Tag: ಕ್ರಿಕೆಟರ್

  • ಶಾಹಿದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

    ಶಾಹಿದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

    ಈ ವಿಚಾರವನ್ನು 40 ವರ್ಷ ಅಫ್ರಿದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಬಹುಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ. “ನಾನು ಗುರುವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ತೀವ್ರವಾಗಿ ನೋವು ಅನುಭವಿಸುತ್ತಿರುವೆ. ನನಗೆ ಕೊರೊನಾ ಟೆಸ್ಟ್ ಮಾಡಿದಾಗ ದುರದೃಷ್ಟವಶಾತ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಶೀಘ್ರವೇ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡಿ” ಎಂದು ಅಫ್ರಿದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಪಾಕಿಸ್ತಾನದಲ್ಲಿ ಹೆಮ್ಮಾರಿ ಕೊರೊನಾಗೆ ಇಬ್ಬರು ಕ್ರಿಕೆಟಿಗರು ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ 2003ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪರ ಆಡಿದ್ದ ಅನುಭವಿ ವಿಕೆಟ್‍ಕೀಪರ್, ಬ್ಯಾಟ್ಸ್‌ಮನ್ ತೌಫಿಕ್ ಉಮರ್ ಅವರಿಗೂ ಕೊರೊನಾ ವೈರಸ್ ತಗಲಿತ್ತು. ಅವರಿಗೆ ಚಿಕಿತ್ಸೆ ಫಲಕಾರಿಯಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಹೆಮ್ಮಾರಿ ಕೊರೊನಾಗೆ ಏಪ್ರಿಲ್‍ನಲ್ಲಿ ಜಾಫರ್ ಸರ್ಫರಾಜ್ ಬಲಿಯಾಗಿದ್ದರೆ, ಇದೇ ತಿಂಗಳು 2ರಂದು ರಿಯಾಝ್ ಶೇಖ್ ಸೋಂಕಿನಿಂದ ಮೃತಪಟ್ಟಿದ್ದರು. ಪಾಕಿಸ್ತಾನ ಪ್ರಥಮ ದರ್ಜೆ ಕ್ರಿಕೆಟರ್ ಆಗಿದ್ದ ಜಾಫರ್ ಸರ್ಫರಾಜ್, ಪಾಕಿಸ್ತಾನದ ಅಂಡರ್-19 ಮತ್ತು ಅಂತಾರಾಷ್ಟ್ರೀಯ ಎರಡು ತಂಡಕ್ಕೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಸೋಂಕು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಪೇಶಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದ ಮೊದಲ ಕ್ರಿಕೆಟರ್ ಆಗಿದ್ದಾರೆ.

    ರಿಯಾಝ್ 1987ರಿಂದ 2005ರವರೆಗೆ 43 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು, ದೇಶಿ ಟೂರ್ನಿಗಳಲ್ಲಿ 25 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಸ್ಪಿನ್ ಬೌಲರ್ ಆಗಿದ್ದ ರಿಯಾಝ್ ಶೇಖ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹ್ಸೀನ್ ಖಾನ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.

  • ಇದೇ ದಿನ 1994ರಲ್ಲಿ ಅಜೇಯ 501 ರನ್ ಸಿಡಿಸಿದ್ದ ಬ್ರಿಯಾನ್ ಲಾರಾ

    ಇದೇ ದಿನ 1994ರಲ್ಲಿ ಅಜೇಯ 501 ರನ್ ಸಿಡಿಸಿದ್ದ ಬ್ರಿಯಾನ್ ಲಾರಾ

    ಪೋರ್ಟ್ ಆಫ್ ಸ್ಪೇನ್: ದೊಡ್ಡ ಇನ್ನಿಂಗ್ಸ್ ಆಡುವ ವಿಷಯ ಬಂದಾಗ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಬ್ರಿಯಾನ್ ಲಾರಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಇತರ ಬ್ಯಾಟ್ಸ್‌ಮನ್‌ಗಳಿಗೆ ಅಸಾಧ್ಯವಾದ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.

    ಅಂತಹ ದಾಖಲೆ ಇದೇ ದಿನ 1994ರಲ್ಲಿ ಇತಿಹಾಸದ ಪುಟ ಸೇರಿತ್ತು. ಅಂದಿನ ಮಾಂತ್ರಿಕ ಬ್ಯಾಟಿಂಗ್‍ನಿಂದ ಬ್ರಿಯಾನ್ ಚಾರ್ಲ್ಸ್ ಲಾರಾ ಅವರು ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ 500 ರನ್ ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಅಜೇಯ 501 ರನ್ ಗಳಿಸಿದ್ದರು.

    ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 100, 200, 300, 400 ಮತ್ತು 500 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಲಾರಾ ಅವರಿಗೆ ಸಲ್ಲುತ್ತದೆ. ಈವರೆಗೂ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಈ ಸಾಧನೆ ಮಾಡಿಲ್ಲ.

    1958ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಮಾಜಿ ಕ್ರಿಕೆಟರ್ ಗ್ಯಾರಿ ಸೋಬರ್ಸ್ ಅವರು ಅಜೇಯ 365 ರನ್ ಗಳಿಸಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದ್ದರು. ಆದರೆ 1994 ಏಪ್ರಿಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಲಾರಾ 375 ರನ್ ಚಚ್ಚಿ ದಾಖಲೆ ಮುರಿದಿದ್ದರು. ಆದರೆ ಇಷ್ಟಕ್ಕೆ ನಿಲ್ಲಿಸದ ಅವರು ಎರಡು ತಿಂಗಳ ಬಳಿಕ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ ವಿಶೇಷ ದಾಖಲೆ ಬರೆದರು. ಅಂದು ವಾರ್ವಿಕ್‍ಷೈರ್ ಪರ ಆಡಿದ ಲಾರಾ ಡರ್ಹಾಮ್ ವಿರುದ್ಧ ಅಜೇಯ 501 ರನ್ ಗಳಿಸಿದ್ದರು.

    ಹನೀಫ್ ಮೊಹಮ್ಮದ್:
    ಪಾಕಿಸ್ತಾನ ಮಾಜಿ ಕ್ರಿಕೆಟರ್ ಹನೀಫ್ ಮೊಹಮ್ಮದ್ 1959ರಲ್ಲಿ ವಹಾವಲ್ಪುರ್ ವಿರುದ್ಧ ಕರಾಚಿ ಪರ ಆಡುತ್ತಿದ್ದರು. ಕುತೂಹಲಕಾರಿಯಾಗಿ ರನ್ ಗಳಿಸಿದ ಅವರು ಇನ್ನೇನು 3 ರನ್ ಗಳಿಸಿದ್ದರೆ ಲಾರಾ ಅವರ ದಾಖಲೆ ಮುರಿಯುತ್ತಿದ್ದರು. ಆದರೆ 499 ರನ್ ಗಳಿಸಿದ್ದಾಗ ರನೌಟ್ ಆಗಿದ್ದರು.

    ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಆಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅಜೇ 335 ರನ್ ಚಚ್ಚಿದ್ದರು. ಈ ವೇಳೆಯಲ್ಲಿ ಆಸೀಸ್ ಡಿಕ್ಲೇರ್ ಘೋಷಿಸಿದ್ದ ಪರಿಣಾಮ ವಾರ್ನರ್‌ಗೆ ದಾಖಲೆ ಬರೆಯುವ ಅವಕಾಶ ಕೈತಪ್ಪಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲಾರಾ, ನಾನು ಡೇವಿಡ್ ವಾರ್ನರ್ ಜತೆಗೆ ಮಾತನಾಡಿದ್ದೇನೆ. ಇದು ತಂಡದ ನಿರ್ಧಾರವಾಗಿತ್ತು. ಅಲ್ಲಿ ಮಳೆ ಬರುವ ಸಾಧ್ಯತೆಗಳಿದ್ದವು ಎಂದು ಲಾರಾ ತಿಳಿಸಿದ್ದರು.

  • ಪಾಕ್ ಮಾಜಿ ಓಪನರ್ ಬ್ಯಾಟ್ಸ್‌ಮನ್‌ಗೆ ಕೊರೊನಾ

    ಪಾಕ್ ಮಾಜಿ ಓಪನರ್ ಬ್ಯಾಟ್ಸ್‌ಮನ್‌ಗೆ ಕೊರೊನಾ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟರ್, ಓಪನರ್ ಬ್ಯಾಟ್ಸ್‌ಮನ್‌ ತೌಫೀಕ್ ಉಮರ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

    ಜ್ವರ ಕಾಣಿಸಿಕೊಂಡಿದ್ದರಿಂದ ತೌಫೀಕ್ ಅವರು ಶನಿವಾರ ಕೋವಿಡ್-19 ಟೆಸ್ಟ್‌ಗೆ ಒಳಗಾಗಿದ್ದರು. ಭಾನುವಾರ ಸಂಜೆ ಅವರ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    “ಶುಕ್ರವಾರ ರಾತ್ರಿ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನನ್ನಲ್ಲಿ ಕೊರೊನಾ ಗುಣಲಕ್ಷಣಗಳು ತೀವ್ರವಾಗಿಲ್ಲ” ಎಂದು ತೌಫೀಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    2001ರಲ್ಲಿ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ತೌಫೀಕ್, 13 ವರ್ಷದ ವೃತ್ತಿಜೀವನದಲ್ಲಿ 44 ಟೆಸ್ಟ್ ಮತ್ತು 22 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 37.98 ಸರಾಸರಿಯಲ್ಲಿ 2,963 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‍ನಲ್ಲಿ ಕೇವಲ 504 ರನ್ ಗಳಿಸಿದ್ದಾರೆ.

    ಕೊರೊನಾದಿಂದಾಗಿ ವಿಶ್ವಾದ್ಯಂತ ಅನೇಕ ಟೂರ್ನಿಗಳು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ರದ್ದುಗೊಂಡಿವೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಕ್ರೀಡಾ ಕ್ಯಾಲೆಂಡರ್‍ನಲ್ಲಿ ಪ್ರಮುಖ ಪರಿಣಾಮ ಬೀರಿದೆ. ಟೋಕಿಯೊ ಒಲಿಂಪಿಕ್ಸ್, ವಿಂಬಲ್ಡನ್ ಟೆನ್ನಿಸ್ ಸೇರಿದಂತೆ ಹಲವಾರು ಪ್ರಮುಖ ಪಂದ್ಯಾವಳಿಗಳು ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ.

    ಕೊರೊನಾ ವೈರಸ್‍ನಿಂದಾಗಿ ಕ್ರಿಕೆಟ್ ಸಹ ಪರಿಣಾಮ ಬೀರಿದೆ. ಅನೇಕ ಪ್ರವಾಸಗಳನ್ನು ಈಗಾಗಲೇ ಮುಂದೂಡಲಾಗಿದೆ ಅಥವಾ ರದ್ದುಪಡಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಅನ್ನು ಫೈನಲ್ ಪಂದ್ಯದಲ್ಲೇ ರದ್ದುಗೊಳಿಸಲಾಗಿದೆ. ಇತ್ತ ಅನಿರ್ದಿಷ್ಟಾವಧಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಅನ್ನು ಮುಂದೂಡಲಾಗಿದೆ.

    ಜುಲೈನಿಂದ ಅಂತಾರಾಷ್ಟ್ರೀಯ ಪ್ರವಾಸಗಳು ಪುನರಾರಂಭಗೊಳ್ಳಲಿವೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.

  • ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ಮುಂಬೈ: ವಿಶ್ವಾದ್ಯಂತ ಹಾಗೂ ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ತೊಂದರೆಗೆ ಸಿಲುಕಿದೆ. ಆದರೆ ಏನೇ ಆದರೂ ಈ ಬಾರಿಯ ಟೂರ್ನಿ ನಡೆಯಲೇ ಬೇಕು ಅಂತ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಟೂರ್ನಿ ನಡೆಸುವ ಬಗ್ಗೆ ಸಲಹೆ ಕೂಡ ನೀಡಿದ್ದಾರೆ.

    ಖಾಲಿ ಮೈದಾನ, ಕ್ರಿಕೆಟ್ ಅಭಿಮಾನಿಗಳಿಲ್ಲದ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿಯೇ ಟೂರ್ನಿ ನಡೆಸಬೇಕು. ಇದರಿಂದ ಪ್ರೇಕ್ಷಕರ ಜೀವಕ್ಕೆ ಯಾವುದೇ ಅಪಾಯವಿಲ್ಲ ಇರುವುದಿಲ್ಲ ಎಂದು ಪಿಟರ್ಸನ್ ಸಲಹೆ ನೀಡಿದ್ದಾರೆ.

    ಐಪಿಎಲ್ ಟೂರ್ನಿ ಮೂರು ಅಥವಾ ನಾಲ್ಕು ವಾರಗಳಲ್ಲಿ ಕೊನೆಗೊಳ್ಳಬೇಕು. ಹೀಗಾಗಿ ಈ ಬಾರಿ ಐಪಿಎಲ್‍ನ ಸ್ವರೂಪವೂ ಚಿಕ್ಕದಾಗಿರಬೇಕು ಎಂದು ಪೀಟರ್ಸನ್ ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಹಾಗೂ ವಿದೇಶಿ ಆಟಗಾರರಿಗೆ ವೀಸಾ ನಿರ್ಬಂಧದಿಂದಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಬೇಕಿತ್ತು.

    “ಜುಲೈ-ಆಗಸ್ಟ್‍ನಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಬೇಕು. ಐಪಿಎಲ್‍ನ 13ನೇ ಆವೃತ್ತಿಯನ್ನು ಸಹ ನಡೆಸಬೇಕು ಎಂದು ಬಯಸುತ್ತೇನೆ. ವಿಶ್ವದ ಪ್ರತಿಯೊಬ್ಬ ಆಟಗಾರನೂ ಇದನ್ನೇ ಬಯಸುತ್ತಿದ್ದಾರೆ. ಅವರು ಸಹ ಟೂರ್ನಿಯಲ್ಲಿ ಆಡಲೇಬೇಕು ಎನ್ನುವ ಇಚ್ಛೆಯನ್ನು ಹೊಂದಿದ್ದಾರೆ. ಆಟಗಾರರು ಮತ್ತು ಫ್ರಾಂಚೈಸಿಗಳ ಜೊತೆಗೆ ತೆರೆಮರೆಯಲ್ಲಿ ಕೆಲಸ ಮಾಡುವವರಿಗೆ ಐಪಿಎಲ್ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಫ್ರ್ಯಾಂಚೈಸಿ ಸ್ವಲ್ಪ ಹಣವನ್ನು ಉಳಿಸುವ ಮಾರ್ಗವನ್ನು ಸಹ ಕಂಡುಕೊಳ್ಳಬೇಕು. ಉದಾಹರಣೆಗೆ ಎಲ್ಲಾ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೆ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ. ಹೀಗಾಗಿ ಟೂರ್ನಿಯನ್ನು ಮೂರು ಅಥವಾ ನಾಲ್ಕು ವಾರಗಳಿಗೆ ಕಡಿತಗೊಳಿಸಬಹುದು” ಎಂದು ಸಲಹೆ ನೀಡಿದ್ದಾರೆ.

    ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಕೂಡ ಐಪಿಎಲ್‍ನ ಮಹತ್ವವನ್ನು ವ್ಯಕ್ತಪಡಿಸಿದ್ದಾರೆ. ಪೀಟರ್ಸನ್ ಅವರ ಸಲಹೆಗೆ ಸಹಮತ ನೀಡಿರುವ ಮಂಜ್ರೇಕರ್, ಸರ್ಕಾರ, ಮಂಡಳಿ ಮತ್ತು ಫ್ರಾಂಚೈಸಿಗಳು ಸೇರಿದಂತೆ ಇತರ ಎಲ್ಲಾ ಸಂಬಂಧಿತ ಸಂಸ್ಥೆಗಳಿಂದ ಒಪ್ಪಿಗೆ ಪಡೆದು ಐಪಿಎಲ್ ನಡೆಸಬೇಕು. ಇದು ವಿಶೇಷ ಆರ್ಥಿಕತೆಯನ್ನು ಸಹ ಪ್ರಾರಂಭಿಸುತ್ತದೆ. ಏಕೆಂದರೆ ಈ ಟೂರ್ನಿ ನಡೆಬೇಕಾಗಿರುವುದು ಮುಂಬೈ ಇಂಡಿಯನ್ಸ್, ಎಂ.ಎಸ್.ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಗಾಗಿ ಅಷ್ಟೇ ಅಲ್ಲ. ಐಪಿಎಲ್‍ನಿಂದ ಉದ್ಯೋಗ ಪಡೆಯುವವರಿಗೆ ಟೂರ್ನಿ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಜಸ್ಟಿನ್ ಲ್ಯಾಂಗರ್, ನೀವು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ನಿಮ್ಮ ಮುಂದೆ ಜನಸಂದಣಿ ಇರುತ್ತಿರಲಿಲ್ಲ. ಆಗಲೇ ಕ್ರಿಕೆಟ್ ಆಡಿದ್ದೀರಿ. ಏಕೆಂದರೆ ನೀವು ಆಟವನ್ನು ಇಷ್ಟಪಡುತ್ತೀರಿ. ನಿಮ್ಮ ತಂಡದ ಆಟಗಾರರೊಂದಿಗೆ ಆಡಲು ಇಷ್ಟಪಡುತ್ತೀರಿ. ಈ ಆಟದ ಪ್ರೀತಿಯಿಂದಾಗಿ ಇಂದು ಹೆಚ್ಚಿನ ಜನರು ಟಿವಿ ಮಾಧ್ಯಮ ಮತ್ತು ರೇಡಿಯೋ ಮೂಲಕ ಜನರನ್ನು ರಂಜಿಸಲು ಸಮರ್ಥರಾಗಿದ್ದೀರಿ. ಇದಕ್ಕಾಗಿಯೇ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸುವುದು ಮುಖ್ಯವಾಗಿದೆ. ಇದು ಸ್ವಲ್ಪ ವಿಭಿನ್ನವಾಗಿರುತ್ತದೆ. ಆದರೆ ನಾವೆಲ್ಲರೂ ಎಷ್ಟು ಅದೃಷ್ಟವಂತರು ಎಂಬುದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ.

  • ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ನವದೆಹಲಿ: ತಮ್ಮ ಟ್ವಿಟ್ಟರ್ ಮೂಲಕವೇ ಭವಿಷ್ಯದ ಘಟನೆಗಳ ಕುರಿತು ಸುಳಿವು ನೀಡುತ್ತಿರುವ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಇಂದು ನೀಡಿದ ವಿಡಿಯೋ ಸಂದೇಶದ ಬಳಿಕ ಆರ್ಚರ್ ಅವರ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಅನೇಕ ಬಾರಿ ಭವಿಷ್ಯದ ಘಟನೆಗಳ ಬಗ್ಗೆ ಸುಳಿವು ನೀಡುವ ಮೂಲಕ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಿರುವ ಇಂಗ್ಲೆಡ್ ವೇಗದ ಬೌಲರ್ ಜೋಫ್ರಾ ಆರ್ಚರ್, ಮಗದೊಮ್ಮೆ ಸುದ್ದಿಯಲ್ಲಿದ್ದಾರೆ.

    ಮಾರ್ಚ್ 23ರಂದು ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನಿ ಮೋದಿ ಮೂವರು ವಾರಗಳ ಲಾಕ್‍ಡೌನ್ ಮಾಹಿತಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಇತ್ತ 2017ರ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದ ಆರ್ಚರ್ ‘ಮನೆಯಲ್ಲೇ ಮೂರು ವಾರಗಳ ಉಳಿವುಯುವುದು ಸಾಕಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.

    ಲಾಕ್‍ಡೌನ್ ಆದೇಶದ ಬಳಿಕ ಮತ್ತೆ ಶುಕ್ರವಾರ ವಿಡಿಯೋ ಸಂದೇಶ ರವಾನೆ ಮಾಡಿರೋ ಮೋದಿ ಅವರು, ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿ ಎಂದು ಮನವಿ ಮಾಡಿ ಎಲ್ಲರೂ ಒಟ್ಟಾಗೋಣ ಎಂದು ಮನವಿ ಮಾಡಿದ್ದರು. ಸದ್ಯ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳಲ್ಲಿ ಮೋದಿ ಅವರ ಮನವಿಯಂತೆ 9 ಫಾರ್ಮ್ 9 ಲೈಟ್ ಅಫ್ ಮಾಡಿ ಟಾರ್ಚ್ ಹಾಕಿ ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ.

    ಆರ್ಚರ್ ಅವರು ಸುಮಾರು ಆರು ವರ್ಷಗಳ ಹಿಂದೆಯೇ ಭವಿಷ್ಯತ್ ಪರಿಣಾಮದ ಬಗ್ಗೆ ಟ್ವೀಟ್ ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರ್ಚರ್ ಅವರ ಟ್ವೀಟ್ ಭಾರೀ ವೈರಲ್ ಆಗಿತ್ತು. ‘ಓಡಲು ಜಾಗವಿಲ್ಲದ ಆ ದಿನಗಳು ಬರಲಿದೆ’ ಎಂದು ಜೋಫ್ರಾ ಆರ್ಚರ್ 2014ರ ಆಗಸ್ಟ್ 20ರಂದು ಟ್ವೀಟ್ ಮಾಡಿದ್ದರು. ಅಕ್ಷರಶ: ಜೋಫ್ರಾ ಆರ್ಚರ್ ನುಡಿದ ಭವಿಷ್ಯ ನಿಜವಾಗಿದೆ. ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರೆಲ್ಲ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕ್ರಿಕೆಟಿಗರ ಅಭ್ಯಾಸ ಸಂಪೂರ್ಣವಾಗಿ ರದ್ದುಗೊಂಡಿದೆ. ಮೈದಾನಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವೈರಲ್ ಟ್ವೀಟ್ ಗಮನಿಸಿರುವ ನೆಟ್ಟಿಗರು ಆರ್ಚರ್ ಅವರನ್ನು ಗಾಡ್ (ದೇವರು) ಎಂದು ಸಂಬೋಧಿಸುತ್ತಾರೆ. ಜೋಫ್ರಾ ಆರ್ಚರ್ ಅವರ ಟ್ವೀಟ್‍ಗಳು ಸಾಕಷ್ಟು ಅಚ್ಚರಿಯನ್ನು ಮೂಡಿಸಿದೆ.

    ಕಳೆದ ಏಕದಿನ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೋಫ್ರಾ ಆರ್ಚರ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ವೇಳೆ ಟೆಸ್ಟ್ ಕ್ರಿಕೆಟ್‍ಗೂ ಡೆಬ್ಯು ಮಾಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.

  • ನಿಮ್ಮ ಮನೆ ಈಗ ‘ಕಾಂಡೋಮ್’ ಇದ್ದಂತೆ ‘ಎಸ್‍ಟಿಡಿ’ಯಿಂದ ರಕ್ಷಿಸಿಕೊಳ್ಳಿ – ಕಿವೀಸ್ ಕ್ರಿಕೆಟರ್

    ನಿಮ್ಮ ಮನೆ ಈಗ ‘ಕಾಂಡೋಮ್’ ಇದ್ದಂತೆ ‘ಎಸ್‍ಟಿಡಿ’ಯಿಂದ ರಕ್ಷಿಸಿಕೊಳ್ಳಿ – ಕಿವೀಸ್ ಕ್ರಿಕೆಟರ್

    ವೆಲ್ಲಿಂಗ್ಟನ್: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಡೀ ಜಗತ್ತೇ ಭಯದ ವಾತಾವರಣದಲ್ಲಿದೆ. ಅಷ್ಟೇ ಅಲ್ಲದೆ ಒಂದರ ನಂತರ ಒಂದರಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗುತ್ತಿದೆ. ಕೆಲವು ಕಂಪನಿಗಳಲ್ಲಿ ರಜೆ ನೀಡಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೆಲಸವನ್ನು ನ್ಯೂಜಿಲೆಂಡ್ ಕ್ರಿಕೆಟರ್ ಮಿಚೆಲ್ ಮೆಕ್‍ಕ್ಲೆನಾಘನ್ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ಮಿಚೆಲ್ ಮೆಕ್‍ಕ್ಲೆನಾಘನ್, ‘ನಿಮ್ಮ ಮನೆಯನ್ನು ಕಾಂಡೋಮ್ ಎಂದು ಭಾವಿಸಿ. ಜೊತೆಗೆ ಕೋವಿಡ್ 19ಅನ್ನು ಗುಣಪಡಿಸಲಾಗದ ಮಾರಕ ರೋಗ ಎಸ್‍ಟಿಡಿ (ಲೈಂಗಿಕವಾಗಿ ಹರಡುವ ರೋಗ- sexually transmitted disease) ಎಂದು ತಿಳಿಯಿರಿ. ಹೀಗಾಗಿ ಕೊರೊನಾ ವೈರಸ್‍ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

    ಮಿಚೆಲ್ ಮೆಕ್‍ಕ್ಲೆನಾಘನ್ ಅವರ ಟ್ವೀಟ್‍ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಿವೀಸ್ ಆಲ್‍ರೌಂಡರ್ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್)ನಲ್ಲಿನ ಕರಾಚಿ ಕಿಂಗ್ಸ್ ಪರ ಆಡಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಏಕಾಏಕಿ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಇಂಗ್ಲೆಂಡ್, ನ್ಯೂಜಿಲೆಂಡ್‍ನ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯಲ್ಲಿ ಮೆಕ್‍ಕ್ಲೆನಾಘನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಹೀಗಾಗಿ ಮೆಕ್‍ಕ್ಲೆನಾಘನ್ ಹೆಚ್ಚಿನ ಸಮಯವನ್ನು ನ್ಯೂಜಿಲೆಂಡ್‍ನಲ್ಲಿ ಕಳೆಯಬೇಕಾಗಬಹುದು.

    ನ್ಯೂಜಿಲೆಂಡ್‍ನಲ್ಲಿ ಶುಕ್ರವಾರ ಸಂಜೆ 5 ಗಂಟೆ ಮಾಹಿತಿ ಪ್ರಕಾರ 39 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.

  • ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    ‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

    – ಶಂಕೆ ವ್ಯಕ್ತಪಡಿಸಿದ ಪಾಕ್ ಮಾಜಿ ಕ್ರಿಕೆಟರ್

    ಇಸ್ಲಾಮಾಬಾದ್: ಇಂಗ್ಲೆಂಡ್‍ನ ಕ್ರಿಕೆಟರ್ ಅಲೆಕ್ಸ್ ಹೇಲ್ಸ್ ಅವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್, ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್‍ಎಲ್‍ಅನ್ನು ಮುಂದೂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಇದೇ ವಿಚಾರವಾಗಿ ಕರಾಚಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಜೀಜ್ ರಾಜಾ, “ನನಗೆ ತಿಳಿದಿರುವಂತೆ ಹೇಲ್ಸ್ ಅವರಿಗೆ ಯಾವುದೇ ಪರೀಕ್ಷೆ ನಡೆಸಿಲ್ಲ. ಆದರೆ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿವೆ. ಆದರೆ ನಾವೆಲ್ಲರೂ ಈಗ ಬಹಳ ಜಾಗರೂಕರಾಗಿರಬೇಕು. ಈ ಸಮಸ್ಯೆಯನ್ನು ಎದುರಿಸಲು ಸಾಮಾನ್ಯ ಜ್ಞಾನ, ವಿಧಾನವನ್ನು ಅನುಸರಿಸಬೇಕು” ಎಂದು ಹೇಳಿದ್ದಾರೆ.

    ಪಿಎಸ್‍ಎಲ್ ಟೂರ್ನಿಯಲ್ಲಿ ಹೆಲ್ಸ್ ಅವರು ಕರಾಚಿ ಕಿಂಗ್ಸ್ ಪರ ಆಡಿದ್ದು, ಪಾಕಿಸ್ತಾನದಲ್ಲಿ ವೈರಸ್ ಹರಡಿದ ನಂತರ ಇತರ ಇಂಗ್ಲೆಂಡ್ ಆಟಗಾರರೊಂದಿಗೆ ತವರಿಗೆ ಮರಳಿದ್ದಾರೆ. ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡ್‍ನ 6 ಆಟಗಾರರಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಮರಳಿದ್ದಾರೆ. ಇದನ್ನೂ ಓದಿ:  ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

    31 ವರ್ಷದ ಹೇಲ್ಸ್ ಬಲಗೈ ಓಪನರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇಂಗ್ಲೆಂಡ್ ತಲುಪಿದ ನಂತರ ಪ್ರತ್ಯೇಕವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸೀಂ ಖಾನ್ ಕೂಡ ಪಿಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದೇಶಿ ಆಟಗಾರರೊಬ್ಬರಿಗೆ ಕೊರೊನಾ ಸೋಂಕು ಇದೆ ಎಂಬ ಶಂಕಿಸಲಾಗಿದೆ ಎಂದು ಹೇಳಿದ್ದರು. ಆದರೆ ಅವರು ಆಟಗಾರನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

    ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪಿಎಸ್‍ಎಲ್ ಆಟಗಾರರು ಮತ್ತು ತಂಡದ ಜೊತೆಯಿದ್ದ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾಸೀಂ ಖಾನ್ ತಿಳಿಸಿದ್ದಾರೆ.

  • ಭಾರತೀಯ ಸಂಪ್ರದಾಯದಂತೆ ಗೆಳತಿಯೊಂದಿಗೆ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ

    ಭಾರತೀಯ ಸಂಪ್ರದಾಯದಂತೆ ಗೆಳತಿಯೊಂದಿಗೆ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್‍ರೌಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಬಹುಕಾಲದ ಗೆಳತಿ, ಭಾರತೀಯ ಸಂಚಾತ ವಿನಿ ರಾಮನ್ ಅವರೊಂದಿಗೆ ಭಾರತೀಯ ಸಂಪ್ರಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್ ಅವರ ನಿಶ್ಚಿತಾರ್ಥ ಆಸ್ಟ್ರೇಲಿಯಾದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಮ್ಯಾಕ್ಸ್‌ವೆಲ್ ವಿನಿ ಜೋಡಿಗೆ ಶುಭಕೋರಿದ್ದಾರೆ. ಮ್ಯಾಕ್ಸ್‌ವೆಲ್, ವಿನಿ ಜೋಡಿಯು ಭಾರತೀಯ ಶೈಲಿಯ ಉಡುಗೊ-ತೊಡುಗೆ ತೊಟ್ಟು ಕಂಗೊಳಿಸಿದ್ದಾರೆ. ಈ ಸಂಭ್ರಮದ ಫೋಟೋವನ್ನು ವಿನಿ ರಾಮನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B9taXQkpEtc/

    ಭಾರತೀಯ ಸಂಜಾತ ವಿನಿ ರಾಮನ್ ವಿಕ್ಟೋರಿಯಾದ ಮೆಂಟೊನೊದಲ್ಲಿ ಜನಿಸಿದವರಾಗಿದ್ದು, ಸದ್ಯ ಮೆಲ್ಬರ್ನ್ ನಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿನಿ ಹಾಗೂ ಮ್ಯಾಕ್ಸ್‌ವೆಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಹಿಂದೂ ಕುಟುಂಬಕ್ಕೆ ಸೇರಿದ ವಿನಿ ಅವರಿಗೆ ಸಹೋದರಿ ಮಧು ರಾಮನ್ ಇದ್ದಾರೆ. ನಿಶ್ವಿತಾರ್ಥದಲ್ಲಿ ಮಧು ರಾಮನ್ ಕೂಡ ಭಾಗಿಯಾಗಿದ್ದರು.

    ಈ ಹಿಂದೆ ವಿನಿ ರಾಮನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮ್ಯಾಕ್ಸ್‌ವೆಲ್ ಜೊತೆಗಿನ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಜೋಡಿ ಮದುವೆಯಾಗುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಮ್ಯಾಕ್ಸ್‌ವೆಲ್ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದರು.

    https://www.instagram.com/p/B1iPLxkFMsh/

    ಸ್ಟಾರ್ ಕ್ರಿಕೆಟ ಆಟಗಾರರು ಭಾರತದ ಯುವತಿಯರನ್ನು ಮದುವೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಶಾನ್ ಟೈಟ್ ಒಂದು ವರ್ಷದ ಡೇಟಿಂಗ್ ನಂತರ 2014ರಲ್ಲಿ ರೂಪದರ್ಶಿ, ವೈನ್ ಉದ್ಯಮಿ ಮಶೂಮ್ ಸಿಂಘಾ ಅವರನ್ನು ವಿವಾಹವಾಗಿದ್ದರು. ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದು, 2018ರಲ್ಲಿ ಗಂಡು ಮಗುವನ್ನು ಜನ್ಮ ನೀಡಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಭಾರತದ ಶಮಿಯಾ ಅಝ್ರೂ ಅವರನ್ನು 2019ರ ಆಗಸ್ಟ್ 20ರಂದು ದುಬೈನಲ್ಲಿ ವಿವಾಹವಾಗಿದ್ದರು. ಈ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಭಾರತದ ಯುವತಿಯೊಂದಿಗೆ ಡೇಟಿಂಗ್ ನಡೆಸಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  • 1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    ಮೆಲ್ಬರ್ನ್: ಒಂದು ಓವರ್ ಆಡಲು ನಿವೃತ್ತಿಯಿಂದ ಹೊರಬನ್ನಿ ಎಂಬ ಆಸ್ಟ್ರೇಲಿಯಾ ಮಹಿಳಾ ತಂಡ ಕ್ರಿಕೆಟರ್ ಮನವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್, ಉತ್ತಮ ಮನವಿ ಎಲಿಸ್. ನಾನು ಅಲ್ಲಿಗೆ ಹೋಗಲು ಮತ್ತು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದಾರೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್ ಮೈದಾನದಲ್ಲಿ ಭಾನುವಾರ ಬುಷ್ ಪೈರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಗಳಾದ ಆಡಂ ಗಿಲ್‍ಕ್ರಿಸ್ಟ್ ಹಾಗೂ ರಿಕ್ಕಿ ಪಾಂಟಿಂಗ್ ನೇತೃತ್ವದ ತಂಡಗಳು ಆಡಲಿವೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ರಿಕ್ಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದಾರೆ.

  • ಭಾರತದಲ್ಲಿದ್ದ ಬಾಂಗ್ಲಾ ಕ್ರಿಕೆಟರ್‌ಗೆ ಬಿತ್ತು 21 ಸಾವಿರ ದಂಡ

    ಭಾರತದಲ್ಲಿದ್ದ ಬಾಂಗ್ಲಾ ಕ್ರಿಕೆಟರ್‌ಗೆ ಬಿತ್ತು 21 ಸಾವಿರ ದಂಡ

    ನವದೆಹಲಿ: ಬಾಂಗ್ಲಾದೇಶದ ಯುವ ಕ್ರಿಕೆಟರ್ ಸೈಫ್ ಹಸನ್ ದಂಡ ತೆತ್ತಿದ್ದಾರೆ.

    ಭಾರತದ ಪ್ರವಾಸ ಕೈಗೊಂಡಿದ್ದ ಬಾಂಗ್ಲಾ ತಂಡವು ಟಿ-20 ಹಾಗೂ ಟೆಸ್ಟ್ ಪಂದ್ಯದಲ್ಲಿ ಸೋತು ಸೋಮವಾರ ತವರಿಗೆ ತೆರಳಿತ್ತು. ಆದರೆ ಸೈಫ್ ಹಸನ್ ಸೇರಿದಂತೆ ಕೆಲ ಆಟಗಾರರು ಭಾರತದಲ್ಲಿ ಉಳಿದು, ಬುಧವಾರ ತಾಯ್ನಾಡಿಗೆ ತೆರಳುತ್ತಿದ್ದರು. ಈ ವೇಳೆ ಅವರ ವೀಸಾ ಪರಿಶೀಲನೆ ಮಾಡಿದಾಗ ಸೈಫ್ ಹಸನ್ ಅವರಿಗೆ ನೀಡಿದ್ದ 6 ತಿಂಗಳ ಅವಧಿಯ ವೀಸಾ ಎರಡು ದಿನಗಳ ಹಿಂದೆಯೇ ಮುಗಿದಿತ್ತು. ಹೀಗಾಗಿ 21,600 ರೂ. ದಂಡ ಪಾವತಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ಡೆಪ್ಯೂಟಿ ಹೈ ಕಮಿಷನರ್ ತೌಫೀಕ್ ಹಸನ್, ಸೈಫ್ ಹಸನ್ ಅವರ ವೀಸಾ ಎರಡು ದಿನಗಳ ಹಿಂದೆ ಮುಗಿದಿದೆ. ವಿಮಾನ ನಿಲ್ದಾಣಕ್ಕೆ ಬಂದಾಗ ಇದರ ಅರಿವು ಅವರಿಗಾಗಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದ ವಿಮಾನದಲ್ಲಿ ತಾಯ್ನಾಡಿಗೆ ಹಿಂದಿರುಗಲು ಅವರಿಗೆ ಸಾಧ್ಯವಾಗಲಿಲ್ಲ. ವೀಸಾ ಅವಧಿಗಿಂತಲೂ ಹೆಚ್ಚು ದಿನ ಭಾರತದಲ್ಲಿ ಉಳಿದುಕೊಂಡ ಪರಿಣಾಮ ತಂಡ ತೆತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಈ ಸಮಸ್ಯೆಯನ್ನು ಬಗೆಹರಿಸಿ ಸೈಫ್ ಹಸನ್ ಅವರನ್ನು ತಾಯ್ನಾಡಿಗೆ ಹಿಂದಿರುಗಲು ಭಾರತವು ನೆರವಾಗಿದೆ. ಹೀಗಾಗಿ ಭಾರತೀಯ ಹೈ ಕಮಿಷನ್‍ಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ಭಾರತ ಪ್ರವಾಸದಲ್ಲಿದ್ದ ಬಾಂಗ್ಲಾ ತಂಡವು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-1 ಅಂತರದಿಂದ ಹಾಗೂ ಪಿಂಕ್ ಬಾಲ್ ಟೆಸ್ಟ್ ಸೇರಿದಂತೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸೋತಿದೆ. ಬಾಂಗ್ಲಾ ತಂಡದಲ್ಲಿ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳು ಗಾಯಕ್ಕೆ ತುತ್ತಾಗಿದ್ದರು.

    ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್ ಭಾನುವಾರ ಮುಕ್ತಾಯವಾಗಿತ್ತು. ಈ ಮೂಲಕ ಭಾರತವು ಮೊದಲ ಪಿಂಕ್ ಬಾಲ್ ಟೆಸ್ಟ್ ಅನ್ನು ಒಂದು ಇನ್ನಿಂಗ್ಸ್ ಹಾಗೂ 46 ರನ್‍ಗಳಿಂದ ಗೆದ್ದಿತ್ತು. ಬಾಂಗ್ಲಾ ತಂಡದ ಕೆಲ ಆಟಗಾರರು ಸೋಮವಾರ ತರವಿಗೆ ತೆರಳಿದ್ದರು.