Tag: ಕ್ಷಮೆ

  • ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ: ಕೇರಳ ಕೈ ನಾಯಕ

    ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯನ್ನು ‘ಕೋವಿಡ್ ರಾಣಿ’ ಎಂದಿದ್ದಕ್ಕೆ ಕ್ಷಮೆ ಕೇಳಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಎಂ. ರಾಮಚಂದ್ರನ್ ಅವರು ಹೇಳಿದ್ದಾರೆ.

    ಶುಕ್ರವಾರ ಮಾತನಾಡಿದ್ದ ರಾಮಚಂದ್ರನ್, ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಇದಾದ ನಂತರ ಕೈ ನಾಯಕನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಲಾಗಿತ್ತು.

    ಈಗ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ ರಾಮಚಂದ್ರನ್, ನಾನು ಏನು ಹೇಳಿದ್ದೇನೆ ಅದು ಸರಿ. ನಾನು ಯಾರನ್ನೂ ಅವಮಾನ ಮಾಡಿಲ್ಲ. ನಾನು ಹೇಳಿದ್ದರ ಪರವಾಗಿ ನಾನು ನಿಲ್ಲುತ್ತೇನೆ. ನಾನು ಯಾರನ್ನೂ ಕ್ಷಮೆ ಕೇಳಲು ಹೋಗುವುದಿಲ್ಲ. ಕೆಲ ವಿದೇಶಿ ಮಾಧ್ಯಮಗಳು ಅವರನ್ನು ‘ರಾಕ್‍ಸ್ಟಾರ್’ ಮತ್ತು ಕೊರೊನಾವನ್ನು ಕೊಂದವರು ಎಂದು ಬಣ್ಣಿಸುತ್ತಾರೆ. ಹಾಗೆಯೇ ನಾನು ಕೂಡ ರಾಣಿಗೆ ಹೊಲಿಸಿದ್ದೇನೆ ಅದರಲ್ಲೇನು ತಪ್ಪಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    ನಾನು ಒಂದು ಹೆಣ್ಣಿನ ವಿರುದ್ಧ ಹೇಳಿಕೆಯನ್ನು ನೀಡುವ ವ್ಯಕ್ತಿಯಲ್ಲ. ನಾನು ಯಾವಾಗಲೂ ಮಹಿಳೆಯರ ಕಲ್ಯಾಣ ಮತ್ತು ಗೌರವಕ್ಕಾಗಿ ಮುಂದೆ ನಿಲ್ಲುವಂತಹ ವ್ಯಕ್ತಿ. ಹೀಗಾಗಿ ನಾನು ಕ್ಷಮೆ ಕೇಳಲ್ಲ ಎಂದು ರಾಮಚಂದ್ರನ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಕೈ ನಾಯಕ ಈ ಹೇಳಿಕೆ ಸರಿಯಿಲ್ಲ. ಒಂದು ಪಕ್ಷದ ನಾಯಕನಾಗಿ ಒಂದು ಮಹಿಳೆಯ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಬಾರದು. ಅವರು ಕ್ಷಮೆ ಕೇಳಲೇ ಬೇಕು ಎಂದು ಕೇರಳದ ಕೆಲ ನಾಯಕರು ಆಗ್ರಹಿಸಿದ್ದರು.

    ಎಂ.ರಾಮಚಂದ್ರನ್ ಹೇಳಿದ್ದೇನು?
    ಆರೋಗ್ಯ ಸಚಿವೆ ಶೈಲಜಾ ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ರಾಮಚಂದ್ರನ್, ನಿಫಾ ವೈರಸ್ ವೇಳೆಯೂ ಇದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ ನಲ್ಲಿ `ಅತಿಥಿ ಕಲಾವಿಧೆ’ ಆಗಿದ್ದರು. ನಿಫಾ ರಾಜಕುಮಾರಿ ಆಗಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

  • ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ವಾಷಿಂಗ್ಟನ್: ಪ್ರತಿಭಟನೆಯ ವೇಳೆ ಮಹಾತ್ಮ ಗಾಂಧೀಜಿ ಪ್ರತಿಮೆಯ ಭಗ್ನವಾಗಿದ್ದಕ್ಕೆ ಅಮೆರಿಕ ಕ್ಷಮೆ ಕೇಳಿದೆ.

    ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಕಪ್ಪು ವರ್ಣಿಯರು ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ.

    ಪ್ರತಿಮೆ ಭಗ್ನಗೊಂಡ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಅಮೆರಿಕದ ರಾಯಭಾರಿ ಕೆನ್ ಜಸ್ಟರ್, ಬಹಳ ಬೇಸರವಾಗುತ್ತಿದೆ. ವಾಷಿಂಗ್ಟನ್ ನಗರದಲ್ಲಿ ಗಾಂಧಿ ಪ್ರತಿಮೆ ಭಗ್ನವಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ರತಿಭಟನೆ ಯಾಕೆ?
    ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ವಾರದಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

    ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ. ಪೊಲೀಸರು ಸಾರ್ವಜನಿಕರಲ್ಲಿ ಕ್ಷಮೆ ಕೇಳಿದರೂ ಆಕ್ರೋಶ ಮಾತ್ರ ನಿಂತಿಲ್ಲ.

    ಮುಂಜಾಗ್ರತಾ ಕ್ರಮವಾಗಿ ಹಲವು ನಗರಗಳಲ್ಲಿ ಕರ್ಫ್ಯೂ  ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು ಬಳಸಲಾಗುತ್ತಿದೆ.

  • ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    ಬೀಚ್‍ನಲ್ಲಿ ಯುವಕನೊಂದಿಗೆ 19ರ ಹುಡ್ಗಿ ಸೆಕ್ಸ್

    – ಪೊಲೀಸರ ಬಳಿ ಕೈ ಮುಗಿದು ಕ್ಷಮೆ

    ಬ್ಯಾಂಕಾಕ್: ಜೋಡಿಯೊಂದು ಕುಡಿದ ಮತ್ತಿನಲ್ಲಿ ಬೀಚ್‍ನ ತೀರದಲ್ಲಿ ಸೆಕ್ಸ್ ಮಾಡಿದ್ದಾರೆ. ಬಳಿಕ ಅವರು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿರುವ ಘಟನೆ ಥೈಲ್ಯಾಂಡ್‍ನ ಪ್ರಸಿದ್ಧ ಪಟ್ಟಾಯ ಬೀಚ್‍ನಲ್ಲಿ ನಡೆದಿದೆ.

    ಜೋಡಿಯನ್ನು ರೋಮನ್ ಗ್ರಿಗೊರೆಂಕೊ (26) ಮತ್ತು ದರಿಯಾ ವಿನೋಗ್ರಾಡೋವಾ (19) ಎಂದು ತಿಳಿದು ಬಂದಿದೆ. ಇಬ್ಬರೂ ರಷ್ಯಾ ಮೂಲದವರಾಗಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಥೈಲ್ಯಾಂಡ್‍ಗೆ ಬಂದಿದ್ದರು. ಜೋಡಿ ಸೆಕ್ಸ್ ಮಾಡಿರುವುದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ಕೊಟ್ಟಿದ್ದಾರೆ. ಬೀಚ್‍ನಲ್ಲಿ ಅನೇಕ ಮಂದಿ ಓಡಾಡುತ್ತಿದ್ದರೂ ಜೋಡಿ ಅಸಭ್ಯವಾಗಿ ನಡೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪೊಲೀಸರು ವಿಡಿಯೋ ನೋಡಿ ಜೋಡಿ ಉಳಿದುಕೊಂಡಿದ್ದ ಹೋಟೆಲ್ ಪತ್ತೆ ಮಾಡಿ ಅವರನ್ನು ಬಂಧಿಸಿದ್ದರು. ನಂತರ ಅವರಿಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ್ದು ಅಪರಾಧ. ಇದರಿಂದ ನಗರದ ಬೀಚ್ ಖ್ಯಾತಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮ್ಮನ್ನು ಕ್ಷಮಿಸಿ” ಎಂದು ರೋಮನ್ ಕೇಳಿಕೊಂಡಿದ್ದಾನೆ.

    ಜೋಡಿ ಕ್ಷಮೆ ಕೇಳಿದ ನಂತರ ಪೊಲೀಸರು ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಬೀಚ್‍ನ ಸಮೀಪದಲ್ಲಿ ಜೋಡಿ ಮದ್ಯಪಾನ ಮಾಡಿದ್ದರು. ಅಲ್ಲದೇ ಬೀಚ್ ಬಳಿಯೂ ಕುಡಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ಅವರು ಎಲ್ಲಿದ್ದೇವೆ ಎಂಬ ಅರಿವನ್ನು ಕಳೆದುಕೊಂಡಿದ್ದರು. ಹೀಗಾಗಿ ಇಬ್ಬರು ಲೈಂಗಿಕ ಸಂಬಂಧ ಹೊಂದಿದ್ದಾರೆ. ಅಲ್ಲಿ ಸಿಸಿಟಿವಿಯನ್ನು ಪರಿಶೀಲನೆ ಮಾಡಿ ಅವರನ್ನು ಬಂಧಿಸಿದ್ದೆವು. ಕಳೆದ ವಾರವೂ ಇದೇ ಬೀಚ್‍ನಲ್ಲಿ ಇಂತಹ ಘಟನೆ ನಡೆದಿತ್ತು. ಇದರಿಂದ ಬೀಚ್‍ನ ಖ್ಯಾತಿಗೆ ಧಕ್ಕೆಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ- ಕ್ಷಮೆಯಾಚಿಸಲ್ಲ

    ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ- ಕ್ಷಮೆಯಾಚಿಸಲ್ಲ

    ನವದೆಹಲಿ: ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು, ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

    ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸತ್ಯ ಹೇಳಿದ್ದರ ಕುರಿತು ನಾನೆಂದೂ ಕ್ಷಮೆಯಾಚಿಸುವುದಿಲ್ಲ. ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು ರಾಹುಲ್ ಸಾವರ್ಕರ್ ಅಲ್ಲ. ನಾನೂ ಕ್ಷಮೆಯಾಚಿಸುವುದಿಲ್ಲ, ಕಾಂಗ್ರೆಸ್‍ನ ಯಾವ ನಾಯಕರೂ ಈ ರೀತಿ ಕ್ಷಮೆಯಚಿಸುವುದಿಲ್ಲ ಎಂದರು.

    ಕ್ಷಮೆ ಕೇಳಬೇಕಿರುವುದು ನಾನಲ್ಲ. ದೇಶದ ಆರ್ಥಿಕತೆಯನ್ನು ನಾಶಪಡಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಹಾಯಕ ಅಮಿತ್ ಶಾ ಕ್ಷಮೆಯಾಚಿಸಬೇಕು. ಲೋಕಸಭೆಯ ಅಧಿವೇಶನದಲ್ಲಿಯೂ ನಾನು ಈ ಕುರಿತು ಸ್ಪಷ್ಟಪಡಿಸಿದ್ದೇನೆ. ನಾನು ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ತಿರಸ್ಕರಿಸಿದರು.

    ತಮ್ಮ ಹೇಳಿಕೆ ಕುರಿತು ಲೋಕಸಭೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದೇ ಪತ್ರಿಕೆಗಳನ್ನು ತೆರೆದು ನೋಡಿದರೂ ಅದರಲ್ಲಿ ಬಹುತೇಕ ಅತ್ಯಾಚಾರದ ಸುದ್ದಿಗಳೇ ಕಣ್ಣಿಗೆ ಕಾಣುತ್ತವೆ. ಹೀಗಾಗಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಆಗಿದೆ ಎಂದು ಹೇಳಿಕೆ ನೀಡಿದೆ ಎಂದರು.

    ಜಾರ್ಖಂಡ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿದ್ದ ಅವರು, ಪ್ರಧಾನಿ ಮೋದಿ ಮೇಕ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಆಡಳಿತ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದವು. ಅಲ್ಲದೆ ಈ ಕುರಿತು ಲೋಕಸಭೆಯಲ್ಲಿ ಸಹ ಪಟ್ಟು ಹಿಡಿಯುವ ಮೂಲಕ ಗದ್ದಲ ಎಬ್ಬಿಸಲಾಗಿತ್ತು.

  • ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದಿದ್ದಕ್ಕೆ ಕ್ಷಮೆಯಾಚಿಸಿದ ಸೋನಾಲಿ

    ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದಿದ್ದಕ್ಕೆ ಕ್ಷಮೆಯಾಚಿಸಿದ ಸೋನಾಲಿ

    ಚಂಡೀಗಢ: ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದಿದ್ದ ಟಿಕ್ ಟಾಕ್ ಸ್ಟಾರ್, ಮುಂಬರುವ ವಿಧಾನ ಸಭಾ ಚುನಾವಣೆಯ ಬಿಜೆಪಿ ಆಭ್ಯರ್ಥಿ ಸೋನಾಲಿ ಪೋಗಟ್ ಕ್ಷಮೆ ಕೇಳಿದ್ದಾರೆ.

    ಮಂಗಳವಾರ ಆದಂಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಸೋನಾಲಿ ಪೋಗಟ್, ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದು ವಿವಾದಾತ್ಮಕ ಹೇಳಿಕೆಯೊದನ್ನು ನೀಡಿದ್ದರು. ಈಗ ವಿಚಾರವಾಗಿ ಕ್ಷಮೆಯಾಚಿಸಿರುವ ಪೋಗಟ್ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಇಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೋನಾಲಿ ಪೋಗಟ್, ನಾನು ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿದೆ. ಆದರೆ ಕೆಲ ಯುವಕರ ಅದನ್ನು ಮತ್ತೆ ಜೋರಾಗಿ ಹೇಳಲಿಲ್ಲ. ಅದ್ದರಿಂದ ನನಗೆ ಕೋಪ ಬಂದು ನೀವು ಪಾಕಿಸ್ತಾನದವರೇ ಎಂದು ಕೇಳಿದೆ. ಈ ಹೇಳಿಕೆ ಈಗ ಈ ರೀತಿ ತಿರುವು ಪಡೆದುಕೊಂಡಿದೆ ಎಂದು ತಿಳಿಸಿದರು.

    ನಾನು ಈ ಮಾತನ್ನು ಯಾವುದೇ ಕೆಟ್ಟ ಉದ್ದೇಶದಿಂದ ಹೇಳಲಿಲ್ಲ. ರಾಷ್ಟ್ರಕ್ಕೆ ಗೌರವ ಸೂಚಿಸುವ ಕೆಲ ಘೋಷಣೆಗಳನ್ನು ಕೂಗಿ ಯುವಕರಲ್ಲಿ ದೇಶಾಭಿಮಾನವನ್ನು ಹುಟ್ಟುಹಾಕಬೇಕು ಎಂಬ ಉದ್ದೇಶದಿಂದ ಹೇಳಿದೆ. ನನ್ನ ಈ ಹೇಳಿಕೆಯಿಂದ ಬೇರೆಯವರ ಭಾವನೆಗಳಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಸೋನಾಲಿ ಪೋಗಟ್ ವಿಡಿಯೋದಲ್ಲಿ ಹೇಳಿದ್ದಾರೆ.

    ಸೋನಾಲಿ ಪೋಗಟ್ ಹೇಳಿದ್ದೇನು?
    ಮಂಗಳವಾರ ನಡೆದ ಸಮಾವೇಶದಲ್ಲಿ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಆದರೆ ವೇದಿಕೆಯ ಎಡಭಾಗದಲ್ಲಿದ್ದ ಕೆಲವರು ಜೋರಾಗಿ ಘೋಷಣೆ ಕೂಗಲಿಲ್ಲ. ಇದರಿಂದ ಕೋಪಗೊಂಡ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಅಥವಾ ಪಾಕಿಸ್ತಾನದವರಾ? ನೀವು ಹಿಂದೂಸ್ತಾನ್ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿ ಎಂದರು.

    ಸೋನಾಲಿ ಪೋಗಟ್ ಮತ್ತೆ ಭಾರತ್ ಮಾತಾ ಕೀ ಘೋಷಣೆ ಕೂಗಿದರು. ಆಗಲೂ ವೇದಿಕೆ ಎಡಭಾಗದ ಜನರಿಂದ ಏರು ಧ್ವನಿಯಲ್ಲಿ ಘೋಷಣೆ ಕೇಳಿಬರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಸೋನಾಲಿ ಪೋಗಟ್, ನಾನು ನಿಮ್ಮ ಬಗ್ಗೆ ನಾಚಿಕೆ ಪಡುತ್ತೇನೆ. ಸಣ್ಣ ರಾಜಕೀಯದ ಕಾರಣಕ್ಕಾಗಿ ಭಾರತ್ ಮಾತಾ ಕೀ ಜೈ ಎಂದು ಹೇಳಲಾದ ನಿಮ್ಮಂತಹ ಭಾರತೀಯರಿದ್ದಾರೆ. ನಿಮ್ಮ ಮತಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದ್ದರು.

  • ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ವಿಯಯಪುರ: ತಕ್ಷಣವೇ ಸಂಸದ ತೇಜಸ್ವಿ ಸೂರ್ಯ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಅನುದಾನ ಬೇಕಿಲ್ಲ ಎಂದಿದ್ದ ತೇಜಸ್ವಿ ಸೂರ್ಯ ಸಂತ್ರಸ್ತರ ಬಳಿ  ಕ್ಷಮೆ ಕೇಳದಿದ್ದರೆ ಅವರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದರು.

    ಸಂತ್ರಸ್ತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ಕನ್ನಡಿಗರಿಗೆ ಅಗೌರವ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಸಂಸದ ತೇಜಸ್ವಿ ಸೂರ್ಯಗೆ ಎಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ. ಬೆಳಗಾವಿಯಲ್ಲಿ ಕುಳಿತು ಹೀಗೆ ಹೇಳುತ್ತಾರೆ. ದೆಹಲಿಯಲ್ಲಿ ಹೇಗೆ ಹೇಳಿರಬೇಡ. ಪ್ರಧಾನಿ ಮೋದಿ ಎದುರು ಏನು ಹೇಳಿರಬೇಕು. ಮೋದಿ ರಾಜ್ಯಕ್ಕೆ ಭೇಟಿ ಕೊಡದೆ ಇರೋದಕ್ಕೆ ತೇಜಸ್ವಿ ಸೂರ್ಯ ಕಾರಣ ಎಂದು ಪ್ರಶ್ನೆಗಳ ಸುರಿಮಳೆಗೈದರು. ತೇಜಸ್ವಿ ಸೂರ್ಯ ಮೋದಿಗೆ ಮಿಸ್ ಗೈಡ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಅನರ್ಹ ಶಾಸಕರ ಮುಂದಿನ ನಡೆಯ ಬಗ್ಗೆ ಗೊತ್ತಾಗುತ್ತಿಲ್ಲ. ಅನರ್ಹ ಶಾಸಕರು ಪಕ್ಷ ದ್ರೋಹ ಮಾಡಿದ್ದಾರೆ. ಅನರ್ಹ ಶಾಸಕರು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ರಾಜ್ಯ ದ್ರೋಹ ಹಾಗೂ ಪ್ರಜಾಪ್ರಭುತ್ವದ ವಿರೋಧ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು. ಅಲ್ಲದೆ ಅವರಿಗೆ ತಕ್ಕ ಪಾಠ ಆಗಬೇಕು. ಸುಪ್ರಿಂ ಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದರು.

  • ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಸ್ ಟಕ್ಸಾಸ್‍ನ ಸೆನೆಟರ್(ಸಂಸದ) ಜಾನ್ ಕಾರ್ನಿನ್ ಅವರ ಪತ್ನಿಯ ಜನ್ಮದಿನದಂದು ಕ್ಷಮೆಯಾಚಿಸಿದ್ದಾರೆ.

    60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕಾರ್ನಿನ್ ಅವರ ಪತ್ನಿ ಸ್ಯಾಂಡಿಯವರನ್ನು ನೇರವಾಗಿ ಉದ್ದೇಶಿಸಿ ಅವರ ಬಳಿ ಮೋದಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಸಮೃದ್ಧ ಹಾಗೂ ಶಾಂತಿಯುತ ಭವಿಷ್ಯ ನಿಮ್ಮದಾಗಲೆಂದು ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.

    ನಾನು ಕ್ಷಮೆ ಕೇಳಲು ಬಯಸುತ್ತೇನೆ, ಏಕೆಂದರೆ ಇಂದು ನಿಮ್ಮ ಜನ್ಮದಿನ ಮತ್ತು ನಿಮ್ಮ ಉತ್ತಮ ಜೀವನ ಸಂಗಾತಿ ನನ್ನೊಂದಿಗಿದ್ದಾರೆ. ಆದ್ದರಿಂದ ಸ್ವಾಭಾವಿಕವಾಗಿ ನಿಮಗೆ ಜಲಸ್ ಆಗಿರಬೇಕು ಎಂದು ಮೋದಿ ಹೇಳಿದ್ದಾರೆ. ಆಗ ಮೋದಿ ಪಕ್ಕದಲ್ಲೇ ಇದ್ದ 67 ವರ್ಷದ ಸೆನೆಟರ್ ಮೋದಿಯವರನ್ನು ನೋಡಿ ಮುಗುಳುನಕ್ಕಿದ್ದಾರೆ.

    ನಿಮಗೆ ಶುಭ ಹಾರೈಸುತ್ತೇನೆ, ಸಂತೋಷದ, ಸಮೃದ್ಧಯುತ ಶಾಂತಿಯ ಭವಿಷ್ಯ ನಿಮ್ಮದಾಗಲಿ ಎಂದು ಬಯಸುತ್ತೇನೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಈ ದಂಪತಿಗೆ ಮದುವೆಯಾಗಿ 40 ವರ್ಷಗಳಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ.

    ಭಾನುವಾರ ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನುದ್ದೇಶಿಸಿ ಭಾಷಣ ಮಾಡಿದ್ದರು.

  • ಪ್ರತಾಪ್ ಸಿಂಹ ವಿಷಾದ – ಕ್ಷಮೆಯನ್ನು ಅಂಗೀಕರಿಸುತ್ತೇನೆ ಎಂದ ಪ್ರಕಾಶ್ ರೈ

    ಪ್ರತಾಪ್ ಸಿಂಹ ವಿಷಾದ – ಕ್ಷಮೆಯನ್ನು ಅಂಗೀಕರಿಸುತ್ತೇನೆ ಎಂದ ಪ್ರಕಾಶ್ ರೈ

    ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ತನ್ನ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿಷಾದ ವ್ಯಕ್ತಪಡಿಸಿದ್ದಾರೆ.

    ಪ್ರತಾಪ್ ಸಿಂಹ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ರೈ ಅವರು ಕೇವಲ 1 ರೂ. ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಸಂಬಂಧ ಟ್ವೀಟ್ ಮಾಡಿ ಸದ್ಯ ಪ್ರತಾಪ್ ಸಿಂಹ ಅವರು ವಿಷಾದ ಕೋರಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ‘ಆತ್ಮೀಯ ಪ್ರಕಾಶ್ ರಾಜ್ ಅವರೇ, 2017 ಅಕ್ಟೋಬರ್ 2 ಮತ್ತು 3 ರಂದು ನಿಮ್ಮ ಹಾಗೂ ನಿಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಲೇಖನವನ್ನು ಪೋಸ್ಟ್ ಮಾಡಿದ್ದೆ. ಆದರೆ ಈ ಪೋಸ್ಟ್ ಗಳು ಅನಗತ್ಯ ಹಾಗೂ ನೋಯಿಸುವ ಅಂಶಗಳನ್ನು ಹೊಂದಿತ್ತು ಎಂಬುವುದನ್ನು ಅರ್ಥೈಸಿಕೊಂಡಿದ್ದೇನೆ. ಆದ್ದರಿಂದ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಪೋಸ್ಟ್‍ಗೆ ನಾನು ವಿಷಾದಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಪ್ರತಾಪ ಸಿಂಹ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು, ಧನ್ಯವಾದ, ನಾನು ನಿಮ್ಮ ಕ್ಷಮೆಯನ್ನು ಅಂಗೀಕರಿಸುತ್ತೇನೆ. ನಮ್ಮ ನಡುವೆ ಹಲವು ವಿಚಾರಗಳಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು. ಇಬ್ಬರು ತಮ್ಮದೇ ಕ್ಷೇತ್ರದಲ್ಲಿ ಉತ್ತಮ ಮಟ್ಟದಲ್ಲಿ ಇದ್ದೇವೆ. ಹೀಗಾಗಿ ನಾವು ಮಾದರಿಯಾಗಿ ಇರುವುದು ನಮ್ಮ ಕರ್ತವ್ಯವಾಗಿದೆ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ.

    ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
    ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು.

    ನ್ಯಾಯಮೂರ್ತಿಗಳ ಕಳವಳ: ಇಂದು ಶಾಸಕರು ಸಂಸದರ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರು ಉತ್ತರ ಕರ್ನಾಟಕದ ನೆರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಬ್ಬರು ಸೆಲೆಬ್ರೆಟಿಗಳಾಗಿದ್ದು, ಸಮಾಜಕ್ಕೆ ಮಾದರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಿದ್ಯಾ? ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ತಿನ್ನಲು ಊಟ ಇಲ್ಲದ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ದೃಶ್ಯಗಳನ್ನು ನೋಡಿದರೆ ಕಣ್ಣೀರು ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳ ಕಡೆ ಗಮನಹರಿಸಿ ಎಂದು ಪ್ರತಾಪ್ ಸಿಂಹ ಅವರಿಗೆ ಸಲಹೆ ನೀಡಿದ್ದರು.

  • ಅಭಿಮಾನಿ ಬಳಿ ಕ್ಷಮೆ ಕೇಳಿದ ಸನ್ನಿ ಲಿಯೋನ್

    ಅಭಿಮಾನಿ ಬಳಿ ಕ್ಷಮೆ ಕೇಳಿದ ಸನ್ನಿ ಲಿಯೋನ್

    ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಸಿನಿಮಾದಲ್ಲಿ ಫೋನ್ ನಂಬರ್ ಬಳಸಿಕೊಂಡಿದ್ದಕ್ಕೆ ಅಭಿಮಾನಿ ಬಳಿ ಕ್ಷಮೆ ಕೇಳಿದ್ದಾರೆ.

    ಇತ್ತೀಚೆಗೆ ಸನ್ನಿ ಲಿಯೋನ್ ಖಾಸಗಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸನ್ನಿ ಲಿಯೋನ್ ಚಿತ್ರದ ದೃಶ್ಯವೊಂದರಲ್ಲಿ ನಿಮ್ಮ ಫೋನ್ ನಂಬರ್ ದುರುಪಯೋಗಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅಲ್ಲದೆ ನಿಮಗೆ ಈ ರೀತಿ ಆಗಬೇಕು ಎಂದು ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

    ಜುಲೈ 26ರಂದು ‘ಅರ್ಜುನ ಪಟಿಯಾಲಾ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ದೃಶ್ಯವೊಂದರಲ್ಲಿ ನಟಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ತಿಳಿಸುತ್ತಾರೆ. ಇದು ನಿಜವಾಗಿಯೂ ಸನ್ನಿ ಲಿಯೋನ್ ನಂಬರ್ ಎಂದು ತಿಳಿದುಕೊಂಡಿದ್ದ ಅಭಿಮಾನಿಗಳು ಕರೆ ಮಾಡಲು ಶುರು ಮಾಡಿದ್ದಾರೆ. ಆದರೆ ಈ ನಂಬರ್ ದೆಹಲಿಯ ಪೀತಮಪುರದ ಯುವಕ ಪುನೀತ್ ಅಗರ್ ವಾಲ್ ಅವರ ಆಗಿದ್ದು, ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

    ಈ ರೀತಿಯ ಕರೆಗಳಿಂದ ಬೇಸತ್ತ ಪುನೀತ್ ಜುಲೈ 30ರಂದು ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದರು. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ಪುನೀತ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಸಿನಿಮಾ ಬಿಡುಗಡೆಯಾಗಿದ್ದು, ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ. ಆದರೆ ಎಲ್ಲ ಕರೆಗಳಿಗೂ ನಾನು ಸನ್ನಿ ಲಿಯೋನ್ ಅಲ್ಲ ಎಂದು ಹೇಳುತ್ತಿದ್ದೇನೆ. ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ ಎಂದು ಪುನೀತ್ ಆರೋಪಿಸಿದ್ದಾರೆ. ಕರೆ ಮಾಡಿದ ಬಹುತೇಕರು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಭೇಟಿಗೆ ಒಪ್ಪದಿದ್ದರೆ ನಿಂದಿಸಲು ಆರಂಭಿಸುತ್ತಾರೆ. ಇದರಿಂದ ಮಾನಸಿಕವಾಗಿ ನೊಂದು ಪುನೀತ್ ದೂರು ದಾಖಲಿಸಿದ್ದರು.

  • ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ಕಂಕನಾಡಿ ಪೊಲೀಸರು ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.

    ಸೇತುವೆಗೆ ಬಂದ ಬಳಿಕ ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರು ಬಳಿ ಬಂದಿಲ್ಲ ಎಂದು ಬಸವರಾಜ್ ಹೇಳಿದ್ದಾರೆ.

    ಅಲ್ಲದೆ ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ನಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.