Tag: ಕ್ಷಮೆ

  • ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

    ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

    ಕೊಲಂಬೋ: ಅತ್ಯಂತ ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪಿಗೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಕ್ಷಮೆ ಕೇಳಿದ್ದಾರೆ. ಈ ತಪ್ಪನ್ನು ಸರಿ ಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

    ಭೀಕರ ಆರ್ಥಿಕ ಸ್ಥಿತಿಯಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಇದರ ಮಧ್ಯೆಯೇ ಸೋಮವಾರ ಹೊಸ 17 ಸದಸ್ಯರ ಕ್ಯಾಬಿನೆಟ್ ಅನ್ನು ನೇಮಿಸಿದ್ದರು. ಈ ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಚರ್ಚಿಸುವಾಗ ರಾಜಪಕ್ಸೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಿರೊಧಿ ಪ್ರತಿಭಟನೆಗಳ ನಡುವೆ ಶ್ರೀಲಂಕಾದಲ್ಲಿ ಹೊಸ ಕ್ಯಾಬಿನೆಟ್

    ಕಳೆದ ಎರಡೂವರೆ ವರ್ಷಗಳಲ್ಲಿ ಅತೀ ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕೋವಿಡ್-19 ನೊಂದಿಗೆ ಸಾಲದ ಹೊರೆ ನಮ್ಮನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಲು ಕಾರಣವಾಯಿತು. ನಮ್ಮ ಕಡೆಯಿಂದ ಕೆಲವು ತಪ್ಪುಗಳಾಗಿವೆ. ಅವುಗಳನ್ನು ಸರಿಪಡಿಸಬೇಕಾಗಿದೆ. ಅವುಗಳನ್ನು ಸರಿಪಡಿಸಿ, ಮುನ್ನಡೆದು, ಜನರ ವಿಶ್ವಾಸವನ್ನು ಮರಳಿ ಪಡೆಯಬೇಕು ಎಂದು ರಾಜಪಕ್ಸೆ ತಿಳಿಸಿದರು. ಇದನ್ನೂ ಓದಿ: ಸಣ್ಣ ರಸ್ತೆ ಅಪಘಾತದಿಂದ ಕೋಮು ಗಲಭೆ – ದೇವಾಲಯ ಧ್ವಂಸ, 22 ಮಂದಿ ಅರೆಸ್ಟ್

    ಶ್ರೀಲಂಕಾ ವಿದೇಶಿ ವಿನಿಮಯಕ್ಕೆ ಹಣದ ಕೊರತೆಯನ್ನು ಎದುರಿಸುತ್ತಿದ್ದು, ಸುಮಾರು 25 ಶತಕೋಟಿ ಡಾಲರ್(1.90 ಲಕ್ಷ ಕೋಟಿ ರೂ.)ಗಳಷ್ಟು ಮರುಪಾವತಿಯೂ ಬಾಕಿ ಇದೆ. ಜನರು ತಿಂಗಳುಗಳಿಂದ ಆಹಾರ, ಅಡುಗೆ ಅನಿಲ, ಇಂಧನ, ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆ ಅನುಭವಿಸುತ್ತಿದ್ದಾರೆ.

  • ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಔತಣಕೂಟ – ಬೋರಿಸ್ ಜಾನ್ಸನ್, ರಿಷಿ ಸುನಾಕ್ ಕ್ಷಮೆ

    ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಔತಣಕೂಟ – ಬೋರಿಸ್ ಜಾನ್ಸನ್, ರಿಷಿ ಸುನಾಕ್ ಕ್ಷಮೆ

    ಲಂಡನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ, ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಾಕ್ ಪಾರ್ಟಿಗೇಟ್ ಹಗರಣಕ್ಕೆ ಸಂಬಂಧ ಪಟ್ಟಂತೆ ಕ್ಷಮೆ ಯಾಚಿಸಿ, ದಂಡವನ್ನು ಭರಿಸಿದ್ದಾರೆ.

    2020ರ ಜೂನ್‌ನಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೋರಿಸ್ ಜಾನ್ಸನ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ ರಿಷಿ ಸುನಾಕ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಆರಂಭದಲ್ಲಿ ಯಾವುದೇ ಕಾನೂನುಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದ ಜಾನ್ಸನ್ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಯಾಚಿಸಿದ ಜಾನ್ಸನ್, ದಂಡವನ್ನು ಪಾವತಿಸಿರುವುದನ್ನು ದೃಢಪಡಿಸಿದ ಬಳಿಕ ರಿಷಿ ಸುನಾಕ್ ಕೂಡ ಕ್ಷಮೆ ಯಾಚಿಸಿದ್ದಾರೆ. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

    2020-21ರ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ವೈಟ್‌ಹೌಸ್‌ನಲ್ಲಿರುವ ಡೌನಿಂಗ್ ಹಾಗೂ ಇತರ ಬ್ರಿಟನ್ನಿನ ಸರ್ಕಾರಿ ಕಚೇರಿಗಳಲ್ಲಿ ಸುಮಾರು 12 ಔತಣಕೂಟಗಳು ನಡೆದಿದೆ ಎಂದು ವರದಿಯಾಗಿತ್ತು. ಇದನ್ನು ಪಾರ್ಟಿಗೇಟ್ ಹಗರಣ ಎಂದು ಕರೆಯಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.

  • ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

    ನವದೆಹಲಿ: ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಗೂಗಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಗೂಗಲ್ ಇದೀಗ ಕನ್ನಡದಲ್ಲೇ ಕನ್ನಡಿಗರ ಕ್ಷಮೆಯಾಚಿಸಿದೆ.

    ಈ ಕುರಿತು ಟ್ವೀಟ್ ಮಾಡಿರುವ ಗೂಗಲ್, ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್‍ನೆಟ್ ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಅಲ್ಗೊರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. ಇದನ್ನೂ ಓದಿ: ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ: ಹೆಚ್‍ಡಿಕೆ ಕಿಡಿ

    ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಬಳಿಕ ವೆಬ್‍ಸೈಟ್ ಪೇಜ್ ಅನ್ನು ಗೂಗಲ್ ತನ್ನ ಸರ್ಚ್‍ನಿಂದಲೇ ತೆಗೆದು ಹಾಕಿತ್ತು.

    ಆಗಿದ್ದು ಏನು?
    www.debtconsolidationsquad.com ವೆಬ್‍ಸೈಟ್‍ Which is the ugliest language in india ಪ್ರಶ್ನೆಗೆ ಕನ್ನಡ ಉತ್ತರವನ್ನು ನೀಡಿತ್ತು. ಈ ಪುಟದಲ್ಲಿರುವ ಮಾಹಿತಿ ಗೂಗಲ್ ಸರ್ಚ್‍ನಲ್ಲಿ ಕಾಣುತ್ತಿತ್ತು.

    ಗೂಗಲ್ ಸರ್ಚ್‍ನಲ್ಲಿ ಈ ಮಾಹಿತಿ ಕಾಣುತ್ತಿದ್ದಂತೆ ಇಂದು ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ರಿಪೋರ್ಟ್ ಮಾಡಲು ಆರಂಭಿಸಿದರು. ಜನರ ರಿಪೋರ್ಟ್ ಗಮನಿಸಿದ ಗೂಗಲ್ ಸರ್ಚ್ ಈಗ ಆ ಉತ್ತರ ಪ್ರದರ್ಶನವಾಗುತ್ತಿದ್ದ ಪುಟವನ್ನೇ ಸರ್ಚ್‍ನಿಂದ ತೆಗೆದು ಹಾಕಿದೆ. ಇದನ್ನೂ ಓದಿ:  ಕನ್ನಡ ಕೊಳಕು ಭಾಷೆ ಎಂದ ವೆಬ್‍ಸೈಟ್ – ಪೇಜ್ ಅನ್ನು ಸರ್ಚ್‍ನಿಂದ ಕಿತ್ತೆಸೆದ ಗೂಗಲ್

    ಗೂಗಲ್‍ನದ್ದು ತಪ್ಪಿಲ್ಲ:
    ಈ ಪ್ರಮಾದ ಗೂಗಲ್‍ನಿಂದ ಆಗಿದ್ದಲ್ಲ. ಬಳಕೆದಾರರು ಯಾವುದೇ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹತ್ತಿರದ ಮಾಹಿತಿಯನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಲ್ಲಿ ತೋರಿಸುತ್ತದೆ. ಹೀಗಾಗಿ www.debtconsolidationsquad.com ವೆಬ್‍ಸೈಟ್ ನಲ್ಲಿ Which is the ugliest language in India ಪ್ರಶ್ನೆ ಇದ್ದ ಕಾರಣ ಆ ವೆಬ್‍ಸೈಟ್ ತೋರಿಸಿದೆ. ಗೂಗಲ್ ಯಾವಾಗಲೂ ಸರ್ಚ್ ಮಾಡಿದ ಫಲಿತಾಂಶವನ್ನು ನೀಡುತ್ತದೆ ಹೊರತು ಉದ್ದೇಶಪೂರ್ವಕವಾಗಿ ಈ ರೀತಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ.

    ಬಳಕೆದಾರ ಹುಡುಕಿದಾಗ ಫಲಿತಾಂಶವನ್ನು ಗೂಗಲ್ ಸರ್ಚ್ ತೋರಿಸುತ್ತದೆಯೋ ಹೊರತು ಆ ಫಲಿತಾಂಶ ಸರಿ ಇದೆಯೋ ತಪ್ಪಿದೆಯೋ ಎಂಬುದನ್ನು ಪರಿಶೀಲಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಅಸಾಧ್ಯ. ಆದರೆ ಬಳಕೆದಾರರಿಗೆ ಆಯ್ಕೆಯನ್ನು ನೀಡಿದ್ದು ಒಂದು ವೇಳೆ ತಪ್ಪು ಮಾಹಿತಿಗಳು ಇದ್ದಲ್ಲಿ ಆ ಪೇಜ್ ಅನ್ನು ರಿಪೋರ್ಟ್ ಮಾಡಬಹುದಾಗಿದೆ. ರಿಪೋರ್ಟ್‍ಗಳ ಸಂಖ್ಯೆ ಜಾಸ್ತಿಯಾದರೆ ಗೂಗಲ್ ಸರ್ಚ್‍ನಲ್ಲಿ ಕೆಲಸ ಮಾಡುವವರು ಈ ವಿಚಾರವನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಆ ಪೇಜ್‍ಗಳನ್ನು ಸರ್ಚ್‍ನಿಂದ ತೆಗೆದು ಹಾಕುತ್ತಾರೆ. ಗೂಗಲ್ ಸರ್ಚ್‍ನ ಕೊನೆಯಲ್ಲಿ ‘Send Feedback’ ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಬಹುದಾಗಿದೆ.

  • ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ

    ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ

    ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿರುವ ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯ ಕುರಿತಾಗಿ ಟ್ವೀಟ್ ಮಾಡುವ ಮೂಲಕವಾಗಿ ಕ್ಷಮೆಯಾಚಿಸಿದ್ದಾರೆ.

    ಉಪೇಂದ್ರ ಅವರು ನಿಧಿ ಸಂಗ್ರಹಿಸುವ ಮೂಲಕ ಅಗತ್ಯವಸ್ತುಗಳು ಹಾಗೂ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಇದರ ನಡುವೆ ವಿವಾದವೊಂದಕ್ಕೀಡಾಗಿದ್ದರು. ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟಿದ್ದು, ಅದಕ್ಕೆ ಈಗ ಕ್ಷಮೆ ಯಾಚಿಸಿದ್ದಾರೆ.

    ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿರುವ ಹೇಳಿಕೆ ಯಾರೋ ಇಂಗ್ಲಿಷ್‍ನವರು ಹೇಳಿರುವುದು ಎಂದು ತಿಳಿದು ಅದರ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಅರಿತ ಉಪೇಂದ್ರ ಈ ಹೇಳಿಕೆಯನ್ನು ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದು ಎಂದು ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟೆ. ಕ್ಷಮೆ ಇರಲಿ ಎಂದು ಉಪೇಂದ್ರ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

    ಕ್ಷಮೆ ಕೇಳುತ್ತಿದ್ದಂತೆಯೇ ಸಾಕಷ್ಟು ಮಂದಿ ತಿಳಿಯದೆ ಮಾಡಿದ್ದು ತಪ್ಪು ಅದನ್ನು ಅರಿತುಕೊಳ್ಳುವುದು ಮುಖ್ಯ. ನೀವು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಮೊದಲು ಸಂವಿಧಾನವನ್ನು ಓದಿಕೊಂಡು ನಂತರ ಪ್ರಜಾಕೀಯ ಮಾಡಲು ಹೋಗಿ ಎಂದು ವ್ಯಂಗ್ಯ ಮಾಡಿದ್ದಾರೆ. ಉಪೇಂದ್ರ ಅವರ ನಿಧಿ ಸಂಗ್ರಹ ಕಾರ್ಯಕ್ಕೆ ಸಾಕಷ್ಟು ಕಡೆಗಳಿಂದ ನೆರವು ಹರಿದು ಬರುತ್ತಿದೆ.

  • ಜಿಲ್ಲೆಯ ಜನರ ಕ್ಷಮೆ ಕೇಳುವಂತೆ ಹೇಳಿರೋ ರೋಹಿಣಿ ಸಿಂಧೂರಿಗೆ ಸಾರಾ ಮಹೇಶ್ ಪ್ರಶ್ನೆಗಳ ಸುರಿಮಳೆ!

    ಜಿಲ್ಲೆಯ ಜನರ ಕ್ಷಮೆ ಕೇಳುವಂತೆ ಹೇಳಿರೋ ರೋಹಿಣಿ ಸಿಂಧೂರಿಗೆ ಸಾರಾ ಮಹೇಶ್ ಪ್ರಶ್ನೆಗಳ ಸುರಿಮಳೆ!

    ಮೈಸೂರು: ಜಿಲ್ಲೆಯ ಜನರ ಬಳಿ ಕ್ಷಮೆ ಕೇಳಬೇಕು ಎಂದ ಜಿಲಾಧಿಕಾರಿ ರೋಹಿಣಿ ಸಿಂಧೂರಿಗೆ ಮಾಜಿ ಸಚಿವ ಸಾರಾ ಮಹೇಶ್ ಅವರು ಪ್ರಶ್ನೆಗಳ ಸುಮಳೆಗೈದರು.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡಿಗ, ದಲಿತ ಅಧಿಕಾರಿಯನ್ನು ಒಂದೇ ತಿಂಗಳಲ್ಲಿ ಎತ್ತಂಗಡಿ ಮಾಡಿಸಿ ಆ ಸ್ಥಾನಕ್ಕೆ ಬಂದಿದ್ದು ಸತ್ಯ ಅಲ್ವಾ?, ಸಿಎಟಿ ಅನ್ನೇ ಮ್ಯಾನೇಜ್ ಮಾಡಿ ಇಲ್ಲಿ ಉಳಿದು ಕೊಂಡಿದ್ದು ಸತ್ಯ ಅಲ್ವಾ?, ಸ್ವಿಮಿಂಗ್ ಫ್ಹುಲ್ ಕಟ್ಟಿ ಕೊಂಡಿದ್ದು ಸತ್ಯ ಅಲ್ವಾ?, 200 ಕೋಟಿ ಸರಕಾರ ದ ಹಣನಾ ತಿರುಪತಿ ಕೊಟ್ಟಿದ್ದು ಸತ್ಯ ಅಲ್ವಾ?, ಇಬ್ಬರು ಐಎಎಸ್ ಅಧಿಕಾರಿಗಳ ಅವಿವೇಕದಿಂದ ಇಡೀ ರಾಜ್ಯ ಹೊತ್ತಿ ಉರಿಯಿತು. ಇಷ್ಟೆ ಅಲ್ಲ ಅದರೂ ನಮ್ಮ ಕೈಯಲ್ಲಿ ವ್ಯವಸ್ಥೆ ಬದಲಾಯಿಸಲು ಆಗಲಿಲ್ಲ ಅಂತಾ ನಾವು ಜನರ ಕ್ಷಮೆ ಕೇಳಬೇಕಿದೆ. ಆರೋಪ ಬಂದ ಅಧಿಕಾರಿಗಳನ್ನು ಇಟ್ಟುಕೊಂಡು ಸತ್ಯ ಹುಡುಕಿದರೆ ಸತ್ಯ ಹೊರಬರುತ್ತದಾ ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಹಾಕಿದ್ದಾರೆ.

    ಲಾಕ್ ಡೌನ್ ಹಿನ್ನೆಲೆ ಬಡ ಶ್ರಮಿಕ ವರ್ಗದವರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಶಾಸಕರ ಒಂದು ವರ್ಷದ ವೇತನ ಹಿಡಿದು ಕೊಂಡು ಶ್ರಮಿಕ ವರ್ಗದ ವರಿಗೆ ಆರ್ಥಿಕ ಸಹಾಯ ಮಾಡಿ. ಮೈಸೂರಿನಲ್ಲಿ ಟೆಸ್ಟಿಂಗ್ ಕಡಮೆ ಮಾಡಲಾಗಿದೆ. ಇದರಿಂದ ಪಾಸಿಟಿವ್ ಸಂಖ್ಯೆ ಕಡಮೆ ಆಗುತ್ತಿದೆ. ಕೊರೊನಾ ಇಳಿಮುಖ ಆಗುತ್ತಿದೆ ಎಂದು ತೋರಿಸಲು ಈ ರೀತಿ ಟೆಸ್ಟ್ ಕಡಮೆ ಮಾಡಲಾಗಿದೆ ಎಂದು ಇದೇ ವೇಳೆ ಮಾಜಿ ಸಚಿವರು ಗಂಭೀರ ಆರೋಪ ಮಾಡಿದರು.

    ರೋಹಿಣಿ ಸಿಂಧೂರಿ ಹೇಳಿದ್ದೇನು..?
    ಈ ಹಿಂದೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಸಿ, ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪೋರ್ಟ್ ನೋಡಿದ್ದೀರಾ? ನಾವು ಬಂದ ದಿನದಿಂದ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ನಮ್ಮ ಮೇಲೆ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತರಲು ಪ್ರಯತ್ನಿಸಿದ್ದರು. ಅದರಿಂದ ನಾವು ಮುಕ್ತರಾಗಿದ್ದೇವೆ. ಆದರೆ ಕಳಂಕ ತರಲು ಪ್ರಯತ್ನಿಸಿದವರು ಮೈಸೂರು ಜನರ ಕ್ಷಮೆ ಕೇಳಬೇಕು. ನಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಮತ್ತು ಆಧಾರ ರಹಿತ. ಸರ್ಕಾರ ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದರು.

  • ಕ್ಷಮೆ ಕೇಳಿದರೆ ಸಾಲಲ್ಲ, ದೃಶ್ಯಕ್ಕೆ ಕತ್ತರಿ ಹಾಕಿ – ಪೊಗರು ವಿರುದ್ಧ ಬ್ರಾಹ್ಮಣರ ಪ್ರತಿಭಟನೆ

    ಕ್ಷಮೆ ಕೇಳಿದರೆ ಸಾಲಲ್ಲ, ದೃಶ್ಯಕ್ಕೆ ಕತ್ತರಿ ಹಾಕಿ – ಪೊಗರು ವಿರುದ್ಧ ಬ್ರಾಹ್ಮಣರ ಪ್ರತಿಭಟನೆ

    ಬೆಂಗಳೂರು: ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ  ಸಮುದಾಯವರು ಆಗ್ರಹಿಸಿದ್ದಾರೆ.

    ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದಾರೆ.

    ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಿದೆ.

    ಪೊಗರು ಸಿನಿಮಾದ ವಿರುದ್ಧ ಇಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದ್ದು, ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಿದ್ದಾರೆ.

    ಪೊಗರು ನಿರ್ಮಾಪಕ ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಪೊಗರು ಸಿನಿಮಾ ಸೆನ್ಸಾರ್‌ ಆಗಿದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು. ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನು ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು. ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ. ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ ಕಾಲ ಅವಕಾಶ ಬೇಕು ಎಂದು ಹೇಳಿದರು.

  • ಶೂಟಿಂಗ್‍ ಸೆಟ್‌ಗೆ ನುಗ್ಗಿದ ದರ್ಶನ್ ಅಭಿಮಾನಿಗಳು – ಕ್ಷಮೆ ಕೇಳಿದ ಜಗ್ಗೇಶ್

    ಶೂಟಿಂಗ್‍ ಸೆಟ್‌ಗೆ ನುಗ್ಗಿದ ದರ್ಶನ್ ಅಭಿಮಾನಿಗಳು – ಕ್ಷಮೆ ಕೇಳಿದ ಜಗ್ಗೇಶ್

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕೀಳಾಗಿ ನಟ ಜಗ್ಗೇಶ್ ಮಾತನಾಡಿದ್ದಾರೆ ಎಂಬ ವಿಚಾರದ ಕುರಿತಾಗಿ ತೋತಾಪುರಿ ಸೆಟ್‍ನಲ್ಲಿ ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆ ಮಾಡಿದ್ದಾರೆ.

    ಮೈಸೂರಿನ ಟಿ ನರಸೀಪುರದಲ್ಲಿ ನಡೆಯುತ್ತಿದ್ದ ತೋತಾಪುರಿ ಶೂಟಿಂಗ್‍ಗೆ ನುಗ್ಗಿದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.


    `ಡಿ ಬಾಸ್’ ಅಭಿಮಾನಿಗಳ ಕ್ಷಮೆ ಕೇಳಿದ ಜಗ್ಗೇಶ್, ದರ್ಶನ್ ಮತ್ತು ನನ್ನ ನಡುವೆ ತಂದಿಡುವ ಹುನ್ನಾರ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಕೀಯ ಇದೆ. ಪಿತೂರಿ ಮಾಡಿದ್ದಾರೆ. ನಾನು ದರ್ಶನ್ ಬಗ್ಗೆ ಆ ರೀತಿ ಮಾತನಾಡಲೇ ಇಲ್ಲ. ನಾನು ಒಂದು ಪತ್ರಿಕೆಯ ಬಗ್ಗೆ ಮಾತನಾಡಿದೆ. ಈ ವಿಚಾರವನ್ನು ಇಟ್ಟುಕೊಂಡು ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನನಗೆ ಇದಕ್ಕೂ ಸಂಬಂಧವಿಲ್ಲ, ಇಂಡಸ್ಟ್ರೀಯಲ್ಲಿ ದೊಡ್ಡ ರಾಜಕೀಯ ನಡೆಯುತ್ತಿದೆ ಎಂದು ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಜಗ್ಗೇಶ್ ವಿರುದ್ಧವಾಗಿ ಘೋಷಣೆ ಕೂಗಿ, ದರ್ಶನ್ ಅವರ ಬಳಿ ಕ್ಷಮೆ ಕೇಳಬೇಕು. ಒಬ್ಬ ಹಿರಿಯ ನಟರಾಗಿ ನೀವು ಹೇಗಿರಬೇಕು ಎಂದು ಅಭಿಮಾನಿಗಳು ಜಗ್ಗೇಶ್ ಅವರನ್ನು ಕೇಳಿದ್ದಾರೆ. ನಟ ದರ್ಶನ್‍ಗೂ ಕರೆ ಮಾಡಲು ನಟ ಜಗ್ಗೇಶ್ ಯತ್ನಿಸಿದ್ದಾರೆ.

  • ಎಲುಬಿಲ್ಲದ ನಾಲಿಗೆಯ ಹರಿಬಿಡಬೇಡಿ – ಕೃಷಿ ಸಚಿವರಿಗೆ ಹೆಚ್‍ಡಿಕೆ ಕ್ಲಾಸ್

    ಎಲುಬಿಲ್ಲದ ನಾಲಿಗೆಯ ಹರಿಬಿಡಬೇಡಿ – ಕೃಷಿ ಸಚಿವರಿಗೆ ಹೆಚ್‍ಡಿಕೆ ಕ್ಲಾಸ್

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳೊವ ರೈತರು ಹೇಡಿಗಳು ಅನ್ನೋ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಸಚಿವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ ಅಂತ ಕಿಡಿಕಾರಿದ್ದಾರೆ.

    https://twitter.com/hd_kumaraswamy/status/1334458801370460160

    ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ. ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟ ಜೀವಿ ಎಂದು ರೈತರ ಪರವಾಗಿ ನಿಂತಿದ್ದಾರೆ.

    ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಅದು ಬಿಟ್ಟು ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು. ಕೃಷಿ ಸಚಿವರೇ ರೈತ ಸಮುದಾಯದ ವಿರುದ್ಧ ಎಲುಬಿಲ್ಲದ ನಾಲಿಗೆ ಹರಿ ಬಿಟ್ಟಿರುವುದು ಖಂಡನೀಯ. ರೈತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

  • ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    – ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ
    – ಮೆಸೇಜ್ ಕಳಿಸಿದವರಲ್ಲಿ ನಟ ಕ್ಷಮೆ

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಭಾರತವನ್ನು ಒಕ್ಕರಿಸಿದ ಬಳಿಕ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರು ಸಂಕಷ್ಟಕ್ಕೀಡಾದವರ ನೆರವಿಗೆ ನಿಲ್ಲುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

    ವಿದೇಶದಲ್ಲಿರುವ ಭಾರತೀಯರನ್ನು ಹಾಗೆಯೇ ಬಡವರ ಪರ ನಿಂತು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಾವಿರಾರು ಮಂದಿಯ ಕಷ್ಟಕಾಲಕ್ಕೆ ಬೆನ್ನುಲುಬಾಗಿ ನಿಂತು ಸಹಾಯ ಮಾಡಿದ್ದರೂ ನಟ ಇದೀಗ ಜನರ ಮುಂದೆ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಸಹಾಯ ಮಾಡುವಂತೆ ಮನವಿ- ಮೂವರು ಅನಾಥ ಮಕ್ಕಳ ದತ್ತು ಪಡೆದ ಸೋನು ಸೂದ್

    ಹೌದು. ಕಷ್ಟದಲ್ಲಿವರಿಗೆ ನೆರವು ನೀಡುವ ಸಲುವಾಗಿ ಸಹಾಯವಾಣಿ ಆರಂಭಿಸಿದ್ದ ನಟನಿಗೆ ಇದೀಗ ಸಾಮಾಜಿಕ ಜಾಲತಾಂಗಳ ಮೂಲಕ ಅನೇಕ ಮನವಿಗಳು ಬರುತ್ತಿದೆ. ಪ್ರತಿ ದಿನ 32 ಸಾವಿರ ಸಂದೇಶಗಳು ಸಹಾಯ ಮಾಡುವಂತೆ ಬರುತ್ತಿದ್ದು, ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ಸೋನು ಸೂದ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ನಟನಿಗೆ ಸುಮಾರು 1,137 ಇಮೇಲ್, 19 ಸಾವಿರ ಫೇಸ್‍ಬುಕ್ ಮೆಸೇಜ್, 4,812 ಇನ್ಸ್ ಸ್ಟಾಗ್ರಾಂ ಮೆಸೇಜ್, 6,741 ಟ್ವಿಟ್ಟರ್ ನಲ್ಲಿ ಸಹಾಯ ಮಾಡುವಂತೆ ಮನವಿಗಳು ಬರುತ್ತಿವೆ. ಸಹಾಯಕ್ಕಾಗಿ ಇಷ್ಟೊಂದು ಮನವಿಗಳು ಬಂದರೆ ಒಬ್ಬನೇ ವ್ಯಕ್ತಿ ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ?. ಎಲ್ಲರನ್ನೂ ಸಂಪರ್ಕಿಸಲೂ ಸಾಧ್ಯವಿಲ್ಲ. ಆದರೂ ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ನಟ ಭರವಸೆ ನೀಡಿದ್ದಲ್ಲದೆ, ಒಂದು ವೇಳೆ ನಿಮ್ಮ ಮೆಸೇಜ್ ನೋಡಿಲ್ಲ ಎಂದರೆ ದಯವಿಟ್ಟು ಕ್ಷಮಿಸಿಬಿಡಿ ಎಂದು ತಿಳಿಸಿದ್ದಾರೆ.

    ಕಳೆದ ಬುಧವಾರ ಕರ್ನಾಟಕದ ವರಲಕ್ಷ್ಮಿ ಎಂಬಾಕೆ ನಟನ ಬಳಿ ತನಗೊಂದು ತರಕಾರಿ ಅಂಗಡಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ನಟ, ಹೊಸ ಅಂಗಡಿಯೊಂದಿಗೆ ನಿಮ್ಮ ಬೆಳಗ್ಗಿನ ದಿನ ಪ್ರಾರಂಭವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

  • ಜನರ ಬಳಿ ಕ್ಷಮೆ ಕೇಳಿದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ

    ಜನರ ಬಳಿ ಕ್ಷಮೆ ಕೇಳಿದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ

    ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ತನ್ನ ಕ್ಷೇತ್ರದ ಜನರ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

    ಇಂದು ಪುಂಡರ ಕೃತ್ಯಕ್ಕೆ ಬಲಿಯಾಗಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯನ್ನು ಮಹಜರ್ ಮಾಡಲು ಪೊಲೀಸರು ಆಗಮಿಸಿದ್ದರು. ಜೊತೆಗೆ ಸುಟ್ಟ ವಾಹನಗಳು ಹಾನಿಯಾಗಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ವೀಕ್ಷಣೆ ಮಾಡಿದರು. ಈ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಖಂಡ ಶ್ರೀನಿವಾಸ್ ಅವರು ಮನೆ ನೋಡಲು ಬಂದಿದ್ದರು. ಈ ವೇಳೆ ಹಲವಾರು ಬೆಂಬಲಿಗರು, ಸ್ಥಳೀಯ ನಿವಾಸಿಗಳು ಅವರ ಮನೆಯ ಹತ್ತಿರ ಸೇರಿದ್ದರು.

    ಮನೆ ಹತ್ತಿರ ಬಂದ ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಗಲಭೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ನಷ್ಟವಾಗಿದೆ? ಈ ನಷ್ಟವನ್ನು ತುಂಬುವುದು ಹೇಗೆ ಎಂದು ಶಾಸಕರಿಗೆ ಪ್ರಶ್ನೆ ಕೇಳಿದರು. ಸ್ಥಳೀಯರ ಪ್ರಶ್ನೆಗಳಿಗೆ ಉತ್ತರಿಸಲು ಆಗದ ಶಾಸಕರು ಮೌನಕ್ಕೆ ಶರಣಾದರು. ಜೊತೆಗೆ ಹೆಣಗಳ ಮೇಲೆ ರಾಜಕೀಯ ಮಾಡುವುದನ್ನು ಬಿಡಿ. ಗಾಂಜಾ ಹೊಡೆದು ದುಷ್ಕೃತ್ಯ ಎಸಗಿದ್ದಾರೆ. ಬೈಕ್ ನಲ್ಲಿ ಕೂತು ಹಣ ಹಂಚಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸ್ತಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳೀಯರ ಮಾತುಗಳನ್ನು ಕೇಳಿಸಿಕೊಂಡು ಮೌನವಾಗಿದ್ದ ಶ್ರೀನಿವಾಸ್ ಅವರು, ನಂತರ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹಿರಂಗವಾಗಿ ಜನರಲ್ಲಿ ಕ್ಷಮೆಯಾಚಿಸಿದರು. ಆಗ ಸ್ಥಳೀಯರು ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀವೇ ನಿಂತು ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದರು. ಇದೇ ವೇಳೆ ಶಾಸಕರ ಮನೆ ಸುತ್ತಮುತ್ತ ಜನರು ಜಾಮಾಹಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಜಾರ್ಚ್ ಮಾಡಿದರು.