Tag: ಕ್ವಾರಂಟೈನ್ ಕೇಂದ್ರ

  • ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ- ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ನೋಡಿ ಅಧಿಕಾರಿಗಳು ಸುಸ್ತು

    ಪಾಟ್ನಾ: ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬ ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನವನ್ನು ತಿನ್ನುವುದನ್ನು ನೋಡಿ ಅಧಿಕಾರಿಗಳು ಸುಸ್ತುಗಿದ್ದಾರೆ.

    ಈ ರೀತಿ ತಿನ್ನುವ ವ್ಯಕ್ತಿಯನ್ನು ಅನುಪ್ ಓಜಾ ಎಂದು ಗುರುತಿಸಲಾಗಿದೆ. ಈತ ದಿನದಲ್ಲಿ ತಿಂಡಿಗೆ ಬರೋಬ್ಬರಿ 40 ಚಪಾತಿಗಳನ್ನು ತಿಂದಿದ್ದಾನೆ. ಜೊತೆಗೆ ಊಟದ ಸಮಯದಲ್ಲಿ ಹತ್ತು ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಈ ಅಧುನಿಕ ಬಕಾಸುರನನ್ನು ನೋಡಿದ ಅಲ್ಲಿ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.

    ಈ ಘಟನೆ ಬಿಹಾರದ ಬಕ್ಸಾರ್ ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಅನುಪ್ ರಾಜಸ್ಥಾನದಿಂದ ಬಿಹಾರಕ್ಕೆ ಮರಳಿದ್ದ, ಆದ್ದರಿಂದ ಸರ್ಕಾರದ ನಿಮಯದಂತೆ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಈ ವೇಳೆ ಈತ ದಿನಕ್ಕೆ ತಿಂಡಿಯ ವೇಳೆಗೆ 40 ಚಪಾತಿಯನ್ನು ತಿಂದಿದ್ದಾನೆ. ನಂತರ ಊಟದ ವೇಳೆಗೆ ಸುಮಾರು 10 ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಥಂಡಾ ಹೊಡಿದಿದ್ದಾರೆ.

    ಒಬ್ಬ ವ್ಯಕ್ತಿ ಜಾಸ್ತಿ ಊಟ ತಿನ್ನುತ್ತಾನೆ ಎಂದು ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಇದನ್ನು ಕೇಳಿ ಅಶ್ಚರ್ಯಗೊಂಡು ಅಧಿಕಾರಿಗಳು, ಊಟದ ವೇಳೆಗೆ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ವ್ಯಕ್ತಿ ಬರೋಬ್ಬರಿ ಹತ್ತು ಜನರು ತಿನ್ನುವ ಆಹಾರವನ್ನು ಒಬ್ಬನೇ ತಿಂದಿದ್ದಾನೆ. ಇದನ್ನು ಕಂಡ ಅಧಿಕಾರಿಗಳು ಅಘಾತಕ್ಕೊಳಗಾಗಿದ್ದಾರೆ. ಈ ರೀತಿ ತಿಂದರೆ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರದ ಸಮಸ್ಯೆ ಎದುರಾಗುತ್ತದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಎಕೆ ಸಿಂಗ್, ಒಂದು ದಿನ ಕ್ವಾರಂಟೈನ್ ಕೇಂದ್ರದಲ್ಲಿ ‘ಲಿಟ್ಟಿ’ (ಬಿಹಾರದ ಒಂದು ಬಗೆಯ ತಿಂಡಿ)ಯನ್ನು ಮಾಡಿದ್ದಾರೆ. ಈ ವೇಳೆ ಪವನ್ 85 ಲಿಟ್ಟಿಗಳನ್ನು ತಿಂದಿದ್ದಾನೆ. ಜೊತೆಗೆ ರೊಟ್ಟಿ ಮಾಡಿದರೆ ಒಬ್ಬನೇ 20 ಜನ ತಿನ್ನವ ಆಹಾರವನ್ನು ಒಬ್ಬನೇ ತಿನ್ನುತ್ತಾನೆ. ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಮಾಡುವವರು ಕೂಡ ನಾವು ಅಡುಗೆ ಮಾಡುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಬಿಹಾರದಲ್ಲಿ ಒಟ್ಟು 3,061 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 15 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,083 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಪ್ರಾಪ್ತೆ ಅವಿವಾಹಿತಳಾಗಿದ್ದು, ಉದ್ಯೋಗ ಅರಸಿ ಕುಟುಂಬಸ್ಥರ ಜೊತೆ ಮಹಾರಾಷ್ಟ್ರದ ಮುಂಬೈಗೆ ಹೋಗಿದ್ದಳು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೇ 17ರಂದು ಮಹಾರಾಷ್ಟ್ರದಿಂದ ವಾಪಸ್ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಗ್ಗೆ ಅಪ್ರಾಪ್ತೆ ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿಗಳು ಅಪ್ರಾಪ್ತೆ ಮತ್ತು ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಪ್ರಾಪ್ತೆ ಮತ್ತು ಮಗು ಆರೋಗ್ಯವಾಗಿದ್ದಾರೆ. ಪೊಲೀಸರು ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ

    ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ

    ವಿಜಯಪುರ: ಕೊರೊನಾ ವಾರಿಯರ್ಸ್‍ಗಳಂತೆಯೇ ಕೆಲಸ ಮಾಡುತ್ತಿರುವ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹೊರ ರಾಜ್ಯದ ಪುಂಡರು ಹಲ್ಲೆ ಮಾಡಿದ್ದಾರೆ.

    ಜಿಲ್ಲೆಯ ಸಿಂದಗಿ ಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಮೈಬೂಬಸಾಬ ಬನ್ನೆಟ್ಟಿ(60) ಅವರ ಮೇಲೆ ಯುವಕರಾದ ದೇವರನಾವದಗಿಯ ಅರುಣ್ ರಾಠೋಡ್ ಹಾಗೂ ರಾಹುಲ್ ರಾಠೋಡ್ ಹಲ್ಲೆ ನಡೆಸಿದ್ದಾರೆ. ಯುವಕರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಕೊರೊನಾ ವೈರಸ್ ಹಿನ್ನೆಲೆ ಹೊರ ರಾಜ್ಯದಿಂದ ಬಂದಿದ್ದ ಕೂಲಿ ಕಾರ್ಮಿಕರನ್ನು ಸಂಸ್ಥಾ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈ ವೇಳೆ ಯುವಕರು ಪುಂಡಾಟ ಮೆರೆದಿದ್ದು, ನಮಗೆ ಮೊದಲು ಊಟ ಕೊಡು, ಸರತಿ ಸಾಲಿನಲ್ಲಿ ನಿಲ್ಲು ಎಂದು ನಮಗೇ ಹೇಳ್ತೀಯಾ ಎಂದು ಸಿಮೆಂಟ್ ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಮೈಬೂಬಸಾಬರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ವಾರಂಟೈನ್ ಕೇಂದ್ರದ ಬಳಿ ಬ್ರೆಡ್, ಮೊಟ್ಟೆ ಮಾರಾಟ: ಓಡಿ ಬಂದ ಜನ

    ಕ್ವಾರಂಟೈನ್ ಕೇಂದ್ರದ ಬಳಿ ಬ್ರೆಡ್, ಮೊಟ್ಟೆ ಮಾರಾಟ: ಓಡಿ ಬಂದ ಜನ

    ರಾಯಚೂರು: ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದ ಜನ ಆಹಾರ ಪದಾರ್ಥಗಳಿಗಾಗಿ ಹೊರಬರುತ್ತಿದ್ದಾರೆ. ಬ್ರೆಡ್, ಮೊಟ್ಟೆ ಹಾಗೂ ತಿನಿಸು ಪದಾರ್ಥಗಳ ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಜನ ಹೊರಬರುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದ ಮುಂದೆಯೇ ವ್ಯಾಪಾರಿಗಳು ಬ್ರೆಡ್ ಸೇರಿ ಇತರೆ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ.

    ಆಂಧ್ರಪ್ರದೇಶ, ತೆಲಂಗಾಣದಿಂದ ಬಂದವರಿಗಾಗಿ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ ಜನರ ಓಡಾಟಕ್ಕೆ ಯಾವುದೇ ನಿರ್ಭಂದವಿಲ್ಲದಂತಾಗಿದೆ. ಕಾವಲಿಗೆ ಪೊಲೀಸರು ಇದ್ದರೂ ಕ್ವಾರಂಟೈನ್ ಕೇಂದ್ರದ ಗೇಟ್ ಮುಂದೆಯೇ ನಿಂತು ಬ್ರೆಡ್ ಮಾರಾಟ ನಡೆದಿದೆ. ಪ್ರತಿದಿನ ವ್ಯಾಪಾರಿಗಳು ಬಂದ ಕೂಡಲೇ ಜನ ಓಡಿ ಬಂದು ಬ್ರೆಡ್ ಖರೀದಿಸುತ್ತಾರೆ.

    ಕ್ವಾರಂಟೈನ್‍ನಲ್ಲಿರುವ ಜನರು ಹೊರಗಡೆಗೂ ಓಡಾಟ ನಡೆಸಿರುವುದರಿಂದ ಸ್ಥಳೀಯರಿಗೆ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ. ಪ್ರತಿದಿನ ಒಂದೇ ತರಹದ ಊಟ ಮಾಡಲಾಗುತ್ತಿದೆ. ಮಕ್ಕಳಿಗೆ ಹಾಲು, ಬ್ರೆಡ್ ವ್ಯವಸ್ಥೆಯಿಲ್ಲ ಅಂತ ಜನ ನಿತ್ಯ ಹೊರಗಡೆ ಬಂದು ಹೋಗುತ್ತಿದ್ದಾರೆ. ಇದಕ್ಕೆ ಕೂಡಲೇ ನಿಯಂತ್ರಣ ಹಾಕಬೇಕು ಅಂತ ಕ್ವಾರಂಟೈನ್ ಕೇಂದ್ರದ ಸುತ್ತಲ ಬಡಾವಣೆ ಜನ ಆಗ್ರಹಿಸಿದ್ದಾರೆ.

  • ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ರಾಯಚೂರು: ಲಿಂಗಸುಗೂರಿನ ಅಡವಿಬಾವಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯದಿಂದಿದ್ದಾರೆ.

    ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೆರಿಗೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲು ತಯಾರಿ ನಡೆದಿತ್ತು. ಅಷ್ಟರಲ್ಲೇ ಹೆರಿಗೆ ನೋವು ಹಿನ್ನೆಲೆ ಸಿಬ್ಬಂದಿ ಕಣ್ತಪ್ಪಿಸಿ ಖಾಸಗಿ ಆಸ್ಪತ್ರೆಗೆ ತೆರಳಲು ಪತಿ, ಪತ್ನಿ ಇಬ್ಬರು ಮಕ್ಕಳು ಪರಾರಿಯಾಗಿದ್ದರು. ಅವರ ಸ್ವಗ್ರಾಮ ಲಿಂಗಸುಗೂರಿನ ಹಾಲುಬಾವಿ ತಾಂಡ ಬಳಿ ಸಂಬಂಧಿಕರ ಮನೆಯಲ್ಲಿ ಹೆರಿಗೆಯಾಗಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

    ಹೆರಿಗೆ ಬಳಿಕ ಕುಟುಂಬವನ್ನು ಲಿಂಗಸುಗೂರಿನ ರೊಡಲಬಂಡಾ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆ ಕ್ವಾಟ್ರಸ್‍ನಲ್ಲೇ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಜನರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಣಂತಿ, ಪತಿ, ಇಬ್ಬರು ಮಕ್ಕಳನ್ನ ಐಸೋಲೇಷನ್ ವಾರ್ಡಿನಲ್ಲಿಡಲಾಗಿದೆ. ಹೆರಿಗೆ ಹಿನ್ನೆಲೆ ಸ್ಥಳೀಯರ ಮಾಹಿತಿ ಮೇರೆಗೆ ಕುಟುಂಬವನ್ನ ಪತ್ತೆ ಹಚ್ಚಿ ಆರೋಗ್ಯ ಇಲಾಖೆ ಸಿಬ್ಬಂದಿ ವಾಪಸ್ ಕರೆತಂದಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ಎಲ್ಲರಿಗೂ ಒಂದೇ ಕುಡಿಯುವ ನೀರಿನ ಪಾತ್ರೆ

    ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ಎಲ್ಲರಿಗೂ ಒಂದೇ ಕುಡಿಯುವ ನೀರಿನ ಪಾತ್ರೆ

    – ಜಿಲ್ಲಾಡಳಿತದ ಸಂಪೂರ್ಣ ನಿರ್ಲಕ್ಷ್ಯ

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಡಳಿತದ ಮತ್ತೊಂದು ನಿರ್ಲಕ್ಷ್ಯ ಬಯಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಕನಿಷ್ಠ ಸೌಲಭ್ಯವನ್ನೂ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕ್ವಾರಂಟೈನ್‍ನಲ್ಲಿರುವವರು ಪರದಾಡುವಂತಾಗಿದೆ.

    ನಗರದ ಕಲಾ ಕಾಲೇಜು ಸಮೀಪದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯಿಂದ ಕೂಡಿದ್ದು, ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿ ವಿಡಿಯೋ ಮೂಲಕ ಅನಾವರಣಗೊಳಿಸಿದ್ದಾರೆ. ಮಲಗಲು ಹಾಸಿಗೆ ಇಲ್ಲ, ಊಟ ಸರಿ ಇಲ್ಲ, ಎಲ್ಲರಿಗೂ ಒಂದೇ ಶೌಚಾಲಯ, ಕುಡಿಯುವ ನೀರಿನ ಪಾತ್ರೆ ಕೂಡ ಒಂದೆಯಾಗಿದ್ದು, ಇದರಿಂದಾಗಿ ಕ್ವಾರಂಟೈನಲ್ಲಿರುವವರು ಭಯದಲ್ಲೇ ಬದುಕುತ್ತಿದ್ದಾರೆ. ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರೆ ಇತರರಿಗೂ ಹರಡುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸೊಳ್ಳೆಗಳ ಕಾಟಕ್ಕೆ ಕ್ವಾರಂಟೈನ್ ಕೇಂದ್ರದಲ್ಲಿರುವ ಬೇರೆ ಜಿಲ್ಲೆಯವರು ನಲುಗಿ ಹೋಗಿದ್ದು, ರಾಜ್ಯದ ವಿವಿಧೆಡೆಗಳಿಂದ ಬಂದಿರುವ 15ಕ್ಕೂ ಹೆಚ್ಚು ಜನರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿವಿಧೆಡೆಗಳಿಂದ ಬಂದವರನ್ನು ಒಂದೇ ಕಡೆ ಕೂಡಿ ಹಾಕಿದ್ದು, ಸರಿಯಾದ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಇದರಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ಹರಡುತ್ತದೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ನಮಗೆ ಕರೊನಾ ಇಲ್ಲ, ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೆ ಈ ಅವ್ಯವಸ್ಥೆಯಿಂದಾಗಿ ಬೇರೆಯವರಿಂದ ನಮಗೆ ಸೋಂಕು ಆವರಿಸುವ ಭೀತಿ ಎದುರಾಗಿದೆ. ನಮಗೆ ಕರೊನಾ ಸೋಂಕು ತಗುಲಿದರೆ ಜಿಲ್ಲಾಡಳಿತ, ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಮ್ಮನ್ನು ಬೇರೆಡೆ ಸ್ಥಳಾಂತರಿಸಿ ಎಂದು ಯುವಕ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರ ಡ್ಯಾನ್ಸ್- ಕೇಸ್ ದಾಖಲು

    ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರ ಡ್ಯಾನ್ಸ್- ಕೇಸ್ ದಾಖಲು

    -ತಟ್ಟೆ, ಲೋಟ ಹಿಡಿದು ಟಿಕ್‍ಟಾಕ್

    ಭುವನೇಶ್ವರ: ಕ್ವಾರಂಟೈನ್ ಕೇಂದ್ರದಲ್ಲಿ ಡ್ಯಾನ್ಸ್ ಮಾಡಿದ್ದ ಆರು ಕಾರ್ಮಿಕರ ವಿರುದ್ಧ ಒಡಿಶಾದ ಭದ್ರಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಲಾಕ್‍ಡೌನ್ ನಿಂದಾಗಿ ಬಹುತೇಕರು ಕೆಲವು ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ವಲಸೆ ಕಾರ್ಮಿಕರು, ಪ್ರವಾಸಿಗರು ಸೇರಿದಂತೆ ಬಹುತೇಕರನ್ನು ಆಯಾ ರಾಜ್ಯ ಸರ್ಕಾರಗಳು ಕ್ವಾರಂಟೈನ್ ಮಾಡಿವೆ. ಒಡಿಶಾದ ಭದ್ರಕ್ ನಲ್ಲಿ ಸಿಲುಕಿಕೊಂಡಿದ್ದ ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಆರ್‍ಎಎಸ್ ಹೈಸ್ಕೂಲಿನಲ್ಲಿರಿಸಲಾಗಿತ್ತು.

    ಬಹುತೇಕರು ಶಾಲೆಯಲ್ಲಿರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದ್ರೆ ಆರು ಜನ ಕಾರ್ಮಿಕರು ಒಂದೆಡೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡಿದ್ದಾರೆ. ಕೇಂದ್ರದಲ್ಲಿಯ ತಟ್ಟೆ, ಲೋಟ ಪಾತ್ರೆ ಹಿಡಿದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರು ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಕ್ಕೆ ಪ್ರಕರಣ ದಾಖಲಾಗಿದೆ.

     

  • ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಅಮರಾವತಿ: ಕ್ವಾರಂಟೈನ್‍ನಲ್ಲಿ ಇರುವ ಕೊರೊನಾ ಶಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ‘ಕೈ ತುತ್ತು’ (ಗೋರು ಮುದ್ದ) ಮೆನು ನೀಡುತ್ತಿದ್ದಾರೆ.

    ವಿಜಯವಾಡದ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಕೊರೊನಾ ಸೋಂಕು ಶಂಕಿರಿಗೆ ಬಾಳೆಹಣ್ಣು, ಮೋಸಂಬಿ, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಖರ್ಜೂರ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದೇ ರೀತಿ ಕೈ ತುತ್ತು ಮೆನುವನ್ನು ರಾಜ್ಯದಾದ್ಯಂತದ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಅನುಸರಿಸಬೇಕು ಎಂದು ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗುರುವಾರ ಬೆಳಗ್ಗೆ ವೇಳೆಗೆ ಒಂದೇ ದಿನದಲ್ಲಿ ಆಂಧ್ರಪ್ರದೇಶದಲ್ಲಿ 43 ಜನರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆ ಕಂಡಿದೆ. ಇಲ್ಲಿವರೆಗೂ 6 ಮಂದಿ ಚೇತರಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ.