Tag: ಕ್ಯಾಬಿನೆಟ್ ಮೀಟಿಂಗ್

  • ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    – ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ
    – ಜನನ ಮರಣ ನೊಂದಣಿ ತಿದ್ದುಪಡಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ, ಬೆಂಗಳೂರು ಅಭಿವೃದ್ಧಿಗೆ ಅನುದಾನ ಬಿಡುಗಡೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಒನ್ ಟೈಮ್ ಸೆಟಲ್ ಮೆಂಟ್‌ ಯೋಜನೆ ಜಾರಿಗೆ ತರುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಇಂದಿನ ಸಂಪುಟ ಸಭೆಯಲ್ಲಿ (Cabinet Meeting) ಒಪ್ಪಿಗೆ ನೀಡಲಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 20 ವಿಷಯಗಳ ಕುರಿತು ಚರ್ಚಿಸಿ ಅನುಮೋದನೆ ನೀಡಲಾಗಿದೆ. ಆದ್ರೆ ಮೆಟ್ರೋ 2ನೇ ಹಂತದ ಕಾಮಗಾರಿಯ ಹೆಚ್ಚುವರಿ ಕ್ರಿಯಾ ಯೋಜನೆಗೆ ಹಣ ಬಿಡುಗಡೆ ಸಂಬಂಧ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಗೆ ಇದಕ್ಕೆ ಒಪ್ಪಿಗೆ ನೀಡುವುದನ್ನು ಮುಂದೂಡಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಬಿಬಿಎಂಪಿ (BBMP) ವ್ಯಾಪ್ತಿಯ ಉಪಮುಖ್ಯರಸ್ತೆಗಳ ಅಭಿವೃದ್ಧಿಗೆ ಸಂಪುಟ ತೀರ್ಮಾನಿಸಿದೆ. 1,681 ಕಿ.ಮೀ ರಸ್ತೆಗಳ ಅಭಿವೃದ್ಧಿಗೆ ರಸ್ತೆ ಡಾಂಬರೀಕರಣಕ್ಕೆ 694 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆಯನ್ನ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಒಂದು ಟನ್‌ಗೆ 100 ರೂನಂತೆ ರಾಯಲ್ಟಿ ಹಾಕಲಿದ್ದು, ಈ ತೆರಿಗೆಯನ್ನ ಭೂಮಾಲಿಕರು ಕಟ್ಟಬೇಕಿದೆ. ಅಲ್ಲದೇ ಕೆಕೆಆರ್‌ಡಿಬಿಯಿಂದ ರಸ್ತೆಗಳ ಅಭಿವೃದ್ಧಿ, ಇಜೇರಿಯಿಂದ ಯಡ್ರಾಮಿ ವರೆಗೆ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅಂದಾಜು ವೆಚ್ಚಕ್ಕೆ ಸಂಪುಟ ಒಪ್ಪಿಗೆ. ನೀಡಲಾಗಿದೆ. ಅಲ್ಲದೇ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಸತಿ ಶಾಲೆಗಳಿಗೆ ಕೆಕೆಆರ್‌ಡಿಬಿಯಿಂದ 42.66 ಕೋಟಿ ರೂ. ವೆಚ್ಚದಲ್ಲಿ ಹಾಸಿಗೆ, ಮಂಚ ಖರೀದಿಸಲು ಅನುಮತಿ ನೀಡಲಾಗಿದೆ.

    ಜನನ ಮರಣ ನೊಂದಣಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದಕ್ಕಾಗಿ 97.27 ಕೋಟಿ ವೆಚ್ಚಕ್ಕೆ ಹೆಚ್ಚುವರಿ 54 ಕೋಟಿ ರೂ. ಸೇರ್ಪಡೆಗೆ ಸಮ್ಮತಿಸಲಾಗಿದೆ. ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಸಮಾಜ ಕಲ್ಯಾಣ ಭವನ ನಿರ್ಮಾಣಕ್ಕೆ 40.50 ಕೋಟಿ ರೂ. ಅನುದಾನಕ್ಕೆ ಸಮ್ಮತಿ ಸೂಚಿಸಲಾಗಿದೆ. ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡಲು 43.95 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನ. ಇದರೊಂದಿಗೆ ಆಹಾರ ಗುಣಮಟ್ಟ ಹಾಗೂ ಔಷಧ ನಿಯಂತ್ರಣ ಇಲಾಖೆ ವಿಲೀನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

    ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ:
    ಸಂಪುಟದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ ಮಾಡಲಾಗಿದೆ. 33 ವಿರಳ ದುಬಾರಿ ಕಾಯಿಲೆಗಳಿಗೆ 3,4 ಲಕ್ಷ ರೂ. ವೆರೆಗೂ ಚಿಕಿತ್ಸೆ ನೀಡುವ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. SCSP, TSP ಹಣವನ್ನೂ ಇದಕ್ಕೆ ಬಳಕೆ ಮಾಡಲಾಗುತ್ತದೆ. ಪ್ರಸ್ತುತ 47 ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ ಎಂದು ಸಚಿವ ಹೆಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬಾಣಂತಿಯರ ಸಾವಿನ ಬಗ್ಗೆ ಕಳವಳ:
    ಇನ್ನೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಿಎಂ ಕಳವಳ ವ್ಯಕ್ತಪಡಿಸಿದರು. ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಸಭೆಗೆ ಮಾಹಿತಿ ನೀಡಿದರು. ಬಳಿಕ ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಸಚಿವರಿಗೆ ಸೂಚಿಸಲಾಯಿತು. ಇದನ್ನೂ ಓದಿ:  ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

  • ಬಿಜೆಪಿ ಕಡೆ ಸಚಿವ ರಮೇಶ್ ಜಾರಕಿಹೊಳಿ ಮುಖ?

    ಬಿಜೆಪಿ ಕಡೆ ಸಚಿವ ರಮೇಶ್ ಜಾರಕಿಹೊಳಿ ಮುಖ?

    ಬೆಂಗಳೂರು: ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯತ್ತ ಮುಖ ಮಾಡುತ್ತಾರಾ ಎನ್ನುವ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

    ಯಾಕಂದ್ರೆ ರಮೇಶ್ ಜಾರಕಿಹೊಳಿ ಅವರು ಇಂದಿನ ಕ್ಯಾಬಿನೆಟ್ ಸಭೆಗೆ ಗೈರಾಗಿದ್ದಾರೆ. ಇದೂವರೆಗೂ 12 ಕ್ಯಾಬಿನೆಟ್ ಸಭೆಗಳು ನಡೆದಿದ್ದು, ಇವುಗಳಲ್ಲಿ ಸಚಿವರು ಕೇವಲ 2 ಸಭೆಗಷ್ಟೇ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಸಾಹುಕಾರ ಬಿಜೆಪಿಯತ್ತ ಮುಖಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

    ಬೆಳಗಾವಿ ಅಧಿವೇಶನದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲವಿದೆ. ಈ ಹಿಂದೆಯೂ ರಮೇಶ್ ಜಾರಕಿಹೊಳಿಯವರು ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಬಲವಂತವಾಗಿ ಕಳೆದ ಕ್ಯಾಬಿನೆಟ್ ಸಭೆಗೆ ಹಾಜರಾಗಿದ್ದರು ಎನ್ನಲಾಗಿತ್ತು.

    ಇದೀಗ 12 ಸಭೆಗಳಲ್ಲಿ 2 ಸಭೆಗಳಲ್ಲಿ ಮಾತ್ರ ಹಾಜರಿ ಹಾಕಿರುವ ಸಚಿವರು ಇನ್ನೂ ಕೂಡ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದಾರಾ ಅನ್ನೋ ಅನುಮಾನವೊಂದು ಎದ್ದು ಕಾಣುತ್ತಿದೆ. ಸಚಿವರು ಮಾತ್ರ, ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಎಲ್ಲ ಮಾಧ್ಯಮಗಳ ಸೃಷ್ಟಿ ಅಂತ ಹೇಳುತ್ತಿದ್ದಾರೆ. ಆದ್ರೆ ಜಾರಕಿಹೊಳಿ ಬ್ರದರ್ಸ್ ಹಾಗೂ ಕಾಂಗ್ರೆಸ್ ನಡುವೆ ಶೀತಲ ಸಮರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಕ್ಯಾಬಿನೆಟ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

    ಒಟ್ಟಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ಗೆ ಸಚಿವರ ಗೈರು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಪರಿಣಾಮ ಬೀಳುವ ಸಾಧ್ಯತೆಗಳಿವೆ.

    ಸಚಿವ ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv