Tag: ಕ್ಷಮಾ

  • ದೇವಸ್ಥಾನದಲ್ಲಿ ಮದುವೆಯಾಗಲು ಬಿಡಲ್ಲ – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ

    ದೇವಸ್ಥಾನದಲ್ಲಿ ಮದುವೆಯಾಗಲು ಬಿಡಲ್ಲ – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ

    ಗಾಂಧಿನಗರ: ತನ್ನನ್ನು ತಾನೇ ಮದುವೆಯಾಗುತ್ತೇನೆ ಎಂದು ಹೇಳಿ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಕಡೆ ಭಾರೀ ಸುದ್ದಿಯಾಗುತ್ತಿರುವ ಕ್ಷಮಾಗೆ ಸಂಕಷ್ಟ ಎದುರಾಗಿದೆ. ಕ್ಷಮಾ ಮದುವೆ ವಿರೋಧಿಸಿ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

    ವಡೋದರದ 24 ವರ್ಷದ ಕ್ಷಮಾ ಜೂನ್ 11 ರಂದು ಗೋತ್ರಿಯ ದೇವಸ್ಥಾನದಲ್ಲಿ ಐದು ವ್ರತಗಳನ್ನು ಮಾಡುವ ಮೂಲಕ ವಿವಾಹ ಮಾಡಿಕೊಳ್ಳುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಳು. ದೇವಸ್ಥಾನದಲ್ಲಿ ಮದುವೆ ಆಗುತ್ತಿರುವ ವಿಚಾರಕ್ಕೆ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ತೀವ್ರವಾಗಿ ವಿರೋಧ ವ್ಯಕ್ತಪಡಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗುತ್ತಿದ್ದಾಳೆ ಭಾರತದ ಮೊದಲ ಯುವತಿ – ಗೋವಾದಲ್ಲಿ ಹನಿಮೂನ್

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಈ ರೀತಿಯ ಮದುವೆಗಳಿಗೆ ನಾವು ಅನುಮತಿ ನೀಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ರೀತಿಯ ಮದುವೆ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದರಿಂದ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತದೆ. ಕ್ಷಮಾ ಮಾನಸಿಕ ಅಸ್ವಸ್ಥೆ ಎಂದು ಟೀಕಿಸಿದರು. ಹಿಂದೂ ಸಂಸ್ಕøತಿಯಲ್ಲಿ ಎಲ್ಲಿಯೂ ಹುಡುಗ ಹುಡುಗನನ್ನು ಮದುವೆಯಾಗಬಹುದು ಅಥವಾ ಹುಡುಗಿ ಹುಡುಗಿಯನ್ನು ಮದುವೆಯಾಗಬಹುದು ಎಂದು ಬರೆಯಲಾಗಿಲ್ಲ. ನಾನು ಆಕೆ ಮದುವೆಯಾಗಲು ಆಯ್ಕೆ ಮಾಡಿಕೊಂಡಿರುವ ಜಾಗವನ್ನು ಮಾತ್ರ ವಿರೋಧಿಸುತ್ತೇನೆ ಎಂದರು.

    ಆಕೆಯನ್ನು ಯಾವುದೇ ದೇವಸ್ಥಾನದಲ್ಲಿ ಮದುವೆಯಾಗಲು ನಾವು ಅನುಮತಿಸುವುದಿಲ್ಲ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಕಿಡಿಕಾರಿದರು.

    ಯಾರಿದು ಕ್ಷಮಾ?
    ಕ್ಷಮಾ ಸಮಾಜಶಾಸ್ತ್ರದಲ್ಲಿ ಪದವಿ ಮುಗಿಸಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆಕೆಯ ತಂದೆ, ತಾಯಿ ಇಬ್ಬರೂ ಇಂಜಿನಿಯರ್‌ಗಳು. ಕ್ಷಮಾ ತಂದೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ ಮತ್ತು ತಾಯಿ ಅಹಮದಾಬಾದ್‍ನಲ್ಲಿದ್ದಾರೆ. ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರಗಳು, ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ – ತಪ್ಪೊಪ್ಪಿಕೊಂಡ ಚರ್ಚ್ ಲೀಡರ್ 

    ಹೆಚ್ಚಿನ ಹುಡುಗಿಯರು ತಮ್ಮನ್ನು ಮದುವೆಯಾಗಬೇಕು ಎನ್ನುವ ಹುಡುಗನ ಬಗ್ಗೆ ನಾನಾ ರೀತಿಯಲ್ಲಿ ಕನಸು ಕಾಣುತ್ತಾರೆ. ಆದರೆ ಕ್ಷಮಾ ತನ್ನ ವರನನ್ನು ತನ್ನೊಳಗೆ ಕಂಡುಕೊಂಡಳು. ಆಕೆ ತನ್ನನ್ನು ತಾನೇ ತುಂಬಾ ಇಷ್ಟಪಡುತ್ತಾಳೆ. ಈ ಹಿನ್ನೆಲೆ ಕ್ಷಮಾ ಬೇರೆಯವರನ್ನು ಮದುವೆಯಾಗಲು ಬಯಸಿಲ್ಲ. ಆದ್ದರಿಂದ ಅವಳು ಸ್ವಯಂ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ.