Tag: ಕ್ಷಮೆ

  • ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

    ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

    ಲಂಡನ್: ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಪರಿಪೂರ್ಣ ಆಟಗಾರನಲ್ಲ ಎಂದು ಟೀಕೆ ಮಾಡಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಅವರು ವಿಶ್ವಕಪ್ ಸೆಮಿಫೈನಲ್ ಬಳಿಕ ಕ್ಷಮೆ ಕೋರಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದ ಬಳಿಕ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ನನ್ನ ಎಲ್ಲಾ ದೃಷ್ಟಿಕೋನಗಳನ್ನು ಜಡೇಜಾ ಇಂದಿನ ಪಂದ್ಯದಲ್ಲಿ ಚೂರು ಚೂರು ಮಾಡಿದ್ದು, ನನ್ನ ಅಭಿಪ್ರಾಯ ತಪ್ಪು ಎಂದು ಸಾಬೀತು ಪಡಿಸಿದ್ದಾರೆ. ಪಂದ್ಯದಲ್ಲಿ ಅವರ ಬೌಲಿಂಗ್ ಎಕಾನಮಿ, ಬ್ಯಾಟಿಂಗ್ ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರು ಪಂದ್ಯದಲ್ಲಿ ಸಂಭ್ರಮಿಸಿದ ವೇಳೆ ನನಗಾಗಿ ಹುಡುಕಾಟ ನಡೆಸಿದ್ದರು ಎನಿಸುತ್ತದೆ. ಆದರೆ ನಾನು ಅವರ ಬಳಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

    ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡಿದ್ದ ಮಂಜ್ರೇಕರ್ ಅವರು, ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಪಂದ್ಯದಲ್ಲಿ ಜಡೇಜಾ ನಿಜವಾಗಿಯೂ ಬೌಲರ್. ಆದರೆ 50 ಓವರ್‍ಗಳ ಪಂದ್ಯದಲ್ಲಿ ಆ ಕಡೆ ಬ್ಯಾಟ್ಸ್ ಮನ್ ಅಲ್ಲ, ಈ ಕಡೆ ಸ್ಪಿನ್ ಬೌಲರ್ ಅಲ್ಲ ಹೇಳಿ ಮೂದಲಿಸಿದ್ದರು.

    ಚರ್ಚೆ ಜೋರು ಆಗುತ್ತಿದ್ದಂತೆ ಜಡೇಜಾ, ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸಲು ಕಲಿತುಕೊಳ್ಳಿ. ನಿಮ್ಮ ಬೇಧಿ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ ಎಂದು ಖಾರವಾಗಿ ಬರೆದು ಮಂಜ್ರೇಕರ್ ಅವರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಮಂಜ್ರೇಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

    ಸೆಮಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಜಡೇಜಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಂದ್ಯದಲ್ಲಿ 10 ಓವರ್ ಎಸೆದು 3.40 ಎಕಾನಮಿಯಲ್ಲಿ 34 ರನ್ ನೀಡಿ 1 ವಿಕೆಟ್ ಪಡೆದಿದ್ದು ಮಾತ್ರ ಅಲ್ಲದೇ ರೋಸ್ ಟೈಲರ್ ಅವರನ್ನು ರನೌಟ್ ಮಾಡಿದ್ದರು. ಬ್ಯಾಟಿಂಗ್‍ನಲ್ಲಿ ಸೋಲಿನತ್ತ ಮುಖಮಾಡಿದ್ದ ಭಾರತವನ್ನು ಗೆಲುವಿನತ್ತ ತಂದಿದ್ದೆ ಜಡೇಜಾ. 30.3 ಓವರ್ ಗಳಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದಾಗ ಕ್ರೀಸ್ ಬಂದ ಜಡೇಜಾ 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 77 ರನ್ ಗಳಿಸಿದ್ದರು. ಅಲ್ಲದೇ ಧೋನಿ ಅವರೊಂದಿಗೆ 7ನೇ ವಿಕೆಟ್‍ಗೆ 116 ರನ್ ಜೊತೆಯಾಟ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದ್ದರು.

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ

    ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕ್ಷಮೆ ಕೇಳಿದ್ದಾರೆ.

    ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಕೊಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನ ಹಾಕಿದ್ದು, ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ. ನಿಮ್ಮ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇನೆ ಎಂಬ ಸಂದೇಶವನ್ನ ತಾಲೂಕಿನ ಕಾರ್ಯಕರ್ತರಿಗೆ ರವಾನಿಸಿದ್ದಾರೆ.

    ಸಂದೇಶ:
    ಆತ್ಮೀಯ ಬಂಧುಗಳೇ ರಾಜಕೀಯ ಗೊತ್ತಿಲ್ಲದ ನನಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಾಗ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಇದುವರೆಗೂ ನಾನು ನನ್ನ ಕೈಲಾದ ಅಭಿವೃದ್ಧಿ ಕೆಲಸವನ್ನು ಸರ್ಕಾರದಿಂದ ಮಾಡಿ ತಾಲೂಕು ಅಭಿವೃದ್ಧಿಯ ಕಡೆಗೆ ದಾಪುಗಾಲಿಟ್ಟಿದೆ. ಈಗ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ತಾಲೂಕಿಗೆ ಸಾಕಷ್ಟು ಅನ್ಯಾಯವನ್ನು ಮಾಡಿ ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಮಂತ್ರಿ ಪದವಿಯನ್ನು ಕೊಟ್ಟು ನಮ್ಮ ತಾಲೂಕಿಗೆ ದೊಡ್ಡ ದ್ರೋಹವನ್ನು ಮಾಡಿದೆ. ಇದರಿಂದಾಗಿ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗುತ್ತದೆ.

    ಅಲ್ಲದೆ ಮುಂದಿನ ತಾಲೂಕಿನ ಬೃಹತ್ ಭವಿಷ್ಯವನ್ನು ನೆನೆದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ತಮ್ಮ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ತಮ್ಮ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಸದಾ ನಿಮ್ಮ ಆಶೀರ್ವಾದ ಬೇಕೆಂದು ಕೇಳಿ ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳಿ ತಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ ಇಂತಿ ನಿಮ್ಮ ವಿಶ್ವಾಸಿ ಬಿ.ಸಿ ಪಾಟೀಲ್ ಎಂದು ವಾಟ್ಸಪ್ ಗ್ರೂಪಿಗೆ ಸಂದೇಶ ರವಾನೆ ಮಾಡಿದ್ದಾರೆ.

    ವಾಪಸ್ ಪಡೆಯಲ್ಲ: ಕಳೆದ ದಿನ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ಸ್ ಪಡೆಯುವುದಿಲ್ಲ. ಮುಂದೆ ಏನಾಗಬೇಕು, ಎನು ಮಾಡಬೇಕು ಅನ್ನೋ ಚರ್ಚೆ ಆಗಿಲ್ಲ. ಮುಂದೆ ಏನಾಗುತ್ತೆ ಕಾದುನೋಡೋಣ. ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದೇನೆ. ಕ್ಷೇತ್ರಕ್ಕೆ ಅನ್ಯಾಯವಾದ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಅವರು ಸಹ ಸಹಮತ ನೀಡಿದ್ದಾರೆ. ನಾವೆಲ್ಲ ಮುಂಬೈನಲ್ಲಿ ಇದ್ದೇವೆ. ಬಿಜೆಪಿಗೆ ಹೋಗುವ ಬಗ್ಗೆ ಚರ್ಚೆ ಆಗಿಲ್ಲ. ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • ಕುರುಬ ಸಮುದಾಯದ ಕ್ಷಮೆ ಕೋರಿದ ಮಾಜಿ ಶಾಸಕ ಸುರೇಶ್ ಗೌಡ

    ಕುರುಬ ಸಮುದಾಯದ ಕ್ಷಮೆ ಕೋರಿದ ಮಾಜಿ ಶಾಸಕ ಸುರೇಶ್ ಗೌಡ

    ತುಮಕೂರು: ನಾನು ಕುರುಬ ಸಮುದಾಯಕ್ಕೆ 420 ಎಂದು ಹೇಳಿಲ್ಲ. ಪುಟ್ಟರಾಜು ಎಂಬ ಪೇದೆ 420 ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅಷ್ಟೇ ಎಂದು ಮಾಜಿ ಶಾಸಕ ಸುರೇಶ್ ಗೌಡ ಅವರ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನನ್ನ ಹೇಳಿಕೆಯಿಂದ ಕುರುಬ ಸಮುದಾಯದವರಿಗೆ ನೋವಾಗಿದರೆ ವಿಷಾದಿಸುತ್ತೇನೆ ಎಂದಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷಮೆ ಕೇಳುವುದರಿಂದ ನಾನು ಚಿಕ್ಕವನಾಗಲ್ಲ, ದೊಡ್ಡವನೂ ಆಗಲ್ಲ ಎಂದರು. ಅಲ್ಲದೇ ಕುರುಬ ಸಮುದಾಯದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ, ನಾನು ಕುರುಬ ಸಮುದಾಯಕ್ಕೆ 420 ಎಂದು ಹೇಳಿಲ್ಲ, ವ್ಯಕ್ತಿ ಕೇಂದ್ರಿಕೃತವಾಗಿ ಹೇಳಿದ್ದೇನೆ ಅಷ್ಟೇ ಎಂದರು.

    ಸಾಮಾಜಿಕ ಜಾಲತಾಣದಲ್ಲಿ ನನ್ನ ವಿಡಿಯೋವನ್ನು ತಿರುಚಿ ನನ್ನ ಮೇಲೆ ಈ ರೀತಿ ವಿಡಿಯೋ ವೈರಲ್ ಮಾಡಲಾಗಿದೆ. ಅಲ್ಲದೇ ಒಂದು ಸಮುದಾಯವನ್ನು ನನ್ನ ವಿರುದ್ಧ ಮಾಡಲಾಗಿದೆ. ಆದರೆ ಕ್ಷಮೆ ಕೇಳುವುದು, ಸಾಮಾಜಿಕ ಜೀವನದಲ್ಲಿ ಇರುವುದಕ್ಕೆ ಯಾವುದೇ ರೀತಿ ಕುಂದಾಗುವುದಿಲ್ಲ. ಕ್ಷಮೆ ಕೇಳುವುದು ರಾಜ ಧರ್ಮ. ಆದ್ದರಿಂದಲೇ ಕ್ಷಮೆ ಕೇಳುತ್ತಿದ್ದೇನೆ ಎಂದರು.

    ವ್ಯಕ್ತಿಯ ಹೆಸರು ಗೊತ್ತಿಲ್ಲದ ಹಿನ್ನೆಲೆಯಲ್ಲಿ ನಾನು ಸಮುದಾಯವನ್ನು ಪ್ರಸ್ತಾಪ ಮಾಡಿದ್ದೇ. 10 ವರ್ಷ ಶಾಸಕನಾಗಿ ಸೇವೆ ಮಾಡಲು ನನಗೆ ಕ್ಷೇತ್ರದ ಜನತೆ ಅವಕಾಶ ನೀಡಿದ್ದರು. ಆದರೆ ನಿನ್ನೆಯ ಘಟನೆ ಪೊಲೀಸ್ ಇಲಾಖೆಯ ದುರುಪಯೋಗದ ಬಗ್ಗೆಯಷ್ಟೇ ನಾನು ಗಮನ ಸೆಳೆಯಲು ಮಾತನಾಡಿದ್ದೆ. ಆದ್ದರಿಂದ ಈ ವಿಚಾರವನ್ನು ಉನ್ನತ ಮಟ್ಟದ ತನಿಖೆ ನಡೆಸುವವರೆಗೂ ಕೊಂಡ್ಯೊಯುತ್ತೇನೆ ಎಂದರು.

    ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಫೈಟ್‍ನಲ್ಲಿ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದರು. ಈ ಹಂತದಲ್ಲಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೆಲ ಅಧಿಕಾರಗಳ ವಿರುದ್ಧ ದೂರು ನೀಡಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಕ್ಸಿಟ್ ಪೋಲ್ ಪೋಸ್ಟ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೇರಾಯ್

    ಎಕ್ಸಿಟ್ ಪೋಲ್ ಪೋಸ್ಟ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೇರಾಯ್

    ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಟ್ರೋಲ್‍ನ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ವಿವಾದಕ್ಕೆ ಗುರಿ ಆಗಿದ್ದರು. ಈಗ ವಿವೇಕ್ ಈ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ನಟ ವಿವೇಕ್, “ಕೆಲವು ಬಾರಿ ನಾವು ಮೊದಲು ನೋಡಿದಾಗ ಅದು ನಮಗೆ ತಮಾಷೆಯಾಗಿ ಕಾಣಿಸುತ್ತದೆ. ಆದರೆ ಬೇರೆಯವರಿಗೆ ತಮಾಷೆಯಾಗಿ ಕಾಣಿಸುವುದಿಲ್ಲ. ನಾನು ಕಳೆದ 10 ವರ್ಷದಿಂದ ಮಹಿಳಾ ಶಕ್ತಿಕರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ 2 ಸಾವಿರಕ್ಕೂ ಹೆಚ್ಚು ವಂಚಿತ ಮಹಿಳೆಯರನ್ನು ಸಮಾಜದ ಮುಂದೆ ತಂದಿದ್ದು, ಇಂದು ಎಲ್ಲರೂ ಸಂತೋಷದ ಜೀವನ ನಡೆಸುತ್ತಿದ್ದಾರೆ” .

    ಮತ್ತೊಂದು ಟ್ವೀಟ್‍ನಲ್ಲಿ, “ನನ್ನ ರಿಪ್ಲೈನಿಂದ ಯಾವುದಾದರೂ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದರೆ, ತಪ್ಪನ್ನು ಸುಧಾರಿಸಿಕೊಳ್ಳಲು ನನ್ನನ್ನು ಕ್ಷಮಿಸಿ ಬಿಡಿ” ಎಂದು ಬರೆದು ಟ್ವೀಟ್ ಮಾಡಿದಲ್ಲದೆ ನಾನು ಹಿಂದಿನ ಟ್ವೀಟ್ ಡಿಲೀಟ್ ಮಾಡುತ್ತಿದ್ದೇನೆ” ಎಂದು ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಬಾಲಿವುಡ್ ನಟ ವಿವೇಕ್ ಒಬೇರಾಯ್ ಸೋಮವಾರ ಮಧ್ಯಾಹ್ನ ಮಾಡಿದ್ದ ಎಕ್ಸಿಟ್ ಪೋಲ್ ಪೋಸ್ಟ್ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ನಟಿ ಸೋನಂ ಕಪೂರ್, ಟೆನ್ನಿಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೇರಿದಂತೆ ದೇಶದ ಮಹಿಳೆಯರ ಕೆಂಗಣ್ಣಿಗೆ ವಿವೇಕ್ ಟ್ವೀಟ್ ಗುರಿಯಾಗಿತ್ತು.

    ಬಿಗ್-ಬಿ ಅಮಿತಾಬ್ ಬಚ್ಚನ್ ಸೊಸೆಯಾಗಿರುವ ಐಶ್ವರ್ಯಾ ರೈ ಅವರ ವೈವಾಹಿಕ ಪೂರ್ವ ಸಂಬಂಧದ ವಿಚಾರಗಳನ್ನು ವಿವೇಕ್ ಒಬೇರಾಯ್ ಕೆಣಕ್ಕಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು. 2006ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ತಮ್ಮ ಬಗ್ಗೆ ಬಾಲಿವುಡ್ ಅಂಗಳದಲ್ಲಿದ್ದ ಅಂತೆ-ಕಂತೆಗಳಿಗೆ ಪೂರ್ಣ ವಿರಾಮ ಹಾಕಿದ್ದರು. 7 ವರ್ಷದ ಮುದ್ದು ಮಗಳ ತಾಯಿಯಾಗಿರುವ ಐಶ್ವರ್ಯಾ ಯಾವುದೇ ವಿವಾದಗಳಿಗೆ ಗುರಿಯಾಗದೇ ಖಾಸಗಿ ಜೀವನದಲ್ಲಿ ಖುಷಿಯಾಗಿದ್ದಾರೆ.

    ವಿವಾದಾತ್ಮಕ ಟ್ವೀಟ್‍ನಲ್ಲಿ ಏನಿತ್ತು?
    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • ಚೌಕಿದಾರ್ ಚೋರ್ ಹೈ – ಕೊನೆಗೂ ಸುಪ್ರೀಂನಲ್ಲಿ ರಾಹುಲ್ ಬೇಷರತ್ ಕ್ಷಮೆಯಾಚನೆ

    ಚೌಕಿದಾರ್ ಚೋರ್ ಹೈ – ಕೊನೆಗೂ ಸುಪ್ರೀಂನಲ್ಲಿ ರಾಹುಲ್ ಬೇಷರತ್ ಕ್ಷಮೆಯಾಚನೆ

    ನವದೆಹಲಿ: ರಫೇಲ್ ಡೀಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದಿದ್ದ ರಾಹುಲ್ ಗಾಂಧಿ ಇಂದು ಬೇಷರತ್ ಕ್ಷಮೆ ಕೇಳಿದ್ದಾರೆ.

    ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಹೇಳಿದೆ ಎನ್ನಲಾದ ಹೇಳಿಕೆ ಉದ್ದೇಶಪೂರ್ವಕವಲ್ಲದ ಅಜಾಗರೂಕತೆಯಿಂದ ಕೂಡಿದ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿದ್ದಕ್ಕೆ ನಾನು ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

    ಈ ಹಿಂದಿನ ವಿಚಾರಣೆ ವೇಳೆ ರಾಹುಲ್ ಪರ ಹಾಜರಿದ್ದ ವಕೀಲ ಅಭಿಷೇಕ್ ಸಿಂಘ್ವಿ, ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.

    ಈ ಉತ್ತರಕ್ಕೆ ಗರಂ ಆಗಿದ್ದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದ್ದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಎಂದು ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇಂದು ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಿದ್ದಾರೆ.

    ಏನಿದು ಪ್ರಕರಣ?
    ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್ (ಪ್ರಧಾನಿ ಮೋದಿ) ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು.

    ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

  • ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಯೂಟರ್ನ್

    ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಯೂಟರ್ನ್

    ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್ ಪಾಟೀಲ್, ಸಚಿವ ಆರ್.ಬಿ ತಿಮ್ಮಾಪುರ್ ಹಾಗೂ ಎಐಸಿಸಿ ಪ್ರಚಾರ ಸಮಿತಿ ಉಪಧ್ಯಾಕ್ಷರಾದ ಎಸ್.ಜಿ ನಂಜಯನಮಠ ಅವರೇ ಕಾರಣ ಎಂದು ಆರೋಪಿಸಿದ್ದ ಹುನಗುಂದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಸದ್ಯ ಯೂಟರ್ನ್ ಹೊಡೆದಿದ್ದಾರೆ.

    ತಮ್ಮ ಧರ್ಮಪತ್ನಿ ಕಾಂಗ್ರೆಸ್ ಪಕ್ಷದ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಈ ಹಿಂದೆ ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತ ನೋವಿನಿಂದ ಆಕ್ರೋಶ ಭರಿತನಾಗಿ ತಪ್ಪು ತಿಳುವಳಿಕೆಯಿಂದ ನಾನು ಪಕ್ಷದ ಕೆಲವು ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದೆ. ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚರ್ಚಿಸಿ ಇದಕ್ಕೆ ವಿಷಾಧ ವ್ಯಕ್ತಪಡಿಸಿದ್ದೇನೆ. ನನ್ನ ತಪ್ಪು ಮಾತುಗಳಿಂದ ಹಿರಿಯ ನಾಯಕರುಗಳಿಗೆ ನೋವಾಗಿದರೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಮಜಾಯಿಸಿ ನೀಡಿದ್ದಾರೆ.

    ಎಲ್ಲ ಹಿರಿಯರ ಜೊತೆ ಸೇರಿ ಪಕ್ಷದ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರನ್ನು ಗೆಲ್ಲಿಸಲು ಶ್ರಮಿಸೋಣ. ಈ ಜಿಲ್ಲೆಯನ್ನು ಮತ್ತೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಕಟ್ಟೋಣ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ಸಹ ಪರಿವಾರದೊಂದಿಗೆ ಜಿಲ್ಲಾಡಳಿತ ಭವನಕ್ಕೆ ತೆರಳಿದ ವೀಣಾ ಕಾಶಪ್ಪನವರ್, ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ವೀಣಾ ಕಾಶಪ್ಪನವರ್ ಗೆ ಮಾಜಿ ಸಚಿವರಾದ ಎಚ್.ವೈ ಮೇಟಿ, ಬಿ.ಆರ್ ಯಾವಗಲ್ ಸಾಥ್ ನೀಡಿದ್ದರು.

  • ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಮುಂಬೈ: ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್) ನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ‘ಕಪಾಳ ಮೋಕ್ಷ’ ಮಾಡಿದ ಘಟನೆ ಬಗ್ಗೆ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಕ್ಷಮೆ ಕೋರಿದ್ದಾರೆ.

    ಘಟನೆ ನಡೆದ ಬರೋಬ್ಬರಿ 10 ವರ್ಷಗಳ ಬಳಿಕ ಹರ್ಭಜನ್ ಈ ಕುರಿತು ಮಾತನಾಡಿದ್ದು, ನಾನು ಶ್ರೀಶಾಂತ್ ಮೇಲೆ ಕೈ ಮಾಡಬಾರದಿತ್ತು. ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಜೊತೆಗೆ ಆಡಿದ್ದ ಶ್ರೀಶಾಂತ್ ಒಬ್ಬ ಉತ್ತಮ ಆಟಗಾರನಾಗಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಶುಭಕೋರುತ್ತೇನೆ. ಜನರು ಈ ಬಗ್ಗೆ ಎಷ್ಟೇ ಮಾತನಾಡಿದ್ರು, ಇಂದಿಗೂ ಶ್ರೀಶಾಂತ್ ನನ್ನ ಸಹೋದರ ಎಂದು ಹೇಳಿದ್ದಾರೆ.

    2008ರ ಐಪಿಎಲ್ ಆವೃತ್ತಿ ವೇಳೆ ಮುಂಬೈ ತಂಡ ಹಾಗೂ ಪಂಜಾಬ್ ತಂಡದಲ್ಲಿ ಇದ್ದ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಕಪಾಳ ಮೋಕ್ಷ ಘಟನೆ ನಡೆದಿತ್ತು. ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆದ ವೇಳೆ ಘಟನೆ ನಡೆದಿತ್ತು. ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಶಾಕ್‍ಗೆ ಗುರಿ ಮಾಡಿತ್ತು. ಶ್ರೀಶಾಂತ್ ಪಂದ್ಯದಲ್ಲಿ ಗೆದ್ದ ವೇಳೆ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಹರ್ಭಜನ್ ಸಿಂಗ್ ಕೋಪದಿಂದ ಶ್ರೀಶಾಂತ್ ಮೇಲೆ ಕೈ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ.

    ಈ ಹಿಂದೆಯೂ ಕೂಡ ಹರ್ಭಜನ್ ಘಟನೆ ಬಗ್ಗೆ ಮಾತನಾಡಿ ತಮ್ಮ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಿಗ್ ಬಾಸ್‍ನಲ್ಲಿ ಭಾಗವಹಿಸಿರುವ ಶ್ರೀಶಾಂತ್ ಗೆ ಕ್ಷಮೆ ಕೋರಿದ್ದಾರೆ. ಘಟನೆ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಶಾಂತ್, ಅಂದು ಹರ್ಭಜನ್ ಕೇವಲ ನನಗೆ ಕಪಾಳ ಮೋಕ್ಷ ಮಾತ್ರವಷ್ಟೇ ಮಾಡಿರಲಿಲ್ಲ, ಬಲವಾಗಿ ಹೊಡೆದಿದ್ದರು ಎಂದು ನೆನಪಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಿದ ಡಿಕೆ ಶಿವಕುಮಾರ್

    ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಿದ ಡಿಕೆ ಶಿವಕುಮಾರ್

    ಬೆಳಗಾವಿ:  ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ರೆಲಾ ಆಸ್ಪತ್ರೆ ವಿಚಾರದಲ್ಲಿ ತಾವು ನೀಡಿದ ಹೇಳಿಕೆಯನ್ನು ಬಿಜೆಪಿ ಮುಖಂಡರು ತಿರುಚಿದ್ದು, ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಭಾವಿಸುವುದು ಬೇಡ. ಒಂದೊಮ್ಮೆ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

    ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಡಿಕೆಶಿ, ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಒಂದು ಉತ್ತಮ ಆಸ್ಪತ್ರೆ ನಿರ್ಮಾಣ, ನಿರ್ವಹಣೆಗೆ ಯಾವುದೇ ಜಾತಿ, ಧರ್ಮದ ಲೇಪ ಇರುವುದಿಲ್ಲ ಎಂಬುದು ನನ್ನ ಮಾತಿನ ತಿರುಳಾಗಿತ್ತು. ನೈಜ ಭಾವನೆಯ ಈ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ ಎಂದು ಆರೋಪಿಸಿದರು.

    ತಮ್ಮ ಹೇಳಿಕೆಯನ್ನು ಯಾರೂ ತಪ್ಪಾಗಿ ಭಾವಿಸುವುದು ಬೇಡ. ಒಂದೊಮ್ಮೆ ತಮ್ಮ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಡಿಕೆಶಿ ಹೇಳಿದ್ದೇನು?
    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವರು, ಆಸ್ಪತ್ರೆಯಲ್ಲಿ ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಬೆಂಗಳೂರು: ಹೆತ್ತ ಕಂದ ಅಮ್ಮನ ಮೇಲೆ ಕೈ ಮಾಡಿದ್ರು, ಕ್ಷಮಿಸಿ ತನ್ನ ಮಗನನ್ನು ಬಂಧ ಮುಕ್ತಗೊಳಿಸಲು ತಾಯಿ ಮುಂದಾಗಿದ್ದಾರೆ.

    ಅಮ್ಮನನ್ನ ಪೊರಕೆಯಲ್ಲಿ ಹೊಡೆದ ಮಗನಿಗೆ ಕ್ಷಮಾ ಬಿಕ್ಷೆ ನೀಡಲು ತಾಯಿ ನಿರ್ಧರಿಸಿದ್ದಾರೆ. ಶನಿವಾರದಂದು ಜೆ ಪಿ ನಗರದಲ್ಲಿ ತಾಯಿ ಮೇಲೆ ಪೊರಕೆಯಲ್ಲಿ ಮಗನೊಬ್ಬ ಹಲ್ಲೆ ಮಾಡಿದ್ದನು. ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಪೊರಕೆಯಿಂದ ಮಗ ಹೊಡೆದಿದ್ದನು. ಇದೀಗ ತನ್ನ ಕಂದನ ಮೇಲೆ ದೂರು ದಾಖಲಿಸಬೇಡಿ ಎಂದು ಪೊಲೀಸರ ಮೊರೆ ಹೋಗಿ ಮಗನ ಭವಿಷ್ಯ ಹಾಳಾಗುತ್ತೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ನಾನು ನನ್ನ ಮಗನಿಗೆ ಬುದ್ಧಿ ಹೇಳ್ತೀನಿ ಇಷ್ಟಕ್ಕೆ ಇದು ಸಾಕು, ದಯಮಾಡಿ ಅವನನ್ನ ಬಿಟ್ಟು ಬಿಡಿ ಎಂದು ಪೊಲೀಸರಿಗೆ ತಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಜೆಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಹುಡುಗನ ಅಮ್ಮ ಮನವಿ ಮಾಡಿದ್ದಕ್ಕೆ ಮಗನಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!

    ಭಾನುವಾರ ರಾತ್ರಿ ಹುಡುಗನ ಮೇಲೆ ಎಫ್‍ಐಆರ್ ದಾಖಲಾಗಿದ್ದ ಹಿನ್ನೆಲೆ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹುಡುಗ ಬಾಲಾಪರಾಧಿ ಎಂದು ಪತ್ತೆಯಾದ ಬಳಿಕ ತಾಯಿ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಮಂಗಳವಾರ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹುಡುಗನನ್ನ ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಗದಗ: ಶಿಕ್ಷಕನ ಅನುಚಿತ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಭೋಪಳಾಪೂರ ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಂ ಹೋನಕೇರಿ ಎಂಬ ಶಿಕ್ಷಕ ಶಾಲೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು. ಕೆಲವೊಮ್ಮೆ ಅಸಭ್ಯದಿಂದ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಜಡಿದು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಷಯ ತಿಳಿದು ಆರೋಪಿತ ಶಿಕ್ಷಕ ಶಾಲೆಗೆ ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಥಳಕ್ಕೆ ರೋಣ ಬಿಇಓ ನಂಜುಂಡಯ್ಯ ಹಾಗೂ ಸಿಆರ್ ಪಿ ಅಧಿಕಾರಿಗಳು ಆಗಮಿಸಿದ್ದು, ಸಮಸ್ಯೆ ಆಲಿಸಲು ಬಂದ ಬಿಇಓಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

    ಶಿಕ್ಷಕನ ಅನುಚಿತ ವರ್ತನೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಿಮಗೆ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಶಿಕ್ಷಕನ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ ಅಂತ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕ ವಿ.ಎಂ ಹೊನಕೇರಿ ಅಮಾನತ್ತುಗೊಳಿಸುವಂತೆ ರೋಣ ಬಿಇಓ ನಂಜುಂಡಯ್ಯಗೆ ಕೆಲಕಾಲ ದಿಗ್ಭಂದನ ಹಾಕಿದ್ದರು. ಕೊನೆಗೆ ಶಿಕ್ಷಕ ಹೊನಕೇರಿ ಗ್ರಾಮಸ್ಥರ ಎದುರು ಕೈಮುಗಿದು ಕ್ಷಮೆ ಕೇಳಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv