ಧಾರವಾಡ/ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು.
ಗರ್ಭಿಣಿಯರಲ್ಲಿರುವ ಭಯವನ್ನು ನಿವಾರಣೆ ಮಾಡಲು ಹಾಗೂ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರ ಗಂಟಲು ದ್ರವ ಹಾಗೂ ಮೂಗಿನ ದ್ರವದ ಪರೀಕ್ಷೆ ಮಾಡಲಾಯಿತು. ಈಗಾಗಲೇ ಮೂರು ದಿನಗಳಿಂದ ಕೋವಿಡ್-19 ಪರೀಕ್ಷೆ ಪ್ರಾರಂಭವಾಗಿದ್ದು, ದಿನಕ್ಕೆ 60 ಜನರ ತಪಾಸಣೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನದವರೆಗೆ 35 ಜನ ಗರ್ಭಿಣಿಯರ ಗಂಟಲು ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಲಾಯಿತು.
ಇದೇ ವೇಳೆ ಮಾತನಾಡಿದ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಗರ್ಭಿಣಿಯರ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಇನ್ನೂ ಗರ್ಭಿಣಿ ಮಹಿಳೆಯರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಯಾರಿಗಾದರೂ ರೋಗದ ಲಕ್ಷಣಗಳಿದ್ದರೇ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಂಡ್ಯ: ಇಂದು ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡೆಸಿ, ಗಲಾಟೆ ಮಾಡಿದ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ, ಗಲಾಟೆ ಮಾಡೋರಿಗೆ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಎಸ್‍ಪಿ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡೆಸಿ, ರೌಡಿಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು. ಅವರು ನಿಯಮಗಳನ್ನು ಉಲ್ಲಂಘಿಸಿ ಕಾನೂನಿನ ವಿರುದ್ಧ ಹೋಗಿದ್ದಾರೆ. ಸರ್ಕಾರದ ಅನುಮತಿ ಪಡೆದು ಮಂಡ್ಯದಲ್ಲಿ ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಫೀಲ್ಡ್ ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸೋಂಕು ತಗುಲಿದರೆ ಅದು ಬೇರೆ ಅವರಿಗೆ ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗಿದೆ ಅದನ್ನು ಶ್ರೀಕಂಠೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.
ಇಲ್ಲಿ ಪರೀಕ್ಷೆ ಮಾಡಬೇಡಿ, ನಮ್ಮ ಮನೆ ಇದೆ ಎಂದರೆ ಬೇರೆ ಕಡೆ ಪರೀಕ್ಷೆ ಮಾಡಿದರೂ ಮನೆಗಳು ಇರುತ್ತೆ ಅಲ್ವಾ? ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ? ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್‍ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು.
ಕೊರೊನಾ ಪರೀಕ್ಷೆ ಮಾಡಿದರೆ ಸೋಂಕು ಹರಡುತ್ತೆ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಅತೀ ಹೆಚ್ಚು ಪರೀಕ್ಷೆ ಮಾಡಿ ಎಂದಿದ್ದಾರೆ. ಕೊರೊನಾ ಇರುವ ಅದೆಷ್ಟೋ ಮಂದಿಗೆ ಸೋಂಕಿನ ಲಕ್ಷಣಗಳು ಇರುವುದಿಲ್ಲ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಬೇರೆ ಸಮಯದಲ್ಲಿ ಮಾಡುವಂತೆ ಗೂಂಡಾಗಿರಿ, ಗಲಾಟೆ, ರಾಜಕಾರಣ ಮಾಡುವುದು ಸರಿಯಲ್ಲ. ಹೀಗೆ ಮಾಡಿ ಜನಪ್ರತಿನಿಧಿಯಾಗುವ ಅರ್ಹತೆಯನ್ನೇ ಇವರು ಕಳೆದುಕೊಂಡಿದ್ದಾರೆ ಎನ್ನಬಹುದು ಎಂದು ಕಿಡಿಕಾರಿದ್ದಾರೆ.
ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರು ಎಫ್‍ಐಆರ್ ದಾಖಲಾದ ಮೇಲೆ ಅದರ ಕಾಫಿಯನ್ನ ಕಳುಹಿಸುವುದಾಗಿ ಹೇಳಿದ್ದಾರೆ. ಈ ರೀತಿ ತಪ್ಪು ಮಾಡಿದರೆ ಸಾಮಾನ್ಯ ವ್ಯಕ್ತಿ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಅದೇ ರೀತಿ ಕ್ರಮವನ್ನು ಎಂಎಲ್‍ಸಿ ಮೇಲೂ ತೆಗೆದುಕೊಳ್ಳಬೇಕು. ತಪ್ಪು ಯಾರೇ ಮಾಡಿದರು ತಪ್ಪು ತಪ್ಪೇ. ಎಂಎಲ್‍ಸಿ, ಎಂಪಿ, ಎಂಎಲ್‍ಎ ಯಾರೇ ಮಾಡಿದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಎಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಅಗತ್ಯ ಸೇವೆಗಳಲ್ಲಿ ಇರುವವರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇವರಿಗೆ ಅರ್ಥ ಆಗುತ್ತಿಲ್ಲ. ಇವರು ನಾವು ಮಾತ್ರ ಸುರಕ್ಷಿತವಾಗಿರಬೇಕು ಎನ್ನುವ ಉದ್ದೇಶದಲ್ಲಿ ಇದ್ದಾರೋ ಏನೋ ಗೊತ್ತಿಲ್ಲ. ಆದರೆ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಮಲತಾ ಅವರು ಒತ್ತಾಯಿಸಿದ್ದಾರೆ.