Tag: ಕ್ಯಾಸಿನೋ

  • ರಾಜಕೀಯ ಚರ್ಚಿಸಲು ಕ್ಯಾಸಿನೋಗೆ ಯಾಕೆ ಹೋಗಬಾರದು: ಹೊರಟ್ಟಿ ಪ್ರಶ್ನೆ

    ರಾಜಕೀಯ ಚರ್ಚಿಸಲು ಕ್ಯಾಸಿನೋಗೆ ಯಾಕೆ ಹೋಗಬಾರದು: ಹೊರಟ್ಟಿ ಪ್ರಶ್ನೆ

    ಹುಬ್ಬಳ್ಳಿ: ಕೊಲಂಬೋದ ಕ್ಯಾಸಿನೋಗೆ ಯಾರು ಹೋಗಿದ್ದಾರೋ ಅವರಿಗೇ ಗೊತ್ತು. ನಾನು ಹೋಗಿರಲಿಲ್ಲ. ಅಲ್ಲದೆ ಈ ಕುರಿತು ಸ್ವತಃ ಕುಮಾರಸ್ವಾಮಿಯವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಎಲ್ಲ ವಿಚಾರವನ್ನು ಅವರು ತಿಳಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ಶಾಸಕರು, ಮಾಜಿ ಶಾಸಕರು ಕೊಲಂಬೋದ ಪ್ರವಾಸಕ್ಕೆ ಹೋಗಿದ್ದು ನಿಜ. ಈ ವೇಳೆ ಕ್ಯಾಸಿನೋಗೂ ಹೋಗಿರಬಹುದು. ಆದರೆ ಯಾರು ಹೋಗಿದ್ದಾರೆ ಅವರಿಗೇ ಗೊತ್ತು. ನಾನು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಈಗ ಕೊಲಂಬೋ ಪ್ರವಾಸದ ವಿಚಾರ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ತಪ್ಪು ಸರಿನೋ ನೇರವಾಗಿ ಹೇಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಣ ಮಾಮರ, ಎತ್ತಣ ಕೋಗಿಲೆ- ಜಮೀರ್ ಹೇಳಿಕೆಗೆ ಹೆಚ್‍ಡಿಕೆ ತಿರುಗೇಟು

    ಕುಮಾರಸ್ವಾಮಿ ಅವರು ಹೇಳುವ ಧೈರ್ಯ ಮಾಡಿದ್ದಾರೆ, ಅದನ್ನ ಮೆಚ್ಚಲೇಬೇಕು. ಗಾಂಜಾ ಡ್ರಗ್ಸ್ ವಿಚಾರದಲ್ಲಿ ಒಮ್ಮೆ ಎಲ್ಲರ ಹೆಸರು ಬಯಲಿಗೆ ಬಂದು ಬಿಡಲಿ. ಆಗ ಎಲ್ಲವೂ ಸರಿ ಆಗುತ್ತದೆ. ನಮ್ಮನ್ನು ಸಹ ಕೊಲಂಬೋ ಪ್ರವಾಸಕ್ಕೆ ಕರೆದಿದ್ದರು. ಆದರೆ ನಾನು ಹೋಗಿರಲಿಲ್ಲ. ರಾಜಕೀಯ ಚರ್ಚೆ ಮಾಡಲು ಹೋಗಿದ್ದರು. ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಇದೆಯೇ? ರಾಜಕೀಯ ಉದ್ದೇಶವಾಗಿ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಕುರಿತು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ ಪ್ರತಿಕ್ರಿಯಿಸಿ, ನಾನು ಶಾಸಕನಾದ ವೇಳೆ ಜೆಡಿಎಸ್ ಶಾಸಕರು ಕ್ಯಾಸಿನೊಗೆ ಪ್ರವಾಸ ಹೋಗಿದ್ದು ನಿಜ. ಆಗ ನನಗೂ ಕರೆದರು ನಾನು ಹೋಗಿರಲಿಲ್ಲ. ನನ್ನ ಕ್ಷೇತ್ರದಲ್ಲೆ ಉಳಿದಿದ್ದೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಟ್ವೀಟ್ ಮೂಲಕ ಹೇಳಿದ್ದಾರೆ. ಕ್ಯಾಸಿನೋಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಹೋಗಿದ್ದರು. ರಾಜಕೀಯ ಚರ್ಚೆ ಮಾಡಲು ಕೊಲಂಬೋ ಗೆ ಹೋಗಿದ್ದು ಸತ್ಯ. ಒಂದು ಬಾರಿ ಪ್ರವಾಸ ರದ್ದಾಗಿತ್ತು. ಇನ್ನೊಮ್ಮೆ ಎಲ್ಲರೂ ಹೋಗಿದ್ದು ಸತ್ಯ. ಒಂದು ರಾಜಕೀಯ ಪಕ್ಷ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದೆಂದು ನಿಯಮವಿದೆಯೇ ಎಂದು ಪ್ರಶ್ನಿಸಿದರು.

  • ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

    ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

    ಬೆಂಗಳೂರು: ನಾನು ಅಲ್ಪಸಂಖ್ಯಾತನಾಗಿದ್ದೇನೆ. ನಾನು ಬೆಳೆಯುತ್ತಿರುವುದನ್ನು ನೋಡಿ ನನ್ನನ್ನು ತುಳಿಯಲು ನೋಡಲಾಗುತ್ತಿದೆ ಎಂದು ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಹೇಳಿದ್ದಾರೆ.

    ಡ್ರಗ್ಸ್‌ ಪ್ರಕರಣದಲ್ಲಿ ತನ್ನ ವಿರುದ್ಧ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅವರು ನನ್ನ ಮೇಲೆ ಬರುತ್ತಿರುವ ಆರೋಪ ರಾಜಕೀಯ ಪ್ರೇರಿತ. ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯವಾಗಿದ್ದ. ಆದರೆ ಈಗ ನಾನು ಆತನ ಸಂಪರ್ಕದಲ್ಲಿ ಇಲ್ಲ. ಯಾರೋ ಬರುತ್ತಿರುತ್ತಾರೋ ಅವರೆಲ್ಲಾ ಆಪ್ತರು ಅಂತಾ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

    ಈಗ ಇಲ್ಲಿ ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ ? ಬಿಜೆಪಿ ಸರ್ಕಾರ ಇದ್ಯಾ? ಸಂಜನಾ ಎಲ್ಲಿದ್ದಾರೆ? ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ. ತನಿಖೆ ಮಾಡಲಿ. ನಾನು ಪ್ರಕರಣದಲ್ಲಿ ಇದ್ದದ್ದು ಸಾಬೀತಾದರೆ ರಾಜ್ಯದಲ್ಲಿರುವ ನನ್ನ ಆಸ್ತಿ ಸರ್ಕಾರ ಕ್ಕೆ ಕೊಟ್ಟು ಬಿಡುತ್ತೇನೆ. ಸಂಜನಾರನ್ನ ನಾನು ಶ್ರೀಲಂಕಾ ಯಾಕೆ ಇಲ್ಲೇ ನೋಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್

    ಸಿದ್ದರಾಮಯ್ಯಗೆ ಸ್ಪಷ್ಟನೆ:
    ಡ್ರಗ್ಸ್‌ ಪ್ರಕರಣದಲ್ಲಿ ತನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಜಮೀರ್‌ ಕ್ಯಾಸಿನೋ ವ್ಯವಹಾರದ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಜಮೀರ್‌ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.

    ಸಿದ್ದರಾಮಯ್ಯ ಬಳಿ ಹೇಳಿದ್ದೇನು?
    ನನ್ನದೇನು ತಪ್ಪಿಲ್ಲ, ಯಾವ ವ್ಯವಹಾರವೂ ಇಲ್ಲ. ಯಾವ ತನಿಖೆ ಬೇಕಾದರೂ ಮಾಡಲಿ. ಯಾವುದೇ ಅಕ್ರಮ ಕ್ಯಾಸಿನೋ ವ್ಯವಹಾರವೂ ಅಲ್ಲ. ಆದರೆ ಪಾಟರ್ನರ್ ಶಿಪ್ ನಲ್ಲಿ ಸಕ್ರಮ ಕ್ಯಾಸಿನೋ ಇದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಚಿವರಿಗೆ ಸತ್ಯ ಗೊತ್ತಿದೆ. ಗೊತ್ತಿರುವ ಸಚಿವರು ಸುಮ್ಮನಿದ್ದಾರೆ. ಆದರೆ ಈ ಪ್ರಕರಣಕ್ಕೂ ನನ್ನ ಪಾರ್ಟನರ್ ಶಿಪ್ ಕ್ಯಾಸಿನೋಗೆ ಸಂಬಂಧ ಇಲ್ಲ.

    ನಮ್ಮ ಪಕ್ಷದಿಂದ ಹೋಗಿ ಸಚಿವರಾದವರಿಗೂ ಕ್ಯಾಸಿನೋ ವ್ಯವಹಾರ ಗೊತ್ತಿದೆ. ಶ್ರೀಲಂಕಾಕ್ಕೆ ಬಹಳ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ಅವರ ಪಾಸ್ ಪೋರ್ಟ್ ಪರಿಶೀಲಿಸಿದರೆ ಗೊತ್ತಾಗುತ್ತದೆ. ಕ್ಯಾಸಿನೋಗೆ ಶ್ರೀಲಂಕಾಕ್ಕೆ ಹೋದಾಗ ಹಲವರು ನನ್ನ ಬಳಿ ಮಾಹಿತಿ ಕೇಳಿದ್ದಾರೆ. ಅಲ್ಲಿನ ವಹಿವಾಟು ಕುರಿತು ಆತ್ಮೀಯತೆಯಲ್ಲಿ ಮಾಹಿತಿ ಪಡ್ಕೊಂಡಿದ್ದಾರೆ.

    ಕೋರ್ಟ್ ಅನುಮತಿ ನೀಡಿದ್ದು ನಾನು ಸಂಬರಗಿ ಮೇಲೆ ಕೇಸ್ ಹಾಕುತ್ತಿದ್ದೇನೆ. ನನ್ನ ಸಹಿಸದವರು ಇದರ ಹಿಂದಿದ್ದಾರೆ. ನಾನು ಇಂತಹ ಯಾವ ಕೆಲಸ ಮಾಡಿಲ್ಲ. ಚಿನ್ನ, ಗಾಂಜಾದಂತಹ ವ್ಯವಹಾರ ನಾನು ಮಾಡಿಲ್ಲ.

     

     

  • ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಅವರಿಗೆ ಶ್ರೀಲಂಕಾದ ಕ್ಯಾಸಿನೋ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬಂದ ಬಳಿಕ ಈಗ ರಾಜ್ಯದ ಮಾಜಿ ವಿಧಾನಪರಿಷತ್‌ ಸದಸ್ಯರೊಬ್ಬರಿಗೂ ಸಂಪರ್ಕವಿದೆ ಎಂಬ ಮಾತು ಕೇಳಿ ಬಂದಿದೆ.

    ಹೌದು. ಕರ್ನಾಟಕದ ರಾಜಕಾರಣಿಗಳಿಗೆ ಶ್ರೀಲಂಕಾದ ಕ್ಯಾಸಿನೋ ನಂಟು ಇದೆ. ಈಗಾಗಲೇ ಪ್ರಶಾಂತ್‌ ಸಂಬರಗಿ ಜಮೀರ್‌ ಅಹಮದ್‌ ಹೆಸರನ್ನು ತೇಲಿಬಿಟ್ಟಿದ್ದಾರೆ. ಆದರೆ ಹಲವು ರಾಜಕಾರಣಿಗಳಿಗೆ ಲಂಕಾ ಕ್ಯಾಸಿನೋ ನಂಟು ಇದ್ದು ಅದರಲ್ಲೂ ಉದ್ಯಮಿಯಾಗಿರುವ ಮಾಜಿ ಪರಿಷತ್‌ ಸದಸ್ಯರ ಹೆಸರು ಈಗ ಮುನ್ನೆಲೆಗೆ ಬಂದಿದೆ.

    ಈ ನಾಯಕ ಹಲವು ಬಾರಿ ಲಂಕಾಗೆ ಹೋಗಿದ್ದಾರೆ.ಈಗ ಡ್ರಗ್ಸ್‌ ಪ್ರಕರಣದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಒಂದು ವೇಳೆ ತನಿಖೆಗೆ ಇಳಿದರೆ ಈ ನಾಯಕನಿಗೂ ಕಷ್ಟವಾಗುವ ಸಾಧ್ಯತೆಯಿದೆ.

    ವಿಶೇಷ ಏನೆಂದರೆ ಈ ವ್ಯಕ್ತಿ ಮಾತ್ರ ಹೋಗುತ್ತಿರಲಿಲ್ಲ. ಈ ವ್ಯಕ್ತಿಯ ಜೊತೆ ಹಲವು ರಾಜಕೀಯ ವ್ಯಕ್ತಿಗಳು ಹೋಗುತ್ತಿದ್ದರು. ಒಂದು ವೇಳೆ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೂ ಈ ರಾಜಕೀಯ ವ್ಯಕ್ತಿಗೂ ನಂಟು ಇದೆ ಎಂಬ ಸುಳಿವು ಸಿಕ್ಕರೆ ಈ ವ್ಯಕ್ತಿಯ ಸುತ್ತ ತನಿಖೆ ತಿರುಗಲಿದೆ. ಒಂದು ವೇಳೆ ಈ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದರೆ ರಾಜ್ಯದ ಹಲವು ರಾಜಕೀಯ ನಾಯಕರಿಗೂ ಬಿಸಿ ತಟ್ಟಲಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಕರ್ನಾಟಕದ ವ್ಯಕ್ತಿಗಳಿಗೆ ಗೋವಾ ಬಿಟ್ಟರೆ ಶ್ರೀಲಂಕಾ ಕ್ಯಾಸಿನೋದ ಮೇಲೆ ಮೋಹ ಜಾಸ್ತಿ. ಶ್ರೀಲಂಕಾದಲ್ಲಿ ಪ್ರೈವೆಸಿ ಜಾಸ್ತಿ. ಅಷ್ಟೇ ಅಲ್ಲದೇ ಯಾರಿಗೂ ಅಷ್ಟು ಸುಲಭವಾಗಿ ಗುರುತು ಹಿಡಿಯಲು ಆಗುವುದಿಲ್ಲ. ಹೀಗಾಗಿ ಬಹಳಷ್ಟು ಜನ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಾರೆ.

    ಒಟ್ಟಿನಲ್ಲಿ ಸಿಸಿಬಿಯ ಡ್ರಗ್ಸ್‌ ತನಿಖೆಯ ಜೊತೆ ಕ್ಯಾಸಿನೋ ನಂಟು, ಅಕ್ರಮ ಹಣಕಾಸು ವ್ಯವಹಾರದ ವಾಸನೆ ಜೋರಾಗುತ್ತಿದೆ. ಹೀಗಾಗಿ ತನಿಖೆ ಮುಂದೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.

  • ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದರೆ, ಸಂಜನಾ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆಯ ಗೆಳೆಯ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಪ್ರಕಟವಾಗುತ್ತಿದೆ.

    ಬೆಂಗಳೂರಿನಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಎನ್‍ಸಿಬಿ ಪೊಲೀಸರ ಬಂಧಿಸಿದ್ದರು. ಇವರ ಕೊಟ್ಟ ಮಾಹಿತಿ ಮೇರೆಗೆ ಈಗ ನಟಿ ಸಂಜನಾಗೆ ಅಪ್ತನಾಗಿದ್ದ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಓರ್ವ ಡ್ರಗ್ ಡೀಲರ್ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ರಾಹುಲ್ ಬೆಂಗಳೂರಿನ ಬನಶಂಕರಿ ನಗರದ ನಿವಾಸಿಯಾಗಿದ್ದಾನೆ. ಈತ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಈ ಕ್ಯಾಸಿನೋಗೆ ಗ್ರಾಹಕರನ್ನು ಪ್ಯಾಕೇಜ್‍ನಲ್ಲಿ ಕಳಿಸಿಕೊಡುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಜೊತೆಗೆ ಈತ ಪಾರ್ಟಿಗಳನ್ನು ಆಯೋಜನೆ ಮಾಡೋದರಲ್ಲಿ ಪಂಟರ್ ಆಗಿದ್ದ, ಹೀಗೆ ಒಂದು ಪಾರ್ಟಿಯಲ್ಲೇ ಸಂಜನಾಗೆ ಪರಿಚಯವಾಗಿದ್ದ. ಅಂದಿನಿಂದ ಯಾವುದೇ ಪಾರ್ಟಿಯಿದ್ದರೂ ಸಂಜನಾಗೆ ಆಹ್ವಾನ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.

    ಶ್ರೀಲಂಕಾದಲ್ಲಿ ನಡೆದಿದ್ದ ಕ್ಯಾಸಿನೋ ಪಾರ್ಟಿಗೆ ಸಂಜನಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ನಟಿಯರನ್ನು ರಾಹುಲ್ ಕರೆಸಿದ್ದ. ಸದ್ಯ ರಾಹುಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.

    ಈತನ ಬಗ್ಗೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ್ದ ಸಂಜನಾ, ಆತ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ತುಂಬ ಒಳ್ಳೆಯವನು ಮತ್ತು ಜ್ಯಾಲಿ ಮನುಷ್ಯ. ರಾಹುಲ್ ಆ ತರದ ಹುಡುಗ ಅಲ್ಲ. ನನಗೆ ಸಹೋದರಿಲ್ಲ, ಪ್ರತಿ ವರ್ಷ ನಾನು ಆತನಿಗೆ ರಾಖಿ ಕಟ್ಟುತ್ತೇನೆ. ಆತನನ್ನು ಪೊಲೀಸರು ಏಕೆ ಕರೆದುಕೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅಸಲಿಗೆ ಸ್ಟಾರ್ ನಟ ನಟಿಯರಲ್ಲದೆ ರಾಜಕಾರಣಿಗಳ ಮಕ್ಕಳೂ ಕೂಡ ರಾಹುಲ್‌ಗೆ ಆಪ್ತರು. ರಾಹುಲ್ ಗೆ ಶ್ರೀಲಂಕದಾ ಕ್ಯಾಸಿನೋ ಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ಕ್ಯಾಸಿನೋ ಅಡ್ಡೆ ಮೇಲೆ ಸಿಸಿಬಿ ದಾಳಿ- 13 ಕೋಟಿ ಸೀಜ್

    ಕ್ಯಾಸಿನೋ ಅಡ್ಡೆ ಮೇಲೆ ಸಿಸಿಬಿ ದಾಳಿ- 13 ಕೋಟಿ ಸೀಜ್

    – ಪೂರ್ವ ವಿಭಾಗ ಪೊಲೀಸರಿಂದ ಬೃಹತ್ ಕಾರ್ಯಾಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಮಾಫಿಯಾ ಬಳಿಕ ಮತ್ತೊಂದು ಬೃಹತ್ ಪ್ರಕರಣ ಬಳಿಕೆ ಬಂದಿದೆ. ಅಕ್ರಮ ಕ್ಯಾಸಿನೋ ಅಡ್ಡೆಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 13 ಕೋಟಿ ರೂ.ಗಳನ್ನು ಸೀಜ್ ಮಾಡಲಾಗಿದೆ.

    ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರ ತಂಡ ಇಂದಿರಾನಗರದ ಕ್ಯಾಸಿನೋ ಮೇಲೆ ದಾಳಿ ನಡೆಸಿದ್ದು, ಡಿಸಿಪಿ ಸ್ಕ್ವಾಡ್‍ನಿಂದ ಬೃಹತ್ ಕಾರ್ಯಾಚರಣೆ ನಡೆದಿದೆ. ಕ್ಯಾಸಿನೋ ಅಡ್ಡೆಯಲ್ಲಿನ ಬರೋಬ್ಬರಿ 13 ಕೋಟಿ ರೂ.ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಒಟ್ಟು 60 ಟೇಬಲ್ ಫೋರ್ಕರ್ ನಲ್ಲಿ ಕ್ಯಾಸಿನೊ ನಡೆಯುತ್ತಿತ್ತು. ಒಟ್ಟು 90 ಗ್ರಾಹಕರು ಬಂದಿದ್ದರು. ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಮೊತ್ತವನ್ನು ಸೀಜ್ ಮಾಡಿದ್ದಾರೆ.

    ಈ ಕ್ಯಾಸಿನೋ ರೌಡಿ ಶೀಟರ್ ಮೆಂಟಲ್ ಸೀನ, ಚಲ್ಲಗಟ್ಟ ಚಂದ್ರ ಮತ್ತು ಮುರಳಿ ಒಡೆತನದ್ದಾಗಿದ್ದು, ಪೊಲೀಸರು ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ಸರ್ಚಿಂಗ್ ಆಪರೇಶನ್ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

  • ಯಾವುದೇ ಕಾರಣಕ್ಕೂ ಕ್ಯಾಸಿನೋಗೆ ರಾಜ್ಯದಲ್ಲಿ ಅನುಮತಿ ಕೊಡೋದಿಲ್ಲ: ಸಿಟಿ ರವಿ

    ಯಾವುದೇ ಕಾರಣಕ್ಕೂ ಕ್ಯಾಸಿನೋಗೆ ರಾಜ್ಯದಲ್ಲಿ ಅನುಮತಿ ಕೊಡೋದಿಲ್ಲ: ಸಿಟಿ ರವಿ

    – ಕ್ಯಾಸಿನೋ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ

    ಬೆಂಗಳೂರು: ವಿವಾದದ ಬಳಿ ರಾಜ್ಯದಲ್ಲಿ ಕ್ಯಾಸಿನೋ ಆರಂಭದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ವಿಪಕ್ಷಗಳು, ಜನರಿಂದ ವಿರೋಧ ಬಂದ ಬಳಿಕ ದಿಢೀರ್ ಉಲ್ಟಾ ಹೊಡೆದಿರುವ ಸರ್ಕಾರ, ಕ್ಯಾಸಿನೋ ಪ್ರಸ್ತಾಪವನ್ನು ಕೈಬಿಟ್ಟಿದೆ. ಯಾವುದೇ ಕಾರಣಕ್ಕೂ ಕ್ಯಾಸಿನೋಗೆ ನಮ್ಮ ರಾಜ್ಯದಲ್ಲಿ ಅನುಮತಿ ಕೊಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿಟಿ ರವಿ, ಕರ್ನಾಟಕದಲ್ಲಿ ಕ್ಯಾಸಿನೋ ಆರಂಭಿಸುವುದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಎಫ್‍ಕೆಸಿಸಿಐ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂತು. ಅಕ್ಕಪಕ್ಕದ ರಾಜ್ಯಗಳು ಮತ್ತು ಕೆಲ ದೇಶಗಳ ಕ್ಯಾಸಿನೋ ಸಂಸ್ಕೃತಿ ಬಗ್ಗೆ ಚರ್ಚೆ ಆಗಿತ್ತು. ಆದರೆ ನಾನು ಇದಕ್ಕೆ ಒಪ್ಪಿಲ್ಲ ಅಂತ ಸಚಿವರು ತಿಳಿಸಿದರು.

    ಕ್ಯಾಸಿನೋ ನಮ್ಮ ರಾಜ್ಯದ ಸಂಸ್ಕೃತಿಗೆ ಸರಿ ಹೋಗುವುದಿಲ್ಲ. ಹೀಗಾಗಿ ಅದನ್ನು ನಾನು ನಿರಾಕರಿಸಿದೆ. ಅವತ್ತಿನ ಸಭೆಯಲ್ಲಿನ ಅರ್ಧ ಮಾಹಿತಿ ಮಾತ್ರ ಮಾಧ್ಯಮಗಳಲ್ಲಿ ಬಂದಿದೆ. ನಾನು ಅವತ್ತೇ ಕ್ಯಾಸಿನೋ ಜಾರಿಗೆ ತರೊಲ್ಲ ಅಂತ ಹೇಳಿದ್ದೆ. ಕೆಲವರು ಸುಮ್ಮನೆ ಅಪ ಪ್ರಚಾರ ಮಾಡಿದ್ದಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವುದಿಲ್ಲ ಎಂದು ತಿಳಿಸಿದರು.

    ಬಿಜೆಪಿ ಸರ್ಕಾರ ಬರಲು ಕೆಲ ಜೂಜುಕೋರರ ಬೆಂಬಲವೇ ಕಾರಣ. ಅವರನ್ನ ಸಮಾಧಾನ ಮಾಡಲು ಕ್ಯಾಸಿನೋ ಜಾರಿಗೆ ತರಲು ಸರ್ಕಾರ ಮುಂದಾಯಿತು ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ವಿರೋಧ ಮಾಡಿದ್ದಾರೋ ಅವರೇ ನಮಗೆ ಬೆಂಬಲ ಕೊಟ್ಟಿದ್ದಾರೆ. ಹೆಸರು ಹೇಳಿದರೆ ಅವರಿಗೆ ಅವಮಾನ ಆಗುತ್ತೆ. ಅದಕ್ಕೆ ನಾನು ಹೆಸರು ಹೇಳುವುದಿಲ್ಲ ಎಂದು ವಿರೋಧ ಮಾಡುವವರಿಗೆ ತಿರುಗೇಟು ಕೊಟ್ಟರು.

  • ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಡ್ಯಾಶ್, ಡ್ಯಾಶ್, ಡ್ಯಾಶ್ – ಸಿದ್ದು ವಿರುದ್ಧ ಸಿಟಿ ರವಿ ವ್ಯಂಗ್ಯ

    ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗೋ ಬ್ಯಾಕ್ ಟ್ರಂಪ್ ಚಳುವಳಿ ನಡೆಯುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗೋ ಬ್ಯಾಕ್ ಅನ್ನುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದವರು ಈ ರೀತಿ ವಿರೋಧ ಮಾಡುತ್ತಾರೆ. ಅವರಿಗೆ ಏಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೋಗುತ್ತಿರುತ್ತದೆ ಡ್ಯಾಶ್, ಡ್ಯಾಶ್, ಡ್ಯಾಶ್ ಎಂದು ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ ರವಿ ಕ್ಯಾಸಿನೋ ಆಡಿರಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯಗೆ 70 ವರ್ಷ ಕ್ರಾಸ್ ಆಗಿದೆ. ಅವರು ದೊಡ್ಡವರು. ಯಾರ್ಯಾರು ಮೂರು ಮೂರು ದಿನ ಹೊರಗೆ ಬರುತ್ತಿರಲಿಲ್ಲ ಎಂದು ಅವರು ಅವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

    ಯಾರ್ಯಾರ ಫ್ರೆಂಡ್ಸ್ ಸರ್ಕಲ್ ಹೇಗಿದೆ. ತಟ್ಟೋಕೆ ಕೂತ್ರೆ ಮೂರು ದಿನ ಹೊರಗೆ ಬರದೇ ಇದ್ದೋರು ಯಾರು ಎಂದು ಸಿದ್ದರಾಮಯ್ಯ ಅವಲೋಕನ ಮಾಡಿಕೊಳ್ಳಲಿ. ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎಂದು ಗೊತ್ತಾಗುತ್ತೆ ಎಂದು ಸಿದ್ದು ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದರು.

  • ಮಡಿವಂತರೆಂದು ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೋಗೆ ದುಡ್ಡು ಸುರಿತಾರೆ: ಸಿಟಿ ರವಿ

    ಮಡಿವಂತರೆಂದು ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೋಗೆ ದುಡ್ಡು ಸುರಿತಾರೆ: ಸಿಟಿ ರವಿ

    ಉಡುಪಿ: ಕರ್ನಾಟಕದಲ್ಲಿ ಕ್ಯಾಸಿನೋ ಜೂಜು ಅಡ್ಡೆ ಆರಂಭಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿ ರಾಜ್ಯದ ಬೊಕ್ಕಸ ತುಂಬಿಸುವ ಯೋಜನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದೆ.

    ಕ್ಯಾಸಿನೋ ಸೆಂಟರ್ ತೆರಯಬೇಕೆಂದು ನಾನು ನೇರವಾಗಿ ಎಲ್ಲೂ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗಾಯಿತೆಂದು ಹೇಳಿದ್ದೇನಷ್ಟೇ ಎಂದು ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯ ಕಾರ್ಕಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯೋಜನೆ ಸಿದ್ಧಪಡಿಸುವುದು ಸರ್ಕಾರದ ಕೆಲಸ. ನಾನು ಅಮೆರಿಕದಲ್ಲಿರುವ ವಾಸ್ತವಾಂಶವನ್ನಷ್ಟೇ ಹೇಳಿದ್ದೇನೆ. ಅಮೆರಿಕದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್ ಗಳಿವೆ. ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು. ಶ್ರೀಲಂಕಾ, ಲಾಸ್ ವೇಗಾಸ್‍ನಲ್ಲಿ ಭಾರತೀಯ ಪ್ರವಾಸಿಗರ ದಂಡೇ ಇದೆ ಎಂಬುದನ್ನು ಪ್ರಸ್ತಾವಿಸಿದ್ದೇನೆಯೇ ಹೊರತು, ಈ ಬಗ್ಗೆ ಯೋಜನೆ ಸಿದ್ಧಪಡಿಸಿಲ್ಲ ಎಂದು ಹೇಳಿದರು.

    ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಮ್ಮ ದೇಶದ ದುಡ್ಡು ವಿದೇಶಿ ಪ್ರವಾಸಿ ತಾಣಗಳಿಗೆ ಹರಿಯುತ್ತಿದೆ. ಅದನ್ನು ತಡೆಗಟ್ಟಬೇಕು. ಪ್ರವಾಸಿಗರು ವಿದೇಶಕ್ಕೆ ದುಡ್ಡು ಹರಿದರೆ ನಮ್ಮ ದೇಶಕ್ಕೆ ನಷ್ಟ. ವಿದೇಶಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರವಾಸಿ ತಾಣ ನಿರ್ಮಿಸುವ ಅಗತ್ಯವಿದೆ. ವಿದೇಶಿಗರನ್ನು ನಮ್ಮ ದೇಶಕ್ಕೆ ಸೆಳೆಯಬೇಕು, ನಮ್ಮವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗ ಸೃಷ್ಟಿಸುವ ಉದ್ದೇಶವೂ ನಮಗೆ ಇದೆ ಎಂದರು.

    ಗೋವಾ ರಾಜ್ಯ ಕ್ಲಬ್ ಹಾಗೂ ಪಬ್‍ನಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿ ಮಡಿವಂತರೆಂದು ಪ್ರದರ್ಶಿಸುವವರು ಅಲ್ಲಿ ದುಡ್ಡು ಸುರಿಯುತ್ತಿದ್ದಾರೆ. ಇದು ಕೇವಲ ಪ್ರವಾಸೋದ್ಯಮ ಇಲಾಖೆ ಯೋಜನೆ ಅಲ್ಲ. ಯೋಜನೆ ಆರಂಭಕ್ಕೆ ಮೊದಲು ಗೃಹ ಇಲಾಖೆ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆಯಲ್ಲಿ ಹಲವಾರು ಚರ್ಚೆಯಾಗಿದೆ. ಕೃಷಿ ಟೂರಿಸಂ, ವಿಲೇಜ್ ಟೂರಿಸಂ, ರೈನ್ ಟೂರಿಸಂ, ಫುಡ್ ಟೂರಿಸಂ ಬಗ್ಗೆ ಹೇಳಿದ್ದೇನೆ. ಕೇವಲ ಕ್ಯಾಸಿನೋ ಬಗ್ಗೆ ಮಾತ್ರ ಉಲ್ಲೇಖವಾಗಿದೆ. ನಮ್ಮ ಸಂಸ್ಕೃತಿಗೆ ವಿರೋಧವಾಗುತ್ತೆ ನಿಜ. ನಮ್ಮ ದುಡ್ಡು ವಿದೇಶಕ್ಕೆ ಹರಿಯುತ್ತಿರುವುದು ಸತ್ಯ ಎಂದು ಹೇಳಿದರು.