Tag: ಕ್ಲೇನ್ ಟೇಲರ್

  • ಐಸಿಸಿ `ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್

    ಐಸಿಸಿ `ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್

    ದುಬೈ: ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಪ್ರತಿಷ್ಠಿತ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನೀಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಹಾಲ್ ಆಫ್ ಫೇಮ್ ಪ್ರಶಸ್ತಿ ಪಡೆದ ಟೀಂ ಇಂಡಿಯಾ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಡಬ್ಲಿನ್ ನಲ್ಲಿ ಭಾನುವಾರ ನಡೆದ ಐಸಿಸಿ ಸಮಾರಂಭದಲ್ಲಿ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್, ಇಂಗ್ಲೆಂಡ್ ಮಾಜಿ ಮಹಿಳಾ ಆಟಗಾರ್ತಿ ಕ್ಲೇರ್ ಟೇಲರ್ ರೊಂದಿಗೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ರಿಕಿ ಪಾಟಿಂಗ್ ಆಯ್ಕೆಯೊಂದಿಗೆ ಈ ಪ್ರಶಸ್ತಿ ಪಡೆದ ಆಸೀಸ್ ತಂಡದ 25 ಆಟಗಾರ ಎನಿಸಿಕೊಂಡರು. ಅಲ್ಲದೇ ಟೇಲರ್ ಇಂಗ್ಲೆಂಡ್ 3ನೇ ಹಾಗೂ ಮಹಿಳಾ ಕ್ರಿಕೆಟರ್ ಗಳಲ್ಲಿ 7ನೇ ಆಟಗಾರ್ತಿಯಾಗಿ ಆಯ್ಕೆ ಆಗಿದ್ದಾರೆ.

    ಐಸಿಸಿ ಹಾಲ್ ಆಫ್ ಫೇಮ್ ಸಮಿತಿ ಈ ಬಾರಿ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದು, ಈ ಗೌರವ ನೀಡುವುದು ವಿಶ್ವದ ಶ್ರೇಷ್ಠ ಆಟಗಾರರನ್ನು ಗೌರವಿಸುವ ಒಂದು ಮಾರ್ಗವಾಗಿದ್ದು, ಉತ್ತಮ ಸಾಧನೆ ಮಾಡಿದ ಕೆಲ ಆಟಗಾರರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ನಾವು ರಾಹುಲ್ ದ್ರಾವಿಡ್, ರಿಕಿ ಪಾಟಿಂಗ್ ಹಾಗೂ ಕ್ಲೇರ್ ಟೇಲರ್ ಅವರಿಗೆ ಅಭಿನಂದನೆ ತಿಳಿಸುತ್ತೇವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚಡ್ರ್ಸನ್ ಹೇಳಿದ್ದಾರೆ.

    ಐಸಿಸಿ ಗೌರವ ಪಡೆದ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿ, ಐಸಿಸಿ ಪ್ರಶಸ್ತಿ ನೀಡಿರುವುದು ಹೆಚ್ಚು ಸಂತಸ ತಂದಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಹೆಸರು ಪಡೆಯುವುದು ಯಾವುದೇ ಆಟಗಾರ ವೃತ್ತಿ ಜೀವನ ಆರಂಭದಲ್ಲಿ ಇಂತಹ ಕನಸು ಕಾಣುತ್ತಾರೆ. ಸದ್ಯ ಇದು ಆಪಾರ ಸಂತೋಷವನ್ನು ಉಂಟು ಮಾಡಿದೆ. ಕರ್ನಾಟಕ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಹಾಗೂ ನನ್ನ ವೃತ್ತಿ ಜೀವನದುದಕ್ಕೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

    ರಾಹುಲ್ ದ್ರಾವಿಡ್ ಹಾಗೂ ರಿಕಿ ಪಾಟಿಂಗ್ ಇಬ್ಬರು ಸಹ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಆಟಗಾರರಾಗಿದ್ದು, 164 ಟೆಸ್ಟ್ ಗಳಲ್ಲಿ 36 ಶತಕಗಳೊಂದಿಗೆ ದ್ರಾವಿಡ್ 13,288 ರನ್, ಏಕದಿನ ಮಾದರಿಯ 344 ಪಂದ್ಯಗಳಲ್ಲಿ 12 ಶತಕಗಳೊಂದಿಗೆ 10,889 ರನ್ ಪೂರೈಸಿದ್ದಾರೆ. ಅಲ್ಲದೇ ಟೆಸ್ಟ್ 210, ಏಕದಿನದಲ್ಲಿ 196 ಕ್ಯಾಚ್ ಹಿಡಿದ್ದಾರೆ. ಈ ಹಿಂದೆ 2004 ರಲ್ಲಿ ಐಸಿಸಿ ಕ್ರಿಕೆಟರ್ ಆಫ್ ದ ಇಯರ್ ಪ್ರಶಸ್ತಿಯನ್ನು ಪಡೆದಿದ್ದರು.

    ಟೀಂ ಇಂಡಿಯಾ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ (2015), ಕಪಿಲ್ ದೇವ್ (2010), ಬಿಷನ್ ಬೇಡಿ (2009), ಸುನೀಲ್ ಗವಾಸ್ಕರ್ (2009) ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆದಿದ್ದರು.