Tag: ಕೋವಿಡ್19

  • ದುಬಾರಿ ಬೆಲೆ ಇರಲ್ಲ, ಜನರ ಕೈಗೆಟುಕುವ ದರದಲ್ಲಿ ಕೊವಾಕ್ಸಿನ್‌ ಲಸಿಕೆ – ಸುಚಿತ್ರಾ ಎಲ್ಲಾ

    ದುಬಾರಿ ಬೆಲೆ ಇರಲ್ಲ, ಜನರ ಕೈಗೆಟುಕುವ ದರದಲ್ಲಿ ಕೊವಾಕ್ಸಿನ್‌ ಲಸಿಕೆ – ಸುಚಿತ್ರಾ ಎಲ್ಲಾ

    – ಪಬ್ಲಿಕ್‌ ಟಿವಿ ಜೊತೆ ಸುಚಿತ್ರಾ ಕೆ ಎಲ್ಲಾ ಮಾತು
    – 3, 4 ತಿಂಗಳಲ್ಲಿ ಲಸಿಕೆ ಲಭ್ಯ

    ಬೆಂಗಳೂರು: ನಾವು ದುಬಾರಿ ಬೆಲೆಯ ಲಸಿಕೆ ತಯಾರಿಸುವುದಿಲ್ಲ. ಜನರ ಕೈಗೆಟುಕುವ ದರದಲ್ಲಿ ಕೊವಾಕ್ಸಿನ್‌ ಲಸಿಕೆ ತಯಾರಿಸಲಾಗುವುದು ಎಂದು ಭಾರತ್‌ ಬಯೋಟೆಕ್‌ ಕಂಪನಿಯ ಸಹ ಸಂಸ್ಥಾಪಕಿ ಸುಚಿತ್ರಾ ಕೆ ಎಲ್ಲಾ ತಿಳಿಸಿದ್ದಾರೆ.

    ಪಬ್ಲಿಕ್‌ ಟಿವಿಯ ಬಿಗ್‌ ಬುಲೆಟಿನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 30-40 ಡಾಲರ್‌ ಬೆಲೆಯ ಲಸಿಕೆಯನ್ನು ನಾವು ತಯಾರಿಸುವುದಿಲ್ಲ. ಭಾರತದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಗುವ ನಿಟ್ಟಿನಲ್ಲಿ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

    ಈಗ ಮೂರನೇ ಪ್ರಯೋಗ ನಡೆಯುತ್ತಿದೆ. ಮುಂದಿನ 3-4 ತಿಂಗಳ ಒಳಗಡೆ ಲಸಿಕೆ ಸಿಗುವ ವಿಶ್ವಾಸವಿದೆ. ಭಾರತ ವಿಶ್ವಕ್ಕೆ ಕೊರೊನಾ ಲಸಿಕೆಯನ್ನು ರಫ್ತು ಮಾಡಲಿದೆ ಎಂದು ವಿವರಿಸಿದರು.

    ಒಮ್ಮೆ ಲಸಿಕೆ ತೆಗದುಕೊಂಡರೆ ಮತ್ತೆ ಕೊರೊನಾ ಬರುತ್ತಾ ಎಂಬ ಪ್ರಶ್ನೆಗೆ, ನಮ್ಮ ಲಸಿಕೆಯನ್ನು 2 ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಒಂದು ಬಾರಿ ಲಸಿಕೆ ತೆಗೆದುಕೊಂಡ 28 ದಿನಗಳ ನಂತರ ಮತ್ತೊಮ್ಮೆ ತೆಗೆದುಕೊಳ್ಳಬೇಕು. ಜೀವನ ಪೂರ್ತಿ ಈ ಲಸಿಕೆ ರಕ್ಷಣೆ ನೀಡುತ್ತದೆ ಎದು ಈಗಲೇ ಹೇಳಲು ಬರುವುದಿಲ್ಲ. ಯಾಕೆಂದರೆ ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಿರುತ್ತದೆ ಎಂದು ವಿವರಿಸಿದರು.

    ಬೆಂಗಳೂರು ಮತ್ತು ಬೆಳಗಾವಿ ಆಸ್ಪತ್ರೆಯ ಜೊತೆ ಸೇರಿ ನಾವು ಪ್ರಯೋಗ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ 2 ಸಾವಿರ ಜನರ ಮೇಲೆ ಪ್ರಯೋಗ ಮಾಡಬೇಕಿದೆ. ಕರ್ನಾಟಕದಲ್ಲಿ ಸ್ವಯಂಸೇವಕರ ಸಂಖ್ಯೆ ಕಡಿಮೆ ಇದೆ ಎಂದು ಈ ವೇಳೆ ತಿಳಿಸಿದರು.

    ಐಸಿಎಂಆರ್‌ ಜೊತೆ ಸೇರಿ ಕೊರೊನಾ ನಿಯಂತ್ರಣವನ್ನು ಭಾರತ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಸರ್ಕಾರ ನಮಗೆ ಸಹಕಾರ ನೀಡುತ್ತಿದೆ. ಭಾರತದ ಎಲ್ಲ ಜನರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ. ವಿಶ್ವಕ್ಕೆ ಭಾರತದಿಂದ ಲಸಿಕೆ ರಫ್ತು ಆಗಲಿದೆ.ಭಾರತ ಲಸಿಕೆ ತಯಾರಿಸುವ ಹಬ್‌ ಆಗಬೇಕು ಎಂದು ಅವರು ಹೇಳಿದರು.

    ಪಬ್ಲಿಕ್‌ ಟಿವಿಯ ಮುಖ್ಯಸ್ಥ ಎಚ್‌.ಆರ್‌.ರಂಗನಾಥ್‌ ಜೊತೆ ಭಾರತ್‌ ಬಯೋಟೆಕ್‌ ಕಂಪನಿಯ ಸಹ ಸಂಸ್ಥಾಪಕಿ ಸುಚಿತ್ರಾ ಕೆ ಎಲ್ಲಾ ಮಾತನಾಡಿರುವ ವಿಡಿಯೋ ಇಲ್ಲಿ ನೀಡಲಾಗಿದ್ದು ವೀಕ್ಷಿಸಬಹುದು.

     

  • ಪ್ರಜಾಪ್ರಭುತ್ವಕ್ಕೆ ಅರ್ಥ ಗೊತ್ತಿಲ್ಲದ ಪಕ್ಷ ಕಾಂಗ್ರೆಸ್: ಸಚಿವ ಸುಧಾಕರ್

    ಪ್ರಜಾಪ್ರಭುತ್ವಕ್ಕೆ ಅರ್ಥ ಗೊತ್ತಿಲ್ಲದ ಪಕ್ಷ ಕಾಂಗ್ರೆಸ್: ಸಚಿವ ಸುಧಾಕರ್

    -ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡ್ತಿಲ್ಲ

    ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವಕ್ಕೆ ಅರ್ಥವೇ ಗೊತ್ತಿಲ್ಲದ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಎಂದು ಕೈ ನಾಯಕರ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ನಡೆಸಿ ನಂತರ ಮಾತನಾಡಿದ ಸಚಿವ ಸುಧಾಕರ್, ರಾಜಸ್ಥಾನ ಸರ್ಕಾರ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಗೊತ್ತಿರದ ಪಕ್ಷ ಕಾಂಗ್ರೆಸ್. ಇತ್ತೀಚೆಗೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಧಕ್ಕೆ ಬರ್ತಿದೆ ಎಂದು ಟೀಕಿಸಿದರು.

    ಹಲವು ಸವಾಲುಗಳ ಏಳು ಬೀಳುಗಳ ನಡುವೆ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿ ಒಂದು ವರ್ಷದ ಆಡಳಿತ ನಡೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ನೀಡಿ ಕೊರೊನಾ ಮಣಿಸಲು ಅವಕಾಶ ಕೊಟ್ಟ ಸಿಎಂ ಯಡಿಯೂರಪ್ಪನವರಿಗೆ ಧನ್ಯವಾದಗಳನ್ನ ಅರ್ಪಿಸಿದರು. ಖಾಸಗಿ ಆಸ್ಪತ್ರೆಗೆಳು ಕೊರೊನಾ ವಿಚಾರವಾಗಿ ಸಂಪೂರ್ಣ ಸಹಕಾರ ಕೊಡ್ತಿಲ್ಲ. ಸಾಧ್ಯವಾದರೆ ಖಾಸಗಿ ಆಸ್ಪತ್ರೆಗಳ ಕೊರೊನಾ ಚಿಕಿತ್ಸಾ ದರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದರು.

  • 24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    ನವದೆಹಲಿ: ಕಳೆದ 24 ಗಂಟೆಯಲ್ಲಿ 4,42,031 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುವ ಮೂಲಕ ಸರ್ಕಾರದ ಲ್ಯಾಬ್ ಗಳು ಹೊಸ ದಾಖಲೆಯನ್ನು ಬರೆದಿವೆ.

    ಈ ಮೊದಲು ಒಂದೇ ದಿನ 3,62,153 ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಇತ್ತ ಖಾಸಗಿ ಲ್ಯಾಬ್ ಗಳು 79,878 ಮಂದಿಯ ಕೊರೊನಾ ಪರೀಕ್ಷೆ ಮಾಡಿವೆ. ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಾಗಾಗಿ ಕೇಂದ್ರ ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳುತ್ತಿದೆ.

    ಶನಿವಾರ ದೇಶದಲ್ಲಿ 48 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಟೆಸ್ಟಿಂಗ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯೂ ಸಹ ಏರಿಕೆಯಾಗಿದೆ. ಭಾರತದಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಶೇ.63.53ರಷ್ಟಿದೆ. ದೇಶದ ರಾಜಧಾನಿಯಲ್ಲಿ ರಿಕವರಿ ರೇಟ್ ಶೇ.87.29 ಇದೆ.

  • ಲಾಕ್‌ಡೌನ್‌ ಮಾಡಲು ಸಾಧ್ಯವೇ ಇಲ್ಲ – ತಜ್ಞರ ಸಲಹೆಗೆ ಸಿಎಂ ಹೇಳಿದ್ದೇನು? ಇನ್‌ಸೈಡ್‌ ಸುದ್ದಿ

    ಲಾಕ್‌ಡೌನ್‌ ಮಾಡಲು ಸಾಧ್ಯವೇ ಇಲ್ಲ – ತಜ್ಞರ ಸಲಹೆಗೆ ಸಿಎಂ ಹೇಳಿದ್ದೇನು? ಇನ್‌ಸೈಡ್‌ ಸುದ್ದಿ

    ಬೆಂಗಳೂರು: ಅಂತರ್ ಜಿಲ್ಲೆ ಓಡಾಟ ನಿರ್ಬಂಧ ಮಾಡಿದ್ರೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಬೊಕ್ಕಸಕ್ಕೆ ಸಮಸ್ಯೆ ಆಗುತ್ತದೆ. ಈ ಸಲಹೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಿಎಂ ಸಚಿವರ ಸಭೆಯಲ್ಲಿ ಹೇಳಿದ್ದರು. ಈ ಕಾರಣಕ್ಕೆ ಬೆಂಗಳೂರನ್ನು ಲಾಕ್‌ಡೌನ್‌ ಮಾಡಿ ಎಂದು ತಜ್ಞರು ಸಲಹೆ ನೀಡಿದರೂ ಸರ್ಕಾರ ಲಾಕ್‌ಡೌನ್‌ ಮಾಡಲು ಹಿಂದೇಟು ಮಾಡುತ್ತಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು, ಬೆಂಗಳೂರಿನಲ್ಲಿ ಕೋವಿಡ್‌ 19 ತಡೆಗಟ್ಟಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ತಜ್ಞ ವೈದ್ಯರ ಜೊತೆ ಸಭೆ ನಡೆಸಿದ್ದಾರೆ. ತಜ್ಞ ವೈದ್ಯರುಗಳಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ಡಾ.ಗಿರೀಶ್, ಡಾ.ಸುದರ್ಶನ್, ಮುಖ್ಯಕಾರ್ಯದರ್ಶಿ ಶ್ರೀ ವಿಜಯಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.

    ಸಲಹೆ – 1:
    ಈ ಸಭೆಯಲ್ಲಿ ತಜ್ಞರು ಬೆಂಗಳೂರಿಗೆ ಅಂತರ್ ಜಿಲ್ಲೆ ಓಡಾಟಕ್ಕೆ ನಿರ್ಬಂಧ ಹಾಕಿ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ ರಸ್ತೆಗಳನ್ನು ಬಂದ್ ಮಾಡಿ. ಜಿಲ್ಲೆಗಳಿಂದ ಬೆಂಗಳೂರಿಗೆ ಉದ್ಯೋಗ, ಇನ್ನಿತರೆ ಕೆಲಸಕ್ಕೆ ಜನ ಜಾಸ್ತಿ ಬರುತ್ತಾರೆ. ಮೊದಲು ಬೆಂಗಳೂರಿನ ವಾಹನ ದಟ್ಟಣೆ ಜನ ದಟ್ಟಣೆ ಕಡಿಮೆ ಮಾಡಿ. ಇದು ತಕ್ಷಣ ಆಗಬೇಕು. ಬೆಂಗಳೂರಿಗೆ ಮೂರು ವಾರ ಬಿಡಬೇಡಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಿಎಂ.”ಸಲಹೆ ಉತ್ತಮವಾಗಿದೆ ಮುಂದೆ ನೋಡೋಣ”ಎಂದು ಉತ್ತರಿಸಿದ್ದಾರೆ.

    ಸಲಹೆ – 2:
    ಅಂತರ್ ರಾಜ್ಯ ಓಡಾಟಕ್ಕೆ 3 ವಾರ ಕಡಿವಾಣ ಹಾಕಬೇಕು. ನಮ್ಮಲ್ಲಿ ಹೋಂ ಕ್ವಾರಂಟೈನ್ ಕಾಯ್ದೆ ಪಾಲನೆ ಆಗುತ್ತಿಲ್ಲ ಎಂದು ಹೇಳಿದ್ದಕ್ಕೆ ಸಿಎಂ, ಈಗ ಬಂದ್ ಆಗಿಹೋಗಿದೆ. ನಮ್ಮ ಟೀಮ್ ಎಲ್ಲಾವನ್ನು ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

    ಸಲಹೆ – 3:
    ಕಂಟೈನ್ಮೆಂಟ್ ಝೋನ್ ನಿರ್ವಹಣೆ ಸರಿಯಾಗುತ್ತಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದವರಿಗೆ ದಂಡ ಹಾಕಿ ಎಂಬ ಸಲಹೆಗೆ ಕಂಟೈನ್ಮೆಂಟ್ ಝೋನ್ ಟೈಟ್ ಇದೆ. ನೋ ಪ್ರಾಬ್ಲಂ ಎಂದು ಸಿಎಂ ಉತ್ತರಿಸಿದ್ದಾರೆ.

    ಸಲಹೆ -4:
    200 ಕೇಸ್ ಮೇಲ್ಪಟ್ಟರೇ ಬೆಂಗಳೂರಿಗೆ ಮಹಾ ಅಪಾಯವಾಗುವ ಸಾಧ್ಯತೆಯಿದೆ. ಈಗಲೇ ಬೆಡ್ ಇಲ್ಲ, ಖಾಸಗಿಯವರನ್ನು ನಂಬಬೇಡಿ, ಅವರು ತಯಾರಿ ಇಲ್ಲ. ವೆಂಟಿಲೇಟರ್, ಐಸಿಯು ರೆಡಿ ಮಾಡಿ ಇಟ್ಟುಕೊಳ್ಳಿ. ಕಲ್ಯಾಣ ಮಂಟಪ, ಕ್ರೀಡಾಂಗಣ, ಖಾಸಗಿ ಹೋಟೆಲ್‌ಗಳನ್ನು ಕೋವಿಡ್‌ ಕೇಂದ್ರಗಳನ್ನಾಗಿ ಮಾಡಿ ಬೆಡ್‌ ಹಾಕಿ ಎಂದು ಹೇಳಿದ್ದಕ್ಕೆ ಸಿಎಂ ಈಗಾಗಲೇ ಎಲ್ಲವೂ ತಯಾರಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ರೆಡಿ ಇಲ್ಲ, ಬೆಡ್ ಗಳನ್ನು ರೆಡಿ ಮಾಡಿಲ್ಲ ಐಸೋಲೇಷನ್ ವಾರ್ಡ್ ಗಳು ಇಲ್ವೇ ಇಲ್ಲ.

    ಸಲಹೆ – 5:
    ಬೆಂಗಳೂರಿನಲ್ಲಿ ಕಮ್ಯೂನಿಟಿಗೆ ಹರಡಿರುವ ಸಾಧ್ಯತೆಯಿದೆ. ಪರೀಕ್ಷೆ ಇನ್ನು ಸ್ಪೀಡ್ ಆಗಬೇಕು ಎಂದಿದ್ದಕ್ಕೆ ಸಮುದಾಯಕ್ಕೆ ಹರಡಿದ್ದನ್ನು ಸರ್ಕಾರ ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಉತ್ತರಿಸಿದ್ದಾರೆ.

    ಸಲಹೆ – 6:
    ಕೆಲ ತಜ್ಞರು ಮುಂದಿನ ರಣ ಭೀಕರ ಪರಿಸ್ಥಿತಿ ಎದುರಿಸಲು ಲಾಕ್ ಡೌನ್ ಅಸ್ತ್ರದ ಬಗ್ಗೆಯೂ ಪ್ರಸ್ತಾವನೆ ಮಾಡಿದ್ದಾರೆ. ನಿತ್ಯ ಒಂದು ಸಾವಿರ ಕೇಸ್ ಬಂದ್ರೆ ಲಾಕ್ ಡೌನ್ ಮಾಡಲೇಬೇಕು ಅಂದಿದ್ದಾರೆ. ಆದ್ರೇ ಲಾಕ್ ಡೌನ್‍ಗೆ ಮಾತ್ರ ಸಿಎಂ ಒಪ್ಪಲು ರೆಡಿಯೇ ಇಲ್ಲ.

    ತಜ್ಞರ ಸಲಹೆ ಏನು?
    1. ಬೆಂಗಳೂರಿಗೆ ಅಂತರ್ ಜಿಲ್ಲಾ ವಾಹನ ಓಡಾಟವನ್ನು 3 ವಾರ ಸಂಪೂರ್ಣ ಬಂದ್ ಮಾಡಿ. ಬೆಂಗಳೂರಿನಿಂದ ಹಳ್ಳಿಗೆ ಕೊರೊನಾ ವ್ಯಾಪಿಸುವುದನ್ನು ತಡೆಯಬಹುದು.
    2. ಬೆಂಗಳೂರಿನಲ್ಲಿ 2 ವಾರ ಪರಿಸ್ಥಿತಿ ಮಾನಿಟರ್ ಮಾಡಿ
    3. ದಿನಕ್ಕೆ ಸಾವಿರ ಪ್ರಕರಣ ಬಂದಾಗ ಬಹುತೇಕ ಲಾಕ್‍ಡೌನ್ ನಿರ್ಧಾರ ಮಾಡೋಣ
    4. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬುತ್ತಿರುವ ಆತಂಕ ಎದುರಾಗಿದೆ. ಇದನ್ನು ಈಗಲೇ ತಡೆಯಬೇಕು

    5. ಮನೆಗಳು ದೊಡ್ಡದಾಗಿದ್ದರೆ, ಅಲ್ಲಿಯೇ ಚಿಕಿತ್ಸೆ ನೀಡಲು ಮುಂದಾಗಿ
    6. ಕೊರೋನಾ ಪರೀಕ್ಷೆಯನ್ನು ಹೆಚ್ಚಳ ಮಾಡಿ ನಿರ್ಲಕ್ಷ್ಯ ಮಾಡಬೇಡಿ
    7. ಕಂಟೈನ್ಮೆಂಟ್ ಝೋನ್ ಕಟ್ಟುನಿಟ್ಟಾಗಿ ಪಾಲನೆ ಆಗ್ತಿಲ್ಲ, ಇದನ್ನು ಬಿಗಿಗೊಳಿಸಿ

  • ಕೊರೊನಾ ಕಾಲದಲ್ಲಿ ಮಕ್ಕಳ ಮೇಲೆ ಶೋಷಣೆ – ಪಬ್ಲಿಕ್ ಟಿವಿ ಮೆಗಾ ಅಭಿಯಾನ

    ಕೊರೊನಾ ಕಾಲದಲ್ಲಿ ಮಕ್ಕಳ ಮೇಲೆ ಶೋಷಣೆ – ಪಬ್ಲಿಕ್ ಟಿವಿ ಮೆಗಾ ಅಭಿಯಾನ

    – ಆನ್‍ಲೈನ್ `ಶಿಕ್ಷೆ’ಣದದಿಂದ ಎಳೆಯ ಕಂದಮ್ಮಗಳ ಮನಸ್ಸುಗಳಿಗೆ ಘಾಸಿ
    – ಖಾಸಗಿ ಲಾಬಿಗೆ ಮಣಿತಾ ಸರ್ಕಾರ
    – ಪೋಷಕರು, ಶಿಕ್ಷಣ ತಜ್ಞರಿಂದ ಭಾರೀ ವಿರೋಧ

    ಬೆಂಗಳೂರು: ಮಕ್ಕಳ ಕೈಗೆ ‘ಅವುಗಳನ್ನು’ ನೀಡಬಾರದು ಎಂದು ಪೋಷಕರು ಬಯಸಿದ್ದರೆ, ಇತ್ತ ವ್ಯವಸ್ಥೆಯ ಬಲವಂತವಾಗಿ ‘ಆ ವಸ್ತುಗಳನ್ನು’ ನೀಡುವಂತೆ ಪೋಷಕರ ಮೇಲೆಯೇ ಒತ್ತಡ ಹೇರಿದರೆ ಆ ವ್ಯವಸ್ಥೆಯನ್ನು ಯಾಕೆ ಒಪ್ಪಬೇಕು – ಕೋವಿಡ್ 19 ಸಮಯದಲ್ಲಿ ಈ ಈ ಗಂಭೀರ ಪ್ರಶ್ನೆ ಎದ್ದಿದ್ದು, ಈ ವ್ಯವಸ್ಥೆ ನಡೆಯುತ್ತಿದ್ದರೂ ಸರ್ಕಾರ ತನಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು, ಒಂದು ಕಡೆ ಕೊರೊನಾ ಸಮಸ್ಯೆಯಾದರೆ ಮತ್ತೊಂದು ಕಡೆ ಆನ್‍ಲೈನ್ ಮೂಲಕ ತರಗತಿ ನಡೆಸುವ ಮೂಲಕ ಮಕ್ಕಳಿಗೆ ‘ಶಿಕ್ಷೆ’ಣೆ ನೀಡಲು ಮುಂದಾಗಿರುವುದು ಈಗ ಭಾರೀ ಟೀಕೆಗೆ ಗುರಿಯಾಗಿದೆ. ಕೋವಿಡ್ 19 ನಿಂದಾಗಿ ಈಗ ಶಾಲೆಗಳು ಬಂದ್ ಆಗಿದ್ದರೂ ಆನ್‍ಲೈನ್ ತರಗತಿ ನಡೆಯುತ್ತಿರುವುದು ಎಳೆಯ ಮಕ್ಕಳಿಗೆ ಭಾರೀ ಸಮಸ್ಯೆ ತಂದೊಡ್ಡಿದೆ.

     

    ಪೋಷಕರಿಂದ ಭಾರೀ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಳೆಯ ಕಂದಮ್ಮಗಳ ಮೇಲೆ ಹೇರಲಾಗುತ್ತಿರುವ ಆನ್‍ಲೈನ್ ತರಗತಿಯ ವಿರುದ್ಧ ಮಹಾ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ಸಿನಿಮಾ ಕಲಾವಿರು ಸಾಥ್ ನೀಡಿದ್ದಾರೆ.

    ಆನ್‍ಲೈನ್ ಕ್ಲಾಸ್ ಏನು? ಎತ್ತ?
    1-5 ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ 9 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಪ್ರಾರಂಭವಾದರೆ ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ರಿಂದಲೇ ಆನ್‍ಲೈನ್ ಕ್ಲಾಸ್ ಶುರುವಾಗುತ್ತಿದೆ. ಮಧ್ಯಾಹ್ನ 3 ರಿಂದ 4, 4 ರಿಂದ 5 ಗಂಟೆಗೆ ಮತ್ತೆ ತರಗತಿ ನಡೆಯುತ್ತಿದೆ.

    ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಲ್ಯಾಪ್ ಟ್ಯಾಬ್, ಟ್ಯಾಬ್, ಕಂಪ್ಯೂಟರ್ ಪೈಕಿ ಒಂದು ವಸ್ತು ಇರಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಇಂಟರ್‍ನೆಟ್ ಸೌಲಭ್ಯ ಇರಬೇಕು. ಆನ್‍ಲೈನ್ ತರಗತಿ ಆರಂಭಕ್ಕೆ 10 ನಿಮಿಷ ಮೊದಲು ವಿದ್ಯಾರ್ಥಿಗೆ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ಮೂಲಕ ವಿದ್ಯಾರ್ಥಿ ಲಾಗಿನ್ ಆಗಿ ಪಾಠ ಕೇಳಬೇಕು.

    ಶಿಕ್ಷೆ ಹೇಗೆ?
    ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ಶೋಷಣೆಯಾಗುತ್ತಿದೆ. 1-5 ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಪಾಠ ಅರ್ಥ ಆಗುವುದಿಲ್ಲ. ಶಿಕ್ಷಕರು ಪಾಠ ಮಾಡೋದು ಬಹುತೇಕ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಈ ವಯಸ್ಸಿನ ಮಕ್ಕಳು ಆನ್‍ಕ್ಲಾಸ್‍ಗೆ ಗಮನ ನೀಡಲು ಸಾಧ್ಯವಿಲ್ಲ.ಆನ್‍ಲೈನ್ ಕ್ಲಾಸ್‍ನಲ್ಲಿ ಚಿತ್ರಗಳನ್ನು ತೋರಿಸಿದಾಗ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಸಿಗುತ್ತದೆ. ಉಳಿದ ವೇಳೆ ಆನ್‍ಲೈನ್ ಕ್ಲಾಸ್ ಎಂಬುದು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್ ಆಟದ ವಸ್ತು. ಆನ್‍ಲೈನ್ ಪಾಠ ಪ್ರಾರಂಭ ಹೇಗೆ ಮಾಡ್ತಾರೆ ಅನ್ನೋದೆ ಮಕ್ಕಳಿಗೆ ಗೊತ್ತಿಲ್ಲ. ಪೋಷಕರು ಮಗುವಿನ ಪಕ್ಕ ಕುಳಿತು ಮೊಬೈಲ್, ಟ್ಯಾಬ್ ಆನ್ ಮಾಡಿಕೊಡಬೇಕು. ಪೋಷಕರು ಕ್ಲಾಸ್ ಕೇಳಿಸಿಕೊಂಡು ಹೇಳಿದರೆ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಬರುತ್ತದೆ.

    ಆನ್‍ಲೈನ್ `ಶಿಕ್ಷೆ’ಣ ಬೇಕಾ..?
    ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರ ಪ್ರಕಾರ ಈ ವಯಸ್ಸು ಸೂಕ್ಷ್ಮ ವಯಸ್ಸು. 10ರೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ಅಗತ್ಯವೇ ಇಲ್ಲ. ಆಟ ಆಡುವ ವಯಸ್ಸಿನ ಮಕ್ಕಳಿಗೆ ಇದು ಕಿರುಕುಳ ನೀಡಿದಂತಾಗುತ್ತದೆ. ಆನ್‍ಲೈನ್ ಪಾಠವನ್ನು ಗ್ರಹಿಸಲು ಮಕ್ಕಳಿಗೆ ಕಷ್ಟ ಆಗುತ್ತದೆ. ಶಾಲೆಯಲ್ಲಿ ಪ್ರತಿ ಮಗುವಿನ ಮೇಲೆ ಶಿಕ್ಷಕರು ಗಮನ ಕೊಡ್ತಾರೆ. ಆದರೆ ಆನ್‍ಲೈನ್‍ನಲ್ಲಿ ಇದು ಅಸಾಧ್ಯ. ಹೀಗಾಗಿ ಮಗುವಿಗೆ ಪಾಠವೇ ಅರ್ಥ ಆಗುವುದಿಲ್ಲ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತದೆ.

    ಮಕ್ಕಳ ಮೇಲೆ ಆಗೋ ಪರಿಣಾಮ ಏನು?
    ಆನ್‍ಲೈನ್ ಕಲಿಕೆಯಿಂದ ಅನೇಕ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ. ಆನ್‍ಲೈನ್ ಕ್ಲಾಸ್‍ಗೆ ಇಂಟರ್‍ನೆಟ್ ಸೌಲಭ್ಯ ಬೇಕೆಬೇಕು. ಆನ್‍ಲೈನ್ ಕ್ಲಾಸ್ ವೇಳೆ ಮಕ್ಕಳು ಕೈ ತಪ್ಪಿ ಬೇರೆ ಲಿಂಕ್ ಒತ್ತುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋ ಸೇರಿದಂತೆ ಇನ್ನಿತರ ಲಿಂಕ್ ಓಪನ್ ಆಗಬಹುದು. ಇವು ಮಕ್ಕಳನ್ನ ಬೇರೆ ಹಾದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಮೊಬೈಲ್ ಗೇಮ್ ಗಳಿಗೆ ಮಕ್ಕಳು ಅಡಿಕ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಮೊಬೈಲ್, ಟ್ಯಾಬ್, ಲ್ಯಾಪ್‍ನಂತಹ ಪರಿಕರಗಳಿಗೆ ಅಡಿಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

    ಆರೋಗ್ಯದ ಮೇಲೆ ಏನಾಗುತ್ತೆ?
    ಪದೇ ಪದೇ ಮಗು ಮೊಬೈಲ್, ಕಂಪ್ಯೂಟರ್ ನೋಡ್ತಿದ್ರೆ ಕಣ್ಣಿನ ಮೇಲೆ ಪರಿಣಾಮ ಬೀಳುತ್ತದೆ. ಆನ್‍ಲೈನ್ ಕ್ಲಾಸ್ ಒತ್ತಡದಿಂದ ಮಕ್ಕಳ ಮೆದುಳಿನ ಮೇಲು ಅಡ್ಡ ಪರಿಣಾಮವಾಗುತ್ತದೆ. ಆನ್‍ಲೈನ್ ಪಾಠ ಅರ್ಥ ಆಗದೇ, ಮಕ್ಕಳಿಗೆ ಕೋಪ, ಆವೇಶ, ಸಿಟ್ಟು ಬರಬಹುದು. ಪುಟ್ಟ ಪುಟ್ಟ ಮಕ್ಕಳು ಮಾನಸಿಕ ಖಿನ್ನತೆಗೆ ತುತ್ತಾಗಬಹುದು. ಪೋಷಕರು, ಶಿಕ್ಷರ ಮಾತು ಕೇಳದೇ ವಿಚಿತ್ರವಾಗಿ ವರ್ತಿಸಬಹುದು.

    ಪೋಷಕರಿಗೆ ಆನ್‍ಲೈನ್ `ಶಿಕ್ಷೆ’..!
    ಆನ್‍ಲೈನ್ ಕ್ಲಾಸ್‍ಗಳಿಂದ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ, ಪೋಷಕರಿಗೂ ತೊಂದರೆ ಆರಂಭವಾಗಿದೆ. ಇರುವ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳ ಮುಂದೆ ಕ್ಲಾಸ್ ಮುಗಿಯುವರೆಗೂ ಇರಬೇಕು. ಮಕ್ಕಳು ಮೊಬೈಲ್‍ನಲ್ಲಿ ಏನೇನು ಓಪನ್ ಮಾಡ್ತಾರೋ ಎಂಬ ಭಯ. ಆನ್‍ಲೈನ್ ಕ್ಲಾಸ್ ವೇಲೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿಯೂ ಎರಡೆರಡು, ಮೂರುಮೂರು ಮೊಬೈಲ್ ಇರಲ್ಲ (ಇದ್ದರೂ ಇಂಟರ್ನೆಟ್ ಸೌಲಭ್ಯ ಎಲ್ಲಾ ಮೊಬೈಲ್‍ಗಳಿಗೂ ಇರಲ್ಲ).

    ಈ ಹಿಂದೆ ಆಫೀಸಿಗೆ ತೆರಳಿದ್ದಾಗ ಮನೆಯಲ್ಲಿ ಮಕ್ಕಳನ್ನು ಹಿರಿಯರು ನೋಡುತ್ತಿದ್ದರು. ಆದರೆ ಈಗ ಅವರಿಗೆ ಕಂಪ್ಯೂಟರ್/ ಮೊಬೈಲ್ ಆಪರೇಟಿಂಗ್ ಮಾಡಲು ಬರುವುದಿಲ್ಲ. ಹೀಗಾಗಿ ಪೋಷಕರೇ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕಂಪನಿ/ ಕಾರ್ಖಾನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಫೀಸ್‍ನಲ್ಲಿ/ಕಾರ್ಖಾನೆಗಳಲ್ಲಿ ಲೇಟಾದ್ರೆ ಅಲ್ಲೂ ಬೈಸಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಹೆಸರೇಳಿ ಪೋಷಕರಿಂದ ದುಬಾರಿ ಶುಲ್ಕ ವಸೂಲಿಯಾಗುತ್ತಿದೆ. ಟ್ಯಾಬ್, ಲ್ಯಾಪ್‍ಟಾಪ್ ತೆಗೆದುಕೊಳ್ಳಿ ಅಂತ ಆಡಳಿತ ಮಂಡಳಿಗಳಿಂದ ಒತ್ತಡ. ಅವಿದ್ಯಾವಂತ ತಂದೆ-ತಾಯಿಯರಿಗೆ ಆನ್‍ಲೈನ್ ಶಿಕ್ಷಣ ಎಂಬುದು ನರಕಯಾತನೆಯಾಗಿದೆ.

     

    ಖಾಸಗಿ ಲಾಬಿಗೆ ಮಣಿತಾ ಸರ್ಕಾರ?
    ಆನ್‍ಲೈನ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಒಂದು ಕಡೆ ಸರ್ಕಾರ ಹೇಳುತ್ತಿದೆ. ಆದರೆ ಇನ್ನೊಂದು ಕಡೆ ಎಲ್ಲವನ್ನು ನೋಡಿಕೊಂಡು ಸುಮ್ಮನೆ ಕುಳಿತಿದೆ. ಈ ಮೂಲಕ ಖಾಸಗಿ ಲಾಬಿಗೆ ಸರ್ಕಾರ ಮಣಿತಾ ಎಂಬ ಪ್ರಶ್ನೆ ಎದ್ದಿದೆ. ಲಾಕ್‍ಡೌನ್ ಹೊತ್ತಲ್ಲೂ ಹಣ ಮಾಡೋ ಉದ್ದೇಶಕ್ಕಾಗಿ ಆನ್‍ಲೈನ್ ತರಗತಿ ಮಾಡುತ್ತಿದೆ. ರಾಜಾರೋಷವಾಗಿ ಆನ್‍ಲೈನ್ ಶಿಕ್ಷಣ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೆಲ್ಲ ನೋಡಿದರೆ ಒಳಗೊಳಗೆ ಖಾಸಗಿ ಶಾಲೆಗಳ ಜೊತೆ ಸರ್ಕಾರ ಸಹ ಶಾಮೀಲಾಗಿದ್ಯ ಎಂಬ ಪ್ರಶ್ನೆ ಎದ್ದಿದೆ ಎಂದು ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ.

  • ಜೂನ್ 8 ರಿಂದ ಹೋಟೆಲ್ ಓಪನ್ – ಷರತ್ತುಗಳು ಏನಿರಬಹುದು?

    ಜೂನ್ 8 ರಿಂದ ಹೋಟೆಲ್ ಓಪನ್ – ಷರತ್ತುಗಳು ಏನಿರಬಹುದು?

    ಬೆಂಗಳೂರು: ದೇಶದಲ್ಲಿ ಲಾಕ್‍ಡೌನ್ 5 ನಾಳೆಯಿಂದ ಆರಂಭವಾಗಲಿದ್ದು ಕೇಂದ್ರ ಸರ್ಕಾರ ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆ.

    ಈಗಾಗಲೇ ಪಾರ್ಸೆಲ್ ವಿತರಣೆಗೆ ಅವಕಾಶ ನೀಡಲಾಗಿದ್ದು ಇನ್ನು ಮುಂದೆ ಕುಳಿತು ತಿನ್ನುವುದಕ್ಕೂ ಅವಕಾಶ ನೀಡಲಾಗುತ್ತದೆ. ರೆಸಾರ್ಟ್ ಸೇರಿ ಇನ್ನಿತರೆ ಆತಿಥ್ಯ ಸೇವೆಗಳು ತೆರೆಯಬಹುದು. ಈ ವಾರ ಹೋಟೆಲ್ ಗಳು ಯಾವೆಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾರ್ಗಸೂಚಿ ಪ್ರಕಟವಾಗಲಿದೆ.

    ಷರತ್ತುಗಳು ಏನಿರಬಹುದು?
    * ಟೇಬಲ್ ಸಿಟ್ಟಿಂಗ್‍ಗೆ ಅವಕಾಶ ನೀಡುವ ಸಾಧ್ಯತೆ
    * ಒಂದು ಟೇಬಲ್ ಗೆ ಒಬ್ಬ ಗ್ರಾಹಕನಿಗೆ ಮಾತ್ರ ಅವಕಾಶ
    *ಹೋಟೆಲಿಗೆ ಎಂಟ್ರಿಯಾದ ಕೂಡಲೇ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ದೂರವಾಣಿ ನಂಬರ್ ನಮೂದಿಸಬೇಕು
    * ಮಾಸ್ಕ್ ಧರಿಸಬೇಕು, ಹ್ಯಾಂಡ್ ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

    * ಗ್ರಾಹಕ ಕೂರುವ ಪ್ರತಿಯೊಂದು ಟೇಬಲ್‍ನಲ್ಲಿಯೂ ಹ್ಯಾಂಡ್ ಸ್ಯಾನಿಟೈಸರ್ ಇರಬೇಕು
    * ಗ್ರಾಹಕ ಉಪಹಾರ ಸೇವಿಸಿ ಹೋದ ಬಳಿಕ ಆ ಜಾಗವನ್ನ ಇನ್ನೊಮ್ಮೆ ಸ್ಯಾನಿಟೈಸ್ ಮಾಡಬೇಕು
    * ಗ್ರಾಹಕರಿಗೆ ಸರ್ವ್ ಮಾಡುವಾಗ ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿರಬೇಕು
    * ಡಿಜಿಟಲ್ ಪೇಮೆಂಟ್‍ಗೆ ಆದ್ಯತೆ
    * ಹೊಟೇಲ್‍ಗಳಲ್ಲಿ ಸಿಬ್ಬಂದಿ ಸಂಖ್ಯೆಯೂ ನಿಗದಿತ ಪ್ರಮಾಣದಲ್ಲಿರಬೇಕು
    * 60 ವರ್ಷ ಮೇಲ್ಪಟ್ಟವರಿಗೆ ಹೊಟೇಲ್‍ಗಳಲ್ಲಿ ಅವಕಾಶವಿಲ್ಲ

  • ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಗೊಳಿಸಿದ ಜಿಲ್ಲಾಡಳಿತ

    ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಗೊಳಿಸಿದ ಜಿಲ್ಲಾಡಳಿತ

    ಮಡಿಕೇರಿ: ಜಿಲ್ಲೆಯಲ್ಲಿ ವಿಧಿಸಿದ್ದ ಲಾಕ್‍ಡೌನ್ ಮತ್ತಷ್ಟು ಸಡಿಲಗೊಂಡಿದ್ದು ವಾರದ ಎಲ್ಲಾ ದಿನಗಳು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ.

    ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾಡಳಿತ, ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಬಹುದು. ಬುಧವಾರದಿಂದ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಜಿಲ್ಲೆಯ ಒಳಗೆ ಮಾತ್ರವೇ ಸಂಚರಿಸಲು ಅವಕಾಶ ನೀಡಿದೆ.

    ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವೂ ಪ್ರಾರಂಭವಾಗಲಿದೆ. ಆದರೆ ಒಟ್ಟು ಆಸನಗಳ ಶೇ.50 ಮೀರದಂತೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ವಾರದ ಎಲ್ಲಾ ದಿನಗಳು ಸಿಎಲ್ 2, ಸಿಎಲ್ 11ಸಿ ಮಾದರಿಯ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

  • ಓರ್ವ ಕೊರೊನಾ ಸೋಂಕಿತನ ಚಿಕಿತ್ಸೆಗೆ ಎಷ್ಟು ಖರ್ಚು ಆಗುತ್ತೆ? ಟೆಸ್ಟ್ ಕಿಟ್‍ಗೆ ಎಷ್ಟು ರೂಪಾಯಿ?

    ಓರ್ವ ಕೊರೊನಾ ಸೋಂಕಿತನ ಚಿಕಿತ್ಸೆಗೆ ಎಷ್ಟು ಖರ್ಚು ಆಗುತ್ತೆ? ಟೆಸ್ಟ್ ಕಿಟ್‍ಗೆ ಎಷ್ಟು ರೂಪಾಯಿ?

    ತಿರುವನಂತಪುರಂ: ಕೊರೊನಾ ರೋಗಿಗಳ ಚಿಕಿತ್ಸೆಗೆ ಎಷ್ಟು ರೂಪಾಯಿ ಖರ್ಚಾಗಬಹುದು? ಈ ಪ್ರಶ್ನೆ ಹಲವು ಮಂದಿಗೆ ಕಾಡಿರಬಹುದು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಕೇರಳದಲ್ಲಿ ಪ್ರತಿನಿತ್ಯ ಒಬ್ಬ ಸೋಂಕಿತನಿಗೆ ಅಂದಾಜು 25 ಸಾವಿರ ರೂ. ಖರ್ಚಾಗುತ್ತದೆ.

    ಕೊರೊನಾ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದ್ದರೂ ಕೆಲ ಗುಣಮಟ್ಟದ ಖಾಸಗಿ ಆಸ್ಪತೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸಾಧಾರಣವಾಗಿ ಕೋವಿಡ್-19 ರೋಗಿಗೆ ಪ್ರತಿನಿತ್ಯ 20 ಸಾವಿರದಿಂದ 25 ಸಾವಿರ ರೂ. ಖರ್ಚಾಗುತ್ತದೆ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಂದರೆ ಓರ್ವ ರೋಗಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವವರೆಗೂ ಒಟ್ಟು 2.80 ಲಕ್ಷ ರೂ. ನಿಂದ 3.50 ಲಕ್ಷ ರೂ. ಶುಲ್ಕ ಆಗುತ್ತದೆ.

    ಸಾಧಾರಣವಾಗಿ 3 ಅಥವಾ 5 ಸತತ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ 8 ಬಾರಿ ಪರೀಕ್ಷೆ ಮಾಡಲಾಗುತ್ತದೆ. ಬಾಲಿವುಡ್ ಹಾಡುಗಾರ್ತಿ ಕನಿಕಾ ಕಪೂರ್ ಅವರ 5 ಪರೀಕ್ಷೆಗಳಲ್ಲಿ ಪಾಸಿಟಿವ್ ಕಂಡುಬಂದು 6ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು.

    ಯಾಕೆ ಇಷ್ಟು ಖರ್ಚು?
    ಗಂಟಲ ದ್ರವದ ಮಾದರಿ ಪರೀಕ್ಷೆಗೆ 4,500 ರೂ. ದರವನ್ನು ನಿಗದಿ ಪಡಿಸಲಾಗಿದೆ. ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಖಾಸಗಿ ಪ್ರಯೋಗಾಲಯಗಳಿಗೆ ಈ ದರವನ್ನು ನಿಗದಿ ಮಾಡಿದೆ. ಕೊರೊನಾ ಟೆಸ್ಟ್ ಕಿಟ್ ಒಂದಕ್ಕೆ 3 ಸಾವಿರ ರೂ. ಆಗುತ್ತದೆ.

    ಪಾಸಿಟಿವ್ ಕಂಡು ಬಂದ ವ್ಯಕ್ತಿ ಅಥವಾ ಸಂಪರ್ಕಿತ ಶಂಕಿತ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಬೇಕು. ಖಾಸಗಿ ಆಸ್ಪತ್ರೆಗಳು ಅಂಬುಲೆನ್ಸ್ ಖರ್ಚನ್ನು ರೋಗಿಯಿಂದ ಭರಿಸಿಕೊಳ್ಳುತ್ತದೆ ಅಥವಾ ಸರ್ಕಾರದಿಂದ ಭರಿಸಿಕೊಳ್ಳುತ್ತದೆ.

    ಇದಾದ ಬಳಿಕ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಿದರೆ ಇಲ್ಲಿ ರೋಗಿ ಹೊರತು ಪಡಿಸಿ ಬೇರೆ ಯಾರಿಗೂ ಹಾಸಿಗೆ ಇರಬಾರದು. ಜೊತೆ ಈ ವಾರ್ಡಿನಲ್ಲಿ ಟಾಯ್ಲೆಟ್ ಇರಬೇಕು. ಹಿರಿಯ ವಯಸ್ಸಿನ ವ್ಯಕ್ತಿ ಆಗಿದ್ದರೆ ವೆಂಟಿಲೇಟರ್ ಅಗತ್ಯವಾಗಿ ಇರಬೇಕಾಗುತ್ತದೆ.

    ಕೊಟ್ಟಾಯಂನ 94 ವರ್ಷದ ಪತಿ, 88 ವರ್ಷದ ಪತ್ನಿಯನ್ನು ಒಂದು ವಾರಕ್ಕೂ ಹೆಚ್ಚು ದಿನ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಖಾಸಗಿ ಆಸ್ಪತ್ರೆಗಳು ವೆಂಟಿಲೇಟರ್ ನಲ್ಲಿ ರೋಗಿಯನ್ನು ಇರಿಸಿದರೆ ಒಂದು ದಿನಕ್ಕೆ 25 ಸಾವಿರದಿಂದ 50 ಸಾವಿರ ರೂ. ಚಾರ್ಜ್ ಮಾಡುತ್ತವೆ. ಇದನ್ನೂ ಓದಿ: ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಆಸ್ಪತ್ರೆಯ ವರ್ಗೀಕರಣದ ಆಧಾರದಲ್ಲಿ ರೂಮ್ ಬಾಡಿಗೆ ನಿರ್ಧಾರವಾಗುತ್ತದೆ. ಕನಿಷ್ಟ ಒಂದು ದಿನದ ಬಾಡಿಗೆಗೆ ಕಡಿಮೆ ದರ ಎಂದಾದರೂ 1 ಸಾವಿರ – 1,500 ರೂ. ನಿಗದಿಯಾಗಿರುತ್ತದೆ.

    100 ಬೆಡ್ ಸಾಮರ್ಥ್ಯದ ಕೋವಿಡ್-19 ಆಸ್ಪತ್ರೆಗೆ ಕನಿಷ್ಟ 200 ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ) ಬೇಕಾಗುತ್ತದೆ. ವೈದ್ಯರು ಮತ್ತು ನರ್ಸ್ ಗಳು ಪ್ರತಿ 4 ಗಂಟೆಗೆ ಒಮ್ಮೆ ಈ ಪಿಪಿಇಯನ್ನು ಬದಲಾಯಿಸುತ್ತಾರೆ. ಒಂದು ಪಿಪಿಇ ಬೆಲೆ 750 ರೂ. ನಿಂದ ಆರಂಭಗೊಂಡು 1 ಸಾವಿರ ರೂ.ವರೆಗೆ ಇದೆ.

    ಔಷಧಿ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಕ್ಕಳು, ಯುವಜನತೆ, ಹಿರಿಯ ನಾಗರಿಕರು ಇವರ ವಯಸ್ಸಿಗೆ ತಕ್ಕಂತೆ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಬೇಕಾಗುತ್ತದೆ. ಆಹಾರ ಅಲ್ಲದೇ ಆಂಟಿಬಯೋಟಿಕ್ಸ್ ಸೇರಿದಂತೆ ಇತರ ಔಷಧಿಗಳಿಗೆ ಅಂದಾಜು 500 ರಿಂದ 1 ಸಾವಿರ ರೂ. ಖರ್ಚಾಗುತ್ತದೆ.

    ಹಣ ಎಷ್ಟು ಬೇಕಾದರೂ ಖರ್ಚಾದರೂ ಪರವಾಗಿಲ್ಲ. ರೋಗಿ ಗುಣಮುಖನಾಗುವುದು ಮುಖ್ಯ ಎಂದು ಸಿಎಂ ನಮಗೆ ತಿಳಿಸಿದ್ದಾರೆ. ಹೀಗಾಗಿ ಹಣದ ವಿಚಾರಕ್ಕೆ ತಲೆಕೆಡಿಸಿಕೊಳ್ಳದೇ ಉತ್ತಮ ಚಿಕಿತ್ಸೆಯನ್ನು ನೀಡುವತ್ತ ಗಮನ ಹರಿಸಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ವಿದೇಶಿಯರಿಗೂ ಅತ್ಯುತ್ತಮ ಚಿಕಿತ್ಸೆ ನೀಡಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.

  • ಮಾಸ್ಕ್ ಧರಿಸಿಲ್ಲವೆಂದು ವಿಕಲಚೇತನ ಮಗನನ್ನೇ ಕೊಲೆಗೈದ ತಂದೆ

    ಮಾಸ್ಕ್ ಧರಿಸಿಲ್ಲವೆಂದು ವಿಕಲಚೇತನ ಮಗನನ್ನೇ ಕೊಲೆಗೈದ ತಂದೆ

    ಕೋಲ್ಕತ್ತಾ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮನೆಯಿಂದ ಹೊರಹೋಗುವಾಗ ಎಲ್ಲರೂ ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಅಂತೆಯೇ ತಂದೆಯೊಬ್ಬ ತನ್ನ ಮಗ ಮಾಸ್ಕ್ ಧರಿಸಿಲ್ಲವೆಂದು ಸಿಟ್ಟುಗೊಂಡು ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಕೋಲ್ಕತ್ತಾದಲ್ಲಿ ನಡೆದಿದೆ.

    ಸಿರ್ಷೆಂದು ಮಲ್ಲಿಕ್(45) ಎಂಬ ವಿಕಲಚೇತನ ಮಗನನ್ನು ಬನ್ಶಿಧರ್ ಮಲ್ಲಿಕ್(78) ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಈ ಸಂಬಂಧ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಶ್ಯಾಂಪುಕರ್ ಪೊಲೀಸ್ ಠಾಣೆಗೆ ಬಂದಿದ್ದು, 5.30ರ ವೇಳೆಗೆ ನಾನು ನನ್ನ ಮಗನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಮಗ ವಿಕಲಚೇತನನಾಗಿದ್ದಾನೆ. ಆತನನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬನ್ಶಿಧರ್ ಸದ್ಯ ನಿವೃತ್ತಿ ಹೊಂದಿದ್ದಾನೆ. ಈತನ ಮಗ ಕೆಲಸಕ್ಕೆ ತೆರಳುತ್ತಿರಲಿಲ್ಲ. ತಂದೆ-ಮಗನ ಜೊತೆ ಹೊಂದಾಣಿಕೆಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಗಡೆ ಹೋಗುತ್ತಿರುವುದಕ್ಕೆ ತಂದೆ-ಮಗನ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೂ ಮಗ ತಂದೆಯ ಮಾತನ್ನು ಲೆಕ್ಕಿಸದೇ ಮಾಸ್ಕ್ ಧರಿಸದೆಯೇ ಮನೆಯಿಂದ ಹೊರ ಹೋಗುತ್ತಿದ್ದನು. ಇದರಿಂದ ಸಿಟ್ಟುಕೊಂಡ ತಂದೆ, ಶನಿವಾರ ಸಂಜೆ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

    ಮಾರ್ಚ್ 12ರಿಂದ ಬಂಗಾಳ ಸರ್ಕಾರ ಎಲ್ಲಾ ನಾಗರಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿತ್ತು. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹೋಗಬಾರದೆಂದು ಕಡ್ಡಾಯ ಮಾಡಿ ಆದೇಶಿಸಿದೆ.