Tag: ಕ್ರೈಗ್ ಬ್ರಾಥ್‌ವೈಟ್

  • ಕಾಂಗರೂಗಳ ಭದ್ರಕೋಟೆ ಛಿದ್ರ ಛಿದ್ರ – 27 ವರ್ಷಗಳ ಬಳಿಕ ವಿಂಡೀಸ್‌ಗೆ ಐತಿಹಾಸಿಕ ಜಯ

    ಕಾಂಗರೂಗಳ ಭದ್ರಕೋಟೆ ಛಿದ್ರ ಛಿದ್ರ – 27 ವರ್ಷಗಳ ಬಳಿಕ ವಿಂಡೀಸ್‌ಗೆ ಐತಿಹಾಸಿಕ ಜಯ

    – ವೆಸ್ಟ್‌ ಇಂಡೀಸ್‌ ವಿರುದ್ಧ ಆಸೀಸ್‌ಗೆ 8 ರನ್‌ಗಳ ವಿರೋಚಿತ ಸೋಲು
    – ಗಬ್ಬಾ ಮೈದಾನದಲ್ಲಿ 56 ವರ್ಷಗಳಲ್ಲಿ ವಿಂಡೀಸ್‌ಗೆ ಮೊದಲ ಗೆಲುವು
    – 2 ಪಂದ್ಯಗಳ ಟೆಸ್ಟ್‌ ಸರಣಿ 1-1ರಲ್ಲಿ ಸಮಬಲ

    ಬ್ರಿಸ್ಬೇನ್‌: ದೈತ್ಯ ಆಸ್ಟ್ರೇಲಿಯಾ (Australia) ತಂಡದ ವಿರುದ್ಧ ಬೆಚ್ಚಿಬೀಳಿಸುವ ಪ್ರದರ್ಶನ ತೋರಿದ ವೆಸ್ಟ್‌ ಇಂಡೀಸ್‌ ತಂಡವು ಬರೋಬ್ಬರಿ 27 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಪಂದ್ಯವೊಂದನ್ನು ಗೆದ್ದು ಚಾರಿತ್ರಿಕ ಗೆಲುವು ದಾಖಲಿಸಿದೆ. 2021ರಲ್ಲಿ ಟೀಂ ಇಂಡಿಯಾ ವಿರುದ್ಧ ಗಬ್ಬಾ ಮೈದಾನದಲ್ಲಿ ಸೋತಿದ್ದ ಆಸ್ಟ್ರೇಲಿಯಾ, ತನ್ನ ಭದ್ರಕೋಟೆಯಾದ ಗಬ್ಬಾದಲ್ಲಿ ವಿಂಡೀಸ್‌ (West Indies) ವಿರುದ್ಧ ವಿರೋಚಿತ ಸೋಲನುಭವಿಸಿದೆ.

    ಕ್ರೈಗ್ ಬ್ರಾಥ್‌ವೈಟ್ (Kraigg Brathwaite) ನೇತೃತ್ವದ ವೆಸ್ಟ್ ಇಂಡೀಸ್ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಚಾರಿತ್ರಿಕ ಗೆಲುವು ಕಂಡಿದೆ. 2ನೇ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 216 ರನ್‌ ಗುರಿ ಬೆನ್ನಟ್ಟಿದ್ದ ಆಸೀಸ್‌ 207 ರನ್‌ಗಳಿಗೆ ಆಲೌಟ್‌ ಆಗಿ ಸೋಲು ಕಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿ 1-1 ರಲ್ಲಿ ಸಮಬಲಗೊಂಡಿದೆ. ವೆಸ್ಟ್‌ ಇಂಡೀಸ್‌ ತಂಡದ ಗೆಲುವು ಸದ್ಯ ಕ್ರಿಕೆಟ್‌ ಲೋಕವನ್ನೇ ಅಚ್ಚರಿಗೊಳಿಸಿದೆ.

    ವೆಸ್ಟ್ ಇಂಡೀಸ್​ ಮೊದಲ ಇನ್ನಿಂಗ್ಸ್​ನಲ್ಲಿ 311 ರನ್ ಗಳಿಸಿ ಆಲೌಟ್ ಆಗಿತ್ತು. ಬಳಿಕ ಆಸೀಸ್‌ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 289 ರನ್​ಗಳಿಗೆ ಡಿಕ್ಲೇರ್ ಘೋಷಿಸಿತ್ತು. 22 ರನ್​ಗಳ ಮುನ್ನಡೆ ಪಡೆದಿದ್ದ ವಿಂಡೀಸ್, 2ನೇ ಇನ್ನಿಂಗ್ಸ್​ನಲ್ಲಿ 193ಕ್ಕೆ ಆಲೌಟ್​ ಆಗಿ 216 ರನ್​ಗಳ ಗುರಿ ನೀಡಿತ್ತು. ಆದರೆ ಶಮರ್​ ಜೋಸೆಫ್ ತೋರಿದ ಮಾರಕ ಬೌಲಿಂಗ್ ದಾಳಿಗೆ ಕಾಂಗರೂ ಪಡೆಯ ಆಟಗಾರರು ತರಗೆಲೆಗಳಂತೆ ಉದುರಿದರು. ಪರಿಣಾಮ ಆಸೀಸ್‌ 207 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಇನ್ನೂ ಆಸೀಸ್‌ ಪರ ಕೊನೆಯವರೆಗೂ ಹೋರಾಡಿದ ಸ್ಟೀವ್‌ ಸ್ಮಿತ್‌ (Steve Smith) 146 ಎಸೆತಗಳಲ್ಲಿ 91 ರನ್‌ (9 ಬೌಂಡರಿ, 1 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು. ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಆಸೀಸ್‌ ಸೋಲಿಗೆ ತುತ್ತಾಯಿತು.

    27 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಗೆಲುವು:
    ವೆಸ್ಟ್​ ಇಂಡೀಸ್ ಕಳೆದ 27 ವರ್ಷಗಳಿಂದ ಆಸ್ಟ್ರೇಲಿಯಾ ನೆಲದಲ್ಲಿ ಒಂದೂ ಟೆಸ್ಟ್​ ಪಂದ್ಯದಲ್ಲೂ ಗೆಲುವು ದಾಖಲಿಸಿಯೇ ಇರಲಿಲ್ಲ. 1997ರಲ್ಲಿ ಕೊನೆಯದಾಗಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಪಂದ್ಯದಲ್ಲಿ ಜಯಿಸಿದ್ದ ಕೆರಿಬಿಯನ್ನರು, ಸತತ ಸೋಲುಗಳ ನಂತರ ಗೆಲುವಿನ ನಗೆ ಬೀರಿದ್ದಾರೆ.

    ಶಮರ್ ಬೆಂಕಿ ದಾಳಿಗೆ ಆಸೀಸ್‌ ಶಮನ:
    ಮೊದಲ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದುಕೊಂಡಿದ್ದ ಶಮರ್‌ ಜೋಸೆಫ್‌ 2ನೇ ಇನ್ನಿಂಗ್ಸ್​​​ನಲ್ಲಿ ಆಸೀಸ್‌ ತಂಡವನ್ನು ಧೂಳಿಪಟ ಮಾಡಿದರು. ಕಡಿಮೆ ರನ್‌ಗಳಿಸಿ ಸರಣಿ ಕಳೆದುಕೊಳ್ಳುವ ಸನಿಹದಲ್ಲಿದ್ದ ವಿಂಡೀಸ್‌ಗೆ ಜೋಸೆಫ್‌ ಬೌಲಿಂಗ್‌ನಲ್ಲಿ ನೆರವಾದರು. 11.5 ಓವರ್​ಗಳಲ್ಲಿ 68 ರನ್ ಬಿಟ್ಟುಕೊಟ್ಟ ಜೋಸೆಫ್‌ ಪ್ರಮುಖ 7 ವಿಕೆಟ್ ಉರುಳಿಸಿದರು. ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್​ವುಡ್ ಅವರನ್ನ ಔಟ್‌ ಮಾಡಿ ತಂಡದ ಗೆಲುವಿಗೆ ಕಾರಣಾದರು.

    56 ವರ್ಷಗಳಲ್ಲಿ ಮೊದಲ ಗೆಲುವು:
    ಬ್ರಿಸ್ಬೇನ್​ನ ಗಬ್ಬಾ ಮೈದಾನವನ್ನು ಆಸ್ಟ್ರೇಲಿಯಾ ತಂಡದ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಆದ್ರೆ ಈ ಮೈದಾನದಲ್ಲಿ ಭಾರತ 2021ರಲ್ಲಿ ಆಸೀಸ್‌ ತಂಡವನ್ನು ಬಗ್ಗು ಬಡಿದಿತ್ತು. ಇದೀಗ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದೆ. 1968 ಅಂದರೆ 56 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಈ ಮೈದಾನದಲ್ಲಿ ಗೆಲುವು ಸಾಧಿಸಿದೆ.

    ಸಂಕ್ಷಿಪ್ತ ಸ್ಕೋರ್​
    ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್​​: 311/10
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​: 289/9d
    ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್: 193/10
    ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್: 207/10
    ವೆಸ್ಟ್ ಇಂಡೀಸ್‌ಗೆ 8 ರನ್‌ಗಳ ರೋಚಕ ಗೆಲುವು