Tag: ಕ್ರಿಕೆಟರ್

  • ಪ್ರೀತ್ಸಿ ಮದ್ವೆ ಆಗಿದ್ದ ಪತ್ನಿಯ ಅನುಮಾನಕ್ಕೆ ಬೇಸತ್ತು ಕೊಲೆಗೈದ ಕ್ರಿಕೆಟರ್

    ಪ್ರೀತ್ಸಿ ಮದ್ವೆ ಆಗಿದ್ದ ಪತ್ನಿಯ ಅನುಮಾನಕ್ಕೆ ಬೇಸತ್ತು ಕೊಲೆಗೈದ ಕ್ರಿಕೆಟರ್

    ಬೆಂಗಳೂರು: ಪ್ರೀತಿಸಿ ಮದುವೆ ಆಗಿದ್ದ ಪತ್ನಿಯನ್ನು ಕೊಲೈಗೈದು, ಪ್ರಕರಣದಿಂದ ಪಾರಾಗಲು ಕಥೆ ಕಟ್ಟಿದ್ದ ಪತಿಯೊಬ್ಬನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶ ಮೂಲದ ರಾಕೇಶ್ ಗುಪ್ತಾ ಬಂಧಿತ ಆರೋಪಿ. ರಾಧಾ ಕೊಲೆಯಾದ ಪತ್ನಿ. ಇದೇ ತಿಂಗಳ 17ರಂದು ಆರೋಪಿ ಕೊಲೆ ಮಾಡಿದ್ದ. ಆದರೆ ಪತ್ನಿ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದ.

    ಆರೋಪಿ ರಾಕೇಶ್ ಗುಪ್ತಾ ಹಾಗೂ ರಾಧಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮೂಲತಃ ಉತ್ತರ ಪ್ರದೇಶದ ಗುಪ್ತಾ ಮದುವೆಯ ಬಳಿಕ ಬೆಂಗಳೂರಿಗೆ ಬಂದು ಕೆಲಸ ಮಾಡಿಕೊಂಡು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪತ್ನಿಯ ಜೊತೆಗೆ ವಾಸವಾಗಿದ್ದ. ಗುಪ್ತಾ ಉತ್ತರ ಕ್ರಿಕೆಟರ್ ಆಗಿದ್ದರಿಂದ ಸ್ಥಳೀಯ ಟೀಮ್‍ಗಳಲ್ಲಿ ಆಟವಾಡಿ ಹಣ ಗಳಿಸುತ್ತಿದ್ದ.

    ಕೆಲ ದಿನಗಳ ಹಿಂದೆ ರಾಕೇಶ್‍ಗೆ ಗಾಯವಾಗಿತ್ತು. ಪರಿಣಾಮ ಆತನಿಗೆ ಕ್ರಿಕೆಟ್ ಆಡುವುದಕ್ಕೆ ಆಗುತ್ತಿರಲಿಲ್ಲ. ಇದರಿಂದಾಗಿ ಸಂಪಾದನೆ ನಿಂತು ಹೋಯಿತು. ಆಗ ಸಂಸಾರದಲ್ಲಿ ಗಲಾಟೆ ಆಗಲು ಆರಂಭವಾಗಿತ್ತು. ಪತಿ ಬೇರೋಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನ ಪತ್ನಿ ರಾಧಾಳಿಗೆ ಕಾಡತೊಡಗಿತ್ತು.

    ಅಡುಗೆ ವಿಚಾರವಾಗಿ ರಾಧಾ ಹಾಗೂ ರಾಕೇಶ್ ನವೆಂಬರ್ 17ರಂದು ಜಗಳ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಗುಪ್ತಾ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಲಗಿದ್ದ. ಬೆಳಗ್ಗೆ ಎದ್ದು ನೋಡಿದರೆ ಪತ್ನಿ ಶವವಾಗಿ ಬಿದ್ದಿದ್ದಳು. ಆದರೆ ಆರೋಪಿಯು, ಪತ್ನಿ ಮಟ್ಟಿಲಿನಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ನೆರೆಹೊರೆಯವರನ್ನು ನಂಬಿಸಿದ್ದ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ರಾಕೇಶ್ ಅದೇ ಕಥೆಯನ್ನು ಹೇಳಿದ್ದ. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಪತ್ನಿ ರಾಧಾ ಫೋನ್ ಪಡೆದು ಕಾಲ್, ಮೆಸೇಜ್ ಚೆಕ್ ಮಾಡಿ ಕಿರಿಕಿರಿ ಕೊಡುತ್ತಿದ್ದಳು. ಅಷ್ಟೇ ಅಲ್ಲದೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದಳು. ಇದರಿಂದಾಗಿ ಮಾನಸಿಕವಾಗಿ ಕುಂದಿದ್ದೆ ಎಂದು ರಾಕೇಶ್ ಬಾಯಿ ಬಿಟ್ಟಿದ್ದಾನೆ. ಕೊಲೆ ಮಾಡಿರುವುದು ಖಚಿತವಾಗುತ್ತಿದ್ದ ಆರೋಪಿ ರಾಖೇಶ್ ಗುಪ್ತಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

  • ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ನವದೆಹಲಿ: ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿ, ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ದೆಹಲಿಯ ವಾಯುಮಾಲಿನ್ಯವು ಗಂಭೀರ ಮಟ್ಟದಲ್ಲಿರುವುದರಿಂದ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಮುಷ್ಫಿಕರ್ ರಹೀಮ್, ಇದು ನನಗೆ ವಿಶೇಷ ವಿಷಯವಲ್ಲ. ಮಾಲಿನ್ಯಕ್ಕಿಂತ ಭಾರತೀಯ ಬೌಲರ್‌ಗಳನ್ನು ಎದುರಿಸುವ ಬಗ್ಗೆ ನನಗೆ ಹೆಚ್ಚು ಚಿಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವಾಗ ಮಾತನಾಡಿದ ಮುಷ್ಫಿಕರ್ ರಹೀಮ್, ನಾವು ಪರಿಸ್ಥಿತಿಯ ಬಗ್ಗೆ ಚಿಂತಿಸದೆ ಪಂದ್ಯವನ್ನು ಆಡಿದ್ದೇವೆ. ಭಾರತಕ್ಕೆ ಭೇಟಿ ನೀಡಿದಾಗಿನಿಂದಲೂ ಇದೇ ರೀತಿಯ ಹವಾಮಾನವನ್ನು ಎದುರಿಸಿದ್ದೇವೆ. ಅದಕ್ಕಾಗಿಯೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಭಾರತದ ನೆಲದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸಿದ್ದೇವೆ. ಇದಕ್ಕಿಂತ ಉತ್ತಮ ಸಾಧನೆ ಮತ್ತೊಂದಿಲ್ಲ. ಈ ಪಂದ್ಯದಲ್ಲಿ ನನಗೆ ಸೌಮ್ಯ ಸರ್ಕಾರ್ ಸಾಥ್ ಸಾಥ್ ನೀಡಿ ತಂಡದ ಗೆಲುವಿಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ನಾವು ಇಲ್ಲಿಗೆ ಬಂದಿರುವುದು ದುರ್ಬಲರಂತೆ. ಕಳೆದ ಮೂರು ವಾರಗಳಲ್ಲಿ ತಂಡದ ಕೋಚ್ ನಮಗೆ ಉತ್ತಮ ತರಬೇತಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

    ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ 149 ರನ್‌ಗಳ ಗುರಿ ನೀಡಿತ್ತು. ಇದನ್ನು ಬಾಂಗ್ಲಾದೇಶದ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ ಅತ್ಯಧಿಕ (60 ರನ್) ಮತ್ತು ಸೌಮ್ಯ ಸರ್ಕಾರ್ 39 ರನ್ ಗಳಿಸಿದ್ದರು. ಮೂರನೇ ವಿಕೆಟಿಗೆ ಇವರಿಬ್ಬರೂ 60 ರನ್ ಜೊತೆಯಾಟವಾಡಿ ಬಾಂಗ್ಲಾ ತಂಡವನ್ನು ಗೆಲುವಿನ ಸಮೀಪ ತಂದರು.

    ವಾಯುಮಾಲಿನ್ಯದ ವಿಪರೀತ ಪರಿಸ್ಥಿತಿಯ ಮಧ್ಯೆ ಅದ್ಭುತವಾಗಿ ಆಡಿದ ಮತ್ತು ಪ್ರದರ್ಶನ ನೀಡಿದ ಉಭಯ ತಂಡಗಳಿಗೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.

    ಸ್ಟೇಡಿಯಂ ಭರ್ತಿ:
    ದೆಹಲಿಯಲ್ಲಿ ಪಂದ್ಯಕ್ಕೂ ಮುನ್ನ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದರ ಹೊರತಾಗಿಯೂ ಅರುಣ್ ಜೇಟ್ಲಿ ಕ್ರೀಡಾಂಗಣವು ಭಾನುವಾರ ಸಂಪೂರ್ಣ ಭರ್ತಿಯಾಗಿತ್ತು. ಈ ಮಾಲಿನ್ಯವು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಇದು ಕ್ರಿಕೆಟ್ ಅಭಿಮಾನಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಜೊತೆಗೆ ಪಂದ್ಯ ಪ್ರಾರಂಭವಾಗುವ ಮುನ್ನ ಸುಮಾರು 46 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣವಾಗಿ ತುಂಬಿತ್ತು.

  • ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ಬೆಂಗಳೂರು: ಪ್ರತಿಭಾವಂತ ನಟ ಕೋಮಲ್ ಎಲ್ಲಿ ಹೋದರು ಎಂಬ ಪ್ರಶ್ನೆಯೊಂದು ವರ್ಷಾಂತರಗಳಿಂದ ಅವರನ್ನು ಅಭಿಮಾನಿಸುವ, ಮೆಚ್ಚಿಕೊಳ್ಳುವವರನ್ನೆಲ್ಲ ಕಾಡುತ್ತಲೇ ಇದೆ. ಕೆಂಪೇಗೌಡ 2 ಚಿತ್ರದ ಮೂಲಕ ಭಿನ್ನ ಗೆಟಪ್ಪಿನಲ್ಲಿ ಕೋಮಲ್ ಮತ್ತೆ ಮರಳೋ ಸೂಚನೆ ನೀಡಿದಾಗ ಎಲ್ಲರೂ ಖುಷಿಗೊಂಡಿದ್ದರು. ಆದರೆ ಅದಾದ ನಂತರವೂ ಒಂದು ದೊಡ್ಡ ಗ್ಯಾಪಿನ ನಂತರ ಕೋಮಲ್ ಕೆಂಪೇಗೌಡನಾಗಿ ಅಬ್ಬರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಈ ಸಿನಿಮಾ ಟ್ರೈಲರ್ ಈಗ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ವಿರಾಟ್ ರೂಪ ಪ್ರದರ್ಶಿಸಿದೆ.

    ಕೆಂಪೇಗೌಡ2 ಚಿತ್ರದ ಟ್ರೈಲರ್ ಗೆ ಈ ಪಾಟಿ ಜನಬೆಂಬಲ ಸಿಕ್ಕಿರೋದರಿಂದ ಕೋಮಲ್ ಕೂಡಾ ಖುಷಿಗೊಂಡಿದ್ದಾರೆ. ಹೊಸಾ ಗೆಟಪ್ಪಿನಲ್ಲಿ ಮರಳಿದಾಗ ಈ ಥರದ ಸ್ವಾಗತ ಸಿಕ್ಕರೆ ಯಾವ ನಟನಿಗೇ ಆದರೂ ಅದಕ್ಕಿಂತಲೂ ಖುಷಿಯ ಸಂಗತಿ ಬೇರೊಂದಿರಲು ಸಾಧ್ಯವಿಲ್ಲ. ಹೀಗೆ ತಮ್ಮನ ಚಿತ್ರ ಗೆಲ್ಲುವ ಸ್ಪಷ್ಟ ಸೂಚನೆ ಸಿಕ್ಕಿರುವಾಗ ಅಣ್ಣ ಜಗ್ಗೇಶ್ ಅವರಿಗೆ ಖುಷಿಯಾಗದಿರಲು ಸಾಧ್ಯವೇ?

    ಆರಂಭದಿಂದ ಇಲ್ಲಿಯವರೆಗೂ ಸಹೋದರ ಕೋಮಲ್ ಅವರಿಗೆ ಬೆನ್ನೆಲುಬಾಗಿ ಸಾಥ್ ನೀಡುತ್ತಾ ಬಂದಿರುವವರು ಜಗ್ಗೇಶ್. ಅವರೀಗ ಕೆಂಪೇಗೌಡ 2 ಚಿತ್ರದ ಟ್ರೈಲರಿಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲದಿಂದ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಇದಕ್ಕೆ ಕಾರಣರಾದ ಕನ್ನಡ ಕುಲಕೋಟಿಗೆ ಧನ್ಯವಾದ ಸಮರ್ಪಿಸಿದ್ದಾರೆ. `ಕೆಂಪೇಗೌಡ2 ಚಿತ್ರಕ್ಕೆ ಒಂದು ಮಿಲಿಯನ್ ವೀಕ್ಷಣೆ ಸಿಗುವಂತೆ ಮಾಡಿದ ಕನ್ನಡ ಕುಲಕೋಟಿಗೆ ಧನ್ಯವಾದಗಳು. ಇದೀಗ ಈ ಸಿನಿಮಾಗೆ ಡಿಐ ನಡೆಯುತ್ತಿದೆ. ಈ ರಾ ಸಿನಿಮಾ ನೋಡಿಯೇ ನನಗೆ ರೋಮಾಂಚನವಾಗಿದೆ. ಬೆಸ್ಟ್ ಕಮರ್ಶಿಯಲ್ ಮೂವಿಗಳ ಸಾಲಿಗೆ ಈ ಚಿತ್ರ ಸೇರಲಿದೆ ಎಂದು ಮನ ಹೇಳಿತು. ಅಣ್ಣನಾಗಿ ಹೆಮ್ಮೆಯಾಯಿತು’ ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.

    ಶಂಕರ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಈವರೆಗಿನ ಇಮೇಜನ್ನೇ ಬದಲಾಯಿಸಿಕೊಳ್ಳುವಂಥಾ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಕ್ರಿಕೆಟರ್ ಶ್ರೀಶಾಂತ್ ಖಳ ನಟನಾಗಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಕೂಡಾ ಸ್ಪೆಷಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋಮಲ್ ಪಾಲಿಗೆ ಮರುಹುಟ್ಟಿನಂಥಾ ರೀ ಎಂಟ್ರಿ. ಈ ಸಾಸದಲ್ಲಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಸೂಚನೆ ಟ್ರೈಲರಿಗೆ ಸಿಗುತ್ತಿರೋ ಬೆಂಬಲದ ಮೂಲಕವೇ ಸ್ಪಷ್ಟವಾಗುತ್ತದೆ.

  • ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

    ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

    ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಇದೀಗ ಭಾರತ ತಂಡದ ಕ್ರಿಕೆಟ್ ಆಟಗಾರ ಕಿಚ್ಚ ಸುದೀಪ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.

    ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನವೊಂದು ಶುರು ಮಾಡಿದ್ದರು. ಈ ಅಭಿಯಾನದಲ್ಲಿ ಸ್ಟಾರ್ ನಟರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದರು. ಇದೀಗ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ಹಾಕಿದ್ದ ಫಿಟ್ನೆಸ್ ಚಾಲೆಂಜ್‍ನ್ನು ಸುದೀಪ್ ಸ್ವೀಕರಿಸಿದ್ದಾರೆ.

    ವಿನಯ್ ಕುಮಾರ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ನಂತರ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಕಿಚ್ಚ ಸುದೀಪ್, ಮನೀಶ್ ಪಾಂಡೆ, ಕರುಣ್ ಹಾಗೂ ಮಯಾಂಕ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಫಿಟ್ನೆಸ್ ಚಾಲೆಂಜ್ ನೀಡಿದ್ದರು.

    ವಿನಯ್ ಕುಮಾರ್ ಚಾಲೆಂಜ್ ಕಿಚ್ಚ ಸುದೀಪ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಿಚ್ಚ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ ಅದಕ್ಕೆ, “ಸಹೋದರ ನಿನ್ನ ಚಾಲೆಂಜ್ ನಾನು ಸ್ವೀಕರಿಸುತ್ತಿದ್ದೇನೆ. ಧನ್ಯವಾದಗಳು” ಎಂದು ತಿಳಿಸಿದ್ದಾರೆ.

    ಕಿಚ್ಚ ಸುದೀಪ್ ಚಾಲೆಂಜ್ ಪೂರ್ಣಗೊಳಿಸಿ ಬಾಲಿವುಡ್ ನಟ ರಿತೇಶ್ ದೇಶ್‍ಮುಕ್, ನಟ ಹಾಗೂ ನಿರ್ಮಾಪಕ ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

    ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿ ಕ್ರಿಕೆಟಿಗ ವಿನಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ “ಅದ್ಭುತ ಸಹೋದರ. ನನ್ನ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿದ ಜಿ.ಕೆ ಅನಿಲ್ ಕುಮಾರ್ ಟ್ವಿಟ್ಟರಿನಲ್ಲಿ, “ವ್ಹಾ..ವ್ಹಾ..” ಎಂದು ಟ್ವೀಟ್ ಮಾಡಿದ್ದರು. ಆಗ ಕಿಚ್ಚ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

  • ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಾತನ ಮೃತದೇಹ ಸಾಬರಮತಿ ನದಿಯಲ್ಲಿ ಪತ್ತೆ

    ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಾತನ ಮೃತದೇಹ ಸಾಬರಮತಿ ನದಿಯಲ್ಲಿ ಪತ್ತೆ

    ಅಹ್ಮದಾಬಾದ್: ಕಳೆದ 48 ಗಂಟೆಗಳಿಂದ ನಾಪತ್ತೆಯಾಗಿದ್ದ ಟೀಂ ಇಂಡಿಯಾ ಆಟಗಾರ ಜಸ್ಪ್ರೀತ್ ಬುಮ್ರಾ ಅವರ ತಾತನ ಮೃತದೇಹ ಗುಜರಾತ್ ನ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ.

    ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದ ಬುಮ್ರಾ ಅವರ ತಾತ ಸಂತೋಕ್ ಸಿಂಗ್ ಅವರ ಮೃತದೇಹ ಅನುಮಾನಸ್ಪದಾಗಿ ದೊರೆತ್ತಿದ್ದು. ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲೆತ್ತಿದ್ದಾರೆ.

    84 ವರ್ಷದ ಸಂತೋಕ್ ಸಿಂಗ್ ಉತ್ತರಾಖಂಡದ ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಡಿಸೆಂಬರ್ 6 ರಂದು ಬುಮ್ರಾರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲು ಅಹ್ಮದಾಬಾದ್ ಗೆ ತೆರಳಿದ್ದರು. ಆದರೆ ಬುಮ್ರಾರನ್ನು ಭೇಟಿಯಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂತೋಕ್ ಸಿಂಗ್ ನಾಪತ್ತೆಯಾಗಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

    ಸಂತೋಕ್ ಸಿಂಗ್ ಕಾಣೆಯಾದ ಬಗ್ಗೆ ಅವರ ಪುತ್ರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಬುಮ್ರಾರನ್ನು ಭೇಟಿ ಮಾಡಲು ಅವರ ತಾಯಿ ದಲ್ಜಿತ್ ಕೌರ್ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. ಬುಮ್ರಾ ಅವರ ತಂದೆ ಮರಣದ ನಂತರ 17 ವರ್ಷಗಳ ಕಾಲ ಇವರ ಕುಟುಂಬವನ್ನು ಒಮ್ಮೆಯು ಭೇಟಿ ಮಾಡಿ ವಿಚಾರಿಸದ ಕಾರಣವಾಗಿ ಅವರು ಭೇಟಿಯಾಗಲು ನಿರಾಕರಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಬುಮ್ರಾ ಅವರ ತಾತ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದು, ಆದರೆ ಅವರ ಮೃತ ದೇಹದ ಬಳಿ ಯಾವುದೇ ಪತ್ರ ಲಭಿಸಿಲ್ಲ ಎಂದು ತಿಳಿಸಿದ್ದಾರೆ. ಮೃತರ ಬಳಿ ಚುನಾವಣೆ ಗುರುತಿನ ಚೀಟಿ, ಮೊಬೈಲ್ ಫೋನ್ ವಸ್ತುಗಳು ಪತ್ತೆಯಾಗಿದ್ದು, ವಿವರಗಳನ್ನು ಪಡೆದು ಮೃತರ ಪುತ್ರಿಗೆ ಮಾಹಿತಿ ನೀಡಲಾಗಿದೆ.

    ಕೊನೆಯ ಬಾರಿಗೆ ತಮ್ಮ ಪುತ್ರಿಗೆ ಫೋನ್ ಮಾಡಿದ್ದ ಅವರು ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಹೊರಡುವುದಾಗಿ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.