Tag: ಕ್ಯಾಬ್ ಚಾಲಕ

  • ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಚಿಕ್ಕಬಳ್ಳಾಪುರ: ಕ್ಯಾಬ್ ಚಾಲಕನೋರ್ವ ತಿನ್ನುತ್ತಿದ್ದ ಪೊಂಗಲ್ ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ.

    ಕೆಐಎಎಲ್ ನ ಕಾರ್ ಪಾರ್ಕಿಂಗ್ ಬಳಿ ಇರುವ ಸತೀಶ್ ಡೈನಿಂಗ್ ಕ್ಯಾಂಟೀನ್ ನಲ್ಲಿ ಕ್ಯಾಬ್ ಚಾಲಕ ಗಣೇಶ್ 50 ರೂ. ಕೊಟ್ಟು ಒಂದು ಪ್ಲೇಟ್ ಪೊಂಗಲ್ ಖರೀದಿಸಿದ್ದಾರೆ. ಪೊಂಗಲ್ ತಿನ್ನುತ್ತಿದ್ದ ವೇಳೆ ಪೊಂಗಲ್ ಜೊತೆಗೆ ತಟ್ಟೆಯಲ್ಲಿ ಹುಳ ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಕ್ಯಾಬ್ ಚಾಲಕ ಗಣೇಶ್, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.

    ವಿಷಯ ತಿಳಿದು ಗುಂಪುಗೂಡಿದ ಕ್ಯಾಬ್ ಚಾಲಕರು ಕ್ಯಾಂಟೀನ್ ಮಾಲೀಕ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಕೊಡ್ತಿರೋದಲ್ಲದೇ ಒಂದು ಪ್ಲೇಟ್ ಪೊಂಗಲ್ ಗೆ 50 ರೂ. ವಸೂಲಿ ಮಾಡಿ ಹಣ ದೋಚುತ್ತಿದ್ದಾರೆ ಅಂತ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಅಡುಗೆ ಕೊಠಡಿಗೆ ತೆರಳಿ ಕ್ಯಾಬ್ ಚಾಲಕರು ಪರಿಶೀಲನೆ ನಡೆಸಿದ್ದು, ಕೊಳೆತ ಟೊಮೆಟೋ, ತರಕಾರಿಗಳು ಸಹ ಪತ್ತೆಯಾಗಿವೆ. ಇದರಿಂದ ಮತ್ತಷ್ಟು ಕೆಂಡಾಮಂಡಲರಾಗಿರೋ ಕ್ಯಾಬ್ ಚಾಲಕರು ಕ್ಯಾಂಟೀನ್ ಮುಚ್ಚಬೇಕು ಹಾಗೂ ಬೇರೆಯವರಿಗೆ ಕ್ಯಾಂಟೀನ್ ನಡೆಸಲು ಅವಕಾಶ ಮಾಡಿಕೊಡಬೇಕು ಅಂತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಯಾಬ್ ಸಮೇತ ಸಾಫ್ಟ್ ವೇರ್ ಕಂಪನಿಯ ಚಾಲಕ ಕಿಡ್ನಾಪ್!

    ಕ್ಯಾಬ್ ಸಮೇತ ಸಾಫ್ಟ್ ವೇರ್ ಕಂಪನಿಯ ಚಾಲಕ ಕಿಡ್ನಾಪ್!

    – 50 ಸಾವಿರ ಹಣ ನೀಡುವಂತೆ ಬೇಡಿಕೆ

    ಆನೇಕಲ್: ಸಾಫ್ಟ್ ವೇರ್ ಕಂಪನಿಯೊಂದರ ಕ್ಯಾಬ್ ಚಾಲಕನನ್ನು ಕ್ಯಾಬ್ ಸಮೇತ ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹರಿಬಾಬು ಕಿಡ್ನಾಪ್ ಆದ ಕ್ಯಾಬ್ ಚಾಲಕ. ಬೊಮ್ಮನಹಳ್ಳಿಯ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿದ್ದ ಇವರು ಹೊಂಗಸಂದ್ರದಲ್ಲಿ ನೆಲೆಸಿದ್ದ. ಇದೇ ತಿಂಗಳ 16 ರಂದು ರಾತ್ರಿ ಉದ್ಯೋಗಿಯೊಬ್ಬರನ್ನು ಹೊಸೂರು ಮುಖ್ಯರಸ್ತೆಯ ಹೆಬ್ಬಗೋಡಿಗೆ ಡ್ರಾಪ್ ಮಾಡಿ ವಾಪಸ್ಸಾಗುವಾಗ ಕಾಣೆಯಾಗಿದ್ದಾರೆ.

    ಕಾಣೆಯಾದ ಮರುದಿನವೇ ಈತನ ಅಣ್ಣ ಅಶೋಕ್ ಎಂಬವರಿಗೆ ಕಿಡ್ನಾಪರ್ಸ್ ಕರೆ ಮಾಡಿ 50 ಸಾವಿರ ನೀಡುವಂತೆ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಅಶೋಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಹರಿಬಾಬು ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ

    ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ

    ಚೆನ್ನೈ: ಸೀಟ್ ಬೆಲ್ಟ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರು ಥಳಿಸಿದ ಕಾರಣ 21 ವರ್ಷದ ಕ್ಯಾಬ್ ಚಾಲಕರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

    ತಮಿಳುನಾಡಿನ ಶಂಕರನ್‍ಕೋವಿಲ್ ಮೂಲದ ಮಣಿಕಂದನ್ ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕ. ಬುಧವಾರದಂದು ಮಣಿಕಂದನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಶೇ.59ರಷ್ಟು ಸುಟ್ಟ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಮಣಿಕಂದನ್ ಸೀಟ್ ಬೆಲ್ಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅದಕ್ಕಾಗಿ ದಂಡ ಕಟ್ಟಿದ್ದಾರೆ. ಬಳಿಕ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರ ದೌರ್ಜನ್ಯದ ಬಗ್ಗೆ ಮಣಿಕಂದನ್ ತನ್ನ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಪೊಲೀಸರು ನನಗೆ ಕಬ್ಬಿಣದ ರಾಡ್‍ನಿಂದ ಹೊಡೆದರು. ನನ್ನ ಲೈಸೆನ್ಸ್ ಕಸಿದುಕೊಂಡು, ನನ್ನ ಜಾತಿಯನ್ನ ಸೂಚಿಸಿ ನಿಂದಿಸಿದ್ರು. ನಾನು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದೆ. ಇದನ್ನ ವಾಟ್ಸಪ್ ಮತ್ತು ಯೂಟ್ಯೂಬ್‍ನಲ್ಲಿ ಅದ್ಹೇಗೆ ಹಾಕ್ತೀಯ ನೋಡ್ತೀವಿ ಎಂದು ಬೆದರಿಸಿದ್ರು ಎಂದು ಮಣಿಕಂದನ್ ಹೇಳಿದ್ದು, ಇದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕಾರಿನಲ್ಲಿದ್ದ ಇಂಧನದ ಕ್ಯಾನ್ ತೆಗೆದುಕೊಂಡು ಮೈಮೇಲೆ ಸುರಿದು ಮಣಿಕಂದನ್ ಬೆಂಕಿ ಹಚ್ಚಿಕೊಂಡಿದ್ದಾರೆ.

    ಮಣಿಕಂದನ್ ಗೆ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನ ನಿಯೋಜಿಸಲಾಗಿದೆ. ಅವರು ಬದುಕುಳಿಯುತ್ತಾರೆಂದು ನಂಬಿದ್ದೇವೆ. ಸದ್ಯಕ್ಕೆ ಅವರು ಐಸಿಯು ನಲ್ಲಿದ್ದಾರೆ ಎಂದು ಡಾ. ಪಿ ವಸಂತಮಣಿ ಹೇಳಿದ್ದಾರೆ.

    ಘಟನೆಯ ಬಳಿಕ ಸುಮಾರು 100 ಜನ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ ಪೊಲೀಸ್ ಆಯುಕ್ತರಾದ ಎಕೆ ವಿಶ್ವನಾಥನ್ ಆಸ್ಪತ್ರೆಗೆ ಭೇಟಿ ನೀಡಿ ಚಾಲಕ ಮಣಿಕಂದನ್ ಆರೋಗ್ಯ ವಿಚಾರಿಸಿದ್ದಾರೆ. ಇದಕ್ಕೆ ಕಾರಣವಾದ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಸೀಟ್ ಬೆಲ್ಟ್ ಹಾಕಿಲ್ಲ ಎಂದು ಕ್ಯಾಬ್ ನಿರಾಕರಿಸಿದಕ್ಕೆ ಉದ್ಯಮಿ ಮೇಲೆ ಡ್ರೈವರ್‍ ಗಳಿಂದ ಹಲ್ಲೆ

    ಸೀಟ್ ಬೆಲ್ಟ್ ಹಾಕಿಲ್ಲ ಎಂದು ಕ್ಯಾಬ್ ನಿರಾಕರಿಸಿದಕ್ಕೆ ಉದ್ಯಮಿ ಮೇಲೆ ಡ್ರೈವರ್‍ ಗಳಿಂದ ಹಲ್ಲೆ

    ಬೆಂಗಳೂರು: ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಮೇಲೆ ಊಬರ್ ಕ್ಯಾಬ್ ನ ಚಾಲಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.

    ಉದ್ಯಮಿ ದೇವ್ ಬ್ಯಾನರ್ಜಿ ತನ್ನ ಸ್ನೇಹಿತನ ಜೊತೆ ಕಳೆದ ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಬರಲು ಊಬರ್ ಕ್ಯಾಬ್ ಬುಕ್ ಮಾಡಿದರು. ಆದರೆ ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ.

    ಚಾಲಕ ವರ್ತನೆಯಿಂದ ಬೇಸತ್ತ ದೇವ್ ಹಾಗೂ ಅವರ ಸ್ನೇಹಿತ ಆ ಕ್ಯಾಬ್ ನಿರಾಕರಿಸಿ ಮತ್ತೊಂದು ಕ್ಯಾಬ್ ಹತ್ತಿದ್ದರು. ದೇವ್ ಕ್ಯಾಬ್ ನಿರಾಕರಿಸಿದಕ್ಕೆ ಊಬರ್ ಕ್ಯಾಬ್ ನ ಚಾಲಕ ಸಿಟ್ಟಿಗೆದ್ದಿದ್ದಾನೆ. ನಂತರ ಚಾಲಕನ ಜೊತೆಗೆ ಇತರ ಚಾಲಕರು ಸೇರಿ ಊಬರ್ ಕ್ಯಾಬ್ ಪಾರ್ಕಿಂಗ್ ರಸ್ತೆಯಲ್ಲಿ ದೇವ್ ಇದ್ದ ಕ್ಯಾಬ್ ನನ್ನು ಅಡ್ಡಗಟ್ಟಿದ್ದಾರೆ. ನಂತರ ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ದೇವ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಊಬರ್ ಚಾಲಕರ ಥಳಿತಕ್ಕೆ ಹೆದರಿದ ದೇವ್ ಪ್ರಜ್ಞೆ ತಪ್ಪಿದ ಹಾಗೆ ನಾಟಕ ಮಾಡಿದ್ದಾರೆ. ದೇವ್ ಪ್ರಜ್ಞೆ ತಪ್ಪಿದ್ದನ್ನು ನೋಡಿ ಊಬರ್ ಚಾಲಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ನೇಹಿತನ ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದೇವ್ ಇಂದಿರಾನಗರ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಈ ಘಟನೆ ವಿಮಾನ ನಿಲ್ದಾಣದ ಆವರಣದಲ್ಲಿ ಆಗಿರುವ ಕಾರಣ ಏರ್‍ ಪೋರ್ಟ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ.