Tag: ಕ್ಯಾಮೇಗೌಡ

  • ಗುಡ್ಡಗಾಡಿನಲ್ಲಿ 16 ಕೆರೆ- ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಮೆಚ್ಚುಗೆ

    ಗುಡ್ಡಗಾಡಿನಲ್ಲಿ 16 ಕೆರೆ- ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಮೆಚ್ಚುಗೆ

    ಬೆಂಗಳೂರು: ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಮಂಡ್ಯ ಜಿಲ್ಲೆಯ ಕಾಮೇಗೌಡರ ಸಾಮಾಜಿಕ ಕಳಕಳಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿಹೊಗಳಿದ್ದಾರೆ.

    ಪ್ರಧಾನಿ ಮೋದಿ ಇಂದಿನ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡ ಅವರನ್ನು ಶ್ಲಾಘಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸಮದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರು 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

    ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕ್ಯಾಮೆಗೌಡ ಅವರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿರುವ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸವನ್ನು ಗುರುತಿಸಿದ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಪ್ರಧಾನಿ ಮೋದಿ ಕ್ಯಾಮೇಗೌಡರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ದೇಶಕ್ಕೆ ಪರಿಚಯಿಸಿದ್ದಾರೆ.

    ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ?:
    ಕುರಿಗಾಹಿಯಾಗಿರುವ ಕ್ಯಾಮೇಗೌಡ ಅವರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಟಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿಪಡೆದಿದ್ದರು. ನಾನು ದಾಹ ತೀರಿಸಿಕೊಂಡೆ ಆದ್ರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

    ಕ್ಯಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕ್ಯಾಮೇಗೌಡರು ಸದ್ಯ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕ್ಯಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಸಹ ಅವರು ತೋಡಿದ ಕೆರೆಗಳಲ್ಲಿ ನೀರು ಸಾಕಷ್ಟು ಇರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.

    ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ, ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ದಾಸನಡೋಡ್ಡಿ ಗ್ರಾಮದ ಕಾಮೇಗೌಡ ಅವರು ಇಡೀ ಬೆಟ್ಟದ ಪ್ರದೇಶವನ್ನು ಹಸಿರೀಕರಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವರು ಸಾಮಾನ್ಯ ಕೃಷಿಕರಾಗಿ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.