Tag: ಕೌನ್ಸಲಿಂಗ್

  • ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

    ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

    ಹಾಸನ: ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ರಾಜ್ಯದಲ್ಲೇ ಹೆಸರಾಗಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹೋಮ್ ಐಸೋಲೇಶನ್‍ನಲ್ಲಿರುವವರ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

    ಹಿಮ್ಸ್ ನ ಅಂತಿಮ ವರ್ಷದ ಎಲ್ಲ 70 ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೊವಿಡ್-19 ಸೇವೆ ಹಾಗೂ ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಆನ್‍ಲೈನ್ ಮೂಲಕ ಅರೋಗ್ಯ ವಿಚಾರಣೆ, ಕೌನ್ಸಲಿಂಗ್ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸಿದ್ದಾರೆ.

    ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಮೂಲಕ ಎಲ್ಲ 45 ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು, ಶೇ.100ರ ಸಾಧನೆಯೊಂದಿಗೆ ಹಿಮ್ಸ್ ಮೊದಲ ಸ್ಥಾನದಲ್ಲಿದೆ.

    ದಿನಕ್ಕಿಷ್ಟು ಜನ ಹೋಮ್ ಐಸೋಲೇಶನ್‍ನಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸುವುದು, ಕೌನ್ಸಲಿಂಗ್ ಹಾಗೂ ಮಾರ್ಗದರ್ಶನ ಮಾಡುವ ಕರ್ತವ್ಯ ನಿರ್ವಹಣೆಯ ಹೊಣೆಯನ್ನು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರತಿ ವಾರಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯ ಮೌಲ್ಯ ಮಾಪನ ಮಾಡಿ, ಕಾಲೇಜುವಾರು ಮೌಲ್ಯಾಂಕ ಪ್ರಕಟಿಸಲಾಗುತ್ತದೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ 45 ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ. ಎಸ್.ಎಸ್ ಇನ್‍ಸ್ಟಿಟ್ಯೂಟ್ ಆಫ್ ಮಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿವೆ.

    ಕೇವಲ ಹೋಮ್ ಐಸೋಲೇಶನ್‍ನಲ್ಲಿರುವವರ ಸೇವೆ ಮಾತ್ರವಲ್ಲದೆ, ಆಸ್ಪತ್ರೆಗಳಲ್ಲಿಯೂ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಹಿಮ್ಸ್‍ನ ವಿದ್ಯಾರ್ಥಿಗಳು ತೊಡಗಿ, ಜಿಲ್ಲೆಯ ಕೋವಿಡ್ ಚಿಕಿತ್ಸಾ ವ್ಯವಸ್ಥೆಗೆ ಬಲ ತುಂಬಿದ್ದಾರೆ ಎಂಬುದು ಪ್ರಶಂಸನೀಯ.

    ಹಿಮ್ಸ್ ನಿರ್ದೇಶಕರಿಂದ ಅಭಿನಂದನೆ:
    ಹಿಮ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಈ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್ ನಿರ್ದೇಶಕ ಡಾ.ರವಿ ಕುಮಾರ್, ಪ್ರಾಂಶುಪಾಲ ಡಾ.ನಾಗೇಶ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

    ಸುಮಾರು 800 ಹಾಸಿಗೆಗಳ ಕೋವಿಡ್ ಆಸ್ಪತ್ರೆಯ ಯಶಸ್ವಿ ನಿರ್ವಹಣೆ, ಕೋವಿಡ್ ಪೂರ್ವದಲ್ಲಿಯೇ ಆಕ್ಸಿಜನ್ ಶೇಖರಣೆಗೆ ಪೂರ್ವ ಸಿದ್ಧತೆ ಹಾಗೂ ವೈರಾಣು ಪತ್ತೆ ಪ್ರಯೋಗಾಲಯದ ಸ್ಥಾಪನೆ, ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ ‘ವೈದ್ಯರ ನಡೆ ಹಳ್ಳಿಯ ಕಡೆ’ ಎಂಬ ಅನನ್ಯ ಕಾರ್ಯಕ್ರಮಕ್ಕೆ ಸಂಸ್ಥೆಯ 75 ವೈದ್ಯರನ್ನು ನಿಯೋಜಿಸಿ, ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತದೊಂದಿಗೆ ಹೆಗಲು ಜೋಡಿಸಿ ಸಹಕರಿಸುತ್ತಿರುವ ಹಿಮ್ಸ್ ಸಂಸ್ಥೆ, ಸೇವೆಯಲ್ಲಿ ಸದಾ ಮುಂದಿದೆ. ಈಗ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಇನ್ನೊಂದು ಮನ್ನಣೆ ಸಿಕ್ಕಂತಾಗಿದೆ.

  • ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯ- ವಿಚ್ಛೇದನ ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು

    ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯ- ವಿಚ್ಛೇದನ ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು

    ಪಣಜಿ: ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗೋವಾ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಚಿಂತಿಸಿದೆ.

    ಈ ಕುರಿತು ಗೋವಾ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಸೋಮವಾರ ಮಾಹಿತಿ ನೀಡಿದ್ದು, ಗೋವಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಆ್ಯಂಡ್ ರೂರಲ್ ಡೆವಲಪ್‍ಮೆಂಟ್(ಜಿಐಪಿಎಆರ್ ಡಿ) ಕೌನ್ಸಲಿಂಗ್ ಕೋರ್ಸ್ ಹಾಗೂ ಇದರ ಸ್ವರೂಪವನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗದಗ- ಏಪ್ರಿಲ್, ಮೇನಲ್ಲಿ 21 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

    ರಾಜ್ಯದಲ್ಲಿ ವಿವಾಹಪೂರ್ವ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಹೊಸ ನೀತಿಯನ್ನು ತರುತ್ತಿದ್ದು, ಧಾರ್ಮಿಕ ಸಂಸ್ಥೆಗಳೂ ಸಹ ಇದರಲ್ಲಿ ಭಾಗವಹಿಸಲಿವೆ. ಗೋವಾದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳನ್ನು ತಡೆಯಲು ಈ ಕಾನೂನು ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

    ವಿವಾಹವಾಗಿ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ ಹೆಚ್ಚು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿವಾಹಕ್ಕೂ ಮೊದಲು ಕೌನ್ಸಲಿಂಗ್ ನಡೆಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ಮೂಲಕ ದಾಂಪತ್ಯದ ಕುರಿತು ಅರಿವು ಮೂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಪ್ರತಿ ತಿಂಗಳು ಎಷ್ಟು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ ಎಂಬ ನಿರ್ದಿಷ್ಟ ಅಂಕಿ ಅಂಶಗಳು ಸದ್ಯ ನಮ್ಮ ಬಳಿ ಇಲ್ಲ. ಆದರೆ ಇತ್ತೀಚೆಗೆ ಈ ಸಂಖ್ಯೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ಕೌನ್ಸಲಿಂಗ್ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

  • ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ಗೆ ತಡೆ – ನೂತನ ಸಚಿವರ ಆದೇಶ

    ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ಗೆ ತಡೆ – ನೂತನ ಸಚಿವರ ಆದೇಶ

    ಬೆಂಗಳೂರು: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸಿಲಿಂಗ್‍ನ್ನು ತಡೆ ಹಿಡಿಯುವಂತೆ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

    ವರ್ಗಾವಣೆಯಲ್ಲಿರುವ ಗೊಂದಲ ನಿವಾರಣೆಗಾಗಿ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆ ಹಿಡಿಯಲು ನೂತನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯಬೇಕಿತ್ತು.

    ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತು ಅನೇಕ ಶಿಕ್ಷಕರು, ವಿಶೇಷವಾಗಿ ಶಿಕ್ಷಕಿಯರು ಮನವಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ವಿವರಿಸಿ ಕೆಲವು ನ್ಯಾಯಯುತ ಪ್ರಸ್ತಾವನೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ. ಈ ವರ್ಗಾವಣೆ ವ್ಯವಸ್ಥೆಯಲ್ಲಿರುವ ಕೆಲವು ದೋಷಗಳನ್ನೂ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕೆಲ ಗೊಂದಲಗಳನ್ನು ನಿವಾರಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿಯ ವ್ಯವಸ್ಥೆ ಕುರಿತು ಚಿಂತನೆ ಮತ್ತು ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೇವಲ ಕೆಲದಿನಗಳ ಮಟ್ಟಿಗೆ ಮಾತ್ರ ಹಾಲಿ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಬಹಳ ಬೇಗ ಸುಧಾರಿತ ವರ್ಗಾವಣೆ ಪ್ರಕ್ರಿಯೆ ಜಾರಿ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರಿಗೂ ಆತಂಕ ಬೇಡ ಎಂದು ನೂತನ ಶಿಕ್ಷಣ ಸಚಿವರು ತಿಳಿಸಿದ್ದಾರೆ.