Tag: ಕ್ಷೇತ್ರ

  • ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲು ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ: ಎನ್ ಮಹೇಶ್

    ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲು ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ: ಎನ್ ಮಹೇಶ್

    ಚಾಮರಾಜನಗರ: ಬಿಎಸ್‍ಪಿಯಿಂದ ಉಚ್ಛಾಟಿತನಾಗಿ ಅತಂತ್ರವಾಗಿರುವ ಶಾಸಕ ಎನ್ ಮಹೇಶ್ ಮುಂದಿನ ನಡೆಯೇನು ಎಂಬುದಕ್ಕೆ ಉತ್ತರ ಸಿಕ್ಕಿದೆ.

    ಇಂದು ಕೊಳ್ಳೇಗಾಲದಲ್ಲಿ ಮಾತನಾಡಿದ ಮಹೇಶ್ ಅವರು, ಕ್ಷೇತ್ರದ ಅಭಿವೃದ್ಧಿಯಾದ ದಿನ ನನ್ನ ಕ್ಷೇತ್ರದ ಜನರಿಗೆ ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಹೊತ್ತಿಗೆ ಸಾಕಷ್ಟು ಅನುದಾನ ಬರುವುದಿದೆ. ಅದು ಬಂದರೆ ಪಕ್ಕ ಗುಡ್ ನ್ಯೂಸ್ ಕೊಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದ ಬಸ್ ನಿಲ್ದಾಣ, ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನ ಉದ್ಘಾಟನೆಯಾಗಬೇಕಿದೆ. ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲೂ ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ. ಬಿಜೆಪಿ ಸೇರುವ ಅವಕಾಶ ಓಪನ್ ಇದೆ. 2008ರಿಂದಲೂ ಯಡಿಯೂರಪ್ಪ ಆಪ್ತರು ಎಂದು ಹೇಳುವ ಮೂಲಕ ಮುಂದೆ ನಾನು ಬಿಜೆಪಿ ಸೇರುತ್ತೇನೆ ಎಂಬುವ ಸುಳಿವು ನೀಡಿದ್ದಾರೆ.

  • ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಬಾಗಲಕೋಟೆ: ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಲಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಘಟಪ್ರಭಾ ನದಿ ಪ್ರವಾಹದದಿಂದಾಗಿ ಸರ್ಕಾರಿ ಶಾಲೆ ಮುಳುಗಡೆಯಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳಿಗೆ ಪಾಠ ಮಾಡಲು ಬೇರೆ ಕಟ್ಟಡವಿಲ್ಲ. ಹೀಗಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

    ಶಾಲೆಯ ಕಟ್ಟಡ ಬೀಳುವ ಭಯದಿಂದ ಸಿಬ್ಬಂದಿ ಈಗಾಗಲೇ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆ ಬಂದರೆ ಶಾಲೆಯ ಹೊರಗಡೆ ತಲೆ ಮೇಲೆ ಟಾರ್ಪಲ್ ಹಾಕಿಕೊಂಡು ಪಾಠ ಕೇಳುವ ಅನಿವಾರ್ಯ ಮಕ್ಕಳದ್ದಾಗಿದೆ.

    ಶಾಲಾ ಕಟ್ಟಡ ನೀರಲ್ಲಿ ಮುಳುಗಿ ಹಾಳಾಗಿ ಹೋಗಿದ್ದರಿಂದ ಯಾವಾಗ ಬೀಳುತ್ತೋ ಅನ್ನೋ ಆತಂಕದಲ್ಲಿರುವ ಸ್ಥಳೀಯರು ಇಷ್ಟೆಲ್ಲ ಆದರೂ ಯಾವೊಬ್ಬ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸ್ಥಿತಿ ಆಲಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕೂಡಲೇ ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

  • ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಹಾವೇರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಹಿರೇಕೆರೂರಿನ ಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ. ಅವರ ಈ ತೀರ್ಮಾನಕ್ಕೆ ನಾವು ಬದ್ಧ ಎಂದು ಅವರ ಧರ್ಮಪತ್ನಿ ವನಜಾ ಪಾಟೀಲ್ ಅವರು ಹೇಳಿದ್ದಾರೆ.

    ಇಂದು ಅವರು ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿ.ಸಿ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

    ಹಿರೇಕೆರೂರು ಕ್ಷೇತ್ರದಲ್ಲಿ 38 ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಗೆಲುವು ಪಡೆದಿಲ್ಲ. ಆದರೆ ಬಿ.ಸಿ.ಪಾಟೀಲ್ ಗೆದ್ದಿದ್ದಾರೆ. ಅವರು ಯಾವುದೇ ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ಹಾಗಿದ್ದರೆ ಚುನಾವಣೆಯ ಸಮಯದಲ್ಲಿ ಮನೆ ಸೈಟ್ ಮಾರಾಟ ಮಾಡುತ್ತಿರಲಿಲ್ಲ. ಅವರ ಈ ನಡೆಗೆ ನಾವು ಬದ್ಧರಾಗಿದ್ದೇವೆ ಎಂದು ಪತಿಯ ತೀರ್ಮಾನವನ್ನು ಸಮರ್ಥಿಸಿಕೊಂಡರು.

    ದಕ್ಷಿಣ ಕರ್ನಾಟಕ ಅಭಿವೃದ್ಧಿಯಾಗಿದೆ. ಅದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಅದ್ದರಿಂದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಜನರಿಗೆ ತಿಳಿಸಿ ಹೋಗಿದ್ದಾರೆ. ಜನರಿಗೆ ತಿಳಿಸಿಯೇ ಕ್ಷೇತ್ರಕ್ಕೆ ವಾಪಸ್ ಬರುತ್ತಾರೆ. ರಾಜೀನಾಮೆ ವಾಪಸ್ ಪಡೆಯುವ ಸಾಧ್ಯತೆ ಕಡಿಮೆ ಎಂದು ಈ ವೇಳೆ ತಿಳಿಸಿದರು.

  • ಎಚ್‍ಡಿಡಿ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು: ಪ್ರಜ್ವಲ್

    ಎಚ್‍ಡಿಡಿ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು: ಪ್ರಜ್ವಲ್

    ಹಾಸನ: ದೇವೇಗೌಡರ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು ಎಂಬ ಆಸೆಯಿಂದ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನೂತನ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಜ್ವಲ್ ಅವರು, ನಮ್ಮ ಜಿಲ್ಲೆ ಹಾಗೂ ಇಡೀ ರಾಜ್ಯದ ಜನತೆಗೆ ಎಷ್ಟು ನೋವಾಗಿದೆಯೋ ಅದರ ಎರಡರಷ್ಟು ನೋವು ನಮ್ಮ ಕಾರ್ಯಕರ್ತರಿಗೆ ಆಗಿದೆ. ನಾನು ದೇವೇಗೌಡರ ಸ್ಥಾನ ತುಂಬಿದ್ದೇನೆ ಹೊರತು ಅವರು ನನ್ನ ಸ್ಥಾನವನ್ನು ತುಂಬಿಲ್ಲ. ಇದು ನನ್ನ ತ್ಯಾಗ ಎಂದು ಭಾವಿಸಬೇಡಿ. ಇದು ನನ್ನ ಕರ್ತವ್ಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ನಾನು ರಾತ್ರಿಯೆಲ್ಲ ಬಹಳಷ್ಟು ಯೋಚನೆ ಮಾಡಿದ್ದೇನೆ. ನಾನು ರಾಜಕೀಯದಲ್ಲಿ ಯಾವತ್ತೂ ಕೂಡ ಯೋಚನೆ ಮಾಡದೆ ಏನೂ ಕೆಲಸ ಮಾಡಿಲ್ಲ. ಇಂದು ಯೋಚನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಜಿಲ್ಲೆಯ ಜನತೆ ಮತ್ತು ಯಾರನ್ನು ಕೇಳಿಲ್ಲ. ಆದರೆ ಒಬ್ಬ ಜಿಲ್ಲೆಯ ಜನತೆಯಲ್ಲಿ ಎಲ್ಲರನ್ನೂ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ನಿರ್ಧಾರ ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಹಾಸನ ಜನತೆಯ ಬಳಿ ಕ್ಷಮೆ ಕೇಳಿದ್ದಾರೆ.

    ಇಂದು ದೇವೇಗೌಡರ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು ಎಂಬ ಆಸೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಈ ಬಗ್ಗೆ ನನ್ನ ಕುಟುಂಬದ ಜೊತೆ ಚರ್ಚೆ ಮಾಡಿಲ್ಲ. ಸುದ್ದಿಗೋಷ್ಠಿಗೆ ಬರುವ ಮೊದಲು ನನ್ನ ತಾಯಿಯ ಬಳಿ ಈ ಮಾತು ಹೇಳಿದೆ. ನನ್ನ ತಾಯಿ ನನ್ನ ನಿರ್ಧಾರವನ್ನು ಸಂತೋಷವಾಗಿ ಸ್ವೀಕರಿಸಿದ್ದಾರೆ. ಇಂದು ಎಲ್ಲರೂ ಎಚ್‍ಡಿಡಿಗೆ ಗೌರವ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರೆ ಎಲ್ಲರೂ ಒಪ್ಪುವಂತಹ ಕೆಲಸ ಇದು. ಹಾಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

    ಕಾಂಗ್ರೆಸ್ ವರಿಷ್ಠರು ದಿನೇಶ್ ಗುಂಡೂರಾವ್ ಹಾಗೂ ಎಂ.ಬಿ ಪಾಟೀಲ್ ಅವರು ದೇವೇಗೌಡರನ್ನು ಮಾತನಾಡಿಸಿ ಹೋಗಿದ್ದಾರೆ. ಗುರುವಾರ ರಾತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾನು ನನ್ನ ನಿರ್ಧಾರವನ್ನು ಅವರ ಬಳಿ ಇಟ್ಟಿದ್ದೇನೆ. ಅವರು ನನ್ನ ನಿರ್ಧಾರವನ್ನು ಸ್ವೀಕಾರ ಮಾಡಿದರೆ ಜಿಲ್ಲೆ ಜನತೆಗೆ ಗೌರವ ನೀಡಿದಂತೆ ಆಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ನನ್ನ ನಿರ್ಧಾರವನ್ನು ದೇವೇಗೌಡರು ಒಪ್ಪಿಕೊಂಡಿಲ್ಲ ಎಂದರೆ ನಾನು, ನಮ್ಮ ಕಾರ್ಯಕರ್ತರು, ಪಕ್ಷದ ಹಿರಿಯ ಮುಖಂಡರು, ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರು ಎಲ್ಲರೂ ಸೇರಿ ಅವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾನು ಸಂತೋಷದಿಂದ ದೇವೇಗೌಡರನ್ನು ಅವರ ಕ್ಷೇತ್ರಕ್ಕೆ ಕರೆದುಕೊಂಡು ಬಂದು ಅವರನ್ನು ಮತ್ತೆ ಗೆಲ್ಲಿಸಬೇಕು. 2005ರಲ್ಲಿ ಅವರು ಹೇಗೆ ಮೂರುವರೆ ಲಕ್ಷ ಮತದಿಂದ ಗೆದ್ದಿದ್ದರೋ ಅದೇ ವಿಜಯೋತ್ಸವವನ್ನು ನಾನು ಇಲ್ಲಿ ಕೊಡಬೇಕು ಎಂಬ ಆಸೆಯಿಂದ ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದರು.

    ನಾನು ಜನರಿಗೆ ಯಾವಗಲೂ ಚಿರಋಣಿ ಆಗಿರುತ್ತೇನೆ. ಅವರ ಪ್ರೀತಿ ವಿಶ್ವಾಸದಿಂದ ಹಗಲು ರಾತ್ರಿ ಕಷ್ಟಪಟ್ಟು ನನಗೆ ಗೆಲುವು ಕೊಟ್ಟಿದ್ದಾರೆ. ಇದು ನಾನು ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ. ಒಬ್ಬ ವ್ಯಕ್ತಿಗೆ ಆತನ ಮೊದಲನೇ ಗೆಲುವು ಯಾವತ್ತಿಗೂ ಅದು ಎದೆಯಲ್ಲಿ ಉಳಿದು ಬಿಡುತ್ತದೆ. ಹಾಗಾಗಿ ಎಂದಿಗೂ ಅದು ನನ್ನ ಎದೆಯಲ್ಲಿ ಉಳಿದು ಬಿಡುತ್ತದೆ. ನಾನು ಜನರಿಗೆ ಗೌರವ ಕೊಡುತ್ತೇನೆ. ನನ್ನ ನಿರ್ಧಾರದಿಂದ ರಾಜ್ಯದ ರೈತರಿಗೆ ಅನೂಕಲ ಆಗುತ್ತೆ ಎಂಬ ಭಾವನೆಯಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.

  • ಒಂದು ಕ್ಷೇತ್ರ ಬಿಟ್ಟು, ಮಂಡ್ಯದ ಎಲ್ಲ ಕ್ಷೇತ್ರಗಳಲ್ಲಿ ಯಶ್ ಪ್ರಚಾರ

    ಒಂದು ಕ್ಷೇತ್ರ ಬಿಟ್ಟು, ಮಂಡ್ಯದ ಎಲ್ಲ ಕ್ಷೇತ್ರಗಳಲ್ಲಿ ಯಶ್ ಪ್ರಚಾರ

    ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಧುಮಕಲಿರುವ ಯಶ್ ಒಂದು ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

    ಸುಮಲತಾ ಅವರ ತಂಡ ದರ್ಶನ್, ಯಶ್ ಪ್ರಚಾರ ಕಾರ್ಯದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯಶ್ ಕೆ.ಆರ್ ನಗರ ಹೊರತುಪಡಿಸಿ ಮಂಡ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಯಶ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಯಶ್ ಏ.2 ಶ್ರೀರಂಗಪಟ್ಟಣ, ಏ.3 ಶ್ರೀರಂಗಪಟ್ಟಣ, ಏ.4 ಪಾಂಡವಪುರ, ಏ.5 ಮಳವಳ್ಳಿ, ಏ.6 ಮತ್ತು 7 ಯುಗಾದಿ, ಏ.8 ಮಳವಳ್ಳಿ, ಏ.9 ಮಂಡ್ಯ, ಏ.10 ಮಂಡ್ಯ ಮತ್ತು ಮದ್ದೂರು, ಏ.11 ಮದ್ದೂರು, ಏ.12 ನಾಗಮಂಗಲ, ಏ.13 ನಾಗಮಂಗಲ, ಮತ್ತು ಏ.16 ರ್ಯಾಲಿಯಲ್ಲಿ ಪಾಲ್ಗೊಳಲಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್ ನಗರಕ್ಕೆ ಯಶ್ ಹೋಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಸ್ನೇಹಕ್ಕೆ ತಲೆಬಾಗಿ ಯಶ್ ಕೆ.ಆರ್ ನಗರ ಕ್ಷೇತ್ರಕ್ಕೆ ಪ್ರಚಾರ ಹೋಗಲ್ಲ ಎಂದು ಹೇಳಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶ್ ಕೆ.ಆರ್ ನಗರದಲ್ಲಿ ಜೆಡಿಎಸ್‍ನ ಸಚಿವ ಸಾ.ರಾ ಮಹೇಶ್ ಪರ ಪ್ರಚಾರ ಮಾಡಿದ್ದರು. ಇದೇ ಕಾರಣಕ್ಕೆ ಈಗ ಯಶ್ ಅವರು ಸುಮಲತಾ ಪರ ಪ್ರಚಾರಕ್ಕೆ ಕೆ.ಆರ್ ನಗರಕ್ಕೆ ಹೋಗುತ್ತಿಲ್ಲ ಎನ್ನಲಾಗುತ್ತಿದೆ.

  • ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಲಹೆ ಕೊಟ್ಟ ಮಾಜಿ ಸಿಎಂ

    ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಸಲಹೆ ಕೊಟ್ಟ ಮಾಜಿ ಸಿಎಂ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎನ್ನುವುದು ಇನ್ನು ಕಗ್ಗಂಟಾಗೇ ಉಳಿದಿದೆ. ಖುದ್ದು ಗೌಡರೇ ಈ ವಿಚಾರದಲ್ಲಿ ಗೊಂದಲದಲ್ಲಿದ್ದು, ಯಾವ ಕ್ಷೇತ್ರದಿಂದ ಸ್ಪಧಿಸಿದರೆ ಉತ್ತಮ ಎನ್ನುವ ಚಿಂತೆ ಕಾಡುತ್ತಿದೆ ಎನ್ನಲಾಗುತ್ತಿದೆ.

    ಇದೀಗ ದೇವೇಗೌಡರ ಶಿಷ್ಯ ಎಂದೇ ಕರೆಸಿಕೊಳ್ಳುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಗುರುವಿಗೆ ಈ ವಿಚಾರವಾಗಿ ಟಿಪ್ಸ್ ನೀಡಿದ್ದಾರೆ. ನೀವು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಗೆಲುವು ಸುಲಭವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ನ 5 ಜನ ಹಾಗೂ ಜೆಡಿಎಸ್ ನ ಇಬ್ಬರು ಶಾಸಕರಿದ್ದಾರೆ. ಹೀಗಾಗಿ ಎರಡು ಪಕ್ಷದವರು ಸೇರಿ ಒಟ್ಟಿಗೆ ಕೆಲಸ ಮಾಡಿದರೆ ಗೆಲ್ಲುವುದು ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ತುಮಕೂರಿನಲ್ಲೂ ನೀವು ಗೆಲ್ಲಬಹುದು ಆದರೆ ಅಲ್ಲಿ ಬೇರೊಬ್ಬ ಅಭ್ಯರ್ಥಿ ಹಾಕಿದರು ಗೆಲ್ತಾರೆ. ಆದರೆ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ನೀವು ಸ್ಪರ್ಧಿಸಿದರೆ ಉತ್ತಮ ಎಂದು ಸಿದ್ದರಾಮಯ್ಯ ದೇವೇಗೌಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಈ ವಿಷಯದ ಬಗ್ಗೆ ದೇವೇಗೌಡರು ಸಹ ಯೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಪತಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಚಾಲನೆ!

    ಪತಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಚಾಲನೆ!

    ರಾಮನಗರ: ಸಿಎಂ ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದತ್ತ ಮುಖ ಮಾಡುವುದು ಕಡಿಮೆಯಾಗಿರುವ ಬೆನ್ನಲ್ಲೇ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪತಿ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದು ರಾಮನಗರ ಶಾಸಕಿಯಾಗಿ ಪತ್ನಿ ಅನಿತಾ ಕುಮಾರಸ್ವಾಮಿ ಆಯ್ಕೆ ಆಗಿದ್ದಾರೆ. ಭಾನುವಾರ ರಾಮನಗರ ಕ್ಷೇತ್ರದ ಹಲವೆಡೆ ವಿವಿಧ ಉದ್ಘಾಟನೆ ಕಾರ್ಯಕ್ರಮವಿತ್ತು. ತಮ್ಮ ಕ್ಷೇತ್ರದಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಬಳಿಕ ನೇರವಾಗಿ ಚನ್ನಪಟ್ಟಣಕ್ಕೆ ತೆರಳಿದರು. ಅಲ್ಲದೇ ಚನ್ನಪಟ್ಟಣ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೃತಜ್ಞತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಸಿಎಂ ಕುಮಾರಸ್ವಾಮಿ ಬರುತ್ತಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಕುಮಾರಸ್ವಾಮಿ ಬದಲು ಇದೀಗ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

    ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ದೂರವಿಟ್ಟು ಚನ್ನಪಟ್ಟಣದ ಅಂಬೇಡ್ಕರ್ ಭವನದ ಸುಮಾರು 2.5 ಕೋಟಿ ವೆಚ್ಚದ ಉಳಿದ ಕಾಮಗಾರಿ, ಹಾರೋಕೊಪ್ಪ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಸುವರ್ಣ ಗ್ರಾಮ ಯೋಜನೆಗೆ ಚಾಲನೆ ನೀಡಿದರು. ಇದರ ಜೊತೆಗೆ ಮಾರ್ಚನಹಳ್ಳಿ ಗ್ರಾಮದಲ್ಲಿ ಬಮೂಲ್ ವತಿಯಿಂದ ಹಮ್ಮಿಕೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಕ್ಯಾನ್ ವಿತರಣೆಯನ್ನು ಮಾಡಿದ್ದಾರೆ. ಪತಿಯ ಕ್ಷೇತ್ರದಲ್ಲಿ ಪತ್ನಿ ಶಂಕುಸ್ಥಾಪನೆ ನಡೆಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಬೆಂಗಳೂರು: 15ನೇ ವಿಧಾನಸಭಾ ಚುನಾವಣೆಯೂ ಮುಗಿತು. ಸರ್ಕಾರ ರಚನೆಯೂ ಆಯ್ತು. ಈಗಿನ ರಾಜಕೀಯ ನಾಯಕರಿಗೆನೇ 224 ವಿಧಾನ ಸಭಾ ಕ್ಷೇತ್ರದ ಹೆಸರುಗಳು ನೆನಪಿರೋಲ್ಲ. ಆದ್ರೇ ಇಲ್ಲೊಬ್ಬಳು ಪುಟಾಣಿ ಪೋರಿ 224 ಕ್ಷೇತ್ರದ ಜೊತೆ ಗೆದ್ದ ಅಭ್ಯರ್ಥಿ ಯಾರು ಮತ್ತು ಯಾವ ಪಕ್ಷದವರು ಅಂತಾ ಸಲೀಸಾಗಿ ಹೇಳುತ್ತಾಳೆ.

    ಹೌದು. ಈಗಿನ ಸಮಿಶ್ರ ಸರ್ಕಾರದ ಬಹುತೇಕ ಶಾಸಕರಿಗೆ ಸಡನ್ ಆಗಿ ಕೇಳಿದ್ರೇ, ತಮಗೆ ಬೆಂಬಲ ನೀಡಿರೋ 118 ಶಾಸಕರ ಹೆಸರನ್ನ ಹೇಳೊದಕ್ಕೆ ತಡವರಿಸುತ್ತಾರೆ. ಇನ್ನು 224 ಕ್ಷೇತ್ರದ ಬಗ್ಗೆ ಹೇಳೊದು ಅಂದ್ರೆ ತಮಾಷೆಯ ವಿಷಯವಲ್ಲ. ಆದ್ರೆ 224 ಕ್ಷೇತ್ರದ ಹೆಸರನ್ನ ಮಗ್ಗಿ ಹೇಳೊತರ ಹೇಳಿದ್ದ ಶಿವಮೊಗ್ಗದ ಬಾಲಕ ಇಂದ್ರಜೀತ್ ನ ನೋಡಿದ್ರಿ. ಆದ್ರೇ ಆ ಬಾಲಕನನ್ನ ಕೂಡ ಮೀರಿಸೋ ಪುಟಾಣಿ ಈ ಹುಡುಗಿಯಾಗಿದ್ದು, ಈಕೆ ಈ ಬಾರಿ ಕ್ಷೇತ್ರವಲ್ಲ, ಅಲ್ಲಿ ಗೆದ್ದಿರೋರು ಯಾರು ಮತ್ತು ಯಾವ ಪಕ್ಷದವರು ಅಂತಾ ಹೇಳುತ್ತಾಳೆ.

    ಈ ಪುಟಾಣಿಯ ಹೆಸರು ಸಂಭ್ರಮ. ಬೆಂಗಳೂರಿನ ಸುಂಕದಕಟ್ಟೆಯ ಬಳಿ ಇರೋ ಅಂಜನಾನಗರದ ನಿವಾಸಿಗಳಾದ ಜಾನಕಿ ಮತ್ತು ಶ್ರೀನಿವಾಸ್ ದಂಪತಿಯ ಮುದ್ದಿನ ಮಗಳು. ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರೋ ಈ ಪುಟಾಣಿ ಚತುರೇ ಮುಂದೆ ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿದ್ದಾಳೆ. ತಂದೆ ಶ್ರೀನಿವಾಸ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳಿಗೆ ಇದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಸಂಭ್ರಮಳಾ ಈ ಸಾಧನೆಯ ಬಗ್ಗೆ ಕಾರು ಚಾಲಕನಾಗಿರೋ ತಂದೆ ಸಂಭ್ರಮದಿಂದ ಹೇಳೊದು ಹೀಗೆ, ಬರೀ ಇಷ್ಟೇ ಅಲ್ಲ ನನ್ನ ಮಗಳು 5 ನಿಮಿಷದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಹೇಳುತ್ತಾಳೆ. ಜೊತೆಗೆ 1000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

    ಎಂಟೇ ವರ್ಷದಲ್ಲಿ ಈ ರೀತಿಯ ಸಾಧನೆ ಮಾಡಿರೋ ಈ ಪುಟ್ಟ ಬಾಲಕಿಯ ನೆನಪಿನ ಶಕ್ತಿ ನೋಡಿದ್ರೇ, ಮುಂದೊಂದು ದಿನ ಸಾಧಕಿ ಆಗೊದ್ರಲ್ಲಿ ಅನುಮಾನವಿಲ್ಲ.

  • ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಭಾರತೀಯ ಜನತಾ ಪಕ್ಷ ಕೇವಲ ನಗರದ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲೂ ತನ್ನ ಸಾಮರ್ಥ್ಯವನ್ನು ವೃದ್ಧಿಸಿದೆ.

    ಬಿಜೆಪಿಯನ್ನು ನಗರದ ಜನತೆ ಜಾಸ್ತಿ ಬೆಂಬಲಿಸಿದರೆ, ಗ್ರಾಮೀಣ ಭಾಗದ ಜನತೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ಮಾತಿದೆ. ಗುಜರಾತ್ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಹೀಗಾಗಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿರುವ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಮುಂದಿಟ್ಟಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿದ್ದು ಗ್ರಾಮೀಣ ಭಾಗದಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದೆ.

    ಈ ಬಾರಿ ಎಷ್ಟು ಏರಿಕೆಯಾಗಿದೆ?
    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ 82, ನಗರದಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ 51 ಸ್ಥಾನ, ನಗರಗಳಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.

    2013ರಲ್ಲಿ ಗ್ರಾಮೀಣದಲ್ಲಿ 22, ನಗರದಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಗ್ರಾಮೀಣ ಭಾಗದಲ್ಲಿ ಗೆದ್ದ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ 69, ನಗರದಲ್ಲಿ 35 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

    ಜನತಾ ದಳ ಸ್ಥಾನದ ಪ್ರಮಾಣದಲ್ಲಿ ನಿಖರತೆಯನ್ನು ಮುಂದುವರೆಸಿದ್ದು, 2013 ರಲ್ಲಿ ಗ್ರಾಮೀಣದಲ್ಲಿ 30, ನಗರದಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ 2 ಕ್ಷೇತ್ರ ಕಳೆದುಕೊಂಡು 28 ಸ್ಥಾನ ಗೆದ್ದರೆ, ನಗರ ಭಾಗದಲ್ಲಿ ಒಟ್ಟು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

    ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆದ್ದರೂ ಶೇಖಡವಾರು ಮತಗಳಿಕೆಯ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. 2013 ರಲ್ಲಿ ಕಾಂಗ್ರೆಸ್ 36.6% ಮತ ಪಡೆದಿದ್ದರೆ, ಈ ಬಾರಿ 38% ಮತ ಪ್ರಮಾಣ ಪಡೆದಿದೆ. ಬಿಜೆಪಿ 2013 ರಲ್ಲಿ ಕೇವಲ 19.9% ಮತಗಳನ್ನು ಪಡೆದಿದ್ದರೆ, ಈ ಬಾರಿ 36.2% ರಷ್ಟು ಮತ ಪಡೆದಿದೆ. ಉಳಿದಂತೆ ಜೆಡಿಎಸ್ 2013ರಲ್ಲಿ 20.2% ಮತ ಪಡೆದಿದ್ದರೆ, ಈ ಬಾರಿ 18.4% ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.