Tag: ಕ್ರೀಡಾ ಸುದ್ದಿ

  • ಗಂಗೂಲಿ ಮೈದಾನದಲ್ಲಿ ಹೇಗಿರುತ್ತಾರೆ: ಸೆಹ್ವಾಗ್ ಶುಭಾಶಯಕ್ಕೆ ಮನಸೋತ ಅಭಿಮಾನಿಗಳು

    ಗಂಗೂಲಿ ಮೈದಾನದಲ್ಲಿ ಹೇಗಿರುತ್ತಾರೆ: ಸೆಹ್ವಾಗ್ ಶುಭಾಶಯಕ್ಕೆ ಮನಸೋತ ಅಭಿಮಾನಿಗಳು

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು 46ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಹ್ವಾಗ್ ದಾದಾ ಬ್ಯಾಟಿಂಗ್ ವರ್ಣಿಸಿ ಮಾಡಿದ ಟ್ವೀಟ್‍ಗೆ ನೆಟ್ಟಿಗರು ಮನಸೋತಿದ್ದಾರೆ.

    ಗಂಗೂಲಿ ಮೈದಾನದಲ್ಲಿ ಹೇಗಿರುತ್ತಾರೆ ಎನ್ನುವುದಕ್ಕೆ ಸೆಹ್ವಾಗ್ 4 ಹಂತ ಮತ್ತು 4 ಫೋಟೋದಲ್ಲಿ ವಿವರಿಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟನ್ನು 8 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದರೆ, 39 ಸಾವಿರಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ನಲ್ಲಿ ಏನಿತ್ತು?
    ಸ್ಟೆಪ್ 1: ಎಚ್ಚೆತ್ತುಕೊಳ್ಳುವುದು, ಎರಡು ಬಾರಿ ಕಣ್ಣು ಮಿಟುಕಿಸುವುದು ಮತ್ತು ಟ್ರಾಕ್ ನಲ್ಲಿ ಕುಣಿಯುದು.
    ಸ್ಟೆಪ್ 2: ಎದುರಾಳಿ ಬೌಲರ್ ಅಲ್ಲದೇ ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರನ್ನು ಚಚ್ಚುವುದು (ಉದ್ದೇಶಪೂರ್ವಕವಾಗಿ ಅಲ್ಲ)
    ಸ್ಟೆಪ್ 3: ಚೆಂಡನ್ನಷ್ಟೇ ಅಲ್ಲದೇ ಕೂದಲನ್ನು ತಿರುಗಿಸುತ್ತ ಹೃದಯದಿಂದ ಬೌಲಿಂಗ್ ಮಾಡುವುದು.
    ಸ್ಟೆಪ್ 4: ಯಾರು ನನ್ನನ್ನು ನೋಡುತ್ತಿಲ್ಲ ಎಂದು ಭಾವಿಸಿ ಮನಸ್ಫೂರ್ತಿಯಾಗಿ ಸಂಭ್ರಮಿಸುವ ಅದ್ಭುತ ಮನುಷ್ಯ ಎಂದು ಸೆಹ್ವಾಗ್ ಬರೆದಿದ್ದಾರೆ.

    ಈ ಟ್ವೀಟ್ ಗೆ ಪೂರಕವಾಗಿ ನಾಲ್ಕು ಫೋಟೋಗಳನ್ನು ಸೆಹ್ವಾಗ್ ಅಪ್ಲೋಡ್ ಮಾಡಿದ್ದಾರೆ. 1999ರ ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ನಲ್ಲಿ ಗಂಗೂಲಿ ಬ್ಯಾಟಿಂಗ್ ಮಾಡುತ್ತಿರುವ ಫೋಟೋ ಹಾಕಿದ್ದಾರೆ. ವಿಶೇಷ ಏನೆಂದರೆ ಈ ವಿಶ್ವಕಪ್ ನಲ್ಲಿ ಗಂಗೂಲಿ ಶ್ರೀಲಂಕಾ ವಿರುದ್ಧ ಜೀವನಶ್ರೇಷ್ಠ 183 ರನ್ ಗಳಿಸಿದ್ದರು. ಎರಡನೇ ಫೋಟೋದಲ್ಲಿ ಗಾಯಗೊಂಡ ಅಭಿಮಾನಿಯ ಚಿತ್ರವನ್ನು ಹಾಕಿದರೆ ಮೂರನೇಯದಾಗಿ ಗಂಗೂಲಿ ಬಾಲಿಂಗ್ ಮಾಡುವ ಚಿತ್ರ ಹಾಕಿದ್ದಾರೆ. ಕೊನೆಯದಾಗಿ ಇಂಗ್ಲೆಂಡ್ ವಿರುದ್ಧ ಭಾರತ ನ್ಯಾಟ್‍ವೆಸ್ಟ್ ಸರಣಿ ಗೆದ್ದ ಹಿನ್ನೆಲೆಯಲ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ ಫೋಟೋವನ್ನು ಅಪ್ಲೋಡ್ ಮಾಡಿ ವಿಶೇಷವಾಗಿ ಸೆಹ್ವಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಯಾಕೆ?