Tag: ಕ್ವಾರಿ

  • ರಾಜ್ಯಾದ್ಯಂತ ಇಂದಿನಿಂದ  2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್

    ರಾಜ್ಯಾದ್ಯಂತ ಇಂದಿನಿಂದ 2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್

    ಚಿಕ್ಕಬಳ್ಳಾಪುರ: ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಡಿಯ ಕೆಎಂಎಂಸಿಆರ್ (KMMCR) ಕಾಯಿದೆಗೆ ಸಮಗ್ರ ತಿದ್ದುಪಡಿ ತರುವಂತೆ ಒತ್ತಾಯಿಸಿ, ಇಂದಿನಿಂದ ರಾಜ್ಯಾದ್ಯಂತ 2,000ಕ್ಕೂ ಹೆಚ್ಚು ಕಲ್ಲು ಪುಡಿ ಘಟಕ (Stone Crusher) ಹಾಗೂ ಕ್ವಾರಿಗಳನ್ನು (Quarry) ಬಂದ್ ಮಾಡಿ ಮಾಲೀಕರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್‌ ಕರ್ನಾಟಕ ಕ್ವಾರಿ ಹಾಗೂ ಸ್ಟೋನ್ ಕ್ರಷರ್ ಒನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು, ಈಗಾಗಲೇ ಗಣಿ ಮಾಲೀಕರಿಂದ ರಾಯಧನವನ್ನು ಸಂಗ್ರಹ ಮಾಡುತ್ತಿದ್ದರೂ ಸರ್ಕಾರ ಮರಳಿ ಗುತ್ತಿಗೆದಾರರಿಂದ ರಾಯಧನ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ. ಇನ್ನೂ ಕೆಎಂಎಂಸಿಆರ್-1994 ಕಾಯಿದೆಯಲ್ಲಿ ಹಲವು ನಿಯಮಗಳಿಗೆ ತಿದ್ದುಪಡಿಗಳನ್ನು ತರಬೇಕು ಹಾಗೂ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನೀಡಿರುವ ಆದೇಶವನ್ನು ಕೆಎಂಎಂಸಿಆರ್ ಕಾಯಿದೆ ತಿದ್ದುಪಡಿ ಆದ ನಂತರ ಅನುಷ್ಠಾನಗೊಳಿಸುವುದು ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

    ಹಾಗಾಗಿ ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳನ್ನು ಬಂದ್ ಮಾಡಿದ್ದು ಎಂ ಸ್ಯಾಂಡ್ ಸೇರಿದಂತೆ ಜಲ್ಲಿ ಕಲ್ಲು ಮಾರಾಟ, ಸಾಗಾಟ ಕೂಡ ಬಂದ್ ಆಗಲಿದೆ. ಇದ್ರಿಂದ ಕಟ್ಟಡ, ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಮಸ್ಯೆ ಎದುರಾಗಲಿದೆ. ಡಿ.28 ರಂದು ಕಲ್ಲು ಪುಡಿ ಘಟಕ ಹಾಗೂ ಕ್ವಾರಿಗಳ ಮಾಲೀಕರು, ಕಾರ್ಮಿಕರು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ನೀಡಿದ ಜನಾರ್ದನ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಬೆಂಗಳೂರು: ಶಿವಮೊಗ್ಗದ ಹುಣಸೋಡು ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಸಂಭವಿಸಿದೆ. ಕನಕಪುರ ತಾಲೂಕಿನ ಸಂಗಮ ರಸ್ತೆಯ ಮರಳೇಗವಿ ಮಠದ ಕಲ್ಲು ಕ್ವಾರಿ ಬಳಿ ಕಾರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಛಿದ್ರ ಛಿದ್ರವಾಗಿ ಸಾವನ್ನಪ್ಪಿದಾನೆ. ಆದರೆ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಅಲ್ಲಿನ ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಕನಕಪುರದ ಮಹೇಶ್ ಎಂಬವರು ಸಾವನ್ನಪ್ಪಿರುವ ದುರ್ದೈವಿ. ಮರಳೇಗವಿ ಮಠದ ಕ್ವಾರಿಯಲ್ಲಿ ಮಹೇಶ್ ಅವರು ಕ್ವಾರಿಗೆ ಕಬ್ಬಿಣದ, ಸಲಕರಣೆಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದರು. ಯಾವ ಕಾರಣಕ್ಕೆ ಕಾರು ಸ್ಫೋಟವಾಗಿದೆ ಅನ್ನೋದು ಗೊತ್ತಾಗಿಲ್ಲ. ಆದರೆ ಮಠದ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು

    ಕ್ವಾರಿಯಲ್ಲಿ ಕಲ್ಲು ಕಟ್ ಮಾಡುವ ಕೆಲಸ ಮಾಡಲಾಗುತ್ತಿದೆ. ಕಲ್ಲು ಕಟ್ ಮಾಡಲು ಜಿಲೆಟಿನ್ ಬೇಕಾಗಿಲ್ಲ. ಕ್ವಾರಿಯಿಂದ ಎರಡು ಕಿಮೀ ದೂರದಲ್ಲಿ ಕಾರು ಸ್ಫೋಟವಾಗಿದೆ. ಕ್ವಾರಿಯಿಂದ ವಾಪಸ್ ಎರಡು ಕಿಮೀ ದೂರದವರೆಗೆ ಮಹೇಶ್ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ, ಆ ಬಳಿಕ ಕಾರು ಸ್ಫೋಟವಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಫೋಟದ ರಭಸಕ್ಕೆ ಮಹೇಶ್ ಅವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಕರೆಸಿ ಪರಿಶೀಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ತನಿಖೆಯ ಬಳಿಕ ಸ್ಫೋಟದ ಕಾರಣ ತಿಳಿಯಲಿದೆ.ಈ ನಡುವೆ ಕಾರ್ ನಲ್ಲಿ ಜಿಲೆಟಿನ್ ಇತ್ತಾ, ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

  • ಕಟ್ಟಕಡೆಯ ಮನುಷ್ಯನಿಗೂ ಕಡಿಮೆ ದರದಲ್ಲಿ ಮರಳು ಲಭ್ಯ: ಸಚಿವ ನಿರಾಣಿ

    ಕಟ್ಟಕಡೆಯ ಮನುಷ್ಯನಿಗೂ ಕಡಿಮೆ ದರದಲ್ಲಿ ಮರಳು ಲಭ್ಯ: ಸಚಿವ ನಿರಾಣಿ

    ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ‘ಮನೆಬಾಗಿಲಿಗೆ’ ರಾಜ್ಯ ಸರ್ಕಾರ ಹೋಗುವ ವಿನೂತನ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.

    ಇಂದು ವಿಕಾಸಸೌಧದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ನಿಯೋಗವು ಭೇಟಿ ಆಗಿ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ನಿರಾಣಿ, ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯ ನೆರವು ನೀಡಲಿದ್ದೇವೆ. ‘ಉದ್ಯಮಸ್ನೇಹಿ’ ಮಾಡುವುದು ತಮ್ಮ ಮುಂದಿರುವ ಮೊದಲ ಸವಾಲು. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ಮರಳು, ಕಲ್ಲು ಕ್ವಾರಿ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    2021- 2026ನೇ ಸಾಲಿನ ಹೊಸ ಮರಳು ನೀತಿ ಜಾರಿಗೆ ಬರಲಿದೆ. ಇದರಲ್ಲಿ ಅನೇಕ ಹೊಸ ಹೊಸ ಸುಧಾರಣೆಗಳನ್ನು ಜಾರಿಗೆ ಮಾಡುತ್ತಿದ್ದೇವೆ. ಕಟ್ಟಕಡೆಯ ಮನುಷ್ಯನಿಗೂ ಸುಲಭವಾಗಿ ಮರಳು ಸಿಗಬೇಕು ಎಂಬುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.

    ಬಜೆಟ್‍ನಲ್ಲಿ ಕ್ವಾರಿ ಮತ್ತು ಸ್ಟೋರ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಮುಂದಿಟ್ಟಿರುವ ಬೇಡಿಕೆಗಳನ್ನು ಸೇರ್ಪಡೆ ಮಾಡಲಾಗುವುದು. ನೀವು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಅಭಯ ನೀಡಿದರು. ಈಗಾಗಲೇ ಇಲಾಖೆಗಳಲ್ಲಿ ಕೆಲವು ಮಹತ್ವದ ಸುಧಾರಣೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

    ಬೇಡಿಕೆ ಈಡೇರಿಸುವೆ: ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ಸ್ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಚಿವರ ಗಮನಕ್ಕೆ ತಂದರು. ಕಟ್ಟಡ, ಕಲ್ಲು, ಖನಿಜವು ನಿರ್ದಿಷ್ಟವಲ್ಲದ ಖನಿಜವಾಗಿದ್ದು ಇದಕ್ಕಾಗಿ ಕೆ.ಎಂ.ಎಂ.ಆರ್.ಸಿ.ಆರ್. ಕಾಯ್ದೆಯಲ್ಲಿ ಪ್ರತ್ಯೇಕವಾದ ಅಧ್ಯಯನ ರೂಪಿಸುವುದು, 15 ಎಕರೆ ಪ್ರದೇಶದ ವಿಸ್ತೀರ್ಣದ ಮೇಲ್ಪಟ್ಟ ಕ್ವಾರಿಗಳ ಸಮೂಹಕ್ಕೆ ಪ್ರತ್ಯೇಕವಾದ ಕ್ಲಷ್ಟರ್ ಮ್ಯಾಗ್ಸಿನ್‍ನ ಸ್ಥಾಪನೆಗಾಗಿ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಸಚಿವ ನಿರಾಣಿ ಅವರಿಗೆ ಮನವಿ ಮಾಡಿದರು.

    ಎಂಎಂಡಿಆರ್ ಕಾಯ್ದೆಯಡಿ 5 ಲಕ್ಷ ರೂ.ನಂತೆ ಪ್ರಕರಣವನ್ನು ಒಮ್ಮೆಗೆ ಇತ್ಯರ್ಥಪಡಿಸುವುದು, ಇಲಾಖೆ ವತಿಯಿಂದ ಈ ಹಿಂದೆ ಕೈಗೊಳ್ಳಲಾದ ಡ್ರೋಣ್ ಸರ್ವೇಯ ವರದಿಯು ಅವೈಜ್ಞಾನಿಕ ಹಾಗೂ ಏಕಪಕ್ಷೀಯವಾಗಿರುವುದರಿಂದ ಅದರ ಆಧಾರದ ಮೇಲೆ ವಿಧಿಸಲಾಗಿರುವ 5 ಪಟ್ಟು ದಂಡವನ್ನು ರದ್ದುಪಡಿಸುವುದು, ಕಲ್ಲು ಗಣಿ ಗುತ್ತಿಗೆದಾರರಿಂದ ಸಾಗಾಣಿಕೆಯ ರಾಜಧನ (ಎಂಡಿಪಿ/ಎಂಡಿಆರ್) ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದರು.

    ಕೆಎಂಎಂಸಿಆರ್ ಕಾಯ್ದೆ 44(3) ತೆರವುಗೊಳಿಸಿ ಕಾಯ್ದೆ 44 (4) ಸಹ ತೆರವು ಮಾಡಬೇಕು, ಕಟ್ಟಡ ಕಲ್ಲಿಗೆ ಸಂಬಂಧಿಸಿದಂತೆ ಡಿಎಂಎಫ್ ಶುಲ್ಕವನ್ನು ಶೇ.10ಕ್ಕೆ ಕಡಿತ, ಸ್ಪಸಿಫೈಡ್ ಮಿನರಲ್ಸ್‍ಗೆ 30 ವರ್ಷಗಳ ಅವಧಿಗೆ ಲೀಸ್ ನೀಡಿರುವಂತೆ ನಾನ್‍ಸ್ಪಸಿಫೈಡ್ ಕಟ್ಟಡದ ಕಲ್ಲುಗುಣಿಗೆ ಗುತ್ತಿಗೆಗೂ ಕೂಡ 30 ವರ್ಷಗಳ ಕಾಲಾವಧಿಯವರೆಗೆ ಲೀಸ್ ಮಂಜೂರು ಮಾಡಬೇಕೆಂದು ಕೋರಿದರು.

    ಪಟ್ಟಾ ಜಮೀನಿನಲ್ಲಿ ಕಲ್ಲುಗುಣಿ ಗುತ್ತಿಗೆಗೆ ರಾಜಧನ ಕಡಿಮೆ ಮಾಡಿ ಎಎಪಿಪಿಯನ್ನು ತೆಗೆದುಹಾಕಬೇಕು, ಕ್ರಷರ್ ಮತ್ತು ಎಂಸ್ಟ್ಯಾಂಡ್ ಘಟಕ ಹೊಂದಿರುವವರಿಗೆ 31ಝೆಡ್‍ಸಿ ನಿಯಮದಡಿ ಕಲ್ಲುಗಣಿ ಮಂಜೂರು ಮಾಡಲು ಅವಕಾಶ ಕಲ್ಪಿಸಿ, ಈ ಕಾಯ್ದೆಯು 6 ತಿಂಗಳು ಕಾಲ ಜಾರಿಯಲ್ಲಿದ್ದು ಇದನ್ನು ತೆರವುಗೊಳಿಸಿ ಕಾಯ್ದೆಯನ್ನು ಮುಂದುವರೆಸುವಂತೆ ನಿಯೋಗ ಮನವರಿಕೆ ಮಾಡಿಕೊಟ್ಟಿತ್ತು.

    ಈ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಆಲಿಸಿದ ಸಚಿವ ನಿರಾಣಿ ಅವರು ಈಡೇರಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಗೌರವಾಧ್ಯಕ್ಷ ದತ್ತಾತ್ರಿ.ಎಸ್., ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಉಪಾಧ್ಯಕ್ಷರಾದ ಡಿ.ಸಿದ್ದರಾಜು, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಾಜರಿದ್ದರು.

  • ಕ್ವಾರಿಯಲ್ಲಿ ಈಜಲೆಂದು ಮೇಲಿಂದ ಜಿಗಿದ ಯುವಕ ದುರ್ಮರಣ

    ಕ್ವಾರಿಯಲ್ಲಿ ಈಜಲೆಂದು ಮೇಲಿಂದ ಜಿಗಿದ ಯುವಕ ದುರ್ಮರಣ

    ಯಾದಗಿರಿ: ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ನಾಯ್ಕಲ್ ಗ್ರಾಮದ 24 ವರ್ಷದ ರುದ್ರಗೌಡ ಎಂದು ಗುರುತಿಸಲಾಗಿದೆ. ಮೃತ ರುದ್ರಗೌಡ ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಹತ್ತಿರದಲ್ಲಿರುವ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಎನ್ನಲಾಗಿದೆ.

    ಕ್ವಾರಿಯಲ್ಲಿ ಈಜಲು ರುದ್ರಗೌಡ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಆದರೆ ಮೇಲಿಂದ ಬೀಳುವಾಗ ಕ್ವಾರಿಯಲ್ಲಿನ ಕಲ್ಲಿಗೆ ತೆಲೆತಾಗಿ ಸ್ಥಳದಲ್ಲೇ ರುದ್ರಗೌಡ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಯುವಕನ ಮೃತದೇಹವನ್ನು ಮೇಲೆತ್ತಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಕುರಿತು ವಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಬೆಂಗಳೂರು: ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಜಿಗಣಿ ಸಮೀಪದ ಕಲ್ಲುಬಾಳ ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ನಡೆದಿದೆ.

    ನರೇಶ್ (18) ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ.

    ಶುಕ್ರವಾರ ಸಂಜೆ ಸುಮಾರು 4.30ಕ್ಕೆ ನರೇಶ್ ಮತ್ತು ಆತನ ಜೊತೆ 8 ಜನ ಸ್ನೇಹಿತರು ಕಲ್ಲುಬಾಳು ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ಈಜುಲು ಹೋಗಿದ್ದಾರೆ. ಮೊದಲು ನರೇಶ್ ಜೊತೆ ಮೂವರು ಸ್ನೇಹಿತರು ಈಜಲು ಹೋಗಿದ್ದಾರೆ. ಆದರೆ ಕಲ್ಲು ಕ್ವಾರಿ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನರೇಶ್ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲರೂ ಭಯಗೊಂಡು ಓಡಿ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

    ಪೋಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಕ್ವಾರಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶವ ಪತ್ತೆಯಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಘಟನೆಯ ಸಂಬಂಧ ಜಿಗಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.