Tag: ಕ್ರಿಕೆಟರ್

  • ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ

    ಅರ್ಧಶತಕ ಗಳಿಸುವ ಮುನ್ನವೇ ಬಂದ ಜವರಾಯ – ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಹಾರಿತು ಪ್ರಾಣಪಕ್ಷಿ

    ಚಂಡೀಗಢ: ಹೃದಯಾಘಾತಕ್ಕೆ (Heart attack) ಬಲಿಯಾಗುವವರ ಸಂಖ್ಯೆ ಹೆಚ್ಚಾಗಿತ್ತಲೇ ಇದ್ದು, ಇಂದು ಪಂಜಾಬ್‌ನ ಫೀರೋಜ್‌ಪುರ್‌ನಲ್ಲಿ ಕ್ರಿಕೆಟ್ (Cricket) ಆಡುವಾಗಲೇ ಪಿಚ್‌ನಲ್ಲಿ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಸಿಕ್ಸರ್ ಹೊಡೆದ ಹತ್ತೇ ಸೆಕೆಂಡ್‌ನಲ್ಲಿ ಬ್ಯಾಟರ್ ಮೃತಪಟ್ಟಿದ್ದಾನೆ.

    ಭಾನುವಾರ ಪಂಜಾಬ್​ನಲ್ಲಿ ನಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಯುವಕನೊಬ್ಬ ಬಲವಾದ ಸಿಕ್ಸರ್ ಬಾರಿಸಿದ್ದಾನೆ. ಇದಾದ ನಂತರ ನಾನ್ ಸ್ಟ್ರೈಕ್​ ಆಟಗಾರನ ಬಳಿಗೆ ಬಂದಿದ್ದ ಆತ ಕ್ರೀಸ್‌ನಲ್ಲೇ ಕುಸಿದು ಬಿದ್ದಿದ್ದಾನೆ. ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಸಹ ಆಟಗಾರನಿಗೂ ಅರಿಯದಾಗಿದೆ. ಕೂಡಲೇ ಆತ ಕುಸಿದು ಬಿದ್ದಿದ್ದ ಆಟಗಾರನನ್ನು ಮೇಲೆತ್ತಲ್ಲು ಪ್ರಯತ್ನಿಸಿದ್ದಾನೆ. ಇತ್ತ ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಆತನ ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಹೃದಯಾಘಾತದಿಂದ ಆ ಯುವ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿಹೋಗಿದೆ.

    ಸಾಂದರ್ಭಿಕ ಚಿತ್ರ

    10 ಸೆಕೆಂಡ್‌ನಲ್ಲಿ ಏನಾಯ್ತು?
    ಇಂದು (ಜೂ.29) ಬೆಳಗ್ಗೆ ಪಂಜಾಬ್​ನ ಗುರುಹರ್ ಸಹಾಯ್ ಪ್ರದೇಶದ ಡಿಎವಿ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ, ಹರ್ಜೀತ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲರ್ ಎಸೆದ ವೇಗದ ಚೆಂಡನ್ನು ಬೌಂಡರಿಯಿಂದಾಚೆಗೆ ಬೃಹತ್ ಸಿಕ್ಸರ್ ಬಾರಿಸಿದರು. ಇದರ ನಂತರ, ನಾನ್ ಸ್ಟ್ರೈಕರ್ ಬಳಿಗೆ ಹೆಜ್ಜೆ ಹಾಕಿದ್ದಾನೆ. ಆದರೆ ಆ ವೇಳೆಗೆ ಆತನಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತ ಕ್ರೀಸ್‌ನಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಸಹ ಆಟಗಾರ ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.

    ಇದಾದ ನಂತರ, ಮೈದಾನದಲ್ಲಿದ್ದ ಇತರ ಆಟಗಾರರು ಕೂಡ ಹರ್ಜೀತ್ ಬಳಿಗೆ ಬಂದು ಅವರನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ, ಆದರೆ ಆ ಹೊತ್ತಿಗೆ ಹರ್ಜೀತ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಕೆಲವು ಆಟಗಾರರು ಅವನಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರಾದರೂ ಅವನನ್ನು ಬದುಕಿಸಲು ಸಾಧ್ಯವಾಗಿಲ್ಲ. ಇದೀಗ ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಹೃದಯಾಘಾತಕ್ಕೂ ಮುನ್ನ ಹರ್ಜೀತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 49 ರನ್ ಕಲೆಹಾಕಿದ್ದರು. ಅದರೆ ಅವರ ಅರ್ಧಶತಕವನ್ನು ಪೂರೈಸುವ ಮುನ್ನವೇ ಹೃದಯಾಘಾತವೆಂಬ ಮಾರಿ ಅವರ ಇಹಲೋಕ ಯಾತ್ರಗೆ ಫುಲ್​ಸ್ಟಾಪ್ ಹಾಕಿದೆ.

  • ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್‌ ಇಂಡಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಗರಂ!

    ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್‌ ಇಂಡಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಗರಂ!

    ನವದೆಹಲಿ/ಕ್ಯಾನ್ಬೆರಾ: ಏರ್‌ ಇಂಡಿಯಾ (Air India) ವಿಮಾನ ವಿಳಂಬವಾಗಿದ್ದಕ್ಕೆ ಆಸ್ಟ್ರೇಲಿಯಾ ಮಾಜಿ ಸ್ಟಾರ್‌ ಕ್ರಿಕೆಟರ್‌ ಡೇವಿಡ್‌ ವಾರ್ನರ್‌ (David Warner) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʻʻನಾವು ಪೈಲಟ್‌ಗಳಿಲ್ಲದ ಏರ್‌ ಇಂಡಿಯಾ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ವಿಮಾನದಲ್ಲಿ ಕಾಯುತ್ತಿದ್ದೇವೆ. ಪೈಲಟ್‌ಗಳಿಲ್ಲದ ವಿಮಾನಕ್ಕೆ ನೀವು ಏಕೆ ಪ್ರಯಾಣಿಕರನ್ನು ಹತ್ತಿಸುತ್ತೀರಿ?ʼ ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    ಇದಕ್ಕೆ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ, ಬೆಂಗಳೂರು ಏರ್‌ಪೋರ್ಟ್‌ನಿಂದ (Bengaluru Airport) ಹವಾಮಾನ ಸಂಬಂಧಿತ ಅಡಚಣೆಗಳಿಂದಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳ ಮಾರ್ಗ ಬದಲಾವಣೆ ಮತ್ತು ಕೆಲ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಹೀಗಾಗಿ ನಿಮ್ಮ ವಿಮಾನ ನಿರ್ವಹಿಸುವ ಸಿಬ್ಬಂದಿಯನ್ನ ತಡೆಯಹಿಡಿಯಲಾಗಿದ್ದು, ವಿಳಂಬಕ್ಕೆ ಕಾರಣವಾಗಿದೆ.. ನಿಮ್ಮ ತಾಳ್ಮೆಯನ್ನು ಪ್ರಸಂಶಿಸುತ್ತೇವೆ, ನಮ್ಮ ವಿಮಾನ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.

    ಡೇವಿಡ್‌ ವಾರ್ನರ್‌ ಅವರು ಟ್ರಾವೆಲ್‌ ಏಜೆಂಟ್‌ ಮೂಲಕ ಟಿಕೆಟ್‌ ಬುಕ್‌ ಮಾಡಿದ್ದರು. ಮರುಪಾವತಿ ಲಭ್ಯವಿಲ್ಲದ ಟಿಕೆಟ್‌ ಬುಕ್‌ ಮಾಡಿದ ಕಾರಣ ಟ್ರಾವೆಲ್‌ ಏಜೆಂಟ್‌ ಟಿಕೆಟ್‌ ಹಣ ವಾಪಸ್‌ ನೀಡಲು ನಿರಾಕರಿಸಿದ್ದಾರೆ ಎಂದು ಸಹ ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌

    ಕಳೆದ ಫೆಬ್ರವರಿಯಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಮುರಿದ ಸೀಟನ್ನು ನೀಡಿದ್ದಕ್ಕೆ ಏರ್‌ ಇಂಡಿಯಾ ವಿರುದ್ಧ ಕಿಡಿ ಕಾರಿದ್ದರು. ಇತ್ತೀಚೆಗೆ ಭಾರತೀಯ-ಕೆನಡಾದ ನಟಿ ಲೀಸಾ ರೇ ಸಹ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಏರ್‌ ಇಂಡಿಯಾವನ್ನು ಟೀಕಿಸಿದ್ದರು. ಇದನ್ನೂ ಓದಿ: ಮುರಿದ ಸೀಟ್‌ ನೀಡಿ ಮೋಸ ಮಾಡಿದ್ದೀರಿ: ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕೆಂಡಾಮಂಡಲ

  • ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಬೆಂಗಳೂರು: 40 ಪ್ರಾಕ್ಟೀಸ್‌ ಪಿಚ್‌ಗಳು, ಇಂಡೋರ್‌ ಕ್ರಿಕೆಟ್‌ ಪಿಚ್‌ ಹಾಗೂ ಒಲಿಂಪಿಕ್ಸ್‌ ಗಾತ್ರದ ಈಜುಕೊಳ ಸೇರಿ ಅನೇಕ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (NCA) ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

    ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬಿಸಿಸಿಐನ (BCCI) ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನಾಯಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

    ಉದ್ಘಾಟನೆಗೊಳ್ಳಲಿರುವ ನೂತನ ಕ್ರಿಕೆಟ್‌ ಅಕಾಡೆಮಿಯಲ್ಲಿ ಮೂರು ವಿಶ್ವದರ್ಜೆಯ ಆಟದ ಮೈದಾನಗಳು (World class playing grounds), 45 ಅಭ್ಯಾಸ ಪಿಚ್‌ಗಳು, ಇಂಡೋರ್‌ ಕ್ರಿಕೆಟ್‌ ಪಿಚ್‌ಗಳು, ಒಲಿಂಪಿಕ್ಸ್‌ ಗಾತ್ರದ ಈಜುಕೊಳ (Olympic size swimming Pool), ತರಬೇತಿ, ಚೇತರಿಕೆ ಹಾಗೂ ಕ್ರೀಡಾ ವಿಜ್ಞಾನ ಸಂಸ್ಥೆಯಂತಹ ಸೌಲಭ್ಯಗಳು ಇರಲಿವೆ ಎಂದು ಜಯ್‌ ಶಾ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಅಕಾಡೆಮಿಯು ನಮ್ಮ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಆಟಗಾರರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಹಾಗೂ ಆಟಗಾರರಿಗೆ ಉತ್ತಮ ವಾತಾವರಣ ಕಲ್ಪಿಸಲು ಸಹಾಯಕವಾಗುತ್ತದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: IND vs SL ODI: ಟೀಂ ಇಂಡಿಯಾ ಆಲೌಟ್‌; ಗೆಲುವಿಗೆ ಬೇಕಿದ್ದ 1 ರನ್‌ ಗಳಿಸಲು ವಿಫಲ – ಲಂಕಾ ವಿರುದ್ಧದ ಚೊಚ್ಚಲ ಪಂದ್ಯ ಟೈ 

  • ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

    ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

    ಜೈಪುರ: ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು ನಟ ಕಿಚ್ಚ ಸುದೀಪ್‌ ಅವರಿಗೆ ರಾಜಸ್ಥಾನ್‌ ತಂಡದ ಜೆರ್ಸಿಯನ್ನು (Rajasthan Royals Jersey) ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.

    ಕಡುನೀಲಿ ಮತ್ತು ತಿಳಿಗೆಂಪು (ಪಿಂಕ್‌) ಮಿಶ್ರಿತ ಬಣ್ಣದ ಜೆರ್ಸಿ ಇದಾಗಿದೆ. ಜೆರ್ಸಿ ಹಿಂಭಾಗದಲ್ಲಿ ಸುದೀಪ್‌ (Kichcha Sudeepa) ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.

    ರಾಜಸ್ಥಾನ್‌ನೊಂದಿಗೆ ಅವಿನಾಭಾವ ಸಂಬಂಧ:
    ಕ್ರಿಕೆಟ್‌ ಎಂದರೆ ಸುದೀಪ್‌ಗೆ ತುಂಬಾ ಅಚ್ಚುಮೆಚ್ಚು. ಬಾಲ್ಯದಿಂದಲೂ ಕ್ರಿಕೆಟ್‌ನ ಜೊತೆ ಉತ್ತಮ ನಂಟು ಹೊಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸುದೀಪ್‌, ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ರಾಜಸ್ಥಾನ್‌ ರಾಯಲ್ಸ್‌ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್‌ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಈ ಹಿಂದೆಯೂ ಕಿಚ್ಚ ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್‌ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್‌ ಕಾರ್ಡ್‌ ಮಾಡಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.

    ಬ್ಯಾಟ್‌ ಗಿಫ್ಸ್‌ ಕೊಟ್ಟಿದ್ದ ಜೋಸ್‌:
    2022ರ ಐಪಿಎಲ್‌ ಟೂರ್ನಿಯಲ್ಲಿ 863 ರನ್‌ ಬಾರಿಸುವ ಮೂಲಕ ಆವೃತ್ತಿಯ ಆರೆಂಜ್‌ ಕ್ಯಾಪ್‌ ವಿನ್ನರ್‌ ಆಗಿದ್ದ ಜೋಸ್‌ ಬಟ್ಲರ್‌, ನೆನಪಿನ ಕಾಣಿಕೆಯಾಗಿ ಸುದೀಪ್‌ಗೆ ರನ್‌ ಬಾರಿಸಿದ್ದ ಬ್ಯಾಟನ್ನೇ ಉಡುಗೊರೆಯಾಗಿ ಕೊಟ್ಟಿದ್ದರು. ಇದೀಗ ರಾಜಸ್ಥಾನ್‌ ರಾಯಲ್ಸ್‌ ತಂಡ ಮತ್ತೊಮ್ಮೆ ಜೆರ್ಸಿಯನ್ನು ಸುದೀಪ್‌ಗೆ ಉಡುಗೊರೆಯಾಗಿ ನೀಡಿದೆ.

    ಧನ್ಯವಾದ ಹೇಳಿದ ಸುದೀಪ್‌:
    ಜೆರ್ಸಿಯ ಚಿತ್ರಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಧನ್ಯವಾದಗಳು. ವರ್ಷ-ವರ್ಷವೂ ನಿಮ್ಮ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತಿದೆ. ತಂಡಗಳ ಅದ್ಭುತ ಪ್ರದರ್ಶನಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಅಗ್ರಸ್ಥಾನದಲ್ಲಿ ರಾಜಸ್ಥಾನ:
    2023ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ 2024ರ ಆವೃತ್ತಿಯಲ್ಲಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. 10 ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತಿರುವ ರಾಜಸ್ಥಾನ್‌ +0.622 ನೆಟ್‌ ರನ್‌ರೇಟ್‌ ಹಾಗೂ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

  • ಮೈದಾನದ ಹೊರಗೂ ದಾಖಲೆ ಬರೆದ ವಿರಾಟ್ – ಕೊಹ್ಲಿ ಈಗ ಸಾವಿರ ಕೋಟಿ ಒಡೆಯ

    ಮೈದಾನದ ಹೊರಗೂ ದಾಖಲೆ ಬರೆದ ವಿರಾಟ್ – ಕೊಹ್ಲಿ ಈಗ ಸಾವಿರ ಕೋಟಿ ಒಡೆಯ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇದೀಗ ಗ್ರೌಂಡ್ ಹೊರಗೂ ದಾಖಲೆ ಮಾಡಿದ್ದಾರೆ.

    ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ 25.2 ಕೋಟಿ ಅಭಿಮಾನಿಗಳನ್ನು ಸಂಪಾದಿಸುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈಗ ಅವರ ಆಸ್ತಿಯ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ.

    ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ಸ್ಟಾಕ್ ಗ್ರೋ ಪ್ರಕಾರ, ಕೊಹ್ಲಿಯ ಆಸ್ತಿ ಮೌಲ್ಯ (Net Worth) 1,050 ಕೋಟಿ ರೂ. ಎಂದು ಅಂದಾಜಿಸಿದೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    34 ವರ್ಷದ ಕೊಹ್ಲಿ 2023ರ ವಾರ್ಷಿಕ ಒಪ್ಪಂದದ ಪ್ರಕಾರ `A+’ ಶ್ರೇಣಿಯಲ್ಲಿ ಆಯ್ಕೆಯಾಗಿದ್ದು ವಾರ್ಷಿಕ 7 ರೂ. ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ T20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಅಲ್ಲದೇ RCB ಮಾಜಿ ನಾಯಕಾಗಿರುವ ಅವರು IPL ಒಂದು ಸೀಸನ್‌ಗೆ 15 ಕೋಟಿ ರೂ. ಗಳಿಸುತ್ತಾರೆ. ಜೊತೆಗೆ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್‌ ಬಿಝ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ 7 ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಅಲ್ಲದೇ 18 ಸಂಸ್ಥೆಗಳ ಜಾಹೀರಾತುಗಳಿಗೆ ಬ್ರ‍್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ಕಿಂಗ್ ಕೊಹ್ಲಿ ಪ್ರತಿ ಬ್ರ‍್ಯಾಂಡ್‌ನ ಜಾಹೀರಾತಿಗೂ 7.50 ಕೋಟಿ ರೂ. ನಿಂದ 10 ಕೋಟಿ ರೂ. ಪಡೆಯುತ್ತಾರೆ. ಇದರಿಂದಲೇ ಅವರು ವಾರ್ಷಿಕವಾಗಿ ಸುಮಾರು 175 ಕೋಟಿ ರೂ. ಗಳಿಸುತ್ತಾರೆ. ಅಷ್ಟೇ ಅಲ್ಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ನಿಂದ 8.9 ಕೋಟಿ ರೂ., ಒಂದು ಟ್ವಿಟ್ಟರ್ ಪೋಸ್ಟ್‌ನಿಂದ 2.5 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ.

    ಆಸ್ತಿಗಳ ಮೇಲೂ ಸಾಕಷ್ಟು ಹೂಡಿಕೆ ಮಾಡಿರುವ ಕೊಹ್ಲಿ ಮುಂಬೈನಲ್ಲಿ 34 ಕೋಟಿ ರೂ. ಬೆಲೆ ಬಾಳುವ ಹಾಗೂ ಗುರುಗ್ರಾಮ್‌ನಲ್ಲಿ 80 ಕೋಟಿ ಮೌಲ್ಯದ ಮನೆಯನ್ನ ಹೊಂದಿದ್ದಾರೆ. 31 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರನ್ನೂ ಹೊಂದಿದ್ದಾರೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

  • ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಇಂಡಿಯನ್ ಕ್ರಿಕೆಟರ್ ಶುಭಮನ್ ಗಿಲ್ (Shubaman Gill) ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅಭಿಮಾನಿಗಳಿಗೆ ಶುಭಮನ್ ಸಿಹಿಸುದ್ದಿ ನೀಡಿದ್ದಾರೆ. ಬಣ್ಣದ ಲೋಕಕ್ಕೆ ಶುಭಮನ್ ಗಿಲ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಮಾಧುರಿ ದೀಕ್ಷಿತ್ ಮೇಲೆ ಗರಂ ಆದ ಉರ್ಫಿ ಜಾವೇದ್

    ಕ್ರಿಕೆಟ್ ಕ್ಷೇತ್ರಕ್ಕೂ ಬಾಲಿವುಡ್‌ಗೂ (Bollywood) ನಂಟಿದೆ. ಸೆಲೆಬ್ರಿಟಿ ಅಂದಮೇಲೆ ಅಫೇರ್, ಲವ್, ಡೇಟಿಂಗ್ ಎಲ್ಲವೂ ಸಹಜ. ಶುಭಮನ್ ಗಿಲ್ ಕೂಡ ಕ್ರಿಕೆಟ್‌ಗಿಂತ ಸಾರಾ (Sara) ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸದ್ದು ಮಾಡಿದ್ದರು.

    ಅಕ್ರಾಸ್ ದಿ ಸ್ಪೈಡರ್ ವರ್ಸ್ (The Spider Man) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಗಿಲ್ ಕಾಲಿಡುತ್ತಿದ್ದಾರೆ. ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ- ಪಂಜಾಬಿ ವರ್ಷನ್‌ನಲ್ಲಿ ಮುಖ್ಯ ನಾಯಕನಿಗೆ ಶುಭಮನ್ ವಾಯ್ಸ್ (Voice Dub) ನೀಡಿದ್ದಾರೆ. ಈ ಅನಿಮೇಟೆಡ್ ಟ್ರೈಲರ್ ಜೂನ್ 2ರಂದು ರಿಲೀಸ್ ಆಗಲಿದೆ.

     

    View this post on Instagram

     

    A post shared by Sony Pictures IN (@sonypicturesin)

    ಕ್ರಿಕೆಟ್ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿದ ಶುಭಮನ್ ಗಿಲ್, ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಕಂಠದಾನ ಮೂಲಕ ಬಣ್ಣದ ಜಗತ್ತಿಗೆ ಹೆಜ್ಜೆ ಇಡ್ತಿದ್ದಾರೆ. ಈ ಬಗ್ಗೆ ಶುಭಮನ್, ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಫ್ಯಾನ್ಸ್, ಯುವ ಕ್ರಿಕೆಟಗ ಶುಭಮನ್‌ಗೆ ವಿಶ್ ಮಾಡಿದ್ದಾರೆ.

  • ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಮುಂಬೈ: ಭಾರತೀಯ ಕ್ರಿಕೆಟಿಗ (Indian Cricketer) ಕೇದಾರ್‌ ಜಾಧವ್‌ (Kedar Jadhav) ಅವರ ತಂದೆ ನಾಪತ್ತೆಯಾಗಿದ್ದಾರೆ ಎಂದು ಜಾಧವ್‌ ಸೋಮವಾರ ಪುಣೆಯ (Pune) ಅಲಂಕಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 75 ವರ್ಷದ ಮಹದೇವ್ ಸೋಪಾನ್ ಜಾಧವ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮೂಲಗಳ ಪ್ರಕಾರ, ಕೇದಾರ್ ಜಾಧವ್‌ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರುಡ್ ಪ್ರದೇಶದ ನಿವಾಸಿಗಳು. ಮಹದೇವ್‌ ಸೋಮವಾರ ಮನೆಯವರಿಗೆ ತಿಳಿಸದೇ ಹೊರಗಡೆ ಹೋಗಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸಂಜೆವರೆಗೂ ಹುಡುಕಾಡಿದರೂ ಸಿಗದಿದ್ದಾಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಆರಂಭಿಸಿದ್ದು, ಇತರ ಪೊಲೀಸ್‌ ಠಾಣೆಗೂ ಜಾಧವ್‌ ಅವರ ತಂದೆ ಫೋಟೋವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

  • ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ಮುಂಬೈ: ಪ್ರತಿಯೊಬ್ಬರ ಜೀವನಕ್ಕೂ ಅಮ್ಮನೇ ಪ್ರಪಂಚ. ಆಕೆಯ ತ್ಯಾಗ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ಅಮ್ಮನಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೂ ಒಂದು ದಿನವಿದೆ. ಅದಕ್ಕಾಗಿಯೇ ಪ್ರತಿ ವರ್ಷವು ಮೇ ತಿಂಗಳ 2ನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 8 ರಂದು ಆಚರಿಸಲಾಗುತ್ತಿದೆ.

    SACHIN

    ಈ ದಿನದಂದು ಪ್ರತಿಯೊಬ್ಬರು ತಮ್ಮ ಅಮ್ಮನಿಗಾಗಿ ವಿಶೇಷ ಉಡುಗೊರೆಗಳನ್ನು ನೀಡಿ, ಶುಭಾಶಯ ಕೋರುತ್ತಾರೆ. ಇಡೀ ಭಾರತವೇ ತಾಯಂದಿರ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಪ್ರಮುಖ ಕ್ರಿಕೆಟಿಗರು ಅಮ್ಮನನ್ನು ನೆನೆದು ಶುಭಕೋರಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಮೊದಲಾದವರು ತಮ್ಮ ತಾಯಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.  ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    RCB ಆರಂಭಿಕ ಆಟಗಾರರೂ ಆಗಿರುವ ವಿರಾಟ್‌ಕೊಹ್ಲಿ ಟ್ವಿಟ್ಟರ್‌ನಲ್ಲಿ, ಎಲ್ಲಾ ತಾಯಂದಿರಿಗೂ ಬಹಳಷ್ಟು ಪ್ರೀತಿ ಮತ್ತು ಸಂತೋಷ ತರಲಿ. ನಿಮ್ಮ ಶಕ್ತಿಗೆ ಸಾಟಿಯಿಲ್ಲ. ನಿಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಟ್ವಿಟ್ಟರ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

    ಸಚಿನ್ ತೆಂಡೂಲ್ಕರ್ ಸಹ ತಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ಅಮ್ಮನ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಮಗೆ ಜಗತ್ತಿನಲ್ಲಿ ಸಾವಿರ ಚಿಂತೆಗಳಿರಬಹುದು. ಆದರೆ ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದ್ದೇವೆಯೇ ಎಂಬುದೇ ನಮ್ಮ ತಾಯಿಯ ಮುಖ್ಯಚಿಂತೆಯಾಗಿ ಉಳಿದಿರುತ್ತದೆ. ಅಂತಹ ತಾಯಿಯ ಪ್ರೀತಿ. ನಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ನನ್ನ ಆಕೆ ಇಲ್ಲಿದ್ದಾರೆ ಎಂದು ಬರೆದಿದ್ದಾರೆ.

    ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ತಾಯಂದಿರ ದಿನಕ್ಕೆ ಶುಭಕೋರಿ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ನಾಯಕ ಕೇನ್ ವಿಲಿಯಮ್ಸನ್, ಗ್ಲೆನ್‌ಫಿಲಿಪ್ಸ್, ಶಶಾಂಕ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಮೊದಲಾದವರು ತಾಯಂದಿರ ದಿನದ ಶುಭಾಶಯ ಕೋರಿದ್ದಾರೆ. ಆರ್‌ಸಿಬಿಯ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಶೇಷ ದಿನದಂದು ಎಲ್ಲಾ ತಾಯಿಯರಿಗೆ ಶುಭ ಹಾರೈಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ತಮ್ಮ ದಿವಂಗತ ತಾಯಿಗಾಗಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಪ್ರಿಯ ಅಮ್ಮ, ನೀವು ಹಿಂತಿರುಗಿ ಸ್ವಲ್ಪ ಸಮಯ ಇರಬಹುದೇ, ನಾನು ನಿಮ್ಮ ಧ್ವನಿಯನ್ನು ಕೇಳಲು ಮತ್ತು ನೀವು ನಗುವುದನ್ನು ನೋಡಲು ಬಯಸುತ್ತೇನೆ. ನಾನು ನಿನ್ನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಬಯಸುತ್ತೇನೆ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ, ನಿನ್ನನ್ನು ನೆನಪಿಸಿಕೊಳ್ಳುತ್ತೇನೆ. ಪ್ರತಿದಿನ ನೆನಪಿಸಿಕೊಳ್ಳುತ್ತೇನೆ. ಆದರೆ ನಿನ್ನನ್ನು ಕಳೆದುಕೊಂಡಿರುವುದು ಎಂದಿಗೂ ದೂರವಾಗದ ನೋವು. ಅಮ್ಮಂದಿರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದು, ತಮ್ಮ ತಾಯಿಯ ಸಮಾಧಿ ಬಳಿ ಪ್ರಾರ್ಥಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

  • ಪಠಾಣ್ VS ಮಿಶ್ರಾ ಟ್ವೀಟ್ ವಾರ್ – ನಾನು ಸಂವಿಧಾನ ಅನುಸರಿಸುತ್ತೇನೆ ಎಂದ ಪಠಾಣ್

    ಪಠಾಣ್ VS ಮಿಶ್ರಾ ಟ್ವೀಟ್ ವಾರ್ – ನಾನು ಸಂವಿಧಾನ ಅನುಸರಿಸುತ್ತೇನೆ ಎಂದ ಪಠಾಣ್

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಅಮಿತ್ ಮಿಶ್ರಾ ಅವರ ನಡುವೆ ನೆನ್ನೆಯಿಂದಲೂ ಟ್ವೀಟ್ ವಾರ್ ನಡೆಯುತ್ತಿದ್ದು, ಇಂದೂ ಸಹ ಟಾಪ್ ಟ್ರೆಂಡಿಗ್ ಟ್ವೀಟ್ ಆಗಿದೆ.

    ನೆನ್ನೆ ಅಮಿತ್ ಮಿಶ್ರಾ ಅವರು ಮಾಡಿದ್ದ ಟ್ವೀಟ್‌ಗೆ ಮತ್ತೆ ತಿರುಗೇಟು ನೀಡಿರುವ ಇರ್ಫಾನ್ ಪಠಾಣ್ ತಮ್ಮ ಟ್ವೀಟ್‌ನಲ್ಲಿ, ನಾನು ಭಾರತದ ಸಂವಿಧಾನವನ್ನು ಯಾವಾಗಲೂ ಅನುಸರಿಸುತ್ತೇನೆ. ನಮ್ಮ ಸುಂದರ ದೇಶದ ಪ್ರತಿಯೊಬ್ಬ ನಾಗರಿಕನೂ ಇದನ್ನು ಅನುಸರಿಸಬೇಕು ಎಂದು ಒತ್ತಾಯಿಸುತ್ತೇನೆ. ದಯವಿಟ್ಟು ಓದಿ ಮತ್ತೆ ಓದಿ… ಎಂದು ಹೇಳಿದ್ದಾರೆ. ಇದರೊಂದಿಗೆ ಭಾರತ ಸಂವಿಧಾನದ ಪೀಠಿಕೆಯ ಚಿತ್ರವನ್ನು ಹಾಕಿದ್ದಾರೆ. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

    amit mishra irfan pathan

    ಟ್ವೀಟ್ ವಾರ್‌ನ ಅಸಲಿ ಗುಟ್ಟೇನು?: ಭಾರತದ ವೇಗದ ಬೌಲರ್ ಆಗಿದ್ದ ಇರ್ಫಾನ್ ಪಠಾಣ್ ಯಾವುದೇ ಘಟನೆಯನ್ನು ಉಲ್ಲೇಖಿಸದೇ, ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ…..’ ಎಂದು ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‌ಗೆ ಟಾಂಗ್ ಕೊಡುವಂತೆ ಮಾಜಿ ಬಲಗೈ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ. ನಮ್ಮ ಸಂವಿಧಾನವೇ ನಮ್ಮ ಮೊದಲ ಗ್ರಂಥ ಎಂಬುದನ್ನು ಕೆಲವರು ಅರಿತುಕೊಂಡಾಗ ಮಾತ್ರ’ ಎಂದು ಬರೆದಿದ್ದರು. ಇದನ್ನೂ ಓದಿ: ಡೆಲ್ಲಿಯ ಪ್ರವೀಣ್‌ಗೆ ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಈಗ ಇಬ್ಬರ ಟ್ವೀಟ್‌ಗಳ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇರ್ಫಾನ್ ಪಠಾಣ್ ಸರಿಯಾದ ಟ್ವೀಟ್ ಮಾಡಿದ್ದಾರೆ ಎಂದು ಕೆಲವು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಅಮಿತ್ ಮಿಶ್ರಾ ಸರಿಯಾದ ರೀತಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಸಂವಿಧಾನವೇ ಮೊದಲಾಗಬೇಕೆ ಹೊರತು, ಧರ್ಮ ಗ್ರಂಥವಲ್ಲ. ಬಲಗೈ ಲೆಗ್ ಸ್ಪಿನ್ನರ್‌ಗೆ ಎಡಗೈ ಬ್ಯಾಟರ್ ಪಠಾಣ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

  • ಮುಂಬೈನ ಯುವ ಕ್ರಿಕೆಟಿಗ ನೇಣಿಗೆ ಶರಣು

    ಮುಂಬೈನ ಯುವ ಕ್ರಿಕೆಟಿಗ ನೇಣಿಗೆ ಶರಣು

    ಮುಂಬೈ: 27 ವರ್ಷದ ಯುವ ಕ್ರಿಕೆಟ್ ಆಟಗಾರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮುಂಬೈನ 27 ವರ್ಷದ ಕ್ರಿಕೆಟಿಗ ಕರಣ್ ತಿವಾರಿ ಸೋಮವಾರ ರಾತ್ರಿ ತಮ್ಮ ಮಲಾಡ್ ಪ್ರದೇಶದಕ್ಕಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರಣ್ ತಿವಾರಿ ಮುಂಬೈ ವೃತ್ತಿಪರ ಕ್ರಿಕೆಟ್ ತಂಡದ ಭಾಗವಾಗಿರಲಿಲ್ಲ. ಆದರೆ ಅವರು ಅವರಿಗೆ ನೆಟ್ ಬೌಲರ್ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ತಿವಾರಿ ವೃತ್ತಿಜೀವನದಲ್ಲಿ ಯಶಸ್ಸು ಸಿಗದೆ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

    ಕರಣ್ ತಿವಾರಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ತನ್ನ ತಾಯಿ ಮತ್ತು ಸಹೋದರನೊಂದಿಗೆ ಮುಂಬೈನ ಮಲಾಡ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜೊತೆಗೆ ಕ್ರಿಕೆಟರ್ ಆಗಬೇಕು ಎಂಬ ಕನಸು ಕಂಡಿದ್ದ ತಿವಾರಿ ಮುಂಬೈನ ಹಲವಾರು ಕ್ಲಬ್‍ಗಳಿಗೆ ಆಡಿದ್ದರು. ಜೊತೆಗೆ ದೇಶೀಯ ಕ್ರಿಕೆಟ್ ಆಟಗಾರಿಗೆ ನೆಟ್ ಬಾಲ್ ಬೌಲರ್ ಆಗಿದ್ದರು. ಇದರಿಂದ ಮನನೊಂದಿದ್ದ ತಿವಾರಿ ತಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ನಂತರ ತಿವಾರಿ ಮನೆಯಿಂದ ಹೊರಗೆ ಬಾರದೇ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ತನ್ನ ರಾಜಸ್ಥಾನದಲ್ಲಿರುವ ಗೆಳೆಯರಿಗೆ ಕರೆ ಮಾಡಿ ನಾನು ಏನನ್ನೂ ಸಾಧಿಸಲು ಆಗಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಂತರ ಸ್ನೇಹಿತರು ತಿವಾರಿ ಸಹೋದರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆದರೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಕರಣ್ ತಿವಾರಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಕುರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.