Tag: ಕೋವಿಡ್-19 ಪರಿಹಾರ ನಿಧಿ

  • ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 1 ವರ್ಷದ ವೇತನ ನೀಡಿದ ಜಗದೀಶ್ ಶೆಟ್ಟರ್

    ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 1 ವರ್ಷದ ವೇತನ ನೀಡಿದ ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್-19 ಹಾವಳಿ ತಡೆಗಟ್ಟಲು ಸ್ಥಾಪಿಸಿರುವ ಪರಿಹಾರ ನಿಧಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಮ್ಮ 1 ವರ್ಷದ ವೇತನವನ್ನು ನೀಡಿದ್ದಾರೆ.

    ಈ ಕುರಿತಂತೆ ಸಚಿವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಮಂದಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಉದಾರ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಮೂರು ತಿಂಗಳ ಸಂಬಳ ಹಾಗೂ ಸಚಿವ ಈಶ್ವರಪ್ಪ ಅವರು ತಮ್ಮ 4 ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದರು.

    ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ. ದೇಶದಲ್ಲಿ ಕೊರೊನಾ ಹರಡುತ್ತಿರುವ 25 ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ನಗರಗಳು ಗುರುತಿಸಿಕೊಂಡಿವೆ. ಈವರೆಗೆ ರಾಜ್ಯದಲ್ಲಿ 121 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಹಾಗೆಯೇ ದೇಶದಲ್ಲಿ 2094 ಮಂದಿಗೆ ಸೋಂಕು ತಗುಲಿದೆ.