ಬೆಂಗಳೂರು: ಕ್ಯಾರ್ ಹಾಗೂ ಮಹಾ ಚಂಡಮಾರುತಗಳ ಅಬ್ಬರ ಮುಗಿಯುವ ಮುನ್ನವೇ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.
ನವೆಂಬರ್ 6ರ ಬಳಿಕ ರಾಜ್ಯದಲ್ಲಿ ಮತ್ತೆ ವರುಣ ಅಬ್ಬರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಿಂದೂ ಮಹಾಸಾಗರದ ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು, ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಕೆಲವೆಡೆ ಮೋಡಕವಿದ ವಾತಾವರಣ ಇರಲಿದೆ ಎನ್ನಲಾಗಿದೆ.
ಈಗಾಗಲೇ ತಲ್ಲಣ ಮೂಡಿಸಿರುವ ಮಹಾ ಚಂಡಮಾರುತ ಮತ್ತೆ ವಾಪಸ್ ಗುಜರಾತ್ ಹಾಗೂ ಮಹಾರಾಷ್ಟ್ರದ ಕಡೆ ಬರಲಿದೆ. ಇದರಿಂದ ಈ ರಾಜ್ಯಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮಡಿಕೇರಿ: ಇತ್ತೀಚೆಗೆ ಉತ್ತರ ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದವು. ಈಗ ಮತ್ತೊಮ್ಮೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆಯ ಆಗಮನದಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಿನ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗುವ ಹಂತ ತಲುಪಿದೆ.
ಕೇವಲ ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ವರುಣನ ಆರ್ಭಟ ಇದೀಗ ಮತ್ತೆ ಕೊಡಗು ಜಿಲ್ಲೆಯಲ್ಲಿಯೂ ಶುರುವಾಗಿದ್ದು, ಕ್ಯಾರ್ ಚಂಡಮಾರುತದ ಪರಿಣಾಮ ಜಿಲ್ಲೆಗೂ ತಟ್ಟಿದೆ. ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ, ಪ್ರವಾಸಿಗರ ಆಗಮನವಿಲ್ಲದೆ ವ್ಯಾಪಾರ ವಹಿವಾಟುಗಳು ಇಳಿಮುಖವಾಗಿದೆ.
ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್ ಶಿಬಿರ, ದುಬಾರೆಯ ರಿವರ್ ರಾಫ್ಟಿಂಗ್, ಹಾರಂಗಿ ಅಣೆಕಟ್ಟು, ಅಬ್ಬಿ ಜಲಪಾತ, ಗೋಲ್ಡನ್ ಟೆಂಪಲ್, ಚಿಕ್ಲಿಹೊಳೆ ಜಲಾಶಯ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ದಿನದೂಡುತ್ತಿದ್ದ ಪ್ರವಾಸಿಗರ ಸಂಖ್ಯೆ ಮಳೆಯ ಆಗಮನದಿಂದಾಗಿ ಇಳಿಮುಖವಾಗುತ್ತಿರುವುದು ಕೂಡ ಪ್ರವಾಸೋದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಸಿಗರ ಆಗಮನ ಇಳಿಮುಖವಾದ ಪರಿಣಾಮ ಪ್ರೇಕ್ಷಣೀಯ ಸ್ಥಳಗಳ ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಬಾರಿ ವರುಣನ ಆರ್ಭಟದಿಂದಾಗಿ ಕಾವೇರಿ ನದಿಯು ತುಂಬಿ ಹರಿದ ಪರಿಣಾಮ ನದಿ ತಟದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು ಜಲಾವೃತವಾಗಿ ವ್ಯಾಪಾರೋದ್ಯಮಿಗಳು ಕೈಸುಟ್ಟುಕೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಮತ್ತೆ ಮಳೆರಾಯ ಘರ್ಜಿಸುತ್ತಿರುವ ಪರಿಣಾಮವಾಗಿ ಮತ್ತೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಆದರೆ ಸ್ಪಲ್ಪ ದಿನಗಳ ಹಿಂದೆಯಷ್ಟೇ ಚೇತರಿಸಿಕೊಳ್ಳುತ್ತಿದ್ದ ಪ್ರವಾಸೋದ್ಯಮವು ಮತ್ತೆ ತಣ್ಣಗಾಗುವ ಹಂತ ತಲುಪುತ್ತಿದೆ.
ಉಡುಪಿ: ಸದ್ದಿಲ್ಲದೆ ಎದ್ದು ಬಂದ ಕ್ಯಾರ್ ಚಂಡಮಾರುತ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎರಡು ಬಲಿ ಪಡೆದಿದೆ. ಭೀಕರ ಚಂಡ ಮಾರುತ ಕರ್ನಾಟಕ ಕರಾವಳಿ ತತ್ತರಿಸುವಂತೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಮೇಲೇಳುವ ರಕ್ಕಸ ಗಾತ್ರದ ಅಲೆಗಳನ್ನು ಕಂಡಾಗ ಎದೆ ನಡುಗುತ್ತಿದ್ದು ಮಳೆ ಇಂದೂ ಮುಂದುವರೆಯುವ ಸಾಧ್ಯತೆ ಇದೆ.
ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಕರಾವಳಿಗರನ್ನು ಹೈರಾಣಾಗಿಸಿದೆ. ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದೆ. ಕುರ್ಕಾಲು ಗ್ರಾಮದ ಸುಲೋಚನಾ ಹುಲ್ಲು ತರಲು ತೋಟಕ್ಕೆ ಹೋಗಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ರಭಸವಾದ ಸೆಳೆತಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಕುಕ್ಕೆಹಳ್ಳಿಯಲ್ಲಿ ರವಿ ಕುಲಾಲ್ ಗೆಳೆಯನ ಮನೆಗೆ ಮರವನ್ನು ಕಡಿಯುತ್ತಿದ್ದಾಗ ಕೊಂಬೆ ತಲೆಗೆ ಬಿದ್ದು ಮೃತಪಟ್ಟಿದ್ದಾರೆ.
ಚಂಡಮಾರುತದ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಮಲ್ಪೆ ಬೀಚ್ ನಲ್ಲಿ ಗುರುವಾರ ಶುಕ್ರವಾರ ರಾತ್ರಿಯಿಂದಲೇ ಕಡಲಿನ ಆರ್ಭಟ ಮುಗಿಲು ಮುಟ್ಟಿತ್ತು. ಅರಬ್ಬೀ ಸಮುದ್ರದ ಅಲೆಗಳು ಮಲ್ಪೆ ಬೀಚ್ ನ್ನೇ ಆಪೋಷನ ಪಡೆದಿದೆ. 50 ಮೀಟರ್ ನಷ್ಟು ಸಮುದ್ರ ದಡದತ್ತ ಧಾವಿಸಿದೆ. ಹಬ್ಬದ ರಜೆ ಹಾಗೂ ವಾರಾಂತ್ಯದಲ್ಲಿ ಮೋಜು ಮಾಡಲು ಬೀಚ್ ಗೆ ಪ್ರವಾಸಿಗರು ಬಂದರೂ ಕ್ಯಾರ್ ಕ್ಯಾರೇ ಮಾಡಿಲ್ಲ.
ಸ್ಥಳೀಯ ಮಂಜುನಾಥ್ ಕಾಮತ್ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಈ ರೀತಿಯ ವಾತಾವರಣ ನಾನೆಂದೂ ನೋಡಿಲ್ಲ. ಮಧ್ಯಾಹ್ನ ವೇಳೆಗೆ ಕತ್ತಲಾಗಿ ಬಿಡುವ ವಾತಾವರಣ ಇದೆ ಎಂದರು. ಮಳೆ ನಿಲ್ಲುವವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಿ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಚಂಡಮಾರುತದ ತೀವ್ರತೆ ಕಂಡು ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಿದೆ. ರೆಡ್ ಅಲರ್ಟ್ ಅವಧಿ ಮುಗಿದಿದ್ದು ಇನ್ನೆರಡು ದಿನ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಅಪಾರ ಪ್ರಮಾಣದ ಬೇಸಾಯ ಮಳೆಗೆ ನಾಶವಾಗಿದ್ದು ಕೃಷಿಕರು ಖುಷಿಯಿಲ್ಲದ ದೀಪಾವಳಿ ಮಾಡುವಂತಾಗಿದೆ.
ಉಡುಪಿ: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕ್ಯಾರ್ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದೆ.
ಅರಬ್ಬಿ ಸಮುದ್ರ ಭೋರ್ಗೆರೆಯುತ್ತಿದ್ದು, ಕಡಲ ತೀರ ಪ್ರದೇಶ ಮನೆಗಳಿಗೆ ಬೃಹತ್ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಹೀಗಾಗಿ ಇಂದು ಕೂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರವಾಹ ಎಚ್ಚರಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿದ್ದ ದೀಪಾವಳಿ ರಜೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ತುರ್ತು ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸ್ಥಾನದಲ್ಲಿರುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.
ಚಂಡಮಾರುತ ಅತೀ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗ, ಮಹಾರಾಷ್ಟ್ರ ಮತ್ತು ಗೋವಾದ ತೀರ ಪ್ರದೇಶ, ಪಶ್ಚಿಮಬಂಗಾಳ, ಮೇಘಾಲಯ, ಅಸ್ಸಾಂನಲ್ಲಿ ಬಿರುಗಾಳಿ ಸಹಿತ ರಣಮಳೆ ಸುರಿಸಲಿದೆ. ಇನ್ನೂ ಎರಡ್ಮೂರು ದಿನ ಮಳೆಯಬ್ಬರ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕಾರವಾರ/ ಉಡುಪಿ/ ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಕಡಲ ತೀರ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ನುಗ್ಗುತ್ತಿದ್ದು, ಕಡಲ ತೀರದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಒಂದೆಡೆ ಪರದಾಡುವಂತಾಗಿದ್ದರೆ, ಇನ್ನೊಂದೆಡೆ ಅಲೆಗಳ ಅಬ್ಬರಕ್ಕೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿಯಾಗಿದ್ದಾರೆ. ಕುಂಜಾರುಗಿರಿ ಶಂಖತೀರ್ಥದಲ್ಲಿ ಸುಲೋಚನಾ(42) ಸಾವನ್ನಪ್ಪಿದ್ದಾರೆ. ಕುರ್ಕಾಲು ಗ್ರಾಮದ ಕುಂಜಾರುಗಿರಿ ಬಳಿ ಈ ಘಟನೆ ನಡೆದಿದ್ದು, ಹುಲ್ಲು ಕೊಯ್ಯಲು ಹೋಗಿದ್ದಾಗ ಆಯ ತಪ್ಪಿ ಮಹಿಳೆ ಹಳ್ಳಕ್ಕೆ ಬಿದ್ದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಾರ್ವಜನಿಕರ ನೆರವಿನಿಂದ ಮಹಿಳೆಯ ಶವ ಪತ್ತೆಹಚ್ಚಲಾಗಿದೆ.
ಚಂಡಮಾರುತ ಉತ್ತರ ಭಾಗಕ್ಕೆ ಚಲಿಸುತ್ತಿರುವ ಕಾರಣ ಅದರ ದೊಡ್ಡ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ತಟ್ಟಿಲ್ಲ. ಮಹಾರಾಷ್ಟ್ರ, ಗೋವಾ ಭಾಗದ ಕರಾವಳಿಗೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಕರಾವಳಿ ಮತ್ತು ಮಲೆನಾಡಿನಲ್ಲಿ ವೇಗದಲ್ಲಿ ಗಾಳಿ ಬೀಸಲಿದ್ದು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಕ್ಯಾರ್ ಚಂಡಮಾರುತದ ಕೇಂದ್ರ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ 240 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು ಉತ್ತರ ಭಾಗದತ್ತ ಚಲಿಸುತ್ತಾ ಬಳಿಕ ಆಫ್ರಿಕಾ ಖಂಡದ ಒಮಾನ್ ದೇಶದತ್ತ ಚಲಿಸಲಿದೆ ಎಂದು ಹೇಳಿದೆ. ಹೀಗಾಗಿ ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಕರಾವಳಿಗೆ ಹೆಚ್ಚು ತಟ್ಟುವ ಸಾಧ್ಯತೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಹೀಗಿದ್ದರೂ, ಮಂಗಳೂರಿನ ಆಸುಪಾಸಿನಲ್ಲಿ ಸಮುದ್ರ ಅಬ್ಬರಿಸತೊಡಗಿದೆ. ಉಳ್ಳಾಲದ ಸೋಮೇಶ್ವರ, ಮುಕ್ಕಚ್ಚೇರಿ, ಸುರತ್ಕಲ್ ಬಳಿಯಲ್ಲಿ ಕಡಲು ಭೋರ್ಗರೆದಿದ್ದು ತೀರ ನಿವಾಸಿಗಳನ್ನು ಆತಂಕಕ್ಕೆ ಈಡುಮಾಡಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆ, ಕಾಲೇಜಿಗೆ ಜಿಲ್ಲಾಧಿಕಾರಿ ರಜೆ ಸಾರಿದ್ದಾರೆ. ಅಲ್ಲದೆ, ಯಾವುದೇ ಕ್ಷಣದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆ ನೀಡಿದ್ದ ಕಾರಣ ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.
ಕಾರವಾರ ತಾಲೂಕಿನ ಮಾಜಾಳಿ, ದಾಂಡೇಭಾಗ್, ದೇವಭಾಗ್, ಡೋರ್ಲೆಭಾಗ್, ನಚಕಿನಭಾಗ್ ಸೇರಿದಂತೆ ಕಡಲ ತೀರ ಪ್ರದೇಶಕ್ಕೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಡಲ ತೀರದಲ್ಲಿ ನಿಲ್ಲಿಸಿದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಯಾಗುತ್ತಿದ್ದು ಅಬ್ಬರ ಹೆಚ್ಚುತ್ತಲೇ ಇದ್ದ ಪರಿಣಾಮ ಜೆಸಿಬಿಗಳ ಮೂಲಕ ಬೋಟ್‍ಗಳನ್ನು ಬೇರೆಡೆ ಇರಿಸುವ ಕಾರ್ಯವನ್ನು ಕಡಲ ಮಕ್ಕಳು ಮಾಡುತ್ತಿದ್ದಾರೆ.
ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ, ಕೇಣಿ, ಗಾಂವಕರ್ ವಾಡ, ಬೇಲೆಕೇರಿ, ಹಾರವಾಡ, ಕುಮಟಾ ತಾಲೂಕಿನ ಗೋಕರ್ಣ, ತದಡಿ, ಕುಡ್ಲೆ ಕಡಲ ತೀರ, ಮುರಡೇಶ್ವರದ ಕಡಲ ತೀರ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಹುತೇಕ ತೀರ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಹ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಚಂಡಮಾರುತ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿರುವುದರಿಂದ ಕಡಲ ಮಕ್ಕಳು ಆತಂಕ್ಕೆ ಒಳಗಾಗಿದ್ದು, ಈ ವರ್ಷ ಜೂನ್ ತಿಂಗಳಿನಿಂದಲೂ ಹವಾಮಾನ ವೈಪರಿತ್ಯದಿಂದ ಮೀನುಗಾರರು ಸರಿಯಾಗಿ ಮೀನುಗಾರಿಕೆಯೇ ಮಾಡದಂತಾಗಿದೆ.
ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಹಲವೆಡೆ ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಕಾರವಾರ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಇತ್ತ ಕಾಳಿ ನದಿ ನೀರು ಹೆಚ್ಚಾಗಿದ್ದರಿಂದ ಕದ್ರಾ ಜಲಾಶಯದಲ್ಲಿ 31 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಕ್ಯಾರ್ ಚಂಡಮಾರುತದ ಎಫೆಕ್ಟ್ ಇರಲಿದೆ ಎನ್ನಲಾಗಿದ್ದು ಜಿಲ್ಲಾಡಳಿತ ಸಹ ಜನರಿಗೆ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮ ಕೈಗೊಂಡಿದೆ.
ಬೆಂಗಳೂರು: ಇಷ್ಟು ದಿನ ಮಳೆಯಬ್ಬರ ಆಯ್ತು. ಇನ್ನೊಂದು ವಾರ ಚಂಡಮಾರುತದ ಭೀತಿ. ಇಂದು ದಕ್ಷಿಣ, ಉತ್ತರ ಕನ್ನಡ ಕರಾವಳಿ ಜಿಲ್ಲೆಗಳು, ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಲಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಹಾಗೂ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ಕ್ಯಾರ್ ಚಂಡಮಾರುತ ಎದ್ದಿದ್ದು, ಕರಾವಳಿಗೆ ಹಿಂಗಾರು ಅಪ್ಪಳಿಸುವ ಭೀತಿ ಎದುರಾಗಿದೆ.
ಕ್ಯಾರ್ ಚಂಡಮಾರುತ ಗಾಳಿ ಮಳೆ ಹೊತ್ತು ತರುತ್ತಿದೆ. ಈ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಮೌಖಿಕ ಆದೇಶ ಹೊರಡಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಮೀನುಗಾರರಿಗೆ, ನದಿ ಬದಿಯ ಜನ ನೀರಿಗಿಳಿಯದಂತೆ ಸೂಚಿಸಿದೆ. ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅದು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.
ಇತ್ತ ಗೋವಾದ ಬೇತುಲ್‍ನಲ್ಲಿ ಅಲೆಯಬ್ಬರಕ್ಕೆ ಮುಳುಗ್ತಿದ್ದ ದೋಣಿಯಲ್ಲಿದ್ದವರನ್ನ ರಕ್ಷಣೆ ಮಾಡಲಾಗಿದೆ. ಮುರುಡೇಶ್ವರ ಕಡಲ ತೀರದಲ್ಲಿ ಅಂಗಡಿಗಳಿಗೆ ಸಮುದ್ರದ ಅಲೆ ನುಗ್ಗಿ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿದೆ. ಗುರುವಾರದಿಂದಲೇ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದ್ದು, ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿವೆ. ಸಮುದ್ರ ಕೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ನಿನ್ನೆ ಸಂಜೆಯಿಂದಲೇ ಬಿರುಗಾಳಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕ್ಯಾರ್ ಚಂಡಮಾರುತ ಬಳಿಕ ಅಕ್ಟೋಬರ್ 27ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿ ಆಗುವ ಮಹಾ ಚಂಡಮಾರುತ ಅಪ್ಪಳಿಸಿದ್ದು, ತಮಿಳುನಾಡು ಮತ್ತು ಪುದುಚೇರಿ, ಕೇರಳದಲ್ಲಿ ರಣ ಮಳೆ ನಿರೀಕ್ಷಿಸಲಾಗಿದೆ. ಅಕ್ಟೋಬರ್ 27ರಂದು ಹಿಂದೂಮಹಾಸಾಗರದಲ್ಲಿ ಸೃಷ್ಟಿ ಆಗಲಿರುವ ಬುಲ್‍ಬುಲ್ ಹೆಸರಿನ ಮತ್ತೊಂದು ಚಂಡಮಾರುತ ನವೆಂಬರ್ 1 ಅಥವಾ 2ರಂದು ಬಂಗಾಳಕೊಲ್ಲಿಯಲ್ಲಿ ರೌದ್ರರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಆಗ ಮತ್ತೆ ಭಾರೀ ಮಳೆ ಆಗುವ ಸಾಧ್ಯತೆ ಇದೆ.