Tag: ಕ್ರಯೋಜೆನಿಕ್

  • ಸುಳ್ಳು ಕೇಸ್ ಹಾಕಿದ್ದಕ್ಕೆ ಇಸ್ರೋ ವಿಜ್ಞಾನಿಗೆ 50 ಲಕ್ಷ ಪರಿಹಾರ ನೀಡಿ – ಕೇರಳಕ್ಕೆ ಸುಪ್ರೀಂ ಆದೇಶ

    ಸುಳ್ಳು ಕೇಸ್ ಹಾಕಿದ್ದಕ್ಕೆ ಇಸ್ರೋ ವಿಜ್ಞಾನಿಗೆ 50 ಲಕ್ಷ ಪರಿಹಾರ ನೀಡಿ – ಕೇರಳಕ್ಕೆ ಸುಪ್ರೀಂ ಆದೇಶ

    ನವದೆಹಲಿ: ಇಸ್ರೊ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ವಿಜ್ಞಾನಿ ನಂಬಿ ನಾರಾಯಣನ್ ಸುಳ್ಳು ಕೇಸ್ ದಾಖಲಿಸಿದ್ದಕ್ಕಾಗಿ ಅವರಿಗೆ 50 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎಎಂ ಖಾನ್ವಿಲ್ಕರ್, ಚಂದ್ರಚೂಡ್ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದ್ದು, ಪರಿಹಾರ ಧನವನ್ನು 8 ವಾರದ ಒಳಗಡೆ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ನಂಬಿ ನಾರಾಯಣನ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದ ಕೇರಳ ಪೊಲೀಸರ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಡಿಕೆ ಜೈನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

    ಏನಿದು ಪ್ರಕರಣ?
    ಇಸ್ರೋದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದಾಗ ಈ ತಂತ್ರಜ್ಞಾನವನ್ನು ನಂಬಿ ನಾರಾಯಣನ್ ಮಾಲ್ಡಿವ್ಸ್ ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 1994ರ ನವೆಂಬರ್ 30 ರಂದು ಕೇರಳ ಪೊಲೀಸರು ನಂಬಿ ನಾರಾಯಣನ್ ಅವರನ್ನು ಬಂಧಿಸಿದ್ದರು. ನಂತರ ಸಿಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬೇಹುಗಾರಿಕೆ ನಡೆದಿಲ್ಲ ಎಂದು ಸಿಬಿಐ ಹೇಳಿತ್ತು. ನಂತರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 1998ರಲ್ಲಿ ಈ ಪ್ರಕರಣದಲ್ಲಿ ಆಪಾದಿತರೆಂದು ಪರಿಗಣಿಸಲಾಗಿರುವ ನಂಬಿ ನಾರಾಯಣನ್, ಇಸ್ರೊ ವಿಜ್ಞಾನಿ ಡಿ. ಶಶಿಕುಮಾರನ್ ಮತ್ತು ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳಾದ ಎಸ್.ಕೆ. ಶರ್ಮಾ ಮತ್ತು ಚಂದ್ರಶೇಖರನ್, ಮಾಜಿ ಐಜಿಪಿ ಶ್ರೀವಾತ್ಸವ ಹಾಗೂ ಮಾಲ್ಡೀವ್ಸ್ ನ ಇಬ್ಬರು ಮಹಿಳೆಯರಾದ ಮ್ಯಾರಿಯಮ್ ರಶೀಡಾ ಮತ್ತು ಫೌಜಿಯಾ ಹಸನ್ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು.

    ಇದಾದ ಬಳಿಕ ನಾರಾಯಣನ್ ಅವರು, ತಮ್ಮ ವೃತ್ತಿ ಜೀವನಕ್ಕೆ ಕಳಂಕ ತಂದ ಸರಕಾರದ ಕ್ರಮವನ್ನು ಪ್ರಶ್ನಿಸಿ 10 ಲಕ್ಷ ರೂ. ಪರಿಹಾರ ಧನಕ್ಕೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್‍ಎಚ್‍ಆರ್’ಸಿ) ಮೊರೆ ಹೋಗಿದ್ದರು. ಎನ್‍ಎಚ್‍ಆರ್‍ಸಿ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇರಳ ಹೈಕೋರ್ಟ್ ಸಹ ನಂಬಿ ನಾರಾಯಣನ್ ಪರವಾಗಿ ತೀರ್ಪು ನೀಡಿ ಕೇರಳ ಸರ್ಕಾರಕ್ಕೆ 10 ಲಕ್ಷ ರೂ. ನೀಡುವಂತೆ ಸೂಚಿಸಿತ್ತು. ಈ ಪ್ರಕರಣವು ಕೇರಳದ ಮುಖ್ಯಮಂತ್ರಿ ಆಗಿದ್ದ ಕೆ.ಕರುಣಾಕರನ್ ಅವರ ಹುದ್ದೆಗೆ ಆಗ ಕುತ್ತು ತಂದಿತ್ತು.

    ನಂಬಿ ನಾರಾಯಣನ್ ಬಂಧನದಿಂದಾಗಿ ಕ್ರಯೋಜೆನಿಕ್ ಯೋಜನೆ, ಜಿಎಸ್‍ಎಲ್‍ವಿ, ಪಿಎಸ್‍ಎಲ್‍ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ ಹತ್ತಾರು ಯೋಜನೆಗಳು ಹಿಂದಕ್ಕೆ ಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv