Tag: ಕ್ಯಾಶ್

  • ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

    ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

    – ಸೈನಿಕರನ್ನು ಬೇರೆಡೆ ಸಾಗಿಸುವಾಗ ಅವಘಡ

    ಮನಿಲಾ: ಸೈನಿಕರನ್ನು ಸ್ಥಳಾಂತರ ಮಾಡುವಾಗ ಫಿಲಿಪೈನ್ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದ್ದು, 29 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಫಿಲಿಪೈನ್ಸ್‍ನ ಸುಲುನ ಜೊಲೊ ದ್ವೀಪದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಅವಘಡ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 92 ಜನ ಪ್ರಯಾಣಿಸುತ್ತಿದ್ದರು. ಸಿ-130 ಹೆರ್ಕುಲೆಸ್ ಟ್ರಾನ್ಸ್ ಪೋರ್ಟ್ ವಿಮಾನದ ಮೂಲಕ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಸುಲುನ ಜೊಲೊ ದ್ವೀಪದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. 40 ಜನರು ಗಾಯಗೊಂಡಿದ್ದು, 17 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ತಿಳಿಸಿದ್ದಾರೆ.

    ವಿಮಾನ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ತೀವ್ರಗತಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತವಾದ ಸ್ಥಳದ ಸುತ್ತ ದಟ್ಟ ಹೊಗೆ ಆವರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

    ಸಶಸ್ತ್ರ ಪಡೆಯ ಮುಖ್ಯಸ್ಥರಾದ ಜನರಲ್ ಸಿರಿಲಿಟೊ ಸೊಬೆಜಾನಾ ಈ ಕುರಿತು ವಿವರಿಸಿದ್ದು, ದಕ್ಷಿಣ ದ್ವೀಪ ಮಿಂಡಾನಾವೊದ ಕಾಗಾಯನ್ ಡಿ ಓರೊದಿಂದ ವಿಮಾನದ ಮೂಲಕ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಜೊಲೊದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ರನ್ ವೇ ತಪ್ಪಿದೆ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    ಈ ವೇಳೆ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಲು ಯತ್ನಿಸಲಾಯಿತು, ಆದರೆ ಸಾಧ್ಯವಾಗಲಿಲ್ಲ. ಅಂತ್ಯಂತ ದುರದೃಷ್ಟಕರ ಘಟನೆ. ರಕ್ಷಣಾ ಕಾರ್ಯಚರಣೆ ಪ್ರಗತಿಯಲ್ಲಿದ್ದು, ಹೆಚ್ಚಿನ ಜೀವಗಳನ್ನು ಉಳಿಸಲು ಪಾರ್ಥಿಸುತ್ತಿದ್ದೇವೆ. ರಕ್ಷಣೆ ಮಾಡಿದ 40 ಜನರಿಗೆ ಹತ್ತಿರದ 11ನೇ ಇನ್‍ಫ್ಯಾಂಟ್ರಿ ಡಿವಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಅವಘಡಕ್ಕೆ ನಿರ್ದಿಷ್ಟ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಸದ್ಯ ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಲೆಫ್ಟಿನೆಂಟ್ ಕರ್ನಲ್ ಮೇನಾರ್ಡ್ ಮರಿಯಾನೊ ಮಾಹಿತಿ ನೀಡಿದ್ದಾರೆ.

    ಬಹುತೇಕರು ಬೇಸಿಕ್ ಮಿಲಿಟರಿ ತರಬೇತಿ ಪಡೆದ ಪದವೀಧರರಾಗಿದ್ದಾರೆ. ಭಯೋತ್ಪಾದನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ರೆಸ್ಟಿವ್ ದ್ವೀಪಕ್ಕೆ ಸೈನಿಕರನ್ನು ನಿಯೋಜಿಸಲಾಗಿತ್ತು ಎಂದು ಮರಿಯಾನೊ ತಿಳಿಸಿದ್ದಾರೆ.