Tag: ಕ್ರೈಂ ಥ್ರಿಲ್ಲರ್

  • ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

    ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

    ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

    ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

  • ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಸಾರ್ವಜನಿಕರಲ್ಲಿ ವಿನಂತಿ: ಕೊಲೆಯ ಸಿಕ್ಕು ಬಿಡಿಸುತ್ತಾ ಸಖತ್ ಥ್ರಿಲ್ ನೀಡೋ ಚಿತ್ರ!

    ಬೆಂಗಳೂರು: ವಿಭಿನ್ನವಾದ ಕ್ರೈಂ ಥ್ರಿಲ್ಲರ್ ಕಥೆಯ ಸುಳಿವು ಕೊಡುತ್ತಲೇ ಪ್ರೇಕ್ಷಕರನ್ನು ಕಾಯುವಂತೆ ಮಾಡಿದ್ದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ತೆರೆ ಕಂಡಿದೆ. ಒಂದು ಕೊಲೆ ಮತ್ತು ಅದರ ಸುತ್ತ ಬಿಚ್ಚಿಕೊಳ್ಳೋ ರಂಗು ರಂಗಾದ ಕಥನಗಳು ಮತ್ತು ಅದೆಲ್ಲದರ ತಾರ್ಕಿಕ ಅಂತ್ಯವಾಗುವಲ್ಲಿ ಅಮೂಲ್ಯವಾದೊಂದು ಸಂದೇಶ. ಇವಿಷ್ಟು ಎಲಿಮೆಂಟುಗಳೊಂದಿಗೆ ಮಾಮೂಲಿ ಚಿತ್ರಗಳಿಗಿಂತಲೂ ಒಂಚೂರು ವಿಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕುವಲ್ಲಿ ಸಾರ್ವಜನಿಕರಲ್ಲಿ ವಿನಂತಿ ಯಶ ಕಂಡಿದೆ.

    ಇದು ಕೃಪಾ ಸಾಗರ್ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ಸಂಕೀರ್ಣವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಘಟನಾವಳಿಗಳ ಗುಚ್ಛವಿದೆ. ಹಳ್ಳಿ ಘಮಲಿನ ಸನ್ನಿವೇಶಗಳಿವೆ. ಚೂರೇ ಚೂರು ಎಡವಟ್ಟಾದರೂ ಸೂತ್ರ ಸಂಬಂಧ ಕಡಿದು ಹೋಗುವಂಥಾ, ಎಚ್ಚರ ತಪ್ಪಿದರೂ ಸಿಕ್ಕಾಗಿ ಬಿಡುವಂಥಾ ಕಥೆಯನ್ನು ಕೃಪಾ ಸಾಗರ್ ಇಲ್ಲಿ ಲೀಲಾಜಾಲವಾಗಿಯೇ ನಿರೂಪಣೆ ಮಾಡಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ ವಿನಂತಿ ಹೊಸ ಅಲೆಯ ಚಿತ್ರವಾಗಿ ತಾನೇ ತಾನಾಗಿ ದಾಖಲಾಗುವಷ್ಟು ಪರಿಣಾಮಕಾರಿಯಾಗಿಯೂ ಮೂಡಿ ಬಂದಿದೆ.

    ಒಂದು ಹಳ್ಳಿ. ಅದರಲ್ಲಿ ಪ್ರತೀ ಹಳ್ಳಿಗಳಲ್ಲಿರುವಂಥಾದ್ದೇ ಒಂದು ಹುಡುಗರ ಗುಂಪು. ಅದರಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸವಿದೆಯೋ ಇಲ್ಲವೋ. ಆದರೆ ಅವರೆಲ್ಲರಿಗೂ ಒಂದೊಂದು ಲವ್ವಿರುತ್ತೆ. ಅಂಥಾ ಲವ್ವಿನ ಹಿನ್ನೆಲೆಯೊಂದಿಗೇ ತೆರೆದುಕೊಳ್ಳುವ ಕಥೆಯನ್ನು ನಿರ್ದೇಶಕರು ಜಾಣ್ಮೆಯಿಂದಲೇ ಕ್ರೈಂ ಥ್ರಿಲ್ಲರ್ ಟ್ರ್ಯಾಕಿನತ್ತ ಹೊರಳಿಸಿದ್ದಾರೆ. ಈ ಹುಡುಗರ ಗುಂಪಿನ ಪರಮ ಸೋಮಾರಿ ಆಸಾಮಿಗೆ ಹೇಗೋ ಹುಡುಗಿಯೊಬ್ಬಳು ಸಿಕ್ಕು ಮದುವೆಯೂ ಆಗುತ್ತೆ. ಆದರೆ ಈತನ ವರ್ತನೆಯಿಂದ ರೇಜಿಗೆ ಹುಟ್ಟಿಸಿಕೊಳ್ಳೋ ಆಕೆ ಅಸಮಾಧಾನವನ್ನು ಧರಿಸಿಕೊಂಡೇ ಬದುಕುತ್ತಿರುತ್ತಾಳೆ. ಈ ನಡುವೆ ಅದೇ ಊರ ತೋಟದಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆ ಕೇಸಲ್ಲಿ ಈ ಸೋಮಾರಿ ಆಸಾಮಿಯನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಟ್ರೀಟ್‍ಮೆಂಟು ಕೊಡುತ್ತಾರೆ.

    ಅಸಲಿಗೆ ಆ ಕೊಲೆಗೂ ಈ ಸೋಮಾರಿಗೂ ಸಂಬಂಧವಿರೋದಿಲ್ಲ. ಅಲ್ಲಿಂದಾಚೆಗೆ ಆ ಕೊಲೆಗೆ ಕಾರಣವೇನೆಂಬುದನ್ನು ಪೊಲೀಸರು ಬೆಂಬೀಳುತ್ತಾರೆ. ಆ ಪೊಲೀಸರ ಹುಡುಕಾಟದೊಂದಿಗೇ ಒಟ್ಟಾರೆ ಕಥೆ ಪ್ರತೀ ಕ್ಷಣವೂ ಕಾತರದಿಂದ ಕಾಯುವಂತೆ ಚಲಿಸುತ್ತದೆ. ಹಾಗಾದರೆ ಆ ಕೊಲೆಗೆ ಕಾರಣವೇನು? ಅದಕ್ಕೂ ಅಂಡಲೆಯೋ ಊರ ಹುಡುಗರಿಗೂ ಸಂಬಂಧವಿರುತ್ತಾ ಎಂಬ ಕುತೂಹಲಕ್ಕೆ ಮಜವಾದ ಉತ್ತರವೇ ಕಾದಿದೆ. ಈ ಮೂಲಕವೇ ನಿರ್ದೇಶಕರಾಗಿ ಕೃಪಾ ಸಾಗರ್ ಕೂಡಾ ಭರವಸೆ ಮೂಡಿಸುವಂಥಾ ಚಿತ್ರವನ್ನೇ ಕಟ್ಟಿ ಕೊಟ್ಟಿದ್ದಾರೆ.

    ನಾಯಕನಾಗಿ ಮದನ್ ರಾಜ್ ರಂಗಭೂಮಿಯ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರಮೇಶ್ ಪಂಡಿತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವೂ ಇಲ್ಲಿ ಸುಮ್ಮನೆ ತುರುಕಿದಂತಿಲ್ಲ. ಪ್ರತಿಯೊಂದು ಪಾತ್ರಗಳೂ ಚಿತ್ರದ ಕಥೆಗೆ ಟ್ವಿಸ್ಟು ನೀಡುತ್ತಾ ವೇಗ ಹೆಚ್ಚಿಸುವಂತಿವೆ. ಅನಿಲ್ ಪಿಜೆ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಇಡೀ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿವೆ.

    ರೇಟಿಂಗ್: 3.5/5

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಾರ್ವಜನಿಕರಲ್ಲಿ ವಿನಂತಿ: ಟೀಸರ್ ಸೃಷ್ಟಿಸಿದ ಸೌಂಡು ಸೂಪರ್!

    ಸಾರ್ವಜನಿಕರಲ್ಲಿ ವಿನಂತಿ: ಟೀಸರ್ ಸೃಷ್ಟಿಸಿದ ಸೌಂಡು ಸೂಪರ್!

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಯುವ ಮನಸುಗಳ ಆಗಮನವಾಗಿ ಹೊಸ ಆಲೋಚನೆಗಳ ಹರಿವು ಶುರುವಾಗಿದೆ. ಈ ಕಾರಣದಿಂದಲೇ ಭಿನ್ನವಾದ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿವೆ. ಈ ಸಾಲಿನಲ್ಲಿ ದಾಖಲಾಗುತ್ತಲೇ ಗೆಲುವಿನ ಛಾಪು ಮೂಡಿಸಬಲ್ಲ ಚಿತ್ರವೊಂದರ ಟೀಸರ್ ಈಗ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂಥಾದ್ದೊಂದು ಟೀಸರ್ ಹವಾ ಸೃಷ್ಟಿಸಿರೋ ಸಿನಿಮಾ ‘ಸಾರ್ವಜನಿಕರಲ್ಲಿ ವಿನಂತಿ’!

    ಇದು ಹೊಸಬರೇ ಸೇರಿಕೊಂಡು ಮಾಡಿರೋ ಚಿತ್ರ. ಕೃಪಾ ಸಾಗರ್ ಕಮರ್ಶಿಯಲ್ ವೇನಲ್ಲಿಯೇ ಸಾಮಾಜಿಕ ಸಂದೇಶ ಇರುವ ಕಥೆಯೊಂದನ್ನು ಈ ಸಿನಿಮಾ ಮೂಲಕ ಹೇಳಲು ಮುಂದಾಗಿದ್ದಾರಂತೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಮಾತ್ರ ತುಂಬು ಭರವಸೆ ಹುಟ್ಟಿಸುವಂತಿದೆ. ಸೂಕ್ಷ್ಮವಂತಿಕೆಯ ಮನಸುಗಳಿಗೆಲ್ಲ ಗತ ಕಾಲದ ಪರಿಮಳವನ್ನು ಪರಿಚಯಿಸುತ್ತಲೇ ಆರಂಭವಾಗೋ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರಿನದ್ದೆಂಬ ಹೊಳಹೂ ಸಿಕ್ಕಿದೆ. ಇದಲ್ಲದೆ ಇಡೀ ಚಿತ್ರ ಹೊಸತೇನನ್ನೋ ಒಡಲಲ್ಲಿಟ್ಟುಕೊಂಡಿದೆ ಎಂಬ ಸುಳಿವೂ ಪ್ರೇಕ್ಷಕರಿಗೆ ಸಿಕ್ಕಿ ಬಿಟ್ಟಿದೆ.

    ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಕೃಪಾ ಸಾಗರ್ ನಮ್ಮ ನಡುವೆಯೇ ನಡೆಯೋ ಘಾತುಕ ಘಟನಾವಳಿಗಳ ಸ್ಫೂರ್ತಿಯಿಂದ ಕಥೆ ಹೊಸೆದು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ಸದಾ ಸಾರ್ವಜನಿಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರೋ ಪೊಲೀಸರಿಗೆ ಅರ್ಪಿಸಲಾಗಿದೆ. ಕಥೆಯ ವಿಚಾರಕ್ಕೆ ಬಂದರೆ ಪೊಲೀಸರ ಪಾತ್ರ ಪ್ರಧಾನವಾಗಿದೆಯಂತೆ. ಪೊಲೀಸರಿಗೆಂದೇ ವಿಶೇಷ ಹಾಡೊಂದನ್ನು ಚಿತ್ರತಂಡ ರೆಡಿ ಮಾಡಿದೆ. ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರಂತೆ.

    ಮದನ್ ರಾಜ್ ಮತ್ತು ಅಮೃತಾ ಈ ಮೂಲಕ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಸೇರಿದಂತೆ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‍ಗೆ ಸಿಗುತ್ತಿರೋ ಭಾರೀ ಮೆಚ್ಚುಗೆ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿದೆ. ಅದೇ ಜೋಶ್ ನಲ್ಲಿ ಆದಷ್ಟು ಬೇಗನೆ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.