Tag: ಕ್ಷೆಮೆ

  • ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    – ರಾಹುಲ್ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ.

    ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಧ್ವಿ ಪ್ರಜ್ಞಾ ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

    ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದರು.

    ಇದರ ಜೊತೆಗೆ ಸಾಧ್ವಿ ಪ್ರಜ್ಞಾ ಅವರು ಈ ರಾಷ್ಟ್ರಕ್ಕಾಗಿ ಗಾಂಧೀಜಿ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಒಂದು ಪಕ್ಷ ನನ್ನನ್ನು ಗುರಿಯಾಗಿಸಿಕೊಂಡು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದರು.

    ಈ ಆರೋಪದ ನಂತರ ಲೋಕಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಸಂಸದರು ಸಾಧ್ವಿ ಪ್ರಜ್ಞಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಈಗ ಸಾಧ್ವಿ ಪ್ರಜ್ಞಾ ಅವರು ಕ್ಷಮೆ ಕೇಳಿದ್ದಾರೆ. ಆದರೆ ಒಬ್ಬ ಸಂಸದೆಯನ್ನು ಟೆರರಿಸ್ಟ್ ಎಂದು ಹೇಳಿದ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಸ್ಪೀಕರ್ ಅವರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

    ಏನಿದು ವಿವಾದ?
    ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.