Tag: ಕ್ರೀಡೆ

  • 10 ಸಾವಿರ ಕ್ರೀಡಾಪಟುಗಳ ಲಸಿಕೆ ಅಭಿಯಾನಕ್ಕೆ ಡಾ. ನಾರಾಯಣಗೌಡ ಚಾಲನೆ

    10 ಸಾವಿರ ಕ್ರೀಡಾಪಟುಗಳ ಲಸಿಕೆ ಅಭಿಯಾನಕ್ಕೆ ಡಾ. ನಾರಾಯಣಗೌಡ ಚಾಲನೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಆದಾಗ್ಯೂ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹಾಗೂ ಲಸಿಕೆಯನ್ನು ಪಡೆದುಕೊಳ್ಳುವುದು ಅವಶ್ಯಕ. ದೈಹಿಕ ಕ್ಷಮತೆಯನ್ನು ಸದಾಕಾಲ ಕಾಪಾಡಿಕೊಳ್ಳಬೇಕಾಗಿರುವುದು ಕ್ರೀಡಾಪಟುಗಳ ಆದ್ಯ ಕರ್ತವ್ಯ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ ಕೂಡ ಹೌದು. ಹೀಗಾಗಿ ಕ್ರೀಡಾಪಟುಗಳಿಗೆ ಕೋವಿಡ್ -19 ಲಸಿಕೆ ನೀಡುವ ಸಲುವಾಗಿ ಅಭಿಯಾನ ಆರಂಭಿಸಲಾಗಿದೆ. ರಾಜ್ಯಾದ್ಯಂತ ಇರುವ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಅನುಪ್ ಶ್ರೀಧರ್ ಅವರಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ನಾರಾಯಣ ಗೌಡ ಅವರು, ಇಂದು ಮತ್ತು ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಎರಡೇ ದಿನಕ್ಕೆ ಅಭಿಯಾನವನ್ನು ಮುಗಿಸೋದಿಲ್ಲ. ಎಲ್ಲ ಜಿಲ್ಲಾ ಕೇಂದ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಈ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಕ್ರೀಡಾಪಟುಗಳು ಬಂದು ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲೂ ಲಸಿಕೆಯನ್ನು ನೀಡಲಾಗುತ್ತಿದ್ದು, ಎಲ್ಲ ಕ್ರೀಡಾಪಟುಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ಸಹಯೋಗದಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 2200 ಕ್ರೀಡಾಪಟುಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇಂದು ಮತ್ತು ನಾಳೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರಿಗೆ ಲಸಿಕೆ ನೀಡಲಾಗುತ್ತದೆ. ಈಗ ಹೆಸರು ನೋಂದಾಯಿಸಿಕೊಂಡವರಿಗೆ ಅಭಿಯಾನವನ್ನು ಮುಂದುವರಿಸಿ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಅಭಿಯಾನ ಆರಂಭವಾಗಿದ್ದು, ಎಲ್ಲ ಕ್ರೀಡಾಪಟುಗಳು ಲಸಿಕೆ ಪಡೆದುಕೊಂಡ ನಂತರ ಅಭಿಯಾನವನ್ನು ಮುಕ್ತಾಯಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಇದು ಮೊದಲ ಹಂತದ ಲಸಿಕಾ ಅಭಿಯಾನವಾಗಿದ್ದು, ನಿಗದಿತ ಸಮಯದ ನಂತರ ಎರಡನೇ ಹಂತದ ಲಸಿಕೆಯನ್ನೂ ಸಹ ಇದೇ ಮಾದರಿಯಲ್ಲಿ ನೀಡಲಾಗುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸಚಿವರ ಜೊತೆ ಚರ್ಚಿಸಿ ಕ್ರೀಡಾಪಟುಗಳಿಗೆ ಲಸಿಕಾಕರಣ ಅಭಿಯಾನದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಇಲಾಖೆಯ ಕಾರ್ಯಕ್ಕೆ ಎಲ್ಲ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ರೀಡಾಟುಗಳ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೊದಲ ಡೋಸ್ ಲಸಿಕೆ ಪಡೆದ ಖ್ಯಾತ ಕ್ರೀಡಾಪಟುಗಳು: ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್, ಪಿ.ಎನ್. ಪ್ರಕಾಶ್- ಶೂಟರ್, ನಿಖಿಲ್- ಶೂಟರ್, ನಿಶಿತಾ- ರೋಯಿಂಗ್, ಶ್ರೇಯಾ ಬಿ. – ರೋಯಿಂಗ್, ಭೂಮಿಕಾ ಆರ್. ಕೇಸರಕರ್- ಸ್ಮಿಮ್ಮರ್, ಪ್ರಿಯಾ ಮೋಹನ್- ಅಥ್ಲೆಟಿ , ನ್ಯಾಷನಲ್ ಚಾಂಪಿಯನ್ ಗಳಾದ ಐಶ್ವರ್ಯ, ಯಶ್ವಂತ್, ಅಕ್ಷಯ್ ಸೇರಿದಂತೆ ನೂರಾರು ಕ್ರೀಡಾಪಟುಗಳು ಲಸಿಕೆ ಪಡೆದರು. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ

    ಸಂಸದ ಪಿ.ಸಿ. ಮೋಹನ್, ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ಅಭಿಯಾನ: ನಾರಾಯಣಗೌಡ

    ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ಅಭಿಯಾನ: ನಾರಾಯಣಗೌಡ

    ಬೆಂಗಳೂರು: ಕ್ರೀಡಾಪಟುಗಳಿಗೆ ಉಚಿತವಾಗಿ ಕೋವಿಡ್- 19ನ ಮೊದಲ ಹಂತದ ಲಸಿಕೆಯನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಈ ಲಸಿಕಾ ಅಭಿಯಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಲಿದ್ದಾರೆ.

    ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆದ್ಯತಾ ಗುಂಪಿಗೆ ಸೇರಿಸಿದ್ದು, ನೋಂದಣಿ ಮಾಡಿಕೊಂಡ ಕ್ರೀಡಾಪಟುಗಳಿಗೆ ಲಸಿಕೆ ನೀಡಲಿದೆ. ಈಗಾಗಲೇ 2200 ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, 10 ಮತ್ತು 11 ರಂದು ಇವರಿಗೆ ಲಸಿಕೆ ನೀಡಲಾಗುವುದು. ಇದುವರೆಗು ಹೆಸರನ್ನು ನೋಂದಾಯಿಸಿಕೊಳ್ಳದ ಕ್ರೀಡಾಪಟುಗಳು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬೇಕು. ಇದನ್ನೂ ಓದಿ:ಕೋವಿಡ್ ಚಿಕಿತ್ಸೆಗೆ ದುಬಾರಿ ಬಿಲ್ – 5 ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ನೊಟೀಸ್ ಜಾರಿ

    ಕೋವಿಡ್-19 ಹಿನ್ನೆಲೆಯಲ್ಲಿ ಕೋವಿಡ್ ತಡೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅತ್ಯಂತ ಸರಳವಾಗಿ ಯಾವುದೇ ಸಭಾ ಕಾರ್ಯಕ್ರಮವಿಲ್ಲದೇ, ಈ ಲಸಿಕೆ ಅಭಿಯಾನಕ್ಕ 2021ರ ಜೂನ್ 10 ರಂದು ಬೆಳಗ್ಗೆ 10.30 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

    ಕ್ರೀಡಾಪಟುಗಳಿಗೆ ಲಸಿಕೆ ನೀಡಲು ದಿನಾಂಕ ನಿಗದಿ:

    ಜೂನ್ 10 ಗುರುವಾರದಂದು ಬಾಸ್ಕೆಟ್‍ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಸ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್‍ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಹಾಗೂ ಜೂನ್ 11 ಶುಕ್ರವಾರದಂದು ವುಶು, ಶೂಟಿಂಗ್, ಹ್ಯಾಂಡ್‍ಬಾಲ್, ಫುಟ್ಬಾಲ್ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ವಾಲಿಬಾಲ್ ಮತ್ತು ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ಈಗಾಗಲೇ ನೋಂದಣಿ ಮಾಡಿಸಿಕೊಂಡವರನ್ನು ಹೊರತುಪಡಿಸಿ ಉಳಿದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನವನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ನೀಡಲಾಗುವುದು.

    ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಹೆಮ್ಮೆ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ. ಹೀಗಾಗಿ ಕ್ರೀಡಾಪಟುಗಳಿಗಾಗಿಯೇ ಪ್ರತ್ಯೇಕವಾಗಿ ಲಸಿಕಾ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ಲಸಿಕೆ ಪಡೆದುಕೊಳ್ಳಬೇಕು. ಕೇವಲ ಎರಡು ದಿನ ಮಾತ್ರವಲ್ಲ, ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ನೀಡುವವರೆಗೆ ಈ ಅಭಿಯಾನ ನಡೆಯಲಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

  • ಕ್ರೀಡಾಭಿಮಾನಿಗಳಿಗೆ ಗುಡ್ ನ್ಯೂಸ್ – ಪ್ರಾರಂಭವಾಗಲಿದೆ ಪ್ರೊ ಕಬಡ್ಡಿ

    ಕ್ರೀಡಾಭಿಮಾನಿಗಳಿಗೆ ಗುಡ್ ನ್ಯೂಸ್ – ಪ್ರಾರಂಭವಾಗಲಿದೆ ಪ್ರೊ ಕಬಡ್ಡಿ

    ನವದೆಹಲಿ: ಪ್ರೊ ಕಬಡ್ಡಿ ಆಯೋಜಕರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಪ್ರಾಂಭವಾಗಲಿದೆ.

    ಕ್ರಿಕೆಟ್ ನಂತರ ಅತಿಹೆಚ್ಚು ಕ್ರೇಜ್ ಹುಟ್ಟುಹಾಕಿರುವ ದೇಸಿ ಕ್ರೀಡೆಯೆಂದರೆ ಕಬಡ್ಡಿ. ಕಳೆದ ಕೆಲವು ವರ್ಷಗಳಿಂದ ಹೊಸ ಅಲೆಯನ್ನೆ ಸೃಷ್ಟಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಮನೆಮಂದಿಯೆ ಕುಳಿತು ನೋಡುವಷ್ಟು ಕ್ರೇಜ್ ಹುಟ್ಟುಹಾಕಿದೆ.

    ಕಳೆದ ವರ್ಷ ಕೊರೊನಾ ಇರುವುದರಿಂದಾಗಿ ಟೂರ್ನಿಯನ್ನು ರದ್ದು ಪಡಿಸಲಾಗಿತ್ತು. ಪ್ರೊ ಕಬಡ್ಡಿಯ ಹಲವು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಇದೀಗ ಕಬಡ್ಡಿ ಆಯೋಜಕರು ಕಬಡ್ಡಿ ಪ್ರಾರಂಭವಾಗಲಿದೆ ಎಂದು ಗುಡ್ ನ್ಯೂಸ್ ನೀಡಿದ್ದಾರೆ.

    2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಪ್ರಾರಂಭವಾಗಿ  ಅಕ್ಟೋಬರ್‌ವರೆಗೂ ನಡೆಸಲು ಯೋಜನೆಯನ್ನು ರೂಪಿಸಲಾಗಿದೆ. ಕಬಡ್ಡಿಗೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್ ಕಾರಣದಿಂದಾಗಿ ಟೂರ್ನಿ ರದ್ದಾಗಿತ್ತು. ಬಹುತೇಕ ಕ್ರೀಡೆಗಳು ಬಯೋ ಸೆಕ್ಯೂರ್ ವಾತಾವರಣದಲ್ಲಿ ನಡೆಯುತ್ತಿದೆ. ಇದೇ ವ್ಯವಸ್ಥೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತದೆ ಎಂದು ಪ್ರೋ ಕಬಡ್ಡಿ ಆಯೋಜಕ ಸಂಸ್ಥೆಯ ಮಶಾಲ್ ಸ್ಪೋಟ್ರ್ಸ್ ಮೂಖ್ಯಸ್ಥ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.

    ಪಿಕೆಎಲ್ ಟೂರ್ನಿ ನವೀನ್ ಕುಮಾರ್, ನಿತೀಶ್ ಕುಮಾರ್ ಅವರಂತಹ ದೇಶಿ ಪ್ರತಿಭೆಗಳನ್ನು ಅನಾವರಣ ಮಾಡಿದೆ. ಮುಂದೆಯೂ ಪಿಕೆಎಲ್ ವತಿಯಿಂದ ದೇಸಿ ಪ್ರತಿಭಾ ಶೋಧ ನಡೆಯಲಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿ ರೋಚಕತೆಯನ್ನು ಕಾಯ್ದುಕೊಳ್ಳಲಿದೆ. ಮತ್ತಷ್ಟು ಜಿದ್ದಾಜಿದ್ದಿಯಿಂದ ಇರಲಿದೆ. ಪ್ರೊ ಕಬಡ್ಡಿ ಟೂರ್ನಿಯ ಪ್ರಸಾರ ಹಕ್ಕು ಹರಾಜು ಏಪ್ರಿಲ್‍ನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಪ್ರೋ ಕಬಡ್ಡಿ ಗಾಗಿ ಕಾಯುತ್ತಿರುವ ಕ್ರೀಡಾಭಿಮಾನಿಗಳಿಗೆ ಸಖತ್ ಖುಷಿಯಾಗಿದ್ದಾರೆ. ದೇಶಿ ಆಟವನ್ನು ನೋಡಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

  • ಅವಕಾಶಗಳಿಂದ ವಂಚಿತನಾಗಿ ಟೀ ಮಾರುತ್ತಿರುವ ರಾಷ್ಟ್ರೀಯ ಚೆಸ್ ಆಟಗಾರ

    ಅವಕಾಶಗಳಿಂದ ವಂಚಿತನಾಗಿ ಟೀ ಮಾರುತ್ತಿರುವ ರಾಷ್ಟ್ರೀಯ ಚೆಸ್ ಆಟಗಾರ

    – ಜೀವನ ನಡೆಸಲು ಚಹಾ ಮಾರಾಟ

    ಭೂಪಾಲ್: ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವಕಾಶಗಳ ಕೊರತೆ ಹಾಗೂ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಲೇಜಿನ ಎದುರು ಚಹಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

    ನನಗೆ ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ಸಿಗುತ್ತಿಲ್ಲ. ಮನೆಯಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ, ಹಾಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಆರ್ಥಿಕ ಪರಿಸ್ಥಿತಿಯಿಂದಾಗಿ ಇಡೀ ಜೀವನವನ್ನು ಆಟಕ್ಕಾಗಿ ಮುಡಿಪಾಗಿಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಕುಲದೀಪ್ ಚೌಹಾನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಕುಲದೀಪ್ ಚೌಹಾನ್ ಮಧ್ಯಪ್ರದೇಶದ ಕಾಲೇಜ್‍ವೊಂದರ ಎದುರು ಟೀ ಮಾರಾಟ ಮಾಡುತ್ತಿರುವ ಫೆÇೀಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವಕಾಶ ಸಿಗದ ಕಾರಣ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

    ಭಾರತದಲ್ಲಿ ಅಸಂಖ್ಯಾತ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಅವಕಾಶದಿಂದ ವಂಚಿತರಾಗುತ್ತಿದ್ದವರ ಸಾಲಿಗೆ ಮಧ್ಯಪ್ರದೇಶದ ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವರ ಹೆಸರು ಕೇಳಿ ಬಂದಿದೆ.

    ಟ್ವಿಟ್ಟರ್‌ನಲ್ಲಿ ಟೀ ಮಾರುತ್ತಿರುವ ಫೋಟೋಗಳು ಹರಿದಾಡುತ್ತಿದ್ದಂತೆ ಅನೇಕರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿ ಆಟಗಾರನ ಬಗ್ಗೆ ಗಮನ ಹರಿಸಿ ಸಹಾಯ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ಬಜ್ಜಿ, ಬೋಂಡಾ ಅಂಗಡಿ ತೆರೆದ ರಾಷ್ಟ್ರಮಟ್ಟದ ಕ್ರೀಡಾಪಟು

    ಬಜ್ಜಿ, ಬೋಂಡಾ ಅಂಗಡಿ ತೆರೆದ ರಾಷ್ಟ್ರಮಟ್ಟದ ಕ್ರೀಡಾಪಟು

    ರಾಂಚಿ: ಬಿಲ್ಲುಗಾರಿಕೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಜಾರ್ಖಂಡ್ ಕ್ರೀಡಾಪಟು ಈಗ ಬಜ್ಜಿ, ಬೋಂಡಾವನ್ನು ಮಾರಾಟ ಮಾಡಿ ಜೀವನವನ್ನು ನಡೆಸುತ್ತಿದ್ದಾರೆ.

    23 ವರ್ಷದ ಮಮತಾ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು ಕೊರೊನ ಕಾರಣದಿಂದ ಮನೆಗೆ ಬಂದಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಬಜ್ಜಿ-ಬೋಂಡಾ ಮಾರುತ್ತಿದ್ದಾರೆ.

    2010ರಲ್ಲಿ ಜೂನಿಯರ್ ಹಾಗೂ 2014ರಲ್ಲಿ ಸಬ್ ಜೂನಿಯರ್ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಲಾಕ್‍ಡೌನ್‍ನಿಂದದಾಗಿ ಇವರ ಜೀವನವೇ ಜರ್ಜರಿತವಾಗಿದೆ. ತರಬೇತಿ ನೀಡುವ ಅಕಾಡೆಮಿಯನ್ನು ಮುಚ್ಚಲಾಗಿತ್ತು. ಹೀಗಾಗಿ ಅವರು ತಮ್ಮ ಊರಿಗೆ ಹೋಗಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಕಾರಣ ಮತ್ತೆ ತರಬೇತಿಯನ್ನು ಪಡೆಯಲು ಹೋಗಲು ಸಾಧ್ಯವಾಗಲಿಲ್ಲ.

    ನಾವು 7 ಮಂದಿ ಮಕ್ಕಳು ಇದ್ದೇವೆ. ನಾನು ದೊಡ್ಡವಳು, ಆರ್ಥಿಕ ತೊಂದರೆಯಿಂದಾಗಿ ನನ್ನ ತಮ್ಮಂದಿರು ಓದುವುದನ್ನು ಬಿಟ್ಟಿದ್ದಾರೆ. ನಮ್ಮ ತಂದೆಗೆ ಸಿಗುವ ಪೆನ್ಶನ್ ಕೂಡಾ ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ ನಾವು ನಡೆಸುತ್ತಿರುವ ಬಜ್ಜಿ ಅಂಗಡಿಯ ಮೇಲೆ ನಮ್ಮ ಕುಟುಂಬ ಜೀವನವನ್ನು ಸಾಗಿಸುತ್ತಿದೆ ಎಂದು ಮಮತಾ ಅವರು ಹೇಳಿದ್ದಾರೆ.

    ನಾನು ಬಜ್ಜಿ ಅಂಗಡಿ ನಡೆಸಲಿಲ್ಲ ಎಂದರೆ ನಮ್ಮ ಕುಟುಂಬ ಹಸಿವಿನಿಂದ ಕಂಗೆಡಬೇಕಾಗುತ್ತದೆ. ಸರ್ಕಾರ ನಮಗೆ ಎನಾದರೂ ಸಹಕಾರ ನೀಡಿದರೆ ನಮ್ಮ ಕುಟುಂಬಕ್ಕೆ ನೇರವಾಗುತ್ತದೆ. ಇಲ್ಲದಿದ್ದರೆ ರಾಷ್ಟ್ರಮಟ್ಟಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ನನ್ನ ಕನಸು ಹಾಗೆಯೇ ಉಳಿದುಕೊಳ್ಳುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.

  • ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಕಡೆಗೂ ಕೂಡಿ ಬಂದ ಕಾಲ

    ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಕಡೆಗೂ ಕೂಡಿ ಬಂದ ಕಾಲ

    ಚೆನ್ನೈ: ಕಳೆದ ವರ್ಷ ದೇಶಕ್ಕೆ ಕಾಲಿಟ್ಟ ಹೆಮ್ಮಾರಿ ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಮೆಲ್ಲನೆ ಎಲ್ಲವೂ ಆರಂಭವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಪ್ರೇಮಿಗಳಿಗೆ ಶುಭ ಸುದ್ದಿ ಹೊರಬಿದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಡೆಗೂ ಕೂಡಿ ಬಂದಿದೆ.

    ಈವರೆಗೆ ಕ್ರೀಡಾ ಚಟುವಟಿಕೆಗಳು ನಡೆದರು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆಯುತ್ತಿತ್ತು. ವಿಶೇಷವಾಗಿ ಚೆನ್ನೈನ ಚಿದಂಬರಂ ಕ್ರೀಡಾಂಗಣ ಕೊರೊನಾ ಮುಂಚೆಯೆ 2011ರ ವಿಶ್ವಕಪ್ ಬಳಿಕ ಸ್ಥಳೀಯಾಡಳಿತ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ತಕರಾರಿನಿಂದಾಗಿ ಐ, ಜೆ ಮತ್ತು ಕೆ ಗ್ಯಾಲರಿಗಳು ಪ್ರೇಕ್ಷಕರಿಂದ ದೂರ ಉಳಿದಿತ್ತು. ಇದೀಗ ಈ ಸಮಸ್ಯೆಯೂ ಬಗೆಹರಿದು ಪ್ರೇಕ್ಷಕರಿಗೆ ಮುಕ್ತವಾಗುವ ಸನಿಹದಲ್ಲಿದೆ.

    ಈಗಾಗಲೇ 2ನೇ ಟೆಸ್ಟ್ ಪಂದ್ಯಕ್ಕೆ ಕೇಂದ್ರ ಸರ್ಕಾರದಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಬರಲು ಅವಕಾಶ ಸಿಕ್ಕಿರುವ ಕಾರಣ ಟಿಕೆಟ್ ಮಾರಾಟವು ಪ್ರಾರಂಭಗೊಂಡಿದೆ. 2ನೇ ಟೆಸ್ಟ್ ವೇಳೆ 15 ಸಾವಿರ ಟಿಕೆಟ್ ಸಾರ್ವಜನಿಕರಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಟಿಕೆಟ್‍ಗಳನ್ನು 3 ವಿಧಗಳಲ್ಲಿ ವರ್ಗಿಕರಿಸಲಾಗಿದ್ದು, 100, 150 ಮತ್ತು 200 ರೂಪಾಯಿ ಬೆಲೆಯ ಟಿಕೆಟ್‍ಗಳನ್ನು ಕೌಂಟರ್ ನಲ್ಲಿ ಮಾರಾಟ ಮಾಡದೆ ಪೇಟಿಂ ಆ್ಯಪ್‍ನ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಸಂಪೂರ್ಣ ಅಟದ ರಸವತ್ತತೆಯನ್ನು ಸವಿಯುವ ಅವಕಾಶ ದೊರೆತಂತಾಗಿದೆ.

  • ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಮ್ಯಾಡ್ರಿಡ್‌: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಒಪ್ಪಂದ ಮಾಡಿಕೊಂಡ ವಿಚಾರ ಈಗ ಬಯಲಾಗಿದೆ.

    ಸ್ಪೇನ್‌ ದೇಶದ ಖ್ಯಾತ ಫುಟ್‌ಬಾಲ್‌ ತಂಡ ಬಾರ್ಸಿಲೋನಾ ಪರವಾಗಿ ಮೆಸ್ಸಿ ಆಡುತ್ತಿದ್ದಾರೆ. ಈ ತಂಡದ ಪರ ಆಡಲು 33 ವರ್ಷದ ಮೆಸ್ಸಿ 55,52,37,619 ಯುರೋ(ಅಂದಾಜು 4,900 ಕೋಟಿ ರೂ.) ಒಪ್ಪಂದ ಮಾಡಿಕೊಂಡ ವಿಚಾರ ಈಗ ಬೆಳಕಿಗೆ ಬಂದಿದೆ.

    ಸ್ಪೇನ್‌ನಲ್ಲಿರುವ ದಿನ ಪತ್ರಿಕೆ ʼಎಲ್‌ ಮುಂಡೋʼ ತನ್ನ ಮುಖಪುಟದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು ವಿಶ್ವಾದ್ಯಂತ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ. ಮೆಸ್ಸಿ 2017-2021ರ ನಾಲ್ಕು ಆವೃತ್ತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವಿವಿಧ ಖಚಿತ ಮೂಲಗಳಿಂದ ಕಲೆ ಹಾಕಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

    ಈ ಒಪ್ಪಂದ ಪತ್ರ 30 ಪುಟಗಳಿದ್ದು, 2017ರಲ್ಲಿ ಮೆಸ್ಸಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ನ ಗಳಿಕೆಯಲ್ಲಿನ ಅರ್ಧದಷ್ಟು ಹಣವನ್ನು ಮೆಸ್ಸಿ ತೆರಿಗೆ ರೂಪದಲ್ಲಿ ಸ್ಪೇನ್‌ನಲ್ಲಿ ಪಾವತಿಸಬೇಕಾಗುತ್ತದೆ. ಈ ಪೈಕಿ138 ದಶಲಕ್ಷ ಯುರೋ ಪ್ರತಿ ಸೀಸನ್‌ಗೆ ಸಿಕ್ಕಿದರೆ, ಒಪ್ಪಂದ ಸ್ವೀಕರಿಸಿದ್ದಕ್ಕೆ 11,52,25,000 ಯುರೋ ನವೀಕರಣ ಶುಲ್ಕ, 9 7,79,29,955 ಲಾಯಲ್ಟಿ ಬೋನಸ್ ಸಿಕ್ಕಿದೆ.

    ಈ ಒಪ್ಪಂದ ಮುಗಿಯಲು ಇನ್ನು 5 ತಿಂಗಳು ಬಾಕಿ ಇದ್ದು ಮೆಸ್ಸಿ ಈಗಾಗಲೇ 51,15,40,545 ಯುರೋ(ಅಂದಾಜು 45,26,58,86,151 ಕೋಟಿ ರೂ.) ಗಳಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕೋವಿಡ್‌ 19ನಿಂದ ಬಾರ್ಸಿಲೋನಾ ಕ್ಲಬ್‌ ಭಾರೀ ನಷ್ಟಕ್ಕೆ ತುತ್ತಾಗಿದೆ. ಕ್ಲಬ್‌ ದಶಲಕ್ಷ ಯುರೋ ನಷ್ಟದಲ್ಲಿದ್ದು, ಆಟಗಾರರ ಸಂಬಳ ಪಾವತಿಸಲು ಹೆಣಗಾಡುತ್ತಿದೆ.

  • ಮಧುಮೇಹದಂಥ ಜೀವನಶೈಲಿ ಕಾಯಿಲೆಗೆ ಕ್ರೀಡೆಯೇ ಮದ್ದು: ಡಾ. ಅಶ್ವತ್ಥನಾರಾಯಣ

    ಮಧುಮೇಹದಂಥ ಜೀವನಶೈಲಿ ಕಾಯಿಲೆಗೆ ಕ್ರೀಡೆಯೇ ಮದ್ದು: ಡಾ. ಅಶ್ವತ್ಥನಾರಾಯಣ

    ಬೆಂಗಳೂರು: ಬೊಜ್ಜು, ಹೈಪರ್ ಟೆನ್ಶನ್, ಮಧುಮೇಹದಂಥ ಜೀವನಶೈಲಿಯ ಕಾಯಿಲೆಗೆ ಕ್ರೀಡೆಯೇ ಮದ್ದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

    ‘ಡಯಾಬಿಟಿಸ್ ಇಂಡಿಯಾ 2020’ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ, “ಸಣ್ಣ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿರುವ ಮಧುಮೇಹ ಸಮಸ್ಯೆ ನಿಜಕ್ಕೂ ಕಳವಳಕಾರಿ, ಇದಕ್ಕೆ ಪರಿಹಾರ ಎಂದರೆ ಆಟೋಟದಲ್ಲಿ ತೊಡಗಿಕೊಳ್ಳುವುದು,” ಎಂದು ಸಲಹೆ ನೀಡಿದರು.

    “ಜೀವನಶೈಲಿಯ ಸಮಸ್ಯೆಯಿಂದ ಬರುವಂಥ ಸ್ಥೂಲಕಾಯ, ಹೈಪರ್ ಟೆನ್ಶನ್, ಮಧುಮೇಹದಂಥ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರೀಡೆಗೆ ಒತ್ತು ನೀಡಿ, ‘ಫಿಟ್ ಇಂಡಿಯಾ’ ಯೋಜನೆ ತಂದಿದೆ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದು, ಕಾಯಿಲೆ ತಡೆ ಹಾಗೂ ನಿಯಂತ್ರಣಕ್ಕೆ ನಮ್ಮ ಕಡೆಯಿಂದ ಎಲ್ಲ ರೀತಿಯ ನೆರವು ನೀಡಲು ಬದ್ಧ,” ಎಂದು ಅವರು ಭರವಸೆ ಕೊಟ್ಟರು.

    “ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜೀವನಶೈಲಿಯ ಆರೋಗ್ಯ ಸಮಸ್ಯೆ ನಿಯಂತ್ರಣ, ನಿವರ್ಹಣೆಯೇ ದೊಡ್ಡ ಸವಾಲು. ಭಾರತದಲ್ಲಿ 7.7 ಕೋಟಿ ಮಧುಮೇಹಿಗಳಿದ್ದು, ಇನ್ನು ಎಷ್ಟೋ ಜನರಿಗೆ ತಮಗೆ ಮಧುಮೇಹ ಇದೆ ಎಂಬ ವಿಷಯವೇ ಗೊತ್ತಿರುವುದಿಲ್ಲ. ಅಂಥವರನ್ನು ಪರೀಕ್ಷೆಗೆ ಒಳಪಡಿಸುವುದು ಒಂದು ರೀತಿಯ ಸವಾಲಾದರೆ, ಈಗಾಗಲೇ ಸಮಸ್ಯೆಯಿಂದ ಬಳಲುತ್ತಿರುವವರು ಕಾಯಿಲೆ ನಿಯಂತ್ರಣಕ್ಕೆ ಒತ್ತು ನೀಡದಿರುವುದು ಮತ್ತೊಂದು ಸವಾಲು. ಅಂಕಿ ಅಂಶಗಳ ಪ್ರಕಾರ ಶೇ.70ರಷ್ಟು ರೋಗಿಗಳು ಮಧುಮೇಹ ನಿಯಂತ್ರಿಸುವುದರಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂಥ ಸಮಾವೇಶಗಳು ನಿಜಕ್ಕೂ ದೊಡ್ಡ ವ್ಯತ್ಯಾಸ ಮಾಡಬಲ್ಲದು. ಕಾಯಿಲೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿನೂತನ ಚಿಕಿತ್ಸಾ ವಿಧಾನಗಳ ಮೇಲೆ ಬೆಳಕು ಚೆಲ್ಲುವ ಮೂಲಕ ವೈದ್ಯರಿಗೂ ನೆರವಾಗುವುದು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕ್ರೀಡೆ ಈಗ ಪಠ್ಯಕ್ರಮ
    “ಸಣ್ಣ ವಯಸ್ಸಿನವರಲ್ಲಿ ಟೈಪ್-2 ಮಧುಮೇಹ ಸಮಸ್ಯೆ ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಪರೀಕ್ಷಾ ಒತ್ತಡ. ಮೊಬೈಲ್, ವೀಡಿಯೋ ನೋಡುವ ಚಟ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಮಕ್ಕಳು ಹೊರಗೆ ಆಡಲು ಹೋಗದಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ಶಾಲೆಗಳಲ್ಲೂ ಕ್ರೀಡೆಗೆ ಹೆಚ್ಚಿನ ಅನುಕೂಲ ಇಲ್ಲದಿರುವುದೂ ಸಮಸ್ಯೆಗೆ ಮತ್ತೊಂದು ಕಾರಣ. ಎಷ್ಟೋ ಶಾಲೆಗಳಲ್ಲಿ ಮೈದಾನ ಇರುವುದಿಲ್ಲ. ಕೆಲ ಶಾಲೆಗಳಲ್ಲಿ ಮೈದಾನ ಇದ್ದರೂ ಆಡಲು ಕಳುಹಿಸುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಅರಿತು ಕೇಂದ್ರ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಡಿ, ಕ್ರೀಡೆಯೂ ಪಠ್ಯಕ್ರಮದ ಭಾಗವನ್ನಾಗಿಸಿದೆ. ಈ ಮೊದಲು ಕ್ರೀಡೆ ಪಠ್ಯೇತರ ಚಟುವಟಿಕೆ ಆಗಿತ್ತು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಕಲಿಕೆಯಲ್ಲೂ ಮುಂದಿರುತ್ತಾರೆ ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ,” ಎಂದರು.

    ಆಯುಷ್ಮಾನ್ ಭಾರತ್
    “ದೇಶಾದ್ಯಂತ 1.5 ಲಕ್ಷ ಆಯುಷ್ಮಾನ್ ಉಪ ಕೇಂದ್ರಗಳಿದ್ದು, ಜೀವನ ಶೈಲಿಯಿಂದ ಬರುವಂಥ ಆರೋಗ್ಯ ಸಮಸ್ಯೆಗಳಿಗೆ ಇವು ಪರಿಹಾರ ಕೇಂದ್ರಗಳಾಗುತ್ತವೆ. ಮಧುಮೇಹ ಪರೀಕ್ಷಾ ಸೌಲಭ್ಯವೂ ಇಲ್ಲಿ ಲಭ್ಯವಿರಲಿದೆ. ಸರ್ಕಾರದ ಹಾಗೂ ವೈದ್ಯ ಸಮೂಹದ ಪ್ರತಿನಿಧಿಯಾಗಿ ಉತ್ತಮ ಜೀವನಶೈಲಿಯ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ,” ಎಂದು ಅವರು ಹೇಳಿದರು.

  • 21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    21 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಉತ್ಸವ

    – ವಯಸ್ಸಿನ ಭೇದವಿಲ್ಲದೆ ಕಣಕ್ಕಿಳಿದ ಕಲಿಗಳು

    ಚಿಕ್ಕಮಗಳೂರು: 21 ವರ್ಷಗಳ ಬಳಿಕ ನಡೆಯುತ್ತಿರುವ ಚಿಕ್ಕಮಗಳೂರು ಉತ್ಸವದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಮಲೆನಾಡಿಗರು ಎಂಜಾಯ್ ಮಾಡುತ್ತಿದ್ದಾರೆ.

    ಇದೇ ತಿಂಗಳ 28, 29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಅದಕ್ಕಾಗಿ ಕಾಫಿನಾಡಿಗರಿಗೆ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಡ್ವೆಂಚರಸ್ ಗೇಮ್‍ಗಳನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಹಗ್ಗದಲ್ಲಿ ಜಾರೋ ಜಿಪ್ ಲೈನ್ ಗೇಮಲ್ಲಿ ಯುವಕ-ಯುವತಿಯರು ಹೊಸ ಅನುಭವ ಪಡೆಯುತ್ತಿದ್ದಾರೆ. ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಕೂಡ ಜಿಪ್ ಲೈನ್ ಸೇರಿದಂತೆ ಅಡ್ವೆಂಚರಸ್ ಕ್ರೀಡೆಯಲ್ಲಿ ಭಾಗಿಯಾಗಿ ಖುಷಿಪಡುತ್ತಿದ್ದಾರೆ.

    ಇದಕ್ಕೆ ಜೊತೆಗೆ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಲ್ಲೂರು ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಯೋಜಿಸಲಾಗಿತ್ತು. ಇಲ್ಲೂ ಕೂಡ ಸಾಹಸಿ ಪ್ರಿಯರು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ನೀರಿನ ಮೇಲೆ ವಾಟರ್ ಬೈಕ್‍ಗಳಲ್ಲಿ ತೇಲ್ತ ಜಗವನ್ನೇ ಮರೆಯುತ್ತಿದ್ದಾರೆ. ಸರ್. ಇನ್ನೊಂದು ರೌಂಡ್ ಪ್ಲೀಸ್ ಎಂದು ಗೋಗರೆಯುತ್ತಿದ್ದಾರೆ. ನೀರಿನ ಮೇಲೆ ಥ್ರಿಲ್ಲಿಂಗ್ ಬೈಕ್ ರೈಡ್ ಮಾಡಿ ವಾವ್, ಸೂಪರ್ ಎಂದು ಹೇಳುತ್ತಿದ್ದಾರೆ. ಜೊತೆಗೆ ಸ್ಟ್ರೀಟ್ ಬೋಟಿಂಗ್, ಬನಾನಾ ಬೋಟ್ ರೈಡ್, ಸ್ಕಯಿಂಗ್, ವಾಟರ್ ಜಾಬ್ರಿಂಗ್ ಸೇರಿದಂತೆ ಅನೇಕ ಜಲಕ್ರೀಡೆಗಳಲ್ಲಿ ಭಾಗಿಯಾಗಿ ಹೊಸ ಅನುಭವ ಪಡೆಯುತ್ತಿದ್ದಾರೆ.

    ವಾಟರ್ ಸ್ಪೋರ್ಟ್ಸ್ ನಲ್ಲೂ ಚಿಕ್ಕ-ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕಾಫಿನಾಡಲ್ಲಿ ಇಂತಹ ಕ್ರೀಡೆಗಳು ನಡೆದದ್ದು ಇದೇ ಮೊದಲಾದ್ದರಿಂದ ದಿನಂಪ್ರತಿ ಸಾವಿರಾರು ಜನ ಪಾಲ್ಗೊಂಡು ಖುಷಿಪಡುತ್ತಿದ್ದಾರೆ. ಚಿಕ್ಕಮಗಳೂರು ಫೆಸ್ಟ್ ಅಂಗವಾಗಿ ನಡೆಯುತ್ತಿರುವ ಕುಸ್ತಿಯ ಅಖಾಡವೂ ರಂಗೇರಿತ್ತು. ಮಣ್ಣಲ್ಲಿ ಮಿಂದೆದ್ದ ಜಗಜಟ್ಟಿಗಳು ಅಖಾಡದಲ್ಲಿ ಧೂಳ್ ಎಬ್ಬಿಸಿದ್ದರು.

  • ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    ಕೆಸರು ಗದ್ದೆಯಲ್ಲಿ ಎರಡು ಬಾರಿ ಬಿದ್ದರೂ ಎದ್ದು ಓಡಿದ ಸಿ.ಟಿ ರವಿ

    – ಹಗ್ಗಜಗ್ಗಾಟ ಕ್ರೀಡೆಯಲ್ಲಿ ಕಿತ್ತುಕೊಂಡ ಬಂದ ಹೆಬ್ಬರಳಿನ ಉಗುರು

    ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕೆಸರು ಗದ್ದೆಯಲ್ಲಿ ಎರಡು ಬಾರಿ ಜಾರಿ ಬಿದ್ದು ಮತ್ತೆ ಎದ್ದು ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಚಿಕ್ಕಮಗಳೂರಿನ ನಲ್ಲೂರಿನಲ್ಲಿ ಮೂರು ದಿನಗಳ ಕಾಲ ಉತ್ಸವದ ಅಂಗವಾಗಿ ಗ್ರಾಮೀಣ ಕ್ರೀಡೆ ಆಯೋಜನೆಗೊಂಡಿದೆ. ಇಂದು ಈ ಕ್ರೀಡೆಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಸುಮಾರು ಅರ್ಧ ಅಡಿ ಆಳ ಇರುವಷ್ಟು ಕೆಸರು ಗದ್ದೆಯಲ್ಲಿ ಸಿ.ಟಿ ರವಿ ಓಡಿದ್ದಾರೆ.

    ಸಿ.ಟಿ ರವಿ ಓಡುವಾಗ ಹಿಂದೆ ಮುಂದೆ ಇದ್ದ ಸ್ಪರ್ಧಿಗಳು ಕೂಗಿ ಕೇಕೆ ಹಾಕಿದರು. ಓಡುವಾಗ ಸಿ.ಟಿ ರವಿ ಜಾರಿ ಬಿದ್ದಿದ್ದಾರೆ. ಜಾರಿ ಬಿದ್ದ ನಂತರ ಅವರು ಅಲ್ಲಿಂದ ಹೋಗದೇ ಮತ್ತೆ ಓಡಿದ್ದಾರೆ. ಸಿ.ಟಿ ರವಿ ಮತ್ತೊಮ್ಮೆ ಓಡುವಾಗ ಎರಡನೇ ಬಾರಿಯೂ ಜಾರಿ ಬಿದ್ದಿದ್ದಾರೆ. ಆದರು ಸಹ ಹಿಂತಿರುಗದೇ ಮತ್ತೆ ಓಡಿದ್ದಾರೆ.

    ಎರಡು ಬಾರಿ ಬಿದ್ದರೂ ಸಿ.ಟಿ ರವಿ ನಗುತ್ತಾ ತಮ್ಮ ಓಟವನ್ನು ಪೂರ್ಣಗೊಳಿಸಿದ್ದಾರೆ. ಫೆ.29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಹಬ್ಬ ನಡೆಯಲಿದೆ. ಇಂದಿನಿಂದ ವಿವಿಧ ಗ್ರಾಮೀಣ ಕ್ರೀಡಾಕೂಟ ಆರಂಭವಾಗಿದೆ. ಕೇವಲ ಓಟ ಅಲ್ಲದೆ ಸಿ.ಟಿ ರವಿ ಹಗ್ಗಜಗ್ಗಾಟ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದರು.

    ಕೆಸರುಗದ್ದೆಯ ಹಗ್ಗಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸಿದ ವೇಳೆ ಸಿ.ಟಿ ರವಿ ಕಾಲಿನ ಹೆಬ್ಬರಳಿನ ಉಗುರು ಕಿತ್ತುಕೊಂಡಿದೆ. ಹೆಬ್ಬರಳಿನ ಉಗುರು ಬಂದರು ಅರಿವಿಲ್ಲದೆ ಸಿ.ಟಿ ರವಿ ಆಟದಲ್ಲಿ ಮೈ ಮರೆತ್ತಿದ್ದರು. ಬಳಿಕ ಕೆಸರು ಗದ್ದೆಯಿಂದ ಮೇಲೆ ಬಂದು ಕಾಲು ತೊಳೆಯುವಾಗ ಅರಿವಿಗೆ ಬಂದಿದೆ.