Tag: ಕ್ಷೇತ್ರ ಶಿಕ್ಷಣಾಧಿಕಾರಿ

  • ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಕೋಲಾರ: ತನ್ನ ಕಚೇರಿಯ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.

    ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸ್ವತಃ ತಮ್ಮ ಕಚೇರಿಯ ಶೌಚಾಲಯವನ್ನು ಇಂದು ಶುದ್ಧ ಮಾಡುವ ಮೂಲಕ ಸಾವಿರಾರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಕಚೇರಿಯ ಶೌಚಾಲಯವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

    ಶಿಕ್ಷಕರು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಕಲ್ಪನೆ ಪ್ರಧಾನಿ ಮೋದಿ ಅವರಿಂದ ಆರಂಭವಾಗಿದ್ದು, ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಒಂದು ವರ್ಷದ ಹಿಂದೆ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾದರಿಯಾಗಿದ್ದರು. ಅದರಂತೆ ಕೋಲಾರ ಬಿಇಓ ಶೌಚಾಲಯ ಸ್ವಚ್ಛ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಬಿಇಓ ನಾಗರಾಜ್‍ಗೌಡ ಅವರ ಶೌಚಾಲಯ ಸ್ವಚ್ಛ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    ಕೊಪ್ಪಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ.

    ಶಾಲೆಯಲ್ಲಿ ಶಿಕ್ಷಕನಾಗಿರುವ ಇಬ್ರಾಹಿಂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಶಿಕ್ಷಕನ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ವಿಷಯ ತಿಳಿದ ಬಳಿಕ ಕೋಪಗೊಂಡ ಬಾಲಕಿಯ ಪೋಷಕರು ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಈ ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿದ್ದಾರೆ. ಹಾಗೆಯೇ ಮೊದಲು ಪ್ರಕರಣದ ತನಿಖೆ ನಡೆಸಲಾಗುತ್ತದೆ. ಬಳಿಕ ಶಿಕ್ಷಕನ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿಕ್ಷಣಾಧಿಕಾರಿಗಳ ಹೊಸ ಐಡಿಯಾ-ರಂಗೋಲಿ ಹಾಕೋದರಲ್ಲಿ ಹುಡುಗ್ರು ಫುಲ್ ಬ್ಯುಸಿ

    ಶಿಕ್ಷಣಾಧಿಕಾರಿಗಳ ಹೊಸ ಐಡಿಯಾ-ರಂಗೋಲಿ ಹಾಕೋದರಲ್ಲಿ ಹುಡುಗ್ರು ಫುಲ್ ಬ್ಯುಸಿ

    ಚಿಕ್ಕೋಡಿ: ಮನೆಯಂಗಳ ಸ್ವಚ್ಛವಾಗಿರಲಿ ಹಾಗೂ ಚೆಂದವಾಗಿ ಕಾಣಲಿ ಎಂಬ ಸಂಕೇತದ ಹಿನ್ನೆಲೆಯಲ್ಲಿ ಮನೆ ಮುಂದೆ ರಂಗೋಲಿ ಹಾಕುತ್ತಾರೆ. ಆದರೆ ಇಲ್ಲಿ ಕೆಲ ವಿದ್ಯಾರ್ಥಿಗಳು ರಂಗೋಲಿ ಹಾಕುತ್ತಲೇ ಅಧ್ಯಯನ ಮಾಡುತ್ತಿದ್ದು, ಇಂತಹ ಹೊಸ ಐಡಿಯಾವನ್ನು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಶ್ನಿಸಲಾಗುವ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ರೇಖಾ ಚಿತ್ರಗಳನ್ನ ರಂಗೋಲಿಯಲ್ಲಿ ಬಿಡಿಸುವ ಮೂಲಕ ವಿದ್ಯಾರ್ಥಿಗಳಿಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ಅವರು ಈ ವಿಧಾನ ಪ್ರಯೋಗ ಮಾಡಿದ್ದಾರೆ.

    ತಮ್ಮ ಓದಿಗೆ ಅನುಕೂಲ ಆಗುವಂತೆ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಬಗೆಗಿನ ರೇಖಾ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತಿದೆ. ಹೀಗಾಗಿ ಈ ವಿಧಾನದಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇಂತಹ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಜೊತೆಗೆ ರಾಜ್ಯದ ಬೇರೆ ಶಾಲೆ ಮಕ್ಕಳಿಗೂ ಕೂಡ ಅನಕೂಲವಾಗಲಿ ಎಂಬುವುದು ಅಧಿಕಾರಿಗಳ ಉದ್ದೇಶವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv