Tag: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

  • ವಿಚ್ಛಿದ್ರಕಾರಿ ದುಷ್ಟಶಕ್ತಿಗಳ ನಿಗ್ರಹಿಸಲು ಕಠಿಣ ಕ್ರಮಕ್ಕೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ

    ವಿಚ್ಛಿದ್ರಕಾರಿ ದುಷ್ಟಶಕ್ತಿಗಳ ನಿಗ್ರಹಿಸಲು ಕಠಿಣ ಕ್ರಮಕ್ಕೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ

    ಬೆಂಗಳೂರು: ನಗರದ ಶಿವಾಜಿನಗರದಲ್ಲಿ ರಾಷ್ಟ್ರಭಕ್ತ ಮಹಾಪುರುಷರ ಪುತ್ಥಳಿಗೆ ಮಸಿ ಬಳಿದು ಅವಮಾನಗೊಳಿಸುವ ಮೂಲಕ ಹಿಂಸಾಚಾರಕ್ಕೆ ಆಸ್ಪದ ಕೊಟ್ಟು, ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ವಿನಾಕಾರಣ ಆತಂಕವನ್ನು ಸೃಷ್ಟಿಸಿರುವ ವಿಚ್ಛಿದ್ರಕಾರಿ ದುಷ್ಟಶಕ್ತಿಗಳನ್ನು ಮತ್ತು ಈ ಘಟನೆಗಳ ಹಿಂದಿರುವ ಷಡ್ಯಂತ್ರವನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಬೆಂಗಳೂರಿನ ಶಿವಾಜಿನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುತ್ಥಳಿಗೆ ಮಸಿ ಬಳಿದು ಬಂಧಿತರಾಗಿರುವ ಏಳು ವ್ಯಕ್ತಿಗಳನ್ನು ವಿಚಾರಿಸಿ ಈ ರೀತಿಯ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಚಟುವಟಿಕೆಗಳ ಹಿಂದೆ ಇರುವ ಷಡ್ಯಂತ್ರವನ್ನು ಪತ್ತೆ ಹಚ್ಚುವುದು ಅತ್ಯಂತ ಅನಿವಾರ್ಯವಾಗಿದೆ. ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಈ ಷಡ್ಯಂತ್ರ ಒಂದು ಖಂಡನಾರ್ಹ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಬಂಧಿತ ಆರೋಪಿ ನವೀನ್ ಗೌಡ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಸನ್ಮಾನ್ಯ ಡಿ.ಕೆ ಶಿವಕುಮಾರ್ ಮತ್ತು ಜಮೀರ್ ಅಹಮದ್ ಅವರ ನಿಕಟವರ್ತಿಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತನಾಗಿರುತ್ತಾನೆ. ನವೀನ್ ಗೌಡನ ಕಾಂಗ್ರೆಸ್ ಜೊತೆಗಿನ ನಂಟು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕೋಮುಗಲಭೆಯ ಟ್ವೀಟ್ ಈ ಘಟನೆಗಳ ಹಿಂದೆ ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಿ ಕ್ಷೋಭೆಯ ವಾತಾವರಣ ನಿರ್ಮಾಣ ಮಾಡುವ ಕಾಂಗ್ರೆಸ್‍ನ್ನು ಷಡ್ಯಂತ್ರದ ಭಾಗವಾಗಿರುವುದು ಕಂಡುಬರುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಕಾಂಗ್ರೆಸ್, ಎನ್‍ಸಿಪಿ ಮತ್ತು ಶಿವಸೇನೆಯ ಆಡಳಿತವಿರುವ ಮಹಾರಾಷ್ಟ್ರದಲ್ಲಿ ದುಷ್ಟ ಶಕ್ತಿಗಳು ಕನ್ನಡ ಧ್ವಜವನ್ನು ಸುಟ್ಟು ಹಾಕಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುವ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ದೇಶಕ್ಕೆ ಅಪಾಯ. ಅದು ವಿರೋಧ ಪಕ್ಷವಾಗಿದ್ದರೆ ದೇಶಕ್ಕೆ ಎರಡು ಪಟ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ ಎನ್ನುವುದನ್ನು ನಾಡಿನ ಜನತೆ ಗಮನಿಸಬೇಕೆಂದು ವಿನಂತಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ಹುತಾತ್ಮರಾದ ಕನ್ನಡ ನಾಡಿನ ಹೆಮ್ಮಯ ಪುತ್ರ ಗಂಡುಗಲಿ ಸಂಗೊಳ್ಳಿ ರಾಯಣ್ಣ, ಬ್ರಿಟಿಷ್ ದುರಾಡಳಿತದ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿ ಮಾತೃಶಕ್ತಿಗೆ ಗೌರವ ತಂದುಕೊಟ್ಟಿರುವ ದೇಶಭಕ್ತೆ ವೀರರಾಣಿ ಕಿತ್ತೂರು ಚನ್ನಮ್ಮ, ಮೊಘಲ್ ದುರಾಡಳಿತ ಮತ್ತು ಆ ಸಮಯದಲ್ಲಿ ದೇಶಾದ್ಯಂತ ನಡೆದಿರುವಂಥ ಕ್ರೌರ್ಯ, ಅತ್ಯಾಚಾರ ಹಾಗೂ ಬಲಾತ್ಕಾರದ ಮತಾಂತರಗಳನ್ನು ಪ್ರತಿಭಟಿಸಿ ಮೊಘಲ್ ಸಾಮ್ರಾಜ್ಯಕ್ಕೆ ಸವಾಲನ್ನು ಹಾಕಿ ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದ ಶಿವಾಜಿ ಮಹಾರಾಜ್ ಮುಂತಾದ ಮಹಾನ್ ದೇಶಭಕ್ತರುಗಳು ನಾಡಿನ ಜನತೆಗೆ ನಿತ್ಯ ನಿರಂತರ ದೇಶಪ್ರೇಮದ ಪ್ರೇರಣೆ ನೀಡುವ ಮಹಾಪುರುಷರು. ಈ ರಾಷ್ಟ್ರಭಕ್ತರಿಗೆ ಅವಮಾನವೆಸಗುವ ಕೃತ್ಯಗಳು ಇಡೀ ದೇಶಕ್ಕೆ ಮಾಡಿದ ಅಪಮಾನ. ಈ ಅಪಚಾರವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಮಹಾ ಪುರುಷರ ಪುತ್ಥಳಿಗಳನ್ನು ಸಂರಕ್ಷಿಸಲು ಮತ್ತು ಕಿಡಿಗೇಡಿಗಳ ದುಷ್ಕೃತ್ಯಗಳಿಗೆ ಅವಕಾಶವಿಲ್ಲದಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎಂಇಎಸ್ ಪುಂಡಾಟ ನಿಲ್ಲಲಿ: ಡಾಲಿ ಧನಂಜಯ್

    ಮಹಾನ್ ದೇಶಭಕ್ತರ ಪುತ್ಥಳಿಗಳನ್ನು ಅಗೌರವಿಸುವುದರ ಮೂಲಕ ನಾಡಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಿಸಿ, ಕ್ಷೋಭೆ ಉಂಟು ಮಾಡುವ ದುಷ್ಕೃತ್ಯವನ್ನು ಖಂಡಿಸುತ್ತಾ, ಈ ಕೃತ್ಯದ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆದು ಷಡ್ಯಂತ್ರದಲ್ಲಿ ಭಾಗವಹಿಸಿದ ಎಲ್ಲ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳನ್ನು ಒತ್ತಾಯಿಸುತ್ತಾ, ಮುಂದಿನ ದಿನಗಳಲ್ಲಿ ಈ ರೀತಿಯ ದುಷ್ಕೃತ್ಯಗಳು ನಡೆಯದಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಶ್ರೀಕಿ ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

    ಶ್ರೀಕಿ 12 ಕಂಪನಿಗಳ ವೆಬ್‍ಸೈಟ್ ಹ್ಯಾಕ್ ಮಾಡಿದ್ದಾನೆ. ಆತನ ವಿರುದ್ಧ ಇಂಟರ್ ಪೋಲ್ ಇಂದ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರಿಗೆ, ತನಿಖಾಧಿಕಾರಿ ಇನ್ಸ್‌ಪೆಕ್ಟರ್‌ ಚಂದ್ರಾದರ್ ಪತ್ರದ ಮೂಲಕ ಮನವಿಸಲ್ಲಿಸಿದ್ದಾರೆ. ಶ್ರೀಕಿ, ದೇಶ, ವಿದೇಶದಲ್ಲಿ ಸಾಕಷ್ಟು ಹ್ಯಾಕಿಂಗ್ ಮಾಡಿದ್ದಾನೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ವಂಚನೆಮಾಡಿದ್ದು, ಈ ಬಗ್ಗೆ ತನಿಖಾ ವ್ಯಾಪ್ತಿ ಹೆಚ್ಚಿರೋದರಿಂದ ನಾವು ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂಟರ್ ಪೋಲ್‍ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಅದಲ್ಲದೆ ಬಿಟ್‍ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಶ್ರೀಕಿ ಜೊತೆ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆಗೆ ಸಂಪರ್ಕ ಇತ್ತು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ. ಪ್ರಿಯಾಂಕ್ ಐಟಿ ಬಿಟಿ ಮಂತ್ರಿ ಆಗಿದ್ದಾಗ ಶ್ರೀಕಿಯನ್ನು ಭೇಟಿ ಮಾಡಿ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದ್ದು, ಅವರು ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್‍ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕು ಎಂದು ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

  • ದೇಶವಿರೋಧಿ ಚಿಂತನೆಯ ಕಾಂಗ್ರೆಸ್ ತನ್ನ ಹೆಸರು ಬದಲಿಸುವುದು ಸೂಕ್ತ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

    ದೇಶವಿರೋಧಿ ಚಿಂತನೆಯ ಕಾಂಗ್ರೆಸ್ ತನ್ನ ಹೆಸರು ಬದಲಿಸುವುದು ಸೂಕ್ತ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

    ಬೆಂಗಳೂರು: ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಟೂಲ್‍ಕಿಟ್‍ನ ಇನ್ನೊಂದು ಭಾಗವಾಗಿದೆ ಎಂದಿರುವ ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ಪಕ್ಷವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.

    ದೇಶದ ಪ್ರತಿಷ್ಠೆ ಮಣ್ಣು ಪಾಲು ಮಾಡುವುದು, ವಿಶ್ವವಂದ್ಯ ಪ್ರಧಾನಿಯವರ ಘನತೆಗೆ ಧಕ್ಕೆ ತರುವ ದುರುದ್ದೇಶ ಇದರ ಹಿಂದಿದೆ. ಟೂಲ್‍ಕಿಟ್ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ದಿಗ್ವಿಜಯ್ ಸಿಂಗ್ ಹೇಳಿಕೆಯಿಂದ ಆ ಪಕ್ಷವು ಚೀನಾ- ಪಾಕಿಸ್ತಾನದ ಜೊತೆ ನಿಂತಿರುವುದು ಸ್ಪಷ್ಟಗೊಳ್ಳುತ್ತದೆ. ಕಾಂಗ್ರೆಸ್ ಪಕ್ಷದ ಮುಖಂಡರು ಕ್ಲಬ್‍ಹೌಸ್ ಆ್ಯಪ್ ಮೂಲಕ ದೇಶವಿರೋಧಿ ಮಾತನ್ನಾಡುವ ನಾಚಿಗೆಗೆಟ್ಟ ಸಂದರ್ಶನ ನೀಡಿದ್ದು, ಆ ಪಕ್ಷವು ಪಾಕಿಸ್ತಾನದ ಪರ ಇರುವುದು ಸ್ಪಷ್ಟಗೊಳ್ಳುತ್ತಿದೆ. ಆದ್ದರಿಂದ ಕಾಂಗ್ರೆಸ್ಸಿನ ಹೆಸರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಐಎನ್‍ಸಿ) ಹೆಸರಿನ ಬದಲಾಗಿ ಆ್ಯಂಟಿ ನ್ಯಾಷನಲ್ ಕ್ಲಬ್‍ಹೌಸ್ ಎಂದು ಬದಲಿಸಿಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಪುಲ್ವಾಮಾ ದಾಳಿ ಇದೇನೂ ಗಂಭೀರ ವಿಚಾರವಲ್ಲ ಎಂದು ಹೇಳಿ ಪಾಕಿಸ್ತಾನದ ಕ್ರಮವನ್ನೇ ಸಮರ್ಥಿಸಲು ಮುಂದಾಗಿದ್ದರು. ಇದು ಭಯೋತ್ಪಾದಕರ ದಾಳಿ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ವಿದೇಶದ ಮಾಧ್ಯಮ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ “ನರೇಂದ್ರ ಮೋದಿ ಅವರ ಅಧಿಕಾರ ಕಳೆದುಕೊಂಡರೆ” ಎಂಬ ಊಹಾತ್ಮಕ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಅವರು ಈ ಉತ್ತರ ನೀಡಿರುವುದು ಕಾಂಗ್ರೆಸ್‍ನ ಪಾಕ್ ಪರ- ಚೀನಾಪರ ನೀತಿಯ ಪ್ರತಿಬಿಂಬದಂತಿದೆ. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ಬೇಡ ಎಂಬುದರ ಪ್ರತೀಕದಂತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಈ ಹಿಂದೆ ಕಾಂಗ್ರೆಸ್ ಮುಖಂಡರಾದ ಮಣಿಶಂಕರ್ ಅಯ್ಯರ್ ಅವರೂ ಪಾಕಿಸ್ತಾನದಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 2014ರಲ್ಲಿ ಅಯ್ಯರ್ ಅವರು ಈ ಸಂದರ್ಶನ ಕೊಟ್ಟಾಗ ಈ ಹೇಳಿಕೆ ಕೇಳಿ ಟಿ.ವಿ. ಆಂಕರ್ ಆತಂಕಗೊಂಡಿದ್ದರು. ಇದರಲ್ಲಿ ನಮ್ಮ ಪಾತ್ರ ಏನಿದೆ ಎಂಬ ಪ್ರಶ್ನೆ ಮುಂದಿಟ್ಟಿದ್ದರು. ಇದು ಕಾಂಗ್ರೆಸ್ಸಿಗರ ಷಡ್ಯಂತ್ರವಲ್ಲದೆ ಮತ್ತೇನು? ಪಾಕಿಸ್ತಾನ ಪರ ಕಾಂಗ್ರೆಸ್ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶೇ.54ರಷ್ಟು ಉಗ್ರ ಚಟುವಟಿಕೆ ಇಳಿಕೆ

    ಮಣಿಶಂಕರ್ ಅಯ್ಯರ್ ಅವರು ಈ ಹಿಂದೆ ಜಮ್ಮು ಕಾಶ್ಮೀರವನ್ನು ಅಫಘಾನಿಸ್ತಾನಕ್ಕೆ ಹೋಲಿಸಿದ್ದರು ಎಂಬುದೂ ಗಮನಾರ್ಹ. ರಾಹುಲ್ ಗಾಂಧಿ ಅವರೂ 370ನೇ ವಿಧಿ ರದ್ದತಿ ಬಹುದೊಡ್ಡ ಪ್ರಮಾದ ಎಂದು ಟ್ವೀಟ್ ಮಾಡಿದ್ದರು. 2019ರ ಆಗಸ್ಟ್ ನಲ್ಲಿ ಈ ಟ್ವೀಟ್ ಮಾಡಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಜನರ ಹತ್ಯೆ ಆಗಿದೆ, ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದಿದ್ದರು. ಇದಾದ ಎರಡು ದಿನಗಳ ಬಳಿಕ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಾದ ಇಮ್ರಾನ್ ಖಾನ್ ಅವರು ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು, ಜಮ್ಮು ಕಾಶ್ಮೀರದ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನೂ ಅವರು ಉಲ್ಲೇಖಿಸಿದ್ದರು. ಇದು ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಿನ ಗುಪ್ತ ಒಪ್ಪಂದಕ್ಕೆ ಸಾಕ್ಷಿ ಅಲ್ಲವೇ ಎಂದು ಅವರು ಕೇಳಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ನಮಗೆ ರಾಷ್ಟ್ರೀಯತೆಯ ಪ್ರಶ್ನೆ: ಅಮಿತ್ ಶಾ

    ರಾಹುಲ್ ಗಾಂಧಿ ಅವರು ಕೋವಿಡ್ ಹೆಚ್ಚಳದ ಕುರಿತು 2020ರ ಫೆಬ್ರವರಿ 13ರಂದು ಟ್ವೀಟ್‍ನಲ್ಲಿ ಜಮ್ಮು -ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ಭೂಪಟದಲ್ಲಿ ತೋರಿಸಿದ್ದರು. ಇದು ಕಾಂಗ್ರೆಸಿಗರ ದೇಶವಿರೋಧಿ ಚಿಂತನೆಯ ಭಾಗವಲ್ಲವೇ ಎಂದು ಅವರು ಪ್ರಶ್ನೆ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿನ ನಿರ್ಬಂಧ ಹಿಂಪಡೆಯುವವರೆಗೆ ದ್ವಿಪಕ್ಷೀಯ ಮಾತುಕತೆ ಇಲ್ಲ- ಇಮ್ರಾನ್ ಖಾನ್