Tag: ಕೌಲಾಲಂಪುರ

  • ಶಾಲೆಯಲ್ಲಿ ಅಗ್ನಿ ಅವಘಡ: 23 ವಿದ್ಯಾರ್ಥಿಗಳು ಸೇರಿ 25 ಮಂದಿ ದಾರುಣ ಸಾವು

    ಶಾಲೆಯಲ್ಲಿ ಅಗ್ನಿ ಅವಘಡ: 23 ವಿದ್ಯಾರ್ಥಿಗಳು ಸೇರಿ 25 ಮಂದಿ ದಾರುಣ ಸಾವು

    ಕೌಲಾಲಂಪುರ್: ಮಲೇಷ್ಯಾದ ಧಾರ್ಮಿಕ ಶಾಲೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 23 ವಿದ್ಯಾರ್ಥಿಗಳು ಸೇರಿ ಒಟ್ಟು 25 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಮಲೇಷ್ಯಾದ ರಾಜಧಾನಿ ಕೌಲಾಲಂಪೂರ್ ಹೃದಯಭಾಗದಲ್ಲಿರುವ ತಹಫಿಜ್ ದಾರುಲ್ ಖುರಾನ್ ಇತ್ತಿಪಾಖಿಯಾ ಧಾರ್ಮಿಕ ಕೇಂದ್ರದ ಎರಡು ಅಂತಸ್ತುಗಳ ಕಟ್ಟಡದಲ್ಲಿ ಗುರುವಾರ ಮುಂಜಾನೆ ಸುಮಾರು 5.40ರ ವೇಳೆಗೆ ವಿದ್ಯಾರ್ಥಿಗಳು ಕುರಾನ್ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಮುಂಜಾನೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಾವು ಮಲಗಿದ್ದ ಕೋಣೆಯಿಂದ ಶಾಲೆಯಲ್ಲಿ ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿದ್ದರು. ತಕ್ಷಣ ಅವರು ಸಮೀಪದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

    ಕೂಡಲೇ ಮಲೇಷ್ಯಾದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಸಾವು-ನೋವುಗಳು ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ 23 ವಿದ್ಯಾರ್ಥಿಗಳು ಮತ್ತು ಇಬ್ಬರು ವಾರ್ಡನ್‍ಗಳು ಮೃತಪಟ್ಟಿದ್ದಾರೆ ಅಂತ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬೆಂಕಿಯಿಂದ ಕೆಲವರು ಉಸಿರಾಡಲು ಸಾಧ್ಯವಾಗದೇ ಮತ್ತು ಕೆಲವರು ಬೆಂಕಿಯಿಂದ ಪಾರಾಗಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ. ಇನ್ನು ಅವಘಡದಲ್ಲಿ ಗಾಯಗೊಂಡ 7 ಮಂದಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ 11 ಮಂದಿಯನ್ನು ಅಪಾಯದಿಂದ ರಕ್ಷಿಸಲಾಗಿದೆ. ಈ ಶಾಲೆಯಲ್ಲಿ 5 ರಿಂದ 18 ವರ್ಷದವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು.

    ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅವಘಡಗಳಲ್ಲಿ ಇದು ಒಂದು ಎಂದು ಕೌಲಾಲಂಪೂರ್ ಅಗ್ನಿ ಮತ್ತು ರಕ್ಷಣಾ ಇಲಾಖೆಯ ನಿರ್ದೇಶಕ ಖಿರುದ್ದೀನ್ ದ್ರಾಮನ್ ತಿಳಿಸಿದ್ದಾರೆ. ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    https://twitter.com/amalyna07/status/908143263957131264?ref_src=twsrc%5Etfw&ref_url=http%3A%2F%2Fwww.india.com%2Fnews%2Fworld%2Fmalaysia-25-including-students-killed-in-fire-at-kuala-lumpur-school-2470024%2F