Tag: ಕ್ರಿಶ್ಚಿಯನ್ ಮಿಷನರಿ

  • ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

    ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

    ಚೆನ್ನೈ: ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವ ಮಿಷನರಿಗಳು (Christian Mission) ಕಾನೂನುಬಾಹಿರ ಅಥವಾ ಅಸಾಂವಿಧಾನಿಕವಲ್ಲ ಎಂದು ತಮಿಳುನಾಡು ಸರ್ಕಾರ (Government of Tamil Nadu) ಸುಪ್ರೀಂ ಕೋರ್ಟ್‍ಗೆ (Supreme Court) ಅಫಿಡವಿಟ್ ಸಲ್ಲಿಸಿದೆ.

    ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧಾರ್ಮಿಕ ನಂಬಿಕೆಯನ್ನು ಪ್ರಚಾರ ಮಾಡುವ ಮತ್ತು ಇತರರಿಗೆ ಬೋಧಿಸುವ ಹಕ್ಕನ್ನು ನೀಡುತ್ತದೆ. ಮಿಷನರಿಗಳು ಸಾರ್ವಜನಿಕ ಸುವ್ಯವಸ್ಥೆ ಅಥವಾ ನೈತಿಕತೆಯ ವಿರುದ್ಧವಾಗಿಲ್ಲ. ಆದರೆ ಬೆದರಿಕೆ, ವಂಚನೆ, ಉಡುಗೊರೆಗಳ ಮೂಲಕ, ಮಾಟಮಂತ್ರ ಅಥವಾ ಮೂಢನಂಬಿಕೆಯ ಮೂಲಕ ಆಮಿಷ ಒಡ್ಡುವ ಧಾರ್ಮಿಕ ಮತಾಂತರವು ಅನ್ಯಾಯ ಮತ್ತು ಶೋಷಣೆ ಎನಿಸಿಕೊಳ್ಳುತ್ತದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

    ಧರ್ಮವನ್ನು ಪ್ರಸರಿಸುವ ಕಾರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

    ಭಾರತ ಜಾತ್ಯತೀತ ರಾಷ್ಟ್ರವಾಗಿ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದರಿಂದ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿರುವುದರಿಂದ ಆತನ ನಿರ್ಧಾರವನ್ನು ತಡೆಯಲಾಗುವುದಿಲ್ಲ ಎಂದಿದೆ.

    ದೇಶದಲ್ಲಿ ಹಲವಾರು ಧರ್ಮಗಳು ಆಚರಣೆಯಲ್ಲಿವೆ. ಅಲ್ಲದೆ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಆಯ್ದುಕೊಳಬಹುದು. ತನ್ನ ಧರ್ಮವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶವಿದೆ ಇದನ್ನು ಹತ್ತಿಕ್ಕಲಾಗುವುದಿಲ್ಲ. ಮತಾಂತರ ವಿರೋಧಿ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

    ಧಾರ್ಮಿಕ ಮತಾಂತರದ ವಿರುದ್ಧ ಬಿಜೆಪಿ (BJP) ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಪ್ರತಿಕ್ರಿಯೆಯಾಗಿ ತಮಿಳುನಾಡು ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

    ಅರ್ಜಿದಾರರು ಬಿಜೆಪಿಯ ಸದಸ್ಯರಾಗಿದ್ದಾರೆ. ಕೆಲವು ಧರ್ಮಗಳನ್ನು ನಿಂದಿಸಲು ಮತ್ತು ಅವರ ನೀತಿಗಳಿಗೆ ಅನುಗುಣವಾಗಿ ಆದೇಶಗಳನ್ನು ಪಡೆಯಲು ನ್ಯಾಯಾಲಯವನ್ನು ಬಳಸುತ್ತಿದ್ದಾರೆ. ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗಗಳ ನಡುವೆ ದ್ವೇಷ ಬಿತ್ತುವ ಪ್ರಕರಣದಲ್ಲಿ) ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯು ಅವರ ವಿರುದ್ಧ ಬಾಕಿಯಿದೆ. ಅರ್ಜಿದಾರರು ಶುದ್ಧ ಹಸ್ತಗಳೊಂದಿಗೆ ಈ ನ್ಯಾಯಾಲಯದ ಮುಂದೆ ಬಂದಿಲ್ಲ. ದೇಶದಲ್ಲಿ ದ್ವೇಷದ ಮೂಲಕ ಸಮಾಜವನ್ನು ವಿಭಜಿಸುವ ಉದ್ದೇಶದಿಂದ ನಿರ್ದಿಷ್ಟ ಸಮುದಾಯದ ಮೇಲೆ ದಾಳಿ ಮಾಡುವುದು, ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ಉತ್ತೇಜಿಸುವುದು ಅರ್ಜಿದಾರರ ಉದ್ದೇಶವಾಗಿದೆ ಎಂದು ಸರ್ಕಾರ ಅಫಿಡವಿಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

  • ಕ್ರಿಶ್ಚಿಯನ್ನರಿಂದ ಲಂಬಾಣಿ ಸಮುದಾಯದವರ ಮತಾಂತರ ಆರೋಪ

    ಕ್ರಿಶ್ಚಿಯನ್ನರಿಂದ ಲಂಬಾಣಿ ಸಮುದಾಯದವರ ಮತಾಂತರ ಆರೋಪ

    ಬಾಗಲಕೋಟೆ: ಪ್ರಾರ್ಥನೆ ಮಾಡುವ ನೆಪದಲ್ಲಿ ಮತಾಂತರಕ್ಕೆ ಪ್ರೇರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಮಿಷನರಿ ಸಿಬ್ಬಂದಿಯನ್ನು ಲಂಬಾಣಿ ಸಮುದಾಯದ ಮುಖಂಡರು ತರಾಟೆ ತೆಗೆದುಕೊಂಡ ಘಟನೆ ನಗರದ ಬಿಲಾಲ್ ಮಸ್ಜಿದ್ ಬಡಾವಣೆ ಬಳಿ ನಡೆದಿದೆ.

    ಪ್ರಾರ್ಥನೆ ನೆಪದಲ್ಲಿ ಲಂಬಾಣಿ ಸಮುದಾಯದ ಮಹಿಳೆಯರ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಬೈಬಲ್ ಓದಿಸುವ ಮೂಲಕ ಪ್ರಾರ್ಥನೆ ಮಾಡಿಸಲಾಗುತ್ತಿತ್ತು. ಬ್ಲೆಸ್ ಮಿಷನರಿಸ್ ಸಂಸ್ಥೆಯ ಸಿಬ್ಬಂದಿ ಮತಾಂತರಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸದ್ಯ ವಿಚಾರಣೆಗಾಗಿ ಮಿಷನರಿಯ ಕೆಲ ಸಿಬ್ಬಂದಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ನಾವು ಕೇವಲ ಪ್ರಾರ್ಥನೆ ಮಾಡುತ್ತಿದ್ದೆವು. ಯಾರನ್ನೂ ನಾವು ಕರೆದಿಲ್ಲ ಅವರಾಗಿಯೇ ಬಂದಿದ್ದಾರೆ. ಇದು ಮತಾಂತರವಲ್ಲ ಪ್ರಾರ್ಥನೆ ಎಂದು ಮಿಷನರಿ ಸಿಬ್ಬಂದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಮತಾಂತರವೇ ಅಥವಾ ಆರೋಪವೇ ಎಂಬುದೇ ಪೊಲೀಸರಿಗೆ ತಿಳಿಯುತ್ತಿಲ್ಲ. ಪೊಲೀಸರು ಎರಡು ಸಮುದಾಯದ ಮುಖಂಡರನ್ನು ಕರೆಸಿ ಮಾಹಿತಿ ಪಡೆಯುತ್ತಿದ್ದಾರೆ.