Tag: ಕ್ಷಿಪಣಿ

  • ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.

    ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.

  • ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ವಾಷಿಂಗ್ಟನ್: ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಅಮೆರಿಕ ಸುಧಾರಿತ ರಾಕೆಟ್ ಸಿಸ್ಟಮ್‌ಗಳನ್ನು ಕಳುಹಿಸಲು ಒಪ್ಪಿಕೊಂಡಿದೆ.

    ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ 700 ಮಿಲಿಯನ್ ಡಾಲರ್(ಸುಮಾರು 5 ಸಾವಿರ ಕೋಟಿ ರೂ.) ಮೌಲ್ಯದ ಶಸ್ತ್ರಾಸ್ತ್ರ ಪ್ಯಾಕೇಜ್ ಅನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಕಳುಹಿಸುತ್ತಿರುವ ಸುಧಾರಿತ ಲಾಂಗ್‌ರೇಂಜ್ ರಾಕೆಟ್ ಸಿಸ್ಟಮ್‌ಗಳು ರಷ್ಯಾದ ಕ್ಷಿಪಣಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮಾಣು ಅಸ್ತ್ರ ಬಳಸಿದರೆ, ಯುಎನ್‌ಗೆ ನಿರ್ಬಂಧ ಕಠಿಣಗೊಳಿಸಲು ಯತ್ನಿಸುತ್ತೇವೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ

    ಅಮೆರಿಕ ಕಳುಹಿಸುತ್ತಿರುವ ಸುಧಾರಿತ ರಾಕೆಟ್ ಸಿಸ್ಟಮ್‌ಗಳು 80 ಕಿಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಷ್ಯಾ ಹಾಗೂ ಉಕ್ರೇನ್ ಯುದ್ಧ ರಾಜತಾಂತ್ರಿಕತೆಯ ಮೂಲಕ ಕೊನೆಗೊಳ್ಳುತ್ತದೆ. ಆದರೂ ಉಕ್ರೇನ್ ರಕ್ಷಣೆಗೆ ಅಮೆರಿಕ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಬೈಡನ್ ತಿಳಿಸಿದ್ದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭ ಹೊಂದಿದೆ: ಪಾಕ್ ಪ್ರಧಾನಿ

    ಈ ಹಿನ್ನೆಲೆಯಲ್ಲಿ ಬೈಡನ್, ಉಕ್ರೇನ್‌ಗೆ ಹೆಚ್ಚು ಸುಧಾರಿತ ರಾಕೆಟ್ ಸಿಸ್ಟಮ್ ಹಾಗೂ ಇತರ ಅಸ್ತ್ರಗಳನ್ನು ಒದಗಿಸಲು ನಿರ್ಧರಿಸಿದ್ದೇನೆ. ಅವು ಉಕ್ರೇನ್‌ಗೆ ತನ್ನ ಮೇಲೆ ದಾಳಿ ನಡೆಸಬಹುದಾದ ಗುರಿಯನ್ನು ನಿಖರವಾಗಿ ಹೊಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

  • ಕ್ಷಣಮಾತ್ರದಲ್ಲಿ ಎದುರಾಳಿಯನ್ನು ಹೊಡೆದುರಳಿಸಬಲ್ಲ ರಷ್ಯಾದ ಕ್ಷಿಪಣಿ – ಉಡಾವಣೆ ಯಶಸ್ವಿ

    ಕ್ಷಣಮಾತ್ರದಲ್ಲಿ ಎದುರಾಳಿಯನ್ನು ಹೊಡೆದುರಳಿಸಬಲ್ಲ ರಷ್ಯಾದ ಕ್ಷಿಪಣಿ – ಉಡಾವಣೆ ಯಶಸ್ವಿ

    ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಈ ಮಧ್ಯೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರಂತರವಾಗಿ ನಿರ್ಬಂಧನೆಗಳನ್ನು ವಿಧಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಿಂಚಿನ ವೇಗದ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯನ್ನು ರಷ್ಯಾ ಉಡಾಯಿಸಿದ್ದು, ದೃಶ್ಯಾವಳಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾ ಹಂಚಿಕೊಂಡಿರುವ ಈ ಫೋಟೋ ಎದುರಾಳಿ ದೇಶಗಳ ಮೇಲೆ ಒಂದೇ ಹೊಡೆತದಲ್ಲಿ ದಾಳಿ ನಡೆಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ.

    ಶ್ವೇತ ಸಮುದ್ರದಿಂದ ಯುದ್ಧನೌಕೆ ಉಡಾವಣೆ: ಮ್ಯಾಕ್ 9 `ಜಿರ್ಕಾನ್’ ಅಥವಾ `ಸಿರ್ಕಾನ್’ ಹೆಸರಿನ ಈ ಕ್ಷಿಪಣಿಯನ್ನು ಬಿಳಿ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಉಡಾವಣೆ ಮಾಡಲಾಗಿದೆ. ಯುದ್ಧದ ನಡುವೆಯೇ ಈ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಒಂದು ವೇಳೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ನಂತರ ಈ ಪರಮಾಣು ಕ್ಷಿಪಣಿಗಳನ್ನು ಬಳಸಲಾಗುವುದು ಎಂಬುದನ್ನು ರಷ್ಯಾ ತೋರಿಸಿದೆ. ಇದನ್ನೂ ಓದಿ: ಜುಲೈ – ಆಗಸ್ಟ್‌ನಲ್ಲೇ ಭಾರತಕ್ಕೆ ಎದುರಾಗಲಿದೆ ವಿದ್ಯುತ್ ಕೊರತೆ – CREA ವರದಿ ಹೇಳಿದ್ದೇನು?

    ಮಿಂಚಿನ ವೇಗ: ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿ ಎಂದು ಘೋಷಿಸಿದ್ದರು. ಇದೇ ವರ್ಷ ಈ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಬಳಿ ಈ ಕ್ಷಿಪಣಿಗಳಿಗೆ ಯಾವುದೇ ಉತ್ತರವಿಲ್ಲ ಎಂದು ರಷ್ಯಾ ತಜ್ಞರು ಹೇಳುತ್ತಾರೆ. ರಷ್ಯಾದ ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯ ನಂತರ ಅದರ ರಹಸ್ಯ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ ಎಂದು ರಷ್ಯಾ ಮಾಧ್ಯಮಗಳು ಮಾಹಿತಿ ಪ್ರಸಾರ ಮಾಡಿವೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

    ಹೀಗಿದೆ ವೇಗದ ಮಿತಿ: ಸಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯು ಶ್ವೇತ ಸಮುದ್ರದಲ್ಲಿ ಸುಮಾರು 1,000 ಕಿಮೀ ದೂರದಲ್ಲಿರುವ ನೌಕೆಯನ್ನು ಉಡಾಯಿಸುವ ಗುರಿ ಹೊಂದಿದೆ. ಕ್ಷಿಪಣಿಯು ಶಬ್ದದ ವೇಗಕ್ಕಿಂತ 9 ಪಟ್ಟು ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

  • ಭೂಮಿಯ ಯಾವುದೇ ಭಾಗ ತಲುಪಬಲ್ಲ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷಿಸಿದ ರಷ್ಯಾ

    ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ತಿಂಗಳಾಗುತ್ತಿದೆ. ಈ ನಡುವೆಯೇ ರಷ್ಯಾ ಹೊಸ ಪರಮಾಣು ಸಾಮರ್ಥ್ಯದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಇದು ಭೂಮಿಯ ಯಾವುದೇ ಭಾಗವನ್ನೂ ತಲುಪುವ ಸಾಮರ್ಥ್ಯ ಹೊಂದಿದೆ.

    ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗಿರುವ ಸರ್ಮ್ಯಾಟ್ ಕ್ಷಿಪಣಿಯನ್ನು ರಷ್ಯಾದ ಪ್ಲೆಸೆಟ್ಸ್ಕ್ ನಿಂದ ಇದೇ ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದೆ. ಇದು ಸುಮಾರು 6,000 ಕಿ.ಮೀ ದೂರದ ಕಮ್ಚಾಟ್ಕಾ ದ್ವೀಪದಲ್ಲಿನ ಗುರಿಯನ್ನು ಹೊಡೆದಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.

    200 ಟನ್ ತೂಗುವ ಸರ್ಮ್ಯಾಟ್ ಕ್ಷಿಪಣಿ ಅಸಂಖ್ಯಾತ ಸಿಡಿತಲೆಗಳನ್ನು ಹೊತ್ತೊಯ್ಯುವ ಹಾಗೂ ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ

    ಈ ಹೊಸ ಕ್ಷಿಪಣಿ ಅತ್ಯುನ್ನತ ಯುದ್ಧತಂತ್ರ ಹಾಗೂ ತಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಕ್ಷಿಪಣಿ-ವಿರೋಧಿ ರಕ್ಷಣೆಯ ಎಲ್ಲಾ ಆಧುನಿಕ ವಿಧಾನಗಳನ್ನು ಜಯಿಸಲು ಸಮರ್ಥವಾಗಿದೆ. ಜಗತ್ತಿನಲ್ಲಿ ಇಂತಹ ಸಾಮರ್ಥ್ಯದ ಕ್ಷಿಪಣಿಯನ್ನು ಎಲ್ಲಿಯೂ ಮಾಡಲಾಗಿಲ್ಲ, ಮಾಡಿದರೂ ದೀರ್ಘ ಸಮಯದ ವರೆಗೆ ಯಾರಿಂದಲೂ ತಯಾರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

    ಇದು ನಿಜವಾಗಿಯೂ ಅಪರೂಪದ ಆಯುಧವಾಗಿದ್ದು, ನಮ್ಮ ಶಸ್ತ್ರಾಸ್ತ್ರ ಪಡೆಯನ್ನು ಬಲಿಷ್ಟವಾಗಿಸಲು ಸಹಕಾರಿಯಾಗಿದೆ. ಬಾಹ್ಯ ಬೆದರಿಕೆಗೆ ಇದೊಂದು ತಕ್ಕ ಉತ್ತರವಾಗಿದೆ ಎಂದು ಪುಟಿನ್ ಹೇಳಿದರು.

    ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು ಪರೀಕ್ಷಿಸಿರುವ ರಷ್ಯಾ ಇತರ ದೇಶಗಳನ್ನು ಆಶ್ಚರ್ಯಗೊಳಿಸಲು ಸಾಧ್ಯವೇ ಇಲ್ಲ. ರಷ್ಯಾ ಏನು ಬೇಕಾದರೂ ಮಾಡಬಹುದು ಎಂಬುದು ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಇತರ ದೇಶಗಳಿಗೆ ಖಾತ್ರಿಯಾಗಿದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಸಾವಿರಾರು ಸೈನಿಕರು, ಜನರು ಯುದ್ಧದಲ್ಲಿ ಜೀವತೆತ್ತಿದ್ದರೂ ರಷ್ಯಾ ಇಲ್ಲಿ ವರೆಗೆ ಉಕ್ರೇನ್‌ನ ಯಾವುದೇ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ಏನಿದು ಬ್ಯಾಲಿಸ್ಟಿಕ್ ಕ್ಷಿಪಣಿ?
    ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯನ್ನು ಪ್ರವೇಶಿಸಿ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳಮನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣ ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಹೆಚ್ಚಿನ ತಾಪಮಾನದಿಂದಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶಮಾಡಲು ಸಾಧ್ಯವಾಗುತ್ತದೆ.

    ಕ್ಷಿಪಣಿಗಳು ಭೂಮಿ ಪ್ರವೇಶಿಸುವಾಗ ಭೂ ಗುರುತ್ವಾಕರ್ಷಣೆಗೆ ಒಳಗಾಗುತ್ತದೆ. ಹೀಗಾಗಿ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಗ್ಲೋಬಲ್ ಪೊಸಿಷನ್ ಸಿಸ್ಟಮ್(ಜಿಪಿಎಸ್) ಅಳವಡಿಸಲಾಗಿರುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತಗಾರ್ಮಿಯಿಂದ ಹಾಗೂ ಚಲಿಸುವ ವಾಹನಗಳ ಮೂಲಕವೂ ಉಡಾಯಿಸಬಹುದಾಗಿದೆ. ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವನ್ನು ಹೊಂದಿರುವ ಕಾರಣ ಇವುಗಳಿಗೆ ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತದೆ.

  • ಪಾಕ್‌ನಲ್ಲಿ ಬಿತ್ತು ಭಾರತದ ಕ್ಷಿಪಣಿ – ರಕ್ಷಣಾ ಸಚಿವರು ಹೇಳಿದ್ದೇನು?

    ಪಾಕ್‌ನಲ್ಲಿ ಬಿತ್ತು ಭಾರತದ ಕ್ಷಿಪಣಿ – ರಕ್ಷಣಾ ಸಚಿವರು ಹೇಳಿದ್ದೇನು?

    ನವದೆಹಲಿ: ಭಾರತದ ಕ್ಷಿಪಣಿ ಪಾಕಿಸ್ತಾನದಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತವು ತನ್ನ ಶಸ್ತ್ರಾಸ್ತ್ರ ವ್ಯವಸ್ಥೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಭಾರತದ ಕ್ಷಿಪಣಿ ವ್ಯವಸ್ಥೆಯು ಹೆಚ್ಚು ಸುರಕ್ಷಿತ. ದೇಶದ ರಕ್ಷಣಾ ವ್ಯವಸ್ಥೆಯು ಸುರಕ್ಷತಾ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳಿಗೆ ಪ್ರಮುಖ ಆದ್ಯತೆ ನೀಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ಮಾರ್ಚ್ 9, 2022 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ನಾನು ಆಗಸ್ಟ್‌ನಲ್ಲಿ ಸದನಕ್ಕೆ ಸಂಕ್ಷಿಪ್ತವಾಗಿ ಮಾಹಿತಿ ನೀಡಲು ಬಯಸುತ್ತೇನೆ. ತಪಾಸಣೆಯ ಸಮಯದಲ್ಲಿ ಕ್ಷಿಪಣಿ ಅಜಾಗರೂಕತೆಯಿಂದ ಉಡಾವಣೆಗೊಂಡಿದೆ. ನಂತರ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದೊಳಗೆ ಬಂದಿಳಿದಿದೆ ಎಂದು ತಿಳಿಸಿದ್ದಾರೆ. ಆಕಸ್ಮಿಕವಾಗಿ ಘಟನೆ ಸಂಭವಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸದ್ಯ ಈ ಅವಘಡದಿಂದ ಯಾವುದೇ ಹಾನಿ, ಪ್ರಾಣಾಪಾಯ ಸಂಭವಿಸಿಲ್ಲ. ಇದು ಸಮಾಧಾನದ ವಿಚಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರವನ್ನ ಅನಗತ್ಯವಾಗಿ ವಿವಾದ ಮಾಡದೆ ಸ್ವಾಗತಿಸಬೇಕು: ಬಿಎಸ್‍ವೈ

    ಭಾರತದ ಶಸ್ತ್ರಸ್ತ್ರ ಪಡೆಗಳು ಉತ್ತಮ ತರಬೇತಿ ಪಡೆದಿದ್ದು, ಶಿಸ್ತುಬದ್ಧವಾಗಿವೆ. ಘಟನೆಯ ತನಿಖೆಯ ನಂತರ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ಕಂಡುಬರುವ ಯಾವುದೇ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

    ಭಾರತೀಯ ರಕ್ಷಣಾ ಸಚಿವಾಲಯವು ಘಟನೆಯ ಬಗ್ಗೆ ನ್ಯಾಯಾಲಯದ ತನಿಖೆಗೆ ಆದೇಶಿಸಿದೆ ಎಂದು ಮಾಹಿತಿ ನೀಡಿದ್ದಾರೆ.

  • ಪಾಕಿಸ್ತಾನದಲ್ಲಿ ಬಿದ್ದ ಭಾರತದ ಕ್ಷಿಪಣಿ ಆಕಸ್ಮಿಕ: ಅಮೆರಿಕ

    ಪಾಕಿಸ್ತಾನದಲ್ಲಿ ಬಿದ್ದ ಭಾರತದ ಕ್ಷಿಪಣಿ ಆಕಸ್ಮಿಕ: ಅಮೆರಿಕ

    ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಭಾರತದ ಕ್ಷಿಪಣಿಯೊಂದು ಬಿದ್ದಿದ್ದು, ಆಕಸ್ಮಿಕವಲ್ಲದೆ ಬೇರೇನೂ ಅಲ್ಲ ಎಂದು ಅಮೆರಿಕ ಹೇಳಿದೆ.

    ಎರಡು ದಿನಗಳ ಹಿಂದೆ ಭಾರತೀಯ ಸೂಪರ್‍ಸಾನಿಕ್ (supersonic missile) ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿತ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ. ಮಾರ್ಚ್ 9 ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?

    ಈ ಕುರಿತಂತೆ ಸೋಮವಾರ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ನಮ್ಮ ಭಾರತೀಯ ಪಾಲುದಾರರು ನಿಮಗೆ ಹೇಳಿರುವಂತೆ ಈ ಘಟನೆಯು ಆಕಸ್ಮಿಕವಲ್ಲದೆ ಬೇರೇನೂ ಅಲ್ಲ ಮತ್ತು ಇದರಲ್ಲಿ ಯಾವುದೇ ಸೂಚನೆ ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

    ಈ ಘಟನೆ ಬಗ್ಗೆ ನಿಮಗೆ ವಿವರಿಸುವಂತೆ ಭಾರತೀಯ ರಕ್ಷಣಾ ಸಚಿವಾಲಯಕ್ಕೆ ತಿಳಿಸಿದೇವು. ಹಾಗಾಗಿ ಮಾರ್ಚ್ 9 ರಂದು ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ವಿವರಣೆ ನೀಡಿದರು. ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನಾವು ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ.

  • ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

    ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

    ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದ ಭಾರತದ ಕ್ಷಿಪಣಿ ಬಗ್ಗೆ ಪ್ರತ್ಯುತ್ತರ ನೀಡಬಹುದಿತ್ತು. ಆದರೆ ಪಾಕಿಸ್ತಾನವು ಸಂಯಮವನ್ನು ಅನುಸರಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

    ಪಂಜಾಬ್‍ನ ಹಫೀಜಾಬಾದ್ ಜಿಲ್ಲೆಯಲ್ಲಿ ಜಂಟಿ ಪ್ರತಿಪಕ್ಷಗಳು ತಮ್ಮ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಮಿಯಾನ್ ಚನ್ನುನಲ್ಲಿ ಭಾರತೀಯ ಕ್ಷಿಪಣಿ ಬಿದ್ದ ನಂತರ ನಾವು ಪ್ರತಿಕ್ರಿಯಿಸಬಹುದಿತ್ತು. ಆದರೆ ನಾವು ಸಂಯಮವನ್ನು ಅನುಸರಿಸುತ್ತೇವೆ ಎಂದರು.

    ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನಮ್ಮ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ದೇಶವನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?

    ಮಾರ್ಚ್ 9ರಂದು ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಈ ಕ್ಷಿಪಣಿ ಪಾಕಿಸ್ತಾನಕ್ಕೆ ಬಂದು ಬಿದ್ದಿತ್ತು. ಭಾರತೀಯ ಸೂಪರ್ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿದಿತ್ತು. ಆದರೆ ಯಾವುದೇ ಸಾವು ನೋವು ಆಗಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಕಳೆಗಟ್ಟಲಿದೆ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ

    ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಕಚೇರಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಂದಿಳಿದ ಕ್ಷಿಪಣಿಯ ಕುರಿತು ಭಾರತದ ಸರಳವಾದ ವಿವರಣೆ ನೀಡಿದೆ. ಇದರಿಂದ ನಾವು ತೃಪ್ತರಾಗಿಲ್ಲ. ಘಟನೆಯ ಸುತ್ತಲಿನ ಸತ್ಯಗಳನ್ನು ನಿಖರವಾಗಿ ಸ್ಥಾಪಿಸಲು ಜಂಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

  • ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

    ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

    ಭುವನೇಶ್ವರ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಯಾರಿಸಿದ ಘನ-ಇಂಧನ ಕ್ಷಿಪಣಿಯನ್ನು ‘ಪ್ರಳಯ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

    ಒಡಿಶಾ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ 10:30ರ ವೇಳೆಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಭಾರತೀಯ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಂಡಿದೆ. ಇದನ್ನೂ ಓದಿ: ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ

    ಪ್ರಳಯ್ ಒಂದು ಅರೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರ ಅಥವಾ ನೆಲದ ಮೂಲಕ ಉಡಾಯಿಸಬಹುದಾಗಿದೆ. ಇದು ನಿರ್ಧಿಷ್ಟ ದೂರ ಕ್ರಮಿಸಿದ ಬಳಿಕ ತನ್ನ ಮಾರ್ಗವನ್ನು ಬದಲಾಯಿಸಿ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

    ಪ್ರಳಯ್ 250 ರಿಂದ 500 ಕಿಮೀ ದೂರದಲ್ಲಿರುವ ಗುರಿಯನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 500 ರಿಂದ 1,000 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿಯನ್ನು ಮೊಬೈಲ್ ಲಾಂಚರ್ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಈ ಕ್ಷಿಪಣಿಯನ್ನು ಅತ್ಯಾಧುನಿಕ ನ್ಯಾವಿಗೇಶನ್ ಸಿಸ್ಟಮ್ ಬಳಸಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಕ್ಸಸ್

  • ಇರಾನ್ ಸಿಡಿಸಿದ ಕ್ಷಿಪಣಿಯಿಂದ ಉಕ್ರೇನ್ ವಿಮಾನ ಪತನ – ಘಟನೆಯ ಸುತ್ತ ಅನುಮಾನದ ಹುತ್ತ

    ಇರಾನ್ ಸಿಡಿಸಿದ ಕ್ಷಿಪಣಿಯಿಂದ ಉಕ್ರೇನ್ ವಿಮಾನ ಪತನ – ಘಟನೆಯ ಸುತ್ತ ಅನುಮಾನದ ಹುತ್ತ

    – ತಪ್ಪಾಗಿ ಭಾವಿಸಿ ಉಕ್ರೇನ್ ವಿಮಾನವನ್ನು ಹೊಡೆದ ಇರಾನ್
    – ಅನುಮಾನ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಉಕ್ರೇನ್‍ನಿಂದ ಹೊರಟಿದ್ದ ವಿಮಾನವನ್ನು ಇರಾನ್ ತಪ್ಪಾಗಿ ತಿಳಿದುಕೊಂಡು ಹೊಡೆದು ಹಾಕಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಂಕಿಸಿದ್ದಾರೆ.

    ಮೂಲಗಳನ್ನು ಆಧಾರಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದು, ಇರಾನಿನ ವಾಯು ಸೇನೆ ತಪ್ಪಾಗಿ ಭಾವಿಸಿಕೊಂಡು ಕ್ಷಿಪಣಿ ಬಳಸಿಕೊಂಡು ಉಕ್ರೇನ್ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ ಬೋಯಿಂಗ್ 737 ವಿಮಾನವನ್ನು ಹೊಡೆದು ಹಾಕಿದೆ ಎಂದು ತಿಳಿಸಿವೆ. ಟ್ರಂಪ್ ಖಚಿತವಾಗಿ ಹೇಳದೇ ಇದ್ದರೂ ಇರಾನ್ ಹೊಡೆದಿರಬಹುದು ಎಂದು ಅಂದಾಜಿಸಿದ್ದಾರೆ.

    ಇರಾನ್ ರಾಜಧಾನಿ ಟೆಹ್ರಾನ್‍ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಉಕ್ರೇನ್ ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಬುಧವಾರ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 180 ಮಂದಿಯೂ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿತ್ತು.

    ಸಾಧಾರಣವಾಗಿ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ನೆಲಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿಕೊಳ್ಳುತ್ತದೆ. ಆದರೆ ಈ ವಿಮಾನ ಪತನಕ್ಕೂ ಮುನ್ನವೇ ಬೆಂಕಿ ಹೊತ್ತಿಕೊಂಡಿತ್ತು ಎನ್ನುವುದಕ್ಕೆ ವಿಡಿಯೋ ಸಾಕ್ಷ್ಯಗಳು ಸಿಕ್ಕಿದೆ. ವಿಮಾನ ಬೆಂಕಿಹೊತ್ತಿಕೊಂಡು ಪತನವಾಗುವುದು ಬಹಳ ಅಪರೂಪ. ಹೀಗಾಗಿ ಈ ಪ್ರಕರಣದ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

    ಖಾಸಿಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾಕಿನಲ್ಲಿದ್ದ ಅಮೆರಿಕದ ಎರಡು ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿ ನಡೆಸಿದ ಕೆಲವೇ ಗಂಟೆಗಳ ಹೊತ್ತಿನಲ್ಲಿ ಉಕ್ರೇನ್ ವಿಮಾನ ಟೆಹ್ರಾನ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು.

    https://twitter.com/ShabbaAlaBiafra/status/1214839520778235904

    ವಿಮಾನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ. ಎರಡು ದಿನದ ಹಿಂದೆ ಪರಿಶೀಲಿಸಲಾಗಿತ್ತು. ವಿಮಾನ ಹಾರಿಸುತ್ತಿದ್ದ ಪೈಲಟ್‍ಗಳು ಅನುಭವಿಯಾಗಿದ್ದರು ಎಂದು ಕಂಪನಿ ತಿಳಿಸಿದೆ. ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಆದರೆ ತನಿಖೆಗೆ ನಾವು ಬೋಯಿಂಗ್ ಕಂಪನಿ ಅಥವಾ ಅಮೆರಿಕಕ್ಕೆ ನೀಡುವುದಿಲ್ಲ. ವಿಮಾನ ಪತನದ ತನಿಖೆಯನ್ನು ನಾವೇ ಮಾಡುತ್ತೇವೆ ಎಂದು ಇರಾನ್ ಹೇಳಿಕೊಂಡಿದೆ. ಇತ್ತ ಅಮೆರಿಕವೂ ಈ ವಿಮಾನ ಪತನಕ್ಕೆ ಕಾರಣಗಳನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದೆ.

  • ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ನವದೆಹಲಿ: ರಷ್ಯಾ ಜೊತೆಗಿನ ಮಾತುಕತೆಯ ವೇಳೆ ಭಾರತ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸೇರಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.

    ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದರು. ಮಾತುಕತೆಯ ವೇಳೆ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ, ಬಾಹ್ಯಾಕಾಶ ಸಹಕಾರ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

    ಭಾರತ 5.43 ಶತಕೋಟಿ ಡಾಲರ್(ಅಂದಾಜು 40 ಸಾವಿರ ಕೋಟಿ ರೂ.) ವೆಚ್ಚದಲ್ಲಿ 5 ಎಸ್-400 ಟ್ರಯಂಫ್ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಏನಿದು ವಿಶೇಷ ವಾಯು ರಕ್ಷಣಾ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಎಸ್-400 ಏರ್ ಟ್ರಯಂಫ್?
    ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯ ಈ ಎಸ್-400 ಟ್ರಯಂಫ್ ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.

    ಹೇಗೆ ಕೆಲಸ ಮಾಡುತ್ತೆ?
    ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದೆ.

    380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

    ಭಾರತಕ್ಕೆ ಅಗತ್ಯ ಏಕೆ?
    ಪಾಕ್ ಬಳಿ ಇರುವ 20 ಫೈಟರ್ ಸ್ಕ್ವಾಡ್ ಡ್ರೋನ್ಸ್ ಹಾಗೂ ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ಡ್ರೋನ್ ಹಾಗೂ 800 4-ಜೆನ್ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.

    ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
    ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವರ್ಷ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿದೆ.

    ಒಪ್ಪಂದದ ಉದ್ದೇಶ ಏನು?
    ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ ಕಳೆದ ಮೇನಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ.

    ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ  ಆತಂಕ ಯಾಕೆ?
    ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಅಮೆರಿಕ ಹಾಗೂ ಚೀನಾ, ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕೆ ಸಿಗಲಿದೆ.

    ಅಮೆರಿಕ ಎಚ್ಚರಿಕೆ:
    ಅಮೆರಿಕ ಯಾವಾಗಲೂ ತನ್ನ ಆರ್ಥಿಕ ಪ್ರಭಾವ ಬಳಸಿ ಇತರ ರಾಷ್ಟ್ರಗಳ ಆಂತರಿಕ ವಿಚಾರಕ್ಕೆ ತಲೆ ಹಾಕುತ್ತಿರುತ್ತದೆ. ರಷ್ಯಾ, ಇರಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಏನಿದು ಕಾಟ್ಸಾ?
    ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.

    ವಿಶ್ವಸಂಸ್ಥೆಯ ಕಾಯ್ದೆಯಲ್ಲ:
    ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.