆಗಲಾದರೂ ಮಾಧ್ಯಮದವರು ಏನ್ ಮಾಡುತ್ತಾರೆ ನೋಡೋಣ? ಅಧಿಕಾರದಿಂದ ಕೆಳಗಿಳಿದು ಬರುವಾಗ ಸಂತೋಷದಿಂದಲೇ ಬಂದೆ. ಇದೀಗ ಉತ್ತರ ಕರ್ನಾಟಕದಲ್ಲಿ ಜನ ಬೀದಿಗೆ ಬಿದ್ದಿದ್ದಾರೆ ಮಕ್ಕಳು ಶಾಲೆಗೆ ಹೋಗಲಾಗ್ತಿಲ್ಲ. ಸರ್ಕಾರಕ್ಕೆ ಅವರ ಬಗ್ಗೆ ಗಮನವಿಲ್ಲ ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.

    ನಾನು ಸಿಎಂ ಸ್ಥಾನದಲ್ಲಿ ಕೂತು ಪಾಪದ ಹಣ ಶೇಖರಣೆ ಮಾಡಿ 10 ಶಾಸಕರನ್ನು ಖರೀದಿ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತಲ್ವಾ. ಸರ್ಕಾರ ಬೀಳಿಸೋಕೆ ಲೀಡರ್ ಶಿಪ್ ವಹಿಸಿದ್ದು ಚನ್ನಪಟ್ಟಣದ ಮಾಜಿ ಶಾಸಕ ಯೋಗೇಶ್ವರ್. ಅವರಿಗೆ 20, 30 ಕೋಟಿ ಶಾಸಕರಿಗೆ ನೀಡೋಕೆ ಹಣ ಎಲ್ಲಿಂದ ಬಂತು? ಯಾವ ಪುರುಷಾರ್ಥಕ್ಕೆ ಸರ್ಕಾರವನ್ನು ಬೀಳಿಸಿದರು ಎಂದು ಪ್ರಶ್ನಿಸಿದರು.

  • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    – ಕಡಿಮೆ ದರದಲ್ಲಿ ಜನರಿಗೆ ಎಲೆಕ್ಟ್ರಿಕ್ ವಾಹನ ದೊರೆಯುವಂತಾಗಲು ಈಗ ಇರುವ ಶೇ.12 ತೆರಿಗೆ ವ್ಯಾಪ್ತಿಯ ಬದಲು ಶೇ.5ರ ತೆರಿಗೆ ವ್ಯಾಪ್ತಿ ಒಳಗಡೆ ತರಲು ಜಿಎಸ್‍ಟಿ ಕೌನ್ಸಿಲ್ ಬಳಿ ಮನವಿ ಮಾಡಲಾಗಿದೆ.

    – 2023ರ ಮಾರ್ಚ್ 31ರ ಒಳಗಡೆ ಸಾಲ ಮಾಡಿ 1.50 ಲಕ್ಷ ರೂ. ಮೌಲ್ಯದ ವಾಹನದ ಖರೀದಿಸಿದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ.

    – ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಇದಕ್ಕೆ 10 ಸಾವಿರ ಕೋಟಿ ಅನುದಾನ ನೀಡಲಾಗಿದೆ.

    – ಹೆಚ್ಚಿನ ಸುಧಾರಿತ ಬ್ಯಾಟರಿ ಮತ್ತು ನೋಂದಾಯಿತ ಇ-ವಾಹನಗಳಿಗೆ ಯೋಜನೆಯಡಿ ಪ್ರೋತ್ಸಾಹ. ಜನ ಸಾಮಾನ್ಯರಿಗೆ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಲು ಒತ್ತು.

    – ಆರ್ಥಿಕ ಬೆಳವಣಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಲಿಥಿಯಂ ಬ್ಯಾಟರಿ, ಸೌರ ವಿದ್ಯುತ್ ಚಾರ್ಜಿಂಗ್ ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಸಂಬಂಧಿತವಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವುದು.