Tag: ಖಗೋಳ

  • ಗುರು ಶನಿ ಸಮಾಗಮ – ಸೋಮವಾರ ಸಂಜೆ ಆಗಸದಲ್ಲಿ ಕೌತುಕ

    ಗುರು ಶನಿ ಸಮಾಗಮ – ಸೋಮವಾರ ಸಂಜೆ ಆಗಸದಲ್ಲಿ ಕೌತುಕ

    ಉಡುಪಿ: ಡಿಸೆಂಬರ್ 21 ಇಂದು ಸಂಜೆ 6.15ರಿಂದ 8ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು. 20 ವರ್ಷಗಳಿಗೊಮ್ಮೆ ಈ ದೃಶ್ಯ ಕಾಣಸಿಗುತ್ತದೆ.

    ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

    ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ. ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ (0.1) ಎಂದರು.

    2040ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ವೀಕ್ಷಿಸಬಹುದಾಗಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, ಈಗ ನೋಡದಿದ್ದರೆ ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು. ಹಿಂದೆ, 1623ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು. ಅದಕ್ಕಿಂತ ಹಿಂದೆ 1,226 ರಲ್ಲಿ ಕಂಡಿತ್ತು.

    ಈ ಜೋಡಿ ಗ್ರಹಗಳು ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ನಂತರ ನೈರುತ್ಯದಲ್ಲಿ ಅಸ್ತವಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆ ಆಯೋಜಿಸಲಾಗಿದೆ. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಯುಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

  • ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಬೆಂಗಳೂರು: ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ ಬ್ಲೂ ಮೂನ್ ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಏನಿದು ಬ್ಲೂಮೂನ್? ಯಾವಾಗ ನೀಲಿಚಂದ್ರ ಗೋಚರಿಸ್ತಾನೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

    ಏನಿದು ಬ್ಲೂ ಮೂನ್?
    ಇಂದು ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ 8.19ಕ್ಕೆ ಸರಿಯಾಗಿ ಬ್ಲೂ ಮೂನ್ ಗೋಚರವಾಗಲಿದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ತಿಂಗಳ ಎರಡನೇ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅ.1 ರಂದು ಮೊದಲ ಹುಣ್ಣಿಮೆ ಬಂದಿದ್ದರೆ ಅ.31ರಂದು ಇಂದು ಎರಡನೇ ಹುಣ್ಣಿಮೆ ಬಂದಿದೆ.

    ಎಷ್ಟು ಅವಧಿ ಬೇಕು?
    ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. 30 ದಿನ ತುಂಬಲು ಬಾಕಿ ಉಳಿದ ಸಮವೆಲ್ಲ ಸೇರಿ ಕೊನೆಗೆ ಒಂದು ತಿಂಗಳಿನಲ್ಲಿ 2 ಹುಣ್ಣಿಮೆ ಬರುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ 2018ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. 31 ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ 30 ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪ.

    ಖಗೋಳ ತಜ್ಞರು ಏನು ಹೇಳುತ್ತಾರೆ?
    ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು ಸ್ವಾಭಾವಿಕ ಹುಣ್ಣಿಮೆ. ಆದರೆ ಅಪರೂಪ ಅಷ್ಟೇ. ಎಲ್ಲಾ ಹುಣ್ಣಿಮೆಯ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂಮೂನ್ ಎಂದಾಕ್ಷಣ ಇಂದು ಚಂದಿರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂಮೂನ್‍ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ಲಾನಿಟೋರಿಯಂ ಹಿರಿಯ ವಿಜ್ಞಾನಿ ಡಾ.ಆನಂದ್ ಹೇಳಿದ್ದಾರೆ.

    ಜ್ಯೋತಿಷಿಗಳು ಏನ್ ಹೇಳುತ್ತಾರೆ?
    ಈ ಬಾರಿಯ ಬ್ಲೂ ಮೂನ್ ಶುಭಕಾರಕವಾಗಿದ್ದು ನೀಲಚಂದ್ರನ ದರ್ಶನದಿಂದ ಲೋಕ ಕ್ಷೇಮ. ಶಾಂತಿ, ನೆಮ್ಮದಿ ದಯಪಾಲಿಸುತ್ತದೆ. ಆದರೆ ಕೆಲವು ಜನರಿಗೆ ಈ ಬ್ಲೂ ಮೂನ್ ಬಾಧಕಾರಕವಾಗಲಿದೆ. ಶೀಘ್ರವೇ ಕೋವಿಡ್‍ನಿಂದ ಜಗತ್ತಿಗೆ ಮುಕ್ತಿ ಸಿಗಲಿದೆ ಎಂದು ಗವಿ ಗಂಗಾಧರ ದೇವಾಲಯದ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

    ಈ ಬಾರಿಯ ಹುಣ್ಣಿಮೆಯಿಂದ ಒಂದಿಷ್ಟು ಜನಕ್ಕೆ, ಒಂದಿಷ್ಟು ರಾಶಿಯವರಿಗೆ ಸಮಸ್ಯೆಯಾಗಬಹುದು. ದೇವಿ ಅಥವಾ ಪರಶಿವನ ಆರಾಧನೆಯಿಂದ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿಯ ವೈಪರೀತ್ಯ ಆಗಲಿದೆ. ಕೋವಿಡ್ ಮಹಾಮಾರಿಯಿಂದ ಸದ್ಯದಲ್ಲೇ ಮುಕ್ತಿ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ತಿಳಿಸಿದ್ದಾರೆ.

    ಹಿಂದಿನ ದಿನವೇ ದುರಂತ:
    ಬ್ಲೂ ಮೂನ್ ಹಿಂದಿನ ದಿನವೇ ವಿಶ್ವದ ಹಲವೆಡೆ ಸಾವು ನೋವು ಸಂಭವಿಸಿದೆ. ತೀವ್ರ ಭೂಕಂಪಕ್ಕೆ ಟರ್ಕಿ, ಗ್ರೀಸ್, ಬಲ್ಗೇರಿಯಾ ತತ್ತರಗೊಂಡಿದ್ದು ನೋಡನೋಡುತ್ತಲೇ ಕಟ್ಟಡಗಳು ಧರೆಗೆ ಬಿದ್ದಿದೆ. 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಮಿನಿ ಸುನಾಮಿಯಿಂದ ಟರ್ಕಿಯ ನಗರಗಳಿಗೆ ನೀರು ನುಗ್ಗಿದೆ. ಗ್ರೀಸ್ ರಾಜಧಾನಿ ಅಥೆನ್ಸ್, ಸಮೋವಾ ದ್ವೀಪ ಸಮೂಹ ಮತ್ತು ಬಲ್ಗೇರಿಯಾದಲ್ಲಿಯೂ ಭೂಮಿ ಕಂಪಿಸಿದ್ದು, ಜನ ಮನೆಗಳಿಂದ ಓಡೋಡಿ ಬಂದಿದ್ದಾರೆ.

  • ಖಗೋಳ ಪ್ರಿಯರಿಗೆ ಸಿಹಿ ಸುದ್ದಿ – ಬರಿಗಣ್ಣಿನಲ್ಲಿ ಧೂಮಕೇತು ನೋಡಿ

    ಖಗೋಳ ಪ್ರಿಯರಿಗೆ ಸಿಹಿ ಸುದ್ದಿ – ಬರಿಗಣ್ಣಿನಲ್ಲಿ ಧೂಮಕೇತು ನೋಡಿ

    ಬೆಂಗಳೂರು: ಖಗೋಳ ಪ್ರಿಯರಿಗೆ ಗುಡ್‍ನ್ಯೂಸ್. ಇಂದಿನಿಂದ ಮೇ 25ರವರೆಗೆ ನೀವು ಬರಿಗಣ್ಣಿನಲ್ಲಿ ಬೆಳಗಿನ ಜಾವ ಧೂಮಕೇತುವನ್ನು ವೀಕ್ಷಿಸಬಹುದು.

    ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ‘ಸ್ವಾನ್’ ಹೆಸರಿನ ಧೂಮಕೇತು ಭೂಮಿಯ ಸಮೀಪ ಬರುತ್ತಿದೆ. ಆರಂಭದ ದಿನದಲ್ಲಿ ಬೆಳಿಗ್ಗೆ 4.30ರ ವೇಳೆಗೆ `ಸ್ವಾನ್’ ಧೂಮಕೇತು ಕಾಣಿಸಿಕೊಳ್ಳಲಿದೆ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆರಂಭದ ದಿನಗಳಲ್ಲಿ ಕತ್ತಲಿನಲ್ಲಿ ಇದು ಪ್ರಕಾಶಮಾನವಾಗಿ ಕಾಣುವುದರಿಂದ ಬರಿಗಣ್ಣಿನಲ್ಲಿ ವೀಕ್ಷಿಸಬಹುದು. ಸೂರ್ಯೋದಯದ ನಂತರ ವೀಕ್ಷಿಸಬೇಕಾದರೆ ದೂರದರ್ಶಕ ಬೇಕಾಗುತ್ತದೆ. ದಿನದಿಂದ ದಿನಕ್ಕೆ ಧೂಮಕೇತು ಕಾಣಿಸುವ ಸಮಯ ಬದಲಾಗುತ್ತದೆ.

    ಸ್ವಾನ್ ವಿಶೇಷತೆ ಏನು?
    ಭೂಮಿಯ ಸಮೀಪವೇ ಧೂಮಕೇತುಗಳು ಬರುವುದು ಬಹಳ ಕಡಿಮೆ. ಈ ಸ್ವಾನ್ ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ ಸಂಚರಿಸಲಿದ್ದು, ಸೆಕೆಂಡಿಗೆ ಸೆಕೆಂಡ್‍ಗೆ 40 ಕಿ.ಮೀ.ನಿಂದ 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಮೇ 12 ರಂದು ಭೂಮಿಯಿಂದ 8.3 ಕೋಟಿ ಕಿ.ಮೀ. ದೂರದಲ್ಲಿದ್ದರೆ ಮೇ 27ಕ್ಕೆ ಸೂರ್ಯನ ಸಮೀಪ ಹಾದು ಹೋಗುತ್ತದೆ.

    ದಿನದಿಂದ ದಿನಕ್ಕೆ ಸ್ವಾನ್ ಪ್ರಕಾಶ ಹೆಚ್ಚಾದರೂ ಸೂರ್ಯನ ಸೂರ್ಯನ ಸಮೀಪಕ್ಕೆ ಹೋಗುವುದರಿಂದ ಸೂರ್ಯನ ಪ್ರಖರ ಬೆಳಕಲ್ಲಿ ಧೂಮಕೇತು ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದಕ್ಷಿಣ ಗೋಳಾರ್ಧವನ್ನೂ ಪ್ರವೇಶಿಸುವುದರಿಂದ ಕರ್ನಾಟಕ ಸೇರಿದಂತೆ ಭಾರತದ ಹಲವೆಡೆ ಸ್ವಾನ್ ಕಾಣಿಸಲಿದೆ.

  • ಜುಲೈ 2ಕ್ಕೆ ಸೂರ್ಯಗ್ರಹಣ – ಎಲ್ಲೆಲ್ಲಿ ಆಗುತ್ತೆ? ಎಷ್ಟು ಪ್ರಮಾಣದಲ್ಲಿ ಆಗುತ್ತೆ?

    ಜುಲೈ 2ಕ್ಕೆ ಸೂರ್ಯಗ್ರಹಣ – ಎಲ್ಲೆಲ್ಲಿ ಆಗುತ್ತೆ? ಎಷ್ಟು ಪ್ರಮಾಣದಲ್ಲಿ ಆಗುತ್ತೆ?

    ಬೆಂಗಳೂರು: ಈ ವರ್ಷದ ಎರಡನೇ ಸೂರ್ಯಗ್ರಹಣಕ್ಕೆ ಕೌಂಟ್ ಡೌನ್ ಆರಂಭಗೊಂಡಿದೆ. ಸೂರ್ಯ ಗ್ರಹಣ ಎನ್ನುವುದು ಭೌಗೋಳಿಕವಾಗಿ ಒಂದು ವಿದ್ಯಮಾನ ಎನಿಸಿಕೊಂಡರೂ ಧಾರ್ಮಿಕವಾಗಿ ಅವುಗಳನ್ನು ಸೂತಕ ಅಥವಾ ಋಣಾತ್ಮಕ ಎನ್ನುವ ರೀತಿಯಲ್ಲಿ ಪರಿಗಣಿಸಲಾಗುತ್ತದೆ.

    ಇದೇ ಜುಲೈ 2ರಂದು ಸೂರ್ಯಗ್ರಹಣ ಸಂಭವಿಸಲಿದೆ. ತಿಂಗಳ ಪ್ರಾರಂಭದಲ್ಲೇ ಸಂಭವಿಸುವ ಈ ಸೂರ್ಯ ಗ್ರಹಣವು ಒಟ್ಟು 4 ನಿಮಿಷ 33 ಸೆಕೆಂಡ್‍ಗಳ ಕಾಲ ಸಂಭವಿಸಲಿದೆ. ಕೊನೆಯದಾಗಿ 2017ರ ಆಗಸ್ಟ್ ನಲ್ಲಿ 2 ನಿಮಿಷ 40 ಸೆಕೆಂಡ್‍ಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಆಗಿತ್ತು. ಈ ವರ್ಷದ ಏಕೈಕ ಪೂರ್ಣ ಸೂರ್ಯ ಗ್ರಹಣ ಇದಾಗಿದೆ.

    ದಕ್ಷಿಣ ಪೆಸಿಫಿಕ್ ಸಾಗರ, ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣವು ಗೋಚರವಾಗಲಿದೆ. ದಕ್ಷಿಣ ಅಮೆರಿಕ ಸೇರಿದಂತೆ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರವಾಗುವ ಸಾಧ್ಯತೆಯಿದೆ.

    ಪೂರ್ಣ ಸೂರ್ಯಗ್ರಹಣ ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸಂಭವಿಸಲಿದೆ. ಗ್ರಹಣದ ಮೊದಲ ಒಹಿನೋ ದ್ವೀಪದಲ್ಲಿ ಸ್ಥಳೀಯ ಕಾಲಮಾನ 10.24ಕ್ಕೆ ಆರಂಭವಾಗುತ್ತದೆ. ನಂತರ ಆಗ್ನೇಯದ ಕಡೆಗೆ ಸಾಗಲಿದೆ.

    ಎರಡು ವರ್ಷದ ಹಿಂದೆ ಆಗಿದ್ದ ಅವಧಿಯ ಎರಡರಷ್ಟು ಪ್ರಮಾಣದಲ್ಲಿ ಈ ಬಾರಿಯ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಗ್ರಹಣ ಸಂಭವಿಸುವ ವೇಳೆ ರಾತ್ರಿ ಆಗಿರುವುದರಿಂದ ಇಲ್ಲಿ ಕಾಣಿಸುವುದಿಲ್ಲ.

    ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ಸಮಾನಾಂತರ ರೇಖೆಗೆ ಬಂದು, ಸೂರ್ಯನ ಕಿರಣಗಳನ್ನು ಭೂಮಿಗೆ ತಲುಪದಂತೆ ಚಂದ್ರನು ತಡೆಯುವ ಪ್ರಕ್ರಿಯೆಯನ್ನು ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.

    ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನೆ. ಹಾಗಾಗಿ ಚಂದ್ರನಂತಹ ಸಣ್ಣ ಉಪಗ್ರಹವು ಭೂಮಿಯ ಮೇಲೆ ಪ್ರತಿಬಿಂಬಿಸುವ ಸೂರ್ಯನ ಬೆಳಕನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

    ಗ್ರಹಣದ ಸಂದರ್ಭದಲ್ಲಿ ಪರಿಸರವು ಸಾಕಷ್ಟು ಕಲುಷಿತವಾಗುವುದು. ಇದರ ಪ್ರಭಾವ ಎಲ್ಲಾ ಜೀವ ಸಂಕುಲಗಳ ಮೇಲೆ ಪರಿಣಾಮ ಬೀರುವುದು. ಅಂತಹ ಸಂದರ್ಭದಲ್ಲಿ ಮನೆಯಿಂದ ಆಚೆ ಹೋಗಬಾರದು. ದೇವರ ನಾಮ ಸ್ಮರಣೆ ಮಾಡುವುದರ ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ನಿಯಂತ್ರಿಸಬೇಕು ಎನ್ನುವ ನಂಬಿಕೆಯಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]