Tag: ಕ್ರಿಕೆಟ್ ಲೀಗ್

  • ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ

    ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ

    ಮುಂಬೈ: ಭಾರತದಲ್ಲಿ ನಡೆಯುವ ಕ್ರಿಕೆಟ್ ಹಬ್ಬ ಐಪಿಎಲ್ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಕ್ರಿಕೆಟ್ ಲೀಗ್‍ನಲ್ಲಿನ ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ಐಪಿಎಲ್ ಮತ್ತೊಮ್ಮೆ ದುಬಾರಿ ಕ್ರಿಕೆಟ್‌ ಲೀಗ್ ಆಗಿ ಗುರುತಿಸಿಕೊಂಡಿದೆ.

    ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್ ಲೀಗ್‍ನಲ್ಲಿ ವಿಶ್ವದ ಹಲವು ಸ್ಟಾರ್ ಆಟಗಾರರು ಭಾಗವಹಿಸುತ್ತಾರೆ. ಈ ಮೂಲಕ ಈ ಕ್ರಿಕೆಟ್ ಲೀಗ್ ರಂಗೇರುತ್ತದೆ. ಅದೇ ರೀತಿ ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಇದನ್ನೂ ಓದಿ: ಕ್ರಿಕೆಟ್ ಲೋಕದಲ್ಲಿ ಭಾರತೀಯರ ಪಾರುಪತ್ಯ

    ಕೆಲದಿನಗಳ ಹಿಂದೆ ಪಿಎಸ್‍ಎಲ್ ಫೈನಲ್ ಪಂದ್ಯ ನಡೆಯಿತು. ಫೈನಲ್‍ನಲ್ಲಿ ಲಾಹೋರ್ ಖಲಂದರ್ಸ್ ತಂಡ ಗೆದ್ದು ಚಾಂಪಿಯನ್ ಆಗಿತ್ತು. ಚಾಂಪಿಯನ್ ಟ್ರೋಫಿ ಜೊತೆ 80 ಮಿಲಿಯನ್ (3.40 ಕೋಟಿ ರೂ.) ನಗದು ಬಹುಮಾನವನ್ನು ಪಡೆದುಕೊಂಡಿತ್ತು. ಆದರೆ ಐಪಿಎಲ್‍ಗೆ ಹೋಲಿಕೆ ಮಾಡಿದರೆ ಈ ಮೊತ್ತ ಭಾರಿ ಕಡಿಮೆ. 2021ರ ಐಪಿಎಲ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್, ಟ್ರೋಫಿ ಜೊತೆ 20 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತ್ತು. ಇದನ್ನು ಗಮನಿಸಿದರೆ ಐಪಿಎಲ್ ನಗದು ಬಹುಮಾನ ಪಾಕಿಸ್ತಾನ ಲೀಗ್‍ಗಿಂತ 5 ಪಟ್ಟು ಹೆಚ್ಚಿರುವುದು ಸ್ಪಷ್ಟವಾಗಿದೆ. ಈ ಮೂಲಕ ಪಿಎಸ್‍ಎಲ್‍ಗಿಂತ ಐಪಿಎಲ್ ದುಬಾರಿ ಎನಿಸಿಕೊಂಡಿದೆ. ಇದನ್ನೂ ಓದಿ: ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ

    ಈ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ಸ್ ಸೇರಿದಂತೆ ಇತರ ಕೆಲ ಆಟಗಾರರು ಪಾಕ್‍ನಲ್ಲಿ ನಡೆಯುವ ಪಿಎಸ್‍ಎಲ್, ಐಪಿಎಲ್‍ಗಿಂತ ಶ್ರೇಷ್ಠ ಎಂದು ಕಾಮೆಂಟ್ ಮಾಡಿದ್ದರು. ಆದರೆ 2022ರ ಪಿಎಸ್‍ಎಲ್‍ನಲ್ಲಿ ಫ್ರಾಂಚೈಸ್ ಮೊದಲು ಒಪ್ಪಂದ ಮಾಡಿಕೊಂಡಷ್ಟು ಹಣ ನೀಡುತ್ತಿಲ್ಲ ಎಂದು ಆಸ್ಟ್ರೇಲಿಯಾದ ಆಲ್‍ರೌಂಡರ್ ಜೇಮ್ಸ್ ಫಾಲ್ಕ್‌ನರ್‌ ಪಿಎಸ್‍ಎಲ್‍ನಿಂದ ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಪಾಕಿಸ್ತಾನ ಸೂಪರ್ ಲೀಗ್‍ಗೆ ಭಾರತದ ಕಂಪನಿಗಳಿಂದ ಬಿಗ್ ಶಾಕ್!

    ಪಾಕಿಸ್ತಾನ ಸೂಪರ್ ಲೀಗ್‍ಗೆ ಭಾರತದ ಕಂಪನಿಗಳಿಂದ ಬಿಗ್ ಶಾಕ್!

    – ಜಗತ್ತಿನಾದ್ಯಂತ ಟಿ20 ನೇರಪ್ರಸಾರ ಸ್ಥಗಿತ
    – ಒಪ್ಪಂದವನ್ನು ರದ್ದುಗೊಳಿಸಿದ ಐಎಂಜಿ ರಿಲಯನ್ಸ್
    – ಭಾರತದಲ್ಲೂ ಕ್ರಿಕೆಟ್ ನೇರಪ್ರಸಾರವಿಲ್ಲ

    ನವದೆಹಲಿ: ಪುಲ್ವಾಮ ದಾಳಿಯ ನಂತರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಹೊಡೆತ ನೀಡಿದ್ದರೆ ಈಗ ಭಾರತದ ಕಂಪನಿಗಳು ಅಲ್ಲಿ ಆಯೋಜನೆಗೊಂಡಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‍ಎಲ್) ಟಿ20 ಪಂದ್ಯಗಳನ್ನು ಬಹಿಷ್ಕಾರ ಹಾಕುವ ಮೂಲಕ ಭಾರೀ ಶಾಕ್ ನೀಡಿವೆ.

    ಭಾರತದ ಸೈನಿಕರು ಹುತಾತ್ಮರಾದ ದಿನವಾದ ಗುರುವಾರ 4ನೇ ವರ್ಷದ ಪಿಎಸ್‍ಎಲ್ ಕ್ರಿಕೆಟ್ ಟೂರ್ನಿಗೆ ದುಬೈನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈಗ ಟೂರ್ನಿಯ ನಿರ್ಮಾಣ ಹಕ್ಕು ಪಡೆದಿದ್ದ ಐಎಂಜಿ- ರಿಲಯನ್ಸ್ ಸಂಸ್ಥೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಜೊತೆಗಿನ ಒಪ್ಪಂದವನ್ನೇ ರದ್ದು ಮಾಡಿದೆ.

    ಭಾರತೀಯ ಸೈನಿಕರ ಮೇಲಿನ ದಾಳಿಯನ್ನು ಖಂಡಿಸಿ ಈ ಕೂಡಲೇ ಪ್ರಸಾರ ಸಂಬಂಧ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ ಎಂದು ಐಎಂಜಿ ರಿಲಯನ್ಸ್ ಪಿಸಿಬಿಗೆ ಮೇಲ್ ಕಳುಹಿಸಿದೆ. ಐಎಂಜಿ ರಿಲಯನ್ಸ್ ನೇರಪ್ರಸಾರಕ್ಕೆ ಸಂಬಂಧಿಸಿದ ಕ್ಯಾಮೆರಾ, ಮಾನವ ಸಂಪನ್ಮೂಲಗಳನ್ನು ಒದಗಿಸುತಿತ್ತು. ಈಗಾಗಲೇ ಭಾರೀ ನಷ್ಟದಲ್ಲಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಇದು ದೊಡ್ಡ ಹೊಡೆತ ನೀಡಿದ್ದು, ಕೋಟ್ಯಂತರ ರೂ. ನಷ್ಟವಾಗುವ ಸಾಧ್ಯತೆಯಿದೆ.

    ಪಂದ್ಯ ನಡೆಯುತ್ತಿರುವ ವೇಳೆಯೇ ಒಪ್ಪಂದ ರದ್ದಾಗಿರುವ ಕಾರಣ ಪಿಸಿಬಿ ಈಗ ನೇರ ಪ್ರಸಾರ ಸಂಬಂಧ ಹೊಸ ನಿರ್ಮಾಣ ಕಂಪನಿಯನ್ನು ಹುಡುಕಬೇಕಿದೆ. ಡಿ ಸ್ಫೋರ್ಟ್ಸ್ ಈ ವರ್ಷದ ನಿರ್ಮಾಣ ಹಕ್ಕನ್ನು ಪಡೆದುಕೊಂಡಿದ್ದರೆ ಮೊದಲ ಮೂರು ವರ್ಷದ ನಿರ್ಮಾಣ ಹಕ್ಕನ್ನು ಇಂಗ್ಲೆಂಡ್ ಮೂಲದ ಸನ್‍ಸೆಟ್& ವಿನೆ ಕಂಪನಿ ಪಡೆದುಕೊಂಡಿತ್ತು.

    ನೇರಪ್ರಸಾರವೇ ಇಲ್ಲ:
    ಇದರ ಜೊತೆಯಲ್ಲಿ ಭಾರತದಲ್ಲಿ ಪಿಎಸ್‍ಎಲ್ ಪ್ರಸಾರದ ಹಕ್ಕು ಪಡೆದಿದ್ದ ಡಿ ಸ್ಫೋರ್ಟ್ಸ್ ನೇರ ಪ್ರಸಾರ ಮಾಡದೇ ಇರಲು ನಿರ್ಧರಿಸಿದೆ. ಭಾನುವಾರ ರಾತ್ರಿ ದುಬೈಯಲ್ಲಿ ಕ್ರಿಕೆಟ್ ನಡೆಯುತ್ತಿದ್ದರೆ ಡಿ ಸ್ಫೋರ್ಟ್ಸ್ ನಲ್ಲಿ ಬೇರೆ ಕಾರ್ಯಕ್ರಮಗಳು ಪ್ರಸಾರವಾಗಿತ್ತು.

    ಲೈವ್ ಸ್ಕೋರ್ ಬರಲ್ಲ:
    ಪಿಎಸ್‍ಎಲ್ ಟೂರ್ನಿಯ ಲೈವ್ ಸ್ಕೋರ್ ಗೆ ಕ್ರಿಕೆಟ್ ಬಝ್ ಬಹಿಷ್ಕಾರ ಹಾಕಿದೆ. ಪ್ರತಿ ಎಸೆತ, ವಿವರಣೆ ಸುದ್ದಿಯನ್ನು ಕ್ರಿಕ್ ಬಝ್ ಅಪ್‍ಡೇಟ್ ಮಾಡುತಿತ್ತು. ಅಪ್‍ಡೇಟ್ ಗಳಿಗೆ ಬ್ರೇಕ್ ಹಾಕಿದ ಜೊತೆ ಈ ಹಿಂದಿನ ಸ್ಕೋರ್ ಮಾಹಿತಿ, ಸುದ್ದಿಗಳನ್ನು ತನ್ನ ವೆಬ್‍ಸೈಟ್ ನಿಂದಲೇ ಕಿತ್ತೆಸೆದಿದೆ.

    2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಉಳಿದ ರಾಷ್ಟ್ರಗಳು ಪಾಕಿಗೆ ಬಾರದ ಕಾರಣ ಪಿಸಿಬಿ ಕ್ರಿಕೆಟ್ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುತ್ತಿದೆ. ನಷ್ಟದಲ್ಲಿರುವ ಪಿಸಿಬಿ ಮತ್ತೆ ಟೂರ್ನಿ ಆಯೋಜಿಸಲು ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಈಗ ಪುಲ್ವಾಮ ದಾಳಿಯಿಂದ ಮತ್ತೆ ಪಿಸಿಬಿಗೆ ಭಾರೀ ಹೊಡೆತ ಬಿದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv