Tag: ಕ್ಷೀರಭಾಗ್ಯ

  • ಕೆಎಂಎಫ್‌ಗೆ ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ

    ಕೆಎಂಎಫ್‌ಗೆ ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ

    ನವದೆಹಲಿ: ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು(Malnutrition) ನಿವಾರಣೆಗೊಳಿಸಿ ಆರೋಗ್ಯವಂತರನ್ನಾಗಿಸುವ ಸಾಮಾಜಿಕ ಕಳಕಳಿಯೊಂದಿಗೆ ರಾಜ್ಯ ಸರ್ಕಾರವು ಕೆಎಂಎಫ್(KMF) ಸಹಯೋಗದೊಂದಿಗೆ ಆರಂಭಿಸಲಾದ ಕ್ಷೀರಭಾಗ್ಯ(Ksheera Bhagya) ಯೋಜನೆಗೆ ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.

    ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆರಂಭಗೊಂಡಿರುವ ಅಂತರರಾಷ್ಟ್ರೀಯ ಡೈರಿ ಫೆಡರೇಷನ್ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್, ಮಾರುಕಟ್ಟೆ ವಿಭಾಗದ ಅಪರ್ ನಿರ್ದೇಶಕ ಸತೀಶ ಅವರು ಅಂತರರಾಷ್ಟ್ರೀಯ ಡೈರಿ ಫೆಡರೇಷನ್ ಡೈರೆಕ್ಟರ್ ಜನರಲ್ ಕ್ಯಾರೋಲಿನ್ ಇಮೊಂಡ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

    ರಾಜ್ಯದಲ್ಲಿ ಕ್ಷೀರ ಭಾಗ್ಯ ಯೋಜನೆಯು ಈಗಾಗಲೇ 9 ವರ್ಷ ಪೂರೈಸಿದ್ದು, 10ನೇ ವರ್ಷಕ್ಕೆ ದಾಪುಗಾಲು ಹಾಕುತ್ತಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ 55,683 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿಯ ಅಂದಾಜು 64 ಲಕ್ಷ ವಿದ್ಯಾರ್ಥಿಗಳು ಹಾಗೂ 64 ಸಾವಿರ ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷದವರೆಗಿನ 39.50 ಲಕ್ಷ ಮಕ್ಕಳು ಸೇರಿದಂತೆ ರಾಜ್ಯದ ಒಂದು ಕೋಟಿ ಮಕ್ಕಳಿಗೆ 150 ಮಿ.ಲೀ ಹಾಲನ್ನು ವಾರದಲ್ಲಿ 5 ದಿನಗಳವರೆಗೆ ನೀಡಲಾಗುತ್ತಿದೆ. ಇದನ್ನೂ ಓದಿ: ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ

    ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಸಂಸ್ಥೆಯು ಡೈರಿ ಉದ್ಯಮದ ವಿವಿಧ ವಿಭಾಗಗಳಲ್ಲಿ ಹೊಸ ಅವಿಷ್ಕಾರ ಹಾಗೂ ಸಾಧನೆಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದ್ದು, ಈ ವರ್ಷ ಈ ಪ್ರಶಸ್ತಿ ಪುರಸ್ಕಾರಕ್ಕೆ 144 ದೇಶಗಳಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಕೆಎಂಎಫ್‍ನ ಸಾಧನೆಗಳನ್ನು ಗುರುತಿಸಿ ಚೀನಾ ಮತ್ತು ನಾರ್ವೇ ದೇಶಗಳನ್ನು ಹಿಂದಿಕ್ಕಿ ಕ್ಷೀರಭಾಗ್ಯ ಯೋಜನೆಗೆ ಇನ್ನೋವೇಷನ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಮ್ಸ್ ಪ್ರತಿಷ್ಠಿತ ಪ್ರಶಸ್ತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ರಾಯಚೂರು: ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಿಗೆ ಹಾಲಿನ ಪುಡಿ ಸರಬರಾಜು ಮಾಡದೇ ಲಕ್ಷಾಂತರ ರೂ. ಗೋಲ್‍ಮಾಲ್ ಮಾಡಿರುವ ಪ್ರಕರಣ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

    ಆಕಾಶ್ ಎಂ ಗಾಣಿಗ ಗೋಲ್‍ಮಾಲ್ ಮಾಡಿದ ಆರೋಪಿ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಸಮತೋಲನ ಆಹಾರ ನೀಡುವ ಉದ್ದೇಶದಿಂದ ಜಾರಿಗೆ ಬಂದ ಕ್ಷೀರಭಾಗ್ಯ ಯೋಜನೆ ರಾಯಚೂರಿನಲ್ಲಿ ಕಳ್ಳಕಾಕರಿಗೆ ಅನುಕೂಲವಾಗಿದೆ. ದೇವದುರ್ಗ ತಾಲೂಕಿನ ಶಾಲೆಗಳಿಗೆ ಕೆನೆಭರಿತ ಹಾಲಿನ ಪುಡಿ ಸರಬರಾಜು ಮಾಡಲು ಕೆಎಂಎಫ್‍ನಿಂದ ಗುತ್ತಿಗೆ ಪಡೆದಿದ್ದ ಆಕಾಶ್, ಹಾಲಿನ ಪುಡಿ ಸರಬರಾಜು ಮಾಡದೇ ಗೋಲ್‍ಮಾಲ್ ಮಾಡಿದ್ದಾನೆ. ತಾಲೂಕಿನ 14 ಶಾಲೆಗಳಿಗೆ 1,768 ಕೆಜಿ ತೂಕದ 5.10 ಲಕ್ಷ ರೂ. ಮೌಲ್ಯದ ಹಾಲಿನ ಪುಡಿಯನ್ನು ಸರಬರಾಜು ಮಾಡದೇ ವಂಚಿಸಿದ್ದಾನೆ.

    ದೇವದುರ್ಗ ತಾಲೂಕಿನ ಜಾಡಲದಿನ್ನಿ, ಕಮದಾಳ, ಜಾಲಹಳ್ಳಿ, ಸಮುದ್ರ, ರಾಮದುರ್ಗ, ಮಲ್ಲಾಪುರ ಸೇರಿ 14 ಶಾಲೆಗಳ ಮುಖ್ಯೋಪಾಧ್ಯಾಯರ ಸಹಿ ನಕಲು ಮಾಡಿ, ನಕಲಿ ಸೀಲ್ ಬಳಸಿ, ನಕಲಿ ಸ್ವೀಕೃತಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಒಟ್ಟು 49,017 ಕೆಜಿ ತೂಕದ 1.41 ಕೋಟಿ ರೂ. ಮೌಲ್ಯದ ಹಾಲಿನ ಪುಡಿಯನ್ನು ಜುಲೈ, ಅಗಸ್ಟ್ ತಿಂಗಳ ಅವಧಿಯಲ್ಲಿ ಸರಬರಾಜು ಮಾಡಲು ಗುತ್ತಿಗೆ ನೀಡಲಾಗಿತ್ತು. ಆದರೆ 47,249 ಕೆಜಿ ಹಾಲಿನ ಪುಡಿಯನ್ನು ವಿವಿಧ ಶಾಲೆಗಳಿಗೆ ಸರಬರಾಜು ಮಾಡಿ 1,768 ಕೆಜಿ ಹಾಲಿನ ಪುಡಿಯನ್ನು ವಿತರಿಸದೇ ಗೋಲ್‍ಮಾಲ್ ಮಾಡಿದ್ದಾನೆ. ಒಕ್ಕೂಟ, ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ 14 ಶಾಲಾ ಮುಖ್ಯೋಪಾಧ್ಯಾಯರು ಸಭೆ ನಡೆಸಿದಾಗ ಅಕ್ರಮ ಬಯಲಾಗಿದೆ. ಇದನ್ನೂ ಓದಿ:  ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ವಿದ್ಯಾರ್ಥಿಗಳಲ್ಲಿ ಕಂಡುಬರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸಲು, ದೈಹಿಕ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸಲು ಪ್ರೋಟಿನ್ ಮತ್ತು ಕೊಬ್ಬಿನಂಶಗಳನ್ನೊಳಗೊಂಡ ಸಮತೋಲಿತ ಆಹಾರ ನೀಡುವ ಉದ್ದೇಶದಿಂದ ಹಾಗೂ ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಜಾರಿಗೆ ಬಂದ ಕ್ಷೀರ ಭಾಗ್ಯ ಯೋಜನೆ ಕಳ್ಳಕಾಕರಿಂದ ಹಳ್ಳ ಹಿಡಿಯುತ್ತಿದೆ. ಇನ್ನೊಂದೆಡೆ ತಾಂತ್ರಿಕ ಸಮಸ್ಯೆಗಳನ್ನು ಹೇಳಿ ಜಿಲ್ಲೆಯ ಅಂಧ, ಅಂಗವಿಕಲ ಮಕ್ಕಳಿರುವ ವಿಶೇಷ ಶಾಲೆಗಳಿಗೆ ಅಧಿಕಾರಿಗಳು ಹಾಲಿನ ಪುಡಿ ಸರಬರಾಜು ಮಾಡುತ್ತಿಲ್ಲ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಟಿ.ತಿರುಪತೆಪ್ಪ ದೂರು ದಾಖಲಿಸಿದ್ದಾರೆ. ರಾಯಚೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಆಕಾಶ್ ಎಂ ಗಾಣಿಗ ವಿರುದ್ಧ ಪ್ರಕರಣ ದಾಖಲಾಗಿದೆ.

  • ಹಾಲಿನ ಪ್ರೋತ್ಸಾಹ ಧನ 5ರಿಂದ 6 ರೂ.ಗೆ ಏರಿಕೆ

    ಹಾಲಿನ ಪ್ರೋತ್ಸಾಹ ಧನ 5ರಿಂದ 6 ರೂ.ಗೆ ಏರಿಕೆ

    ಬೆಳಗಾವಿ: ಕೆಎಂಎಫ್ ಒಕ್ಕೂಟದಿಂದ ರೈತರ ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿದ್ದ 5 ರೂಪಾಯಿ ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಲಾಗುವುದು ಎಂದು ಕೆಎಂಎಫ್‌ನ ನೂತನ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.

    ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಮೊದಲ ಬಾರಿ ಬೆಳಗಾವಿಯಲ್ಲಿರುವ ಕೆಎಂಎಫ್ ಕಚೇರಿಗೆ ಆಗಮಿಸಿದ್ದರು. ಸೂತನ ಅಧ್ಯಕ್ಷರನ್ನು ಕೆಎಂಎಫ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಹೊಸ ಹಾಲು ಉತ್ಪಾದನಾ ಯಂತ್ರಗಳಿಗೆ ರಿಬ್ಬನ್ ಕಟ್ ಮಾಡುವುದರ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು, ನಾನು ಪ್ರಯತ್ನ ಮಾಡಿದ್ದರೆ ಸಚಿವನಾಗುತ್ತಿದ್ದೆ. ಆದರೆ ಸಚಿವ ಸ್ಥಾನ ಬೇಕಾಗಿರಲಿಲ್ಲ, ಅದರ ಆಸೆ ನನಗಿಲ್ಲ. ಹೊರತಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಅದೇ ರೀತಿ ಈಗ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

    ರೈತ ಸೇವೆ ಮಾಡಲು ಸಚಿವ ಸ್ಥಾನ ಬಿಟ್ಟು ಕೆಎಂಎಫ್ ಅಧ್ಯಕ್ಷನಾಗಿದ್ದೇನೆ. ರೈತರು ಗುಣಮಟ್ಟದ ಹಾಲು ನೀಡಿದರೆ ಪ್ರತಿ ಲೀಟರ್ ಹಾಲಿಗೆ 6 ರೂಪಾಯಿ ಪ್ರೋತ್ಸಾಹ ಧನ ನೀಡುವ ಚಿಂತನೆ ಇದೆ. ಕೆಎಂಎಫ್‌ನಲ್ಲಿ ಅನೇಕ ಸಮಸ್ಯೆಗಳಿದ್ದು ಎಲ್ಲವನ್ನೂ ಸರಿಪಡಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದೇ ಇರುವುದು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ರೈತರಿಗೆ ಪ್ರೋತ್ಸಾಹಧನ ಪಾವತಿ ವಿಳಂಬವಾಗುತ್ತಿದೆ. ಇದೆಲ್ಲವೂ ಸರಿ ಹೋದ ಬಳಿಕ ಪ್ರತಿ ತಿಂಗಳು ಪ್ರೋತ್ಸಾಹಧನ ಆಯಾ ತಿಂಗಳು ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

    ‘ಕ್ಷೀರಭಾಗ್ಯ’ ಯೋಜನೆ ಅಡಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಒದಗಿಸಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಕೆಲವರು ಪುಡಿಯನ್ನು ಮಾರಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ 200 ಮಿ.ಲೀ ಹಾಲನ್ನು ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಹಾಲು ದೊರೆಯಲಿದೆ. ಬೆಳಗಾವಿ, ಮಂಗಳೂರು ಹಾಗೂ ತುಮಕೂರು ಘಟಕಗಳಲ್ಲಿ ಪ್ಯಾಕ್‌ಗಳನ್ನು ಸಿದ್ಧಪಡಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.