ರಾಯಚೂರು: ಜಿಲ್ಲೆಯ ಅರಕೇರಾ ನೂತನ ತಾಲೂಕಾಗಿ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆದಿದೆ.
ಕ್ಯಾಬಿನೆಟ್ ಸಭೆಯಲ್ಲಿ ನೂತನ ತಾಲೂಕಾಗಿ ಘೋಷಣೆಯಾಗಿದ್ದರಿಂದ ಅರಕೇರಾ ಗ್ರಾಮದಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ದೇವದುರ್ಗ ಶಾಸಕ ಶಿವನಗೌಡ ನಾಯಕ ಸ್ವಗ್ರಾಮ ಅರಕೇರಾವನ್ನು ನೂತನ ತಾಲೂಕು ಮಾಡುವಂತೆ ಎರಡು ವರ್ಷಗಳಿಂದ ಕೂಗು ಕೇಳಿ ಬಂದಿತ್ತು. ಅರಕೇರಾ ತಾಲೂಕು ಘೋಷಣೆ ಮಾಡಿದ್ದರಿಂದ ಅರಕೇರಾ ಗ್ರಾಮದಲ್ಲಿ ಸಂಭ್ರಮ ಮನೆಮಾಡಿತ್ತು. ಶಾಸಕ ಶಿವನಗೌಡ ನಾಯಕ ಮನೆ ಎದುರು ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು.
ಅರಕೇರಾ ಗ್ರಾಮ ಪಂಚಾಯತ್ 20 ಸದಸ್ಯರನ್ನು ಒಳಗೊಂಡಿದೆ. ಅರಕೇರಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಹೊಂದಿದೆ. ಅರಕೇರಾ ಹೋಬಳಿ ವ್ಯಾಪ್ತಿಗೆ 10 ಪಂಚಾಯತಿಗಳು ಬರುತ್ತವೆ. ಹಾಳ ಜಾಡಲದಿನ್ನಿ ಗ್ರಾಮ ಸೇರಿ 6 ವಾರ್ಡ್ ಗಳನ್ನು ಹೊಂದಿದೆ. ಅಗ್ನಿಶಾಮಕ ಠಾಣೆ, ನಾಡ ತಹಶೀಲ್ದಾರ್ ಕಾರ್ಯಾಲಯ, ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ದೇವದುರ್ಗ ತಾಲೂಕಿನಲ್ಲಿ ರಾಜಕೀಯ ಶಕ್ತಿ ಕೇಂದ್ರ ಎಂಬ ಹೆಸರು ಪಡೆದಿದೆ.
ಬೆಂಗಳೂರು: ಎಸ್‍ಡಿಪಿಐ ನಿಷೇಧ ವಿಚಾರ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಸಿಟಿ ರವಿ ಅವರು, ಯಾವುದೇ ಒಂದು ಘಟನೆ ಮೇಲೆ ನಿಷೇಧದಂತಹ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸ ಆಗುತ್ತಿದೆ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ನಾಳೆ ದಿನ ಕೋರ್ಟಿನಲ್ಲೂ ಈ ಕುರಿತಂತೆ ಉತ್ತರ ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರಿಗೆ ಅಕ್ಕಿ ಮೇಲೆ ಆಸೆ, ಅಕ್ಕನ ಮಕ್ಕಳ ಮೇಲೂ ಪ್ರೀತಿ ಅನ್ನೋ ರೀತಿ ಮಾಡುತ್ತಿದ್ದಾರೆ. ಮತ ಬ್ಯಾಂಕ್ ರಾಜಕೀಯ ಇನ್ನಾದರೂ ಕಾಂಗ್ರೆಸ್ ನಾಯಕರು ಬಿಡಲಿ. ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ. ಬೆಂಗಳೂರು ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟವನ್ನು ಅವರಿಂದಲೇ ತುಂಬಿಸುತ್ತೇವೆ ಎಂದರು.
ಇದೇ ವೇಳೆ ತಮ್ಮ ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ನಾನು ಅಂದುಕೊಂಡ ಎಲ್ಲಾ ಕೆಲಸ ಈಡೇರಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದ ಗೌಡರು ಸಹಕಾರ ನೀಡಿದ್ದು, ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕೆಲಸ ಯಶಸ್ವಿಯಾಗಿದೆ. ಮೈಸೂರಿನಲ್ಲಿ ಸ್ವಾಯತ್ತ ಕೇಂದ್ರ ಮಾಡಲು ಎಚ್‍ಆರ್ ಡಿ ಮಿನಿಸ್ಟರ್ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾದಲ್ಲಿ ಕರ್ನಾಟಕ ಹೆಚ್ಚು ಸಹಕಾರ ನೀಡಲು ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿ ಹಾಗೂ ಬೇಡಿಕೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ನವದೆಹಲಿ: ಕೊರೊನಾ ವೈರಸ್ ಉಂಟು ಮಾಡಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಸದರು, ಸಚಿವರ 1 ವರ್ಷದ ವೇತನ ಕಡಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸಂಸದರು ಮತ್ತು ಕೇಂದ್ರ ಸಚಿವರ ವೇತನವನ್ನು ಒಂದು ವರ್ಷದಲ್ಲಿ ಶೇ.30ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‍ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್‍ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. 1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದು ಏಪ್ರಿಲ್ 1ರಿಂದ ಒಂದು ವರ್ಷದವರೆಗೆ ಜಾರಿಗೆ ಬರಲಿದೆ ಎಂದು ಹೇಳಿದರು.
Cabinet approves temporary suspension of MPLAD Fund of MPs during 2020-21 & 2021-22 for managing health& adverse impact of outbreak of #COVID19 in India. The consolidated amount of MPLAD Funds for 2 years – Rs 7900 crores – will go to Consolidated Fund of India: Prakash Javadekar pic.twitter.com/Suy20pFLQi
ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಹಣಕ್ಕಿಂತ ಹೆಚ್ಚಾಗಿ, ಸರಿಯಾದ ಸಂದೇಶವನ್ನು ಕಳುಹಿಸುವುದು ಮಹತ್ವವಾಗಿದೆ. ಸಂಸದರು ಮತ್ತು ಇತರ ಗಣ್ಯರ ವೇತನವನ್ನು ಕಾನೂನಿನಿಂದ ನಿರ್ಧರಿಸುವುದರಿಂದ ಸುಗ್ರೀವಾಜ್ಞೆ ಅಗತ್ಯವಾಗಿದೆ ಎಂದರು.
ಕೊರೊನಾ ವಿರುದ್ಧದ ಹೋರಾಟಕ್ಕೆ ಸುದೀರ್ಘ ಪ್ರಯಾಣದ ತಯಾರಿ ನಡೆಸುವಂತೆ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದರು. ಇದಾದ ಕೆಲ ಗಂಟೆಯಲ್ಲಿ ಈ ನಿರ್ಧಾರವನ್ನು ಕ್ಯಾಬಿನೆಟ್‍ನಲ್ಲಿ ಕೈಗೊಂಡು ಸುದೀರ್ಘ ಹೋರಾಟಕ್ಕೆ ಸಿದ್ಧತೆಯನ್ನು ಸ್ಪಷ್ಟಪಡಸಿದ್ದಾರೆ.
The President, Vice President, Governors of States have voluntarily decided to take a pay cut as a social responsibility. The money will go to Consolidated Fund of India: Union Minister Prakash Javadekar https://t.co/ExTFqVJTMapic.twitter.com/xubj3ObqAn
ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ರಾಜ್ಯ ಸರ್ಕಾರಗಳು ಈಗಾಗಲೇ ವೇತನ ಕಡಿತ ಮತ್ತು ಇತರ ಕ್ರಮಗಳನ್ನು ಕೈಗೊಂದಿವೆ. ರಾಜ್ಯ ವಿಪತ್ತು ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಕೇರಳ ಸರ್ಕಾರವು ಶಾಸಕರು, ಸಚಿವರ ಹಾಗೂ ಅಧಿಕಾರಿಗಳ ಒಂದು ತಿಂಗಳ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಕೋವಿಡ್-19 ಬಿಕ್ಕಟ್ಟಿನ ವಿರುದ್ಧ ಹೋರಾಡಲು ರಾಜ್ಯಕ್ಕೆ ಸಹಾಯ ಮಾಡಲು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ವರ್ಷದ ಸಂಬಳವನ್ನು ಬಿಟ್ಟುಕೊಟ್ಟಿದ್ದಾರೆ.
ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳು ತಮ್ಮ ಸರ್ಕಾರಿ ನೌಕರರ ಶ್ರೇಣಿಯನ್ನು ಅವಲಂಬಿಸಿ ವೇತನವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.
ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯಾಬಿನೆಟ್ ಸಭೆ ನಡೆಸಿದ್ದಾರೆ.
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು.
ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಸಾಮಾಜಿಕ ಆಂತರ ಕಾಯ್ದುಕೊಳ್ಳಿ. ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದ್ದರು. ಭಾಷಣದಲ್ಲಿ ಹೇಳಿದಂತೆ ಪ್ರಧಾನಿ ಮೋದಿ ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯಾಬಿನೆಟ್ ಸಭೆ ನಡೆಸಿದರು.
ತಮ್ಮ ಭಾಷಣದಲ್ಲಿ ಸಾಮಾಜಿಕ ಅಂತರವನ್ನು ಕೇವಲ ರೋಗಿಗಳು ಮಾತ್ರ ಪಾಲಿಸುವುದಲ್ಲ. ಎಲ್ಲರೂ ಪಾಲಿಸಲೇಬೇಕು. ಇದು ನನಗೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದರು.
ಮೂಲಗಳ ಪ್ರಕಾರ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಭೆ ಮಾಡಲು ಮುಂದಾಗಿದ್ದರು. ಆದರೆ ಇದು ಸರಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ದೂರ ದೂರ ಕುರ್ಚಿಗಳನ್ನು ಇರಿಸಿ ಸಭೆ ನಡೆಸಿದ್ದಾರೆ.
ಈಗಾಗಲೇ ಭಾರತದಲ್ಲಿ 530 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 11 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರಿಗೆ ಕ್ಯಾಬಿನೆಟ್ ಸಭೆಯಲ್ಲಿ ಗಿಫ್ಟ್ ಮೇಲೆ ಗಿಫ್ಟ್ ಸಿಕ್ಕಿದೆ.
ಹಿರೇಕೆರೂರಿನ ಅನರ್ಹ ಶಾಸಕ ಬಿಸಿ ಪಾಟೀಲ್ ಕ್ಷೇತ್ರದ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದಕ್ಕೆ ಬಿ.ಸಿ.ಪಾಟೀಲ್ ಟ್ವಿಟ್ಟರಿನಲ್ಲಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು ಎಂದು ಬಿಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು
ಕನಕಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡುವ ಚಿಂತನೆ ಮಾಡಲಾಗಿದೆ. ಈ ಬಗ್ಗೆ ಏನು ತೀರ್ಮಾನ ಆಗಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಮೆಡಿಕಲ್ ಕಾಲೇಜು ಶಿಫ್ಟ್ ಬಗ್ಗೆ ಡಿಸಿಎಂ ಅಶ್ವಥನಾರಾಯಣ್ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಂಪುಟದಿಂದ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು.
15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ 15 ಅನರ್ಹ ಶಾಸಕರ ಜೊತೆ ಸಭೆ ಶೀಘ್ರದಲ್ಲೇ ನಡೆಸಲು ಸಿಎಂ ನಿರ್ಧಾರ ಮಾಡಿದ್ದಾರೆ. ಉಪಚುನಾವಣೆಗಳಿಗೆ ಅನರ್ಹರಿಗೆ ಟಿಕೆಟ್ ಕೊಡುವ ವಿಚಾರ, ಸ್ಥಳೀಯ ಬಿಜೆಪಿಗರ ವಿರೋಧ ಸಂಬಂಧ ಚರ್ಚೆ ನಡೆಸಲಿದ್ದು ಅನರ್ಹರಿಗೆ ಟಿಕೆಟ್ ಭರವಸೆ ಕೊಡಲಿದ್ದಾರೆ ಎನ್ನಲಾಗಿದೆ.
ಸುಪ್ರೀಂಕೋರ್ಟ್ ವಿಚಾರಣೆ ಅಕ್ಟೋಬರ್ 22ಕ್ಕೆ ಇದೆ ಈ ಹಿನ್ನೆಲೆ ಕೋರ್ಟ್ ನಿಲುವು ನೋಡಿಕೊಂಡು ಮುಂದುವರಿಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಡಲು ನಿರ್ಧರಿಸಲಾಗಿದೆ.
ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಹಾರ ಸೇರಿದಂತೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆ ಬಹುಮುಖ್ಯವಾಗಿತ್ತು. ಈ ಸಭೆಯಲ್ಲಿ ಸಚಿವರಾದ ಶ್ರೀರಾಮುಲು, ಜೆಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿಸಿ ಪಾಟೀಲ್, ವಿ ಸೋಮಣ್ಣ, ನಾಗೇಶ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಪ್ರವಾಹದಿಂದ ಸಮಸ್ಯೆ ಎದುರಿಸಿದ್ದ ರಾಜ್ಯದ ಜನರಿಗೆ ಪರಿಹಾರ, ಪುನರ್ವಸತಿ ನೀಡುವ ಕಲ್ಪಿಸುವ ಬಗ್ಗೆ ಪ್ರಮುಖ ಚರ್ಚೆ ನಡೆಸಲಾಯಿತು.
ಕ್ಯಾಬಿನೆಟ್ ನಿರ್ಣಯಗಳು:
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿತು. ಅಲ್ಲದೇ ನೆರೆ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ನಿರ್ಧಾರದಂತೆ ಈಗಾಗಲೇ 1.35 ಲಕ್ಷ ಜನರಿಗೆ ಹಣ ಬಿಡುಗಡೆ ಮಾಡಲಾಯಿತು. ಈ ವೇಳೆ ಪರಿಹಾರ ಪಡೆಯಲು ಮತ್ತೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿ ಅವರಿಗೂ 10 ಸಾವಿರ ರೂ.ಗಳನ್ನು ನೀಡಲು ಒಪ್ಪಿಗೆ ನೀಡಿದರು.
ಕಳೆದ ಕ್ಯಾಬಿನೆಟ್ ಸಭೆಯ ವೇಳೆ ಸಂಪುಟ ವಿಸ್ತರಣೆ ಹಿನ್ನೆಲ್ಲಿ ಉಳಿದುಕೊಂಡಿದ್ದ ಸನ್ನಡತೆಯ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಪಟ್ಟಿಗೆ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಸ್ವತಂತ್ರ್ಯ ದಿನದ ಹಿನ್ನೆಲೆಯಲ್ಲಿ ಈ ಬಾರಿ ಬಿಡುಗಡೆಯಾಗಬೇಕಿದ್ದ ಒಬ್ಬ ಮಹಿಳಾ ಕೈದಿ ಸೇರಿ 140 ಜನರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.
ಹೊಸ ಪಿಂಚಣಿ ವ್ಯವಸ್ಥೆ ಅಡಿ ಪಿಂಚಣಿಯನ್ನು ರಾಜ್ಯದ ಪಾಲು ನೀಡುತ್ತ ಮೊತ್ತವನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. 2019 ಏಪ್ರಿಲ್ ನಿಂದ ಹೊಸ ಪಿಂಚಣಿ ವ್ಯವಸ್ಥೆ ಅನ್ವಯವಾಗುವಂತೆ ನಿರ್ಣಯ ಕೈಗೊಳ್ಳಲಾಗಿದೆ.
ಮುಂದಿನ ಅವಧಿಯಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರತಿ ಮಂಗಳವಾರ ಕ್ಯಾಬಿನೆಟ್ ಸಭೆ ನಡೆಸಲು ತೀರ್ಮಾನ ಮಾಡಲಾಯಿತು.
ಬರ ಪ್ರದೇಶಗಳಲ್ಲಿ ಬೋರ್‍ವೆಲ್ ಹಾಗೂ ಇನ್ನಿತರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಿಗೆ ಕ್ಯಾಬಿನೆಟ್ ನೀಡಿತು. 5 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಟೆಂಡರ್ ಇಲ್ಲದೆಯೇ ಕಾಮಗಾರಿ ಆರಂಭಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಂಪುಟ ಉಪಸಮಿತಿ: ಅಂತರ್ ರಾಜ್ಯ ಜಲ ವಿವಾದಗಳ ನಿರ್ವಹಣೆ ಸೇರಿದಂತೆ ಕೇಂದ್ರದ ಜೊತೆ ಜಲ ವಿಚಾರವಾಗಿ ಸಮನ್ವಯ ಸಾಧಿಸಲು ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಲಾಯಿತು. ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ರಚನೆಯಾದ ಉಪ ಸಮಿತಿಯಲ್ಲಿ ಬಸವರಾಜ ಬೊಮ್ಮಾಯಿ, ಅಶೋಕ್, ಗೋವಿಂದ ಕಾರಜೋಳ ಸಮಿತಿ ಸದಸ್ಯರಾಗಿದ್ದಾರೆ.
ಕೇಂದ್ರಕ್ಕೆ ನಿಯೋಗ: ರಾಜ್ಯದಲ್ಲಿ ಭೂವಿಜ್ಞಾನಿಗಳ ಕೊರತೆ ಹಿನ್ನೆಲೆ ನಿವೃತ್ತ ಭೂ ವಿಜ್ಞಾನಿಗಳನ್ನ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲು ತೀರ್ಮಾನ ಮಾಡಲಾಗಿದೆ. ನೆರೆಯಿಂದ ಹಾನಿಯಾದ ಕಬ್ಬು, ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ವಿಮಾ ಸೌಲಭ್ಯ ಸೇರಿದಂತೆ ವಿಶೇಷ ಪ್ಯಾಕೇಜ್ ನೀಡಲು ಪ್ರಧಾನಿ ಮಂತ್ರಿಗಳ ಬಳಿ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ.
ಸಂಪುಟ ವಿಸ್ತರಣೆಯಾದ ಬಳಿಕ ನಡೆದ ಮೊದಲ ಸಭೆಗೆ ಆರ್ ಅಶೋಕ್ ತಡವಾಗಿ ಆಗಮಿಸಿದರು. ಸಂಪುಟ ವಿಸ್ತರಣೆ ಆದರೂ ಖಾತೆ ಹಂಚಿಕೆಯಾಗದ(ರಾತ್ರಿ 8 ಗಂಟೆಯ ವೇಳೆಗೆ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟಗೊಂಡಿತ್ತು) ಹಿನ್ನೆಲೆಯಲ್ಲಿ ನಾಯಕರ ಮುಖದಲ್ಲಿ ಅಸಮಾಧಾನ ಕಂಡು ಬಂತು. ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ನೆರೆ ಹಾವಳಿ ಹಿನ್ನೆಲೆ ಸಚಿವರು ಪ್ರವಾಸ ಮಾಡಿದ್ದೆವು. ಇಂದಿನ ಸಭೆಯಲ್ಲಿ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಪಡೆದ ಮಾಹಿತಿಯೊಂದಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಹೊಸ ಪಿಂಚಣಿ ಅನ್ವಯ ಶೇ.14 ರಷ್ಟು ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ 250 ಕೋಟಿ ರೂ. ಹೊಣೆಯಾಗುತ್ತದೆ ಎಂದರು.
ನವದೆಹಲಿ: ಬೆಳಗ್ಗೆ 9.30ರ ಒಳಗಡೆ ಸಚಿವರು ಕಚೇರಿಗೆ ತಪ್ಪದೇ ಆಗಮಿಸಬೇಕೆಂದು ಪ್ರಧಾನಿ ಮೋದಿ ನೂತನ ಸಚಿವರಿಗೆ ಸೂಚನೆ ಮಾಡಿದ್ದಾರೆ.
ಬುಧವಾರ ಮಂತ್ರಿ ಪರಿಷತ್ ಸಭೆಯಲ್ಲಿ ಮಾತನಾಡಿದ ಮೋದಿ, ಕಚೇರಿಗೆ 9.30ರ ಒಳಗಡೆ ಬರಬೇಕು. ಮನೆಯಿಂದ, ಇತರ ಸ್ಥಳಗಳಿಂದ ಕುಳಿತು ಕಚೇರಿಯ ಕೆಲಸವನ್ನು ನಿರ್ವಹಿಸಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಿರಿಯ ಸಚಿವರಿಗೆ ಹಿರಿಯ ಸಚಿವರು ಮಾರ್ಗದರ್ಶನ ನೀಡಬೇಕು. ಕ್ಯಾಬಿನೆಟ್ ಖಾತೆಯ ಸಚಿವರು ರಾಜ್ಯ ಖಾತೆಯ ಸಚಿವರ ಜೊತೆ ಮುಖ್ಯವಾದ ಫೈಲ್‍ಗಳನ್ನು ಹಂಚಿಕೊಳ್ಳಬೇಕು. ಸಚಿವಾಲಯದ ಬೆಳವಣಿಗೆಯನ್ನು ಪ್ರತಿನಿತ್ಯ ಗಮನಿಸಬೇಕು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.
ಸಚಿವರು ಆಯಾ ರಾಜ್ಯಗಳ ಸಂಸದರು ಮತ್ತು ಸಾರ್ವಜನಿಕರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಫೈಲ್ ರವಾನೆಗೆ ಕ್ಯಾಬಿನೆಟ್, ರಾಜ್ಯ ಸಚಿವರು, ಸಚಿವಾಲಯದ ಅಧಿಕಾರಿಗಳ ಜೊತೆ ಸ್ಥಳದಲ್ಲಿ ಚರ್ಚಿಸಿ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಫೈಲ್ ವಿಳಂಬ ಆಗದಂತೆ ನೋಡಿಕೊಳ್ಳಬೇಕು. ಈ ಮೂಲಕ ವೇಗವಾಗಿ ಸರ್ಕಾರ ಕೆಲಸ ಮಾಡಬೇಕು ಎಂದು ಮೋದಿ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.
5 ವರ್ಷಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳು ಏನು ಎನ್ನುವುದನ್ನು ಪ್ರತಿ ಇಲಾಖೆ ತಿಳಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿನ ಬಜೆಟ್ ಅವಧಿಯನ್ನು ಚೆನ್ನಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ತೋಮರ್ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿದ್ದರು.
ರೈಲ್ವೇ ಸಚಿವ ಪಿಯೂಶ್ ಗೋಯಲ್ ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ 5 ವರ್ಷ್ ವಿಷನ್ ಪ್ಲಾನ್ ಬಗ್ಗೆ ಮಾತನಾಡಿದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಮಂತ್ರಿ ಪರಿಷತ್ ಸಭೆಯನ್ನು ಮೋದಿ ಈ ಹಿಂದಿನ ಅವಧಿಯಲ್ಲೂ ನಡೆಸುತ್ತಿದ್ದರು. ಪ್ರತಿ ಸಭೆಯಲ್ಲಿ ಇಲಾಖೆಯ ಪ್ರಗತಿಯ ಮಾಹಿತಿ ಮತ್ತು ಸಚಿವರ ಕಾರ್ಯವೈಖರಿಯನ್ನು ವಿಮರ್ಷಿಸಿ ಮೋದಿ ಸಲಹೆ ಸೂಚನೆ ನೀಡುತ್ತಾರೆ.
A meeting of the Union Council of Ministers was held in New Delhi this evening. pic.twitter.com/u3DV6TO1vS