Tag: ಕೌನ್ ಬನೇಗಾ ಕರೋಡ್ ಪತಿ

  • ಕೌನ್ ಬನೇಗಾ ಕರೋಡ್‌ಪತಿ: ಕೋಟಿ ಗೆದ್ದ 14 ವರ್ಷದ ಪೋರ

    ಕೌನ್ ಬನೇಗಾ ಕರೋಡ್‌ಪತಿ: ಕೋಟಿ ಗೆದ್ದ 14 ವರ್ಷದ ಪೋರ

    ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಶೋ ಇದೀಗ 15ನೇ ಆವೃತ್ತಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಈ ಶೋನಲ್ಲಿ 14 ವರ್ಷದ ಹುಡುಗನ ಕೋಟಿ ರೂಪಾಯಿ ಸಿಕ್ಕಿದೆ. 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಒಂದು ಕೋಟಿ ರೂಪಾಯಿ ಪಡೆದಿದ್ದಾನೆ ಹರಿಯಾಣದ ಮಹೇಂದ್ರ ಗಡ್ ಮಾಯಾಂಕ್.

    ಮಾಯಾಂಕ್ (Mayank) ಸದ್ಯ 8ನೇ ತರಗತಿ ಓದುತ್ತಿದ್ದಾನೆ. ಈ ಸೀಸನ್ ನಲ್ಲಿ ಒಂದು ಕೋಟಿ ರೂಪಾಯಿ ಪಡೆಯುವ ಮೂಲಕ ದಾಖಲೆ ಬರೆದಿದ್ದಾನೆ. ಒಂದು ಕೋಟಿ ರೂಪಾಯಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಅವನಾಗಿದ್ದಾನೆ. ಲೀಲಾ ಜಾಲವಾಗಿ 15 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

     

    ಕೇವಲ ಒಂದು ಕೋಟಿಗೆ ಮಾತ್ರವಲ್ಲ, ಏಳು ಕೋಟಿಗೂ ಗುರಿಯಿಟ್ಟು ಆಟವಾಡಲು ಮುಂದಾದ. ಆದರೆ, ಏಳು ಕೋಟಿ ಪ್ರಶ್ನೆಗೆ ಉತ್ತರಿಸೋಕೆ ಆಗದೇ ಆಟದಿಂದ ವಾಪಸ್ಸಾದ. ಈ ಹುಡುಗನ ಸಾಧನೆಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ತುಳುವಿನಲ್ಲಿ ಮಾತಾಡಿ ಮೋಡಿ ಮಾಡಿದ ಬಾಲಿವುಡ್ ಬಿಗ್ ಬಿ

    ತುಳುವಿನಲ್ಲಿ ಮಾತಾಡಿ ಮೋಡಿ ಮಾಡಿದ ಬಾಲಿವುಡ್ ಬಿಗ್ ಬಿ

    ಉಡುಪಿ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತುಳು ಭಾಷೆಯಲ್ಲಿ ಮಾತನಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಮಿತಾಭ್ ಬಚ್ಚನ್ ಗೆ ತುಳು ಕಲಿಸಿದ್ದು ಮತ್ತ್ಯಾರು ಅಲ್ಲ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ.

    ಹೌದು. ಹಿಂದಿಯ ಕೌನ್ ಬನೇಗ ಕರೊಡ್ ಪತಿಯ ಕರ್ಮವೀರ ವಿಭಾಗಕ್ಕೆ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಆಯ್ಕೆಯಾಗಿದ್ದರು. ಕಲಾವಿದ ಅನುಪಮ್ ಖೇರ್ ಜೊತೆ ರವಿ ಅವರು ಹಾಟ್ ಸೀಟಲ್ಲಿ ಕುಳಿತು ಅಮಿತಾಭ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಪ್ರಶ್ನೋತ್ತರ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್, ರವಿ ಕಟಪಾಡಿ ಅವರ ಜೀವನ, ಕಷ್ಟ, ಸೇವೆ ಬಗ್ಗೆ ಮಾತನಾಡುತ್ತಾ ಭಾಷೆ ಸಂಸ್ಕೃತಿಯನ್ನು ಕೆದಕಿದ್ದಾರೆ. ಈ ಸಂದರ್ಭದಲ್ಲಿ ತುಳು ಭಾಷೆಯ ಬಗ್ಗೆ ರವಿ ಕಟಪಾಡಿ ಹೇಳಿದ್ದಾರೆ. ಕುತೂಹಲಗೊಂಡ ಅಮಿತಾಭ್ ಬಚ್ಚನ್ ಅವರಿಗೆ ರವಿ ಕಟಪಾಡಿ ತುಳುವಿನಲ್ಲಿ ಒಂದು ವಾಕ್ಯವನ್ನು ಹೇಳಿದ್ದಾರೆ. ಅಮಿತಾಭ್ ಅದನ್ನು ರಿಪೀಟ್ ಮಾಡಿದ್ದಾರೆ.

    ಉಡುಪಿ ಮತ್ತು ಮಂಗಳೂರಿನ ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಹೇಳಿದ್ದಾರೆ. ತುಳು ಭಾಷೆಯನ್ನು ಮಾತನಾಡುವವರಂತೆ ಯಾವುದೇ ಉಚ್ಛಾರ ತಪ್ಪು ಇಲ್ಲದೆ ಅಮಿತಾ ಬಚ್ಚನ್ ಅನುಕರಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೀಡಿಯೋ ತುಣುಕು ಕರಾವಳಿಯ 2 ಜಿಲ್ಲೆಗಳಲ್ಲಿ ಜನಜನಿತವಾಗಿದೆ. ವಾಟ್ಸಪ್ ಫೇಸ್ಬುಕ್ ಗಳಲ್ಲಿ ಜನ ಈ ವೀಡಿಯೋ ತುಣುಕನ್ನು ಶೇರ್ ಮಾಡುತ್ತಿದ್ದಾರೆ.

    ಅಮಿತಾಭ್ ಅವರನ್ನು ನೋಡಿದ್ದು ಅವರ ಜೊತೆ ಮಾತನಾಡಿದ್ದು ನನ್ನ ಜೀವನದ ಮರೆಯಲಾಗದ ಘಟನೆ. ಅಷ್ಟಮಿಯಂದು ವೇಷಧರಿಸಿ 28 ಮಕ್ಕಳಿಗೆ 54 ಲಕ್ಷ ರೂಪಾಯಿ ದಾನ ಮಾಡಿದಾಗ ಸಿಕ್ಕ ಖುಷಿಯೇ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಲ್ಲೂ ಸಿಕ್ಕಿತು ಎಂದು ರವಿ ಕಟಪಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಸುಧಾಮೂರ್ತಿ

    ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಸುಧಾಮೂರ್ತಿ

    ನವದೆಹಲಿ: ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಧಾಮೂರ್ತಿಯವರು ಭಾಗವಹಿಸಿರುವ ಕಾರ್ಯಕ್ರಮ ನವೆಂಬರ್ 29ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

    ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ಬಿಗ್ ಬಿ ಕೇಳುವ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಸುಧಾಮೂರ್ತಿಯವರು ಉತ್ತರಿಸಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ.

    https://www.instagram.com/tv/B5ShWE0lsEE/?utm_source=ig_embed

    ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ(ಈಗಿನ ಕೆಎಲ್‍ಇ) ಕಾಲೇಜಿನಲ್ಲಿ ಓದಿದ್ದಾರೆ.

    ಚಿಕ್ಕವಯಸ್ಸಿನಲ್ಲೇ ಓದಿನಲ್ಲಿ ಮುಂದಿದ್ದ ನಾನು ಎಂಜಿನಿಯರಿಂಗ್ ಓದುವ ಬಯಕೆಯನ್ನು ಹೊಂದಿದ್ದೆ. 1968ರಲ್ಲಿ ಎಂಜಿನಿಯರಿಂಗ್ ಓದುವ ಹುಡುಗಿಯರೇ ಇರಲಿಲ್ಲ. ಹೀಗಾಗಿ ಎಂಜಿನಿಯರಿಂಗ್ ಓದಿದರೆ ಯಾವ ಹುಡುಗನೂ ಸಿಗುವುದಿಲ್ಲ ಎಂಬ ಭಯ ನಮ್ಮ ಮನೆಯವರಲ್ಲಿತ್ತು. ಆದರೆ ಹೇಗೋ ಮನೆಯವರ ಮನವೊಲಿಸಿ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

    ಆಗ ಕಾಲೇಜಿನಲ್ಲಿ 599 ಹುಡುಗರಿದ್ದರೆ, ನಾನೊಬ್ಬಳೇ ಹುಡುಗಿ. ಹೀಗಾಗಿ ಕಾಲೇಜು ಸೇರಿಕೊಳ್ಳುವಾಗ ಪ್ರಾಂಶುಪಾಲರು ನನಗೆ ಷರತ್ತು ವಿಧಿಸಿದ್ದರು. ಕಾಲೇಜಿಗೆ ಸೀರೆಯನ್ನು ಮಾತ್ರ ಧರಿಸಿಕೊಂಡು ಬರಬೇಕು. ಕಾಲೇಜು ಕ್ಯಾಂಟೀನಿಗೆ ಹೋಗುವ ಹಾಗಿಲ್ಲ ಹಾಗೂ ಹುಡುಗರೊಂದಿಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ ಎಂಬ ಮೂರು ಷರತ್ತು ವಿಧಿಸಿದ್ದರು ಎಂದು ಹೇಳಿ ಷರತ್ತುಗಳ ಗುಟ್ಟನ್ನು ಸುಧಾಮೂರ್ತಿ ಬಿಚ್ಚಿಟ್ಟರು. ಇದನ್ನೂ ಓದಿ: ಸರಳವಾಗಿ ನಡೆಯಲಿದೆ ಇನ್ಫಿ ದಂಪತಿಯ ಮಗನ ವಿವಾಹ

    ಮೊದಲೆರಡು ಷರತ್ತುಗಳು ನನಗೆ ಕಷ್ಟವೆನಿಸಲಿಲ್ಲ. ಆದರೆ ಮೂರನೇ ಷರತ್ತಿಗೆ ಸಂಬಂಧಿಸಿದಂತೆ ಮೊದಲ ವರ್ಷ ನಾನು ಹುಡುಗರನ್ನು ಮಾತನಾಡಿಸಲಿಲ್ಲ. ಆದರೆ ನಾನು ಓದಿನಲ್ಲಿ ಮುಂದಿರುವುದನ್ನು ಕಂಡು ಎರಡನೇ ವರ್ಷ ಅವರೇ ನನ್ನನ್ನು ಮಾತನಾಡಿಸಲು ಪ್ರಾರಂಭಿಸಿದರು ಎಂದು ಮೂರನೇ ಷರತ್ತಿನ ಕುರಿತು ವಿವರಿಸಿದರು. ಇದೇ ವೇಳೆ ಕಾಲೇಜಿನಲ್ಲಿ ಪಟ್ಟ ಕಷ್ಟವನ್ನು ಸಹ ಸುಧಾಮೂರ್ತಿಯವರು ನೆನೆದಿದ್ದು, ಕಾಲೇಜಿನಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಹೆಣ್ಣು ಮಕ್ಕಳ ಕಷ್ಟ ಅರಿತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದ ನಂತರ ಸುಮಾರು 16 ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದೇವೆ ಎಂದು ಮಾಹಿತಿ ನೀಡಿದರು.

    ಈ ಪ್ರೋಮೋದಲ್ಲಿ ಸುಧಾಮೂರ್ತಿಯವರು ಬಡವರಿಗೆ, ಹಳ್ಳಿಗಳಲ್ಲಿನ ಮಕ್ಕಳಿಗೆ, ನಿರ್ಗತಿಕರಿಗೆ ಮಾಡಿರುವ ಸಮಾಜಮುಖಿ ಕೆಲಸಗಳನ್ನು ಸಹ ತೋರಿಸಲಾಗಿದೆ. ಪ್ರೋಮೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಹಲವರು ಸುಧಾಮೂರ್ತಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.