Tag: ಕ್ಷಮಾದಾನ

  • ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ –  ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

    ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

    – ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
    – ಕ್ಷಮಾದಾನ ಸಲ್ಲಿಸಲು 8 ವಾರಗಳ ಅವಕಾಶ

    ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್‌ ಬಿ.ವಿ.ಗಿರೀಶ್‌ (Techie Girish) ಅವರನ್ನು ಗೆಳೆಯನ ಸಹಕಾರದಿಂದ ಕೊಲೆ ಮಾಡಿದ್ದಕ್ಕೆ ಶುಭಾ ಶಂಕರ್ (Shubh Shankar) ಹಾಗೂ ಇತರ ಮೂವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ (Supreme Court) ಸೋಮವಾರ ಎತ್ತಿ ಹಿಡಿದಿದೆ.

    ಕರ್ನಾಟಕ ಹೈಕೋರ್ಟ್‌ನ (Karnataka High Court) ಆದೇಶವನ್ನು ಎತ್ತಿ ಹಿಡಿದ ನ್ಯಾ. ಎಂ.ಎಂ.ಸುಂದರೇಶ್‌ ಮತ್ತು ಅರವಿಂದ್ ಕುಮಾರ್ ಅವರ ದ್ವಿಸದಸ್ಯ ಪೀಠ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದೆ.

    ಶುಭಾ ತನ್ನ ಕಾಲೇಜು ಗೆಳೆಯ ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಅಪರಾಧಕ್ಕೆ ಕಾರಣವಾದ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ಬಗ್ಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.  ಇದನ್ನೂ ಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು ಸುಪ್ರೀಂ

    ಯುವತಿಯ ಮೇಲೆ ಹೇರಲಾದ ಬಲವಂತದ ವಿವಾಹವೇ ಅಪರಾಧಕ್ಕೆ ಕಾರಣ ಎಂಬುದನ್ನು ಅಭಿಪ್ರಾಯಪಟ್ಟ ಕೋರ್ಟ್‌ ಬಂಧನ ಮತ್ತು ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ತಡೆ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನ ಸಲ್ಲಿಸಲು ಅಪರಾಧಿಗಳಿಗೆ 8 ವಾರಗಳ ಅವಕಾಶ ನೀಡಿದೆ.

    court order law

    ಶುಭಾ ಇತರ ಆರೋಪಿಗಳೊಂದಿಗೆ ಸೇರಿ ತನಗೆ ಮದುವೆಯಾಗಲು ಇಷ್ಟವಿಲ್ಲದ ಯುವಕನ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

    ಬಲವಂತದ ಕುಟುಂಬದ ನಿರ್ಧಾರದಿಂದ ಮುಗ್ಧ ಯುವಕನ ದುರಂತ ಕೊಲೆಗೆ ಕಾರಣವಾಯಿತು. ಇದು ಇತರ ಮೂವರ ಜೀವನವನ್ನು ನಾಶಮಾಡಿತು.  ಕೊಲೆಗೈದವರು ಜನ್ಮತ: ಅಪರಾಧಿಗಳಲ್ಲ. ಅಪಾಯಕಾರಿ ನಿರ್ಧಾರ ಕೈಗೊಂಡಿದ್ದರಿಂದ ಘೋರ ಅಪರಾಧಕ್ಕೆ ಕಾರಣವಾಯಿತು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ನೇಮಕ

    ಏನಿದು ಪ್ರಕರಣ?
    2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಗಿರೀಶ್‌ ಭಾವಿ ಪತ್ನಿ ಶುಭಾ, ಆಕೆಯ ಪ್ರಿಯತಮ ಅರುಣ್‌ ವರ್ಮಾ, ಸ್ನೇಹಿತರಾದ ವೆಂಕಟೇಶ್‌, ದಿನೇಶ್‌ ಕೃತ್ಯದಲ್ಲಿ ಭಾಗಿಯಾಗಿದ್ದರು. ನಿಶ್ಚಿತಾರ್ಥ ನಡೆದ ನಾಲ್ಕೇ ದಿನದಲ್ಲಿ ಗಿರೀಶ್‌ ಹತ್ಯೆ ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

    ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ನಿಶ್ಚಿತಾರ್ಥವು 2003ರ ನವೆಂಬರ್‌ನಲ್ಲಿ ನಡೆದಿತ್ತು. ಅವರ ವಿವಾಹವು ಐದು ತಿಂಗಳಲ್ಲಿ ನಡೆಯಬೇಕಿತ್ತು. ಈ ಮದುವೆ ಶುಭಾಗೆ ಇಷ್ಟ ಇರಲಿಲ್ಲ. ಶುಭಾ ಕಾಲೇಜಿನಲ್ಲಿ ತಮ್ಮ ಜೂನಿಯರ್ ಆಗಿದ್ದ ಅರುಣ್‌ನನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕೆ ಶುಭಾ ಮತ್ತು ಅರುಣ್‌ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾರೆಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ 17 ನೇ ತ್ವರಿತ ನ್ಯಾಯಾಲಯ ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿತ್ತು. ಈ ಆದೇಶವನ್ನು ಶುಭಾ ಮತ್ತು ಇತರರು ಹೈಕೋರ್ಟ್‌ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

  • ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    ನಿರ್ಭಯಾ ಪ್ರಕರಣ- ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತಷ್ಟು ದಿನ ಮುಂದೂಡಿಕೆ ಸಾಧ್ಯತೆ

    – ದೋಷಿ ಅಕ್ಷಯ್ ಕ್ಷಮಾಧಾನ ಅರ್ಜಿ ಸಲ್ಲಿಕೆ

    ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಯನ್ನು ಮುಂದೂಡಲು ಪದೇ ಪದೇ ಯತ್ನಿಸುತ್ತಿದ್ದಾರೆ. ಅಪರಾಧಿಗಳ ಪೈಕಿ ಓರ್ವನಾದ ಅಕ್ಷಯ್ ಕುಮಾರ್ ಠಾಕೂರ್ (31) ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾನೆ.

    ಅಪರಾಧಿಗಳು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ದೋಷಿಗಳಿಗೆ ಗಲ್ಲು ಶಿಕ್ಷೆಯು ಮತ್ತಷ್ಟು ದಿನ ಮುಂದೂಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ನಿರ್ಭಯಾ ಪ್ರಕರಣ: ಕೇಂದ್ರದ ಅರ್ಜಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿದ ನ್ಯಾಯಾಧೀಶೆ

    ಪ್ರಕರಣದ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಫೆಬ್ರವರಿ 16ರಂದು ಹೈ ಡ್ರಾಮಾ ನಡೆಸಿದ್ದ. ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದ. ತಕ್ಷಣವೇ ಜೈಲು ಅಧಿಕಾರಿಗಳು ಆತನನ್ನು ತಡೆದಿದ್ದರು.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಫೆಬ್ರವರಿ 17 ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ನಿರ್ಭಯಾ ಕೇಸ್ – ಕಾಮುಕರ ಗಲ್ಲು ಶಿಕ್ಷೆ ಮುಂದೂಡಿಕೆ?

    ನಿರ್ಭಯಾ ಕೇಸ್ – ಕಾಮುಕರ ಗಲ್ಲು ಶಿಕ್ಷೆ ಮುಂದೂಡಿಕೆ?

    ನವದೆಹಲಿ: ನಿರ್ಭಯಾ ಪ್ರಕರಣದ ದೋಷಿಗಳ ಗಲ್ಲು ಶಿಕ್ಷೆಯ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಮರು ಪರಿಶೀಲನಾ ಅರ್ಜಿ ವಜಾ ಆದ ಬಳಿಕ ಪಟಿಯಾಲ ಹೌಸ್ ಕೋರ್ಟ್ ಜನವರಿ 22ರ ಬೆಳಗ್ಗೆ ಏಳು ಗಂಟೆಗೆ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಡೆತ್ ವಾರೆಂಟ್ ಜಾರಿ ಮಾಡಿತ್ತು.

    ಈ ನಡುವೆ ಅಪರಾಧಿ ಮುಕೇಶ್ ಗಲ್ಲು ಶಿಕ್ಷೆಯಿಂದ ಪಾರು ಮಾಡುವಂತೆ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜನವರಿ 22ರಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರ ತಿಳಿಸಿದೆ.

    ಜೈಲಿನ ನಿಯಮಗಳನ್ನು ಉಲ್ಲೇಖಿಸಿರುವ ಸರ್ಕಾರ, ನಾವು ನಿಯಮಗಳಿಗೆ ಅನುಗುಣವಾಗಿಯೇ ಕೆಲಸ ಮಾಡಬೇಕು. ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಿರುವ ಕ್ಷಮಾದಾನದ ಅರ್ಜಿ ವಿಲೇವಾರಿಯಾಗುವವರೆಗೂ ಗಲ್ಲು ಶಿಕ್ಷೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟಿಗೆ ತಿಳಿಸಿದೆ.

    ವಿನಯ್ ಕುಮಾರ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠ ಮಂಗಳವಾರ ವಜಾಗೊಳಿಸಿತ್ತು.

    ಈ ಅರ್ಜಿ ವಜಾಗೊಂಡ ಕೂಡಲೇ ಮುಕೇಶ್ ರಾಷ್ಟ್ರಪತಿ ಬಳಿ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ರಾಷ್ಟ್ರಪತಿಗಳು ನನ್ನ ಅರ್ಜಿ ಇನ್ನೂ ಇತ್ಯರ್ಥಗೊಂಡಿಲ್ಲ. ಹೀಗಾಗಿ ಡೆತ್ ವಾರಂಟ್ ಜಾರಿಯಾಗಲು ಸಾಧ್ಯವಿಲ್ಲ. ನನ್ನ ಅರ್ಜಿ ಇತ್ಯರ್ಥವಾಗದೇ ಡೆತ್ ವಾರಂಟ್ ಜಾರಿ ಮಾಡುವುದು ಎಷ್ಟು ಸರಿ ಎಂದು ಮುಕೇಶ್ ಪ್ರಶ್ನಿಸಿದ್ದ.

  • ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    – ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?

    ಗಾಂಧಿನಗರ: ಹೈದರಾಬಾದ್ ದಿಶಾ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳನ್ನು ಅತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನ ಮನವಿಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಕ್ಕಳನ್ನು ಅತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧನವಾಗಿರುವ ಆರೋಪಿಗಳ ಕ್ಷಮಾದಾನದ ಪತ್ರವನ್ನು ನಾವು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ನಮ್ಮ ದೇಶದಲ್ಲಿ ಮಹಿಳೆಯ ಸುರಕ್ಷತೆ ಗಂಭೀರವಾದ ಸಮಸ್ಯೆಯಾಗಿದೆ. ಮಕ್ಕಳನ್ನು ಆತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿರುವ ಆರೋಪಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡಬಾರದು. ಸಂಸತ್ತು ಆ ಅರ್ಜಿಯನ್ನು ಪರಿಶೀಲನೆ ಮಾಡಬೇಕು ಎಂದು ರಾಮನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದನ್ನು ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

    ಕ್ಷಮಾದಾನ ಪತ್ರ ಎಂದರೇನು?
    ಶಿಕ್ಷೆಗೊಳಗಾದ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷಿ ವಿಧಿಸಿದರೆ ಆರೋಪಿಗಳು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಬರೆಯುವ ಅವಕಾಶವಿದೆ. ಈ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರಪತಿಗಳು ನೀಡುವ ತೀರ್ಪು ಅಂತಿಮವಾಗುತಿತ್ತು. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದಕ್ಕೆ ಅಂತ್ಯವಾಡಿದ್ದು, ಮಕ್ಕಳನ್ನು ಆತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬರುವ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅಂತಿಮವಾಗಲಿದೆ.

    ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?
    2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ನಡುವೆ ರಾಜ್ಯಪಾಲರಿಗೆ ಆರೋಪಿಗಳು ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಅದನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ. ಹೀಗಿರುವಾಗ ಪ್ರಕರಣದ ದೋಷಿಗಳು ಕ್ಷಮಾದಾನ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಗೃಹ ಸಚಿವಾಲಯವೂ ಈ ಅರ್ಜಿಯನ್ನು ತಿರಸ್ಕರಿಸಿದೆ. ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುತ್ತಾ ಇಲ್ಲವೋ ಎನ್ನುವುದು ಕೆಲ ದಿನಗಳಲ್ಲಿ ರಾಷ್ಟ್ರಪತಿಗಳು ಇತ್ಯರ್ಥಪಡಿಸಲಿದ್ದಾರೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ