Tag: ಕ್ರೀಡಾಕೂಟ

  • ಒತ್ತಡ ಮರೆತು ಕ್ರೀಡಾಕೂಟದಲ್ಲಿ ಹಾಡಿ, ಕುಣ್ಣಿದ ಪೊಲೀಸರು

    ಒತ್ತಡ ಮರೆತು ಕ್ರೀಡಾಕೂಟದಲ್ಲಿ ಹಾಡಿ, ಕುಣ್ಣಿದ ಪೊಲೀಸರು

    ಮಡಿಕೇರಿ: ಕೊಲೆ, ಕಳ್ಳತನ, ದರೋಡೆ, ಟ್ರಾಫಿಕ್ ಕಂಟ್ರೊಲ್ ಅದು ಇದು ಅಂತ ದಿನ ಬೆಳಗಾದರೆ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಕಲ್ಲಿ ಬ್ಯುಸಿಯಾಗಿರುತ್ತಿದ್ದ ಪೊಲೀಸರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದ್ದಾರೆ.

    ಮಡಿಕೇರಿಯಲ್ಲಿ ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟವು ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಆಟದಲ್ಲಿ ಗೆಲುವು ಸಾಧಿಸಿದರೂ ಸೋತರೂ ಸ್ಪರ್ಧಾ ಮನೋಭಾವದಿಂದ ಎಲ್ಲವನ್ನೂ ಸಂಭ್ರಮಿಸಿದರು.

    ಕೆಲ ಪೊಲೀಸರು ತಮ್ಮ ಪ್ರತಿಭೆ, ಸಾಮಥ್ರ್ಯವನ್ನು ಹೊರಹಾಕಿದರು. ಈ ವೇಳೆ ಕುಟುಂಬಸ್ಥರು ಹಾಗೂ ಪ್ರೇಕ್ಷಕರು ಪೊಲೀಸರನ್ನು ಹುರುದುಂಬಿಸಿದರು. ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ರನ್ನಿಂಗ್ ರೇಸ್, ಜಂಪಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕ್ರೀಡೆಗಳ ನಡೆದವು.

    ಕಳೆದ ಮೂರು ದಿನಗಳಿಂದ ನಡೆದ ಕ್ರೀಡಾಕೂಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಪೇದೆಗಳು ಒಟ್ಟಾಗಿ ಸೇರಿ ಕ್ರೀಡಾ ಪ್ರೇಮ ಮೆರೆದರು. ಅಷ್ಟೇ ಅಲ್ಲದೆ ಆಟದ ಜೊತೆ ಜೊತೆಗೆ ಕುಣಿದು, ನಲಿದರು. ಈ ವೇಳೆ ತಮ್ಮ ಜೊತೆಗೆ ಬಂದಿದ್ದ ಪತ್ನಿ ಹಾಗೂ ಮಕ್ಕಳೊಂದಿಗೆ ಸಂಭ್ರಮಿಸಿದರು.

  • ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ

    ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನವೆಂಬರ್ 23 ರಿಂದ 30 ರವರೆಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದೆ.

    ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿ ಈಶ್ವರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಈ ರೀತಿಯ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು ಇದು ಜಿಲ್ಲೆಯ ಅಭಿವೃದ್ಧಿ ಜೊತೆಗೆ ಕ್ರೀಡಾಪಟುಗಳ ಉತ್ತೇಜನಕ್ಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟವು ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಸೇರಿದಂತೆ, ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಸಲು ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ಕ್ರೀಡಾಕೂಟದ ಯಶಸ್ವಿ ಅಯೋಜನೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ ಕೈ ಜೋಡಿಸಲು ಮನವಿ ಕೂಡ ಮಾಡಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಸತಿ ಊಟ ಉಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಹಾಗು ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ಇದೇ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಈ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಈ ಕ್ರೀಡಾಕೂಟದಲ್ಲಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಶಿವಮೊಗ್ಗ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಕೂಡ ಉದ್ದೇಶಿಸಲಾಗಿದೆ.

    ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ರೆಸ್ಲಿಂಗ್, ಆರ್ಚರಿ, ಫೆನ್ಸಿಂಗ್, ಸೈಕ್ಲಿಂಗ್, ಜೂಡೋ, ಹಾಕಿ, ಬಾಲ್ ಬ್ಯಾಡ್ಮಿಂಟನ್, ನೆಟ್ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಗರದ ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಂಗಣಗಳಲ್ಲಿ ಹಲವು ಸ್ಪರ್ಧೆಗಳನ್ನ ಆಯೋಜಿಸಲು ತೀರ್ಮಾನಿಸಲಾಗಿದೆ.

  • ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ: ಪಿ.ವಿ ಸಿಂಧು

    ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ: ಪಿ.ವಿ ಸಿಂಧು

    ಮೈಸೂರು: ಬ್ಯಾಡ್ಮಿಂಟನ್ ಅಂತರಾಷ್ಟ್ರೀಯ ಆಟಗಾರ್ತಿ ಪಿ.ವಿ ಸಿಂಧು ಅವರು ಚಾಮುಂಡಿ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಿದ್ದಾರೆ.

    ಪಿ.ವಿ ಸಿಂಧು ಅವರು ಕ್ರೀಡಾಕೂಟ ಉದ್ಘಾಟಿಸಿದ್ದು, ಅವರಿಗೆ ಸಿಎಂ ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಕನ್ನಡದಲ್ಲಿಯೇ ಮಾತು ಶುರು ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಸಿಂಧು ಅವರು, “ಎಲ್ಲರಿಗೂ ನಮಸ್ಕಾರ. ನನಗೆ ದಸರಾಗೆ ಬಂದಿದ್ದು ತುಂಬಾ ಖುಷಿಯಾಗಿದೆ. ನಾನು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದೇನೆ. ಮೈಸೂರು ಕ್ಲೀನ್ ಸಿಟಿ ಎಂಬುದನ್ನು ಕೇಳಿದ್ದೇನೆ. ಆದರೆ ಈಗ ಇಲ್ಲಿ ಬಂದಿರುವುದು ಖುಷಿಯಾಗಿದೆ. ಈ ಸ್ಥಳದಲ್ಲಿ ದುರ್ಗಾಮಾತೆ ನೆಲೆಸಿದ್ದಾರೆ. ಅಲ್ಲದೆ ಎಲ್ಲರೂ ನನ್ನನ್ನು ಗುರುತಿಸುತ್ತಿರುವುದು ಸಹ ಖುಷಿಯಾಗಿದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಏಕೆಂದರೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ನನ್ನ ಮುಂದಿನ ಗುರಿ” ಎಂದು ಹೇಳಿದರು.

    ಇದೇ ವೇಳೆ ಖೇಲೋ ಇಂಡಿಯಾದ ಬಗ್ಗೆ ಮಾತನಾಡಿದ ಅವರು, ಖೇಲೋ ಇಂಡಿಯಾದ ಮೂಲಕ ಸಾಕಷ್ಟು ಗ್ರಾಮೀಣ ಪ್ರತಿಭೆಗಳು ಹೊರಬರಲಿದೆ. ಅಂತಹ ಪ್ರತಿಭೆಗಳಿಗೆ ತಳಮಟ್ಟದಲ್ಲಿ ಉತ್ತಮವಾದ ಟ್ರೈನಿಂಗ್ ಕೊಡಬೇಕಿದೆ. ಇದೇ ಕಾರಣಕ್ಕೆ ಖೇಲೋ ಇಂಡಿಯಾ ಕಾನ್ಸೆಪ್ಟ್ ಬಂದಿದೆ. ಶಾಲಾ ಮಟ್ಟದಲ್ಲಿಯೇ ಪ್ರತಿಭೆ ಕಂಡು ಹಿಡಿದು ಉತ್ತಮ ತರಬೇತಿ ಕೊಡಬೇಕು. ಇದಕ್ಕೆ ಪೋಷಕರು ಸಹ ಪ್ರೋತ್ಸಾಹಿಸಬೇಕು. ಅವರೇ ಮಕ್ಕಳಿಗೆ ಹೆಚ್ಚಾಗಿ ಹುರಿದುಂಬಿಸಬೇಕು. ಆಗಲೇ ಗ್ರಾಮೀಣ ಪ್ರತಿಭೆಗಳು ಯಶಸ್ಸುಗಳಿಸಲು ಸಾಧ್ಯ ಎಂದರು.

  • ಕ್ರೀಡಾಕೂಟದ ವೇಳೆ ಗ್ಯಾಲರಿ ಕುಸಿತ – ಇಬ್ಬರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಕ್ರೀಡಾಕೂಟದ ವೇಳೆ ಗ್ಯಾಲರಿ ಕುಸಿತ – ಇಬ್ಬರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಬಳ್ಳಾರಿ: ಕ್ರೀಡಾಕೂಟದ ವೇಳೆ ಗ್ಯಾಲರಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿರುವ ಘಟನೆ ಸಿರಗುಪ್ಪದಲ್ಲಿ ಪಟ್ಟಣದಲ್ಲಿ ನಡೆದಿದೆ.

    ಸಿರಗುಪ್ಪ ಪಟ್ಟಣದಲ್ಲಿ ಇರುವ ತಾಲೂಕು ಕ್ರೀಡಾಂಗಣದಲ್ಲಿ ಹೈಸ್ಕೂಲ್ ಶಾಲೆಗಳ ಕ್ರೀಡಾಕೂಟ ನಡೆಯುವ ವೇಳೆ ಈ ಘಟನೆ ನಡೆದಿದ್ದು, ಕ್ರೀಡಾಕೂಟ ವೀಕ್ಷಣೆ ಮಾಡುತ್ತಿದ್ದ ಇಬ್ಬರು ಸಾವನ್ನಪ್ಪಿ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಹಲವರು ಸಾರ್ವಜನಿಕರಿಗು ಗಂಭೀರ ಗಾಯವಾಗಿದೆ.

    ಕ್ರೀಡಾಕೂಟ ನೋಡಲು ಬಂದು ಗ್ಯಾಲರಿ ಮೇಲೆ ಕುಳಿತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಗ್ಯಾಲರಿಯಲ್ಲಿ ನೂರಾರು ವಿದ್ಯಾರ್ಥಿಗಳು ಕುಳಿತ್ತಿದ್ದು, ಇದರಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸಿರಗುಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದೇ ವಾರದಲ್ಲಿ ಎರಡು ಚಿನ್ನದ ಪದಕ ಗೆದ್ದ ಹಿಮಾ ದಾಸ್

    ಒಂದೇ ವಾರದಲ್ಲಿ ಎರಡು ಚಿನ್ನದ ಪದಕ ಗೆದ್ದ ಹಿಮಾ ದಾಸ್

    ವಾರ್ಸೋ: ಭಾರತದ ಚಾಂಪಿಯನ್ ಓಟಗಾರ್ತಿ ಹಿಮಾ ದಾಸ್ ಕಳೆದ ಒಂದು ವಾರದಲ್ಲಿ ಎರಡು ಅಂತಾರಾಷ್ಟ್ರೀಯ ಸ್ವರ್ಣ ಪದಕವನ್ನು ಗೆದ್ದುಕೊಂಡಿದ್ದಾರೆ.

    ಕಳೆದ ಕೆಲ ತಿಂಗಳಿಂದ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ 19 ವರ್ಷದ ಯುವ ಪ್ರತಿಭೆ ಹಿಮಾ ದಾಸ್, ಭಾನುವಾರ ಪೋಲೆಂಡಿನಲ್ಲಿ ನಡೆದ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ.

    ಈ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಅವರು 23.97 ಸೆಕೆಂಡ್‍ಗಳಲ್ಲಿ ತನ್ನ ಗುರಿಮುಟ್ಟಿ ಚಿನ್ನ ಗೆದ್ದರೆ, ಭಾರತದ ಮತ್ತೊಬ್ಬ ಓಟಗಾರ್ತಿ ವಿಕೆ ವಿಸ್ಮಯಾ 24.06 ಸೆಕೆಂಡ್‍ನಲ್ಲಿ ಓಡಿ ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಳೆದ ಮಂಗಳವಾರ ಪೋಲೆಂಡ್‍ನಲ್ಲೇ ನಡೆದ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌  ನಲ್ಲಿ ಪಾಲ್ಗೊಂಡಿದ್ದ ಹಿಮಾ ದಾಸ್ 23.65 ಸೆಕೆಂಡ್‍ಗಳಲ್ಲಿ ರೇಸ್ ಪೂರೈಸಿ ಚಿನ್ನದ ಪದಕ ಗೆದ್ದಿದ್ದರು.

    ಹಿಮಾ ದಾಸ್ ಪ್ರಸಕ್ತ ಸಾಲಿನಲ್ಲಿ ಗಳಿಸಿದ ಎರಡನೇ ಚಿನ್ನದ ಪದಕ ಇದಾಗಿದೆ. ಕಳೆದ ವರ್ಷ 200 ಮೀ. ಓಟದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ 23.10 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿದ್ದರು. ಇದೇ ರೇಸ್‍ನಲ್ಲಿ ಭಾರತದ ವಿಸ್ಮಯಾ 23.75 ಸೆಕೆಂಡ್‍ನಲ್ಲಿ ಓಡಿ ಮೂರನೇ ಸ್ಥಾನದೊಂದಿಗೆ ಕಂಚು ಗೆದ್ದಿದ್ದರು.

    ಇದೇ ವೇಳೆ ರಾಷ್ಟ್ರೀಯ ದಾಖಲೆಯ ವೀರ ಮುಹಮ್ಮದ್ ಅನಾಸ್ ಇದೇ ಕುಂತೊ ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷರ 200 ಮೀ. ಓಟದಲ್ಲಿ 21.18 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದಿದ್ದಾರೆ. ಎಂ.ಜಿ ಬಬೀರ್ 400 ಮೀ. ಹರ್ಡಲ್ಸ್‌ ನಲ್ಲಿ 50.21 ಸೆಕೆಂಡ್‍ಗಳ ಸಾಧನೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ. ಇದೇ ರೇಸ್‍ನಲ್ಲಿ ಜಿತಿನ್ ಪಾಲ್ 3ನೇ (52.26 ಸೆ.) ಸ್ಥಾನ ಪಡೆದಿದ್ದಾರೆ.

  • ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

    ಸಮುದ್ರಕ್ಕಿಳಿದ ಇಬ್ಬರು ಯುವಕರು ನೀರುಪಾಲು

    ಮಂಗಳೂರು: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು ಆಗಿರುವ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್‍ನಲ್ಲಿ ನಡೆದಿದೆ.

    ಮೃತ ಯುವಕರನ್ನು 28 ವರ್ಷದ ಕಾವೂರಿನ ಗುರುಪ್ರಸಾದ್ ಮತ್ತು 32 ವರ್ಷದ ಬಜ್ಪೆ ಗ್ರಾಮದ ನಿವಾಸಿ ಸುಜಿತ್ ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನೂ ಇಬ್ಬರು ನೀರುಪಾಲಾಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ‘ಕೆಸರ್ಡೊಂಜಿ ದಿನ’ ಎಂಬ ಕಾರ್ಯಕ್ರಮದ ಅಂಗವಾಗಿ ಕೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯುವಕರು ಮೈಯಲ್ಲಾ ಕೆಸರಾಗಿದ್ದ ಕಾರಣ ಸ್ನಾನ ಮಾಡಲು ಸಮುದ್ರಕ್ಕೆ ಇಳಿದಿದ್ದಾರೆ. ಈ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

  • ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆ!

    ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ಸೇರ್ಪಡೆ!

    ನವದೆಹಲಿ: ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಿದ್ದಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಾಹಿತಿ ನೀಡಿದೆ.

    2022 ರಲ್ಲಿ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಐಸಿಸಿ ಕಾಮನ್ ವೆಲ್ತ್ ಗೇಮ್ಸ್ ಆಯೋಜಕರಿಗೆ ಮನವಿ ಸಲ್ಲಿಸಿಕೆ ಕುರಿತು ಮಾಹಿತಿ ನೀಡಿದೆ. ಮಹಿಳಾ ಕ್ರಿಕೆಟ್‍ಗೆ ಜಾಗತಿಕ ಮನ್ನಣೆ ಕಲ್ಪಿಸಲು ಐಸಿಸಿ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕ್ರಮಕ್ಕೆ ಮುಂದಾಗಿದೆ.

    ಈ ಕುರಿತು ಐಸಿಸಿ ಪ್ರಕಟಣೆಯಲ್ಲಿ ವಿವರಗಳನ್ನ ನೀಡಿದ್ದು, ಈ ಕುರಿತು ಬಿಡ್ ಸಲ್ಲಿಸಲಾಗಿದೆ. ಇದರಲ್ಲಿ 8 ತಂಡಗಳ ಟಿ20 ಪಂದ್ಯಗಳನ್ನು ಆಯೋಜಿಸಲು ಮನವಿ ಸಲ್ಲಿಸಲಾಗಿದ್ದು, ಕ್ರಿಕೆಟ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ಉತ್ತಮ ಸಂಬಂಧವನ್ನು ಹೊಂದಿದೆ. ಎರಡು ಒಂದಾಗುವುದರಿಂದ ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳಲ್ಲಿ ಇರುವ ಸುಮಾರು 91 ಕೋಟಿ ಕ್ರಿಕೆಟ್ ಅಭಿಮಾನಿಗಳನ್ನು ಟೂರ್ನಿಯತ್ತ ಆಕರ್ಷಿಸಲು ನೆರವಾಗಲಿದೆ ಎಂದು ತಿಳಿಸಿದೆ.

    ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಸೇರ್ಪಡೆ ಆಗುವುದರಿಂದ ಮಹಿಳೆಯರಿಗೆ ಸಮಾನತೆ, ಸ್ಫೂರ್ತಿ ಮತ್ತು ಅವಕಾಶವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ. ಈ ಹಿಂದೆ 1998 ರಲ್ಲಿ ಕ್ರಿಕೆಟನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಿತ್ತು. ಆದರೆ ಆ ವೇಳೆ ಕೇವಲ ಪುರುಷ ತಂಡಗಳು ಮಾತ್ರ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಶಸ್ತಿ ಪಡೆದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

    ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.

    2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್  ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು.  ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.

    ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ.  ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

     289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.

     

     

  • ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಗದ್ದೆಯಲ್ಲಿ ಓಡಿದ ಮೂಡಿಗೆರೆ ಬಿಜೆಪಿ ಶಾಸಕ

    ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಗದ್ದೆಯಲ್ಲಿ ಓಡಿದ ಮೂಡಿಗೆರೆ ಬಿಜೆಪಿ ಶಾಸಕ

    ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗ್ರಾಮೀಣ ಕ್ರೀಡಾಕೂಟದ ಉದ್ಘಾಟಿಸಿ ಬಳಿಕ ಕೆಸರು ಗದ್ದೆ ಓಟದಲ್ಲಿ ಭಾಗವಹಿಸಿ ಮನರಂಜನೆ ನೀಡಿದ್ದಾರೆ.

    ಭಾನುವಾರ ಮೂಡಿಗೆರೆ ತಾಲೂಕಿನ ಬಡವನದಿಡ್ಡೆ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಬಳಿಕ ತಾನು ಓರ್ವ ಸ್ಫರ್ಧಾಳು ಆಗಿ ಕೆಸರು ಗದ್ದೆಯಲ್ಲಿ ಓಡಿದ್ದಾರೆ.

    ಮಕ್ಕಳು ಹಾಗೂ ದೊಡ್ಡವರು ಇಬ್ಬರ ಜೊತೆಗೂ ಸ್ಪರ್ಧೆಗೆ ನಿಂತ ಕುಮಾರಸ್ವಾಮಿ ನಾನು ಜನರ ಶಾಸಕ ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಕೆಸರು ಗದ್ದೆಯಲ್ಲಿ ಎದ್ದು, ಬಿದ್ದು, ಓಡಿ ಸಂಭ್ರಮಿಸಿದ್ದಾರೆ. ಶಾಸಕರ ಓಟ ಕಂಡ ಸ್ಥಳಿಯರು ಕೂಡ ಅವರ ಜೊತೆ ಓಡಿದ್ದಾರೆ.

    ತಾನು ಶಾಸಕ ಎನ್ನುವ ಹಮ್ಮು-ಬಿಮ್ಮನ್ನು ಬಿಟ್ಟು ಓಡಿದ್ದನ್ನು ನೋಡಿದ ಜನ ಕುಮಾರಸ್ವಮಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

    ಪೈಯೋಂಗ್ ಚಾಂಗ್: ದಕ್ಷಿಣ ಕೊರಿಯಾದ ಪಿಯಾಂಗ್ ಚಾಂಗ್‍ನಲ್ಲಿ ನಡೆಯಲಿರುವ 2018 ರ ಚಳಿಗಾಲದ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಓಲಿಂಪಿಕ್ ಸಮಿತಿ ಸುಮಾರು 1 ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಪೂರೈಕೆ ಮಾಡಿದೆ.

    ಒಲಿಂಪಿಕ್ಸ್ ಪಂದ್ಯಾವಳಿಗಳು ಮುಂದಿನ ವಾರದಿಂದ ಆರಂಭವಾಗುತ್ತಿದೆ. ಕಳೆದ ಬಾರಿ ರಷ್ಯಾದ ಸೋಚಿ ಯಲ್ಲಿ ಆಯೋಜಿಸಲಾಗಿದ್ದ ಒಲಿಂಪಿಕ್ಸ್ ಪಂದ್ಯಾವಳಿ ಗಳಿಗೆ ಪೂರೈಕೆ ಮಾಡಲಾಗಿದ್ದ 1 ಲಕ್ಷ ಕಾಂಡೋಮ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಆಧಿಕ ಹತ್ತು ಸಾವಿರ ಕಾಂಡೋಮ್‍ಗಳನ್ನು ಪೂರೈಕೆ ಮಾಡಲಾಗಿದೆ. ಹಾಗೂ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ 100 ಹೆಚ್ಚಿನ ಆಟಗಾರರು ಭಾಗವಹಿಸುತ್ತಿದ್ದಾರೆ.

     

    ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಆಟಗಾರರಿಗಾಗಿಯೇ ಪ್ರತ್ಯೇಕ ಒಲಿಂಪಿಕ್ ವಿಲೇಜ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಆಟಗಾರರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಅಂತರಾಷ್ಟ್ರೀಯ ಅಂಚೆ ಸೇವೆ, ಹೂವಿನ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳು, ಫಿಟ್‍ನೆಸ್ ಸೆಂಟರ್, 24 ಗಂಟೆ ಊಟದ ವ್ಯವಸ್ಥೆ, ಪ್ರಾರ್ಥನಾ ಸ್ಥಳ, ಜೊತೆಗೆ ಮನೆಯಲ್ಲಿ ಸಿಗುವ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಲಾಗುತ್ತದೆ.

    ದಕ್ಷಿಣ ಕೊರಿಯಾದ ಕಾಂಡೋಮ್ ಉತ್ಪಾದಕರ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಸದಾಶಯದಿಂದ ಕಾಂಡೋಮ್ ಪೂರೈಕೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

    ಈ ಬಾರಿ ಒಲಿಂಪಿಕ್ ವಿಲೇಜ್ ಗೆ 90 ವಿವಿಧ ದೇಶಗಳ 2,925 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದೆ. ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ.

    ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ 1988 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಬೇಸಿಗೆ ಕ್ರೀಡಾಕೂಟದಲ್ಲಿ ಕಾಂಡೋಮ್‍ಗಳನ್ನು ಸಾರ್ವಜನಿಕವಾಗಿ ಪೂರೈಕೆ ಮಾಡಲಾಗಿತ್ತು. ಆಟಗಾರರು ಎಚ್‍ಐವಿ ವೈರಸ್ ನಿಂದ ರಕ್ಷಣೆ ಪಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಅನಂತರದಲ್ಲಿ ಈ ಕ್ರಮವನ್ನು ಮುಂದುವರೆಸಲಾಗಿತ್ತು. 2016 ರ ಬ್ರೆಜಿಲ್ ನ ರಿಯೋ ಡಿ ಜನೈರೊ ದಲ್ಲಿ ನಡೆದ ಕ್ರೀಡಾಕೂಟದಲ್ಲಿ 4.5 ಲಕ್ಷ ಕಾಂಡೋಮ್ ಗಳನ್ನು ಪೂರೈಕೆ ಮಾಡಲಾಗಿತ್ತು.