Tag: ಕ್ವಿಂಟನ್ ಡಿಕಾಕ್

  • ಡಿಕಾಕ್ ಆಟಕ್ಕೆ ರಾಯಲ್ಸ್ ಶರಣು – ಮುಂಬೈಗೆ 7 ವಿಕೆಟ್ ಭರ್ಜರಿ ಜಯ

    ಡಿಕಾಕ್ ಆಟಕ್ಕೆ ರಾಯಲ್ಸ್ ಶರಣು – ಮುಂಬೈಗೆ 7 ವಿಕೆಟ್ ಭರ್ಜರಿ ಜಯ

    ಡೆಲ್ಲಿ: ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಬ್ಯಾಟಿಂಗ್ ನಿಂದಾಗಿ ಮುಂಬೈ 7 ವಿಕೆಟ್‍ಗಳ ಭರ್ಜರಿ ಜಯ ಗಳಿಸಿದೆ.

    ರಾಜಸ್ಥಾನ ತಂಡ ನೀಡಿದ 172ರನ್‍ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ 18.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಇನ್ನೂ 9 ಎಸೆತ ಬಾಕಿ ಇರುವಂತೆ 172 ರನ್ ಸಿಡಿಸುವ ಮೂಲಕ ಜಯ ಗಳಿಸಿತು.

    ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಕ್ವಿಂಟನ್ ಡಿಕಾಕ್ 70 ರನ್(50 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ಮುಂಬೈಗೆ ಗೆಲುವು ತಂದುಕೊಟ್ಟರು. ಇವರಿಗೆ ಮಧ್ಯಮಕ್ರಮಾಂಕದಲ್ಲಿ ಉತ್ತಮ ಸಾಥ್ ನೀಡಿದ ಕೃಣಲ್ ಪಾಂಡ್ಯ 39ರನ್ (26 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಕೈರನ್ ಪೊಲಾರ್ಡ್ 16ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಮುಂಬೈಗೆ ಇನ್ನು 9 ಎಸೆತ ಬಾಕಿ ಇರುವಂತೆಯೆ ಜಯ ತಂದುಕೊಟ್ಟರು.

    ರಾಜಸ್ಥಾನ್ ಪರ ಕ್ರೀಸ್ ಮೋರಿಸ್ 2 ವಿಕೆಟ್ ಮತ್ತು ಮುಸ್ತುಫಿಜುರ್ ರೆಹಮಾನ್ 1 ವಿಕೆಟ್ ಪಡೆದರು.

    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 66ರನ್(47 ಎಸೆತ)ಗಳ ಭದ್ರ ಬುನಾದಿ ಹಾಕಿಕೊಟ್ಟಿತು. ಜೋಸ್ ಬಟ್ಲರ್ 41ರನ್ (32 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ ಯಶಸ್ವಿ ಜೈಸ್ವಾಲ್ 32ರನ್ (20 ಎಸೆತ, 2ಬೌಂಡರಿ, 2 ಸಿಕ್ಸರ್) ಬಾರಿಸಿ ರಾಹುಲ್ ಚಹರ್‍ ಗೆ ವಿಕೆಟ್ ಒಪ್ಪಿಸಿದರು.

    ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಪಟಪಟನೆ ಬೌಂಡರಿ ಬಾರಿಸಿ 42ರನ್ ( 27 ಎಸೆತ, 5 ಬೌಂಡರಿ) ಸಿಡಿಸುವ ಮೂಲಕ ಶಿವಂ ದುಬೆ ಜೊತೆ ಮೂರನೇ ವಿಕೆಟ್‍ಗೆ 57ರನ್(49 ಎಸೆತ)ಗಳ ಜೊತೆಯಾಟವಾಡಿ ಮಧ್ಯಮಕ್ರಮಾಂಕದಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ 35ರನ್ (31 ಎಸೆತ, 2 ಬೌಂಡರಿ, 2 ಸಿಕ್ಸ್) ಕಾಣಿಕೆ ನೀಡಿದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‍ ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಮಾಡಿತು.

    ಮುಂಬೈ ಪರ ರಾಹುಲ್ ಚಹರ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.

  • ದ.ಆಫ್ರಿಕಾ ಕ್ರಿಕೆಟ್ ನಿರ್ದೇಶಕರಾಗುತ್ತಿದಂತೆ ಮಹತ್ವದ ನಿರ್ಧಾರ ಪ್ರಕಟಿಸಿದ ಸ್ಮಿತ್

    ದ.ಆಫ್ರಿಕಾ ಕ್ರಿಕೆಟ್ ನಿರ್ದೇಶಕರಾಗುತ್ತಿದಂತೆ ಮಹತ್ವದ ನಿರ್ಧಾರ ಪ್ರಕಟಿಸಿದ ಸ್ಮಿತ್

    ಜೋಹಾನ್ಸ್ ಬರ್ಗ್: ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‍ಎ) ಮಂಡಳಿಯ ಪೂರ್ಣಕಾಲಿಕ ನಿರ್ದೇಶಕರಾಗಿ ಮಾಜಿ ನಾಯಕ ಗ್ರೇಮ್ಸ್ ಸ್ಮಿತ್ ಶುಕ್ರವಾರ ನೇಮಕಗೊಂಡಿದ್ದಾರೆ.

    ಕಳೆದ ವರ್ಷ ಡಿಸೆಂಬರ್ ನಿಂದ ತಾತ್ಕಾಲಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ 39 ವರ್ಷದ ಸ್ಮಿತ್ ಮುಂದಿನ 2 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ. ಈ ವಿಚಾರವನ್ನು ಸಿಎಸ್‍ಎ ತಾತ್ಕಾಲಿಕ ಮುಖ್ಯ ಕಾರ್ಯನಿರ್ವಾಹಕ ಜಾಕ್ವೆಸ್ ಪಾಲ್ ತಿಳಿಸಿದ್ದಾರೆ.

    ತಾತ್ಕಾಲಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಗ್ರೇಮ್ಸ್ ಸ್ಮಿತ್ ಕಠಿಣ ಶ್ರಮ, ಅನುಭವ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶಗಳನ್ನು ತಂದಿದ್ದರು. ಸ್ಮಿತ್ 2003-14ರ ನಡುವೆ ದಕ್ಷಿಣ ಆಫ್ರಿಕಾ ಪರ 117 ಟೆಸ್ಟ್, 197 ಏಕದಿನ ಹಾಗೂ 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 108 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

    ಇತ್ತ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ಸ್ಮಿತ್ ತಂಡದ ಟೆಸ್ಟ್ ಕ್ಯಾಪ್ಟನ್ ಆಗಿದ್ದ ಡಿಕಾಕ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಾರೆ. ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಮಿತ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ. ಇತ್ತ ಕ್ವಿಂಟನ್ ಡಿಕಾಕ್ ಏಕದಿನ ಮತ್ತು ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.

  • ಡಿ ಕಾಕ್ ಕಾಲಿಗೆ ಬಿದ್ದ ಅಭಿಮಾನಿ – ಕ್ಷಮೆ ಕೇಳಿದ್ದಾನೆ ಎಂದ ನೆಟ್ಟಿಗರು

    ಡಿ ಕಾಕ್ ಕಾಲಿಗೆ ಬಿದ್ದ ಅಭಿಮಾನಿ – ಕ್ಷಮೆ ಕೇಳಿದ್ದಾನೆ ಎಂದ ನೆಟ್ಟಿಗರು

    ರಾಂಚಿ: ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಅಭಿಮಾನಿಯೊಬ್ಬ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.

    ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 202 ರನ್ ಗಳ ಅಂತರದಲ್ಲಿ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದ ಎರಡನೇ ದಿನವಾದ ಭಾನುವಾರ ಭಾರತೀಯ ಅಭಿಮಾನಿಯೊಬ್ಬ ಡಿಕಾಕ್ ಅವರ ಕಾಲಿಗೆ ಬಿದ್ದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ.

    ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಮೀಡ್ ವಿಕೆಟ್‍ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕ್ವಿಂಟನ್ ಡಿಕಾಕ್ ಅವರ ಕಡೆ ಓಡಿ ಬಂದ ಯುವಕನೋರ್ವ ಅವರ ಕಾಲಿಗೆ ಬೀಳುತ್ತಾನೆ. ಇದನ್ನು ಕಂಡ ಡಿಕಾಕ್ ಆಶ್ಚರ್ಯಚಕಿತಗೊಂಡು ನಿಂತು ಬಿಡುತ್ತಾರೆ. ಆಗ ತಕ್ಷಣ ಬಂದ ಭದ್ರತಾ ಸಿಬ್ಬಂದಿ ಯುವಕನನ್ನು ಎಳೆದುಕೊಂಡು ಹೋಗುತ್ತಾರೆ. ಎಳೆದುಕೊಂಡು ಹೋಗುವಾಗ ಯುವಕ ತನ್ನ ಚಪ್ಪಲಿಯನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆ. ಆಗ ಡಿಕಾಕ್ ಆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಮೈದಾನದ ಆಚೆಗೆ ಎಸೆಯುತ್ತಾರೆ.

    ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆತ ಡಿಕಾಕ್ ಅವರ ಬಳಿ ಆಶೀರ್ವಾದ ಪಡೆಯಲು ಬಂದಿಲ್ಲ. ಭಾರತಕ್ಕೆ ಕರೆಸಿ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದಕ್ಕೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ ಎಂದು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿಯ ದೃಶ್ಯ ನಮಗೆ ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

    ಮೂರನೇ ದಿನದಾಟಕ್ಕೆ 46 ಓವರ್ ಗಳಲ್ಲಿ 132 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಈ ಮೊತ್ತಕ್ಕೆ 1.5 ಓವರ್ ಗಳಲ್ಲಿ ಕೇವಲ 1 ರನ್ ಸೇರಿಸಿ ಉಳಿದ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 240 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಶಮಿ 3 ವಿಕೆಟ್ ಪಡೆದರೆ ಉಮೇಶ್ ಯಾದವ್ ಮತ್ತು ನದೀಂ ತಲಾ 2 ವಿಕೆಟ್ ಪಡೆದಿದ್ದಾರೆ. ಜಡೇಜಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಗಳಿಸಿದ್ದಾರೆ.